Friday, November 17, 2017

ಭಾರತಕ್ಕಾಗಿ ಉತ್ತಮ ಸ್ಟಾಂಡ್ ಅಪ್ ಪೆಡಲರ್ ತಂಡ ಕಟ್ಟುವುದು ನನ್ನ ಗುರಿ.: ಸರ್ಫರ್ ತನ್ವಿ ಜಗದೀಶ್

"ನಾನು ಎಲ್ಲರಂತೆ ಸಾಮಾನ್ಯವಾಗಿರದೆ ಏನೋ ಅಸಾಮಾನ್ಯವಾದದ್ದನ್ನು ಸಾಧಿಸಬೇಕು. ಒಲಂಪಿಕ್ಸ್ ನಂತಹಾ ದೊಡ್ಡ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು. ಅದಕ್ಕಾಗಿ ಹಗಲಿರುಳೂ ಶ್ರಮ ಹಾಕಬೇಕು." ಇದು ಹದಿನೇಳರ ಹರೆಯದ ತನ್ವಿ ಜಗದೀಶ್ ಅವರ ಮಾತುಗಳು.

ಮಂಗಳೂರು ಮೂಲದ ತನ್ವಿ ದೇಶದ ಪ್ರಥಮ ಮಹಿಳಾ ಸ್ಟಾಂಡ್ ಅಪ್ ಪೆಡಲರ್, ಸರ್ಫರ್ . ಇದೇ ಸೆ. 1ರಿಂದ 10ರವರೆಗೆ ಡೆನ್ಮಾರ್ಕ್ ನಲ್ಲಿ ನಡೆದ ಐಎಸ್ ಸ್ಟಾಂಡ್ ಅಪ್ ಪೆಡಲಿಂಗ್  ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.



ಅದಲ್ಲದೆ ಅಮೆರಿಕಾ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಸರ್ಫ್ ಕನೆಕ್ಟ್ ಸಂಘಟನೆ ಕ್ರೀಡಾ ಸಾಧಕರಿಗೆ ನೀಡುವಗ್ರೋಮ್ ಆಫ್ ದಿ ಇಯರ್’ ಪ್ರಶಸ್ತಿಗೆ ತನ್ವಿ ಆಯ್ಕೆ ಆಗಿದ್ದಾರೆ.

ಮಹತ್ವದ ಸಮಯದಲ್ಲಿ 'ಕನ್ನಡಪ್ರಭ ಡಾಟ್ ಕಾಂ' ತನ್ವಿ ಅವರೊಡನೆ ಸಂದರ್ಶನ ನಡೆಸಿತ್ತು. ಸಂದರ್ಶನದ ಪ್ರಮುಖ ಭಾಗವನ್ನು ಇಲ್ಲಿ ನೀಡಲಾಗಿದೆ.


ನಿಮಗೆ ಸರ್ಫಿಂಗ್ ಕುರಿತು ಆಸಕ್ತಿ ಬೆಳೆದದ್ದು ಹೇಗೆ?
ನಾನು 8 ವರ್ಷದವಳಿದ್ದಾಗ ತಾತನೊಡನೆ ಮುಲ್ಕಿಯಲ್ಲಿರುವ 'ಮಂತ್ರ ಸ್ಕೂಲ್ ಆಫ್ ಸರ್ಫಿಂಗ್'’ ಗೆ ತೆರಳುತ್ತಿದ್ದೆ. ಅದೊಂದು ಆಶ್ರಮ, ನನ್ನ ತಾತನಿಗೆ ಭಜನೆ, ಯೋಗ, ದ್ಯಾನಗಳಲ್ಲಿ ಆಸಕ್ತಿ ಇತ್ತು. ಅವರು ಪ್ರತಿ ಬಾರಿಯೂ ನನ್ನನ್ನು ಅವರೊಡನೆ ಕರೆದೊಯ್ಯುತ್ತಿದ್ದರು. ನಾನು ಅಲ್ಲಿದ್ದ ಪೇಂಟಿಂಗ್ಸ್ ಗಳಿಂದ ಆಕರ್ಷಿತಳಾದೆ. ಅದರಲ್ಲಿಯೂ ಸರ್ಫಿಂಗ್ ಪೇಂಟಿಂಗ್ ನನ್ನ ಗಮನ ಸೆಳೆದಿತ್ತು. ನಾನು ಸರ್ಫಿಂಗ್ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೆ. ಅದೇ ಸಮಯದಲ್ಲಿ ನನ್ನ ಸೋದರ ಸಂಬಂಧಿ,ಸರ್ಫಿಂಗ್ ಬಹಳ ಮಜಾ ಕೊಡುತ್ತದೆ. ನೀನು ಸಹ ಏಕೆ ಪ್ರಯತ್ನಿಸಬಾರದು?’ ಎಂದು ಕೇಳಿದ್ದ. ನನಗೂ ಹೆಚ್ಚು ಕುತೂಹಲ ಹುಟ್ಟಿತು.



ನಿಮ್ಮ ಬಾಲ್ಯ, ತಂದೆ-ತಾಯಿ, ಕುಟುಂಬದ ಕುರಿತು ತಿಳಿಸಿ
ನನ್ನ ತಂದೆ ಜಗದೀಶ್ ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಗೃಹಿಣಿ. ನನ್ನ ಬಾಲ್ಯ, ಅತ್ಯಂತ ಸುಂದರವಾಗಿತ್ತು, ರೋಚಕವಾಗಿತ್ತು.

ನೀವು ಚಿಕ್ಕ ವಯಸ್ಸಿನಲ್ಲಿ ಸರ್ಫಿಂಗ್ ಪ್ರಾರಂಭಿಸಿದ್ದಿರಿ. ನಿಮಗೆ ಯಾರಾದರೂ 'ಸರ್ಫಿಂಗ್ ಬಿಡು' ಎಂದು ಒತ್ತಡ ಹಾಕಿದ್ದರೆ?
ಎಸ್, ನನಗೆ ಸರ್ಫಿಂಗ್ ಬಿಡುವಂತೆ  ಸುತ್ತಲಿನ ಜನರು, ನನ್ನ ತಂದೆ ತಾಯಿ ಸಹ ಹೇಳಿದ್ದರು.ಅವರಿಗೆ ನನ್ನ ರಕ್ಷಣೆ ಮುಖ್ಯವಾಗಿತ್ತು. ಹೆಣ್ಣು ದೈಹಿಕವಾಗಿ ದುರ್ಬಲಳು. ಭಾರತದಲ್ಲಿ ಹೆಣ್ಣು ಮಕ್ಕಳು ಸರ್ಫಿಂಗ್ ನಡೆಸುವುದಿಲ್ಲ. ನೀರಿನಲ್ಲಿಳಿದಾಗ ಜೀವಹಾನಿಯಾದರೆ ಏನು ಮಾಡಲಿ? ಹುಡುಗಿ ದೇಹದ ಚರ್ಮ, ಕೂದಲು ಹಾಳಾಗುತ್ತದೆ. ಸೌಂದರ್ಯ ಕೆಟ್ಟು ಹೋಗುತ್ತದೆ, ಇಂತಹಾ ಆತಂಕಗಳು, ಜತೆಗೆ ಹುಡುಗಿ ಸುಮ್ಮನೆ ಏನೋ ಸಾಹಸ ಮಾಡುತ್ತಿದ್ದಾಳೆ ಎನ್ನುವ ಅಸಡ್ಡೆಯ ಮಾತುಗಳನ್ನು ನಾನು ಕೇಳಿದ್ದೇನೆ. ಕಡೆಗೆ ನಾಲ್ಕು ವರ್ಷಗಳ ಕಾಲ ನಾನು ಸರ್ಫಿಂಗ್ ಸ್ಕೂಲ್ ಗೆ ಹೋಗಲಾಗಲಿಲ್ಲ. ನನ್ನ ಪೋಷಕರು ನಾನು ನೀರಿನಲ್ಲಿ ಆಟವಾಡುವುದು ಬೇಡ ಎಂದಿದ್ದರು. ಆದರೆ ಕಡೆಗೂ ನನ್ನ ಹಠ ಗೆದ್ದಿತು, ಪೋಷಕರು ನನ್ನ ಸಂತೋಷವನ್ನು ಮುಖ್ಯವಾಗಿ ಕಂಡರು. ನಾನು ಮತ್ತೆ  2014 ಸುಮಾರಿಗೆ ಸರ್ಫ್ ಕ್ಲಬ್ ಗೆ ಮರಳಿದೆ.           



'ಮಂತ್ರ ಸರ್ಫ್ ಕ್ಲಬ್ಮತ್ತು ನಿಮ್ಮ ಕೋಚ್ ಗಳ ಕುರಿತು ತಿಳಿಸಿ
ಭಾರತದಲ್ಲಿ ಸರ್ಫಿಂಗ್ ನ್ನು ಪರಿಚಯಿಸಿದವರು ಸರ್ಫಿಂಗ್ ಸ್ವಾಮಿ. 'ಮಂತ್ರ ಸ್ಕೂಲ್ ಆಫ್ ಸರ್ಫಿಂಗ್' ಸ್ಥಾಪಕರು. ಅಲ್ಲಿ ನಾನು ಸರ್ಫಿಂಗ್ ತರಬೇತಿ ಪಡೆದಿದ್ದೇನೆ. ಅಲ್ಲಿ ಸರ್ಫಿಂಗ್, ಸ್ಟಾಂಡ್ ಅಪ್ ಪೆಡಲಿಂಗ್ , ಕಯಾಕಿಂಗ್, ಜೆಟ್ ಸ್ಕೈ ಇನ್ನೂ ಮೊದಲಾದ ತರಬೇತಿಗಳನ್ನು ನೀಡಲಾಗುತ್ತದೆ. ನನ್ನ ಕೋಚ್, ಶಮಂತ ಕುಮಾರ್. ಅವರು ನನಗೆ ಸರ್ಫಿಂಗ್, ಸ್ಟಾಂಡ್ ಅಪ್ ಪೆಡಲಿಂಗ್  ತರಬೇತಿ ನೀಡಿದ್ದಾರೆ.

ಐಎಸ್ ಸ್ಟಾಂಡ್ ಅಪ್ ಪೆಡಲಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ಅನುಭವ ಹೇಗಿತ್ತು?
ಹ್ಹುಂ! ಇದು ನಾನು ಭಾಗವಹಿಸುತ್ತಿರುವ ಎರಡನೇ ಚಾಂಪಿಯನ್  ಶಿಪ್. ಇದಕ್ಕೆ ಮೊದಲು ಕಳೆದ ಬಾರಿ ಫಿಜಿಯಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿದ್ದೆ. ಬಾರಿ ನನ್ನ ತಂಡದಲ್ಲಿ ಶೇಖರ್ ಪಿಚಾಯ್ ಇದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಅನುಭವ ಅದ್ಭುತವಾಗಿತ್ತು.

ನಿಮ್ಮ ಕಾಲೇಜು ವಿದ್ಯಾಭ್ಯಾಸ, ಸರ್ಫಿಂಗ್ ಎರಡನ್ನೂ ಹೇಗೆ ಸರಿತೂಗಿಸಿಕೊಳ್ಳುತ್ತೀರಿ? ಕಾಲೇಜು ಪ್ರಾದ್ಯಾಪಕರು ನಿಮ್ಮ ಸಾಧನೆಗೆ ಹೇಗೆ ಸ್ಪೂರ್ತಿ ತುಂಬುತ್ತಾರೆ?
ನಾನು ಮಂಗಳೂರಿನ ಶಾರದಾ ಪ್ರಿ ಯುನಿವರ್ಸಿಟಿ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನನ್ನ ಪ್ರಾದ್ಯಾಪಕರು ನನಗೆ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ನಾನಿಂದು ಮಟ್ಟಕ್ಕೆ ಏರಲು ಅವರ ಪ್ರೋತ್ಸಾಹವೂ ಕಾರಣವಾಗಿದೆ.


ವಿದೇಶದಲ್ಲಿ ಸರ್ಫಿಂಗ್ ಕ್ರಿಡೆಗೆ ದೊರಕಿದಷ್ಟು ಪ್ರಾಮುಖ್ಯತೆ ಭಾರತದಲ್ಲಿ ಸಿಗುತ್ತಿಲ್ಲ ಎನಿಸಿದೆಯೆ?
ಹೌದು!. ವಿದೇಶದಲ್ಲಿ ಸಾಕಷ್ಟು ಜನ ಸರ್ಫಿಂಗ್ ಕ್ರೀಡೆಯಲ್ಲಿ ತೊಡಗುತ್ತಾರೆ. ಆದರೆ ಭಾರತದಲ್ಲಿ ಇದಿನ್ನೂ ಜನಪ್ರಿಯವಾಗಿಲ್ಲ. ಭಾರತದಲ್ಲಿ ಇದರ ಬಗ್ಗೆ ಇನ್ನೂ ಸಾಕಷ್ಟು ಜನರಿಗೆ ತಿಳಿದಿಲ್ಲ. ಕಳೆದ ವರ್ಷ ನಾನು ಫಿಜಿಯಲ್ಲಿ ನಡೆದ ಐಎಸ್ ಕ್ರೀಡಾಕೂಟಕ್ಕೆ ತೆರಳುವಾಗ ನನಗೆ ಯಾರೊಬ್ಬರಿಂದ ಪ್ರಶಂಸೆ ಸಿಗಲಿಲ್ಲ. ಭಾರತದಲ್ಲಿ ಇಂದಿಗೂ ಕ್ರಿಕೆಟ್ ಹೊರತು ಬೇರೆ ಕ್ರೀಡೆಗಳ ಕುರಿತಂತೆ ಜನರು ಕಾಳಜಿ ತೋರಿಸುತ್ತಿಲ್ಲ. ಇನ್ನಾದರೂ ಸರ್ಕಾರ, ಸಮಾಜ ಎಲ್ಲಾ ಕ್ರೀಡೆಗಳಿಗೆ ಸಮಾನ ಪ್ರೋತ್ಸಾಹ ನೀಡಬೇಕು. ಅದರಲ್ಲಿಯೂ ಮಹಿಳಾ ಅಥ್ಲೀಟ್ ಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕಿದೆ.

ಇಷ್ಟಾಗಿಯೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ’ ನಮಗೆ ಉತ್ತಮ ಸಹಕಾರ ನೀಡುತ್ತಾ ಬಂದಿದೆ.

ನಿಮ್ಮ ಎಸ್ ಯುಪಿ ವರ್ಕ್ ಶಾಪ್ ಕುರಿತು ವಿವರಿಸಿ
ನಾನು 'ಮಂತ್ರ ಸರ್ಫ್ ಕ್ಲಬ್' ನಲ್ಲಿ ಸರ್ಫಿಂಗ್ ನಲ್ಲಿ ಸಾಸಕ್ತಿ ಇದ್ದವರಿಗೆ ವರ್ಕ್ ಶಾಪ್ ನಡೆಸುತ್ತೇನೆ. ಇದಾಗಲೇ 3 ವಿದ್ಯಾರ್ಥಿನಿಯರು ನನ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಯಾರೇ ಆದರೂ ಸರ್ಫಿಂಗ್ ನಲ್ಲಿ ಆಸಕ್ತಿ ಇದ್ದು ಕ್ರೀಡೆಯಲ್ಲಿ ಮುಂದುವರಿಯಬೇಕೆಂದು ಇಷ್ಟವಿದ್ದವರು ನನ್ನನ್ನು ಸಂಪರ್ಕಿಸಬಹುದು.


ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಕುರಿತು ತಿಳಿಸಿ
ನನ್ನ ಪ್ರಕಾರ ಟ್ರೆಂಡಿಯಾಗಿ ಡ್ರೆಸ್ ಮಾಡಿಕೊಳ್ಳುವುದರಿಂದ ಒಳ್ಳೆಯ ಆಟಗಾರರಾಗುವುದಿಲ್ಲ. ಅಥವಾ ಸಂಪ್ರದಾಯ ವಿರೋಧಿಸಿ ಆಧುನಿಕ ಉಡುಗೆ ತೊಟ್ಟ ಮಾತ್ರಕ್ಕೆ ನೀವು ಉತ್ತಮ ಕ್ರೀಡಾಳುವಲ್ಲ. ನಿಮ್ಮ ಸ್ವಂತ ಪರಿಶ್ರಮ, ಅಭ್ಯಾಸದಿಂದ ನೀವು ಉತ್ತಮರಾಗುತ್ತೀರಿ. ನೀವು ಬದುಕನ್ನು ಹೇಗೆ ಕಾಣುವಿರೋ ಅದರಂತೆ ನಿಮ್ಮ ಜೀವನ ಮಟ್ಟ ನಿರ್ಧಾರವಾಗುತ್ತದೆ. ನೀವು ಜನರೊದನೆ ಹೇಗೆ ವರ್ತಿಸುತ್ತೀರಿ ಎನ್ನುವುದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ.

ನಾನು ಸಹ ಸಂಪ್ರದಾಯಿಕ ಸೀರೆಯನ್ನು ಇಷ್ಟ ಪಡುತ್ತೇನೆ.ನಾನೆಂದೂ ಸನ್ ಸ್ಕ್ರೀನ್ ಬಳಸುವುದಿಲ್ಲ. ನಾನು ಎಂದಿಗೂ ತೆಂಗಿನ ಎಣ್ಣೆ ಹೊರತು ಬೇರೆ ಏನನ್ನೂ ಬಳಸಲಾರೆ. ಅದು ನನ್ನ ಚರ್ಮವನ್ನು ರಕ್ಷಣೆ ಮಾಡುತ್ತದೆ.

ನೀವು ಮುಂದೆ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂದಿರುವಿರಿ
ಹೌದು! 2024 ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಸ್ಟಾಂಡ್ ಅಪ್ ಪೆಡಲಿಂಗ್ ಕ್ರೀಡೆಗೂ ಪ್ರಾತಿನಿದ್ಯ ಸಿಗಲಿದೆ ಎನ್ನುವ ಒಳ್ಳೆಯ ಸುದ್ದಿ ಬಂದಿದೆ. ಇದಕ್ಕಾಗಿ ನಾನು ಇಂದಿನಿಂದಲೇ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಭಾರತವನ್ನು ಪ್ರತಿನಿಧಿಸುವ ಉತ್ತಮ ಸ್ಟಾಂಡ್ ಅಪ್ ಪೆಡಲರ್ ತಂಡವನ್ನು ಕಟ್ಟುವುದು ನನ್ನ ಗುರಿ.

ಯುವ ಅಥ್ಲೀಟ್ ಗಳಿಗೆ, ಸರ್ಫಿಂಗ್ ನಲ್ಲಿ ತೊಡಗಿಸಿಕೊಳ್ಳಬೇಕೆಂದು ಇದ್ದವರಿಗೆ ನಿಮ್ಮ ಸಲಹೆ ಏನು?
ನೀವು ಏನು ಆಗಬೇಕೆಂದು ಬಯಸಿದ್ದೀರೋ ಅದಕ್ಕಾಗಿ ಸತತವಾಗಿ ಶ್ರಮಿಸಿ. ಬೇರೆಯವರು ನಿಮ್ಮ ಪ್ರಯತ್ನದ ಕುರಿತು ಏನೇ ಹೇಳಬಹುದು, ಆದರೆ ನಿಮಗೆ ನಿಮ್ಮ ಗುರಿಯೇ ಮುಖ್ಯವಾಗಿರಲಿ. ಇನ್ನು ಸರ್ಫಿಂಗ್ ನಲ್ಲಿ ಆಸಕ್ತಿ ಇರುವವರು ಮಂತ್ರ ಗೆ ಬರಬಹುದು. ಇದು ಭಾರತದ ಅತ್ಯಂತ ಶ್ರೇಷ್ಠ ಸರ್ಫಿಂಗ್ ತರಬೇತಿ ಸಂಸ್ಥೆಯಾಗಿದೆ.



ತನ್ವಿ ಜಗದೀಶ್ಕೆಲವು ಸಾಧನೆಗಳ ಕಿರು ಪರಿಚಯ
  • 2015 ಕೋವಲಂ ಪಾಯಿಂಟ್ ಸರ್ಫ್ ಫೆಸ್ಟಿವಲ್ ರಾಷ್ಟ್ರೀಯ ಮಹಿಳಾ ಸ್ಟಾಂಡ್ ಅಪ್ ಪೆಡಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ
  • 2016 ಮನಪಾಡ್ ಸರ್ಫ್ ಫೆಸ್ಟಿವಲ್ ರಾಷ್ಟ್ರೀಯ ಮಹಿಳಾ ಸ್ಟಾಂಡ್ ಅಪ್ ಪೆಡಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ
  • 2016 ಕೋವಲಂ ಪಾಯಿಂಟ್ ಸರ್ಫ್ ಫೆಸ್ಟಿವಲ್ ರಾಷ್ಟ್ರೀಯ ಮಹಿಳಾ ಸ್ಟಾಂಡ್ ಅಪ್ ಪೆಡಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ
  • 2016ರ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ರಾಷ್ಟ್ರೀಯ ಮಹಿಳಾ ಸ್ಟಾಂಡ್ ಅಪ್ ಪೆಡಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ
  • 2016 ಮನಪಾಡ್ ಸರ್ಫ್ ಆಂಡ್ ಸಾಯಿಲ್ ಫೆಸ್ಟಿವಲ್ ನ ರಾಷ್ಟ್ರೀಯ ಮಹಿಳಾ ಸ್ಟಾಂಡ್ ಅಪ್ ಪೆಡಲಿಂಗ್ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನ
  • 2017ರ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ರಾಷ್ಟ್ರೀಯ ಮಹಿಳಾ ಸ್ಟಾಂಡ್ ಅಪ್ ಪೆಡಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ  ಸ್ಥಾನ
  • 2017ರ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ರಾಷ್ಟ್ರೀಯ ಮಹಿಳಾ ಸರ್ಫಿಂಗ್ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಸ್ಥಾನ 
  • 2017 ಕೋವಲಂ ಪಾಯಿಂಟ್ ಸರ್ಫ್ ಫೆಸ್ಟಿವಲ್ ರಾಷ್ಟ್ರೀಯ ಮಹಿಳಾ ಸ್ಟಾಂಡ್ ಅಪ್ ಪೆಡಲಿಂಗ್ ಚಾಂಪಿಯನ್ ಶಿಪ್ ನಲ್ಲಿ  ದ್ವಿತೀಯ ಸ್ಥಾನ
  • 2016   ಫಿಜಿ  ISA ಸ್ಟಾಂಡ್ ಅಪ್ ಪೆಡಲಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ 16ನೇ ಸ್ಥಾನ

ಭಾರತದ ಯುವ ಸರ್ಫಿಂಗ್ ತಾರೆ, ತನ್ವಿ ಜಗದೀಶ್ ಅವರೊಂದಿಗಿನ ಈ ನನ್ನ ಸಂದರ್ಶನ ಲೇಖನವು 27 ಸಪ್ಟೆಂಬರ್ 2017ರಂದು ಕನ್ನಡದ ಪ್ರಸಿದ್ದ ಆನ್ ಲೈನ್ ನ್ಯೂಸ್ ಪೋರ್ಟಲ್ ಗಳಲ್ಲಿ ಒಂದಾದ 'ಕನ್ನಡಪ್ರಭ ಡಾಟ್ ಕಾಂ' ನಲ್ಲಿ ಪ್ರಕಟವಾಗಿತ್ತು. ( http://bit.ly/2iMJKTl )

No comments:

Post a Comment