ದೇವರಾಯನದುರ್ಗ(Devarayana Durga)
ದೇವರಾಯನದುರ್ಗ ಬೆಂಗಳೂರಿನಿಂದ 65 ಕಿ.ಮೀ. ಮತ್ತು ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ ಮತ್ತು ಪವಿತ್ರ ಸ್ಥಳ ಕೂಡ ಹೌದು. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8 ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ “ನಾಯಕನ ಕೆರೆ” ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ. ದೇವರಾಯನ ದುರ್ಗ ದೇವಾಲಯಗಳಿಗೆ ಮಾತ್ರವಲ್ಲದೆ ಬೇಸಿಗೆಯಲ್ಲೂ ತಂಪಾದ ಪರಿಸರಕ್ಕೆ ಜನಪ್ರಿಯವಾಗಿದೆ.
ಯುದ್ಧದಲ್ಲಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡ ಮೈಸೂರು- ಚಿಕ್ಕ ದೇವರಾಯ ಒಡೆಯರ್ ಮಹಾರಾಜರಿಂದ ದೇವರಾಯನ ದುರ್ಗಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ,ಹಳೆಯ ಕೋಟೆ,ಸೂರ್ಯಾಸ್ತ ನೋಡಲು ಸುಂದರಾವಾದ ಜಾಗ ಕೂಡ ಇದೆ.ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ
***
ಈ ಸ್ಥಳವನ್ನು ಕರಿಗಿರಿ ಎಂದೂ ಕರೆಯುತ್ತಾರೆ ಅಂದರೆ ಆನೆಗಳಿರುವ ಬೆಟ್ಟ ಎಂದರ್ಥ.ದೇವಾಲಯವಿರುವ ಬೆಟ್ಟವನ್ನು ಪೂರ್ವ ದಿಕ್ಕಿನಿಂದ ನೋಡಿದಾಗ ಅದು ಆನೆಯನ್ನು ಹೋಲುತ್ತದೆ. ಆದ್ದರಿಂದ ಕರಿಗಿರಿ (ಕರಿ-ಆನೆ, ಗಿರಿ-ಬೆಟ್ಟ) ಎಂದು ಹೆಸರು. ಈ ಬೆಟ್ಟವು 3940 ಅಡಿ ಎತ್ತರದಲ್ಲಿದೆ ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಕೃಷ್ಣಾ ನದಿಯನ್ನು ಸೇರುವ ಜಯಮಂಗಲ ಮತ್ತು ಶಿವನಸಮುದ್ರದಲ್ಲಿ ಕಾವೇರಿ ನದಿಯನ್ನು ಸೇರುವ ಶಿಂಷಾ ನದಿಯಂತಹ ನದಿಗಳ ಜನ್ಮಸ್ಥಳ ದೇವರಾಯನದುರ್ಗ. 17 ನೇ ಶತಮಾನದ ಕೋಟೆ ಅವಶೇಷಗಳು, ಹೊಯ್ಸಳ ಮತ್ತು ವಿಜಯನಗರ ಕಾಲದ ಐತಿಹಾಸಿಕ ಅವಶೇಷಗಳು ಮತ್ತು ಒಡೆಯರ್ ರಾಜವಂಶದ ಆಳ್ವಿಕೆಯ ಕುರುಹುಗಳನ್ನು ದೇವರಾಯನದುರ್ಗ ಗ್ರಾಮ ಮತ್ತು ದೇವರಾಯನದುರ್ಗದ ಕುಂಭಿ ಬೆಟ್ಟಗಳಲ್ಲಿ ಕಾಣಬಹುದು.
ಹೊಯ್ಸಳರ ಕಾಲದಲ್ಲಿ ಬೆಟ್ಟದ ಮೇಲೆ ಆನೆ ಬಿದ್ದಸರಿ (ಆನೆ ಬಿದ್ದ ಝರಿ) ಎಂಬ ಹೆಸರಿನ ಊರಿತ್ತು ಎನ್ನುತ್ತದೆ ಇತಿಹಾಸ. ವಿಜಯನಗರದ ಅರಸರ ಕಾಲದಲ್ಲಿ ಬೆಟ್ಟ ದುರ್ಗಕ್ಕೆ ಕರಿಗಿರಿ ಎಂಬ ಹೆಸರು ಪಡೆಯಿತು. 1696ರಲ್ಲಿ ಚಿಕ್ಕದೇವರಾಯ ಒಡೆಯರು ಕೋಟೆಯನ್ನು ವಶಪಡಿಸಿಕೊಂಡ ಮೇಲೆ ಇದಕ್ಕೆ ದೇವರಾಯನದುರ್ಗ ಎಂಬ ಹೆಸರು ಬಂತು.
ಮಲ್ಲಪಟ್ಟಣ ಎಂದೂ ಕರೆಸಿಕೊಂಡಿದ್ದ ದೇವರಾಯನ ದುರ್ಗದಲ್ಲಿ ಮೊದಲನೇ ಕಂಠೀರವ ನರಸರಾಜ ಒಡೆಯರು ದುರ್ಗಾನರಸಿಂಹ ದೇವಾಲಯ ಕಟ್ಟಿಸಿದ್ದಾರೆ. ಕುಂಬಿ ಬೆಟ್ಟಕ್ಕೆ ಹೋಗುವಾಗ ಮೈಸೂರು ಅರಸರ ಕಾಲದ ಕೋಟೆಯ ಪಳೆಯುಳಿಕೆಗಳು ಗೋಚರಿಸುತ್ತವೆ. ಬೆಟ್ಟದ ಮೇಲೆ ಇರುವ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ.
ಊರಿನ ಈಶಾನ್ಯ ದಿಕ್ಕಿನಲ್ಲಿರುವ ಕುಂಭಿಬೆಟ್ಟವಿದೆ. ಬೆಟ್ಟದ ಬಲಕ್ಕೆ ತಿರುಗಿದರೆ ಬಿಲ್ಲಿನ ದೋಣೆ, ಸೀತಾದೇವಿ ಕೊಳ ಹಾಗೂ ರಾಮಲಕ್ಷ್ಮಣರು ತಪವನ್ನಾಚರಿಸಿದ ಗುಹೆ ಇದೆ. ಈ ಗುಹೆಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ ಪಕ್ಕದಲ್ಲಿಯೇ ಬ್ರಿಟಿಷರ ಕಾಲದ ಬಂಗ್ಲೆ ಇರುವ ಬಂಗ್ಲೆ ಬೆಟ್ಟ ನೋಡಬಹುದು.
ತುಮಕೂರಿನಿಂದ ಉರುಡಗೆರೆ ಮಾರ್ಗವಾಗಿ ಕ್ಷೇತ್ರಕ್ಕೆ ಬಂದರೆ ಮೊದಲು ನಾಮದ ಚಿಲುಮೆ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಜಯಮಂಗಲಿ ನದಿಯ ತಟದಲ್ಲಿ ಕಾಳಿಕಾಗುಡಿ ಇದೆ. ಮುಂದೆ ನರಸಿಂಹನ ದೇವಾಲಯವಿದೆ. ಪಕ್ಕದಲ್ಲೇ ಮೂರ್ಚಿತನಾಗಿದ್ದ ಲಕ್ಷ್ಮಣನ ರಕ್ಷಿಸಲು ಸಂಜೀವಿನಿ ಪರ್ವತವನ್ನೇ ಕಿತ್ತುತಂದ ಹನುಮ ಸಂಜೀವರಾಯನ ದೇವಾಲಯವಿದೆ. ಕ್ಷೇತ್ರದಲ್ಲಿ ರಾಮತೀರ್ಥ, ಧನುಷ್ ತೀರ್ಥ ಎಂಬ ಎರಡೂ ದೊಣೆಗಳೂ ಇವೆ. ತಳಬೆಟ್ಟದಿಂದ 2 ಕಿಲೋ ಮೀಟರ್ ಮೇಲಿರುವ ಕುಂಬಿ ಬೆಟ್ಟದ ಮೇಲೆ ಕುಂಬೀನರಸಿಂಹನ ದೇವಸ್ಥಾನವಿದೆ.
ಬ್ರಹ್ಮದೇವರು ಇಲ್ಲಿ ತಪವನ್ನಾಚರಿಸಿದಾಗ, ವಿಷ್ಣು ಲಕ್ಷ್ಮೀನರಸಿಂಹ ರೂಪದಲ್ಲಿ ಪ್ರತ್ಯಕ್ಷನಾದನಂತೆ, ವಿಷ್ಣುವಿಗೆ ಬ್ರಹ್ಮದೇವರು ಕುಂಭಾಭಿಷೇಕ ಮಾಡಿದರಂತೆ ಇಲ್ಲಿ ನೆಲೆನಿಂತ ವಿಷ್ಣು ಕುಂಬಿ ನರಸಿಂಹ ಎಂದೂ ಖ್ಯಾತನಾಗಿದ್ದಾನೆ. ಭಕ್ತರು ಯೋಗಾನರಸಿಂಹ, ಲಕ್ಷ್ಮೀನರಸಿಂಹ ಎಂದೂ ಪೂಜಿಸುತ್ತಾರೆ.
ಇಲ್ಲಿರುವ ದೇವಾಲಯದಲ್ಲಿ ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪವಿದೆ. ಇಲ್ಲಿ ನರಸಿಂಹತೀರ್ಥ, ಪಾದ ತೀರ್ಥ, ಪರಾಶರತೀರ್ಥ ಇದೆ. ದಾಸಶ್ರೇಷ್ಠ ಪುರಂದರದಾಸರು ಕ್ಷೇತ್ರಕ್ಕೆ ಭೇಟಿ ನೀಡಿ, ಕರಿಗಿರಿ ನರಸಿಂಹ ಭಕ್ತರ ದಂತಿಸಿಂಹ ಪರಿಪಾಲಿಸು ಮೊರೆಹೊಕ್ಕೆನು ನಾನು ವರದಪುರಂದರ ವಿಠಲ ಎಂದು ಹಾಡಿದ್ದಾರೆ.
No comments:
Post a Comment