ಮಾತಾ ತ್ರಿಪುರ ಸುಂದರಿ ದೇವಸ್ಥಾನ (Mata Tripura Sundari Temple)
ತ್ರಿಪುರ ರಾಜ್ಯದ ಅಗರ್ತಲಾ ನಗರದಲ್ಲಿರುವ ತ್ರಿಪುರ ಸುಂದರಿ ದೇವಾಲಯ ಅದೇ ಹೆಸರಿನ ದೇವಿಗೆ ಸಮರ್ಪಿತವಾಗಿರುವ ದೇವಾಲಯ. ಈ ದೇವಿಗೆ ಸ್ಥಳೀಯರು ದೇವಿ ತ್ರಿಪುರೇಶ್ವರಿ ಎಂದು ಕರೆಯುತ್ತಾರೆ. ದೇವಾಲಯವು ತ್ರಿಪುರಾದ ಅಗರ್ತಲಾದಿಂದ ಸುಮಾರು 55 ಕಿಮೀ ದೂರದಲ್ಲಿರುವ ಪುರಾತನ ನಗರವಾದ ಉದಯಪುರದಲ್ಲಿದೆ ಮತ್ತು ಅಗರ್ತಲಾದಿಂದ ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದಾಗಿದೆ. ಈಶಾನ್ಯ ರಾಜ್ಯಗಳಲ್ಲಿನ ಅತ್ಯಂತ ಪ್ರಸಿದ್ದ ಹಾಗೂ ಪವಿತ್ರ ದೇವಾಲಯಗಳ ಪೈಕಿ ತ್ರಿಪುರ ಸುಂದರಿ ದೇವಾಲಯ ಅತ್ಯಂತ ಹೆಸರಾಗಿದೆ. ಮಾತಾಬರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ಆಮೆಯ (ಕುರ್ಮಾ) ಗೂನು ಹೋಲುವ ಸಣ್ಣ ಬೆಟ್ಟದ ಮೇಲಿದೆ. ಕೂರ್ಮಪೃಷ್ಠಾಕೃತಿ ಎಂದು ಕರೆಯಲ್ಪಡುವ ಈ ಆಕಾರವನ್ನು ಶಕ್ತಿ ದೇವತೆಗಳಿಗೆ ಅತ್ಯಂತ ಪವಿತ್ರವಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಸ್ಥಳಕ್ಕೆ ಕೂರ್ಮ ಪೀಠ ಎಂದೂ ಕರೆಯಲಾಗುತ್ತದೆ.
ಸತೀ ದೇವಿಯ ಎಡಗಾಲಿನ ಕಿರುಬೆರಳು ಇಲ್ಲಿ ಬಿದ್ದಿದೆ ಎಂದು ಪುರಾಣ ಹೇಳುತ್ತದೆ. ಈ ದೇವಾಲಯದಲ್ಲಿ ತ್ರಿಪುರ ಸುಂದರಿಯ ಜೊತೆ ಭೈರವ ತ್ರಿಪುರೇಶ ಸನ್ನಿಧಾನವೂ ಇದೆ. 1501ರಲ್ಲಿ ಪುರಾ ಧನ್ಯ ಮಾಣಿಕ್ಯ ಮಹಾರಾಜ ಈ ದೇವಾಲಯ ನಿರ್ಮಾಣ ಮಾಡಿದ್ದಾರೆನ್ನಲು ದಾಖಲೆಗಳಿವೆ.
ದೇವಾಲಯದ ಗರ್ಭಗುಡಿಯಲ್ಲಿ ದೇವಿಯ ಎರಡು ಒಂದೇ ರೀತಿಯ ಆದರೆ ವಿಭಿನ್ನ ಗಾತ್ರದ ಕಪ್ಪು ಕಲ್ಲಿನ ವಿಗ್ರಹಗಳಿದ್ದು 5 ಅಡಿ ಎತ್ತರದ ದೊಡ್ಡ ವಿಗ್ರಹ ತ್ರಿಪುರ ಸುಂದರಿ ಎನಿಸಿದರೆ ಚಿಕ್ಕ ವಿಗ್ರಹ ಛೋಟೋ ಮಾ ಎಂದು ಕರೆಯಲ್ಪಡುತ್ತದೆ. ಈ ವಿಗ್ರಹ 2 ಅಡಿ ಎತ್ತರದ ಚಂಡಿಯ ವಿಗ್ರಹವಾಗಿದೆ. ಇದನ್ನು ಈ ಹಿಂದೆ ತ್ರಿಪುರದ ರಾಜರು ಯುದ್ಧಭೂಮಿಗೆ ಹಾಗೂ ಬೇಟೆಯಾಡಲು ಕೊಂಡೊಯ್ಯುತ್ತಿದ್ದರು ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ, ದೇವಸ್ಥಾನದ ಬಳಿ ಪ್ರಸಿದ್ಧ ಮೇಳ ನಡೆಯುತ್ತದೆ, ಇದರಲ್ಲಿ ಎರಡು ಲಕ್ಷ ಜನರು ಭಾಗವಹಿಸುತ್ತಾರೆ.
***
ರಾಜ ಧನ್ಯ ಮಾಣಿಕ್ಯನಿಗೆ ಒಂದು ದಿನ ರಾತ್ರಿ ಕನಸಿನಲ್ಲಿ ತ್ರಿಪುರ ಸುಂದರಿ ದೇವಿ ಕಾಣಿಸಿಕೊಂಡು ಉದಯಪುರ ಪಟ್ಟಣದ ಸಮೀಪವಿರುವ ಬೆಟ್ಟದ ಮೇಲೆ ತನ್ನ ಸಾನ್ನಿಧ್ಯವಿದ್ದು ಅಲ್ಲಿ ತನ್ನನ್ನು ಪೂಜಿಸುವಂತೆ ಸೂಚಿಸಿದಳು. ಆದರೆ ರಾಜ ತನ್ನ ರಾಜಧಾನಿಯ ಹೊರಗಿನ ಬೆಟ್ಟದಲ್ಲಿ ಇದಾಗಲೇ ವಿಷ್ಣು ದೇವಾಲಯವಿರುವುದನ್ನು ಗಮನಿಸಿದನು. ವಿಷ್ಣು ದೇವಾಲಯದ ಸಮೀಪ ಶಕ್ತಿ ದೇವತೆಯ ಪ್ರತಿಷ್ಠಾಪನೆ ಹೇಗೆ ಸಾಧ್ಯ ಎನ್ನುವ ಗೊಂದಲ ಅವನಿಗೆ ಮೂಡಿತು. ಅದಾದ ನಂತರ ಮತ್ತೆ ಕನಸಿನಲ್ಲಿ ದೇವಿಯ ದರ್ಶನ ಪಡೆದ ರಾಜನಿಗೆ ವಿಷ್ಣು ಹಗೂ ಶಕ್ತಿ ಎರಡೂ ಒಂದೇ ಪರಮಾತ್ಮನ (ಬ್ರಹ್ಮನ) ವಿಭಿನ್ನ ರೂಪಗಳು ಎಂದು ಕಂಡುಬಂದಿತು. ಹಾಗಾಗಿ ಮಹಾರಾಜನು ತಡ ಮಾಡದೆ ಬೆಟ್ಟದ ಮೇಲೆ ದೇವಿಯ ದೇವಾಲಯ ನಿರ್ಮಾಣ ಮಾಡಿದನು.
ತ್ರಿಪುರ ಸುಂದರಿ - ರಾಜರಾಜೇಶ್ವರಿ, ರಾಜೇಶ್ವರಿ, ಷೋಡಶಿ, ಕಾಮಾಕ್ಷಿ, ಮತ್ತು ಲಲಿತಾ ಎನ್ನುವ ದೇವತೆಯಾದ ಇವಳನ್ನು ಶಾಕ್ತ ಸಂಪ್ರದಾಯದವರು ಹೆಚ್ಚಾಗಿ ಆರಾಧಿಸುತ್ತಾರೆ. "ತ್ರಿಪುರ" ಎಂಬ ಪದವು ಮೂರು ನಗರಗಳು ಅಥವಾ ಪ್ರಪಂಚಗಳ ಪರಿಕಲ್ಪನೆಯಾಗಿದ್ದರೆ "ಸುಂದರಿ" ಎಂಡರೆ ಸುಂದರವಾಗಿರುವ ಹೆಣ್ಣು ಎಂದು ಹೇಳಲಾಗಿದೆ. ತ್ರಿಪುರವು ಮಾಯಾಸುರನಿಂದ ರಚಿಸಲ್ಪಟ್ಟ ಮತ್ತು ತ್ರಿಪುರಾಂತಕನಿಂದ ನಾಶವಾದ ಮೂರು ನಗರಗಳನ್ನು ಸಂಕೇತಿಸುತ್ತದೆ. ಹಾಗಾಗಿಯೇ "ಮೂರು ನಗರಗಳನ್ನು ನಾಶಮಾಡುವವನಿಗೆ ಅವಳು ಅರಸಿ ಅಥವಾ ಸುಂದರಿಯಾಗಿದ್ದಳೆಂದು ಅರ್ಥ.
ಯೋನಿ ಚಿಹ್ನೆ ದೇವಿಯನ್ನು ನಿರೂಪಿಸುವ ವೃತ್ತವನ್ನು ರೂಪಿಸುವ ತ್ರಿಕೋನವನ್ನು ಹೋಲುವುದರಿಂದ ಅವಳನ್ನು ತ್ರಿಪುರ ಎಂದು ಕರೆಯಲಾಗುತ್ತದೆ. ಅವಳ ಮಂತ್ರವು ಮೂರು ಅಕ್ಷರಗಳ ಸಮೂಹವನ್ನು ಹೊಂದಿರುವುದರಿಂದ ಅವಳನ್ನು ತ್ರಿಪುರ ಎಂದೂ ಕರೆಯುತ್ತಾರೆ. ಅವಳು ಬ್ರಹ್ಮ, ವಿಷ್ಣು ಮತ್ತು ಶಿವನಲ್ಲಿ ಬ್ರಹ್ಮಾಂಡದ ಸೃಷ್ಟಿಕರ್ತ, ಸಂರಕ್ಷಕ ಮತ್ತು ವಿನಾಶಕಾರಿಯಾಗಿ ಪ್ರಕಟವಾಗಿರುವುದರಿಂದ ಅವಳನ್ನು ತ್ರಿಪುರ ಎಂದು ಕರೆಯಲಾಗುತ್ತದೆ ಹಾಗೆಯೇ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಶಕ್ತಿಗಳೊಂದಿಗೆ ಸಂಬಂಧ ಹೊಂದಿರುವ ದೇವಿಯು ಮೂರು ಕ್ಷೇತ್ರಗಳಲ್ಲಿ ಅತ್ಯಂತ ಸುಂದರಿ ಎಂದು ಗುರುತಿಸಿಕೊಳ್ಳುತ್ತಾಳೆ. ಶಾಕ್ತ ಸಂಪ್ರದಾಯದಲ್ಲಿ ಶ್ರೀಕುಲ ಸಂಪ್ರದಾಯದ ಪ್ರಕಾರ, ತ್ರಿಪುರ ಸುಂದರಿಯು ಮಹಾವಿದ್ಯೆಗಳಲ್ಲಿ ಅಗ್ರಗಣ್ಯಳು, ಹಿಂದೂ ಧರ್ಮದ ಪರಮೋಚ್ಚ ದೈವಿಕತೆ ಮತ್ತು ಶ್ರೀ ವಿದ್ಯೆಯ ಪ್ರಾಥಮಿಕ ದೇವತೆಯೂ ಸಹ ಈಕೆಯಾಗಿರುತ್ತಾಳೆ. . ತ್ರಿಪುರಾ ಉಪನಿಷತ್ತು ಅವಳನ್ನು ಬ್ರಹ್ಮಾಂಡದ ಅಂತಿಮ ಶಕ್ತಿ ಎಂದು ಪ್ರತಿಪಾದಿಸುತ್ತದೆ. ಅವಳನ್ನು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಆಳಬಲ್ಲವಳೆಂದು ಗುರುತಿಸಿದೆ. ತ್ರಿಪುರ ಸುಂದರಿ ದೇವಿಯು ಶಿವನ ಪತ್ನಿ. ಆಕೆಯು ಶಿವನೊಂದಿಗೆ ಸೇರಿ ವಿಶ್ವವನ್ನು ಸೃಷ್ಟಿಸುತ್ತಾಳೆ. ಅದನ್ನು ರಕ್ಷಿಸುತ್ತಾಳೆ ಮತ್ತು ತಪ್ಪೆಂದು ತಿಳಿದುಬಂದರೆ ಮುಲಾಜಿಲ್ಲದೆ ನಾಶ ಮಾಡುತ್ತಾಳೆ. ತ್ರಿಪುರ ಸುಂದರಿ ದೇವಿ ಎಂದರೆ ದುರ್ಗಾ, ಮಹಾಕಾಳಿ ಮತ್ತೊಂದು ರೂಪ. ಧರ್ಮ ಗ್ರಂಥಗಳಲ್ಲಿ ತ್ರಿಪುರ ಸುಂದರಿ ದೇವಿಯನ್ನು ಸಾವಿರಾರು ಹೆಸರುಗಳಲ್ಲಿ ಕರೆಯಲಾಗುತ್ತದೆ. ಆಕೆಯ ಯುವ ರೂಪವನ್ನು ಶೋಡಶಿ ಮತ್ತು ಮಗುವಿನ ರೂಪವನ್ನು ಬಾಲ ಸುಂದರಿ ಎಂದು ಕರೆಯಲಾಗುತ್ತದೆ. ಆಕೆಯ ಮುಗಿವನ ರೂಪದಲ್ಲಿ ಮುಗ್ದತೆ ಎದ್ದು ಕಾಣುತ್ತದೆ. ತಮಾಷೆ ಮಾಡುವುದು, ಆಟವಾಡುವುದು, ಎಲ್ಲರನ್ನೂ ತನ್ನತ್ತ ಆಕರ್ಷಿಸುವುದು ಈ ರೂಪದ ಸ್ವಭಾವವಾಗಿದೆ. ದೇವಿಯ ಶೋಡಶಿ ರೂಪವು ಹದಿನಾರು ಆಸೆಗಳನ್ನು ಪ್ರತಿನಿಧಿಸುತ್ತದೆ. ಜೊತೆಗೆ ಈ ರೂಪವು ಹದಿನಾರು ಉಚ್ಚಾರ ಮಂತ್ರಗಳನ್ನು ಒಳಗೊಂಡಿದೆ. ಹದಿನೈದು ಉಚ್ಚಾರ ಮಂತ್ರಗಳಾದರೆ ಕೊನೆಯದು ಬೀಜ ಮಂತ್ರವಾಗಿರುತ್ತದೆ. ಶೋಡಶಿ ರೂಪವು ವ್ಯಕ್ತಿಯನ್ನು ಆಧ್ಯಾತ್ಮಿಕ ಹಾದಿಯಲ್ಲಿ ಕರೆದೊಯ್ಯುತ್ತದೆ. ಆತನ ಮುಗ್ದ ಅಂಶಗಳು ದೇವರಿಗೆ ಹತ್ತಿರವಾಗುವಂತೆ ಮಾಡುತ್ತದೆ.
ತ್ರಿಪುರ ಸುಂದರಿ ದೇವಿಯನ್ನು ಲಲಿತಾ ಎಂದೂ ಕರೆಯಲಾಗುತ್ತದೆ. ಲಲಿತಾ ಎಂದರೆ ಬುದ್ಧಿವಂತೆ ಮತ್ತು ಪ್ರಕಾಶಮಾನವಾದ ವ್ಯಕ್ತಿತ್ವ ಎಂದು ಅರ್ಥ. ಜೊತೆಗೆ ಇತರರನ್ನು ಬುದ್ಧಿವಂತಿಕೆಯಲ್ಲಿ ಮೀರಿಸುವ ವ್ಯಕ್ತಿತ್ವ ಹೊಂದಿರುವ ಮಹಿಳೆ. ಲಲಿತಾ ದೇವಿಯು ಬ್ರಹ್ಮಾಂಡದ ಸೃಷ್ಟಿ, ಕ್ರಿಯೆ, ಮತ್ತು ನಾಶದ ಪ್ರತಿನಿಧಿಯೂ ಹೌದು. ತ್ರಿಪುರ ಸುಂದರಿಯನ್ನು ರಾಜರಾಜೇಶ್ವರಿ ಎಂದೂ ಕರೆಯುತ್ತಾರೆ. ಇಡೀ ಬ್ರಹ್ಮಾಂಡದ ಆಡಳಿತವು ಆಕೆಯ ಕೈನಲ್ಲಿದೆ ಎಂದು ನಂಬಲಾಗಿದೆ. ವಿಶ್ವದ ಪ್ರತಿ ಕ್ರಿಯೆಗಳು ನಡೆಯಬೇಕಾದರೆ ತ್ರಿಪುರ ಸುಂದರಿ ದೇವಿಯ ಆಜ್ಞೆಯು ಬೇಕೇ ಬೇಕು ಎಂದು ನಂಬಲಾಗಿದೆ. ಜೀವನದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮುನ್ನ ತ್ರಿಪುರ ಸುಂದರಿ ದೇವಿಯನ್ನು ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗಬೇಕು. ಹಾಗೆ ಮಾಡುವುದರಿಂದ ನಿಮ್ಮ ನಿರ್ಧಾರ ದೃಢವಾಗಿರ್ತದೆ, ಸರಿಯಾದ ದಾರಿಯಲ್ಲಿ ನಡೆಯುತ್ತದೆ ಎಂದು ನಂಬಲಾಗಿದೆ.
ತ್ರಿಪುರ ಸುಂದರಿ ಉದಯಿಸುತ್ತಿರುವ ಸೂರ್ಯನಂತೆ ಸಂತೋಷ, ಸಹಾನುಭೂತಿ ಮತ್ತು ಜ್ಞಾನದ ಸಂತೋಷವನ್ನು ಚೆಲ್ಲುತ್ತಾಳೆ. ಆಕೆಯನ್ನು ಹದಿನಾರು ವರ್ಷದ ಸುಂದರ ಯುವತಿಯಂತೆ ಚಿತ್ರಿಸಲಾಗಿದೆ. ಚಿನ್ನದ ಬಣ್ಣದ ಚರ್ಮ, ಕೆಂಪು ಕೆನ್ನಗಳು, ಸೆಳೆಯುವ ಕಣ್ಣುಗಳು, ನಾಲ್ಕು ಕೈಗಳು, ತೆರೆದ ನಾಲಗೆ, ಭಯಭೀತಗೊಳಿಸುವ ಹಲ್ಲುಗಳು ಈಕೆಯ ಗುಣಲಕ್ಷಣ. ತ್ರಿಪುರ ಸುಂದರಿ ದೇವಿಯ ಒಂದು ಕೈನಲ್ಲಿ ಹೂಬಿಟ್ಟಿರುವ ಕಬ್ಬಿನ ಜಲ್ಲೆ, ಒಂದು ಕೈನಲ್ಲಿ ಅಂಕುಶ, ಮತ್ತು ಇನ್ನೊಂದು ಕೈನಲ್ಲಿ ಹೂವಿನ ಬಾಣವನ್ನು ಹಿಡಿದಿದ್ದಾಳೆ. ಅಂಕುಶವು ಆಕರ್ಷಣೆಯನ್ನು ಪ್ರತಿನಿಧಿಸಿದರೆ, ಕಬ್ಬಿನ ಜಲ್ಲೆ ಆಸೆಗಳನ್ನು ಪ್ರತಿನಿಧಿಸುತ್ತದೆ. ಹೂಬಾಣಗಳು ನಮ್ಮ ಪಂಚೇಂದ್ರಿಯಗಳನ್ನು ಪ್ರತಿನಿಧಿಸುತ್ತವೆ. ತ್ರಿಪುರ ಸುಂದರಿ ದೇವೆ ಎಷ್ಟು ಸುಂದರವಾಗಿದ್ದಳು ಎಂದರೆ ಪರಶಿವನೇ ಆಕೆಯ ಸೌಂದರ್ಯಕ್ಕೆ ಮಾರುಹೋಗಿದ್ದ ಎಂದು ಪುರಾಣಗಳು ಹೇಳುತ್ತವೆ.
***
ಲಲಿತಾ ಸಹಸ್ರನಾಮವು ಲಲಿತಾ ತ್ರಿಪುರ ಸುಂದರಿ ಮತ್ತು ರಾಕ್ಷಸ ಭಂಡಾಸುರನ ನಡುವಿನ ಕದನವನ್ನು ಉಲ್ಲೇಖಿಸಿದೆ. ಇದು ಕೆಡುಕಿನ ಮೇಲಿನ ಒಳಿತಿನ ವಿಜಯವನ್ನು ಸೂಚಿಸಿದೆ.
ಅದೊಮ್ಮೆ ಭಂಡಾಸುರ ಎನ್ನುವ ಅಸುರ ರಾಕ್ಷಸನು ಚಿತ್ರಕರ್ಮದ ಕಾರಣದಿಂದ ಕಾಮದೇವನ ಭಸ್ಮದಿಂದ ಜನಿಸಿದನು. ಎಂದರೆ ಕಾಮದೇವನ ಚಿತಾಭಸ್ಮದಿಂದ ಈ ಭಂಡಾಸುರನ ಸೃಷ್ಟಿಯಾಗಿತ್ತು. ಶಿವನನ್ನು ಮೆಚ್ಚಿಸಲು ತೀವ್ರವಾದ ತಪಸ್ಸನ್ನು ಮಾಡಿದ ಭಂಡಾಸುರ ತನ್ನೊಂದಿಗೆ ಯುದ್ಧ ಮಾಡಿದವರ ಅರ್ಧದಷ್ಟು ಶಕ್ತಿ ಮತ್ತು ಪುರುಷತ್ವವನ್ನು ಕಳೆದುಕೊಳ್ಳುತ್ತಾರೆ ಎನ್ನುವ ವರವನ್ನು ಪಡೆದನು. ಅಲ್ಲದೆ ಭಂಡಾಸುರನಿಗೆ ಮಹೇಂದ್ರ ಪರ್ವತದ ಭಾಗದಲ್ಲಿರುವ ಶೂನ್ಯ ಎನ್ನುವ ಅಸುರರ ನಗರದಲ್ಲಿ ನೆಲೆಸಲು ಸೂಚಿಸಲಾಯಿತು. ಅವನಿಗೆ ಅಲ್ಲಿ ಯಾವ ಅಡ್ಡಿ ಆತಂಕವಿರಲಿಲ್ಲ. ಸುಮಾರು ಅರವತ್ತು ಸಾವಿರ ವರ್ಷಗಳ ಕಾಲ ಭಂಡಾಸುರ ಅಲ್ಲಿ ಚಕ್ರವರ್ತಿಯಾಗಿ ಮೆರೆದನು. ಶಿವನ ವರ ಇದ್ದ ಕಾರಣ ಆ ಅವಧಿಯಲ್ಲಿ ಯಾವುದೇ ದೇವರು, ಮನುಷ್ಯ ಅಥವಾ ರಾಕ್ಷಸ ಅವನ ಮೇಲೆ ಆಕ್ರಮಣ ಮಾಡಲು ಧೈರ್ಯ ಮಾಡಲಿಲ್ಲ.
ಭಂಡಾಸುರನು ತನ್ನ ಭುಜಗಳಿಂದ ವಿಶುಕ್ರ ಮತ್ತು ವಿಶಾಂಗ ಎಂಬ ಇಬ್ಬರು ಸಹೋದರರನ್ನು ಸೃಷ್ಟಿಸಿದನು. ಅವನ ಹೃದಯದಿಂದ ಸಹೋದರಿ ಧುಮಿನಿಯನ್ನು ಸೃಷ್ಟಿಸಿದನು. ಅವನು ನಾಲ್ವರು ಪತ್ನಿಯರು, ಒಟ್ಟು ಮೂವತ್ತು ಗಂಡು ಮಕ್ಕಳನ್ನು ಮತ್ತು ರಶ್ಮಿ ಪ್ರಭಾ ಎಂಬ ಮಗಳನ್ನು ಹೊಂದಿದ್ದನು.
ಭಗವಾನ್ ವಿಷ್ಣುವಿನ ಮಾಯೆಯಿಂದ ಕಾಮ ಮತ್ತು ಭೋಗದಲ್ಲಿ ಮುಳುಗಿದ್ದ ಭಂಡಾಸುರನ ಅವಿರತ ಆಳ್ವಿಕೆಯ ಕಳೆದ ಕೆಲವು ಸಾವಿರ ವರ್ಷಗಳಿಂದ ಅವನ ಕೆಟ್ಟ ಆಡಳಿತದಲ್ಲಿದ್ದ ದೇವತೆಗಳು, ಮಾನವರು ಅವನನ್ನು ಸಂಹರಿಸಲು ಸಹಕಾರಿಯಾಗುವಂತೆ ದ ಪರಾಶಕ್ತಿ ದೇವಿಯನ್ನು ಪೂಜಿಸಲು ತೊಡಗಿದ್ದರು. ಹೀಗಿರಲು ಅದೊಮ್ಮೆ ಭಂಡಾಸುರನಿಗೆ ಈ ಕುರಿತು ಅರಿವಾಗಿ ಯಜ್ಞವನ್ನು ಮಾಡುತ್ತಿದ್ದ ಸ್ಥಳದ ಮೇಲೆ ಆಕ್ರಮಣ ನಡೆಸಿದನು. ಆಗ ಭಯದಿಂದ, ದೇವತೆಗಳು ಅಗ್ನಿಕುಂಡವನ್ನು ಪ್ರವೇಶಿಸಿ ಸಜೀವ ದಹನವಾದರು, ಇದರಿಂಡ ಸಮಾಧಾನಗೊಂಡ ಭಂಡಾಸುರ ಅಲ್ಲಿಂದ ಹೊರಟು ಹೋದನು. ಆದರೆ ಇತ್ತ ತ್ರಿಪುರ ಸುಂದರಿ ದೇವಿಯು ಅವತಾರವೆತ್ತಿ ಸಜೀವ ದಹನವಾಗಿದ್ದ ದೇವತೆಗಳನ್ನೆಲ್ಲಾ ಮತ್ತೆ ಸಜೀವವಾಗಿಸಿ ಅವರ ಕರ್ತವ್ಯಗಳನ್ನು ಪುನಃಸ್ಥಾಪಿಸಿದಳು.
ಅವಳು ಬ್ರಹ್ಮಾಂಡವನ್ನು ಮರುಸೃಷ್ಟಿಸಿದಳು. ತನ್ನ ವಿವಿಧ ಅಂಗಗಳಿಂದ, ಅವಳು ಲೋಕಗಳು, ಪಂಚ ಭೂತಗಳು ಇತ್ಯಾದಿಗಳನ್ನು ಸೃಷ್ಟಿಸಿದಳು ನಂತರ, ಅವಳು ತನ್ನ ಹೃದಯದಿಂದ ಬಾಲಾ ತ್ರಿಪುರಸುಂದರಿಯನ್ನು, ಕುಂಡಲಿನಿಯಿಂದ ಗಾಯತ್ರಿಯನ್ನು, ಅವಳ ಅಹಂಕಾರದಿಂದ ವಾರಾಹಿಯನ್ನು, ಅವಳ ಬುದ್ಧಿಯಿಂದ ಮಾತಂಗಿಯನ್ನು, ಅಂಕುಶದಿಂದ ಸಂಪತ್ಕರಿಯನ್ನು, ಅವಳ ಪಾಶದಿಂದ ಅಶ್ವಾರೂಢವನ್ನು ಮತ್ತು ನಕುಲೇಶ್ವರಿ, ಜ್ವಾಲಾಮಾಲಿನಿ ಮುಂತಾದ ಇತರ ದೇವತೆಗಳನ್ನು ಸೃಷ್ಟಿಸಿದಳು.
ಇದಾದ ನಂತರ ತ್ರಿಪುರ ಸುಂದರಿ ದೇವಿಯು ಭಂಡಾಸುರನ ವಿರುದ್ಧ ಯುದ್ಧಕ್ಕೆ ಹೊರಟಳು. ಅವನನ್ನು ಮತ್ತು ಶೋಣಿತಪುರದ ನಿವಾಸಿಗಳನ್ನು ನಾಶಮಾಡುವಷ್ಟು ಪ್ರಬಲವಾದ ಸೈನ್ಯವನ್ನು ಜೊತೆಗೆ ಒಯ್ದಳು. ಸಂಪತ್ಕರಿ ದೇವಿಯು ಆನೆಯ ಮೇಲೆ ಮತ್ತು ಅಶ್ವಾರೂಢ ದೇವಿಯು ಕುದುರೆಯ ಮೇಲೆ ಮುನ್ನಡೆಸಿದಳು. ಅವಳು ಸ್ವತಃ ಶ್ರೀ-ಚಕ್ರ, ಚಕ್ರರಾಜ-ರಥದ ಮೇಲೆ ದೇವರಿಗೆ ಮತ್ತು ಮನುಷ್ಯನಿಗೆ ತಿಳಿದಿರುವ ಪ್ರತಿಯೊಂದು ಆಯುಧಗಳೊಂದಿಗೆ ಯುದ್ಧ ಹೂಡಿದಳು. ಅವಳ ಮುಖ್ಯ ಸೈನ್ಯಾಧಿಕಾರಿಯಾಗಿದ್ದ ದೇವಿ ದಂಡಿನಿ (ವರಾಹಿ) ಅವಳನ್ನು ಅನುಸರಿಸಿದಳು. ಆಕೆಯ ಪ್ರಧಾನ ಮಂತ್ರಿ /ಶ್ಯಾಮಲಾ (ಮಾತಂಗಿ) ಕೂಡ ಜತೆಯಾದಳು.
ಯುದ್ಧವು ದೇವಿ ಲಲಿತಾ (ತ್ರಿಪುರ ಸುಂದರಿ) ಪರವಾಗಿತ್ತು. ಅವಳ ಮಗಳು ಬಾಲಾ ಭಂಡಾಸುರನ ಎಲ್ಲಾ ಮೂವತ್ತು ಮಕ್ಕಳನ್ನು ಯಶಸ್ವಿಯಾಗಿ ಕೊಂದಳು, ಆದರೆ ಮಾತಂಗಿ ಅವನ ಸಹೋದರ ವಿಶಾಂಗನನ್ನು ಕೊಂದಳು. ಅವನ ಇನ್ನೊಬ್ಬ ಸಹೋದರ ವಿಶುಕ್ರನು ವರಾಹಿಯಿಂದ ಕೊಲ್ಲಲ್ಪಟ್ಟನು. ಸಾಯುವ ಮೊದಲು, ವಿಶುಕ್ರನು ದೇವಿಯ ಪಡೆಗಳ ಮಧ್ಯ ಜಯ-ವಿಘ್ನ-ಯಂತ್ರವನ್ನು ಇರಿಸಿದ್ದನು. ಇದು ಲಲಿತಾ, ಬಾಲ, ಕಾಮೇಶ್ವರ ಶಿವ, ಮಾತಂಗಿ ಮತ್ತು ವಾರಾಹಿಯನ್ನು ಹೊರತುಪಡಿಸಿ ಉಳಿದವರೆಲ್ಲರನ್ನು ಸ್ತಬ್ಧಗೊಳಿಸಿತು. ನಂತರ ದೇವಿ ಲಲಿತಾ ತನ್ನ ಪತಿಯೊಂದಿಗೆ ಕಾಮೇಶ್ವರನಿಂದ ಮಹಾಗಣಪತಿಯನ್ನು ಸೃಷ್ಟಿಸಿದಳು, ಅವನು ವಿಶುಕ್ರನ ಯಂತ್ರವನ್ನು ನಾಶಪಡಿಸಿದ.
ಭಂಡಾಸುರ ಈಗ ತನ್ನ ಏಳು ಅವತಾರಗಳಲ್ಲಿ ವಿಷ್ಣುವಿನಿಂದ ಕೊಲ್ಲಲ್ಪಟ್ಟ ರಾಕ್ಷಸರನ್ನು ಮರುಸೃಷ್ಟಿಸಿದನು. ದೇವಿ ಲಲಿತಾ ಪಾರ್ವತಿಯು ತನ್ನ ಬೆರಳಿನ ಉಗುರುಗಳಿಂದ ವಿಷ್ಣುವಿನ ಪ್ರತಿಯೊಂದು ಅವತಾರಗಳನ್ನು (ದಶಾವತಾರ) ಹೊರತಂದಳು, ಅದು ರಾಕ್ಷಸರನ್ನು ಅಂತ್ಯಗೊಳಿಸಿತು. ಲಲಿತಾ ದೇವಿಯು ತನ್ನ ದಾರಿಗೆ ಬಂದ ರಾಕ್ಷಸನು ಕಳುಹಿಸಿದ ಪ್ರತಿ ಅಗ್ನಿಯಾಸ್ತ್ರವನ್ನೂ ನಂದಿಸಿದಳು ಮತ್ತು ಮಹಾ-ಪಾಶುಪತಾಸ್ತ್ರದಿಂದ ಅವನ ಸೈನ್ಯವನ್ನು ನಾಶಪಡಿಸಿದಳು. ಕೊನೆಗೆ ಭಂಡಾಸುರನನ್ನು ಕೊಂದು ಶೋಣಿತಾಪುರವನ್ನು ಕಾಮೇಶ್ವರಾಸ್ತ್ರದಿಂದ ನಾಶಮಾಡಿದಳು. ಭಂಡಾಸುರನು ತನ್ನ ಬಾಣದಿಂದ ಭಸ್ಮವಾದಾಗ, ದೇವಿಯು ಕಾಮದೇವನನ್ನು ಅವನ ಚಿತಾಭಸ್ಮದಿಂದ ಮರುಸೃಷ್ಟಿಸಿದಳು. ಮತ್ತೆ ಕಾಮನು ರತಿಯೊಂದಿಗೆ ವಿವಾಹವಾಗಿ ಬಹುವರ್ಗಕ್ಕೆ ಶಾಂತಿ ಪುನರ್ ಸ್ಥಾಪನೆಯಾಯಿತು.
No comments:
Post a Comment