ತಿರುಮಲ, ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕ ಜನರ ಭಾವನೆ. ವೆಂಕಟೇಶ್ವರ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದು, ಆದರೆ ತಿರುಮಲ ಬೆಟ್ಟ ಹಾಗೂ ತಿರುಪತಿ ನಗರದ ಸುತ್ತ ಮುತ್ತ ಸಾಕಷ್ಟು ಪ್ರಕೃತಿ ರಮಣೀಯ ತಾಣಗಳೂ ಇದೆ. ಜಲಪಾತಗಳು, ನದಿ ತೀರ, ವನ್ಯಜೀವಿಧಾಮ ಸೇರಿ ಅನೇಕ ಸುಂದರ ಪ್ರವಾಸಿ ಆಕರ್ಷಣೀಯ ತಾಣಗಳು ಅಲ್ಲಿದೆ. ಅಂತಹಾ ಕೆಲವು ತಾಣಗಳ ಪರಿಚಯ ಇಲ್ಲಿದೆ.
ತಲಕೋನ ಜಲಪಾತ
ತಲಕೋನ ಎಂದರೆ 'ಶಿಖರದ ತಲೆ' ಎನ್ನುವ ಅರ್ಥವಿದ್ದು ಇದು ತಿರುಮಲ ಪರ್ವತ ಶ್ರೇಣಿಗಳ ಆರಂಭದ ಹಂತೆ ಎನ್ನಲಾಗುತ್ತದೆ. ತಲಕೋನ ಜಲಪಾತ ತಿರುಪತಿ ಪಟ್ಟಣದಿಂದ 58 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ 235 ಕಿಮೀ ದೂರದಲ್ಲಿದೆ. ಇಲ್ಲ್ಲಿ ಸುಮಾರು 270 ಅಡಿಗಳಷ್ಟು ಎತ್ತರದಿಂದ ಜಲಧಾರೆ ಧುಮುಕುವುದನ್ನು ಕಾಣಬಹುದು. ಇದು ಆಂದ್ರ ಪ್ರದೇಶದಲ್ಲಿನ ಅತಿ ಎತ್ತರದ ಜಲಪಾತವೆನಿಸಿದ್ದು ಚಿತ್ತೂರು ಜಿಲ್ಲೆ ಮತ್ತು ಆಂದ್ರ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾಗಿದೆ.
ಇಲ್ಲಿನ ನೀರಿಗೆ ಔಷಧೀಯ ಗುಣವಿರುವುದಾಗಿ ಹೇಳಲಾಗುತ್ತದೆ. 1990 ರಲ್ಲಿ ಈ ಪ್ರದೇಶವನ್ನು ಜೈವಿಕ-ಖನಿಜ ರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ಇಲ್ಲಿ ಅನೇಕ ವಿಧದ ಅಪರೂಪದ ಸಸ್ಯಗಳು ಕಾಣಸಿಗುತ್ತದೆ. ಜತೆಗೆ ಇಲ್ಲಿ ಚಿರತೆ, ಭಾರತೀಯ ದೈತ್ಯ ಅಳಿಲು, ಮುಳ್ಳು ಹಂದಿ, ಚುಕ್ಕೆ ಜಿಂಕೆಗಳು ಇನ್ನೂ ಹಲವಾರು ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ನಾವು ಕಾಣಬಹುದಾಗಿದೆ.
ಈ ಜಲಪಾತ ನೋಡಲು ನಡೆದುಕೊಂಡು ಹೋಗಬಹುದಾಗಿದ್ದು ಸುಮಾರು 240 ಮೀ. ಉದ್ದದ ರೋಪ್ ವೇ ಇದೆ. ಸುಮಾರು 35 ರಿಂದ 40 ಅಡಿಗಳಷ್ಟು ಎತ್ತರದಲ್ಲಿರುವ ಇದರ ಮೇಲೆ ನಡೆಯುವುದೆಂದರೆ ನಿಜಕ್ಕೂ ರೋಮಾಂಚಕ ಅನುಭವ. ರೂಪ್ ವೇ ನಲ್ಲಿ ನಡೆಯುವಾಗ ಪಕ್ಷಿಗಳು ಮಂಗಗಗಳು ಕಾಣುತ್ತವೆ. ಜತೆಗೆ ಬೃಹತ್ ಮರಗಳು ಇವೆ. ಜಲಪಾತದ ಬಳಿ ತಲುಪಲು ಹಲವಾರು ಟ್ರಕ್ಕಿಂಗ್ ಮಾರ್ಗಗಳಿದ್ದು
ಪ್ರವಾಸಿಗರು ತಮಗೆ ಅನುಕೂಲವಾದ ಮಾರ್ಗವನ್ನು ಆಯ್ಕೆ ಮಾಡಬಹುದು. ಇನ್ನು ಪರ್ವತಗಳ ನಡುವೆ ಹಲವಾರು ಗುಹೆಗಳು ಕೂಡ ಇದೆ.
ಈ ಜಲಪಾತದ ಸಮೀಪವೇ ಸಿದ್ದೇಶ್ವರ ಸ್ವಾಮಿ ದೇಗುಲವೂ ಇದೆ. ಈ ದೇಗುಲ ವನ್ನು 1811 ರಲ್ಲಿ ಅಪ್ಪ ಸ್ವಾಮಿ ಎನ್ನುವ ಭಕ್ತರೊಬ್ಬರು ನಿರ್ಮಾಣ ಮಾಡಿದರೆನ್ನಲಾಗುತ್ತದೆ. ಈ ದೇಗುಲದಿಂದ 2 ಕಿಮೀ ಚಾರಣದ ಮೂಲಕ ಪ್ರವಾಸಿಗರು ಜಲಪಾತವನ್ನು ತಲುಪಬಹುದಾಗಿದ್ದು ಚಾರಣವು ಬೆಟ್ಟ, ಕಾಡಿನ ನಡುವೆ ಜಾರು ರಸ್ತೆಯಲ್ಲಿ ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು ಜಲಪಾತಕ್ಕೆ ಸಮೀಪದ ಮೋಟಾರ್ ವಾಹನ ಮಾರ್ಗವಾಗಿದೆ.
ಪಾಪವಿನಾಶನಂ
ಪಾಪವಿನಾಶನಂ ತೀರ್ಥ, ಪಾಪವಿನಾಶನಂ ಜಲಪಾತ ಎನ್ನುವುದು ತಿರುಮಲ ಸುತ್ತಲಿನ ಇನ್ನೊಂದು ಸುಂದರ ಪ್ರವಾಸಿ ತಾಣ. ತಿರುಮಲದಿಂದ
2 ಮೈಲುಗಳಷ್ಟು ದೂರದಲ್ಲಿರುವ ಈ ಜಲಪಾತದ ರಮ್ಯ ನೋಟಕ್ಕೆ ಮರುಳಾಗದೆ ಇರಲಿಕ್ಕಾಗದು. ಇದರಲ್ಲಿ ಸ್ನಾನ ಮಾಡಿದ್ದಾದರೆ ಮಾಡಿದ್ದ ಪಾಪವೆಲ್ಲವೂ ನಾಶವಾಗುತ್ತದೆ ಎನ್ನುವುದು ಇಲ್ಲಿ ಬರುವ ಭಕ್ತರ ನಂಬಿಕೆಯಾಗಿದೆ. ಇನ್ನು ಇಲ್ಲಿಗೆ ಸಮೀಪದಲ್ಲಿರುವ ಅಣೆಕಟ್ಟೆ, ಜಲಾಶಯದಿಂದ ಇಲ್ಲಿಗೆ ಸದಾ ಕಾಲ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಅಣೆಕಟ್ಟೆಯಲ್ಲಿ ಹಲವು ಸುಂದರ ಮೀನುಗಳನ್ನು ಸಾಕಲಾಗಿದೆ. ಜತೆಗೆ ಅಲ್ಲೇ ಸುತ್ತಲಿನ ಪ್ರದೇಶದಲ್ಲಿ ಹಲವಾರು ಉದ್ಯಾನವನಗಳೂ ಇದೆ. ಪ್ರವಾಸಿಗರು ತಾವು ಆ ಉದ್ಯಾನದಲ್ಲಿ ವಿಹರಿಸುವ ಮೂಲಕ ಪ್ರಕೃತಿ ಮಡಿಲಿನಲ್ಲಿ ಆನಂದಾನುಭೂತಿ ಹೊಂದಬಹುದು.
ಪರ್ವತದ ಕೆಳಗೆ ಹರಿಯುವ ಹಲವಾರು ಶುದ್ಧ ನೀರಿನ ತೊರೆಗಳು ಇದ್ದು ಸಮ್ಮೋಹನಗೊಳಿಸುವ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ ಇನ್ನು ಜಲಪಾತದ ಬಳಿ ತಲುಪಲು ಪ್ರಕೃತಿಯ ಮಧ್ಯೆ ಕಲ್ಲಿನ ಜಾಡುಗಳ ಮೇಲೆ ನಡೆಯುವುದು ಒಂದು ಉಲ್ಲಾಸಕರ ಅನುಭವ ಆಗಿದೆ.
ಕಪಿಲ ತೀರ್ಥ
ಕಪಿಲ ತೀರ್ಥ ಅಥವಾ ಕಪಿಲೇಶ್ವರ ಸ್ವಾಮಿ ದೇವಸ್ಥಾನ ತಿರುಪತಿ ಪಟ್ಟಣದಿಂದ 5.5 ಕಿಮೀ ದೂರದಲ್ಲಿದೆ.
ಇದೊಂದು ಶಿವನ ದೇಗುಲವಾಗಿದ್ದು ಕಪಿಲ ಮುನಿ ಇಲ್ಲಿ ಶಿವನನ್ನು ಪ್ರತಿಷ್ಠಾಪನೆ ಮಾಡಿದನೆನ್ನುವ ನಂಬಿಕೆ ಇದೆ. ಈ ದೇವಾಲಯವು ತಿರುಮಲ ಪರ್ವತದ ಗುಹೆಯ ಪ್ರವೇಶದ್ವಾರದಲ್ಲಿದೆ. ಇಲ್ಲಿ ಪರ್ವತದ ಮೇಲಿನಿಂದ ಬೀಳುವ ನೀರ ಧಾರೆ ನೇರವಾಗಿ ದೇಗುಲದ ಪುಷ್ಕರಣಿಗೆ ಬೀಳುವುದನ್ನು ಕಾಣುತ್ತೇವೆ. ಇದನ್ನು 'ಕಪಿಲ ತೀರ್ಥ' ಎನ್ನಲಾಗುತ್ತದೆ. ನಾಲ್ಕನೇ ಶತಮಾನದಲ್ಲಿ ಪಲ್ಲವರು ಈ ದೇಗುಲ ಕಟ್ಟಿಸಿದ್ದರೆನ್ನಲಾಗಿದೆ. ದೇಗುಲವು ದ್ರಾವಿಡ ಶೈಲಿಯಲ್ಲಿದ್ದು ಪ್ರವೇಶದ್ವಾರದಲ್ಲಿನ ಸುಂದರ ನಂದಿ ವಿಗ್ರಹವು ಕಲೆ, ವಾಸ್ತು ಶಿಲ್ಪ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತದೆ.
ಆಕಾಶಗಂಗೆ
ಆಕಾಶ ಗಂಗೆ ಅಥವಾ ಆಕಾಶ ಗಂಗಾ ಎನ್ನುವುದು ತಿರುಮಲ ಪರ್ವತ ಸಾಲಿನ ಇನ್ನೊಂದು ಸುಂದರ ಜಲಪಾತ. ತಿರುಮಲದಿಂದ ಸುಮಾರು ಒಂದೂವರೆ ಮೈಲು ಅಂತರದಲ್ಲಿ ಈ ಪ್ರಕೃತಿ ರಮ್ಯ ತಾಣವಿದ್ದು ಇಲ್ಲಿನ ನೀರು ಸಹ ಅತ್ಯಂತ ಶುದ್ದವಾಗಿರುವುದು, ಆರೋಗ್ಯದಾಯಕವಾಗಿರುವುದು ವಿಶೇಷ. ಪ್ರವಾಸಿಗರು ಆಕಾಶಗಂಗೆ ಜಲಪಾತಕ್ಕೆ ಇಳಿಯಲು ಮೆಟ್ಟಿಲುಗಳಿದ್ದರೂ ಮಳೆಗಾಲದ ಸಮಯದಲ್ಲಿ ಹೆಚ್ಚಿನ ರಭಸವಿರುವ ಕಾರಣ ಮೆಟ್ಟಿಲಿನಲ್ಲಿಳಿಯಲು ಅವಕಾಶಗಳಿರುವುದಿಲ್ಲ. ಇಲ್ಲಿ ಜಲಪಾತದ ಪಕ್ಕದಲ್ಲಿಯೇ ಅಂಜನಾದೇವಿ ಸನ್ನಿಧಿಯೂ ಇದ್ದು ಆಂಜನೇಯನ ತಾಯಿಯಾದ ಅಂಜನಾದೇವಿ ಇಲ್ಲಿ ತಪಸ್ಸಾಚರಿಸಿದ್ದಳು ಎನ್ನಲಾಗುದೆ. ಒಟ್ಟಾರೆ ಇದೊಂದು ಪ್ರಕೃತಿ ಪ್ರಿಯ ಪ್ರವಾಸಿಗರ ಮೆಚ್ಚಿನ ತಾಣವೆನ್ನುವುದು ಸತ್ಯ
ಶಿಲಾತೋರಣ
ತಿರುಮಲ ಬೆಟ್ಟದ ದೇವಾಲಯದಿಂದ ಒಂದು ಕಿಮೀ. ದೂರದಲ್ಲಿರುವ ಇಲ್ಲಿ ಬಂಡೆಗಳು ಕಮಾನಿನ ಆಕಾರ ತಳೆದಿದೆ. ಇವು 8 ಮೀ. ಅಗಲ 3 ಮೀ. ಎತ್ತರವನ್ನು ಹೊಂದಿದ್ದು ಇವು ನೈಸರ್ಗಿಕವಾಗಿ ರೂಪುಗೊಂಡ ತೋರಣದಂತಹಾ ಆಕೃತಿಯಾಗಿದೆ. ಸುಮಾರು 2500 ವರ್ಷಗಳಷ್ಟು ಹಳೆಯ ಶಿಲಾ ರಚನೆಗಳು ಇದಾಗಿದ್ದು ನೈಸರ್ಗಿಕ ಶಿಲೆಗಳೇ ತೋರಣದ ರೀತಿ ಜೋಡಿಸಲ್ಪಟ್ಟಿವೆ ಎನ್ನುವುದು ವಿಶೇಷ. ಸಾಕಷ್ಟು ಹಿಂದೆ ಪ್ರಾಕೃತಿಕ ಸವಕಳಿ ಉಂಟಾದ ಘಟ್ಟದಲ್ಲಿ ತಿರುಮಲದ ಪರಿಸರದಲ್ಲಿ ರೂಪುಗೊಂಡದ್ದೇ ಶಿಲಾತೋರಣ ಅಥವಾ ಶಿಲಾ ಸೇತು. ಇದು ತಿರುಮಲ ಪ್ರವಾಸಿಗರ ಇನ್ನೊಂದು ಮುಖ್ಯ ಆಕರ್ಷಣೀಯ ತಾಣ. ಸುಂದರ, ವಿಸ್ತಾರ ಉದ್ಯಾನವನ ಜತೆಗೆ ಚಕ್ರತೀರ್ಥ ಎಂದು ಕರೆಯಲ್ಪಡುವ ಕೊಳವೊಂದರ ಪಕ್ಕದಲ್ಲಿ ಈ ಶಿಲಾತೋರಣವಿದೆ.
ಚಕ್ರ ತೀರ್ಥ
ಚಕ್ರ ತೀರ್ಥ ತಿರುಮಲ ದಲ್ಲಿನ ಒಂದು ಪ್ರಸಿದ್ಧ ಕೊಳವಾಗಿದ್ದು, ಇದು ಶಿಲಾತೋರಣದ ಪಕ್ಕದಲ್ಲಿದೆ. ಈ ಸ್ಥಳದಲ್ಲಿ ಸ್ವಯಂಭು ಲಿಂಗವಿದ್ದು
ತಿರುಪತಿಯಲ್ಲಿ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದೂ ಒಂದಾಗಿದೆ. ವಿಷ್ಣುವಿನ ಸುದರ್ಶನ ಚಕ್ರ ಇಲ್ಲಿ ಬಿದ್ದ ಕಾರಣದಿಂದ ಈ ಕೊಳಕ್ಕೆ ಚಕ್ರ ತೀರ್ಥ ಎನ್ನುವ ಹೆಸರಾಗಿದೆ.
ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್
ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್ 1987ರ ಸೆಪ್ಟೆಂಬರ್ 29ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಯಿತು. 5,532 ಎಕರೆ ಪ್ರದೇಶದಲ್ಲಿ ಈ ಜೈವಿಕ ಪಾರ್ಕ್ ವ್ಯಾಪಿಸಿಕೊಂಡಿದೆ. ಈ ಪಾರ್ಕ್ ನಲ್ಲಿ ಆನೆ, ನವಿಲು, ಜಿಂಕೆ, ಗಿಳಿ, ಚಿರತೆ ಇತರೆ ವನ್ಯ ಜೀವಿ ಗಳನ್ನು ನಾವು ಕಾಣಬಹುದು.
ಈ ಜೈವಿಕ ಉದ್ಯಾನಕ್ಕೆ ವಯಸ್ಕರಿಗೆ 20, ಮಕ್ಕಳಿಗೆ 10 ರೂ. ಟಿಕೆಟ್ ದರ ನಿಗದಿಪಡಿಸಲಾಗಿದ್ದು ಬೇಸಿಗೆ ದಿನಗಳಲ್ಲಿ ಬೆಳಗ್ಗೆ 8.30ರಿಂದ ಸಂಜೆ 5.30, ಮಳೆಗಾಲದಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಉದ್ಯಾನ ತೆರೆದಿರುತ್ತದೆ. ಇಲ್ಲಿಗೆ ವಾಹನದಲ್ಲಿ ಬರುವ ಪ್ರವಾಸಿಗರು ಪ್ರತ್ಯೇಕವಾಗಿ ವಾಹನ ನಿಲುಗಡೆ ಶುಲ್ಕ ಭರಿಸಬೇಕಾಗುತ್ತದೆ.
ತುಂಬುರು ತೀರ್ಥ
ತುಂಬುರು ತೀರ್ಥ, ವೆಂಕಟೇಶ್ವರ ದೇವಾಲಯದಿಂದ 12 ಕಿಮೀ. ಮತ್ತು ಪಾಪ ವಿನಾಶನಂ ನಿಂದ 7 ಕಿಮೀ. ದೂರದಲ್ಲಿದೆ. ಇದು ಸಹ ಒಂದು ಮನಮೋಹಕ ಜಲಪಾತವಾಗಿದ್ದು ಪಾಪವಿನಾಶನಂ ಗೆ ಬಂದ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುತ್ತಾರೆ.
ತಿರುಮಲದ ಆಕಾಶಗಂಗೆಯಲ್ಲಿ ನಾನು ಮತ್ತು ನನ್ನ ಆತ್ಮೀಯ ಬಂಧುಗಳಾದ ಶ್ರೀರಾಮ್ ಮತ್ತು ರಾಘವೇಂದ್ರ ಉಡುಪ |
ತುಂಬುರ ತೀರ್ಥಕ್ಕೆ ಪಾಪವಿನಾಶನಂ ಮೂಲಕ ಕಾಲ್ನಡಿಗೆಯಲ್ಲಿ ಸಾಗಿದರೆ ಮಾರ್ಗ ಮದ್ಯೆ ಸುಮಾರು ಐದು ಜಲಪಾತಗಳನ್ನು ಕಾಣಲು ಸಿಗುತ್ತದೆ. ಆದರೆ ಹಾಗೆ ಕಾಲ್ನಡಿಗೆ ಮಾರ್ಗದಲ್ಲಿ ತೆರಳುವವರು ಅವಶ್ಯವಾದಷ್ಟು ನೀರು ಮತ್ತು ಆಹಾರವನ್ನು ತಾವೇ ತೆಗೆದುಕೊಂಡು ಹೋಗಬೇಕು. ಮಾರ್ಗದ ನಡುವೆ ಯಾವ ಬ್ಗೆಯ ನೀರು ಆಹಾರಗಳು ಲಭಿಸುವುದಿಲ್ಲ.
ಈ ಮೇಲಿನ ಸ್ಥಳಗಳಲ್ಲದೆ ಶ್ರೀ ವೆಂಕಟೇಶ್ವರ ವಸ್ತು ಸಂಗ್ರಹಾಲಯ (ಇದು ವಾರದ ಏಳು ದಿನವೂ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ), ವೇಣುಗೋಪಾಲಸ್ವಾಮಿ ದೇವಾಲಯ, ಶ್ರೀವಾರಿಪಾದ, ತಿರುಚಂದೂರ್ನ ಪದ್ಮಾವತಿ (ಅಲಮೇಲು ಮಂಗಮ್ಮ) ಸನ್ನಿಧಿ, ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನ, ಜಾಪಾಲಿ ತೀರ್ಥ, ಗೋವಿಂದರಾಜಸ್ವಾಮಿ ದೇವಾಲಯಗಳನ್ನು ಪ್ರವಾಸಿಗರು ಸಂದರ್ಶಿಸಬಹುದು.
ಹೀಗೆ ಒಟ್ಟಾರೆ ತಿರುಪತಿ ಪ್ರವಾಸವೆನ್ನುವುದು ಕೇವಲ ವೆಂಕಟೇಶ್ವರ ಭಕ್ತರಿಗಷ್ಟೇ ಅಲ್ಲದೆ ಪ್ರಕೃತಿ ಪ್ರಿಯರಿಗೆ ಸಹ ಸಾಕಷ್ಟು ಚಾರಣ ಅವಕಾಶವನ್ನು ಒದಗಿಸುತ್ತದೆ ಎನ್ನುವುದನ್ನು ನಾವು ಗಮನಿಸಬೇಕಿದೆ.
(ಈ ನನ್ನ ಲೇಖನವು 'ಕನ್ನಡಪ್ರಭ ಡಾಟ್ ಕಾಂ'ನಲ್ಲಿ 17 ನವೆಂಬರ್ 2017ರಂದು ಪ್ರಕಟವಾಗಿತ್ತು. http://bit.ly/2EIqdxe)
No comments:
Post a Comment