Wednesday, February 22, 2017

ನಿಮಗೂ ಲವ್ವಾಗಿಸುವ 'ನನಗೂ ಲವ್ವಾಗಿದೆ...'



ಬದುಕಿನಲ್ಲಿ ಬೇಕು ಅಂದಿದ್ದೆಲ್ಲವೂ ಆ ಕ್ಷಣದಲ್ಲಿ ಕೈ ಸೇರುತ್ತಿರುತ್ತದೆ. ಅದಿಲ್ಲ, ಇದಿಲ್ಲ ಎಂದು ಕೊರಗಿದ್ದು, ಕನವರಿಸಿದ್ದ್ಯಾವುದೂ ನೆನಪಿಲ್ಲ. 

ಆದರೆ,


ಒಂದು ಲವ್ವೆನ್ನುವ ಲವ್ವು...?

ಊಹ್ಹೂಂ.. ಅದೊಂದು ಮಾತ್ರ ಈ ಬದುಕಿನ ತೋಟದಲ್ಲಿ ಹೂವಾಗಿ ಅರಳಿಕೊಂಡಿರುವುದಿಲ್ಲ. ಪರಿಮಳ ಚೆಲ್ಲಿರುವುದಿಲ್ಲ. ಚೆಲುವು ತುಂಬಿರುವುದಿಲ್ಲ. 

ಬದುಕಿಗೆ ಎಲ್ಲವೂ ಇದೆ. ಆದರೆ ಏನೆಂದರೆ ಏನೂ ಇಲ್ಲ ಎನ್ನುವಂತಹಾ ತಿರುಬೋಕಿ ಸ್ಥಿತಿಯಲ್ಲಿ ಬದುಕು ಬೀದಿ ಬೀದಿ ಅಲೆಯುತ್ತಿರುತ್ತದೆ. ಹೇಗಾದರೂ ಸರಿ ಒಂದೇ ಒಂದು ಲವ್ವಾದರೆ ಸಾಕು ಎಂದ್ ಹಂಬಲಿಸಿ ಪ್ರೀತಿಯನ್ನು ಹೊತ್ತು ತರುವ ಜೀವಕ್ಕಾಗಿ ಹುಡುಕಾಡುತ್ತಿರುತ್ತದೆ........

***

ಇವು ಕೆ. ಗಣೇಶ್ ಕೊಡೂರು (ಅರುಡೋ ಗಣೇಶ) ಅವರ ನೂತನ ಪುಸ್ತಕ 'ನನಗೂ ಲವ್ವಾಗಿದೆ...' ಯಲ್ಲಿನ ಪ್ರಥಮ ಸಾಲುಗಳು. 

ಪ್ರೀತಿ ಇಲ್ಲದ ಬದುಕು ಬದುಕೂ ಅಲ್ಲ. ಅಂತಹಾ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. - ಇವು ನನಗೂ ಲವ್ವಾಗಿದೆ ಪುಸ್ತಕದ ಲೇಖಕರಾದ ಗಣೇಶ್ ಅವರ ನುಡಿಗಳು. ಹಾಗೆಂದು ಇದು ಅವರ ಮಾತಷ್ಟೇ ಅಲ್ಲ. ಪ್ರತಿಯೊಬ್ಬ ಮಾನವ ಜೀವಿಯ ಮಾತು ಕೇವಲ ಮಾನವರಲ್ಲ ಈ ಸೃಷ್ಟಿಯಲ್ಲಿರಬಹುದಾದ ಎಲ್ಲಾ ಪಶು, ಪಕ್ಷಿ, ಕೀಟಾದಿಗಳೂ ಜೀವಿಸುವುದಕ್ಕೆ ಕಾರಣ ಪ್ರೀತಿ. ಭಗವಂತನು ಈ ಜಗತ್ತನ್ನು ಸೃಷ್ಟಿಸಿದ್ದಾನೆ ಎಂದು ನಂಬುವುದಾದರೆ ಅದಕ್ಕೂ ಅವನಲ್ಲಿದ್ದ ಪ್ರೀತಿಯೇ ಕಾರಣ. ಹೀಗಾಗಿ ಪ್ರೀತಿಯೇ ಜಗತ್ತಿನ ತಾಯಿ ಬೇರು.

ನಾವೆಲ್ಲ ಪ್ರೀತಿ ಎಂದರೆ ಕಾಲೇಜು ದಿನಗಳಲ್ಲಿ ಯುವ ಜೋಡಿಗಳಲ್ಲಿ ಅಂಕುರಿಸುವ ಪ್ರೀತಿ ಎಂದೇ ಭಾವಿಸುತ್ತೇವೆ. ಇಂದಿನ ಸಿನಿಮಾಗಳಂತೂ ಇದನ್ನೇ ವೈಭವೀಕರಿಸಿ ತೋರಿಸುತ್ತವೆ. ಆದರೆ ಈ ಪ್ರೀತಿ ಎಂದರೆ ಅಷ್ಟೇ ಅಲ್ಲ ಇನ್ನೂ ಬೇರೇನೇ ಆಗಿದೆ ಎಂದು ತಿಳಿಯಬೇಕಾದರೆ ಈ ಪುಸ್ತಕವನ್ನೊಮ್ಮೆ ಓದಬೇಕು.

ಲೇಖಕ ಕೆ. ಗಣೇಶ್ ಕೊಡೂರು
ನನಗೂ ಲವ್ವಾಗಿದೆ- ಹೀಗೆಂದು ಪ್ರತಿಯೊಬ್ಬರೂ ಘೋಷಿಸಿಕೊಳ್ಲ್ಲಲು ಬಯಸುತ್ತಾರೆ. ಆದರೆ ಎಲ್ಲರಿಗೂ ಹೀಗೆ ಸ್ವಯಂ ಘೋಷಿಸಿಕೊಳ್ಳುವ ಅವಕಾಶ ಸಿಗುವುದಿಲ್ಲ. ಎನ್ನುವುದು ಜೀವನದಷ್ಟೇ ಸತ್ಯ. ಪ್ರೀತಿಯಲ್ಲಿನ ನಾನಾ ಹಂತಗಳನ್ನು ಮತ್ತು ಆ ಹಂತಗಳಲ್ಲಿ ನಮಗೆ ಆಗಬಹುದಾದ ಲವ್ವಿನ ದಟ್ಟ ಅನುಭವವನ್ನೂ ಸರಳವಾದ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಗಣೇಶ್ ಇಲ್ಲಿ ಪ್ರೀತಿಗೆ ಇರಬಹುದಾದ ಎಲ್ಲಾ ಬಗೆಯ ಆಯಾಮಗಳನ್ನು ತೋರಿಸಿದ್ದಾರೆ. 

ಪ್ರೀತಿ ಹೇಗೆಲ್ಲ ಹುಟ್ತಬಲ್ಲದು? ಅದರ ಹಿನ್ನೆಲೆಯ ಸನ್ನಿವೇಶ, ಪ್ರೀತಿಸುವವರಲ್ಲಿ ಇರಬೇಕಾದ ಪರಸ್ಪರ ನಂಬಿಕೆ, ಬಡತನದ ಬೇಗೆಯಲ್ಲಿಯೂ ಪ್ರೀತಿ ಹೇಗೆ ಮರವಾಗಿ ಬೆಳೆಯಬಲ್ಲದು ಎನ್ನುವುದನ್ನ ಒಂದು ಬಗೆಯ ಕಾವ್ಯಾತ್ಮಕ ಗದ್ಯ ಶೈಲಿಯಲ್ಲಿ ಕಟ್ಟಿ ಕೊಟ್ಟಿರುವ ಗಣೇಶ್ ಕೊಡೂರು ಅವರ ಈ ಪುಸ್ತಕ ಯುವ ಜನತೆಗೆ ಅತ್ಯಂತ ಹೆಚ್ಚು ಆಪ್ತವಾಗುತ್ತದೆ. ಯುವ ಮನಸ್ಸುಗಳಲ್ಲಿ ಪ್ರೀತಿಯ ಕುರಿತಾಗಿ ಏನಾದರೂ ಸಂದೇಹಗಳಿದ್ದಲ್ಲಿ ಇದನ್ನು ನಿವಾರಿಸಿಕೊಳ್ಳಲು ಈ ಪುಸ್ತಕ ಸೂಕ್ತ ಮಾರ್ಗದರ್ಶಿಯೂ ಆಗಬಹುದು. ಈ ಅರ್ಥದಲ್ಲಿ ಹೇಳಿದರೆ ಇದು ಪ್ರೇಮಿಗಳ ಪಾಲಿನ ಪಠ್ಯ ಪುಸ್ತಕ!

ಒಟ್ಟೂ ಸುಮಾರು ಎಂಭತ್ತು ಪುಟಗಳ ಈ ಕಿರುಹೊತ್ತಿಗೆಯಲ್ಲಿ ಬದುಕೆಂದ ಮೇಲೆ ಲವ್ವಾಗಲಏಬೇಕು... ಎನ್ನುವ ಮುಖ್ಯ ಶೀರ್ಷಿಕೆಯಡಿಯಲ್ಲಿ ಒಂದು ಸುದೀರ್ಘ ಪ್ರಬಂಧ ಇದೆ. ನಡು ನಡುವೆ ಉಪ ಶೀರ್ಷಿಕೆಗಳಿದ್ದರೂ ಸಹ ಪುಸ್ತಕ ಪೂರ್ಣವಾಗಿ ಓದಿದಾಗ ಪ್ರೀತಿ ಎನ್ನುವ ಏಕ ಸಮ ಭಾವ ನಮ್ಮಲ್ಲಿ ಮೂಡುವುದು ಸುಳ್ಳಲ್ಲ. 

ಒಟ್ತಾರೆ ಪ್ರೀತಿಸುವ ಜೋಡಿಗಳ ನಡುವಿನ ಸಂಬಂಧ ಸಾಮೀಪ್ಯ, ಅವರಲ್ಲಿನ ಅನಂಬಿಕೆ ಅಪನಂಬಿಕೆಗಳ ತಾಕಲಾಟ, ಜೀವನದಲ್ಲೆದುರಾಗುವ ಪರಿಸ್ಥಿತಿಗಳನ್ನು ಎದುರಿಸಿ ಪ್ರೇಮವನ್ನು ಗೆಲ್ಲುವ ಬಗೆ ಎಲ್ಲವನ್ನೂ ಗಣೇಶ್ ಅವರು ಅತ್ಯಂತ ಸುಂದರವಾಗಿ ಇಲ್ಲಿ ಹಣೇದಿರುತ್ತಾರೆ. ನಾವೇಕೆ ಪ್ರೀತಿಗಾಗಿ ಹಂಬಲಿಸುತ್ತೇವೆ? ಎನ್ನುವ ಪ್ರಶ್ನೆಗೆ ಉತ್ತರವಾಗಿ ಈ ಪುಸ್ತಕವಿದೆ ಎಂದರೆ ಅತು ಕ್ಲೀಶೆಯಲ್ಲ.

ಇನ್ನೇನು ಹೇಳಲಿ....?  ನಿಮಗೆ ಲವ್ವಾಗಿದೆಯೊ, ಇಲ್ಲವೋ ಈ ಪುಸ್ತಕವನ್ನೊಮ್ಮೆ ಓದಿದರೆ ನಿಮಗೆಲ್ಲೋ ಒಂದು ಕಡೆ ಲವ್ವಾಗುವುದಂತೂ ಖಚಿತ,  ಅಂದ  ಹಾಗೆ. ಹೌದು ನನಗೂ ಲವ್ವಾಗಿದೆ.... :)

1 comment:

  1. ನಿಮ್ ವಿಮರ್ಶೆ ಚೆನ್ನಾಗಿದೆ. ನನಗಂತೂ ಗಣೇಶ್ ಸರ್ ಬರಹದ ಶೈಲಿ ಮೇಲೇಯೂ ಲವ್ ಆಗಿದೆ. ಅವರ ಬರಹ ವ್ಯಕ್ತಿತ್ವ ಬದ್ಧತೆ ಮತಷ್ಟು ಲವ್ ಆಗುವಂತೆ ಮಾಡಿದೆ.

    ReplyDelete