ಮಥುರೆ ಮುಕ್ತಿ ಧಾಮಗಳಲ್ಲೇ ಎರಡನೇ ಸ್ಥಾನದಲ್ಲಿದೆ. ಕೃಷ್ಣನು ಮಥುರೆಯ ಜೈಲಿನಲ್ಲಿ ಜನಿಸುವ ಮುನ್ನವೂ ಮಥುರೆ ನಗರ ಅತ್ಯಂತ ಸುಂದರ ಇತಿಹಾಸವನ್ನು ಹೊಂದಿದೆ. ಕೃಷ್ಣನ ಕುರಿತಾದ ಈ ಲೇಖನ ಸರಣಿಯಲ್ಲಿ ನಾವಿಂದು ಕೃಷ್ಣನ ಐತಿಹಾಸಿಕ ಬದುಕನ್ನು ವಿಶ್ಲೇಷಿಸುವ ಮುನ್ನ ಆ ಕೃಷ್ಣ ಹುಟ್ಟಿದ ಮಥುರೆಯ ಬಗೆಗೆ ವಿವರವಾಗಿ ತಿಳಿಯೋಣ/
ಮಥುರೆ ಮೂಲ ಹೆಸರು "ಮಧುವನ" (ದಟ್ಟ ಅರಣ್ಯ) ಎಂದಿತ್ತು. ಯಾದವ ರಾಜ ಮಧು ಈ ಅರಣ್ಯವನ್ನು ಬೆಳೆಸಿದ್ದ. ರಾಮನ ಸಹೋದರ ಶತ್ರುಘ್ನ ಮಧುವುನ ಅವಂಶಜನಾದ ಮಾಧವನನ್ನು ಕೊಂದು ಮಧುವನವನ್ನು ವಶಪಡಿಸಿಕೊಂಡ. ಅಲ್ಲಿನ ಕಾಡನ್ನು ಕಡಿದು ಅಲ್ಲಿ ಮಧುಪುರಿ (ಮಥುರೆ ನಗರ) ನಿರ್ಮಿಸಿದನು.
ಉತ್ತರ ರಾಮಾಯಣದಲ್ಲಿ ಬರುವ ಶತ್ರುಘ್ನ ಹಾಗೂ ಲವಣಾಸುರನ ಯುದ್ಧ ಸನ್ನಿವೇಶ ಮಧುವನಕ್ಕೆ ಸಂಬಂಧಿಸಿದೆ. ಮಧುವುನ ಪುತ್ರನಾಗಿದ್ದ ಲವಣ ಅಸುರೀ ಗುಣದಿಂದ ಕೂಡಿ ಎಲ್ಲ ಜೀವಿಗಳಿಗೆ ತೊಂದರೆ ಉಂಟು ಮಾಡಿದ್ದ. ಆ ವೇಳೆ ರಾಮನಿಗೆ ಲವಣನ ಉಪಟಳದ ಸುದ್ದಿ ಮುಟ್ಟಿ ಲವಣನನ್ನು ಕೊಲ್ಲಲು ತನ್ನ ಸೋದರ ಶತ್ರುಘ್ನನನ್ನು ಕಳಿಸುತ್ತಾನೆ. ಆ ಲವಣ ಸಂಹಾರಕ್ಕೆ ಹೋಗುವ ದಾರಿಯಲ್ಲೇ ಶತ್ರುಘ್ನ ಸೀತೆ ತಂಗಿದ್ದ ವಾಲ್ಮೀಕಿಯ ಆಶ್ರಮಕ್ಕೆ ಬಂದಿದ್ದ. ಅದೇ ದಿನ ಸೀತೆ ಕುಶ-ಲವರಿಗೆ ಜನ್ಮವಿತ್ತಿದ್ದಳು. ಶತ್ರುಘ್ನ ತನ್ನ ಅತ್ತಿಗೆಯ ಮಕ್ಕಳಿಗೆ ಬೆಲೆಬಾಳುವ ಬಟ್ಟೆಗಳನ್ನು ಉಡುಗೊರೆ ನೀಡಿ ಮುಂದುವರಿದಿದು ಲವಣನನ್ನು ಸಂಹರಿಸಿದ. ಹಾಗೂ ಮಧುಪುರವನ್ನು ತನ್ನ ವಶಕ್ಕೆ ಪಡೆದು ಅಣ್ಣ ರಾಮನ ಅಣತಿಯಂತೆ ಆತ 12 ವರ್ಷಗಳ ಕಾಲ ಆಳಿದನು. ಆ ನಂತರ ಅಯೋಧ್ಯೆಗೆ ಹಿಂದಿರುಗುವಾಗ, ವಾಲ್ಮೀಕಿ ಆಶ್ರಮದಲ್ಲಿ ಕುಶ-ಲವರು ರಾಮಾಯಣದ ಕಥೆಯನ್ನು ಹಾಡುತ್ತಿರುವುದು ಕಂಡಿತ್ತು.
ರಾಮ ಮತ್ತು ಅವನ ಸಹೋದರರ ಮರಣದ ನಂತರ, ಮಧು ವಂಶಸ್ಥರಾದ ಸಾತ್ವತನ ಪುತ್ರ ಭೀಮನು ಮಥುರೆಯನ್ನು ಮತ್ತೆ ತನ್ನದಾಗಿಸಿಕೊಂಡನು. ಐತರೇಯ ಬ್ರಾಹ್ಮಣಸಾತ್ವತಗಳನ್ನು ಯದು ರಾಜವಂಶದ ಕ್ಷತ್ರಿಯ ಎಂದು ಉಲ್ಲೇಖಿಸಿದೆ. ಭೀಮ ಸಾತ್ವತನ ಪುತ್ರ. ಅಂಧಕ ರಾಮನ ಪುತ್ರ ಕುಶನ ಸಮಕಾಲೀನನಾಗಿದ್ದ. ಹಾಗೂ ಆತ ತನ್ನ ತಂದೆಯ ಬಳಿಕ ಮಧುವನದ ಸಿಂಹಾಸನವನ್ನೇರಿದ.
ಆ ನಂತರ ಆತನ ವಂಶರು -ಅಂಧಕರು, ವೃಷ್ಣಿಗಳು(ವೀರ ವಾಸುದೇವನ ಆರಾಧಕರು)ಕುಕುರರು, ಭೋಜರು ಮತ್ತು ಶೈನ್ಯರು ಮಥುರೆ ಅಥವಾ ಮಧುವನ್ನು ಆಳಿದ್ದಾರೆ.
ಆ ನಂತರ ಬಂದ ಯಾದವ ದೊರೆ ಉಗ್ರಸೇನ ಸಹ (ಕುಕುರೋದ್ಭವ) ಈ ಕುಲಕ್ಕೆ ಸೇರಿದವನು. . ಪುರಾಣಗಳ ಪ್ರಕಾರ, ಕುಕುರಾದ ಆಹುಕನಿಗೆ ಕಾಶಿಯ ರಾಜಕುಮಾರಿಯಿಂದ ಉಗ್ರಸೇನ ಮತ್ತು ದೇವಕ ಎಂಬ ಇಬ್ಬರು ಗಂಡು ಮಕ್ಕಳಾಗಿದ್ದರು. ಉಗ್ರಸೇನನಿಗೆ ಒಂಬತ್ತು ಗಂಡು ಮತ್ತು ಐದು ಹೆಣ್ಣು ಮಕ್ಕಳಿದ್ದರು, ಅದರಲ್ಲಿ ಕಂಸ ಹಿರಿಯವನಾಗಿದ್ದ. ದೇವಕನಿಗೆ ನಾಲ್ಕು ಗಂಡು ಮತ್ತು ಏಳು ಹೆಣ್ಣು ಮಕ್ಕಳಿದ್ದರು, ದೇವಕಿ ಅವರಲ್ಲಿ ಒಬ್ಬಳು. . ಉಗ್ರಸೇನನನ್ನು ಸೆರೆಹಿಡಿದ ನಂತರ ಕಂಸ ಮಥುರೆಯ ಸಿಂಹಾಸನವನ್ನು ವಶಪಡಿಸಿಕೊಂಡ. ಆತ ದುರಾಡಳಿತಕ್ಕೆ ಹೆಸರಾಗಿದ್ದವನು. ಇವನ ಕಾಲದಲ್ಲಿ ಕ್ರೌರ್ಯ ಎಡೆಬಿಡದೆ ಸಾಗಿತ್ತು. ಇವನ ಅಪ್ಪಣೆಗಳನ್ನು ಎದುರಿಸುವವರಿಲ್ಲದೇ, ತಡೆಯುವವರಿಲ್ಲದೇ ಇವನ ಸೆರೆಮನೆ ಶತ್ರುಗಳಿಂದ ತುಂಬಿತ್ತು. ಅಲ್ಲದೇ ಕಂಸ ಸಾಕಷ್ಟು ಯಾದವ ಯುವಕರನ್ನು ಕೊಲ್ಲಿಸಿ, ಅಲ್ಲಿನ ಯುವತಿಯರನ್ನು ವಿಷಕನ್ಯೆರನ್ನಾಗಿ ಮಾರ್ಪಡಿಸಿದ್ದ. ಒಟ್ಟಾರೆ ಮಥುರಾ ನಗರಿ ಇವನ ಆಡಳಿತದಿಂದ ರೋಸಿಹೋಗಿತ್ತು. ಯಾದವರು ಕಂಸನನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಕಾಲ ಅದು.
ವಸುದೇವ : ಈತ ಯಾದವರ ಮುಖಂಡ. ಈತನಿಗೆ ಇಬ್ಬರು ಹೆಂಡತಿಯರು. ಒಬ್ಬಳು ರೋಹಿಣೀದೇವಿ (ಬಲರಾಮನ ತಾಯಿ, ಬಲರಾಮನ ಹೆಂಡತಿಯ ಹೆಸರು ರೇವತಿ ಈಕೆ ರೈವತನ ಮಗಳು) ಹಾಗೂ ಇನ್ನೊಬ್ಬಳು ದೇವಕಿ ದೇವಕಿಯನ್ನು ವಸುದೇವನಿಗೆ ಕೊಟ್ಟು ವಿವಾಹ ಮಾಡುವುದರ ಹಿಂದೆ ಸಹ ಕಂಸನ ಕುತಂತ್ರವಿದೆ. - ಈ ವಿವಾಹದಲ್ಲಿ ಯಾದವರನ್ನೆಲ್ಲಾ ತನ್ನೆಡೆಗೆ ಸೆಳೆಯಬೇಕೆಂಬ ಕಂಸನ ಸ್ವಾರ್ಥವಿತ್ತು. ಆದರೆ ಈ ವಿವಾಹದ ಸಮಯದಲ್ಲೇ ಕಂಸನನ್ನು ಕುರಿತು ಅಶರೀರ ವಾಣಿಯೊಂದು ಗೋಚರಿಸಿ, " ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಶಿಶುವಿನಿಂದ ನಿನಗೇ ಮೃತ್ಯು" ಎಂದು ಹೇಳುತ್ತದೆ. ಅಂದಿನಿಂದ ದೇವಕಿ-ವಸುದೇವರಿಗೆ ಕಂಸ ಸೆರೆವಾಸ ವಿಧಿಸುತ್ತಾನೆ. ದೇವಕಿಗೆ ಜನಿಸಿದ ಎಲ್ಲಾ 7 ಶಿಶುಗಳನ್ನು ಹತ್ಯೆ ಮಾಡುತ್ತಾನೆ. ಎಂಟನೇ ಶಿಶುವಾಗಿ ಕೃಷ್ಣ ಜನಿಸಿದ್ದ.ಹಾಗಾದರೆ ಎಲ್ಲರ ಅಚ್ಚುಮೆಚ್ಚಿನ ಶ್ರೀಕೃಷ್ಣನ ಜನ್ಮ , ಐತಿಹಾಸಿಕ ಜೀವನ ಹೇಗಿತ್ತು? ಮುಂದಿನ ಭಾಗದಲ್ಲಿ ನೋಡೋಣ.. ಈಗ ಮಥುರೆಯ ಐತಿಹಾಸಿಕ, ಚಾರಿತ್ರಿಕ ಅಂಶಗಳತ್ತ ಗಮನ ಹರಿಸೋಣ
ಕೃಷ್ಣನ ಮರಿಮಗನಾಗಿದ್ದ ವಜ್ರನಾಭ (ಬೃಜನಾಭ) ಮಥುರೆಯಲ್ಲಿ ಮೊಟ್ಟ ಮೊದಲಿಗೆ ಕೃಷ್ಣ ದೇವಾಲಯ ನಿರ್ಮಾಣ ಮಾಡಿದ್ದ. 17ನೇ ಶತಮಾನದಲ್ಲಿ ವೀರಸಿಂಹ ಜುದೇವ್ ಬುಂದೇಲಾ ಎಂಬ ರಾಜಪೂತ ರಾಜ ಇದನ್ನು ನವೀಕರಿಸಿದ್ದ
ವಿವಿಧ ಧರ್ಮದ ಸಾಹಿತ್ಯದಲ್ಲಿ ಮಥುರೆಯ ಉಲ್ಲೇಖ
ಕತ್ರಿ ಕೇಶವದೇವನ ಪುರಾತತ್ತ್ವ ಶಾಸ್ತ್ರದ ಉತ್ಖನನದಿಂದ ಕಂಡುಬರುವ ಮಾನವನ ಆಕೃತಿಗಳು, ಹಿಂಭಾಗದ ನೋಟ, ಕ್ರಿ.ಪೂ 2 ನೇ ಶತಮಾನದ ಸಿರ್ಕಾ, ಓಗೀ ಕಮಾನುಗಳು ಮತ್ತು ಬಾಲ್ಕನಿ ಈಗ ಮಥುರಾದ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿದೆ. |
ಮಥುರಾದ ಮೂಲರೂಪ ಮಥುರೆ. ವೈದಿಕಸಾಹಿತ್ಯದಲ್ಲಿ ಮಥುರೆಯ ಉಲ್ಲೇಖವಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ಇದನ್ನು ಮಧುಪುರ ಅಥವಾ ಮಧುದಾನವ ನಗರವೆಂದು ಕರೆದಿದೆ. ಮಹಾಭಾರತದಲ್ಲಿಯ ಉಲ್ಲೇಖದಂತೆ ಇದು ಶೂರಸೇನ ರಾಜಧಾನಿ. ಭಾಗವತದಲ್ಲಿ ಹಲವೆಡೆ ಮಥುರಾ ನಗರದ ವರ್ಣನೆಗಳಿವೆ. ಮೂರು ಕೋಟಿ ಮ್ಲೇಚ್ಛರ ಜೊತೆಗೂಡಿ ಬಂದ ಕಾಲಯವನ ಈ ನಗರವನ್ನು ಮುತ್ತಿದನಂತೆ. ಹರಿವಂಶ ಮತು ವಿಷ್ಣುಪುರಾಣಗಳಲ್ಲಿ ಈ ನಗರವನ್ನು ಮುತ್ತಿದನಂತೆ ಹರಿವಂಶ ಮತ್ತು ವಿಷ್ಣುಪುರಾಣಗಳಲ್ಲಿ ಈ ನಗರದ ವಿಲಾಸವೈಭವಗಳ ಮನೋಹರ ಚಿತ್ರಣ ಕಂಡುಬರುತ್ತದೆ. ಕಾಳಿದಾಸನ ರಘುವಂಶದಲ್ಲಿ ಇಂದುಮತಿಯ ಸ್ವಯಂವರ ವರ್ಣನೆಯ ಸಂದರ್ಭದಲ್ಲಿ ಈ ನಗರ ಶೂರಸೇನಾಧಿಪ ಸುಷೇಣನ ರಾಜಧಾನಿಯಾಗಿತ್ತೆಂದು ಉಲೇಖಿತವಾಗಿದೆ. ಈ ಕಾವ್ಯಕ್ಕೆ ಟೀಕೆ ಬರೆದ ಮಲ್ಲಿನಾಥನು ಮಥುರೆ ಶತ್ರುಘ್ನ ನಿರ್ಮಿತ ನರಗವೆಂದು ಉಲ್ಲೇಖಿಸಿದ್ದಾನೆ.
ಬೌದ್ಧ ಸಾಹಿತ್ಯದಲ್ಲಿ ಈ ನಗರದ ಹಲವು ಉಲ್ಲೇಖಗಳು ಕಂಡುಬರುತ್ತವೆ. ಕ್ರಿ. ಪೂ. ಸು. 600ರ ವೇಳೆಗೆ ಇಲ್ಲಿ ಅವಂತಿಪುತ್ತ (ಅವಂತಿಪುತ್ರ) ಎಂಬ ಅರಸನ ಆಡಳಿತವಿತ್ತೆಂದೂ ಗೌತಮಬುದ್ಧ ಇಲ್ಲಿಗೆ ಭೇಟಿ ನೀಡುತ್ತಿದ್ದನೆಂದೂ `ಅಂಗುತ್ತರ ನಿಕಾಯ ತಿಳಿಸುತ್ತದೆ. ಆ ಕಾಲದಲ್ಲಿಯೂ ಇದೊಂದು ಪ್ರಧಾನ ವೈದಿಕ ಕೇಂದ್ರವಾಗಿತ್ತು. ಚಂದ್ರಗುಪ್ತಮೌರ್ಯನ ಕಾಲದಲ್ಲಿ ಇದು ಮೌರ್ಯ ಸಾಮ್ರಾಜ್ಯದಲ್ಲಿ ಲೀನವಾಯಿತು. ಮೆಗಾಸ್ತನೀಸನು ಈ ಸೂರಸೇನಾ ಮಥೋರಾ ಹಾಗೂ ಕ್ಲೀಸೊಬೋರಾ ಎಂಬ ನಗರಗಳನ್ನು ಉಲ್ಲೇಖಿಸಿ ಅವು ಕೃಷ್ಣೋಪಾಸನೆಯ ಕೇಂದ್ರಗಳಾಗಿದ್ದ ವೆಂದು ತಿಳಿಸಿದ್ದಾನೆ. ಅಶೋಕನ ಕಾಲದ ಹೊತ್ತಿಗೆ ಇಲ್ಲಿ ಬೌದ್ಧಧರ್ಮ ಸಾಕಷ್ಟು ಬೇರೂರಿತ್ತು. ಬೌದ್ಧ ಸಾಹಿತ್ಯ ಮತ್ತು ಹ್ಯೂಯೆನ್‍ತ್ಸಾಂಗ್ ಪ್ರವಾಸಕಥನಗಳಲ್ಲಿ ಅಶೋಕನ ಗುರುವೆಂದು ಉಕ್ತವಾದ ಉಪಗುಪ್ತ ಮಥುರೆಯ ನಿವಾಸಿ. ಟಾಲೆಮಿ, ಫಾಹಿಯಾನ ಕೃತಿಗಳಲ್ಲೂ ಈ ನಗರದ ಉಲ್ಲೇಖವಿದೆ.
ಜೈನಪರಂಪರೆಯ ಪ್ರಕಾರ ಜೈನ ಸಂಘದ ಎರಡನೆಯ ಪರಿಷತ್ತು ಸಮಾವೇಶಗೊಂಡದ್ದು ಮಥುರೆಯಲ್ಲಿ. ಸ್ಕಂದಿಲಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶದಲ್ಲಿ `ಮಾಥುತವಾಚನ ಎಂಬ ಆಗಮನಗಳನ್ನು ರೂಪಿಸಲಾಯಿತ್ತು. ಆದರೆ ಕ್ರಿ.ಶ. ೫ನೆಯ ಶತಮಾನದ ಹೊತ್ತಿಗೆ ಈ ಜೈನಾಗಮಗಳ ವಾಚನ ನಿಂತು ಹೋಗಿದ್ದಿತೆಂದು ತಿಳಿದುಬರುತ್ತದೆ. ಮಥುರೆಯು ಜೈನಯತಿಗಳಾದ ಧರ್ಮರುಚಿ ಹಾಗೂ ಧರ್ಮಘೋಷರ ವಾಸಸ್ಥಾನವೆಂಬುದಾಗಿ `ವಿವಿಧ ತೀರ್ಥಕಲ್ಪ ಎಂಬ ಕೃತಿ ತಿಳಿಸುತ್ತದೆ. ಆಗ ಈ ನಗರ ಹನ್ನೆರಡು ಯೋಜನ ಉದ್ದ ಮತ್ತು ಒಂಬತ್ತು ಯೋಜನ ಅಗಲವಾಗಿದ್ದು, ದೇವಾಲಯ, ಜಿನಮಂದಿರ ಹಾಗೂ ಸರೋವರಗಳಿಂದ ಕಂಗೊಳಿಸುತ್ತಿತ್ತು; ವೃಕ್ಷಗಳಿಂದ ನಿಬಿಡವಾಗಿದ್ದ ಭೂಘರಮಣಿ ಉದ್ಯಾನದಲ್ಲಿ ಜೈನ ಸಾಧುಸಂತರು ವಾಸಿಸುತ್ತಿದ್ದರು. ಈ ಉದ್ಯಾನದ ಪ್ರಭುವಾದ ಕುವೇರ ಇಲ್ಲಿ ಜೈನಸ್ತೂಪವೊಂದನ್ನು ಕಟ್ಟಿಸಿ ಅದರಲ್ಲಿ ಸುಪಾಶ್ರ್ವ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದ, ನಗರದಲ್ಲಿ ಭಂಡೀರ ಯಕ್ಷನ ಮಂದಿರವಿದ್ದಿತು. ತಾಲ, ಭಂಡೀರ,ಕೌಲ, ಬಹುಲ, ಬಿಲ್ವ ಹಾಗೂ ಲೋಹಜಂಘ ಎಂಬ ಉದ್ಯಾನಗಳಿದ್ದುವು. ಅರ್ಕಸ್ಥಲ, ವೀರಸ್ಥಲ, ಪದ್ಯಸ್ಥಲ, ಕುಶಸ್ಥಲ ಹಾಗೂ ಮಹಾಸ್ಥಲ ಎಂಬ ಹೆಸರಿನ ಪವಿತ್ರ ಜೈನಸ್ಥಳಗಳಿದ್ದುವು. ವಿಶ್ರಾಂತಿಕ ತೀರ್ಥ, ಅಸಿಕುಂಡಾತೀರ್ಥ, ವೈಕುಂಠತೀರ್ಥ, ಕಾಲಿಂಜರತೀರ್ಥ, ಚಕ್ರತೀರ್ಥ-ಎಂಬ ಪಂಚತೀರ್ಥಗಳಿದ್ದುವು. ಲೋಹಜಂಘವನ, ಮಧುವನ, ಬಿಲ್ವವನ, ತಾಲವನ, ಕುಮುದನ, ವೃಂದಾವನ, ಭಾಂಡೀರವನ, ಖದಿರವನ, ಕಾರ್ಮಿಕವನ, ಕೋಲವನ, ಬಹೂಲಾವನ, ಮಹಾವನಗಳೆಂಬ ಹನ್ನೆರಡುವನಗಳನ್ನು ಜೈನಸಾಹಿತ್ಯದಲ್ಲಿ ಉಲ್ಲೇಖಿಸಿದೆ. ಕಾವೇಶಿಕ, ಸೋಮದೇವ, ಕಂಬಲ ಮತ್ತು ಸಂಬಲ ಮುಂತಾದ ಜೈನಯುತಿಗಳಿಗೆ ಮಥುರೆಯೊಡನೆ ಸಂಬಂಧ ವಿದ್ದಿತೆಂದು ಭಾವಿಸಲಾಗಿದೆ.
ಮಥುರೆಯ ಇತಿಹಾಸ
ಕ್ರಿ . ಪೂ. 2-1ನೆಯ ಶತಮಾನದಲ್ಲಿ ಶುಂಗವಂಶದ ಅರಸರು ಅಳುತ್ತಿದ್ದಾಗ ಮಥುರೆಗೆ ಹೆಚ್ಚಿನ ಮಹತ್ತ್ವ ಬಂತು; ಇದು ಪಶ್ಚಿಮ ಭಾಗದ ರಾಜಧಾನಿಯಾಗಿತ್ತು. ಇದೇ ಅವಧಿಯಲ್ಲಿ ಯವನರಾಜ ಡೆಮಿಟ್ಟ್ರಿಯಸ್ ಮಥುರೆಯನ್ನು ಕೆಲಕಾಲ ರಾಜಧಾನಿಯನ್ನಾಗಿ ಮಾಡಿಕೊಡಿದ್ದ. ಕ್ರಿ. ಪೂ. 1ನೆಯ ಶತಮಾನದ ಹೊತ್ತಿಗೆಶುಂಗ ಪ್ರಭುತ್ವದ ಪ್ರಭಾವ ಕ್ಷೀಣಿಸಿ ಶಕಕ್ಷತ್ರಪರು ಪ್ರಬಲರಾದರು. ರಾಜುಲ ಮತ್ತು ಆತನ ಮಗ ಶೋಡಾಸ ಈ ವಂಶದ ಪರಾಕ್ರಮಿ ಅರಸರುಗಳಾಗಿದ್ದು ಇವರು ಯಮುನಾತೀರದಲ್ಲಿ ಸಿಂಹಸ್ತಂಭವೊಂದನ್ನು ಸ್ಥಾಪಿಸಿದರು. ಇವರು ಕಾಲದಲ್ಲಿ ಮಥುರೆ ವಾಸುದೇವ ಕೃಷ್ಣರ ಆರಾಧನಾ ಕೇಂದ್ರವಾಗಿತ್ತೆಂಬ ಸಂಗತಿ ಶೋಡಾಸನ ಶಾಸನವೊಂದರಿಂದ ಸ್ಪಷ್ಟಪಡುತ್ತದೆ. ಕ್ರಿಸ್ತಶಕೆಯ ಆರಂಭದಿಂದ ಸುಮಾರು 3ನೆಯ ಶತಮಾನದ ತನಕ ಆಳಿದ ಕುಷಾಣರ ಕಾಲದಲ್ಲಿ ಮಥುರೆ ಪ್ರಧಾನ ಕಲಾಕೇಂದ್ರವಾಯಿತು. ಸ್ವಲ್ಪಮಟ್ಟಿಗೆ ಗಾಂಧಾರ ಶಿಲ್ಪದ ಪ್ರಭಾವಕ್ಕೆ ಒಳಗಾದಂತೆ ಕಂಡರೂ ಮಥುರಾಶಿಲ್ಪ ಉನ್ನತ ಮಟ್ಟಕ್ಕೇರಿತು. ಸಹಸ್ರಾರು ಪ್ರಾಚೀನ ಶಿಲ್ಪಾವಶೇಷಗಳು ಮಥುರೆಯಲ್ಲಿ ಲಭ್ಯವಾಗಿವೆ. ಬುದ್ಧನ ಮಾನವರೂಪದ ಮೂರ್ತಿ ನಿರ್ಮಾಣ ಆರಂಭವಾದದು ಈ ಕಾಲದಲ್ಲೇ. ಕೆಂಪು ಕಣಶಿಲೆಯಲ್ಲಿ ಕಡೆದ ವಿವಿಧ ಭಂಗಿಯ ಯಕ್ಷಯಕ್ಷಿ ಶಿಲ್ಪಗಳು ಕಣ್ಸೆಳೆಯುತ್ತವೆ. ಕುಷಾಣ ಅರಸರ ಶರೀರ ಪ್ರಮಾಣದ ಮೂರ್ತಿಗಳು ಮಥುರಾ ಬಳಿಯ ಮಾತ್ ಎಂಬಲ್ಲಿ ಸಿಕ್ಕಿವೆ. ಕನಿಷ್ಕನ ಶಿರರಹಿತಶಿಲ್ಪ ಗಮನಾರ್ಹ. ಶಿವ, ಸೂರ್ಯ, ವಿಷ್ಣು, ಮಹಿಷಮರ್ದಿನಿ ಮುಂತಾದ ಮೂರ್ತಿಗಳೂ ಈ ಕಾಲದಲ್ಲಿ ನಿರ್ಮಿತವಾದವು. ಮಥುರಾಶಿಲ್ಪ ಶೈಲಿಯ ಅತಿದೊಡ್ಡಸಾಧನೆ ಎಂದರೆ ಅಪ್ಪಟ ಭಾರತೀಯವೆನ್ನಿಸುವ ಬುದ್ಧಮೂರ್ತಿಗಳು. (ನೋಡಿ-ಕುಷಾಣರು-ವಾಸ್ತುಶಿಲ್ಪ) ವಿನ್ಯಾಸ ಹಾಗೂ ಕಂಡರಣೆ, ಸೌಂದರ್ಯದ ಪರಿಕಲ್ಪನೆ ಹಾಗೂ ಅಭಿವ್ಯಕ್ತಿಗಳಲ್ಲಿ ಶಿಲ್ಪಿಯ ಪ್ರತಿಭೆ ಹಾಗೂ ಸ್ವೋಪಜ್ಞತೆಗಳನ್ನು ಈ ಕಾಲದ ಶಿಲ್ಪಗಳಲ್ಲಿ ಕಾಣಬಹುದುದಾಗಿದೆ. ಈ ಕಾಲದ ಶಿಲ್ಪಗಳು ಈಗ ದೆಹಲಿ, ಮಥುರಾ, ಲಕ್ನೋ, ಕಲ್ಕತ್ತ ವಸ್ತುಸಂಗ್ರಹಾಲಯಗಳಲ್ಲಿವೆ.
ಕುಷಾಣರ ತರುವಾಯ ಅಧಿಕಾರಕ್ಕೆ ಬಂದು ಆಳಿದ ಗುಪ್ತರ ಕಾಲದಲ್ಲಿ ಮಥುರಾ ಶಿಲ್ಪಶೈಲಿ ಪರಮೋನ್ನತಿಯನ್ನು ಸಾಧಿಸಿತು. ಇಲ್ಲಿ ನಿರ್ಮಿತವಾದ ಮೂರ್ತಿಗಳು ದೇಶದ ಇತರಡೆಗಳಲ್ಲಿಯ ಶಿಲ್ಪಗಳಿಗೆ ಮಾದರಿಗಳಾದುವು. ದಿವ್ಯಾದರ್ಶಗಳಿಂದ ಮಾರ್ಗದರ್ಶಿತನಾದ ಈ ಕಾಲದ ಕಲಾಕಾರನ ಶಿಲ್ಪದಲ್ಲಿ ಗಾಂಭೀರ್ಯ ಮಿಶ್ರಿತ ಸೌಂದರ್ಯ ಮೈದಳೆಯಿತು. ಸದಭಿರುಚಿ, ಅಲಂಕರಣದಲ್ಲಿ ಸಮತೋಲನೆ, ಲಾಲಿತ್ಯ ಈ ಕಾಲದ ಮಥುರಾ ಶೈಲಿಯ ಶಿಲ್ಪಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತವೆ. ಇದಕ್ಕೆ ಈ ಕಾಲದ ಬುದ್ಧಮೂರ್ತಿ ಹಾಗೂ ವಿಷ್ಣುಮೂರ್ತಿಗಳನ್ನು ಉದಾಹರಿಸಬಹುದು. ಗುಪ್ತರ ಕಾಲದಲ್ಲಿ ಮಥುರಯ ಇಪ್ಪತ್ತು ಬೌದ್ಧ ವಿಹಾರಗಳಲ್ಲಿ ಮೂರು ಸಾವಿರ ಭಿಕ್ಷುಗಳು ವಾಸಿಸುತ್ತಿದ್ದರೆಂದು ಫಾಹಿಯಾನ್ ತಿಳಿಸಿದ್ದಾನೆ.
ಮುಂದೆ ಹೂಣರು ಮಥುರಾ ಪ್ರದೇಶವನ್ನಾಕ್ರಮಿಸಿ ಲೂಟಿ ಹೊಡೆದರು. ಕ್ರಿ. ಶ. 7ನೆಯ ಶತಮಾನ ಹೊತ್ತಿಗೆ ಈ ಭಾಗದಲ್ಲಿ ಬೌದ್ಧಧರ್ಮ ಅವನತಿ ಹೊಂದುತ್ತಿದ್ದುದರ ಬಗ್ಗೆ ಹ್ಯೂಯೆನ್ ತ್ಸಾಂಗನ ಪ್ರವಾಸ ಕಥನದಲ್ಲಿ ಸ್ಪಷ್ಟ ಸುಳಿವುಗಳು ದೊರಕುತ್ತವೆ. ಉಪಗುಪ್ತ ಕಟ್ಟಿಸಿದ್ದ ಕಂಕಾಲತೀಲಾದ ಬೌದ್ಧ ವಿಹಾರವನ್ನು ಆತ ಕಂಡಿದ್ದ. ಆದರೆ ಮುಂದೆ ಹಲವು ಕಟ್ಟಡಗಳು ನಾಶವಾದುವು; ಅಳಿದುಳಿದ ಕಟ್ಟಡಗಳೂ ಘಜ್ನಿಮಹಮೂದನ ದಾಳಿಕಾಲದಲ್ಲಿ ನಿರ್ನಾಮವಾದುವು. ಇಲ್ಲಿಂದ ಆತ ಐದು ಚಿನ್ನದ ಮೂರ್ತಿಗಳನ್ನು ಅಪಹರಿಸಿಕೊಂಡು ಹೋದನೆಂದೂ ಮಥುರೆಯಲ್ಲಿಯ ಶ್ರೀಕೃಷ್ಣದೇವಾಲಯವನ್ನು ನಾಶಮಾಡಿದನೆಂದೂ ಪ್ರತೀತಿ.
ಮುಸಲ್ಮಾನ ಸುಲ್ತಾನರ ಕಾಲದಲ್ಲಿ ಈ ನಗರಕ್ಕೆ ಮೊದಲಿನ ಪ್ರಾಶಸ್ತ್ಯ ವಿರಲಿಲ್ಲ. ಅಕ್ಬರ್ ಹಾಗೂ ಜಹಾಂಗೀರರ ಕಾಲದಲ್ಲಿ ಕೆಲವಾರು ಕಟ್ಟಡಗಳು ನಿರ್ಮಿತವಾದುವು.17ನೆಯ ಶತಮಾನದ ಉತ್ತರಾರ್ಧದಲ್ಲಿ ಔರಂಗಜೇಬನ ಅಧಿಕಾರಿಗಳಲ್ಲೊಬ್ಬನಾದ ಅಬ್ದುಲ್‍ನಬಿ ಸ್ಥಳೀಯ ದಂಗೆಯಲ್ಲಿ ಮೃತನಾದಾಗ ಅದನ್ನೇ ನೆಪಮಾಡಿಕೊಂಡ ಸುಲ್ತಾನ ಮಥುರೆಯ ಎಲ್ಲ ಪ್ರಮುಖ ದೇವಾಲಯಗಳನ್ನೂ ಹಾಳುಮಾಡಿದ. ಪ್ರಸಿದ್ಧ ಕೃಷ್ಣದೇಗುಲವನ್ನು ಕೆಡವಿ ಈಗಿನ ಮಸೀದಿಯನ್ನು ನಿರ್ಮಿಸಿದ. ಮಥುರೆಗೆ ಇಸ್ಲಾಮಾಬಾದ್ ಎಂದು ಹೊಸ ಹೆಸರನ್ನಿಟ್ಟ. ಆದರೆ ಅದು ಹೆಚ್ಚುಕಾಲ ಚಲಾವಣೆಯಲ್ಲಿ ಉಳಿಯಲಿಲ್ಲ. ಅಹಮದ್ ಅಬ್ಬಾಲಿಯ ಕಾಲದಲ್ಲಿ ಮಥುರೆ ಮತ್ತೊಮ್ಮೆ ದುರ್ದಿನಗಳನ್ನು ಕಂಡಿತು. ಮೊಗಲರು, ಜಾಟರು ಹಾಗೂ ಮರಾಠರ ನಡುವಣ ಹೋರಾಟಗಳಿಗೆ ಮಥುರೆ ಕಣವಾಯಿತು. ಮಾಧವರಾವ್ ಸಿಂಧಿಯಾಗೆ ನೆಚ್ಚಿನ ಬೀಡಾಗಿದ್ದ ಹಾಗೂ ಜಾಟ ಪ್ರಭು ಸೂರಜಮಲ್ಲನ ಕೇಂದ್ರಸ್ಥಳವಾಗಿದ್ದ ಮಥುರೆಯನ್ನು 1804 ರಲ್ಲಿ ಬ್ರಿಟಿಷರು ವಶಪಡಿಸಿಕೊಂಡರು.
ಬ್ರಿಟೀಷರ ಹಾಗೂ ಸ್ವಾತಂತ್ರ್ಯಾನಂತರ ಕೃಷ್ಣ ಜನ್ಮಭೂಮಿ
ಈಸ್ಟ್ ಇಂಡಿಯಾ ಕಂಪನಿ ಕತ್ರಾ (ಮಸೀದಿಯ ಸುತ್ತಲಿನ ಮಾರುಕಟ್ಟೆ) ಭೂಮಿಯನ್ನು ಹರಾಜು ಮಾಡಿತು ಮತ್ತು ಅದನ್ನು ಬನಾರಸ್‌ನ ಶ್ರೀಮಂತ ಬ್ಯಾಂಕರ್ ರಾಜಾ ಪಟ್ನಿಮಲ್ ಖರೀದಿಸಿದರು.
ರಾಜ ಪಟ್ನಿಮಲ್ ಕೃಷ್ಣ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಆತನ ವಂಶಜರು ಭೂಮಿಯನ್ನು ಆನುವಂಶಿಕವಾಗಿ ಪಡೆದರು. ಮಥುರಾದ ಮುಸ್ಲಿಮರು ಎರಡು ಸಿವಿಲ್ ದಾವೆಗಳಲ್ಲಿ ದೇಗುಲ ಮತ್ತು ಈದ್ಗಾ ಮೈದಾನವಿರುವ 13.37 ಎಕರೆ ಜಮೀನಿನ ಮಾಲೀಕತ್ವಕ್ಕಾಗಿ ಮಾಲೀಕರಾಗಿದ್ದ ರಾಜ ಪಟ್ನಿಮಲ್ ವಂಶಜ ರಾಜ ಕೃಷ್ಣ ದಾಸ್ ವಿರುದ್ಧ ಕೋರ್ಟ್ ಕಟಕಟೆ ಏರಿದರು. ಆದರೆ ಅಲಹಾಬಾದ್ ಹೈಕೋರ್ಟ್ ಎರಡೂ ದಾವೆಗಳಲ್ಲಿ ರಾಜ ಕೃಷ್ಣ ದಾಸ್ ಪರವಾಗಿ ತೀರ್ಪು ನೀಡಿತು 1935 ರಲ್ಲಿ. ಕೈಲಾಶ್ ನಾಥ್ ಕಟ್ಜು ಮತ್ತು ಮದನಮೋಹನ ಚತುರ್ವೇದಿ ಅವರು ಈ ಮೊಕದ್ದಮೆಯಲ್ಲಿ ಸಹಾಯಕ್ಕೆ ಬಂದರು.
ಮದನ್ ಮೋಹನ ಮಾಳವೀಯ ಹಾಗೂ ಕೈಗಾರಿಕೋದ್ಯಮಿ ಜುಗಲ್ ಕಿಶೋರ್ ಬಿರ್ಲಾ |
ಮದನ್ ಮೋಹನ್ ಮಾಳವಿಯಾ ಅವರು ಫೆಬ್ರವರಿ 7, 1944 ರಂದು ರಾಜ ಕೃಷ್ಣ ದಾಸ್ ಅವರಿಂದ ಕೈಗಾರಿಕೋದ್ಯಮಿ ಜುಗಲ್ ಕಿಶೋರ್ ಬಿರ್ಲಾ ಅವರ ಆರ್ಥಿಕ ಸಹಾಯದಿಂದ 13000 ರೂ. ಗೆ ಆ ವಿವಾದಿತ ಜಾಗವನ್ನು ಖರೀದಿಸಿದ್ದರು. ಮಾಳವಿಯ ಮರಣದ ನಂತರ, ಜುಗಲ್ ಕಿಶೋರ್ ಬಿರ್ಲಾ ಅವರು ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ಅನ್ನು ರಚಿಸಿದರು, ನಂತರ ಇದನ್ನು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥೆಯಾಗಿ ನೋಂದಾಯಿಸಲಾಯಿತು, ಫೆಬ್ರವರಿ 21, 1951 ರಂದು ಆ ಜಾಗ ಸಂಸ್ಥೆಯ ವಶಕ್ಕೆ ಬಂದಿತು.
ಜುಗಲ್ ಕಿಶೋರ್ ಬಿರ್ಲಾ ಅವರು ಹೊಸ ದೇವಾಲಯದ ನಿರ್ಮಾಣವನ್ನು ಮತ್ತೊಬ್ಬ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ಜೈ ದಯಾಳ್ ದಾಲ್ಮಿಯಾ ಅವರಿಗೆ ವಹಿಸಿಕೊಟ್ಟರು. ದೇವಾಲಯ ಸಂಕೀರ್ಣದ ನಿರ್ಮಾಣವನ್ನು ಅಕ್ಟೋಬರ್ 1953 ರಲ್ಲಿ ಭೂಮಿಯನ್ನು ಹಸನುಗೊಳಿಸುವ ಮೂಲಕ ಪ್ರಾರಂಭಿಸಲಾಯಿತು ಮತ್ತು ಫೆಬ್ರವರಿ 1982 ರಲ್ಲಿ ಪೂರ್ಣಗೊಳಿಸಲಾಯಿತು.
ಲೋಕೋಪಕಾರಿ ಜೈ ದಯಾಳ್ ದಾಲ್ಮಿಯಾ |
1968 ರಲ್ಲಿ, ಟ್ರಸ್ಟ್ ಮತ್ತು ಶಾಹಿ ಈದ್ಗಾ ಸಮಿತಿಯು ಒಪ್ಪಂದಕ್ಕೆ ಬಂದಿದ್ದು, ಇದು ದೇವಾಲಯದ ಭೂಮಿಯನ್ನು ಟ್ರಸ್ಟ್‌ಗೆ ನೀಡಿತು ಮತ್ತು ಈದ್ಗಾ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ನೀಡಿತು ಮತ್ತು ಈದ್ಗಾದಲ್ಲಿ ಟ್ರಸ್ಟ್‌ನ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿತು.
1992 ರಲ್ಲಿ ಬಾಬರಿ ಮಸೀದಿ ನೆಲಸಮವಾದ ನಂತರ, ವೃಂದಾವನದ ನಿವಾಸಿ ಮನೋಹರ್ ಲಾಲ್ ಶರ್ಮಾ ಅವರು 1968 ರ ಒಪ್ಪಂದವನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಅಲ್ಲದೆ 1991 ರ ಧಾರ್ಮಿಕ ಪೂಜಾ ರದ್ದತ್ ಕಾನೂನನ್ನು ಸಹ ಪ್ರಶ್ನಿಸಿದ್ದಾರೆ. ಈ ಕಾನೂನು ಆಗಸ್ಟ್ 15, 1947 ರಲ್ಲಿರುವಂತೆ ಎಲ್ಲಾ ಪೂಜಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡುತ್ತದೆ.
...ಮುಂದುವರಿಯುವುದು
No comments:
Post a Comment