ನಮ್ಮ ಜೀವನದ ಪಯಣದಲ್ಲಿ ಎದುರಾಗುವ ಕೆಲವು ಅದ್ಭುತ ಗಳಿಗೆಗಳನ್ನು ಸೆರೆ ಹಿಡಿದು ನಮ್ಮ ಜೀವನದ ಉದ್ದಕ್ಕೂ ನೆನಪಿರುವಂತೆ ಕಾಪಾಡಿಕೊಳ್ಳುವ ಕ್ರಿಯೆಯೇ ಛಾಯಾಗ್ರಹಣ. ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವದ ಘಟ್ಟಗಳು ಬರುತ್ತದೆ. ಅಂತಹಾ ಘಟ್ಟಗಳಲ್ಲಿ ನಾವೆಲ್ಲರೂ ಅದನ್ನು ಎಂದಿಗೂ ಮರೆಯದಂತೆ ಇಡಲು ಛಾಯಾಗ್ರಹಣ ನೆರವಿಗೆ ಬರಲಿದೆ. ಎನ್ನುತ್ತಾರೆ ಾಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕಿ ಹೇಮಾ ನಾರಾಯಣ್.
ಸ್ಟ್ರೀಟ್ ಫೋಟೋಗ್ರಫಿ, ಲ್ಯಾಂಡ್ ಸ್ಕೇಪ್ ಫೋಟೋಗ್ರಫಿ, ವೈಲ್ಡ್ ಲೈಫ್ ಫೋಟೋಗ್ರಫಿ, ಅಸ್ಟ್ರೋ ಫೋಟೋಗ್ರಫಿ ಹೀಗೆ ನಾನಾ ವಿಧದ ಛಾಯಾಚಿತ್ರ ತೆಗೆಯುವುದರಲ್ಲಿ ಸಿದ್ದ ಹಸ್ತರಾದ ಹೇಮಾ ನಾರಾಯಣ್ ಛಾಯಾಗ್ರಹಣದ ವಿವಿಧ ಮಜಲುಗಳ ಅನುಭವ ಹೊಂದಿದ ಇವರು ದೇಶ ವಿದೇಶದ ನಾನಾ ಜಾಲತಾಣಗಳಿಗೆ, ನಿಯತಕಾಲಿಕಗಳಿಗೆ, ಟಿವಿ ಡಾಕ್ಯುಮೆಂಟರಿಗಳಿಗೆ ತಮ್ಮ ಕ್ಯಾಮರಾದ ಮೂಲಕ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುತ್ತಾರೆ.
ಇದುವರೆಗೂ ದೇಶ ವಿದೇಶಗಳಲ್ಲಿ ಸಾಕಷ್ಟು ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿರುವ ಇವರನ್ನು ಗೃಹಶೋಭಾ ಮಾತಿಗೆ ಆಹ್ವಾನಿಸಿದಾಗ ಆತ್ಮೀಯತೆಯಿಂದ ಮಾತಿಗಿಳಿದ ಹೇಮಾ ತಮ್ಮ ಬದುಕಿನ ಚಿತ್ರವನ್ನು ತೆರೆದಿಟ್ಟದ್ದು ಹೀಗೆ-
ನಾನು ಓದಿದ್ದು ಇಂಜಿನಿಯರಿಂಗ್. ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ಸ್ ಮುಗಿಸಿದಾಗ ನನಗೆ ಐಟಿ ಸಂಸ್ಥೆಯಲ್ಲಿ ಕೆಲಸ ದೊರಕಿತು. ಆಗೆಲ್ಲಾ ನಾನು ಕೆಲಸದ ಸಲುವಾಗಿ ದೂರದ ಊರುಗಳಿಗೆ, ವಿದೇಶಕ್ಕೆ ಪ್ರವಾಸ ಹೋಗಬೇಕಾಗುತ್ತಿತ್ತು. ಆಗೆಲ್ಲಾ ನಾನು ನನ್ನೊಂದಿಗೆ ಕ್ಯಾಮರಾ ತೆಗೆದೊಯ್ಯುತ್ತಿದ್ದೆ. ನಾನು ಭೇಟಿ ನೀಡಿದ ಸ್ಥಳದ ಸುಂದರ ದೃಷ್ಗಳನ್ನು ಸೆರೆ ಹಿಡಿದು ಅದನ್ನು ನನ್ನ ಸಂಗ್ರಹದಲ್ಲಿರಿಸಿಕೊಳ್ಳುತ್ತಿದ್ದೆ.
ಆಗೆಲ್ಲಾ ಕ್ಯಾಮರಾ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೂ ಅಂದು ತೆಗೆದ ಚಿತ್ರಗಳು ಉತ್ತಮವಾಗಿ ಮೂಡಿ ಬಂದಿದ್ದವು. 2005 ರಲ್ಲಿ ಇನ್ನೂ ಐದು ಛಾಯಾಗ್ರಾಹಕರೊಡನೆ ಸೇರಿ ಕರ್ನಾಟಕದ ವಿವಿಧ ಪ್ರಸಿದ್ದ ಸ್ಮಾರಕಗಳ ಛಾಯಾಚಿತ್ರ ತೆಗೆದೆ. ಈ ಪ್ರಾಜೆಕ್ಟ್ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ನನಗೆ ಪ್ರಾಯೋಗಿಕವಾದ ಅನುಭವ ನೀಡಿತು. ಕ್ರಮೇಣ ಕ್ಯಾಮರಾದ ಕುರಿತು ಅನೇಕ ವಿಚಾರಗಳನ್ನು ಕಲಿತೆ. ಕಲಿಯುತ್ತಲೇ ಅದರಲ್ಲಿನ ಆಸಕ್ತಿ ಹೆಚ್ಚುತ್ತಾ ಸಾಗಿತು. ಕಡೆಗೆ 2009 ರಲ್ಲಿ ಐಟಿ ಉದ್ಯೋಗ ಕೈಬಿಟ್ಟು ಪೂರ್ಣ ಪ್ರಮಾಣದಲ್ಲಿ ಛಾಯಾಗ್ರಹಣ ಮತ್ತು ಫೊಟೋಗ್ರಫಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ.
ಇಂದು ಹಲವಾರು ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿರುವ ಹೇಮಾ ಅವರು ನ್ಯಾಷನಲ್ ಜಿಯೋಗ್ರಾಫಿಕ್ ನ ಟ್ರಾವಲರ್ ಇಂಡಿಯಾ ಕಾರ್ಯಕ್ರಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಇದೆಲ್ಲದರೊಡನೆ 'ವೈಡರ್ ಆಂಗಲ್ಸ್' (Wider
Angles) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಇದರ ಮೂಲಕವಾಗಿ ಫೊಟೋಗ್ರಫಿ ವರ್ಕ್ ಶಾಪ್ ಗಳನ್ನು ಸಹ ನಡೆಸುತ್ತಿದ್ದಾರೆ. ಜತೆಗೆ ಅನೇಕ ಬಾರಿ ಭಾರತ ಪ್ರವಾಸವನ್ನು ಆಯೋಜಿಸಿ ಫೋಟೋಗ್ರಫಿ ಕುರಿತಾಗಿ ಪ್ರಾತ್ಯಕ್ಷಿಕೆ ಏರ್ಪಡಿಸುತ್ತಾರೆ. ಇದರೊಡನೆ ಫೋಟೋಗ್ರಫಿಯಲ್ಲಿರುವ ನಾನಾ ಸಾಧ್ಯತೆಗಳನ್ನು ಸಹ ತಿಳಿಸಿ ಹೇಳುತ್ತಾರೆ. ದಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬೆಂಗಳೂರು ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕುರಿತಂತೆ ಶಿಕ್ಷಣವನ್ನು ನೀಡುತ್ತಿರುವ ಹೇಮಾ ಇದುವರೆಗೆ ಇಂಟೀರಿಯರ್ಸ್, ಲೈಫ್ ಸ್ಟೈಲ್, ಟ್ರಾವೆಲ್, ಹೋಮ್ ಡೆಕರ್, ಫುಡ್ ಫೋಟೋಗ್ರಫಿ ಗಳಂತಹಾ ಹೊಸವಿಧದ ಫೋಟೋಗ್ರಫಿ ವಿಭಾಗಗಳಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ.
ನ್ಯೂ ಯಾರ್ಕ್ ಇನ್ಸ್ ಟಿಟ್ಯೂಟ್ ಆಫ್ ಫೋಟೋಗ್ರಫಿ ಸಂಸ್ಥೆಯಲ್ಲಿ ಪದವಿ ಪಡೆದಿರುವ ಹೇಮಾ ಅವರಿಗೆ ನ್ಯಾಷನಲ್ ಜಿಯೋಗ್ರಾಫಿ ಮತ್ತು ಜೆಟ್ ಏರ್ ವೇಸ್ ಜಂತಿಯಾಗಿ ನಡೆಸುವ ಮಹಿಳಾ ಛಾಯಾಗ್ರಾಹಕಿಯರ ವಿಶೇಷ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫೋಟೋಗ್ರಫಿ ಕುರಿತಂತೆ ನಡಿಯುವ ರಾಷ್ಟ್ರೀಯ, ಅಂತರಾಷ್ಟ್ರೀಯ ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹೇಮಾ ಅಲ್ಲಿ ತಮ್ಮ ಪ್ರಬಂಧ, ಭಾಷಣಗಳನ್ನು ಮಂಡಿಸಿ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಫೋಟೋಗ್ರಫಿಯಲ್ಲಿ ಹಲವಾರು ವಿಧಾನಗಳಿದೆ ಎನ್ನುವ ಹೇಮಾ ತಾನು ಇತ್ತೀಚೆಗೆ ವನ್ಯಜೀವಿ ಛಾಯಾಗ್ರಹಣ ಮತ್ತು ಅಸ್ಟ್ರೋ ಛಾಯಾಗ್ರಹಣದ ಕುರಿತು ಹೆಚ್ಚಿನ ಮಟ್ಟಿಗೆ ಪ್ರಯೋಗ ಮಾಡುತ್ತಿರುವುದಾಗಿ ಹೇಳುತ್ತಾರೆ.
ವನ್ಯಜೀವಿ ಛಾಯಾಗ್ರಹಣದ ಸಲುವಾಗಿ ಆಫ್ರಿಕಾದ ಕಾಡುಗಳಲ್ಲಿ ದಿನಗಟ್ಟಲೆ, ವಾರಗಟ್ಟಲೆ ಅಲೆದಾಡಿದ್ದ ಇವರು ಕೀನ್ಯಾವೇ ಮೊದಲಾದ ಆಫ್ರಿಕಾದ ರಾಷ್ಟ್ರಗಳನ್ನು ಸುತ್ತಿ ಅಲ್ಲಿನ ಕಾಡು ಪ್ರಾಣಿಗಳ ಸುಂದರ ಚಿತ್ರಗಳನ್ನು ತಮ್ಮ ಕ್ಯಮಾರಾದಲ್ಲಿ ಸೆರೆ ಹಿಡಿದಿದ್ದಾರೆ. ನಾನು ಕಾಡಿನಲ್ಲಿ ಸಫಾರಿ ಹೊರಡುವ ಮುನ್ನ ನನ್ನೆರಡೂ ಭುಜಗಳಿಗೆ ಒಂದೊಂದರಂತೆ ಕ್ಯಾಮರಾಗಳನ್ನು ಫಿಕ್ಸ್ ಮಾಡಿಕೊಳ್ಳುತ್ತಿದ್ದೆ. ಅದಲ್ಲದೆ ಹಣೆಯ ಮೇಲೆ ಪಟ್ಟಿಯಂತೆ ಕಟ್ಟಿಕೊಂಡು ಅಲ್ಲಿಯೂ ಒಂದು ಪುಟ್ಟ ಕ್ಯಾಮರಾ ಇರಿಸಿಕೊಳ್ಲುತ್ತಿದ್ದೆ. ನನ್ನ ದಾರಿಯಲ್ಲಿ ಯಾವ ದಿಕ್ಕಿನಿಂದ ಪ್ರಾಣಿಗಳು ಬಂದರೆ ಆ ದಿಕ್ಕಿನ ಕ್ಯಾಮರಾವನ್ನು ತಕ್ಷಣ ಫೋಕಸ್ ಮಾಡಿ ನಿಮಿಷ ಮಾತ್ರದಲ್ಲಿ ಚಿತ್ರ ಸೆರೆ ಹಿಡಿಯಬೇಕಾಗಿತ್ತು. ವನ್ಯಜೀವಿ ಛಾಯಾಗ್ರಹಣ ನಿಜಕ್ಕೂ ಸವಾಲಿನ ಕ್ಷೇತ್ರ, ಎಂದು ತಮ್ಮ ಪ್ರವಾಸ ಅನುಭವವನ್ನು ಹೇಮಾ ಮೆಲುಕು ಹಾಕುತ್ತಾರೆ.
ಇನ್ನು ಅಸ್ಟ್ರೋ ಫೋಟೋಗ್ರಫಿ ಕುರಿತಂತೆ ಹೇಳುವುದಾದರೆ ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ನಕ್ಷತ್ರಪುಂಜ, ಮಿಲ್ಕಿವೇ ಗ್ಯಾಲಕ್ಸಿ ಹಾಗೂ ಅನಿಲದ ಚಲನೆಯನ್ನು ಸೆರೆಹಿಡಿಯುವುದು ಈ ಶೈಲಿಯ ಮುಖ್ಯ ಉದ್ದೇಶ. ಪ್ರತಿನಿತ್ಯ ಆಗಸದಲ್ಲಿ ಕತ್ತಲ ರಾತ್ರಿಯ ಸಮಯ ಹಲವಾರು ನಕ್ಷತ್ರಗಳು ಕಾಣುತ್ತವೆ. ಭೂಮಿಯ ಚಲನೆಗೆ ತಕ್ಕಂತೆ ನಕ್ಷತ್ರದ ಮಾದರಿ (ಪ್ಯಾಟರ್ನ್) ಬದಲಾಗುವಂತೆ ಕಾಣುವುದರಿಂದ ನಾವು ಕ್ಯಾಮರವನ್ನು ಫೋಕಸ್ ಮಾಡಿ ನಿರ್ದಿಷ್ಟ ಕಾಲದವರೆಗೆ ಕಾಯ್ದು ಚಿತ್ರವನ್ನು ಸೆರೆಹಿಡಿಯಬೇಕು. ಹಾಗೆ ಸೆರೆ ಹಿಡಿದ ಚಿತ್ರವನ್ನು ಒಟ್ಟಿಗೆ ಸ್ಯಾಕ್ (ಒಂದುಗೂಡಿಸುವುದು) ಮಾಡಿದರೆ ನಕ್ಷತ್ರದ ಪ್ಯಾಟರ್ನ್ ವೃತ್ತಾಕಾರ ಅಥವಾ ಅರ್ಧ ವೃತ್ತಾಕಾರದಲ್ಲಿ ಮೂಡಿರುತ್ತದೆ. ಅದು ಮಿಂಚುಕೋಲಿನಂತೆ ಕಾಣುತ್ತದೆ. ಇದಕ್ಕಾಗಿ ವಿಶೇಷವಾದ ಜಾಗದ ಅವಶ್ಯಕತೆ ಇದೆ. ಕೃತಕ ಬೆಳಕಿಲ್ಲದ, ವಾಯುಮಾಲಿನ್ಯವಿಲ್ಲದ, ಮೋಡವಿಲ್ಲದ, ಸ್ಪಚ್ಛ ಆಕಾಶವಿರುವ ಕಡೆ ಮಾತ್ರವೇ ಅಸ್ಟ್ರೋ ಫೋಟೋಗ್ರಫಿ ಸಾಧ್ಯವಾಗುತ್ತದೆ.
ಟೆಲಿ ಫೋಟೊ ಲೆನ್ಸ್ ಬಳಸಿ ತೆಗೆದ ಚಿತ್ರವನ್ನು ಸ್ಟಾರ್ ಸ್ಟ್ಯಾಕಿಂಗ್, ಸ್ಟಾರ್ ಗೇಜಿಂಗ್ ಇತ್ಯಾದಿ ಸಾಫ್ಟ್ವೇರ್ಗಳನ್ನು ಬಳಸಿ ನೂರಾರು ಫೋಟೊಗಳನ್ನು ಒಗ್ಗೂಡಿಸಿ ಒಂದು ಚಿತ್ರವನ್ನು ತಯಾರಿಸುತ್ತಾರೆ. ಹೀಗೆ ಮಾಡಿದಾಗ ಚಿತ್ರದಲ್ಲಿ ನಕ್ಷತ್ರಗಳ ಪ್ಯಾಟರ್ನ್ ಚಲಿಸಿರುವುದು ಗೋಚರಿಸಿರುತ್ತದೆ.
ಇನ್ನು ಇಂತಹಾ ಛಾಯಾಗ್ರಹಣವು ನಿಜಕ್ಕೂ ಮನುಷ್ಯ ಪ್ರಯತ್ನವನ್ನು ಮೀರಿದ್ದಾಗಿದೆ. ನಾನೊಮ್ಮೆ ಲಡಾಕ್ ಪ್ರವಾಸ ಕೈಗೊಂಡ ಸಮಯದಲ್ಲಿ ಸೂರ್ಯನ ಬೆಳಕಲ್ಲಿ ಹೊಳೆಯುವ, ಬಣ್ಣದಿಂದ ಕೂಡಿದ ಮೋಡವನ್ನು ಕಂಡಿದ್ದೆ. ‘ಮದರ್ ಆಫ್ ಪರ್ಲ್’ ಎನ್ನುವ ಹೆಸರಿನ ಆ ಮೋಡ ಗೋಚರಿಸಿದ್ದು ಕೇವಲ 15 ನಿಮಿಷ! ಆ ಕ್ಷಣಕ್ಕೆ ನಮ್ಮ ಬಳಿ ಕ್ಯಾಮರಾ ಇರಬೇಕು. ತೆಗೆದ ಶಾಟ್ ಸರಿಯಾಗಿ ಬಂದಿರಬೇಕು! ತುಸುವೇ ಹೆಚ್ಚು ಕಮ್ಮಿಯಾದರೂ ಮತ್ತೆ ಅಂತಹಾ ಅವಕಾಶ ದೊರೆಯಲಾರದು.
ಹೀಗೆ ತಮ್ಮ ಅನುಭವದೊಡನೆ ಫೋಟೋಗ್ರಫಿಯ ನಾನಾ ವಿಧಾನದ ಕುರಿತು ವಿವರಿಸುವ ಹೇಮಾ ಛಾಯಾಗ್ರಣ ಒಂದು ಕಲೆ. ಇಂದಿನ ಜಮಾನದಲ್ಲಿ ಎಲ್ಲರ ಬಳಿಯೂ ಕ್ಯಾಮರಾ , ಕ್ಯಾಮರಾ ಮೊಬೈಲ್ ಗಳಿರುತ್ತವೆ. ಪ್ರತಿಯೊಬ್ಬರೂ ಫೋಟೋಗ್ರಾಫ್ ತೆಗೆದುಕೊಳ್ಳುವಲ್ಲಿ ತೊಡಗಿರುತ್ತಾರೆ. ಆದರೆ ಕೆಲವು ವಿಶೇಷ ಸನ್ನಿವೇಶ, ಸ್ಥಳಗಳನ್ನು ವೈವಿದ್ಯಮಯ ಆಂಗಲ್ಸ್ ನಿಂದ ಸೆರೆಹಿಡಿಯುವುದನ್ನು ಕಲಿತಾಗ ಯಾರಾದರೂ ಉತ್ತಮ ಛಾಯಾಗ್ರಾಹಕರಾಗಬಲ್ಲರು. ಓರ್ವ ಛಾಯಾಗ್ರಾಹಕನಾಗಲು ಮುಖ್ಯವಾಗಿ ತಾಳ್ಮೆ ಇರಬೇಕು. ಸದಾ ಕುತೂಹಲ, ಚುರುಕು ಬುದ್ದಿ, ತಕ್ಷಣವೇ ಅಲರ್ಟ್ ಆಗುವ ಸ್ವಭಾವವಿರಬೇಕು. ಎನ್ನುತ್ತಾರೆ.
(ನನ್ನ ಲೇಖನವು ಗೃಹಶೋಭಾ ಮಾಸಪತ್ರಿಕೆ ಸೆಪ್ಟೆಂಬರ್ 2017ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)
No comments:
Post a Comment