ಕಾಂಚೀಪುರ (Kanchipuram)
ಭಾಗ - 1
ಕಂಚಿ, ಕಾಂಚೀಪುರ - ತಮಿಳುನಾಡಿನಲ್ಲಿರುವ ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು. ದೇವಾಲಯಗಳ ನಗರಿ, ಪ್ರಾಚೀನ ಶಿಕ್ಷಣ ಕೇಂದ್ರ, ರೇಷ್ಮೆ ಉತ್ಪಾದನೆ, ಪಲ್ಲವರ ರಾಜಧಾನಿ ಇಹೀಗೆ ನಾನಾ ಕಾರಣಗಳಿಂಡ ಹೆಸರಾಗಿರುವ ಈ ಪಟ್ಟಣದ ಸೊಗಸೇ ಅವರ್ಣನೀಯವಾದದ್ದು.
ಚೆನ್ನೈನಿಂದ ನೈಋತ್ಯಕ್ಕೆ 75 ಕಿಮೀ ದೂರದಲ್ಲಿ, ಪಾಲಾರ್ ನದಿಯ ದಡದಲ್ಲಿ ಚೆಂಗಲ್ಪಟ್ಟಿಗೆ 35 ಕಿಮೀ ದೂರದಲ್ಲಿರುವ ನಗರಿ ಪ್ರಾಚೀನ ಕಾಲದಿಂದಲೂ ಅನೇಕ ಸಂತರು, ಭಕ್ತರು, ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು. ಶ್ರವಣರು ಹಾಗೂ ತಾತ್ತ್ವಿಕರಿಗೆ ವಿದ್ಯಾಕೇಂದ್ರವೂ ಜನ್ಮಸ್ಥಳವೂ ಆಗಿದೆ. ಅರ್ಥಶಾಸ್ತ್ರ ರಚಿಸಿದ ಚಾಣಕ್ಯ ಮತ್ತು ಕರ್ಣಾಟಕ ಸಂಗೀತದ ಪಿತಾಮಹಾರೆನಿಸಿದ ಶಾಮಶಾಸ್ತ್ರಿಗಳ ಜನ್ಮಸ್ಥಳ ಇದೇ ಕಾಂಚೀಪುರ.
ಲಲಿತಾ ತ್ರಿಪುರಸುಂದರೀ ಶ್ರೀ ಕಾಮಾಕ್ಷಿ ಅಂಬಾಳ್ |
ಶಿವಕಂಚಿ, ವಿಷ್ಣುಕಂಚಿ ಎಂದು ನಗರದಲ್ಲಿ ಎರಡು ಭಾಗಗಳಿದ್ದು ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿದೆ. ವಿಷ್ಣುಕಂಚಿಯಲ್ಲಿ ವರದರಾಜಸ್ವಾಮಿ ದೇವಸ್ಥಾನವಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ ದಕ್ಷಿಣ ಭಾರತದಿಂದಲೇ ಅಲ್ಲದೆ ಉತ್ತರ ಭಾರತದಿಂದಲೂ ಅಸಂಖ್ಯಾತ ಯಾತ್ರಾರ್ಥಿಗಳು ಆಗಮಿಸುತ್ತಾರೆ.
ಕಾಂಚೀಪುರ ರೇಷ್ಮೆ ನೇಯ್ಗೆಯಲ್ಲಿ ಜಗದ್ವಿಖ್ಯಾತವೆನಿಸಿದೆ. ಇಲ್ಲಿ ತಯಾರಾದ ರೇಷ್ಮೆ ಸೀರೆಗಳಿಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ 8,000 ಕ್ಕೂ ಮೇಲ್ಪಟ್ಟು ರೇಷ್ಮೆ ಕೈಮಗ್ಗಗಳಿವೆ.
***
ಕಾಮಾಕ್ಷಿ ಅಂಬಾಳ್ ದೇವಾಲಯ |
ಕಾಮಾಕ್ಷಿ - ಲಲಿತಾ ತ್ರಿಪುರಸುಂದರಿಯ ಸ್ವರೂಪಿಯ ಮೇರು ದೇವತೆ. ಹೊಂದಿದ ಸುಂದರ ಸ್ವರೂಪಿಣಿ. ಈಕೆ ಸೌಂದರ್ಯ ಹಾಗೂ ಶಾಂತಿಯ ಮೇರು ದೇವತೆ. ಕಾಮಾಕ್ಷಿ - ಶಿವನನ್ನು ಕಾಮಿಸುವ ಕಣ್ಣಿಂದ ಕಾಣುವವಳು. ಆಕರ್ಷಕ ಕಾಮಭರಿತ ಕಣ್ಣುಗಳುಳ್ಳ ದೇವಿ. 'ಕಾ' ಎಂದರೆ ಸರಸ್ವತಿ, 'ಮಾ' ಎಂದರೆ ಲಕ್ಷ್ಮಿ, ಲಕ್ಷ್ಮಿ ಹಾಗೂ ಸರಸ್ವತಿಯರನ್ನೇ ಕಣ್ಣುಗಳನ್ನಾಗಿ ಹೊಂದಿದವಳು ಕಾಮಾಕ್ಷಿ.
ಇಂತಹಾ ಅಪರೂಪದ ಸನ್ನಿಧಾನವಿರುವುದು ಕಂಚಿಯಲ್ಲಿ. ಕಾಮಾಕ್ಷಿಯ ಗರ್ಭಗೃಹವನ್ನು 'ಗಾಯತ್ರೀ ಮಂಟಪ' ಎನ್ನಲಾಗುತ್ತದೆ. ಇದನ್ನು 'ಕಾಮಾಕ್ಷಿ ರಹಸ್ಯ'ದ ಅನುಸಾರ ದೇವತೆಗಳು ನಿರ್ಮಿಸಿದ್ದಾರೆ.
ಕಂಚಿ ಭಾರತದ ಐವತ್ತೊಂದು ಶಕ್ತಿಪೀಠಗಳಲ್ಲಿ ಒಂದು, ಇಲ್ಲಿ ಸತಿದೇವಿಯ ನಾಭಿಸ್ಥಾನವಿದೆ. ಕಾಂಚೀಪುರ ಜಗತ್ತಿನ ನಾಭಿಸ್ಥಾನ. ವಿಶ್ವದ ನಾಡಿಗಳೆಲ್ಲಾ ಸೇರುವ ಸ್ಥಳ.
***
ಶಿವನೊಲುಮೆಗೆ ಪಾರ್ವತಿ ತಪಸ್ಸಿನಲ್ಲಿ ನಿರತಳಾಗಿದ್ದಳು. ಆಗ ಪರಮೇಶ್ವರನೂ ತಪೋನಿರತನಾಗಿದ್ದ. ಭೂಮಂಡಲದಲ್ಲಿ ತಾರಕಾಸುರನ ಅಟ್ಟಹಾಸ ಮೇರೆ ಮೀರಿತ್ತು. ಅವನನ್ನು ಅಡಗಿಸಲು ಶಿವ-ಪಾರ್ವತಿಯರು ಒಂದಾಗಬೇಕಾದದ್ದು ಅನಿವಾರ್ಯವಾಗಿತ್ತು. ಆಗ ದೇವತೆಗಳು ಶಿವನ ತಪೋಭಂಗ ಮಾಡಲು ಮನ್ಮಥನನ್ನು ಕಳಿಸಿದರು. ಆದರೆ ತನ್ನ ಧ್ಯಾನಕ್ಕೆ ಭಂಗವಾಗಿದ್ದರಿಂದ ಕ್ರೋಧಗೊಂಡ ಶಿವ ಅವನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟು ಹಾಕಿದ.
ಶಿವಗಣನಾದ ಚಿತ್ರಸೇನನಿಗೆ ಕಾಮದೇವ (ಮನ್ಮಥ)ನ ಮೇಲೆ ಕರುಣೆ ಬಂದಿತು. ಅವನು ಮನ್ಮಥನ ಸುಟ್ಟ ಭಸ್ಮದಿಂಡ ಒಂದು ಮಾನವ ರೂಪ ರಚನೆ ಮಾಡಿದ್ದ. ಶಿವನ ಕೋಪ ತಣಿದ ಬಳಿಕ ಆ ಮಾನವ ರೂಪದ ಭಸ್ಮದ ಗೊಂಬೆಯನ್ನು ಶಿವನ ಬಳಿ ತಂದು ಅದಕ್ಕೆ ಜೀವವನ್ನೀಯಲು ಹೇಳಿದ. ಶಿವ ಆ ಗೊಂಬೆಗೆ ಪ್ರಾಣವಾಯು ನೀಡಿ ಜೀವ ತುಂಬಿದ. ಭಸ್ಮದಿಂಡ ಜನ್ಮಿಸಿದ ಆ ಮಾನವಾಕೃತಿಗೆ 'ಭಂಡ' ಎಂದು ಹೆಸರಾಗಿತ್ತು. ಮನ್ಮಥನ ಗುಣ ಸ್ವಭಾವಗಳು ಆ ವ್ಯಕ್ತಿಯಲ್ಲಿ ಅಡಕವಾಗಿದ್ದವು.
ಚಿತ್ರಸೇನನೇ ಆತನಿಗೆ ವೇದ ವೇದಾಂಗಗಳನ್ನು ಕಲಿಸಿದ. ಭಂಡ ಮುಂದೊಂದು ದಿನ ಘೋರ ತಪಸ್ಸು ಮಡಿ ಶಿವನನ್ನು ಒಲಿಸಿಕೊಂಡು ಮಹಾ ಶಕ್ತಿಗಳನ್ನು ಪಡೆದ. ಯೋನಿ ಜನ್ಯರಾದ ಯಾರಿಂದಲೂ ತನ್ನನ್ನು ಕೊಲ್ಲಲು ಸಾಧ್ಯವಾಗಬಾರದು ಎನ್ನುವುದು ಆ ವರದಲ್ಲಿ ಒಂದಾಗಿತ್ತು.
ಕಾಮಾಕ್ಷಿ ಅಂಬಾಳ್ ದೇವಾಲಯ |
ಮುಂದೆ ಆತ ಮಹಾ ಅಹಂಕಾರಿ, ದುಷ್ಟನಾಗಿ ಬೆಳೆದ. ದೇವತೆಗಳಿಗೆ ಕಿರುಕುಳ ನೀಡಿ ಅವರ ಸ್ವರ್ಗದ ಮೇಲೆ ದಾಳಿ ನಡೆಸಿದ್ದ. ಆಗ ದೇವತೆಗಳು ಮತ್ತೆ ಶಿವನ ಮೊರೆ ಹೋಗಬೇಕಾಯಿತು. ಪರಮೇಶ್ವರನು ಅವರಿಗೆ "ಕೈಲಾಸದ ಗೋಮುಖದ ಮುಖೇನ ಭೂಗರ್ಭದ ಗುಹೆ ಪ್ರವೇಶ ಮಾಡಿ ಸುರಂಗದಲ್ಲಿ ಸಾಗಿರಿ, ಸುರಂಗದ ಇನ್ನೊಂದು ತುದಿಗೆ ಕಾಂಚೀಪುರ ಎನ್ನುವ ಸ್ಥಳವಿದೆ. ಅಲ್ಲಿ ತೆರಳಿ ದೇವಿಯನ್ನು ಪ್ರಾರ್ಥಿಸಿ. ಆಕೆ ನಿಮ್ಮ ಸಹಾಯಕ್ಕೆ ಆಗಮಿಸುತ್ತಾಳೆ" ಎಂದನು.
ದೇವತೆಗಳು ಅಂತೆಯೇ ಕಾಂಚೀಪುರಕ್ಕೆ ಆಗಮಿಸಿ ದೇವಿಯ ಪ್ರಾರ್ಥನೆ ನಡೆಸಿದರು. ಆಗ ನಡೆಸಿದ್ದ ಯಜ್ಞದ ಪೂರ್ಣಾಹುತಿ ವೇಳೆ ಯಜ್ಞಕುಂಡದಿಂಡ ಶ್ರೀಚಕ್ರ ಹಾಗೂ ಕಾಮಾಕ್ಷಿ ಸ್ವರೂಪಿಣಿಯಾದ ದೇವಿ ಉದ್ಭವಿಸಿದಳು.
ತ್ರಿಪುರಸುಂದರಿಯಾದ ದೇವಿ ಭಂಡಾಸುರನ ಸೈನ್ಯದ ಮೇಲೆದಾಳಿ ನಡೆಸಲು ಶಕ್ತಿ ಹಾಗೂ ಮಾತೃಕೆಯರನ್ನು ಕಳಿಸಿದಳು. ಭಂಡಾಸುರನು ತನ್ನ ಸಿನ್ಯವನ್ನು ಕಳೆದುಕೊಂಡ ತರುವಾಯ ಮಾಯಾ ಯುದ್ಧಕ್ಕೆ ಇಳಿದನು. ಆಗ ಕಾಮಾಕ್ಷಿ ಉಗ್ರ ಸ್ವರೂಪ ಹೊಂದಿ ತನ್ನ ಕಾಲನ್ನೊಮ್ಮೆ ನೆಲಕ್ಕೆ ಅಪ್ಪಳಿಸಿದಳು. ಈ ಹೊಡೆತಕ್ಕೆ ಭೂಮಂಡಲ ಕಂಪಿಸಿ ಹೋಗಿತ್ತು. ಭಂಡಾಸುರ ಮುಗ್ಗರಿಸಿ ಬಿದ್ದನು. ದೇವಿಯು ಆತನ ರುಂಡವನ್ನು ಚೆಂಡಾಡಿದಳು.
ಕಾಮಾಕ್ಷಿ ಅಂಬಾಳ್ ದೇವಾಲಯ |
ಹೀಗೆ ಭಂಡಾಸುರನ ವಧೆಯಾಯಿತು. ಆ ಬಳಿಕ ದೇವಿಯ ಆದೇಶದಂತೆ ಒಂದು ಗುಂಡಿಯನ್ನು ತೋಡಿ ಅದರಲ್ಲಿ ಭಂಡಾಸುರನ ದೇಹವನ್ನಿಟ್ಟು ಸಮಾಧಿ ಮಾಡಲಾಯಿತು. ಆಗ ದೇವಿ ಆ ಸಮಾಧಿಯ ಮೇಲೆ ಒಂದು ವಿಜಯ ಸ್ಥಂಭವನ್ನು ನೆಟ್ಟಳು. ದೇವತೆಗಳು ತಾಯಿ ಕಾಮಾಕ್ಷಿಯ ಗೌರವಾರ್ಥ ಆ ನಗರದಲ್ಲಿ ಒಂದು ದೇವಾಲಯ ನಿರ್ಮಾಣ ಮಾಡಿದರು.
ಅದುವೇ ಕಂಚಿ ಕಾಮಾಕ್ಷಿ ಅಂಬಾಳ್ ದೇವಾಲಯ.
No comments:
Post a Comment