Thursday, August 17, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 87

ಸುಧಾಮ ಪುರಿ (Porbandar)


ಶ್ರೀಕೃಷ್ಣನ ಗೆಳೆಯ ಕುಚೇಲ ಅಥವಾ ಸುಧಾಮನ ಕಥೆ ಅತ್ಯಂತ ರಮಣೀಯವಾದದ್ದು ಮತ್ತು ಎಲ್ಲರಿಗೂ ಪ್ರಿಯವಾದದ್ದು ಆಗಿದೆ. ಇಂತಹಾ ಸುಧಾಮ ಹುಟ್ಟಿದ ಸ್ಥಳವೇ ಸುಧಾಮ ಪುರಿ.(ಇಂದಿನ ಪೋರಬಂದರ್)  ಭಾರತ ರಾಷ್ಟ್ರಪಿತ ಗಾಂಧಿ ಸಹ ಹುಟ್ಟಿದ್ದದ್ದು ಇಲ್ಲಿಯೇ. ಕೃಷ್ಣನ ಲೀಲಾ ಕ್ಷೇತ್ರವಾದ ದ್ವಾರಕೆಯಿಂದ ಇಲ್ಲಿಗೆ 104 ಕಿಲೋಮೀಟರ್. ಗುಜರಾತಿನ ಮುಖ್ಯ ಪಟ್ಟಣ ಅಹಮದಾಬಾದ್ ನಿಂದ 398 ಕಿಲೋಮೀತರ್ ದೂರದಲ್ಲಿದೆ. ಇಲ್ಲಿ ಇಂದಿಗೂ ಸುಧಾಮ ಪುರಿ ದೇವಾಲಯವಿದ್ದು ಇದನ್ನು 1902 ರಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಮುನ್ನ ಪುಟ್ಟ ಗುಡಿಯೊಂದು ಇದ್ದಿತ್ತು ಮತ್ತು ಅದು 12 ನೇ ಶತಮಾನದಲ್ಲಿ ನಿರ್ಮಾಣವಾಗಿತ್ತು.

***


ಶ್ರೀಕೃಷ್ಣನಿಗೆ ಸುಧಾಮ ಎಂಬ ಬ್ರಾಹ್ಮಣ ಸ್ನೇಹಿತನಿದ್ದನು, ಗೃಹಸ್ಥನಾಗಿದ್ದರೂ ಅವನು ನೆಮ್ಮದಿಯ ಜೀವನಕ್ಕಾಗಿ ಐಶ್ವರ್ಯವನ್ನು ಸಂಗ್ರಹಿಸುವುದರಲ್ಲಿ ನಿರತನಾಗಿರಲಿಲ್ಲ. ತನ್ನ ಅದೃಷ್ಟಕ್ಕೆ ಅನುಗುಣವಾಗಿ ಬಂದ ಆದಾಯದಿಂದಲೇ ತೃಪ್ತನಾಗಿದ್ದನು ಮತ್ತು ಹೊರನೋಟಕ್ಕೆ ಅವನು ಬಡವನ ಹಾಗೆ ಕಾಣುತ್ತಿದ್ದನು. ಒಮ್ಮೆ ಸುಧಾಮನ ಹೆಂಡತಿ ಅವನಿಗೆ ತನ್ನ ಸ್ನೇಹಿತನಾದ ಶ್ರೀಕೃಷ್ಣನ ಬಳಿಗೆ ಹೋಗಿ ಧನ ಸಹಾಯವನ್ನು ಕೇಳಬೇಕೆಂದು ಹೇಳಿದನು. ಆಗ ಅವನಿಗೆ ಶ್ರೀಕೃಷ್ಣನಿಂದ ಯಾವ ಸಹಾಯವನ್ನು ಕೇಳುವ ಮನಸ್ಸಿಲ್ಲದಿದ್ದರೂ ಶ್ರೀಕೃಷ್ಣನ ದರ್ಶನ ಮಾಡಬಹುದೆಂದು ಯೋಚಿಸಿ, ತನ್ನ ಪತ್ನಿಯು ನೀಡಿದ ೪ ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ದ್ವಾರಕೆಗೆ ಹೊರಟನು. ಅವನು ಶ್ರೀಕೃಷ್ಣನಿದ್ದ ಅರಮನೆಗೆ ಬಂದಾಗ ಶ್ರೀಕೃಷ್ಣನು ಅವನನ್ನು ಆದರದಿಂದ ಬರಮಾಡಿಕೊಂಡನು ಮತ್ತು ಅವನಿಗೆ ಬ್ರಾಹ್ಮಾಣರಿಗೆ ಮಾಡುವ ಎಲ್ಲಾ ಸತ್ಕಾರಗಳನ್ನು ಮಾಡಿದನು. ಶ್ರೀಕೃಷ್ಣನು ಸುಧಾಮನೊಂದಿಗೆ, ಅವರು ಗುರುಕುಲದಲ್ಲಿದ್ದಾಗ ನಡೆದ ಘಟನೆಗಳ ಬಗ್ಗೆ ಬಹಳ ಸಮಯ ಮಾತನಾಡಿದನು. ನಂತರ ಶ್ರೀಕೃಷ್ಣನು ಸುಧಾಮನಿಗೆ “ಪ್ರಿಯ ಗೆಳೆಯ, ನೀನು ನನಗಾಗಿ ಏನು ತಂದಿದ್ದೀಯೆ? ನಿನ್ನ ಹೆಂಡತಿಯು ನನಗಾಗಿ ಏನು ಕಳುಹಿಸಿದ್ದಾಳೆ ಎಂದು ಕೇಳಿದನು? ದ್ವಾರಕೆಯ ಒಡೆಯನಾದ ಶ್ರೀಕೃಷ್ಣನಿಗೆ ತಾನು ತಂದಿರುವ ಅವಲಕ್ಕಿಯನ್ನು ಹೇಗೆ ಕೊಡುವುದು ಎಂದು ಅದನ್ನು ಸುಧಾಮ ಬಚ್ಚಿಟ್ಟು ಕೊಳ್ಳುತ್ತಿದ್ದನು. ಆಗ ಶ್ರೀಕೃಷ್ಣನು ಅವನಿಂದ ಅದನ್ನು ಕಿತ್ತುಕೊಂಡು ಅದರಿಂದ ಒಂದು ಹಿಡಿ ಅವಲಕ್ಕಿಯನ್ನು ತಿಂದನು. ಎರಡನೆಯ ಹಿಡಿಯನ್ನು ತಿನ್ನುವಾಗ ರುಕ್ಮಿಣಿಯು ಶ್ರೀಕೃಷ್ಣನ ಕೈಯನ್ನು ಹಿಡಿದು ತಡೆದಳು. ಅವಳು ಶ್ರೀಕೃಷ್ಣನಿಗೆ “ಪ್ರಿಯ ಪ್ರಭುವೇ, ಈ ಒಂದು ಹಿಡಿ ಅವಲಕ್ಕಿಯು ಇದನ್ನು ಕೊಟ್ಟವನನ್ನು ಈ ಜನ್ಮದಲ್ಲಿಯೂ ಮುಂದಿನ ಜನ್ಮದಲ್ಲಿಯೂ ಶ್ರೀಮಂತನನ್ನಾಗಿ ಮಾಡುತ್ತದೆ” ಎಂದು ಹೇಳಿದಳು. ಸುಧಾಮನು ದ್ವಾರಕೆಯಲ್ಲಿ ಒಂದು ರಾತ್ರಿ ಕಳೆದು ಹೊರಟನು ಮಾರ್ಗದಲ್ಲಿ ಅವನು ಶ್ರೀಕೃಷ್ಣನ ಗುಣಾತಿಶಯಗಳನ್ನು ನೆನೆಸಿಕೊಳ್ಳುತ್ತಿದ್ದನು. ಹೀಗೆ ಅವನು ತನ್ನ ಮನೆಯನ್ನು ತಲುಪಿದಾಗ ಅಲ್ಲಿ ಸ್ವರ್ಗದಲ್ಲಿರುವ ಐಶ್ವರ್ಯಕ್ಕಿಂತ ಹೆಚ್ಚಾದ ಐಶ್ವರ್ಯವನ್ನು ಶ್ರೀಕೃಷ್ಣನು ಅವನಿಗೆ ಕರುಣಿಸಿದ್ದನ್ನು ಕಂಡು ಅವನ ಮಹಿಮೆಗಳನ್ನು ಕೊಂಡಾಡಿದನು. ಶ್ರೀಮಂತಿಕೆಯನ್ನು ಇಂದ್ರಿಯ ತೃಪ್ತಿಗಾಗಿ ಬಳಸಿದರೆ ಅದು ಅವನತಿಗೆ ಕಾರಣವಾಗುತ್ತದೆ, ಆದರೆ ಅದನ್ನು ಶ್ರೀಕೃಷ್ಣನ ಸೇವೆಗೆ ಬಳಸಿದರೆ ಉನ್ನತಿಗೆ ಕಾರಣವಾಗುತ್ತದೆ. ಸುಧಾಮನು ಶ್ರೀಕೃಷ್ಣನು ತನಗೆ ನೀಡಿದ ಶ್ರೀಮಂತಿಕೆಯನ್ನು ತನ್ನ ಮಿತಿಮೀರಿದ ಇಂದ್ರಿಯ ತೃಪ್ತಿಗೆ ಬಳಸಬಾರದು, ಬದಲಿಗೆ ಶ್ರೀಕೃಷ್ಣನ ಸೇವೆಗೆ ಬಳಸಬೇಕು ಎಂದು ನಿಶ್ಚಯಿಸಿದನು. ಹೀಗೆ ಸುಧಾಮನು ಶ್ರೀಕೃಷ್ಣನ ಸೇವೆಯನ್ನು ಮಾಡುತ್ತಾ ಸಾವಿನ ನಂತರ ಭಗವಂತನ ಧಾಮಕ್ಕೆ ಹಿಂದಿರುಗಿದನು.

No comments:

Post a Comment