Friday, June 24, 2022

’ಮಂಗಳಮುಖಿಯರ ಸಂಗದಲ್ಲಿ’ ಹಿಜಡಾ ಜಗತ್ತಿನ ಅನಾವರಣ

’ಮಂಗಳಮುಖಿಯರ ಸಂಗದಲ್ಲಿ’ ಲೇಖಕ ಸಂತೋಷ್ ಕುಮಾರ್ ಮೆಹಂದಳೆಯವರ ಮತ್ಫ಼್ತೊಂದು ಮಹತ್ವದ ಕೃತಿ. ಸಮಾಜದಲ್ಲಿ ಪುರುಷ ಮತ್ತು ಸ್ತ್ರೀಯರು ಮಾತ್ರ ಇರೋದಲ್ಲ ಅವರ ಹೊರತಾಗಿ ಇನ್ನೊಂದು ವರ್ಗ ಇದೆ, ಅವರೂ ನಮ್ಮಂತೆಯೇ ಮನುಷ್ಯರು, ಅವರ ಜೀವನದಲ್ಲಿ ಅವರು ಮಾಡದಿರೋ ತಪ್ಪಿಗೆ ಸುದೀರ್ಘಕಾಲ ಶಿಷೆ ಅನುಭವಿಸುವವರು ಇದ್ದರೆ ಅದು ಮಂಗಳಮುಖಿಗಳು. ಇಂತಹಾ ಮಂಗಳಮುಳಿಗಳ ಬಗ್ಗೆ ಕನ್ನಡದಲ್ಲಿ ಇದುವರೆಗೆ ಬಹುಶಃ ಇಷ್ಟೊಂದು ವಿವರವಾಗಿ ತಿಳಿಸುವ ಪುಸ್ತಕ ಬಂದಿರಲಿಕ್ಕಿಲ್ಲ ಸಂತೋಷ್ ಕುಮಾರ್ ಮೆಹಂದಳೆ ಅವರು “ಮಂಗಳಮುಖಿಯರ ಸಂಗದಲ್ಲಿ” ಹಿಜಡಾ  ಜಗತ್ತಿನ ಅನುಭವ ಕಥನ ಪುಸ್ತಕವು ಸ್ನೇಹ ಬುಕ್ ಹೌಸ್ ಬೆಂಗಳೂರು ಇವರ ಪ್ರಕಾಶನದಿಂದ ಮುದ್ರಣಗೊಂಡು  2022 ರಲ್ಲಿ ಕನ್ನಡ ಸಾರಸ್ವತ‌ ಲೋಕ ಸೇರಿದೆ. 

ದೇವರ ಸೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎನ್ನುವ ನಾವುಗಳೇ ಮಂಗಳಮುಖಿಯರನ್ನು ಕಂಡರೆ ಯಾವುದೋ ’ವಿಚಿತ್ರ ಜೀವಿ’ಯ ಕಂಡಂತೆ ಭಾವಿಸುತ್ತೇವೆ. ವಿಭಿನ್ನ ಶರೀರ ಮತ್ತು ವೈರುಧ್ಯದ ಮನೋಸ್ಥಿತಿಯನ್ನು ಹೊಂದಿ,  ಊಹಿಸಲೂ ಸಾಧ್ಯವಿಲ್ಲದ ಕಷ್ಟಕಾರ್ಪಣ್ಯದ ಬದುಕಿಗೆ ತಮ್ಮನ್ನು ತಾವು  ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುವವವರಿಗೆ ನಾವು ಸಹಾನುಬೂತಿಯನ್ನು ತೋರಬೇಕೆ ಹೊರತು ನಿರ್ಲಕ್ಷ ಅಥವಾ ಅಸಡ್ಡೆಯನ್ನಲ್ಲ ಎನ್ನುವುದನ್ನು ಮೆಹಂದಳೆ ಈ ಪುಸ್ತಕದ ಪುಟ ಪುಟದಲ್ಲಿಯೂ ಹೇಳಿದ್ದಾರೆ. ಹದಿಹರೆಯದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಬದಲಾಗುತ್ತಿರುವ ಮಕ್ಕಳಿಗೆ, ಸೂಕ್ತ ಸಮಯದಲ್ಲಿ ಮಾರ್ಗದರ್ಶನ, ಪ್ರೀತಿ ಲಭಿಸಬೇಕಿದೆ, ಅದು ಮನೆಯಿಂದಲೇ ಪ್ರಾರಂಭವಾಗಬೇಕು ಎನ್ನುವುದು ಲೇಖಕರ ಆಂಬೋಣ. 

ಈ ಪುಸ್ತಕವನ್ನೋದಿದ ನನಗೆ ಮಂಗಳಮುಖಿಯರ ಇಡೀ ಜಗತ್ತಿನಲ್ಲಿ ಒಂದು ಸುತ್ತು ಹಾಕಿ ಬಂದ ಅನುಭವವಾಗಿದ್ದು ಸುಳ್ಳಲ್ಲ. ಮಂಗಳಮುಖಿಯರು, ಹೇಗಿರುತ್ತಾರೆ, ಹೇಗೆ ಜೀವನ ಸಾಗಿಸುತ್ತಾರೆ ಎನ್ನುವದನ್ನು ಇಷ್ಟು ಸರಳವಾಗಿರುವ ಶೈಲಿಯಲ್ಲಿ ಅದ್ಭುತ ನಿರೂಪಣೆಯೊಂದಿಗೆ, ಸೂಕ್ಷ್ಮಗ್ರಾಹಿಯಾಗಿ, ಯಾರ ಮನಸ್ಸಿಗೂ ನೋವಾಗದಂತೆ, ಅತಿ ಸೂಕ್ಷ್ಮ ವಸ್ತು ವಿಷಯವನ್ನು ಬಹಳ ಜಾಣ್ಮೆಯಿಂದ, ವೈಜ್ಞಾನಿಕ ಆಧಾರಗಳು ,ನಿರ್ದಿಷ್ಟ ಮಾಹಿತಿಯೊಂದಿಗೆ ಪ್ರಾಯೋಗಿಕ ಹಾಗೂ ಕ್ಷೇತ್ರಭೇಟಿ ಅಡಿಯಲ್ಲಿ ರಚಿಸುವುದು ಸುಅಲಭವೇನಲ್ಲ.

17 ಅಧ್ಯಾಯಗಳಲ್ಲಿ ವಿವಿಧ ಶೀರ್ಷಿಕೆಗಳಲ್ಲಿತೃತೀಯ ಲಿಂಗಿಗಳ ಕುರಿತ ಮಾಹಿತಿ ಸವಿಸ್ತಾರವಾಗಿ ಮೂಡಿಬಂದಿದ್ದು ಈ ಹಿಂದೆ ದಿ. ಸಂಚಾರಿ ವಿಜಯ್ ಅವರ ’ನಾನು ಅವನಲ್ಲ ಅವಳ್’ ಚಿತ್ರ ವೀಕ್ಷಿಸಿದ್ದ ನನಗಿದ್ದ ಅನೇಕ ಸಂದೇಹಗಳಿಗೆ ಪರಿಹಾರ, ಉತ್ತರ ನೀಡಿತು.

ಶತ ಶತಮಾನಗಳಿಂದ ನಮ್ಮ ನಡುವಿದ್ದೂ ನಮ್ಮ ಸಮಾಜದ ಮುಖ್ಯ ವಾಹಿನಿಯಿಂದ ಪ್ರತ್ಯೇಕವಾಗಿಯೇ ಇರುವ ಇಂತಹಾ ಮಂಗಳಮುಇಯರ ಬದುಕಿನ ಬಗ್ಗೆ ಮೆಹಂದಳೆಯವರ ಈ ಬರಹ ಅತ್ಯಂತ ಮಹತ್ವದ್ದಾಗಿದೆ. ಶಿವ ಜ್ಯೋತಿಯಾಗಿ ಬದಲಾಗುವ ಕಥೆ,  ದೇಹ ಒಂದು ಲಿಂಗ ಮನಸ್ಸು ಮತ್ತೊಂದು ಲಿಂಗವಾಗಿ ಈ ಸಮಾಜದ ನಡುವೆ ಸಾಮಾನ್ಯರಂತೆ ಸಹಜವಾಗಿ ಬದುಕಲಾಗದೆ, ಮನೆಯನ್ನು ತೊರೆದು ಅನಿವಾರ್ಯವಾಗಿ ಹಿಜಡಾ ಸಮುದಾಯ ಸೇರಿಕೊಂಡ ರೋಧನೆ ಒಂದೆಡೆಯಾದರೆ, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ದೈಹಿಕ ಪರಿವರ್ತನೆ ಮಾಡಿಕೊಳ್ಳುವುದು, ಕೆಲವು ಆಂಗಿಕ ಹಾವಭಾವಗಳನ್ನು ಕಲಿಯುವುದು ಮತ್ತೊಂದು ಸಾಹಸವೇ ಸರಿ.

ಇನ್ನು ಮೆಹಂದಳೆ ಈ ಹಿಂದೆ ಅಘೋರಿಗಳ ಬದುಕಿನ ಕುರಿತಂತೆಯೂ ವಿವರಣಾತ್ಮಕ ಪುಸ್ತಕ ಬರೆದಿದ್ದರು. ಇದೀಗ ಮಂಗಳಮುಖಿಯರ ಬಗ್ಗೆ ಇಷ್ಟೇ ಕಾಳಜಿಯಿಂಡ ಬರೆದು ನಮ್ಮ ಮುಂದಿಟ್ಟಿದ್ದಾರೆ.  ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ವೈಯಕ್ತಿಕವಾಗಿ “ಮಂಗಳಮುಖಿಯರ” ಬದುಕನ್ನು ಅಧ್ಯಯನಕ್ಕೊಳಪಡಿಸಿ  ಲೇಖಕ ಈ ಪುಸ್ತಕ ಹೊರತಂದಿರುವುದು ಓದಿದ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. 

ಹಿಜರಾ ಅಥವಾ ಹಿಜಡಾ ಎನ್ನುವುದು ಮೂಲತಹ ಪರ್ಶಿಯನ್ ಶಬ್ದವಾಗಿದ್ದು ಹಿಜ್ರಾ ರೂಪದ ಆಡುಭಾಷೆ ಆಗಿದೆ. ಇಲ್ಲಿ ಲೇಖಕರು ಖೋಜಾ, ಚಕ್ಕ, ಕೋಥಿ, ಚನ್ನಪಟ್ಣ, ಶಿಖಂಡಿ, ನಪಂಸಕ, ಒಂಬತ್ತು, ಕಿನ್ನರ್ , ಬಕ್ಲಾಸ್, ಯುನೆಕ್,ಮಂಗಳಮುಖಿ ಮತ್ತು ಜೋಗತಿ ಹೆಸರುಗಳಿಂದ ಕರೆಯಲಾಗುತ್ತದೆ. ಇವು ಆಯಾ ಕಾಲಾ ವ್ಯಾಪ್ತಿ , ಸ್ಥಳಿಯ ಗುರುತಿಸುವಿಕೆಯ ಕುರುಹುಗಳಾಗಿವೆ  ಎಂಬಂತಹಾ ಭಾಷಾಶಾಸ್ತ್ರೀಯ ವಿಚಾರಗಳನ್ನೂ ಲೇಖಕರು ಇಲ್ಲಿ ತಂದಿದ್ದಾರೆ. 

ಇದಲ್ಲದೆ ಲೇಖಕ ಕಡೆಯ ಎರಡು ಅಧ್ಯಾಯಗಳಲ್ಲಿ ’ಲೆಸ್ಬಿಯನ್’ ಹಾಗೂ ’ಗೇ’ ಗಳ ಬಗೆಗೆ ಸಹ ವಿವರಿಸಿದ್ದು ಇತ್ತೀಚಿನ ಆಡುನಿಕೋತ್ತರ ಸಮಾಜದ ಯುವಕರ ಮಾನಸಿಕ ತಲ್ಲಣವನ್ನು ಇದು ತೋರಿಸುವಂತಿದೆ.

ಲೇಖಕರ ಮಾತುಗಳಲ್ಲೇ ಹೇಳುವುದಾದರೆ  “ನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇ ಬೇಕು. ಇದು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ.

ಮಂಗಳಮುಖಿಯರ ಬದುಕು ಎಷ್ಟು ತಲ್ಲಣ, ಅಸಹನೀಯವೋ ಅದಕ್ಕಿಂತ ಭೀಕರ ದೇಹದ ಕಂಪನ ತಣಿಯದ ಭಾವ ಮತ್ತು ಮನಸ್ಸಿಗೆ ಇಲ್ಲದ ಅನುಭೂತಿ. ನೀರು ಕುಡಿದ ಮೇಲೆ ಆಯಾಸ ಪರಿಹಾರ ಎನ್ನಬಹುದೇ ಹೊರತಾಗಿ ವಿವರಿಸಬಲ್ಲ ಭಾಷೆ ನಮ್ಮಲ್ಲಿಲ್ಲ. ಅದೊಂದು ಅನುಭವ.

ಹಾಗೆಯೇ ಕಾಮದ ಅನುಭವಕ್ಕೆ ಪಕ್ಕಾದರೆ ಅದ್ಭುತ ಅನುಭವ ಎನ್ನಬಹುದೇ ವಿನಃ ಇದ್ದಮಿತ್ಥಂ ಎಂದು ವರ್ಣಿಸಲಾರ. ಇವೆರಡಕ್ಕೂ ವಂಚಿತನಾಗಿ ಬದುಕು ಭರಿಸಬೇಕಾದ ಪರಿಸ್ಥಿತಿ. ಈ ತ್ರಿಶಂಕು ಸ್ಥಿತಿ ಯಾರಿಗೂ ಬೇಡ. ಮನಸ್ಸಿಗೆ ಹೆಣ್ಣಿನ ಹಂಬಲ. ದೇಹ ಮಾತ್ರ ಗಂಡಸಿನ ಬಿರುಸು. ಭಾವಗಳಂತೂ ಅಲ್ಲೋಲ ಕಲ್ಲೋಲ. ಇತ್ಲಾಗೆ ಇದೂ ಇಲ್ಲ. ಅತ್ಲಾಗೆ ಅದೂ ದಕ್ಕುತ್ತಿಲ್ಲ. ಸಮಾಜ ಎಲ್ಲಕ್ಕಿಂತ ಮೊದಲೇ ಅವರನ್ನು ರಸ್ತೆಗೆ ಇಳಿಸಿರುತ್ತದೆ. ಇದು ಹಿಜಡಾಗಳ ಜಗತ್ತು" 

ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ಪುಸ್ತಕದಲ್ಲಿ ಎಲ್ಲವೂ ಚೆನ್ನಾಗಿದೆ, ಇದಕ್ಕೆ ಮಿತಿಗಳೇ ಇಲ್ಲವೆಂಡಲ್ಲ, ನಾನು ಕಂಡುಕೊಂಡಂತೆ ಪುಸ್ತಕದ ಕೆಲವು ಅಡ್ಯಾಯಗಳಲ್ಲಿ ಬರುವ ವ್ಯ್ದ್ಯಕೀಯ ವಿವರಣೆಗಳು ಸಾಮಾನ್ಯ ವರ್ಗದ ಓದುಗರಿಗೆ ಅರ್ಥ ಮಾಡಿಕೊಳ್ಳಲು ತುಸು ಕಠಿಣವೆನಿಸುತ್ತದೆ. ಲಿಂಗ ಪರಿವರ್ತನೆಯ ಆಪರೇಷನ್ ವಿಧಾನಗಳು, ಸೇರಿದಂತೆ ಅನೇಕ ವೈದ್ಯಕೀಯ ವಿವರಣೆಗಳು ಇನ್ನಷ್ಟು ಸರಳವಾಗಿ ಇದ್ದಿದ್ದರೆ ಚೆನ್ನಿತ್ತು.

ಇದೇ ವೇಳೆ ನಿರಾಶೆ, ದೌರ್ಜನ್ಯ, ಶೋಷಣೆ, ಅವಮಾನ ಗಳ ನಡುವೆಯೂ ಕಾರಂಜಿಯಂತೆ ಪುಟಿದೆದ್ದು ಸಾಧನೆ ಮಾಡಿದ ಮಂಗಳಮುಖಿಯರಿಗೇನು ಕಡಿಮೆ ಇಲ್ಲ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಅವರ “ಅಕ್ಕಯ್,ಕರುಣೆಗೊಂದು ಸವಾಲ್” ಆತ್ಮಕಥೆ ಸಹ ಇದಾಗಲೇ ಪ್ರಕಟವಾಗಿದೆ. ಮಂಜಮ್ಮ ಜೋಗತಿ ಕರ್ನಾಟಕದ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮೊದಲ ಟ್ರಾನ್ಸ್ ವ್ಯುಮೆನ್ ಆಗಿದ್ದು ಪದ್ಮಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ಅವರ ಜೀವನ ವೃತ್ತಾಂತ ’ನಡುವೆ ಸುಳಿವ ಹೆಣ್ಣು’ ಸಹ ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು ಅದಾಗಲೇ ಜನಪ್ರಿಯತೆ ಗಳಿಸಿದೆ. ಇವರಷ್ಟೇ ಅಲ್ಲದೆ ದ್ಮಿನಿ ಪ್ರಕಾಶ್ ಟಿವಿ ನಿರೂಪಕಿಯಾಗಿ ಕೆಲಸ ಮಾಡಿದ್ದರೇ,ಮಧುಬಾಯ್  ಅವರು ಛತ್ತಿಸ್ಗಢ ನಲ್ಲಿ ಮೇಯರ್ ಆಗಿ ಕೆಲಸ ಮಾಡಿದ್ದಾರೆ. ಮಧ್ಯಪ್ರದೇಶದ ಶಾಸಕಿಯಾಗಿ ಶಭನಮ್  ರವರು ಗುಜರಾತ್ನ ಎಂ. ಎಲ್.ಎ ಆಗಿ ಸೋನಿಯಾರವರು ಕರ್ತವ್ಯ ನಿರ್ವಹಿಸಿದ್ದಾರೆ. ನ್ಯಾಯಾಧೀಶರಾಗಿ ಬೆಂಗಾಲಿಯ ಜೋಯಿತ ಮಂಡಲ್ , ತಮಿಳುನಾಡಿನ ಶರ್ಮಿಳಾ, ಪೊಲೀಸ್ ಅಧಿಕಾರಿಯಾಗಿ ಪ್ರೀತಿಕಾ ಯಾಸ್ಮಿನ್ ಸಾಧನೆ ಮೆರೆದಿದ್ದಾರೆ. ಈ ಎಲ್ಲರ ಸಾಧನೆ ಉಳಿದವರಿಗೆ ಸ್ಫೂರ್ತಿಯಾಗಲಿ. 

ಅತಿ  ಸೂಕ್ಷ ಹಾಗೂ ಜಟಿಲ ವಿಷಯವನ್ನು ಆರಿಸಿಕೊಂಡು, ಎಲ್ಲೂ ಹದ ತಪ್ಪದಂತೆ, ವೈಜ್ಞಾನಿಕ ಆಧಾರಿತ ಮಾಹಿತಿಗಳನ್ನೂ ನೀಡಿರುವ ’ಮಂಗಳಮುಖಿಯರ ಸಂಗದಲ್ಲಿ’ ಪುಸ್ತಕ ಪುರುಷ ಮಹಿಳೆ ಎನ್ನದೆ  ಪ್ರತಿಯೊಬ್ಬರೂ ಓದಬೇಕಾದ ಮಾಹಿತಿಪೂರ್ಣ ಗ್ರಂಥ.

ಲೇಖಕರಾದ ಮೆಹಂದಳೆಯವರಿಂದ ಮತ್ತಷ್ಟು ಉತ್ತಮ ಕೃತಿಗಳು ಮೂಡಿಬರಲಿ ಎಂದು ನಾನು ಆಶಿಸುತ್ತೇನೆ.

No comments:

Post a Comment