Sunday, December 26, 2021

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 110

 ಸೋಂದಾ  (Sonda)

ಸೋಂದಾ ಕ್ಷೇತ್ರ ಬೆಂಗಳೂರಿನಿಂದ 422 ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ 20 ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರಕ್ಕೆ ಸೋಂದ, ಸೋದೆ, ಸ್ವಾದಿ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಮಾಧ್ವ ಬ್ರಾಹ್ಮಣರು ಭೇಟಿ ಕೊಡುವ ಈ ಕ್ಷೇತ್ರದಲ್ಲಿ ವಾದಿರಾಜರ ಮೂಲ ಬೃಂದಾವನ, ರಮಾತ್ರಿವಿಕ್ರಮ ದೇವರ ಗುಡಿ, ಭೂತರಾಜರ ಸನ್ನಿಧಿ, ಧವಳ ಗಂಗಾ, ಮುಖ್ಯಪ್ರಾಣ ದೇವರು, ಗೋಪಾಲಕೃಷ್ಣ, ಸಂತಾನ ಗೋಪಾಲಕೃಷ್ಣ, ಅರಳಿಕಟ್ಟೆ, ನಾಗಬನ, ವೇದ ಮಂದಿರ, ಪಾಪ ವಿಮೋಚನಾ ತೀರ್ಥ, ಚಂದ್ರಮೌಳೇಶ್ವರ, ಹಾಗೂ ವೀಣೆಸಹಿತ ಹನುಮಂತ ದೇವರು ನೆಲೆಸಿದ್ದಾರೆ.

ಆ ಜಾಗದಿಂದ ಸ್ವಲ್ಪ ದೂರ ಕಾಡಿನ ಹಾದಿಯಲ್ಲಿ ನಡೆದು ಸಾಗಿದರೆ ಶಾಲ್ಮಲಿ ನದಿ ಹರಿಯುವ ತಪೋವನ ಎಂಬ ಅದ್ಭುತವಾದ ಸ್ಥಳವಿದೆ. ಮುಂಚೆ ಈ ಜಾಗಕ್ಕೆ ನಡೆದೇ ಹೋಗಬೇಕಿತ್ತು. ಇತ್ತೀಚಿಗೆ ವಾಹನ ವ್ಯವಸ್ಥೆಯನ್ನು ಸಹ ಮಾಡಿದ್ದರೆ. ಸೋಂದಾ ಕ್ಷೇತ್ರಕ್ಕೆ ಬರುವ ಬಹುಪಾಲು ಜನ ತಪೋವನಕ್ಕೆ ಖಂಡಿತವಾಗಿ ಭೇಟಿ ಕೊಡುವರು . ಹಾಗೆಯೇ ಸೋಂದಾ ಕ್ಷೇತ್ರದ ಸುತ್ತ ಮುತ್ತ ನೋಡಬಹುದಾದ ಜಾಗಗಳೆಂದರೆ ಸ್ವರ್ಣವಲ್ಲಿ ಮಠ, ವೆಂಕಟರಮಣ ದೇವಸ್ಥಾನಗಳಾಗಿದೆ.

ಮಳೆಗಾಲದಲ್ಲಂತೂ ಇಲ್ಲಿನ ಸೌಂದರ್ಯ ವರ್ಣಿಸಲು ಪದಗಳು ಸಾಲದು. ಮಳೆಗಾಲದಲ್ಲಿ ವಾರಾಂತ್ಯಗಳು ಬಿಟ್ಟರೆ ವಾರದ ದಿನಗಳಲ್ಲಿ ಹೆಚ್ಚು ಜನಸಂದಣಿ ಇರುವುದಿಲ್ಲ. ಪ್ರಶಾಂತವಾಗಿರುತ್ತದೆ ಸದಾಕಾಲ ಸುರಿಯುತ್ತಿರುವ ಆ ಮಳೆಯನ್ನೂ ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಒಂದೇ ಒಂದು ತೊಂದರೆ ಎಂದರೆ ಮಳೆಗಾಲದಲ್ಲಿ ತಪೋವನಕ್ಕೆ ಭೇಟಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಕಾಡಿನ ಹಾದಿಯಾದ್ದರಿಂದ ಜಿಗಣೆಗಳ ಕಾಟ ಹೆಚ್ಚಾಗಿ ಇರುತ್ತದೆ. ಕ್ಷೇತ್ರದಲ್ಲಿ ಊಟದ ಬಗ್ಗೆಯಂತೂ ಎರಡು ಮಾತಿಲ್ಲ. ಬೇಸಿಗೆಯಲ್ಲಿ ಇಲ್ಲಿನ ವಿಶೇಷ ಹಲಸಿನಕಾಯಿ ಹುಳಿ ಮಳೆಗಾಲದಲ್ಲಿ ಮಂಗಳೂರು ಸೌತೆಕಾಯಿ ಹುಳಿ.ಸವಿಯನ್ನು ಸವಿದೇ ಅನುಭವಿಸಬೇಕು.

ಇನ್ನು ಮೂಲತಃ ವಾದಿರಾಜರ ಮಠದಲ್ಲಿ ಒಟ್ಟು ಐದು ಬೃಂದಾವನಗಳಿವೆ. ಮಧ್ಯದಲ್ಲಿರುವ ಬೃಂದಾವನವು ವಾದಿರಾಜರದ್ದಾಗಿದ್ದರೆ ಅದರ ಎಡ ಹಾಗೂ ಬಲಕ್ಕಿರುವ ಎರಡೆರಡು ಬೃಂದಾವನಗಳು ಬ್ರಹ್ಮ, ವಿಷ್ಣು, ಶಿವ ಹಾಗೂ ವಾಯುವನ್ನು ಪ್ರತಿನಿಧಿಸುತ್ತವೆ.

ಮಠದ ಆವರಣದಲ್ಲಿ ಎರಡು ಕಲ್ಯಾಣಿಗಳಿದ್ದು ಅವುಗಳು ಧವಳಗಂಗಾ ಹಾಗೂ ಶೀತಲಗಂಗಾ ಎಂಬ ಹೆಸರುಗಳಿಂದ ಕರೆಯಲ್ಪಡುತ್ತವೆ. ಎರಡೂ ಕಲ್ಯಾಣಿಯ ನೀರು ಬಲು ಪವಿತ್ರವಾದುದೆಂದು ನಂಬಲಾಗುತ್ತದೆ. ಈ ಪವಿತ್ರ ನೀರಿನಲ್ಲಿನ ಸ್ನಾನವು ಪಾಪ ಕಮ್ರಗಳ ಜೂತೆಗೆ ಆರೋಗ್ಯದ ತೊಂದರೆಗಳನ್ನೂ ಸಹ ನಾಶಪಡಿಸುತ್ತವೆ ಎನ್ನಲಾಗಿದೆ. ಈ ಎರಡೂ ಕೊಳಗಳಲ್ಲಿನ ನೀರು ಭಾರತದ ಎಲ್ಲ ನದಿಗಳ ಸಂಗಮದ ನೀರು ಎನ್ನಲಾಗುತ್ತದೆ. ಧವಳಗಂಗಾ ಕಲ್ಯಾಣಿಯು ಮೂರು ಮೂಲೆಗಳನ್ನು ಹೊಂದಿದ್ದು ಅದರಲ್ಲಿ ಎರಡು ಮೂಲೆಗಳನ್ನು ಮಾತ್ರವೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿಡಲಾಗಿದೆ. ಮೂರನೇಯ ಮೂಲೆಗೆ ಪ್ರವೇಶಿಸಲು ಅನುಮತಿಯಿಲ್ಲ ಹಾಗೂ ಈ ಮೂಲೆಯು ಭೂತರಾಜರು ಮಾತ್ರವೆ ಉಪಯೋಗಿಸುತ್ತಾರೆಂಬ ಪ್ರತೀತಿಯಿದೆ. ಇನ್ನುಳಿದಂತೆ ವಾದಿರಾಜರಿಂದ ಪ್ರತಿಷ್ಠಾಪಿತ ಚಂದ್ರಮೌಳೀಶ್ವರ, ಆಂಜನೇಯ, ವೇಣುಗೋಪಾಲಸ್ವಾಮಿಯರ ಸನ್ನಿಧಿಗಳು ಹಾಗೂ ಮಠದ ಆವರಣದಲ್ಲಿ ವೇದವ್ಯಾಸರ ಚಿಕ್ಕ ದೇಗುಲ ಮತ್ತು ನಾಗಗಳಿಗೆ ಮುಡಿಪಾದ ನಾಗವನವಿದೆ.

***

ವಾದಿರಾಜರು

ವಾದಿರಾಜರು (ಕ್ರಿ.ಶ. ೧೪೮೦ - ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.

ವಾದಿರಾಜರು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾರೋಹಣ ಮಾಡಿ ಈ ಭರತ ಭೂಮಿಯಲ್ಲಿ 120 ವರ್ಷಗಳ ಕಾಲ ಬಾಳಿ ನಮ್ಮನ್ನು ಪುನೀತರನ್ನಾಗಿ ಮಾಡಿದ ಯತಿವರೇಣ್ಯರು ನಮ್ಮ ಶ್ರೀ ವಾದಿರಾಜರು. ಕ್ರಿಶ 1480- ಕ್ರಿಶ. 1600 ರ ಈ ಸಮಯದಲ್ಲಿ ಅವರು ಮಾಡಿದ ಸಮಾಜ ಸುಧಾರಣೆಗಳು, ಧಾರ್ಮಿಕ ಕಾರ್ಯಗಳು ಅಲೌಕಿಕವಾದದ್ದು ಹಾಗೂ ಅಸಾಮಾನ್ಯವಾದುದು. ಉಡುಪಿ ಜಿಲ್ಲೆಯ  ಕುಂಭಾಸಿಯ ಹತ್ತಿರ ಹೂವಿನಕೆರೆ ಎಂಬ ಚಿಕ್ಕ ಗ್ರಾಮದಲ್ಲಿ ದೇವರ ರಾಮಭಟ್ಟ ಮತ್ತು ಗೌರಿದೇವಿ ದಂಪತಿಗಳ ಮೊದಲ ಸಂತಾನ ಶ್ರೀ ವಾದಿರಾಜರು. ಅತ್ಯುತ್ತಮ ವಾಗ್ಮಿಗಳು, ಅದ್ಭುತ ಗ್ರಂಥರಚನಕಾರರು ಹಾಗೂ ಅದ್ವಿತೀಯ ಸಮಾಜ ಸುಧಾರಕರು. ಸಂಸ್ಕೃತ ಮತ್ತು ಕನ್ನಡದಲ್ಲಿ ಅದ್ಭುತ ಗ್ರಂಥಗಳನ್ನು ರಚಿಸಿದ ಇವರ ಮಹಿಮೆಗೆ ಎಣೆಯಿಲ್ಲ. ವಿಷಯಾನುಸಾರವಾಗಿ ಭಾಷೆ, ಅದಕ್ಕನುಗುಣವಾಗಿ ಭಾವನೆ ಎಲ್ಲವೂ ಮಿಳಿತವಾಗಿರುವುದು ಶ್ರೀ ವಾದಿರಾಜರ ಗ್ರಂಥಗಳಲ್ಲಿ. ಮಹಾನ್ ಶ್ರೇಷ್ಠ ದಾಸರಾದ ಶ್ರೀ ಕನಕದಾಸರಿಗೆ ಮನ್ನಣೆಯನ್ನು ನೀಡಿ ಉಡುಪಿಯಲ್ಲಿ ನೆಲೆ ನೀಡಿದವರು ಶ್ರೀ ವಾದಿರಾಜರು. ವಾದಿರಾಜ ಯತಿವರ್ಯರ ಆರಾಧ್ಯ ದೈವ ಹಯವದನ ಅಥವಾ ಹಯಗ್ರೀವ. ತಮ್ಮ ಎಂಟನೇಯ ವಯಸ್ಸಿನಲ್ಲೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ಈ ಮಹಾನುಭಾವರು 112 ವರ್ಷಗಳ ಕಾಲ ಸತತವಾಗಿ ದೈವ ಚಿಂತನೆ, ಹರಿ ಕೀರ್ತನೆ, ಧರ್ಮಪ್ರಸಾರ ಹಾಗೂ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಕುಡುಮ ಎಂದು ಕರೆಯಲ್ಪಡುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳ ಎಂದು ಹೆಸರು ಬದಲಿಸಿದವರು ಇದೇ ವಾದಿರಾಜರು.

ಸೋದೆ ಮಠದ ಪರಂಪರೆಯ ಯತಿಗಳಾದ ರಾಜರು ಉಡುಪಿಯ ಎರಡು ತಿಂಗಳ ಪೂಜಾ ಪದ್ಧತಿಯನ್ನು ಎರಡು ವರ್ಷಗಳ ಪದ್ಧತಿಯನ್ನಾಗಿ ಜಾರಿಗೆ ತಂದು ಪರ್ಯಾಯ ಮಹೋತ್ಸವಕ್ಕೆ ಹೆಚ್ಚಿನ ಮೆರುಗನ್ನು ನೀಡಿದರು. ಯತಿಗಳ ಮೂಲ ಆರೋಹಣಕ್ಕನುಸಾರವಾಗಿ ಫಲಿಮಾರು ಮಠದಿಂದ ಪರ್ಯಾಯ ಮಹೋತ್ಸವ ಪ್ರಾರಂಭವಾಗಿ ಆ ನಂತರ ಕ್ರಮಶಃ ಆರನೇಯವರಾಗಿ ಶ್ರೀ ವಾದಿರಾಜರು ಕ್ರಿ.ಶ.1532 ರಲ್ಲಿ ತಮ್ಮ ಮೊದಲ ಪರ್ಯಾಯ ಪೂಜೆಯನ್ನು ಆಚರಿಸಿದರು. ಕ್ರಿ.ಶ. 1580ರಲ್ಲಿ ಅವರ ನಾಲ್ಕನೆಯ ಮತ್ತು ಕೊನೆಯ ಪರ್ಯಾಯ. ಆಗ ಅವರಿಗೆ ೧೦೦ರ ವಯಸ್ಸು.

ವಾದಿರಾಜರು ತಮ್ಮ ವೃದ್ಧಾಪ್ಯದಲ್ಲಿ ಸೋದೆಯಲ್ಲಿ ವಾಸ ಮಾಡಿದರು. ಭಾರತೀಯ ಯತಿಗಳ ಇತಿಹಾಸದಲ್ಲಿ ಸಶರೀರವಾಗಿ ಬೃಂದಾವನ ಮಾಡಿದವರಲ್ಲಿ ವಾದಿರಾಜರು ಮೊದಲನೇಯವರು. 120 ವರ್ಷಗಳ ಅವರ ಜೀವಿತ ಕಾಲದಲ್ಲಿ ಅವರು ಮಾಡಿದ ಕೆಲಸಗಳು ಎಲ್ಲರಿಂದ ಮಾನ್ಯವಾಯಿತು. ಪಾಮರರನ್ನು ಉದ್ಧಾರ ಮಾಡಿದರು. ಸಂಸ್ಕೃತಕ್ಕೆ ಸಮನಾದ ಸ್ಥಾನವನ್ನು ಕನ್ನಡಕ್ಕೂ ಕೊಟ್ಟು ಉದ್ಧಾರ ಮಾಡಿದರು.ಶ್ರೀ ವಾದಿರಾಜರು ಕ್ರಿ.ಶ. 1600 ಫಾಲ್ಗುಣ ಬಹುಳ ತೃತೀಯಾ ದಿವಸ ವೃಂದಾವನಸ್ಥರಾದ ಶ್ರೀ ವಾದಿರಾಜರು ಅಂದಿನಿ0ದ ಇಂದಿನವರೆಗೆ ಸೇವೆ ಮಾಡುವ ಭಕ್ತಾದಿಗಳಿಗೆ ವಿವಿಧ ಇಷ್ಟಾರ್ಥಗಳನ್ನು ನೀಡುತ್ತಿದ್ದಾರೆ. 

***

ಇಲ್ಲಿನ ಮುಖ್ಯ ದೇವರು ಶ್ರೀ ರಮಾತ್ರಿವಿಕ್ರಮ ದೇವರು, ಶ್ರೀ ವಾದಿರಾಜರು ಮತ್ತು ಶ್ರೀ ಭೂತರಾಜರು. ಶ್ರೀ ವಾದಿರಾಜರು ಯತಿಗಳು. ಅವರ ಮೂಲ ಬೃಂದಾವನ ಇಲ್ಲಿಯೇ ಇರುವುದು. ಪ್ರತಿನಿತ್ಯ ಪ್ರಾತಹ ಕಾಲದಲ್ಲಿ ಮತ್ತು ಸಂಧ್ಯಾಕಾಲದಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ. ಇಲ್ಲಿನ ವಿಶೇಷ ಪೂಜೆ ಎಂದರೆ ಭೂತರಾಜರಿಗೆ ಅನ್ನದ ಬಳಿ ಪೂಜೆ. ಬೇಸಿಗೆ ಕಾಲದಲ್ಲಿ ರಮಾತ್ರಿವಿಕ್ರಮ ದೇವಸ್ಥಾನದ ಮುಂಭಾಗದಲ್ಲಿ ಇರುವ ವಿಶೇಷ ಪೀಠದಲ್ಲಿ ಈ ಪೂಜೆ ನೆರವೇರಿಸಲಾಗುವುದು. ಮಳೆಗಾಲದಲ್ಲಿ ಅಲ್ಲಿ ನಡೆಸಲು ಆಗದ ಕಾರಣ ಭೂತರಾಜರ ಗುಡಿಯ ಮುಂದೆಯೇ ಮಾಡುತ್ತಾರೆ. ಎರಡು ಅಡಿಯಷ್ಟು ಎತ್ತರಕ್ಕೆ ಅನ್ನದ ರಾಶಿ ಹಾಕಿ ಅದಕ್ಕೆ ಕುಂಕುಮದ ನೀರನ್ನು ಕಲಸಿ ಅನ್ನದ ರಾಶಿಗೆ ಆ ನೀರನ್ನು ಹಾಕಿ ಕೆಂಪನೆ ಬಣ್ಣದ ರಾಶಿ ಮಾಡಿ ಅದಕ್ಕೆ ಒಡೆದ ತೆಂಗಿನ ಕಾಯಿಯನ್ನು ಕಣ್ಣಿನಂತೆ ಇತ್ತು ಅದಕ್ಕೊಂದು ರೂಪ ಕೊಟ್ಟು ಅದರ ಮುಂದೆ ಕುಳಿತು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರದಲ್ಲಿ ಒಂದು ಪಂಜನ್ನು ಸಿದ್ಧಮಾಡಿ ಅದರಿಂದಲೇ ಆರತಿ ಮಾಡಿ ನಂತರ ಕಲಸಿದ್ದ ಕುಂಕುಮದ ನೀರನ್ನು ಆ ಪಂಜಿನ ಮೂಲಕ ನೆರೆದಿದ್ದ ಭಕ್ತರ ಮೇಲೆ ಪ್ರೋಕ್ಷಣೆ ಮಾಡುತ್ತಾರೆ. ನಂತರ ಅದೇ ನೀರನ್ನು ತೀರ್ಥವನ್ನಾಗಿ ನೀಡುತ್ತಾರೆ. ಪ್ರತಿದಿನವೂ ಈ ಪೂಜೆ ನಡೆದರೂ ಹುಣ್ಣಿಮೆಯಂದು ಬಹಳ ವಿಶೇಷ ಈ ಪೂಜೆಗೆ.

ಶ್ರೀ ಭೂತರಾಜರು

ಒಮ್ಮೆ ವ್ಯಾಸರಾಜರು ಮಠಕ್ಕೆ ಭೇಟಿ ಕೊಟ್ಟರು. ಅಂದು ದ್ವಾದಶಿ. ವಾದಿರಾಜರು ಇನ್ನೇನು ಪೂಜೆಗೆ ಕೂಡಬೇಕು. ಅಷ್ಟರಲ್ಲಿ ಭೋಜನಕ್ಕೆ ಕುಳಿತ ವ್ಯಾಸರಾಜರು ವಾದಿರಾಜರನ್ನು ಕುರಿತು "ರಾಜರು ಬರದೆ ನಾವು ಹೇಗೆ ಭೋಜನ ಸ್ವೀಕರಿಸುವುದು ಅವರು ಬಂದು ಇಲ್ಲೇ ಪಕ್ಕದಲ್ಲೇ ಕುಳಿತುಕೊಳ್ಳಲಿ" ಎಂದರು. ಅದರಂತೆಯೇ ವಾದಿರಾಜರು ಬಂದು ವ್ಯಾಸರಾಜರ ಪಕ್ಕದಲ್ಲಿ ಕುಳಿತು ಭೋಜನ ಮುಗಿಸಿ ನಂತರ ತಮ್ಮ ಶಿಷ್ಯ ವೃಂದಕ್ಕೆ ಹೇಳಿದರು ನೀವೆಲ್ಲ ಇಲ್ಲೇ ಇರಿ ನಾನು ಈಗಲೇ ಬರುತ್ತೇನೆ ಎಂದು ಹೇಳಿ ಹೊರಟರು. ಅವರು ಸೀದಾ ಬಂದು ತಲುಪಿದ್ದು ಶಾಲ್ಮಲಿ ನದಿಯ ಬಳಿಗೆ. ನದಿಯ ಬಳಿಗೆ ಬಂದವರೇ ಒಂದು ದೊಡ್ಡ ಎಲೆಯನ್ನು ತಮ್ಮ ಮುಂದೆ ಇಟ್ಟುಕೊಂಡು ಕುಳಿತರು. ತಾವು ಮಠದಲ್ಲಿ ಮಾಡಿದ ಅಷ್ಟು ಊಟವನ್ನು ಮತ್ತೆ ಎಲೆ ಮೇಲೆ ತಂದರು. ಅದು ಬಡಿಸಿದಾಗ ಹೇಗಿತ್ತೋ ಹಾಗೆಯೇ ಇತ್ತು. ಒಂದು ಚೂರು ಜೀರ್ಣವಾಗಿರಲಿಲ್ಲ. ಇದೆಲ್ಲಾ ಅವರ ಯೋಗಶಕ್ತಿಯಿಂದ ಸಾಧ್ಯವಾಯಿತು. ನಂತರ ಮತ್ತೆ ಸ್ನಾನ ಮಾಡಿ ಪೂಜೆ ಮುಗಿಸಿ ನಂತರ ಬಂದು ಭೋಜನ ಮುಗಿಸಿದರು. ಇದೆಲ್ಲವನ್ನು ಅವರನ್ನೇ ಹಿಂಬಾಲಿಸಿಕೊಂಡು ಬಂದ ಅವರ ಶಿಷ್ಯ ನಾರಾಯಣ ಶರ್ಮ ದೂರದಿಂದ ಮರದ ಮೇಲೊಂದರ ಮೇಲೆ ಹತ್ತಿ ನೋಡುತ್ತಿದ್ದ. ವಾಪಸ್ ಮಠದ ಕಡೆ ಹೊರಟಿದ್ದ ವಾದಿರಾಜರಿಗೆ ಅಡ್ಡ ಬಂದ ನಾರಾಯಣ ಶರ್ಮ ಗುರುಗಳೇ ನೀವು ಮಾಡಿದ್ದೆಲ್ಲವನ್ನೂ ನಾನು ನೋಡಿದೆ ಎಂದಾಗ ಕುಪಿತಗೊಂಡ ವಾದಿರಾಜರು ಅವನನ್ನು ಶಪಿಸಿಬಿಟ್ಟರು. ಕೂಡಲೇ ಅವನು ರಾಕ್ಷಸರೂಪಿಯಾಗಿಬಿಟ್ಟ.


ತನ್ನ ತಪ್ಪಿನ ಅರಿವಾದ ನಾರಾಯಣ ಶರ್ಮ ಶಾಪದ ಪರಿಹಾರವೆನೆಂದು ಕೇಳಲು ವಾದಿರಾಜರು ಹೇಳಿದರು ನೀನು ಕಾಡುಗಳಲ್ಲಿ ತಿರುಗುತ್ತ ದಾರಿಹೋಕರಲ್ಲಿ "ಆ ಕಾ ಮಾ ವೈ ಕೋ ನಾ ಸ್ನಾತಹ" ಎಂದು ಕೇಳು ಯಾರು ನಿನಗೆ ಉತ್ತರ ನೀಡುತ್ತಾರೋ ಅಂದು ನಿನಗೆ ಶಾಪ ವಿಮೋಚನೆ ಎಂದು ಹೇಳಿದರು. ಅಂದಿನಿಂದ ನಾರಾಯಣ ಶರ್ಮನು ಕಾಡುಗಳಲ್ಲಿ ಅಲೆಯುತ್ತ ದಾರಿಹೋಕರಲ್ಲಿ ತನ್ನ ಪ್ರಶ್ನೆಯನ್ನು ಕೆಳುತ್ತಿದ್ದನು. ಆದರೆ ಯಾರಿಂದಲೂ ಉತ್ತರ ದೊರಕುತ್ತಿರಲಿಲ್ಲ. ಹಾಗೆಯೇ ತನ್ನ ರಾಕ್ಷಸ ಗುಣದಿಂದಾಗಿ ದಾರಿಹೋಕರನ್ನು ಕೊಂದು ತಿನ್ನುತ್ತಿದ್ದನು. ತನ್ನ ಶಿಷ್ಯನ ಗತಿ ಕೇಳಿ ವಾದಿರಾಜರು ಮರುಗಿ ತಾವೇ ಕಾಡಿಗೆ ಹೊರಟರು. ಆಗ ಆ ನಾರಾಯಣಭೂತ ರಾಜರನ್ನೇ ಆ ಪ್ರಶ್ನೆ ಕೇಳಿದಾಗ "ರಂಡ ಪುತ್ರ ತ್ವಮ ನ ಸ್ನಾತಹ" (ಅಂದರೆ ವ್ಯಭಿಚಾರಿಯ ಮಗನು ಅಥವಾ ನಿನ್ನಂಥ ಬ್ರಹ್ಮರಾಕ್ಷಸನು ಆಶ್ವಯುಜ, ಕಾರ್ತೀಕ, ಮಾಘ, ವೈಶಾಖ ಮಾಸಗಳಲ್ಲಿ ಸ್ನಾನ ಮಾಡುವುದಿಲ್ಲ) ಎಂದ ಕೂಡಲೇ ಆತನಿಗೆ ಶಾಪ ವಿಮೋಚನೆಯಾಯಿತು. ಈಗ ಅವನು ತನ್ನ ಪೂರ್ವ ಜನ್ಮದ ಪ್ರತಾಪ ರುದ್ರನ ಅವತಾರ ತಾಳಿದ್ದನು. ಶಾಪ ವಿಮೋಚನೆ ಯಿಂದ ಆತನ ದೇಹ ಪ್ರಖರವಾಗಿ ಹೊಳೆಯುತ್ತಿತ್ತು. ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಜ್ವಲಿಸುತ್ತಿತ್ತು. ಶಾಪ ವಿಮೋಚನೆ ಮಾಡಿದ ವಾದಿರಾಜರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರತಾಪ ರುದ್ರನು ತಮಗೆ ನಾನು ಶಾಶ್ವತವಾಗಿ ಸೇವೆ ಮಾಡಬೇಕೆಂದು ಹಂಬಲವಾಗಿದೆ ಎಂದು ತಿಳಿಸಿದರು. ವಾದಿರಾಜರು ಅವರನ್ನು ಹರಸುತ್ತ ನೀನು ಭಾವೀರುದ್ರನಾಗಿ ಸೋದೆಯ ಕ್ಷೇತ್ರಪಾಲಕನಾಗಿ ಮುಂದೆ ಭೂತರಾಜರು ಎಂದು ಪ್ರಸಿದ್ಧಿ ಪಡೆಯುತ್ತೀಯ ಎಂದರು. ಅಂದಿನಿಂದ ಭೂತರಾಜರು ವಾದಿರಾಜರಿಗೆ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಒಮ್ಮೆ ವಾದಿರಾಜರು ಭೂತರಾಜರಿಗೆ ಬದರಿಕಾಶ್ರಮದಲ್ಲಿ ಇರುವ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಪೂಜೆಗಾಗಿ ತರಲು ಹೇಳಿದಾಗ ಕೂಡಲೇ ಹೊರಟ ಭೂತರಾಜರು ಬದರಿಕಾಶ್ರಮದಿಂದ ತಮ್ಮ ರಥದಲ್ಲಿ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಆಕಾಶಮಾರ್ಗದಲ್ಲಿ ಬರುತ್ತಿದ್ದಾಗ ದೈತ್ಯನೊಬ್ಬನು ಎದುರಾದನು. ವಾದಿರಾಜರು ಹೇಳಿದ ಮುಹೂರ್ತದಲ್ಲಿ ಅಲ್ಲಿರಬೇಕೆಂದು ಯೋಚಿಸಿ ಭೂತರಾಜರು ಸಮಯ ವ್ಯರ್ಥ ಮಾಡದೆ ತಮ್ಮ ರಥದ ಒಂದು ಚಕ್ರವನ್ನು ಕಿತ್ತು ಆ ದೈತ್ಯನ ಮೇಲೆ ಎಸೆದಾಗ ಆತ ಕೂಡಲೇ ಅಸುನೀಗಿದ. ವಿಗ್ರಹವನ್ನು ಹೊತ್ತ ಭೂತರಾಜರು ಸೋದೆಯಲ್ಲಿ ಬಂದಿಳಿದಾಗ ವಾದಿರಾಜರು ಆ ವಿಗ್ರಹವನ್ನು ಅಲ್ಲೇ ಸ್ಥಾಪಿಸುತ್ತ ಇದು ಕಲಿಯುಗವಾದ್ದರಿಂದ ಈ ಬಂಗಾರದ ರಥ ಹಾಗೆಯೇ ಈ ಬಂಗಾರದ ವಿಗ್ರಹ ಎರಡೂ ಕಲ್ಲಿನ ರೂಪದಲ್ಲಿ ಇರುತ್ತದೆ ಎಂದರು.

ಇಂದಿಗೂ ನೀವು ಸೋದೆಯಲ್ಲಿ ಆ ಒಂದು ಚಕ್ರವಿಲ್ಲದ ರಥವನ್ನು ನೋಡಬಹುದು.

ಆಚರಣೆ ಮತ್ತು ಸೇವಾ ಪದ್ಧತಿ

ಈ ಕ್ಷೇತ್ರದ ಪದ್ಧತಿಯಂತೆ ಇಲ್ಲಿಗೆ ಬಂದ ಕೂಡಲೇ ಮಾಡಬೇಕಾದ ಕೆಲಸವೆಂದರೆ ಭೂತರಾಜರ ಸನ್ನಿಧಿಯಲ್ಲಿ ತೆಂಗಿನ ಕಾಯಿ ಉರುಳಿಸುವುದು. ನೀವು ನಿಮ್ಮ ಸ್ವಂತ ವಾಹನದಲ್ಲಿ ಬಂದಿದ್ದರೆ ಚಕ್ರಕ್ಕೊಂದು ಎಂಬಂತೆ ಕಾಯಿ ಉರುಳಿಸಬೇಕು. ಇನ್ನು ಇಲ್ಲಿನ ವಿಶೇಷ ಸೇವಾ ಪದ್ಧತಿ ಎಂದರೆ ಕಾಯಿ ಕಟ್ಟಿಕೊಂಡು ಸೇವೆ ಮಾಡುವುದು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಸೇವೆಯನ್ನು ಮಾಡುವರು. ಇಲ್ಲಿ ಸೇವೆ ಮಾಡಿ ನಿಶ್ಚಿತ ಫಲ ಕಂಡವರು ಬಹಳಷ್ಟು ಮಂದಿ ಇದ್ದಾರೆ. ಈಗಲೂ ಕಾಣುತ್ತಿದ್ದರೆ. ಈ ಸೇವೆಯ ರೀತಿ ಹೀಗಿದೆ.

ಮೊದಲಿಗೆ ಧವಳಗಂಗೆಯಲ್ಲಿ ಮಿಂದು ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಬಂದು ವಾದಿರಾಜರ ಬೃಂದಾವನದ ಬಳಿ ಬಂದರೆ ಅಲ್ಲಿ ಅರ್ಚಕರು ಬಂದು ಆ ಕಾಯನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿ ತಂದುಕೊಡುತ್ತಾರೆ. ಆ ಸಮಯದಿಂದ ಆ ಕಾಯನ್ನು ನೆಲಕ್ಕೆ ತಾಗಿಸುವಂತಿಲ್ಲ. ಹಾಗೆಯೇ ಆ ಕಾಯನ್ನು ತೆಗೆದುಕೊಂಡು ಹೋಗಿ ಒಂದು ವಸ್ತ್ರದಲ್ಲಿ ಕಟ್ಟಿ ನಿಮ್ಮ ಟೊಂಕಕ್ಕೆ ಕಟ್ಟಿಕೊಳ್ಳಬೇಕು. ನಂತರ ಧವಳಗಂಗೆಯಲ್ಲಿ ಏಳು ಬಾರಿ ಮುಳುಗಿ ಮೇಲಕ್ಕೆ ಬಂದು ಮೈ ಒರೆಸಿಕೊಳ್ಳಬಾರದು. ಹಾಗೆಯೇ ಬಟ್ಟೆಯಿಂದ ನೀರನ್ನು ಮಾತ್ರ ಹಿಂಡಿ ಅದೇ ಒದ್ದೆ ಬಟ್ಟೆಯಲ್ಲಿ ಹೆಂಗಸರು ಹಣೆಗೆ ಕುಂಕುಮ ಇಟ್ಟುಕೊಂಡು, ಗಂಡಸರು ಗೋಪಿಚಂದನವನ್ನು ಹಚ್ಚಿಕೊಂಡು ಮೊದಲಿಗೆ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರಿಗೆ ನಮಸ್ಕಾರ ಹಾಕಿ ಎಡಕ್ಕೆ ತಿರುಗಿದರೆ ತುಳಸಿ ಬೃಂದಾವನ ಇದೆ ಅದಕ್ಕೆ ನಮಸ್ಕಾರ ಹಾಕಿ, ಪ್ರದಕ್ಷಿಣೆ ರೀತಿಯಲ್ಲಿ ಬಂದರೆ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ ಅದಕ್ಕೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಸಂತಾನ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ. ಅಲ್ಲೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಅರಳಿ ಕಟ್ಟೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೇದ ಮಂದಿರ ಅಲ್ಲೊಂದು ನಮಸ್ಕಾರ ಹಾಕಿ ಹಾಗೆಯೇ ಹೊರಗಿನಿಂದಲೇ ವಾದಿರಾಜರಿಗೆ ನಮಸ್ಕಾರ ಹಾಕಿ ಮುಂದಕ್ಕೆ ಸಾಗಿದರೆ ಅಲ್ಲಿ ಯತಿಗಳ ಬ್ರುಂದಾವನಗಳಿವೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ನಾಗಬನ ಅಲ್ಲೊಂದು ನಮಸ್ಕಾರ, ಮುಂದೆ ಪಾಪ ವಿಮೋಚನಾ ತೀರ್ಥ ಅಲ್ಲೊಂದು ನಮಸ್ಕಾರ, ನಂತರ ಹೊರಗಿನಿಂದಲೇ ಭೂತರಾಜರಿಗೆ ನಮಸ್ಕಾರ ಹಾಕಿ ಮುಂದೆ ಬಂದರೆ ಚಂದ್ರಮೌಳೇಶ್ವರ ಸನ್ನಿಧಿ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೀಣೆ ಸಹಿತ ಮುಖ್ಯಪ್ರಾಣ ದೇವರು ಅಲ್ಲಿಗೆ ಒಂದು ನಮಸ್ಕಾರ ಹಾಕಿದರೆ ಒಂದು ಸುತ್ತು ಮುಗಿದಂತೆ. ಇದೆ ಪದ್ಧತಿಯಲ್ಲಿ ಒಟ್ಟು ಏಳು ಸುತ್ತು ಪ್ರದಕ್ಷಿಣೆ ಹಾಕಬೇಕು. ಅಂದರೆ ಒಟ್ಟು ೪೯ ಸಲ ಮುಳುಗಬೇಕು. ಏಳು ಪ್ರದಕ್ಷಿಣೆಯ ನಂತರ ಮೇಲಕ್ಕೆ ಬಂದು ರಮಾತ್ರಿವಿಕ್ರಮ ದೇವರಿಗೆ ತಮ್ಮ ಶಕ್ತ್ಯಾನುಸಾರ ಪ್ರದಕ್ಷಿಣೆ ನಮಸ್ಕಾರ ಹಾಕಬೇಕು. ನಂತರ ಧವಳಗಂಗೆ ಬಲೆ ಬಂದು ಟೊಂಕಕ್ಕೆ ಕಟ್ಟಿದ್ದ ಆ ಕಾಯನ್ನು ವಸ್ತ್ರದ ಸಮೇತ ಹಾಗೆಯೇ ಬಿಚ್ಚಿ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರ ಗುಡಿಯ ಕಟ್ಟಡಕ್ಕೆ ಇರುವ ಕಂಬಿಗಳಿಗೆ ಕಟ್ಟಬೇಕು. ನಂತರ ಸ್ನಾನ ಮಾಡಿ ಒಣಗಿದ ವಸ್ತ್ರವನ್ನು ಉಟ್ಟಿ ವಾದಿರಾಜರ ಸನ್ನಿಧಿಗೆ ಬಂದು ೧೦೮ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಬೇಕು. ಇಲ್ಲೂ ಅಷ್ಟೇ ಶಕ್ತಿ ಇದ್ದರೆ ಒಮ್ಮೆಲೇ ೧೦೮ ಹಾಕಬಹುದು ಇಲ್ಲದ್ದಿದ್ದರೆ ಊಟವಾದ ನಂತರವೂ ಹಾಕಬಹುದು. ಇಷ್ಟು ಮಾಡಿದರೆ ಒಂದು ದಿನದ ಸೇವೆ ಮುಗಿಯುವುದು. ಈ ರೀತಿ ೩,೫,೭ ಹೀಗೆ ಬೆಸ ಸಂಖ್ಯೆಯಲ್ಲಿ ತಮ್ಮ ಶಕ್ತ್ಯಾನುಸಾರ ದಿನಗಳಷ್ಟು ಸೇವೆ ಮಾಡಬಹುದು. ಸೇವೆ ಮಾಡುವ ಅಷ್ಟು ದಿವಸ ಪಾಲಿಸಬೇಕಾದ ನಿಯಮಗಳೆಂದರೆ ಒಂದೇ ಹೊತ್ತು ಊಟ, ರಾತಿಯ ಹೊತ್ತು ಫಲಾಹಾರ ಸೇವಿಸಬೇಕು, ಮಧ್ಯಾಹ್ನ ಮಲಗಬಾರದು, ಕಾಲಿಗೆ ಚಪ್ಪಲಿ ತೊಡಬಾರದು, ತಲೆಗೆ ಎಣ್ಣೆ ಹಚ್ಹ ಬಾರದು, ಮುಖ್ಯವಾಗಿ ಆ ಸ್ಥಳ ಬಿಟ್ಟು ಹೊರಗೆ ಹೋಗಬಾರದು. ಹೀಗೆ ತಾವು ಅಂದುಕೊಂಡಷ್ಟು ದಿನಗಳ ಕಾಲ ಸೇವೆಯನ್ನು ಮುಗಿಸಿದ ಮೇಲೆ ಅಂದರೆ ಮೂರು ದಿವಸ ಸೇವೆ ಇದ್ದರೆ ನಾಲ್ಕನೇ ದಿವಸ ಬೆಳಿಗ್ಗೆ ಆ ಸ್ನಾನ ಮಾಡಿ ಆ ಕಾಯನ್ನು ಬಿಚ್ಚಿಕೊಂಡು ಮರಳಿ ವಾದಿರಾಜರ ಸನ್ನಿಧಿಗೆ ಬಂದು ಅರ್ಚಕರ ಕೈಗೆ ಕೊಟ್ಟರೆ ಅವರು ಪುನಃ ಬೃಂದಾವನದ ಬಳಿ ಇಟ್ಟು ಪೂಜಿಸಿ ಕೊಡುತ್ತಾರೆ. ನಂತರ ಊರಿಗೆ ಮರಳಿದ ಮೇಲೆ ಆ ಕಾಯಿಂದ ಏನಾದರೂ ಸಿಹಿಯನ್ನು ಮಾಡಿ ಪ್ರಸಾದವಾಗಿ ಸ್ವೀಕರಿಸಬೇಕು.

ಭೂತರಾಜರ ಸ್ತೋತ್ರ -

"ರಕ್ತಂ ವಿಚಿತ್ರವಸನಂ ಮಣಿಕುಂಡಲಾಡ್ಯಂ ಬಂದೂಕಪುಷ್ಪ ಸದ್ರುಶಾಧಾರ ಪಾಣಿಪಾದಂ

ಉದ್ಯದ್ದಿನೇಶ ಕರುಣಾರುಣ ದೇಹಭಾಜಾಂ ನಾರಾಯಣಂ ನಮತಾಂ ಚಾಪಶರಾನ್ ಧಧಾನಂ"

ವಾದಿರಾಜ ಪಾಹಿಮಾಂ ಭೂತರಾಜ ರಕ್ಷಮಾಂx`


1 comment:

  1. ಶ್ರೀ ಗಂಗಾ ವಿಶ್ವೇಶ್ವರ ಸಭಾಭವನ ಆಲದಕೆರೆ ಗೋಕರ್ಣ
    devastanada bagge adara mahatva yenadaru iddare tilisabe antha vinanthisi koluttene

    ReplyDelete