Monday, March 25, 2019

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -100

ರಾಮೇಶ್ವರಂ(
Rameswaram
)
ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ.

ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ ಕಡಲ ತೀರದಲ್ಲಿ ವಿಹರಿಸಬಹುದಾಗಿದೆ.  ರಾಮೇಶ್ವರಂನ ಶ್ರೀರಾಮನಾಥ ದೇವಾಲಯ 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು,  ಈ  ಅವಧಿಯಲ್ಲಿ ಆಡಳಿತದಲ್ಲಿದ್ದ ರಾಜರು ದೇವಾಲಯ ನಿರ್ಮಣಕ್ಕೆ ಒತ್ತು ನೀಡಿದ್ದರು.  ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯದ ಪ್ರಾಂಗಣ ವಿಶಾಲವಾಗಿದೆ.  ಪ್ರವೇಶ ದ್ವಾರದ ಅಗಲ 6 ಮೀಟರ್,  ಎತ್ತರ 9 ಮೀಟರ್ ಇದೆ.

ಸುಮಾರು 6 ಹೆಕ್ಟೇರ್ ಪ್ರದೇಶದಲ್ಲಿ ದೇವಾಲಯ ನಿರ್ಮಾಣವಾಗಿದೆ. ದೇವಾಲಯದ ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 197 ಮೀಟರ್,  ಉತ್ತರದಿಂದ ದಕ್ಷಿಣಕ್ಕೆ 133 ಮೀಟರ್ ಉದ್ದವಿದೆ. ದೇವಾಲಯದ ಕಂಬಗಳ ಕಲಾತ್ಮಕ ಕೆತ್ತನೆ ನೋಡುಗರನ್ನು ಸೆಳೆಯುತ್ತದೆ. ರಾಮನಾಥ ಸ್ವಾಮಿ ದೇವಾಲಯದ ಸಮೀಪದಲ್ಲಿ ಅಗ್ನಿತೀರ್ಥವಿದೆ. ರಾಮೇಶ್ವರಂನಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿ ಧನುಷ್ಕೋಟಿ ಇದ್ದು,  ಇಲ್ಲಿ  ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ವಿಗ್ರಹಗಳನ್ನು ನೋಡಬಹುದಾಗಿದೆ. ಮೇಶ್ವರದ ಸುತ್ತಮುತ್ತಲದಲ್ಲಿ ಅನೇಕ ವಿಶಿಷ್ಟವಾದ ದೇವಾಲಯಗಳಿವೆ. ಅವುಗಳಲ್ಲಿ ಕೋದಂಡರಾಮ ಸ್ವಾಮಿ ದೇವಾಲಯ, ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಇನ್ನೂ ಹಲವಾರು. ರಾಮೇಶ್ವರಂ ಕೇವಲ ಧಾರ್ಮಿಕ ಸ್ಥಳವೇ ಅಲ್ಲದೆ, ಪ್ರಮುಖ ಪ್ರವಾಸಿ ತಾಣವೂ ಹೌದು. ರಾಮೇಶ್ವರದಲ್ಲಿ ದೇವಾಲಯಗಳೇ ಅಲ್ಲದೆ ಅನೇಕ ರೋಮಾಂಚನಕಾರಿಯಾದ ಸ್ಥಳಗಳು ಕೂಡ ಇವೆ.

***
ದಶಗ್ರಂಥಿ ಬ್ರಾಹ್ಮಣನಾಗಿದ್ದ ರಾವಣನ ವಧೆಯ ಬಳಿಕ ಅಗಸ್ತೀ ಋಷಿಗಳು ಪ್ರಭು ಶ್ರೀರಾಮನಿಗೆ ಬ್ರಹ್ಮಹತ್ಯೆಯ ಪಾಪದಿಂದ ಮುಕ್ತನಾಗಲು ಸಾಗರತೀರದಲ್ಲಿ ಜ್ಯೇಷ್ಠ ಶುದ್ಧ ದಶಮಿಯ ಮುಹೂರ್ತದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿದರು. ಈ ಕಾರಣದಿಂದ ಶಿವನ ದಿವ್ಯಲಿಂಗವನ್ನು ತರಲು ಮಾರುತಿಯು ಕೈಲಾಸಕ್ಕೆ ಹೋದನು. ಆದರೆ ಶಿವನ ದರ್ಶನವಾಗದ ಕಾರಣ ಮಾರುತಿಯು ತಪಸ್ಸನ್ನು ಪ್ರಾರಂಭಿಸಿದನು. ಕಾಲಾಂತರದಲ್ಲಿ ಶಿವನು ಪ್ರಕಟಗೊಂಡು ಮಾರುತಿಗೆ ತನ್ನ ದಿವ್ಯಲಿಂಗವನ್ನು ನೀಡಿದನು. ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಮಾರುತಿಗೆ ಮುಹೂರ್ತದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಸೀತೆಯು ಮರಳಿನಿಂದ ಒಂದು ಲಿಂಗವನ್ನು ತಯಾರಿಸಿ ಕೊಟ್ಟಳು. ಋಷಿಗಳ ಆದೇಶ ಪಡೆದು ನಂತರ ರಾಮನು ಅದರ ಸ್ಥಾಪನೆಯನ್ನೇ ಮಾಡಿದನು. ಇದೇ ಆ ರಾಮೇಶ್ವರದ ಲಿಂಗವಾಗಿದೆ. ಸ್ಥಳೀಯ ಜನರು ಅದನ್ನು ರಾಮನಾಥಸ್ವಾಮಿ ಎಂದು ಕರೆಯುತ್ತಾರೆ.

ಮಾರುತಿಯು ಮರಳಿ ಬಂದಾಗ ಅವನಿಗೆ ಶ್ರೀರಾಮನು ಲಿಂಗವನ್ನು ಸ್ಥಾಪಿಸಿರುವುದನ್ನು ಕಂಡು ಬಹಳ ದುಃಖವಾಯಿತು. ಆಗ ರಾಮನು ಮಾರುತಿಗೆ ತಾನು ಸ್ಥಾಪಿಸಿದ ಲಿಂಗದ ಹತ್ತಿರವೇ ಅವನು ತಂದ ಲಿಂಗವನ್ನು ಸ್ಥಾಪಿಸಲು ಹೇಳಿದನು. ಅಲ್ಲದೇ, ಮಾರುತಿ ಸ್ಥಾಪಿಸಿದ ಲಿಂಗದ ದರ್ಶನ ಪಡೆಯದೇ ಇದ್ದರೆ ಭಕ್ತರಿಗೆ ರಾಮೇಶ್ವರ ದರ್ಶನದ ಫಲ ದೊರೆಯಲಾರದು ಎಂದೂ ಹೇಳಿದನು. ಈ ಲಿಂಗಕ್ಕೆ ಕಾಶಿವಿಶ್ವನಾಥ ಅಥವಾ ಹನುಮದೀಶ್ವರ ಎಂದು ಕರೆಯುತ್ತಾರೆ.

1 comment:

  1. ತುಂಬಾ ಸೊಗಸಾಗಿದೆ. ನನಗೂ ಹೋಗುವ ಮನಸ್ಸಾಗುತ್ತಿದೆ.

    ReplyDelete