ಶ್ರೀ
ಭಗಂಡೇಶ್ವರ ಮತ್ತು ತಲಕಾವೇರಿ
(Bhagandeshwar
and Thalakaveri)
ಕರ್ನಾಟಕದ
ಸ್ವಿಜರ್ ಲ್ಯಾಂಡ್ ಎಂದು ಕರೆಯುವ ಕೊಡಗಿನಲ್ಲಿ ಹಲವಾರು ಪುಣ್ಯ ಹಾಗೂ ಪ್ರವಾಸಿ ಸ್ಧಳಗಳಿವೆ. ಅಂತಹ
ಪುಣ್ಯ ಸ್ಧಳಗಳಲ್ಲಿ ಒಂದು ಕೊಡಗಿನ ತಲ ಕಾವೇರಿ. ಕೋಡಗಿನ ಮುಖ್ಯ ಪಟ್ಟಣ ಮಡಿಕೇರಿಯಿಂದ 48 ಕಿ. ಮೀ.
ದೂರದಲ್ಲಿರುವ ಈ ಪ್ರದೇಶ ಮೂರು ರಾಜ್ಯಗಳಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಧಳ. ಕರ್ನಾಟಕ , ತಮಿಳುನಾಡು
, ಕೇರಳ ರಾಜ್ಯಗಳಿಗೆ ನೀರಿನ ಆಶ್ರಯ ನೀಡಿರುವ ಕಾವೇರಿ ಉಗಮ ಗೋಳ್ಳವುದು ತಲಕಾವೇರಿಯಲ್ಲಿ. ಪ್ರಕೃತಿಯ
ರಮ್ಯ ನೋಟದ ನಡುವೆ ಭಕ್ತಿ ಭಾವವನ್ನು ಉಂಟುಮಾಡುವ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಪ್ರತಿವರ್ಷವೂ
ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ ಕಾವೇರಿ ತೀರ್ಥೋದ್ಭವದ ವೇಳೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
Goddess Cauveri at Thalakaveri, |
***
ಪೂರ್ವಕಾಲದಲ್ಲಿ
ಕವೇರನೆಂಬ ಬ್ರಾಹ್ಮಣೋತ್ತಮನು ಬ್ರಹ್ಮಗಿರಿಯಲ್ಲಿ ವಾಸಿಸಿಕೊಂಡಿದ್ದು ತನಗೆ ಸಂತತಿಯಾಗಬೇಕೆಂದು ಬಯಸಿ
ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದನು. ವಿಪ್ರೋತ್ತಮನ ತಪಸ್ಸಿಗೆ ಒಲಿದು ಬ್ರಹ್ಮದೇವನು ಪ್ರತ್ಯಕ್ಷನಾಗಿ
'ನೀನು ಪೂರ್ವಕಾಲದಲ್ಲಿ ಪುತ್ರಸಂತಾನ ಪ್ರಾಪ್ತಿಯಾಗಲು ಬೇಕಾದ ಧರ್ಮವನ್ನು ಮಾಡಿರುವುದಿಲ್ಲ ಹಾಗಾಗಿ
ನಿನಗೆ ಲೋಪಾಮುದ್ರೆಯೆಂಬ ನಾಮಾಂಕಿತವನ್ನೊಳಗೊಂಡ ನನ್ನ ಮಾನಸಪುತ್ರಿಯನ್ನು ಮಗಳಾಗಿ ನೀಡುವೆನು' ಎಂದು
ಹೇಳಿ ಕುಮಾರಿಯನ್ನು ಪುತ್ರಿಯಾಗಿ ಸ್ವೀಕರಿಸುವಂತೆ ಆಜ್ಞೆ ನೀಡಿದನು. ಅನುಸಾರವಾಗಿ ಕವೇರನು ಲೋಪಾಮುದ್ರೆಯನ್ನು
ಸಂತೋಷದಿಂದ ಸ್ವೀಕರಿಸಿ ಅನೇಕ ವಿಧದಲ್ಲಿ ದಿವ್ಯ ಕುಮಾರಿಯನ್ನು ಸ್ತುತಿಸಿ ಕೊಂಡಾಡಿದನು. ದೇವದಾನವರು
ಕ್ಷೀರಸಮುದ್ರವನ್ನು ಮಥನ ಮಾಡಿದಾಗ ಉತ್ಪತ್ತಿಯಾದ ಅಮೃತವನ್ನು ಅಸುರರು ಅಪಹರಿಸಿದರು. ಅದನ್ನು ಕೈವಶ
ಮಾಡಿಕೊಳ್ಳಲು ದೇವದೇವತೆಗಳ ಪರವಾಗಿ ವಿಷ್ಣು ಅಂಶದಿಂದ ಹುಟ್ಟಿದ ಮೋಹಿನಿಯಂತೆಯೇ ಲಕ್ಷ್ಮಿದೇವಿಯ ಅಂಶದಿಂದ
ಹುಟ್ಟಿದವಳೇ ಶ್ರೀ ಲೋಪಾಮುದ್ರೆ. ನಂತರ ಅವಳನ್ನು ಶ್ರೀ ಹರಿಯು ಬ್ರಹ್ಮದೇವನಿಗೆ ಆಶೀರ್ವಾದಪೂರ್ವಕವಾಗಿ
ನೀಡಿ ಮಾನಸಪುತ್ರಿಯಾಗಿ ಸ್ವೀಕರಿಸೆಂದನು. ಹೀಗೆ ದಿವ್ಯಾಂಶ ಸಂಭೂತಳಾದ ಶ್ರೀ ಲೋಪಾಮುದ್ರೆಯ ದಿವ್ಯ
ತೇಜಸ್ಸು-ಯೋಗ್ಯತೆಗಳನ್ನು ಕಂಡು ತಪೋಘನನಾದ ಕವೇರನು ಆಕೆಯನ್ನು ಪುನಃಪುನಃ ಸ್ತುತಿಸಿದನು. ಜಗತ್ತಿನ
ಸಮಸ್ತ ಪ್ರಾಣಿಗಳಿಗೂ ಕಲ್ಯಾಣಾನುಗ್ರಹದೇವತೆಯಾದ ಶ್ರೀದೇವಿಯೇ ಆಗಿದ್ದ ಶ್ರೀ ಲೋಪಾಮುದ್ರಾ ದೇವಿಯು
ಕವೇರ ಮುನಿಯನ್ನು ಸಂತೈಸುತ್ತಾ 'ತಂದೆಯೇ! ನಾನು ಲೋಕ ಕಲ್ಯಾಣವನ್ನು ಸಾಧಿಸಲು ನದಿರೂಪವಾಗಿ ಹರಿದು
ಸಮುದ್ರವನ್ನು ಸೇರುವೆನು. ಜನರು ನನ್ನನ್ನು ಲೋಕದಲ್ಲಿ ಬ್ರಹ್ಮಪುತ್ರಿಯೆಂದೂ, ಮಾಯೆ ಎಂದೂ, ಕಾವೇರಿ
ಎಂದೂ ಕರೆಯುವರು. ಜನರ ಪಾಪಗಳನ್ನು ನಾನು ನಾಶ ಮಾಡುವವಳೆಂದು ಲೋಕಪ್ರಸಿದ್ಧಳಾಗುವೆನು ಎಂದು ಹೇಳಿದಳು.
ನಂತರ ಕವೇರ ಮುನಿಯು ಲೋಪಾಮುದ್ರೆಯ ಅನುಗ್ರಹಕ್ಕೆ ಪಾತ್ರನಾಗಿ ದೇಹತ್ಯಾಗ ಮಾಡಿ ತನ್ನ ಸತಿಸಹಿತನಾಗಿ
ಬ್ರಹ್ಮಲೋಕವನ್ನು ಸೇರಿದನು. ಇಳೆಗೆ ಇಳಿದು ಬಂದ ದೇವಕುವರಿ ಶ್ರೀ ಲೋಪಾಮುದ್ರೆಯು ಜಗತ್ಕಲ್ಯಾಣವನ್ನು
ಸಾಧಿಸುವ ದೃಷ್ಟಿಯಿಂದ ಶಿವನನ್ನು ಕುರಿತು ಕಠೋರ ತಪಸ್ಸನ್ನು ಆಚರಿಸುತ್ತಾ, ಬ್ರಹ್ಮರ್ಷಿಗಳ ಒಡನೆ
ಬ್ರಹ್ಮಗಿರಿಯ ಪವಿತ್ರ ನೆಲೆಯಲ್ಲಿ ವಾಸಿಸುತ್ತಾ ಇದ್ದಳು.
Goddess Cauveri temple, Thalakaveri |
ದಿವ್ಯವಾದ
ಕಾಂತಿಯಿಂದಲೂ, ತಪಸ್ಸಿನ ತೇಜಸ್ಸಿನಿಂದಲೂ ಕೂಡಿ ಕಾವೇರಿಯು ಬ್ರಹ್ಮಗಿರಿಯ ತಪ್ಪಲಿನಲ್ಲಿ ಬ್ರಹ್ಮರ್ಷಿಗಳ
ಪವಿತ್ರವಾದ ಆಶ್ರಮದಲ್ಲಿ ಆನಂದವಾಗಿ ಬಾಳುತ್ತಿದ್ದಳು. ಆ ಸಂದರ್ಭದಲ್ಲಿ ಋಷಿವರ್ಯರಾದ ಅಗಸ್ತ್ಯಮುನಿಗಳು
ಉತ್ತರ ಭಾರತದಿಂದ ದಕ್ಷಿಣಾಪಥಕ್ಕೆ ಬಂದವರು ಬ್ರಹ್ಮಗಿರಿಗೆ ಸಂದರ್ಶನವಿತ್ತರು. ಬ್ರಹ್ಮಋಷಿಗಳನೇಕರ
ತಪೋಧಾಮವಾದ ಬ್ರಹ್ಮಗಿರಿಯಲ್ಲಿದ್ದ ವಸಿಷ್ಠ ಇತ್ಯಾದಿ ಮಹರ್ಷಿಗಳನ್ನು ಭೇಟಿಮಾಡಿ ಅವರಿಂದ ಆತಿಥ್ಯವನ್ನು
ಪಡೆದು ಋಷ್ಯಾಶ್ರಮದ ಮೂಲ ಶಕ್ತಿಯೋ ಎಂಬಂತಿದ್ದ ಶ್ರೀ ಕಾವೇರಿ ದೇವಿಯನ್ನು ಕಂಡು ಹರ್ಷಗೊಂಡರು. ತ್ರಿಕಾಲ
ಜ್ಞಾನಿಯೂ, ಮುನಿಪುಂಗವರೂ ಆದ ಅಗಸ್ತ್ಯ ಮಹರ್ಷಿಗಳು ಕಾವೇರಿ ದೇವಿಯ ಜನ್ಮದ ಮೂಲ ಉದ್ದೇಶವನ್ನು ಗ್ರಹಿಸಿಕೊಂಡರು.
ಅಗಸ್ತ್ಯ ಋಷಿಗಳು ಶ್ರೀ ಕಾವೇರಿಯನ್ನು ವಿವಾಹವಾಗಲು ಬಯಸಿದರು. ಮಹರ್ಷಿಗಳ ಬಯಕೆಗೆ ಕಾವೇರಿದೇವಿಯು
ಒಪ್ಪಿ 'ತನ್ನನ್ನು ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದೆಂದೂ, ಹೋದರೆ ತಾನು ಸಲಿಲೇಶ್ವರನಾದ
ಸಮುದ್ರದೆಡೆಗೆ ನದಿಯಾಗಿ ಹೊರಟು ಹೋಗುತ್ತೇನೆ' ಎಂತಲೂ ಹೇಳಿದಳು. ಶ್ರೀದೇವಿಯು ಹೇಳಿದ ನಿಬಂಧನೆಗೆ
ಋಷಿ ಅಗಸ್ತ್ಯರು ಸಮ್ಮತಿಸಿದರು. ಅನುಸಾರವಾಗಿ ಋಷ್ಯಾಶ್ರಮದ ಪವಿತ್ರ ನೆಲೆಯಲ್ಲಿ ದೇವದೇವತೆಗಳ ಸಮ್ಮುಖದಲ್ಲಿ
ಶ್ರೀಅಗಸ್ತ್ಯ ಕಾವೇರಿಯರ ಕಲ್ಯಾಣವು ವೇದೋಕ್ತ ರೀತಿಯಲ್ಲಿ ಬಹಳ ವೈಭವದಿಂದ ನಡೆಯಿತು. ನಂತರ ಕೆಲವು
ಸಮಯದ ತನಕ ನೂತನ ದಂಪತಿಗಳು ಗೃಹಸ್ತಾಶ್ರಮ ಜೀವನವನ್ನು ಸುಖವಾಗಿ ಸಾಗಿಸುತ್ತಾ ಬಂದರು. ಹೀಗಿರುವಾಗ
ಒಂದು ದಿನ ಬ್ರಾಹ್ಮೀಮುಹೂರ್ತದಲ್ಲಿ ಮಹರ್ಷಿ ಅಗಸ್ತ್ಯರು ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನಕಾ ನದಿಯ
ತೀರಕ್ಕೆ ಸ್ನಾನಕ್ಕೆಂದು ತೆರಳಿದರು. ತೆರಳುವ ಮುನ್ನ ತಮ್ಮ ಪವಿತ್ರ ಕಮಂಡಲದೊಳಗೆ ಶ್ರೀ ಕಾವೇರಿಯನ್ನು
ಆವಾಹನೆ ಮಾಡಿ ತಮ್ಮ ಶಿಷ್ಯರಿಗೆಲ್ಲಾ 'ಜಾಗ್ರತೆ ನೋಡಿಕೊಳ್ಳಿ' ಎಂದು ಹೇಳಿ ತೆರಳಿದರು. ಲೋಕಪಾವನೆಯಾಗಿ,
ಲೋಕೇಶ್ವರಿಯಾಗಿ, ಲೋಕೋಪಯೋಗಿ ನದಿಯಾಗಿ ಬೆಳಗಬೇಕಾಗಿ ಇಳೆಗೆ ಇಳಿದು ಬಂದ ಮಹಾತಾಯಿ ಕಾವೇರಿ ಇದೇ ಸಂದರ್ಭವನ್ನು
ನಿರೀಕ್ಷಿಸುತ್ತಿರಬೇಕು! ತನ್ನ ನಿಬಂಧನೆಯನ್ನು ಪತಿಯಾದ ಅಗಸ್ತ್ಯರು ಉಲ್ಲಂಘಿಸಿದರೆಂದು ಹೇಳಿ ಹೊರಡುವ
ಅವಕಾಶ ಒದಗಿ ಬಂತು. ಕಾವೇರಿ ಕೂಡಲೇ ಕಮಂಡಲುವಿನಿಂದ ಹೊರಬಂದು ಪಕ್ಕದ ಬ್ರಹ್ಮಕುಂಡಿಕೆಯನ್ನು ಸೇರಿ
ಅಲ್ಲಿಂದ ಜಲರೂಪಳಾಗಿ, ನದಿಯಾಗಿ ಹರಿಯ ಹೊರಟಳು. ಅವಳ ಹರಿವಿಕೆಯನ್ನು ತಡೆಯ ಹೋದ ಶಿಷ್ಯರಿಗೆ ಕಾಣಿಸಿಕೊಳ್ಳದೆ
ಗುಪ್ತಗಾಮಿನಿಯಾಗಿ ಸ್ವಲ್ಪದೂರ ಹರಿದು ಮತ್ತೆ ಕಾಣಿಸಿಕೊಂಡಳು. ಆಗ ಸ್ನಾನಾಹ್ನಿಕಗಳನ್ನು ಮುಗಿಸಿ
ಬಂದ ಮುನಿ ಪುಂಗವರಿಗೆ ತನ್ನ ಸತಿ ಎಸಗಿದ ಕಾರ್ಯದ ಅರಿವಾಗಿ "ನದಿಯಾಗಿ ಮುಂದೆ ಹರಿಯುವುದು ಬೇಡ.
ಮರಳಿ ತನ್ನ ಪತ್ನಿಯಾಗಿ ಶರೀರಧಾರಿಯಾಗಿ ಬಾಳು' ಎಂದು ಅವರು ಬಹು ವಿಧದಲ್ಲಿ ಶ್ರೀಕಾವೇರಿಯನ್ನು ಕೇಳಿಕೊಂಡರು.
ಓಂಕಾರೇಶ್ವರಿಯೂ, ಜಗನ್ಮಾತೆಯೂ, ಇಚ್ಛಾಜ್ಞಾನಕ್ರಿಯಾಶಕ್ತಿಸ್ವರೂಪಿನಣಿಯಾದ ಶ್ರೀ ಕಾವೇರಿ ದೇವಿಯು
ಓಂಕಾರೇಶ್ವರರಾದ ಅಗಸ್ತ್ಯ ಮುನಿಗಳಿಗೆ ಸಮಾಧಾನ ಹೇಳುತ್ತಾ, ಲೋಕಕಲ್ಯಾಣಕ್ಕಾಗಿ ತಾನು ನದಿರೂಪ ತಳೆದು
ಲೋಕೋಪಕಾರ ಮಾಡುವೆನೆಂದು ಸ್ಪಷ್ಟಪಡಿಸಿದಳು. ಅಗಸ್ತ್ಯರು ಶಿಷ್ಯವರ್ಗದವರನ್ನೊಡಗೂಡಿಕೊಂಡು ಶ್ರೀ ಕಾವೇರಿಯು
ನದಿಯಾಗಿ ಹರಿದು ಮುಂದುವರಿದಂತೆ ಹಿಂಬಾಲಿಸುತ್ತಾ ತೆರಳಿದರು. ಕಾವೇರಿಯು ನದಿಯಾಗಿ ಹರಿದು ಕೆಲವು
ಮೈಲುಗಳಷ್ಟು ಮುಂದೆ ತೆರಳಿದಾಗ ನಾಗಲೋಕದವರು ಹಾದಿಗೆ ಅಡ್ಡಲಾಗಿ ಬಂದು ಶ್ರೀಮಾತೆಯನ್ನು ಸ್ತುತಿಸಿ
ಮಾತೆಯನ್ನು ನದಿಯಾಗಿ ಹರಿಯದೆ ಉಳಿಯಬೇಕೆಂದು ಪ್ರಾರ್ಥಿಸಿದರು. ಅವರನ್ನು ಸಮಾಧಾನಗೊಳಿಸಿ ಶ್ರೀಕಾವೇರಿಯು
ಮುಂದೆ ಸರಿದಳು. ನಾಗಲೋಕದವರು ಶ್ರೀಮಾತೆಯನ್ನು ತಡೆದ ಸ್ಥಳವು ನಾಗತೀರ್ಥವೆಂದು ಪ್ರಸಿದ್ಧವಾಯಿತು.
ನಾಗತೀರ್ಥದಿಂದ ಮುಂದೆ ಸಾಗಿದ ಶ್ರ್ರೀಕಾವೇರಿಯು ಭಾಗಮಂಡಲ ಕ್ಷೇತ್ರದಲ್ಲಿ ಕನಕ, ಸುಜ್ಯೋತಿ ನದಿಗಳನ್ನು
ಒಡಗೂಡಿಕೊಂಡು ಮುಂದೆ ತೆರಳಿದರು. ಹೀಗೆ ಕೆಲವು ಮೈಲುಗಳು ಸಾಗಿದಾಗ ವಲಂಬುರಿ (ಬಲಮುರಿ) ಎಂಬ ಊರಿಗೆ
ತಲುಪಿದಳು. ಅಲ್ಲಿ ಕೊಡಗನ್ನು ಆಳುತ್ತಿದ್ದ ಚಂದ್ರವರ್ಮ ರಾಜನ ಸಂತತಿಯವರೂ, ಮಾತೆಯ ಭಕ್ತರಾದವರೆಲ್ಲರೂ
ಶ್ರೀಮಾತೆಯನ್ನು ಎದುರುಗೊಂಡರು. ಶ್ರೀಕಾವೇರಿ ನದಿಯ ನೀರಿನ ಹರಿಯುವಿಕೆಯ ರಭಸಕ್ಕೆ ಅಲ್ಲಿ ನೆರೆದಿದ್ದ
ಸ್ತ್ರೀಯರ ಸೀರೆ ನೆರಿಗೆಯು ಹಿಂಬದಿಗೆ ಸರಿದು ಹೋಯಿತು. ನೆರೆದಿದ್ದ ಜನಸಮೂಹ, ತನ್ನ ಪತಿದೇವ, ಭಕ್ತ
ವರ್ಗದವರೆಲ್ಲರನ್ನೂ ಶ್ರೀಮಾತೆ ಕೆಲವು ಮಾತುಗಳನ್ನು ಹೇಳಿದಳು. ತನ್ನ ಪತಿಯನ್ನು ಉದ್ದೇಶಿಸಿ, ತಾನು
ಲೋಕೋಪಕಾರಕ್ಕಾಗಿ ನದಿಯಾಗಿ ಹೊರಟು ಹೋಗುವೆನೆಂದೂ, ಆದರೆ ದ್ವಿರೂಪ ತಾಳಿ ಒಂದು ರೂಪದಲ್ಲಿ ಕಾವೇರಿಯಾಗಿ
ನದಿಸ್ವರೂಪದಲ್ಲಿ ಲೋಕೋಪಕಾರ ಕೆಲಸಕ್ಕೆ ತೆರಳಿ ಸಮುದ್ರವನ್ನು ಸೇರುವೆನೆಂತಲೂ, ಅಲ್ಲಿ ನೆರೆದಿದ್ದವರನ್ನು
ಉದ್ದೇಶಿಸಿ "ಸತ್ಯ, ಧರ್ಮ, ಪ್ರೇಮ, ಭಕ್ತಿ, ಶ್ರದ್ಧೆಗಳಿಂದ ಕೂಡಿದವರಾಗಿ ಸದಾ ಸುಖಿಯಾಗಿರಿ.
ಈ ದಿನ ಇಲ್ಲಿ ಹಿಂದೆ ಸರಿದುಹೋದ ಸ್ತ್ರೀಯರ ಸೀರೆ ನೆರಿಗೆಗಳು ನಾನು ನದಿರೂಪ ತಳೆದು ಹರಿದುದರ ಜ್ಞಾಪಕಾರ್ಥವಾಗಿ
ಮುಂದೆಯೂ ಹೀಗೆಯೇ ನಿತ್ಯಾಚರಣೆಯಲ್ಲಿ ನೆರಿಗೆ ಕ್ರಮದಿಂದ ಸ್ತ್ರೀಯರಿಂದ ಅನುಸರಿಸಲ್ಪಡುವಂತಾಗಲಿ.
ವರ್ಷಕ್ಕೊಮ್ಮೆ ಸೂರ್ಯನು ತುಲಾರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣ ಕಾಲದಲ್ಲಿ ಗಂಗಾದಿ ಸಮಸ್ತ ಪುಣ್ಯ
ತೀರ್ಥಗಳಿಂದ ನಾನು ಒಡಗೂಡುವವಳಾಗುತ್ತೇನೆ" ಎಂದು ಹೇಳಿ ಆಶೀರ್ವದಿಸಿ ಮುಂದೆ ನದಿರೂಪವಾಗಿ ತೆರಳಿದಳು.
ನೆರೆದಿದ್ದ ಜನಸ್ತೋಮ ಜಯಕಾವೇರಿ - ಜಯ ಜಗನ್ಮಾತೆ ಎನ್ನುತ್ತಾ ಒಕ್ಕೊರಲಿನಿಂದ ಶ್ರೀಮಾತೆಯನ್ನು ಕೊಂಡಾಡಿದರು.
ಮಹರ್ಷಿಗಳಾದ ಶ್ರೀ ಅಗಸ್ತ್ಯರು ಶ್ರೀ ಕಾವೇರಿಯನ್ನು ಆಶೀರ್ವದಿಸಿ ಅವಳ ಮೂಲಕ ಲೋಕಕ್ಕೆ ಕಲ್ಯಾಣ ಉಂಟಾಗಲಿ
ಎಂದು ಹಾರೈಸಿದರು. ಬಲಮುರಿಯಿಂದ ಮುಂದೆ ಗುಹ್ಯ-ರಾಮಸ್ವಾಮಿ ಕಣಿವೆ-ಕನ್ನಂಬಾಡಿಗಳನ್ನು ಹಾದು ಪಶ್ಚಿಮವಾಹಿನಿಯಾಗಿ
ಶ್ರೀರಂಗಪಟ್ಟಣದ ಹತ್ತಿರ ಹರಿದು ಪುನಃ ಪೂರ್ವಾಭಿಮುಖಿಯಾಗಿ ಸಾಗಿ ಶ್ರೀರಂಗಪಟ್ಟಣವನ್ನು ಸೇರಿದಳು.
ಮುಂದಕ್ಕೆ ಸಾಗಿ ತಿರುಮಕೂಡಲು-ತಲಕಾಡು-ಮೆಟ್ಟೂರು-ಶ್ರೀರಂಗಂ-ತಿರುಚಿನಾಪಳ್ಳಿ-ಕುಂಭಕೋಣಂ ಇತ್ಯಾದಿ
ಊರುಗಳನ್ನು ಸೇರುತ್ತಾ ಕೊನೆಗೆ ಪೂರ್ವ ಸಮುದ್ರವನ್ನು ಸೇರಿದಳು.
ಕಾವೇರಿ
ನದಿಗೆ ಅಲ್ಲಲ್ಲಿ ಹರಿದು ಸೇರಿದ ಅನೇಕ ಉಪನದಿಗಳ ಪೈಕಿ ಕನ್ನಿಕೆ ಮತ್ತು ಸುಜ್ಯೋತಿ ಎಂಬ ಎರಡು ನದಿಗಳು
ಪ್ರಸಿದ್ಧವಾಗಿದ್ದವು. ಅವುಗಳಿಗೆ ತಮ್ಮದೇ ಆದ ಪೌರಾಣಿಕ ಹಿನ್ನಲೆಯಿದೆ. ಸುಜ್ಯೋತಿಯು ಕನಕೆಯಂತೆ ಕಾವೇರಿಯನ್ನು
ನದಿರೂಪಳಾಗಿ ಹರಿದು ಸೇರಿ ಸಂಗಮವಾಗುವುದನ್ನು ಭೌತಿಕ ಚಕ್ಷುಗಳಿಂದ ಕಾಣಲು ಸಾಧ್ಯವಿಲ್ಲ. ಗಂಗಾ, ಯಮುನಾ
ಹಾಗೂ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಸರಸ್ವತಿ ನದಿ ಹೇಗೆ ಅಜ್ಞಾತವಾಗಿ ಸಂಗಮವಾಗಿದೆಯೋ ಹಾಗೆಯೇ
ಕನ್ನಿಕೆ-ಕಾವೇರಿ ನದಿಗಳ ಒಡನೆ ಸುಜ್ಯೋತಿಯು ಸಂಗಮವಾಗಿರುತ್ತದೆ
ಕನ್ನಿಕೆಯು
ಪೌರಾಣಿಕವಾಗಿ ಇಂದ್ರನ ಪರಿಚಾರಿಕೆಯಾದ ಯಕ್ಷಸ್ತ್ರೀಯಾಗಿದ್ದಳು. ಹಿಂದೆ ಸುಯಜ್ಞೆಯೆಂಬ ವಿಪ್ರಶ್ರೇಷ್ಠನೊಬ್ಬನಿದ್ದು
ಅವನು ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸನ್ನು ಆಚರಿಸಿದನು. ಭಕ್ತನ ತಪಸ್ಸಿಗೆ ಒಲಿದ ಭಗವಾನ್ ಶ್ರೀಹರಿಯು
ತಾಪಸೋತ್ತಮನಾದ ಸುಯಜ್ಞನಿಗೆ ತನ್ನಂಶದಿಂದ ಉತ್ಪನ್ನಳಾದ ಕನ್ನಿಕೆ ಸುಜ್ಯೋತಿ ಎಂಬುವಳನ್ನು ನೀಡಿ,
ಬ್ರಹ್ಮಗಿರಿಯ ಬಳಿಯ ಗಜರಾಜನಿಗೆ ತೆರಳಿ ಅಲ್ಲಿ ಪುತ್ರಿಯೊಡನೆ ಇರು ಎಂದು ಹೇಳಿ ಅಂತರ್ಧಾನನಾದನು.
ಸುಯಜ್ಞನು ವರಲಬ್ಧೆಯಾದ ಕುವರಿ ಸುಜ್ಯೋತಿಯೊಡನೆ ಗಜರಾಜಗಿರಿಗೆ ಬಂದನು. ಅಲ್ಲಿದ್ದ ಶುಭಕಾರಿಣಿ ಯಕ್ಷಿಣಿಯಾದ
ಕನ್ನಿಕೆಯೊಡನೆ ಪುತ್ರಿ ಸುಜ್ಯೋತಿಯನ್ನು ಕೂಡಿಕೊಂಡು ಶುದ್ಧಚಾರಿತ್ರ್ಯವಂತನೂ, ತಪೋನಿಷ್ಠನೂ ಆಗಿ
ಬಾಳಹೊರಟನು. ಕೆಲವು ಕಾಲಾನಂತರ ಶ್ರೀಮಹಾವಿಷ್ಣುವಿನ ದರ್ಶನ ಹೊಂದಿ ವೈಕುಂಠಧಾಮಕ್ಕೆ ತೆರಳಿದನು. ತಂದೆಯ
ನಿರ್ಗಮನದ ನಂತರ ಪುತ್ರಿ ಸುಜ್ಯೋತಿಯು ಭಗವಂತನ ದರ್ಶನಕ್ಕಾಗಿ ವಿಶೇಷವಾದ ತಪಸ್ಸನ್ನೆಸಗಿದಳು. ಅಷ್ಟರಲ್ಲಿ
ದೇವಲೋಕದ ಒಡೆಯನಾದ ದೇವೇಂದ್ರನು ಅಲ್ಲಿಗೆ ಆಗಮಿಸಿ ಸುಜ್ಯೋತಿಯನ್ನು ವಿವಾಹವಾಗಲು ಬಯಸಿದನು. ಅವನು
ಸುಜ್ಯೋತಿಯನ್ನು ಕುರಿತು "ಸಹಸ್ರ ಸಂವತ್ಸರಗಳ ನಂತರ ನದಿಯಾಗಿ ತೆರಳು. ಆ ತನಕ ನನ್ನೊಡನೆ ಪತ್ನಿಯಾಗಿ
ಬಾಳಿಕೊಂಡಿರು" ಎಂಬುದಾಗಿ ಹೇಳಿದನು. ಇಂದ್ರನ ಈ ಬಯಕೆಯಿಂದ ಅಸಂತುಷ್ಟನಾದ ಸುಜ್ಯೋತಿಯು ಗೆಳತಿ
ಕನ್ನಿಕೆಯೊಡನೆ ಮಾತನಾಡಿ ಆಕೆಯನ್ನು ಒಡಗೂಡಿಕೊಂಡು ನದಿರೂಪಳಾಗಿ ಹರಿಯ ಹೊರಟಳು. ತನ್ನ ಮಾತನ್ನು ಲೆಕ್ಕಿಸದೆ
ನದಿಯಾಗಿ ಸರಿದ ಸುಜ್ಯೋತಿಯನ್ನು ಕಂಡು ಇಂದ್ರನು 'ಜಲಶೂನ್ಯಳಾಗು' ಎಂದು ಆಕೆಗೆ ಶಾಪವನ್ನು ಕೊಟ್ಟನು.
ಸುಜ್ಯೋತಿಯು ಇಂದ್ರನಲ್ಲಿ ಮರುಸಮಾಧಾನದ ವರಬೇಡಲು ಇಂದ್ರನು ಪರಮಪಾವನೆಯಾದ ಕಾವೇರಿ ನದಿಯ ಪವಿತ್ರವಾರಿ
ಸೋಂಕಿದಾಗ ಜಲಪೂರ್ಣಳಾಗೆಂದು ಮರುವರವನ್ನಿತ್ತನು. ಅನುಸಾರವಾಗಿ ಸುಜ್ಯೋತಿಯು ಕನ್ನಿಕಾ-ಕಾವೇರಿ ಸಂಗಮದ
ಪವಿತ್ರ ಮುಹೂರ್ತವನ್ನು ನಿರೀಕ್ಷಿಸುತ್ತಾ ಇದ್ದಳು. ಮಂಗಳ ಮುಹೂರ್ತದಲ್ಲಿ ಪವಿತ್ರ ಕಾವೇರಿ-ಕನ್ನಿಕೆಯರ
ಸಂಗಮವಾದಾಗ ಸುಜ್ಯೋತಿಯು ಸೇರಿ ಜಲ ಶೂನ್ಯತೆಯನ್ನು ಕಳೆದುಕೊಂಡು ಜಲಪೂರ್ಣತೆಯನ್ನು ಪಡೆದು ಪವಿತ್ರ
ನದಿಯಾಗಿ ರೂಪಾಂತರ ಹೊಂದಿದಳು.
***
Sri Bhagandeshwara temple, Bhagamandala |
ಭಾಗಮಂಡಲ
ಕ್ಷೇತ್ರಕ್ಕೆ ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ಧವಾಗಿರುತ್ತದೆ. ಇಲ್ಲಿ ಶ್ರೀ ಭಗಂಡೇಶ್ವರ,
ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಮಹಾವಿಷ್ಣು ದೇಗುಲಗಳಿವೆ. ಶ್ರೀ ಮಹಾಗಣಪತಿ ಸನ್ನಿಧಿಯು ದೇಗುಲದ
ಹೊರ ಅಂಗಣದಲ್ಲಿದೆ.
ಹಿಂದೆ
ಭಗಂಡರೆಂಬ ಮುನಿವರ್ಯರು ಇಲ್ಲಿ ವಾಸವಾಗಿದ್ದು, ಷಣ್ಮುಖಸ್ವಾಮಿಯನ್ನು ಕುರಿತು ತಪಸ್ಸು ಮಾಡಿ ಭಗವಂತನ
ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಸುಬ್ರಹ್ಮಣ್ಯಸ್ವಾಮಿಯ ದಿವ್ಯ ನೆಲೆಯಾಗಿದ್ದು ಸ್ಕಂದಕ್ಷೇತ್ರವೆಂದು
ಪ್ರಸಿದ್ಧಿ ಪಡೆದಿದ್ದ ಇಂದಿನ ಭಾಗಮಂಡಲದ ಭೂ ಭಾಗವನ್ನು ಭಗಂಡ ಋಷಿಗಳ ಮೇಲೆ ಸುಪ್ರೀತರಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿಯು
ಅನುಗ್ರಹ ಪೂರ್ವಕವಾಗಿ ಅವರಿಗೆ ಕೊಡುಗೆಯಾಗಿ ನೀಡುತ್ತಾರೆ. ಋಷಿಗಳ ಪರಮಪಾವನನಾದ ತಪೋಭೂಮಿ ಹಾಗೂ ದೇವನೆಲೆಯಾದ
ಸ್ಕಂದ ಕ್ಷೇತ್ರದಲ್ಲಿ ಸರ್ವಜೀವರ ಕ್ಷೇಮಕ್ಕಾಗಿ ಶಿವಲಿಂಗವೊಂದನ್ನು ಭಗಂಡ ಮಹರ್ಷಿಗಳು ಪ್ರತಿಷ್ಠಾಪಿಸುತ್ತಾರೆ.
ಭಗಂಡ ಋಷಿಯು ನೆಲೆಸಿ ತಪಸ್ಸನ್ನು ಎಸಗಿ ಷಣ್ಮುಖಸ್ವಾಮಿಯಿಂದ ಅನುಗ್ರಹವಾಗಿ ಪಡೆದ ಕ್ಷೇತ್ರವಾದ್ದರಿಂದ
ಭಗಂಡಕ್ಷೇತ್ರ ಎಂದು ಹೆಸರಾಯಿತು. ಅದೇ ಹೆಸರು ಮುಂದೆ ಭಾಗಮಂಡಲ ಎಂದು ರೂಪಾಂತರವನ್ನು ಹೊಂದಿತು. ಭಗಂಡ
ಋಷಿಗಳು ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಭಗಂಡೇಶ್ವರನೆಂದು ಸ್ತುತಿಸಿ
ಶಿವನನ್ನೇ ಪ್ರಧಾನವಾಗಿ ಪೂಜಿಸುವಂತಾಯಿತು. ಮಹಾ ತಪಸ್ವಿಗಳಾದ ಭಗಂಡ ಮಹರ್ಷಿಗಳು ತಪಸ್ಸನ್ನು ಎಸಗಿದ
ಭೂಮಿಯಾದುದರ ಜೊತೆಗೆ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಸ್ವಕೀಯ ಕ್ಷೇತ್ರವಾಗಿಸಿಕೊಂಡಿದ್ದ ಭೂಭಾಗವಾಗಿದ್ದು,
ಋಷಿ ಪ್ರತಿಷ್ಠೆಯಿಂದಾದ ಶಿವದೇಗುಲದಿಂದ ಕೂಡಿರುವ ಭಾಗಮಂಡಲವು ಪುರಾಣ ಪ್ರಸಿದ್ಧವಾದ ಪವಿತ್ರ ಕ್ಷೇತ್ರ
ಎಂಬುದರಲ್ಲಿ ಸಂದೇಹವಿಲ್ಲ.
No comments:
Post a Comment