Tuesday, August 29, 2023

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 117

 ಹಿಮದ ಗೋಪಾಲಸ್ವಾಮಿ (Himavad Gopalaswamy)




ಚಾಮರಾಜನಗರ  ಸುಂದರ ಪ್ರವಾಸಿ ತಾಣಗಳ ನೆಲೆ ಇದರಲ್ಲಿಯೂ ವರ್ಷದ ಎಲ್ಲಾ ಕಾಲಗಳಲ್ಲೂ ಮಂಜು ಸುರಿಯುವ ರಾಜ್ಯದ ಏಕೈಕ ಪ್ರವಾಸಿ ತಾಣ - ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಅಗಸ್ತ್ಯ ಮಹರ್ಷಿಗಳಿಂದ  ಸ್ಥಾಪಿಸಲ್ಪಟ್ಟ ಗೋಪಾಲಕೃಷ್ಣನ ದೇವಾಲಯವಿದ್ದು ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿರುವ ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ. ಗೋಪಾಲ ಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ 4800 ಅಡಿ ಎತ್ತರದಲ್ಲಿದೆ. ಇಲ್ಲಿ  1315ರಲ್ಲಿ  ದೇವಾಲಯ ನಿರ್ಮಾಣವಾಗಿದೆ.  ಇಲ್ಲಿಗೆ ಸಾಮಾನ್ಯವಾಗಿ  ಆಸ್ತಿಕರು-ನಾಸ್ತಿಕರನ್ನೆದೆ ಎಲ್ಲರೂ ಬರುತ್ತಾರೆ. ಹೀಗಾಗಿ ಇದೊಂದು ರೀತಿಯಲ್ಲಿ ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿದೆ.

ಗೋಪಾಲಸ್ವಾಮಿ ದೇವಾಲಯ ಚೋಳ ರಾಜವಂಶದ ಸಾಂಪ್ರದಾಯಿಕ ಶೈಲಿಯಲ್ಲಿದೆ.  ದೇವಾಲಯದ ಏಕ-ಶ್ರೇಣಿಯ 'ಗೋಪುರಂ' ಅನ್ನು ಆವರಣದ ಸಂಯುಕ್ತ ಗೋಡೆಯಿಂದ ಬೆಂಬಲಿಸಲಾಗುತ್ತದೆ. ಒಳಗಿನ ಮುಖಮಂಟಪ, ಅಥವಾ ಮುಖ ಮಂಟಪದಲ್ಲಿ ತ್ಯಾಗದ ಬಲಿಪೀಠ ಮತ್ತು ಧ್ವಜ-ಕಂಬ ಇವೆ. ಮುಖ ಮಂಟಪದ ಮುಂಭಾಗದಲ್ಲಿ ಕೃಷ್ಣಾವತಾರ ಜೊತೆಗೆ ಹಿಂದೂ ಭಗವಾನ್ ವಿಷ್ಣುವಿನ ಹತ್ತು ಅವತಾರಗಳಾದ 'ದಶವತಾರ' ಚಿತ್ರಿಸುವ ಸುಂದರವಾದ ಶಿಲ್ಪವಿದೆ. ಈ ಸ್ಥಳಕ್ಕೆ ಬೆಂಗಳೂರಿನಿಂದ 220 ಕಿ.ಮೀ ಮತ್ತು ಮೈಸೂರಿನಿಂದ 80 ಕಿ.ಮೀ ದೂರ.. ಬೆಟ್ಟದ ಬುಡದಿಂದ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ತಲುಪಲು ಸ್ಥಳೀಯ ಆಡಳಿತ ಆಯೋಜಿಸಿದ ಬಸ್ ಹತ್ತಬೇಕಾಗಿದೆ. ಬೆಟ್ಟದ ಮೇಲೆ ಖಾಸಗಿ ವಾಹನಗಳನ್ನು ಅನುಮತಿಸಲಾಗುವುದಿಲ್ಲ.ಗುಂಡ್ಲುಪೆಟೆ ಪಟ್ಟಣದಲ್ಲಿ , (20 ಕಿ.ಮೀ ದೂರ ) ಉಳಿಯಲು ವಸತಿ ಗೃಹಗಳಿವೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ ನಡೆಸುವ  ಬಂಡೀಪುರ ಸಫಾರಿ ಲಾಡ್ಜ್ ಗೋಪಾಲಸ್ವಾಮಿ ಬೆಟ್ಟದಿಂದ 16 ಕಿ.ಮೀ ದೂರದಲ್ಲಿದೆ . ಈ ಪ್ರದೇಶದಲ್ಲಿ ಹಲವಾರು ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳು ಲಭ್ಯವಿದೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.


***

ಉತ್ತರದ ಗೋವರ್ಧನ ಗಿರಿಯಿಂದ ಬಂದ ಗೋಪಾಲಸ್ವಾಮಿ ದಕ್ಷಿಣದಲ್ಲಿ ನೆಲೆಯೂರಿದ ಸ್ಥಳ ದಕ್ಷಿಣ ಗೋವರ್ಧನಗಿರಿ. ಅಗಸ್ತ್ಯ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಕೃಷ್ಣನಿಲ್ಲಿ ನೆಲೆಯೂರಿದ್ದಾನೆ.  ದ್ವಾಪರ ಯುಗದಲ್ಲಿ ಹಿಮವಂತ ಪರ್ವತನ ಪುತ್ರಿಯಾದ ಗಿರಿಜೆಯ ಕಲ್ಯಾಣ ಪರಶಿವನ ಜೊತೆ ಕಾಶಿ (ವಾರಣಾಸಿ)ಯಲ್ಲಿ ನಡೆಯಿತು. ಈ ಶುಭ ವಿವಾಹ ಕಾರ್ಯಕ್ರಮಕ್ಕೆ ಮುಕ್ಕೋಟಿ ದೇವತೆಗಳು, ಹಲವಾರು ಋಷಿಗಳು, ಆಗಮಿಸುತ್ತಾರೆ. ಎಲ್ಲಾ ದೇವತೆಗಳೂ ಒಂದೇ ಕಡೆ ಸೇರಿದ ಕಾರಣ ಭೂಮಿಯ ಸಮತೋಲನ ತಪ್ಪಿ ಒಂದು ಕಡೆಗೆ ಬಾಗುತ್ತದೆ.  ಆಗ ದೇವತೆಗಳು ಈ ಅಸಮತೋಲನ ನಿವಾರಿಸಲು ಆ ಭಾರಕ್ಕೆ ಸಮನಾಗಿದ್ದ ಅಗಸ್ತ್ಯ ಮಹರ್ಷಿಗಳನ್ನು ದಕ್ಷಿಣಕ್ಕೆ ತೆರಳಿ ಅಲ್ಲಿ ವಾಸಿಸಬೇಕೆಂದು ಮನವಿ ಮಾಡುತ್ತಾರೆ. ಹೀಗೆ ಮಾಡುವುದರಿಂದ ಭೂಮಿಯ ಸಮತೋಲನ ಪುನಃಅ ಸರಿಹೋಗುತ್ತದೆ ಎನ್ನುತ್ತಾರೆ. ಇದಕ್ಕೆ ಒಪ್ಪಿದ ಅಗಸ್ತ್ಯ ಮಹರ್ಷಿ ದಕ್ಷಿಣ ಭಾಗಕ್ಕೆ ಬಂದು ಈಗಿನ ಹಿಮದ ಗೋಪಾಲಸ್ವಾಮಿ ಬೆಟ್ಟವಿರುವ ಪ್ರದೇಶಕ್ಕೆ ಆಗಮಿಸುತ್ತಾರೆ. ಅಂದು ಈ ಪ್ರದೇಶಕ್ಕೆ ಗೋವರ್ಧನಗಿರಿ ಎಂದು ಹೆಸರಿತ್ತು. ಇಲ್ಲಿ ಅಗಸ್ತ್ಯರು ಶ್ರೀಕೃಷ್ಣನ ಕುರಿತು ತಪಸ್ಸು ಮಾಡಿ ದಕ್ಷಿಣದಲ್ಲಿ ತನ್ನ ಕುಟುಂಬ, ಪರಿವಾರದೊಂದಿಗೆ ನೆಲೆಸಿ ಕಲಿಯುಗದಲ್ಲಿ ಜನರನ್ನು ಪೊರೆಯಬೇಕೆಂದು ಪ್ರಾರ್ಥಿಸುತ್ತಾರೆ.  ಅದಕ್ಕೆ ಶ್ರೀಕೃಷ್ಣನು ಒಂದು ಶರತ್ತಿನೊಂದಿಗೆ ಒಪ್ಪಿಕೊಳ್ಳುತ್ತಾನೆ.  ಅದೆಂದರೆ ತಾನು ಹಾಗೂ ತನ್ನ ಕುಟುಂಬ ಪರಿವಾರ ನೆಲೆಸಿರುವ ಈ ಸ್ಥಳ ಯಾವಾಗಲೂ ಹಿಮದಿಂದ ಕೂಡಿರಬೇಕು ಎಂಬುದಾಗಿದೆ.  ಇದಕ್ಕೆ ಒಪ್ಪಿದ ಅಗಸ್ತ್ಯರು ಶ್ರೀಕೃಷ್ಣನನ್ನು ಇಲ್ಲಿಗೆ ಬರಮಾಡಿಕೊಂಡು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.  ರುಕ್ಮಿಣಿ, ಸತ್ಯಭಾಮೆ, ಗೋಪಿಕಾಸ್ತ್ರೀಯರು, ಗೋವುಗಳು ಎವರೆಲ್ಲರೊಂದಿಗೆ ಕೃಷ್ಣನು ಕೊಳಲನ್ನು ಊದುತ್ತಾ ಇಲ್ಲಿ ನೆಲೆಸಿದ್ದಾನೆ.  ಕೃಷ್ಣನ ಇಚ್ಚೆಯಂತೆಯೇ ಇಂದೂ ಸಹ ವಿಗ್ರಹದ ಶಿರೋಭಾಗ ಹಾಗೂ ಗರ್ಭಗುಡಿಯ ಮೇಲೆ ಸದಾ ಕಾಲವೂ ಹಿಮ ಇರುತ್ತದೆ. ಹೀಗೆ ಸಂಗ್ರಹವಾದ ಹಿಮದ ನೀರನ್ನೇ ತೀರ್ಥವಾಗಿ ಜನರಿಗೆ ಪ್ರೋಕ್ಷಣೆ ಮಾಡುವ ಪದ್ದತಿ ನಡೆದುಕೊಂಡು ಬಂದಿದೆ. 



ಈ ದೇವಾಲಯದ ಸುತ್ತಲೂ ಹಂಸತೀರ್ಥ, ಚಕ್ರತೀರ್ಥ, ಶಂಖತೀರ್ಥ, ಗದಾತೀರ್ಥ, ಪದ್ಮತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ, ಶಜ್ಫ಼್ಣಾತೀರ್ಥ ಎನ್ನುವ ಎಂಟು ತೀರ್ಥಗಳಿದೆ.  ಹಿಮದ ಗೋಪಾಲ ಸ್ವಾಮಿ ಬೆಟ್ತದ ಸುತ್ತ ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಳಿದೆ.  ಅಲ್ಲದೆ ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನ ಬೆಟ್ತಗಳೂ ಸಮೀಪದಲ್ಲಿದ್ದು ಈ ಬೆಟ್ತಕ್ಕೆ ಕಮಲಾಚಲ ಎನ್ನುವ ಹೆಸರೂ ಇದೆ.

ಇಲ್ಲಿನ ಹಂಸ ತೀರ್ಥದಲ್ಲಿ ಮಿಂದ ಕಾಗೆಗಳು ಹಂಸಗಳಾಗಿ ಹಾರಿ ಹೋದ ಕಾರಣ ಈ ದೇವಾಲಯದ ಸುತ್ತ ಮುತ್ತಲಿನಲ್ಲಿ ಎಲ್ಲಿಯೂ ಕಾಗೆಗಳು ಕಾಣಸಿಗುವುದಿಲ್ಲ. 

ಮಕ್ಕಳಿಲ್ಲದವರು ಇಲ್ಲಿನ ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದ್ದಾದರೆ ಮಕ್ಕಳಾಗುವುದೆನ್ನುವ ನಂಬಿಕೆ ಇದೆ. 


No comments:

Post a Comment