Friday, September 20, 2013

ಇತಿಹಾಸದ ಅಚ್ಚರಿಗಳಲ್ಲಿ ಒಂದು ಇಣುಕು: ‘ಕರ್ನಾಟಕದ ಅಂದಿನ ಶೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಹುಗಳು’

    ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರ,
    ಕಳೆದ ವಾರ ಕನ್ನ್ಡಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ ಎನ್ನುವ ವಿಚಾರವೇ ನನಗೊಂದು ಖುಷಿಯ ಸಂಗತಿ.) ಕನ್ನಡ್ಶ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅಗ್ರರಲ್ಲಿ ಒಬ್ಬರಾದ ಡಾ. ಎಮ್. ಚಿದಾನಂದಮೂರ್ತಿಯವರ ‘ಕರ್ನಾಟದ ಅಂದಿನ ಶೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಗಳು’ ಎನ್ನುವ ಹೆಸರಿನ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ವಿಷಯದ ದೃಷ್ಟಿಯಿಂದ ತೀರಾ ವಿನೂತನವಾದುದ ಅಷ್ಟೇ ಅಲ್ಲ ಬಹು ಮಔಲ್ಯಯುತವಾದುದು ಕೂಡ. ಲೇಖಕರೇ ಹೇಳುವಂತೆ ‘ಇಂತಹಾ ಒಂದು ಪುಸ್ತಕ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು,ಇತರೆ ಭಾರತೀಯ ಭಾಷೇಗಳಲ್ಲಿಯೂ ಬಂದಂತಿಲ್ಲ’. ಈ ಒಂದು ಪುಸ್ತಕದಿಂದ ನಾವು-ನೀವು ಓದಿರುವ ಕನ್ನಡದ ಪ್ರಾಚೀನ ಕವಿಗಳು, ನಮ್ಮನ್ನಾಳಿದ ರಾಜ ಮಹಾರಾಜರ ವಂಶಸ್ಥರ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬಹುದು.
    ಕನ್ನಡದ ಶ್ರೇಷ್ಠ ಸಂಶೋಧಕರೂ, ಚಿಂತಕರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಎಮ್. ಚಿದಾನಂದಮೂರ್ತಿಗಳ ಈ ಕಿರುಹೊತ್ತಿಗೆ ಅವರ ಹಲವು ವರ್ಷಗಳ ಪರಿಶ್ರಮದ ಫಲ. ಶತ ಶತಮಾನಗಳ ಹಿಂದೆ ಆಳಿಹೋದ ರಾಜವಂಶಸ್ಥರ, ನೂರಾರು-ಸಾವಿರಾರು ವರ್ಷಗಳ ಹಿಂದೆ ಬದುಕಿ ಕಾವ್ಯಗಳನ್ನು ರಚಿಸಿದ ಪ್ರಾಚೀನ ಕವಿಮಹೋದಯರ ಈಗಿನ ವಂಶಸ್ಥರು ಯಾರೆನ್ನುವುದನ್ನು ಪತ್ತೆ ಮಾಡಿ ಅವರನ್ನು ಸಂದರ್ಶಿಸಿ, ಅವರ ಬಳಿ ಇದ್ದ ಅಂದಿನ ಕಾಲದ ಕುರುಹುಗಳನ್ನು ನೋಡಿ ಅದರ ಬಗ್ಗೆ ಲೇಖನ ಅಥವಾ ಪುಸ್ತಕ ಬರೆಯುವುದು ಅಷ್ಟೇನೂ ಸುಲಭವಲ್ಲ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನನ್ನು ತೆಗೆದುಕೊಂಡರೆ ಅವನ ಕಾಲ ಕ್ರಿ.ಶ.೯೦೨. ಅವನು ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಪೂರ್ಣಗೊಳಿಸಿದ್ದು ಕ್ರಿ.ಶ.೯೪೨ ರಲ್ಲಿ. ಅಂದರೆ ಇಂದಿಗೆ ಸುಮಾರು ಸಾವಿರದ ನೂರು ವರ್ಷಗಳಾದವು. ಹೀಗೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರ ವಿವರಗಳಾನ್ನು ಪತ್ತೆ ಮಾಡುವುದು ಮತ್ತು ಅವರನ್ನು ಸ್ವತಃ ಸಂದರ್ಶಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಪ್ರಕಟಿಸುವುದು ಬಲು ಅಪರೂಪದ ಸಂಗತಿ. ಹೀಗಾಗೆ ಇಂತಹಾ ಪುಸ್ತಕವು ಕನ್ನಡದಲ್ಲಿ ತೀರಾ ನೂತನವಾಗಿರುವುದು ಸಾಧ್ಯ.
    ಸ್ನೇಹಿತರೇ, ಚಿದಾನಂದಮೂರ್ತಿಗಳೇ ಹೇಳಿಕೊಳ್ಳುವಂತೆ- “‘ನನ್ನ ಹಲವು ವರ್ಷಗಳ ನಿರಂತರ ಸಂಶೋಧನೆ ಕಾರ್ಯದಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಶ್ರಮ, ಆಂತರಿಕ ಹತಾಶೆ, ಕಾತುರಗಳನ್ನು ಅನುಭವಿಸಿದ್ದೇನೆ ಹಲವು ರೋಮಾಂಚಕ ಕ್ಷಣಗಳನ್ನು ಅನುಭವಿಸಿದ್ದೇನೆ.......... ಈ ಕಿರು ಕೃತಿಯನ್ನೋದಿದವರಿಗೆ ನಮ್ಮ ಹಿಂದಿನ ಕವಿಗಳು, ಮಹನೀಯರು, ಹೃದಯಕ್ಕೆ ಹತ್ತಿರವಾಗುತ್ತಾರೆ, ಆಪ್ತರಾಗುತ್ತಾರೆ’’.
    ಈ ಪುಸ್ತಿಕೆಯಲ್ಲಿ ಒಟ್ಟು ಹದಿನೇಳು ಅಧ್ಯಾಯಗಳಿದ್ದು ಮೊದಲನೇ ಅಧ್ಯಾಯವು ‘ಪ್ರವೇಶಿಕೆ’. ಇದರಲ್ಲಿ ಚಿದಾನಂದಮೂರ್ತಿಗಳು ತಾವು ಕನ್ನಡ ನಾಡಿನ ಶ್ರೇಷ್ಠರ ಈಗಿನ ವಂಶಸ್ಥರನ್ನು ಹುಡುಕಲು ಸಿಕ್ಕ ಸ್ಪೂರ್ತಿಯ ಕುರಿತಾಗಿ ಹೇಳಿಕೊಂಡಿದ್ದಾರೆ. ಅವರು ಇಂಗ್ಲೆಂಡಿಗೆ ಭೇಟಿ ಕೊಟ್ಟಾಗ ಅಲ್ಲಿನ ಮಹಾಕವಿ ವರ್ಡ್ಸ್ ವರ್ತನ ಮನೆಗೆ ಹೋದಾಗಿನ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಇನ್ನು ಎರಡನೇ ಅಧ್ಯಾಯದಿಂದ ಹದಿನೇಳನೆ ಅಧ್ಯಾಯದವರೆಗೆ ಪಂಪನಿಂದ ಮೊದಲ್ಗೊಂಡು ನಾನ್ಯದೇವ, ಬಸವಣ್ಣ, ಹರಿಹರ, ರಾಘವಾಂಕ, ಕುಮಾರವ್ಯಾಸ, ವಿಜಯನಗರದ ದೊರೆಗಳು, ಚಾಮರಸ, ಸೋದೆ, ಕೆಳದಿಯ ಅರಸರು, ಕಿತ್ತೂರು ರಾಣಿ ಚೆನ್ನಮ್ಮ, ಕೊಡಗು ಮತ್ತು ಮೈಸೂರಿನ ಅರಸರ ಈಗಿನ ವಂಶಸ್ಥರು ಹಾಗೂ ಅವರ ಕುರುಹುಗಳನ್ನು ಅವರ ಛಾಯಾಚಿತ್ರ ಹಾಗೂ ಸಂಪರ್ಕ ದೂರವಾಣಿ ಸಂಖ್ಯೆಗಳ ಸಹಿತವಾದ ಮಾಹಿತಿಯನ್ನು ನೀಡುತ್ತಾರೆ.
    ಇಂದಿಗೆ ಸರಿಸುಮಾರು ಸಾವಿರದ ನೂರು ವರ್ಷಗಳ ಹಿಂದೆ ಇದ್ದಂತಹಾ ಪಂಪ ಕವಿಯ ವಂಶಸ್ಥರು ಇಂದಿಗೂ ಧಾರವಾಡದ ಅಣ್ಣಿಗೇರಿಯಲ್ಲಿದ್ದು ಕನ್ನಡದ ಮುಖ್ಯ ವಿದ್ವಂಸರುಗಳಾಲ್ಲಿ ಒಬ್ಬರಾದ ಜಿ. ಬ್ರಹ್ಮಪ್ಪನವರು ಇಂದಿನ ವಂಶಸ್ಥರನ್ನು ಪ್ರಥಮವಾಗಿ ಪತ್ತೆ ಮಾಡಿರುತ್ತಾರೆ. ಪಂಪನ ತಂದೆಯ ಕಡೆಯ ವಂಶಸ್ಥರಾದ ಭೀಮಪ್ಪಯ್ಯ ದೇಶಪಾಂಡೆ ಹಾಗೂ ತಾಯಿಯ ಕಡೆಯ ವಂಶಸ್ಥರಾದ ಗೋವಿಂದ ಭಟ್ ಜೋಶಿಯವರಿಬ್ಬರೂ ಅಣ್ಣಿಗೇರಿಯಲ್ಲಿಯೇ ಇರುವುದು ಇನ್ನೊಂದು ವಿಶೇಷ. ಅಲ್ಲದೆ ಆಂಧ್ರದ ಕುರಿಕಾಲವೆಂಬಲ್ಲಿ ದೊರಕಿದ ಪಂಪನ ತಮ್ಮ ಜಿನವಲ್ಲಭನ ಶಾಸನದಲ್ಲಿ ಉಲ್ಲೇಖಿಸಲಾದ ಕವಿತಾಗುಣಾರ್ಣವ ಕೆರೆಯನ್ನೂ ಸಹ ಪತ್ತೆಹಚ್ಚಲಾಗಿದ್ದು ಈಗದನ್ನು ಅಲ್ಲಿನ ಜನರು ‘ಉಡನ್ ಚೆರವು’ ಎನ್ನುವ ಹೆಸರಿನಲ್ಲಿ ಗುರುತಿಸುತ್ತಾರೆ.
    ನೇಪಾಳವನ್ನಾಳಿದ ‘ಕರ್ನಾಟ’ವಂಶದ ದೊರೆಗಳಲ್ಲಿ ನಾನ್ಯದೇವನ ಹೆಸರು ಅತಿ ಮುಖ್ಯವಾಗಿ ಕೇಳಿಬರುತ್ತದೆ. ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನ ಸಮಂತನಾಗಿದ್ದುಕೊಂಡು ಆಳ್ವಿಕೆ ನಡೆಸಿದ ನಾನ್ಯದೇವನ ಕಾಲ ಸುಮಾರಾಗಿ ಕ್ರಿ.ಶ. ೧೧೦೦ ಆಗಿರುತ್ತದೆ. ಅಂತಹಾ ನಾನ್ಯದೇವಾ ವಂಶಸ್ಥರೌ ಇಂದಿಗೂ ನೇಪಾಳದಲ್ಲಿ ವಾಸವಾಗಿದ್ದಾರೆ. ನೇಪಾಳದ ಕಟ್ಮಂಡುವಿನಲ್ಲಿ ನೆಲೆಸಿರುವ ಶೀ ದೇವ್ ವೈದ್ಯ ದಂಪತಿಗಳು ಕನ್ನಡ ನಾನ್ಯದೇವನ ವಂಶಸ್ತಹ್ರೆನ್ನುವುದು ಅವರಲ್ಲಿರುವ ವಂಶವೃಕ್ಷದ ದಾಖಲೆಯಿಂದ ದೃಢಪಟ್ಟಿದೆ. (ಇಲ್ಲಿ ನಾವು ಗಮನ್ಸಬಹುದಾದ ಅಂಶವೆಂದರೆ ನಾನ್ಯದೇವನ ಹೆಸರಿನಲ್ಲಿನ ‘ದೇವ’ ಎನ್ನುವ ಪದ ಇಂದಿಗೂ ಆ ವಂಶಿಗರ ಹೆಸರಿನೊಂದಿಗೆ ಸೇರಿಕೊಂಡು ಬಂದಿದೆ!)
    ಇನ್ನು ಕನ್ನಡದ ಶ್ರೇಷ್ಠ ವಚನಕಾರ ಯುಗಪುರುಷ ಜಗಜ್ಯೋತಿ ಬಸವೇಶ್ವರ ಎಂದೆಲ್ಲಾ ಕರೆಸಿಕೊಳ್ಳುವ ಬಸವಣ್ಣನ ವಂಶಸ್ಥರು ಇಂದೂ ಸಹ ಬಾಗೇವಾಡಿಯಲ್ಲಿದ್ದಾರೆ. ಶೀ ಕಿರಣ್ ಕುಲಕರ್ಣಿಯವರು ಬಸವಣ್ಣನ ತಂದೆಯ ಕಡೆಯ ಈಗಿನ ವಂಶಸ್ಥರಾಗಿದ್ದಾರೆ. ಇನ್ನೊಂದು ವಿಚಾರವೆಂದರೆ ಎಲ್ಲರೂ ಸಾಧಾರಣವಾಗಿ ತಿಳಿದಿರುವಂತೆ ಬಸವಣ್ಣ ಜನ್ಮಸ್ಥಾನವು ಬಾಗೇವಾಡಿಯಾಗಿರದೆ ಆತನ ತಾಯಿಯ ತೌರು ಮನೆಯಾದ ಇಂಗುಳೇಶ್ವರವಾಗಿರುತ್ತದೆ. ಬಸವಣ್ಣನ ತಂದೆ ಮಾದರಸನ ಮೊದಲ ಪತ್ನಿ ಹೆರ್ರಿಗೆ ಸಮಯದಲ್ಲಿ ತೀರಿಇಕೊಳ್ಳುತ್ತಾಳೆ. ಮಾದರಸನು ಮಾದಲಾಂಬಿಕೆಯನ್ನು ಎರಡನೆ ವಿವಾಹವಾಗುತ್ತಾನೆ. ಎಂದರೆ ಬಸವಣ್ಣ ಮಾದಎ=ರಸನ ಎರಡನೆ ಪತ್ನಿಯ ಮಗನಾಗಿದ್ದು ಮಾದಲಾಂಬಿಕೆಯ ತೌರೂರು ಇಂಗುಳೇಶ್ವರದಲ್ಲಿ ಜನಿಸುತ್ತಾನೆ. ಮಾದರಸನ ಮೊದಲ ಪತ್ನಿಯ ಮಗ ದೇವರಾಜನೆನ್ನುವುದು ಕ್ರಿ.ಶ್.೧೨೬೦ ರ ಶಿಲಾಶಾಸನವೊಂದರಲ್ಲಿ ಉಲ್ಲೇಖಗೊಂಡಿದೆ. ಈ ದೇವರಾಜನ ವಂಶಸ್ಥರೂ ಸಹ ಬೆಳಗಾವಿಯ ಅರ್ಜುನವಾಡವೆಂಬಲ್ಲಿ ಇಂದು ನೆಲೆಸಿರುವುದನ್ನು ಲೇಖಕರು ಪತ್ತೆ ಮಾಡಿದ್ದಾರೆ. ಬಸವಣ್ಣನ ತಾಯಿಯ ವಂಶಸ್ಥರಾದ ಅರವಿಂದ ಕುಲಕರ್ಣಿಗಳು ಇಂದಿಗೂ ಇಂಗುಳೇಶ್ವರದಲ್ಲಿ ನೆಲೆಸಿದ್ದಾರೆ. ಅಂದಹಾಫ಼ೆ ಬಸವಣ್ಣನ ಇಂದಿನ ವಂಶಸ್ಥರ ಬಗ್ಗೆ ಪ್ರಥಮವಾಗಿ ಗುರುತಿಸಿದವರು ಕನ್ನಡದ ಶೇಷ್ಠ ವಿದ್ವಾಂಸರಾಗಿದ್ದ ಡಾ. ಸಿದ್ದಯ್ಯ ಪುರಾಣಿಕರು.
    ಬಸವಣ್ಣನ ಸಮಕಾಲೀನಳಾಗಿದ್ದ ಕನ್ನಡದ ಶೇಷ್ಠ ವಚನಗಾರ್ತಿ ಅಕ್ಕಮಹಾದೇವಿಯ ವಂಶಸ್ಥರು ಗೋಕಾಕದಲ್ಲಿ ನೆಲೆಸಿದ್ದು ಈಗಿರುವ ಮೃತ್ಯುಂಜಯ ಹಳೆ ಪಟ್ಟಣಶೇಟ್ಟಿ ಯೆನ್ನುವವರು ಅಕ್ಕನ ದೊಡಡಪ್ಪನ ಕಡೆಯ ವಂಶಸ್ಥರಾಗಿರುತ್ತಾರೆಂದು ಅವರ ಬಳಿಯಿರುವ ವಂಶಾವಳಿ ದಾಖಲೆಗಳಿಂದ ಚಿದಾನಂದಮೂರ್ತಿಗಳು ಪತ್ತೆ ಮಾಡಿರುತ್ತಾರೆ.
    ಕನ್ನಡದಲ್ಲಿ ‘ಗಿರಿಜಾ ಕಲ್ಯಾಣ’ದಂತಹಾ ಚಂಪೂ ಕಾವ್ಯದೊಂದಿಗೆ ಅನೇಕ ಶಿವಶರಣಾರ ಜೀವನದ ಕುರಿತಾಗಿ ರಗಳೆಗಳನು ರಚಿಸಿ ಖ್ಯಾತನಾದಂತಹಾ ಹರಿಹರ ಕವಿಯು ವಾಸವಿದ್ದ ಮನೆಯ ಜಾಗವನ್ನು ಪತ್ತೆ ಮಾಡಿದ ವಿವರಗಳು(ಹಂಪೆಯ ವಿರೂಪಾಕ್ಷ ದೇವಾಲಯದ ಪಕ್ಕದ ಮನ್ಮಥ್ ಕುಂಡದ ದಡದಲ್ಲಿ) ಹಾಗೇ ಹರಿಹರನ ಸೋದರಳಿಯನಾದ ‘ಹರಿಶ್ಚಂದ್ರ ಕಾವ್ಯ’, ‘ವೀರೇಶ ಚರಿತೆ’, ‘ಸಿದ್ದರಾಮ ಚಾರಿತ್ರ್ಯ’ದಂತಹಾ ಷಟ್ಪದಿ ಕಾವ್ಯಗಳನ್ನು ಕನ್ನಡಕ್ಕೆ ನೀಡಿದ ‘ಷಟ್ಪದಿ ಬ್ರಹ್ಮ’ನೆಂದು ಖ್ಯಾತನಾದ  ರಾಘವಾಂಕನ ಸಮಾಧಿ ಸ್ಥಳವನ್ನೂ ಇಂದಿನ ಬೇಲೂರಿನಲ್ಲಿರುವ ಪಾತಾಳೇಶ್ವರ ದೇಗುಲವೆಂದು ಪತ್ತೆ ಹಚ್ಚಲಾಗಿದೆ. ಜತೆಗೆ ಕನ್ನಡದ ಇನ್ನೊಬ್ಬ ಮಹತ್ವದ ಕವಿಯಾಗಿದ್ದ ಕೆರೆಯ ಪದ್ಮರಸನು ಕಟ್ಟಿಸಿದ್ದ ಕೆರೆಯನ್ನೂ ಸಹ ಪತ್ತೆಯಾಗಿದ್ದು ಬೇಲೂರಿನಲ್ಲಿರುವ ಬಿಷ್ಟಮ್ಮನ ಕೆರೆಯೇ ಪದ್ಮರಸನು ಅಂದು ಕಟ್ಟಿಸಿದ್ದ ಕೆರೆಯಾಗಿದೆ.
    ಕನ್ನಡದ ಇನ್ನೊಬ್ಬ ಮಹತ್ವದ ಕವಿಯಾದ ಕುಮಾರವ್ಯಾಸ ಅಥವಾ ಗದುಗಿನ ನಾರಣಪ್ಪನ ವಂಶಸ್ಥರ ವಿವರಗಳೂ ಈ ಪುಸ್ತಿಕದಲ್ಲಿ ನಮಗೆ ದೊರೆಯುತ್ತವೆ. ಅಂದಹಾಗೆ ‘ಕರ್ಣಾಟ ಭಾರತ ಕಥಾಮಂಜರಿ’ ಅಥವಾ ಕುಮಾರವ್ಯಾಸ ಭಾರತವನ್ನು ಬರೆದಿರುವ ಕನ್ನಡದ ಖ್ಯಾತ ಕವಿ ನಾರಣಪ್ಪನ ಹುಟ್ಟೂರು ಇಂದಿನ ಹುಬ್ಬಳ್ಳಿಯಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿರುವ ಕೋಳಿವಾಡವಾಗಿದ್ದು ಅಲ್ಲಿ ಇಂದಿಗೂ ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲ ಕುಲಕರ್ಣಿಯವರು ವಾಸವಿದ್ದಾರೆ. ಕುಮಾರವ್ಯಾಸನ ತಮ್ಮನ ವಂಶಜರು ಸಹ ಕೋಳಿವಾಡದಲ್ಲಿದ್ದು ಕುಮಾರವ್ಯಾಸನ ನಂತರ ಒಂಭತ್ತನೇ ತಲೆಮಾರಿನಿಂದ ಕೋಳಿವಾಡದ ಗೌಡಿಕಿ ಹಾಗೂ ಕುಲಕರ್ಣಿತ್ವವು ಈ ಮನೆತನದವರ ಪಾಲಿಗೆ ಬಂದಿತು.
    ಇನ್ನು ಕನ್ನಡ ನಾಡಿನ ಮತ್ತು ದಕ್ಷಿಣ ಭಾರತದ ಮುಖ್ಯ ರಾಜವಂಶಗಳಲ್ಲಿ ಒಂದಾದ ವಿಜಯನಗರದ ಅರಸರ ವಂಶಜರು ಮತ್ತು ವಿಜಯನಗರದ ರಾಜಗುರುಗಳಾಗಿದ್ದ ಶೀ ವಿದ್ಯಾರಣ್ಯ ಮಹಾಸ್ವಾಮಿಗಳ ಮಠದ ಪರಂಪರೆಗಳ ಬಗ್ಗೆಯೂ  ಪುಸ್ತಕದಲ್ಲಿ ವಿವರಿಸಲಾಗಿದೆ. ಕ್ರಿ.ಶ.೧೫೬೫ ರ ರಕ್ಕಸಗಿ-ತಂಡರಗಿ ಯುದ್ದದಲ್ಲಿ ಪರಾಜಯಗೊಳ್ಳುವುದರೊಂದಿಗೆ ವಿಜಯನಗರದ ವೈಭವದ ಆಳ್ವಿಕೆ ಮುಕ್ತಾಯಗೊಂಡಿತು. ಆದರೆ ಅಳಿಯ ರಾಮರಾಯನ ನಂತರ ಆರಂಭಗೊಂಡ ಅರವೀಡು ವಂಶದ ಅರಸರು ಆಂಧ್ರದ ಪೆನುಗೊಂಡೆ ಮೊದಲಾದೆಡೆಗಳಲ್ಲಿ ನೆಲೆಸಿ ಆಡಳಿತವನ್ನು ಮುಂದುವರಿಸಿದರು. ಆ ಅರವೀಡು ವಂಶದ ದೊರೆಗಳ ವಂಶಸ್ಥರು ಇಂದಿಗೂ ಹೊಸಪೇಟೆಯಲ್ಲಿ ವಾಸವಿದ್ದಾರೆ. ರಾಜಾ ಅಚ್ಯುತರಾಯರು(೧೯೩೬-೨೦೦೮) ಮತ್ತವರ ಪತ್ನಿಯವರಾದ ರಾಣಿ ಚಂದ್ರಕಾಂತಾದೇವಿ ಹಾಗೂ ಅವರ ಪುತ್ರರಾದ ರಾಜಾ ಶೀಕೃಷ್ಣದೇವರಾಯರು ಇಂದು ಹೊಸಪೇಟೆಯಲ್ಲಿ ನೆಲೆಸಿದ್ದು ಲೇಖಕ ಚಿದಾನಂದಮೂರ್ತಿಗಳ ಮನೆಗೂ ಒಮ್ಮೆ ಬಂದಿದ್ದರು. ಹಾಗೇ ರಾಜಾ ಅಚ್ಯುತರಾಯ ದಂಪತಿಗಳನ್ನು ರಾಜಧಾನಿ ಬೆಂಗಳೂರಿಗೆ ಕರೆಸಿ ಸನ್ಮಾನವನ್ನು ಸಹ ನೆರವೇರಿಸಲಾಗಿತ್ತು.
    ಶೀ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ‘ಶೀ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಸಂಸ್ಥಾನ ಮಠ’ ವಿದ್ದು ಅದು ಹಿಂದೆ ವಿದ್ಯಾರಣ್ಯ ಮಹಾಸ್ವಾಮಿಗಳು ವಾಸವಿದ್ದ ಜಾಗವಾಗಿದೆ. ಇಂದಿಗೂ ಆ ಪರಂಪರೆಯನ್ನು ಮುಂದುವರಿಸಿರುವ ಗುರುಗಳನ್ನು ನಾವು ಅಲ್ಲಿ ಕಾಣುತ್ತೇವೆ. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕರ ಕುಲಗುರುಗಳಾಗಿದ್ದ ಕಾಶೀವಿಲಾಸ ಕ್ರಿಯಾಶಕ್ತಿಗಳವರು ವಾಸವಿದ್ದ ಗುಹೆಯನ್ನು ಗುರುತಿಸಲಾಗಿದೆ. ಈ ಗುರುಗಳ ಪರಂಪರೆಯು ವಿದ್ಯಾರಣ್ಯ ಸಂಸ್ಥಾನದಂತೆ ಮುಂದುವರಿದಿರುವುದಿಲ್ಲ.
    ಇನ್ನು ಕನ್ನಡದ ಮಹತ್ವದ ಕವಿಗಳಾದ ಚಾಮರಸ, ‘ಭರತೇಶ ವೈಭವ’ದ ಕರ್ತೃ ರತ್ನಾಕರ ವರ್ಣಿ, ಕನ್ನಡ ಬಸವಪುರಾಣವನ್ನು ಬರೆದ ಭೀಮಕವಿಯ ವಂಶಸ್ತಹ್ರು ಹಾಗೂ ಕುರುಹುಗಳ ಕುರಿತು ಸಹ ಈ ಪುಸ್ತಿಕೆಯಲ್ಲಿ ಚರ್ಚಿಸಲಾಗಿದೆ. ‘ಪ್ರಭುಲಿಂಗ ಲೀಲೆ’ಯ ಕರ್ತೃ ವಾದ ಚಾಮರಸನು ವಾಸವಿದ್ದ ಗುಹೆಯನ್ನು ಹಂಪಿಯಲ್ಲಿ ಗುರುತಿಸಲಾಗಿದ್ದು ರತ್ನಾಕರ ವರ್ಣಿಯ ವಂಶಸ್ಥರು ಮೂಡಬಿದಿರೆಯಲ್ಲಿರುವ ಜೈನ ಕುಟುಂಬದವರಾದ ರವಿರಾಜ ಶೆಟ್ಟರು ರತ್ನಾಕರ ವರ್ಣಿಯ ಇಂದಿನ ವಂಶಸ್ಥರಾಗಿರುತ್ತಾರೆ. ಭೀಮಕವಿಯ ಸಮಾಧಿ ಆಂಧ್ರದ ಅನಂತಪುರದ ಗಡೇಕಲ್ಲು ಗ್ರಾಮದಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ. ಇನ್ನು ಫಾಲ್ಕುರಿಕೆ ಸೋಮನಾಥನ ವಂಶಸ್ಥರು ಮಾಗಡಿ ತಾಲ್ಲೂಕು ಕಲ್ಯದಲ್ಲಿ ವಾಸವಿದ್ದು ಶೀ ಕೆ.ಪಿ. ಮಲ್ಲಿಕಾರ್ಜುನಾರಾದ್ಯರು ಸೋಮನಾಥನ ಇಂದಿನ ವಂಶಸ್ಥರಾಗಿದ್ದಾರೆ. ಇನ್ನು ಸೋಮನಾಥನ ಸಮಾಧಿ ಕಲ್ಯದ ಬೆಟ್ಟದ ಮೇಲಿರುವ ಕಲ್ಲೇಶ್ವರ ಬೆಟ್ತದ ಮೇಲಿದೆ ಎನ್ನುವುದು ಬೆಳಕಿಗೆ ಬಂದಿದೆ.
    ಅಂತೆಯೇ ವಿಜಯನಗರ ಕಾಲಾನಂತರ ನಮ್ಮನ್ನಾಳಿದ ಸೋದೆ, ಕೆಳದಿ, ಹಾಲೇರಿ ಹಾಗೂ ಮೈಸೂರು ಅರಸರ ವಂಶಸ್ಥರ ವಿಚಾರವಾಗಿಯೂ ಚಿದಾನಂದಮೂರ್ತಿಗಳಿ ಈ ಹೊತ್ತಿಗೆಯಲ್ಲಿ ದಾಖಲಿಸಿದ್ದಾರೆ.  ಸೋದೆ ವಂಶಸ್ಥರಲ್ಲಿ ಆಳ್ವಿಕೆ ನಡೆಸಿದ ಮಲ್ಲಮ್ಮಾಜಿಯವರ ವಂಶ್ಸಸ್ಥರು ಇಂದು ಗೋವಾದಲ್ಲಿ ನೆಲೆಸಿದ್ದು ಸವಾಯಿ ಸದಾಶಿವ ರಾಜೇಂದ್ರ ಒಡೆಯರು ಮತ್ತವರ ಮಕ್ಕಾಳು ಗೋವಾದ ಬಾಂದೇವಾಡಿ(ಬಾಂದೋವ್) ಎನ್ನುವಲ್ಲಿ ಇದ್ದಾರೆ. ವಿಜಯನಗರದ ಬಲಿಷ್ಟ ಸಾಮಂತ ರಾಜ್ಯವಾಗಿದ್ದ ಶಿವಮೊಗ್ಗದ ಕೆಳದಿ ಅರಸರ ಈಗಿನ ವಂಶಸ್ಥರಾದ ಲಿಂಗರಾಜ ನಾಯಕ್ ಹುಬ್ಬಳ್ಳಿಯಲ್ಲಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿರುವುದು ಬಹು ಮುಖ್ಯ ಸಂಗತಿಯಾಗಿದೆ. ಹಾಗೆಯೇ ‘ಕೆಳದಿ ನೃಪವಿಜಯ’ದ ಕರ್ತೃವಾದ ಲಿಂಗಣ್ಣ ಕವಿಯ ತಂದೆ- ತಾಯಿಯರ ವಂಶಸ್ಥರೂ ನಮ್ಮ ನಡುವೆ ಇದ್ದಾರೆ. ಇನ್ನು ಮಡಿಕೇರಿಯ ಹಾಲೇರಿ ದೊರೆಗಳ ಈಗಿನ ವಂಶಸ್ಥರು ಪೂನಾದಲ್ಲಿ ವಾಸವಾಗಿದ್ದು ಲೇಖಕರು ಅವರೊಂದಿಗೆ ದೂರವಾಣಿ ಮುಖಾಂತರ ಸಂಭಾಷಿಸಿದ್ದಾರೆ. ಗಂಗಾಧರ ಚಿರುಮೆ ಮತ್ತು ನಳಿನಿ ಗಂಗಾಧರ ಚಿರುಮೆಯವರುಗಳು ಮಡಿಕೇರಿ ಅರಸರ ವಂಶಸ್ಥರೆನ್ನುವುದು ಅವರ ಬಳಿಯಿರುವ ವಂಶವೃಕ್ಷದಿಂದ ಸಾಬೀತಾಗಿದೆ. ಹಾಗೆಯೇ ಮೈಸೂರಿನ ಒಡೆಯರ ಈಗಿನ ವಂಶಸ್ಥರಾದ ಶೀಕಂಠದತ್ತ ಒಡೆಯರುಗಳು ಮೈಸೂರು ಅರಮನೆಯಲ್ಲಿ ವಾಸವಿದ್ದಾರೆ.
    ಬೆಳಗಾವಿ ಜಿಲ್ಲೆಯ ಕಿತ್ತೂರು ಅದನ್ನಾಳಿದ ಚೆನ್ನಮ್ಮ ರಾಣಿಯಿಂದ ಪ್ರಸಿದ್ದವಾಗಿರುವ ಸ್ಥಳ. ಚಿಕ್ಕ ರಾಜ್ಯವಾಗಿದ್ದ ಕಿತ್ತೂರನ್ನುಅ ಬ್ರಿಟಿಷರು ತಮ್ಮಾಲು ಮುಂದಾದಾಗ ಧೈರ್ಯದಿಂದ ಕಾದಾಡಿ ಸ್ವಾತಂತ್ರ್ಯಕ್ಕಾಗಿ ತನ್ನನ್ನೇ ಬಲಿಕೊಟ್ತ ನಾಡು ಕಿತ್ತೂರು. ಅಂತಹಾ ನಾಡನ್ನಾಳಿದ ಚೆನ್ನಮ್ಮ ತಾಯಿಯ ಕೆಚ್ಚೆದೆಯ ಹೋರಾಟ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭರತ ಖಂಡದಲ್ಲಿಯೇ ಬಲು ಪ್ರಸಿದ್ದವಾದುದು. ಇಂತಹಾ ಚೆನ್ನಮ್ಮ ರಾಣಿಯ ವಂಶಸ್ಥರು ಸೋಮಶೇಖರ ದೇಸಾಯಿಗಳು ಇಂದು ಬೆಳಗಾವಿಯ ಖಾನಾಪುರದಲ್ಲಿ ನೆಲೆಸಿದ್ದಾರೆ.
    ಹೀಗೆ ಹಿಂದೆ ನಮ್ಮ ನಾಡನ್ನಾಳಿದ ಅದೆಷ್ಟೋ ರಾಜ ಮನೆತನಗಳಾ ಮತ್ತು ಕನ್ನ್ಡದಲ್ಲಿ ಮಹಾಕಾವ್ಯಗಳಾನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ ಮಹಾಕವಿಗಳಾ ವಂಶಸ್ಥರುಗಳು ಇಂದಿಗೂ ನಮ್ಮ-ನಿಮ್ಮ ನಡುವೆ ಇದ್ದಾರೆನ್ನುವುದೇ ನಮಗೊಂದು ಹೆಮ್ಮೆ. ಅಂತಹಾ ವಂಶಸ್ಥರ ವಿವರಗಳು ಮತ್ತು ಅಂದಿನವರ ವಾಸವಿದ್ದ ಸ್ಥಳದ ಕುರುಹುಗಳನ್ನು ಹುಡುಕಿ ಅದನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಂತಹಾ ಒಂದು ಪ್ರಯತ್ನವು ಈ ಕಿರು ಹೊತ್ತಿಗೆಯಲ್ಲಿ ಆಗಿರುವುದನ್ನು ನಾವು ಕಾಣುತ್ತೇವೆ. ಹೀಗಾಗಿ ಇಂತಹಾ ಒಂದು ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು ಮತ್ತು ಬೇರೆಯವರಿಗೆ ಓದುವಂತೆ ಸಲಹೆಮಾಡಬೇಕೆನ್ನುವುದು ನನ್ನ ಆಶಯ. ಹಾಗೆಯೇ ಇನ್ನೊಂದು ವಿಚಾರವನ್ನು ಹೇಳುವುದಾದಲ್ಲಿ ಇಂತಹಾ ಒಂದು ಪುಸ್ತಕ ಇಂಗ್ಲೀಷ್ ಸೇರಿದಂತೆ ಭಾರತದ ಬೇರೆ ಭಾಷೆಗಳಿಗೂ ಅನುವಾದವಾಗಬೇಕಿದೆ. ಆ ಮೂಲಕ ಕನ್ನಡ ನಾಡಿನ ಇತಿಹಾಸ- ಸಾಂಸ್ಕೃತಿಕ ಪರಂಪರೆ ಇಡೀ ವಿಶ್ವದಲ್ಲಿ ಪಸರಿಸುವಂತಾಗಬೇಕಿದೆ.
    ಇನ್ನು ಈ ಕೃತಿಯ ಪ್ರಸ್ತಾವನೆಯಲ್ಲಿ ಲೇಖಕರೇ ಹೇಳುವಂತೆ- “ಇದು ಕೇವಲ ಮಾಹಿತಿ ಮುಖಿಯಾದ ಕೃತಿ............ವಿಚಾರ್ಸಿದರೆ ಇನ್ನೂ ಕೆಲವು ಶ್ರೇಷ್ಠರ, ರಾಜವಂಶದ ಈಗಿನ ವಂಶಸ್ಥರ ವಿಚಾರಗಳನ್ನು ತಿಳಿಯಬಹುದು” . ಎಂದರೆ ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಸಂಶೋಧನೆಗೆ ಅವಕಾಶಗಳುಂಟು ಎಂದಾಯಿತು. ಮುಂದಿನ ಪೀಳಿಗೆಯವರೂ ಈ ಕಾರ್ಯದಲ್ಲಿ ಕೈಜೋಡಿಸಿದರೆ ಇನ್ನಷ್ಟು ಇತಿಹಾಸದಲ್ಲಿನ ನಿಘೂಢ ಸತ್ಯಗಳು ತೆರೆದುಕೊಳ್ಳುತ್ತವೆನ್ನುವುದರಲ್ಲಿ ಯಾವ ಅನುಮಾನವಿಲ್ಲ. (ಇನ್ನೊಂದು ಮುಖ್ಯ ವಿಚಾರವೆಂದರೆ ಈ ಪುಸ್ತಿಕೆಯಲ್ಲಿ ನೀಡಿರ್ವ ಎಲ್ಲಾ ವಂಶಸ್ಥರು, ಕುರುಹುಗಳ ಕುರಿತಾಗಿ ಪ್ರತ್ಯೇಕ ಛಾಯಾಚಿತ್ರಗಳಿವೆ, ಮತ್ತು ಕೆಲ ವಂಶೀಕರ ದೂರವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ. )
    ಒಟ್ಟಾರೆಯಾಗಿ ಕನ್ನಡಲ್ಲಿ ಇದೊಂದು ನೂತನ ಪ್ರಯತ್ನ/ ಈ ಪ್ರಯತ್ನಕ್ಕೆ ಶಿಕಾರವನ್ನು ಹಿರಿಯರಾದ ಚಿದಾನಂದಮೂರ್ತಿಗಳು ಹಾಕಿಕೊಟ್ಟಿದ್ದಾರೆ. ಅವರ ಈ ಪ್ರಯತ್ನಕ್ಕೆ ನಾವೆಲ್ಲರೂ ಈ ಪುಸ್ತಿಕೆಯನ್ನು ಓದುವಮೂಲಕ ಪ್ರೋತ್ಸಾಹಿಸೋಣ. ಹಾಗೆಯೇ ಸಾಧ್ಯವಾದರೆ ಇಂತಹಾ ಇನ್ನಷ್ಟು ವಿಚಾರಗಳನ್ನು ಬೆಳಕಿಗೆ ತರುವಲ್ಲಿ ನೆರವಾಗೋಣ.
    ನಮಸ್ಕಾರ.

Thursday, September 19, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -7

ಸೋಮನಾಥ(Somanath)
    ಗುಜರಾತ್ ನಲ್ಲಿರುವ ಹಿಂದೂಗಳ ಪ್ರಸಿದ್ದ ಯಾತ್ರಾಕ್ಷೇತ್ರಗಳಲ್ಲಿ ಸೋಮನಾಥ ದೇವಾಲಯವೂ ಒಂದು. ಈ ಹಿಂದೆ ಅಪಾರವಾದ ಸಂಪತ್ತನ್ನು ಹೊಂದಿದ್ದ ಸೋಮನಾಥ ದೇವಾಲಯದ ಮೇಲೆ ಇತಿಹಾಸದುದ್ದಕ್ಕೂ ಮುಸ್ಲಿಮ್ ಬಂಡುಕೋರರಿಂದ ಹತ್ತು ಹಲವು ಬಾರಿ ಧಾಳಿಯಾಗಿದೆ, ಅಲ್ಲದೆ ದೇವಾಲಯವನ್ನು ಸಂಪೂರ್ಣ ಧ್ವಂಸಗೊಳಿಸಲಾಗಿತ್ತು. ಮತ್ತೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಮಾರ್ಗದರ್ಶನ ಮತ್ತು ಸಾರಥ್ಯದಲ್ಲಿ ಬೃಹತ್ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಯಿತು. ಯುಗ ಯುಗಾಂತರಗಳಿಂದಲೂ ಜ್ಯೋತಿರ್ಲಿಂಗ ಸ್ವರೂಪಿಯಾಗಿ ಪರಮೇಶ್ವರನು ತಾನು ಸೋಮನಾಥನೆನ್ನುವ ಹೆಸರಿನಿಂದ ಭಕ್ತಕೋಟಿಯಿಂದ ಆರಾಧಿಸಲ್ಪಡುತ್ತಿರುವ ಪವಿತ್ರ ಕ್ಷೇತ್ರ ಈ ಸೋಮನಾಥ.
     ಬಹಳ ಹಿಂದೊಮ್ಮೆ ದಕ್ಷ ಬ್ರಹ್ಮನು ಭೂಮಿಯನ್ನಾಳುತ್ತಿರಲು ಅವನಿಗೆ ಇಪ್ಪತ್ತೇಳು ಮಂದಿ ಹೆಣು ಮಕ್ಕಳಿದ್ದರು. ಅವರಲ್ಲರನ್ನೂ ಚಂದ್ರನಿಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರನು ಒಬ್ಬೊಬ್ಬರೊಡನೆ ಒಂದೊಂದು ದಿನವಿರಬೇಕೆಂಬ ಒಪ್ಪಂದವೇರ್ಪಟ್ಟಿತ್ತು. ಹೀಗಿರಲು ಚಂದ್ರನಿಗೆ ಆ ಇಪ್ಪತ್ತೇಳು ಜನರಲ್ಲಿ ನಾಲ್ಕನೆಯವಳಾದ ರೋಹಿಣಿಯಲ್ಲಿ ಹೆಚ್ಚಿನ ಒಲವಿತ್ತು. ಹೀಗಾಗಿ ಚಂದ್ರನು ರೋಹಿಣಿಯೊಂದಿಗೆ ತನ್ನ ಸಮಯವನ್ನೆಲ್ಲಾ ಕಳೆಯಲು ಬಯಸಿದನು ಮತ್ತು ಇತರೆ ಇಪ್ಪತ್ತಾರು ಮಡದಿಯನ್ನು ಅಲಕ್ಷಿಸಲು ಪ್ರಾರಂಭಿಸಿದನು. ಆ ಮಡದಿಯರೇನಾದರೂ ಈ ಬಗ್ಗೆ ಚಂದ್ರನಲ್ಲಿ ಕೇಳಿದರೆ ಅವರನ್ನು ನಿಂದಿಸುತ್ತಿದ್ದನು. ಇದರಿಂದ ಬಲು ಬೇಸರಗೊಂಡ ಆ ಇಪ್ಪತ್ತಾರು ಮಡದಿಯರು ತಮ್ಮ ತಂದೆ ದಕ್ಷರಾಜನಲ್ಲಿಗೆ ಹೋಗಿ ತಮ್ಮ ಕಷ್ಟವನ್ನು ತೋಡಿಕೊಂಡರು. ತನ್ನ ಮಕ್ಕಳ ಮಾತುಗಳನ್ನು ಕೇಳಿಸಿಕೊಂಡ ದಕ್ಷನು ಅಳಿಯ ಚಂದ್ರನನ್ನು ಕರೆಸಿಕೊಂಡು ಬುದ್ದಿ ಮಾತುಗಳನ್ನು ಹೇಳಿದನು. ಆದರೂ ಸಹ ತನ್ನ ಮಾವನ ಬುದ್ದಿವಾದಗಳನ್ನು ಗಣನೆಗೆ ತೆಗೆದುಕೊಳ್ಳದ ಚಂದ್ರ ರೋಹಿಣಿಯೊಂದಿಗೆ ಕಾಲಕಳೆಯುವುದನ್ನೇ ಮುಂದುವರಿಸಿದನು. ಅಳಿಯನ ಈ ಬಗೆಯ ನಡತೆಯಿಂದ ಕೋಪಗೊಂಡ ದಕ್ಷರಾಜನು ಚಂದ್ರನಿಗೆ ಕ್ಷಯಿಸುವಂತೆ ಶಾಪವನ್ನಿತ್ತನು. ಈ ಶಾಪದಿಂದ ನೊಂದಂತಹಾ ಚಂದ್ರನು ಪರಿ ಪರಿಯಾಗಿ ಬೇಡಿ ಕಾಡಿದರೂ ಶಾಪದಿಂದ ಪಾರಾಗುವ ದಾರಿಯು ಕಾಣದೆ ಹೋಯಿತು. ಕೊನೆಗೆ ಬೇರೆ ದಾರಿ ಕಾಣದೆ ಸೃಷ್ಟಿಕರ್ತನಾದ ಬ್ರಹ್ಮನಲ್ಲಿಗೆ ಧಾವಿಸಿದ ಚಂದ್ರನು ತನ್ನನ್ನು ಈ ಶಾಪದಿಂದ ಪಾರುಮಾಡಬೇಕೆಂದು ಬೇಡಿಕೊಂಡನು. ಅದಕ್ಕೆ ಉತ್ತರಿಸಿದ ಬ್ರಹ್ಮನು “ನಾನು ಈ ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲ. ನೀನು ಪರಮೇಶ್ವರನ ಮೊರೆ ಹೋಗು, ಅವನಾದಲ್ಲಿ ಏನು ಬೇಕಾದರೂ ಮಡಿಯಾನು” ಎಂದು ಹೇಳಿ ಕಳಿಸಿದನು.
    ಬ್ರಹ್ಮನ ಮಾತಿನಿಂದ ಸಂತೋಷಗೊಂಡ ಚಂದ್ರನು ಶಿವನನ್ನು ಕುರಿತು ಹಲವು ವರ್ಷಗಳ ಕಾಲ ಘೋರ ತಪಸ್ಸನ್ನಾಚರಿಸಿದನು. ಅಂತಿಮವಾಗಿ ಚಂದ್ರನ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷನಾಗಲು ಚಂದ್ರನು ತನ್ನ ಮಾವನು ತನಗಿತ್ತ ಶಾಪದಿಂದ ನನ್ನನ್ನು ಮುಕ್ತನನ್ನಾಗಿ ಮಾಡೆಂದು ಬೇಡಿಕೊಂಡನು. ಅದಕ್ಕೆ ಪರಮೇಶ್ವರನು “ನಾನು ಆ ಶಾಪವನ್ನು ಹಿಂಪಡೆಯಲು ಬರುವುದಿಲ್ಲ. ಆದರೆ ನಾನಿಗೊಂದು ವರವನ್ನು ಕೊಡುವೆನು, ಅದರಂತೆ ನೀನಿ ಒಂದು ತಿಂಗಳಿನಲ್ಲಿ ಹದಿನೈದು ದಿನ ಕ್ಷಯಿಸುತ್ತಾಹೋದರೆ ಮತ್ತೆ ಹದಿನೈದು ದಿನ ವೃದ್ದಿಸುತ್ತೀಯೆ” ಎಂದನು.

    ಅದರಂತೆಯೇ ಮುಂದೆ ಎಂದೆಂದಿಗೂ ಚಂದ್ರನು ತಿಂಗಳೊದರಲ್ಲಿ ಹದಿನೈದು ದಿನ ಕ್ಷಯಿಸಿದರೆ, ಮತ್ತೆ ಹದಿನೈದು ದಿನ ವೃದ್ದಿಯಾಗುತ್ತಾನೆ. ಶಿವನು ನೀಡಿದ ಈ ವರದಾನದಿಂದ ಹರ್ಷಿತನಾದ ಚಂದ್ರನು ಪರಮೇಶ್ವರನಿಗಾಗಿ ಸೌರಾಶ್ಟ್ರದ ಕಡಲ ತಡಿಯ ಸುಂದರ ಪ್ರದೇಶದಲ್ಲಿ ಸ್ವರ್ಣಮಂದಿರವನ್ನು ನಿರ್ಮಾಣ ಮಾಡಿಕೊಟ್ಟನು. ಅದರಿಂದ ಸಂತುಷ್ಟನಾದ ಪರಮೇಶ್ವರನು ತಾನು ಜ್ಯೋತಿರ್ಲಿಂಗ ಸ್ವರೂಪಿಯಾಗಿ ಅಲ್ಲಿ ನೆಲೆನಿಂತು ತನ್ನ ಭಕ್ತರ ಅಭೀಷ್ಠೆಯನ್ನು ಈಡೇರಿಸಲು ಮುಂದಾದನು. 
    ಚಂದ್ರನಿಗೆ ವರನೀಡಿದ ಕಾರಣ ಚಂರನಿಂದ ನಿರ್ಮಾಣಗೊಂಡ ಈ ಕ್ಷೇತ್ರ ಸೋಮನಾಥವೆಂದು ಪ್ರಖ್ಯಾತಗೊಂದಿದೆ. 

Saturday, September 14, 2013

`ನಾರಾಯಣನ ನಗಕ್ಕೆ ಕೈ ಹಾಕಿದರೆ ನಾಶವಾದೀರಿ ಜೋಕೆ!!’

    ರಾಜಾ ಸಮುದ್ರಗುಪ್ತ
    ಮಹಾ ಸಾಮ್ರಾಟ್ ಹರ್ಷವರ್ಧನ
    ದಕ್ಷಿಣಾ ಪಥೆಶ್ವರ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ
    ರಾಜ ರಾಜ ಚೋಳ
    ರಾಜಾ ಆರನೇ ವಿಕ್ರಮಾದಿತ್ಯ
    ಪ್ರಥ್ವಿರಾಜ ಚೌಹಾಣ್
    ವಿಜಯನಗರ ಸಾಮ್ರಾಟ್ ಶೀ ಕೃಷ್ಣದೇವರಾಯ
    ಬಿಟ್ಟಿದೇವ ಅಥವಾ ವಿಷ್ಣುವರ್ಧನ
    ಕಂಠೀರವ ನರಸರಾಜ ಒಡೆಯರ್
    ಮುಮ್ಮಡಿ ಕೃಷ್ಣರಾಜ ಒಡೆಯರ್………………..
    ಪಟ್ಟಿ ಹೀಗೇ ಬೆಳೆಯುತ್ತಾ ಹೋಗುತ್ತದೆ. ಇಲ್ಲಿರುವುದು ಹಿಂದೆ ಭರತವರ್ಷವನ್ನಾಳಿದ ನೂರಾರು ರಾಜರುಗಳಲ್ಲಿ ಕೆಲವೇ ಕೆಲವರ ಹೆಸರುಗಳು. ಆದರೆ ಇಲ್ಲಿ ಹೆಸರಿಸದ ಪ್ರತಿಯೊಬ್ಬರಾಜರೂ ತಮ್ಮ ಆಳ್ವಿಕೆಯ ಕಾಲದಲ್ಲಿ ತಮ್ಮ ನಾಡಿನಲ್ಲಿ ಒಂದಿಲ್ಲೊಂದು ದೇವಾಲಯವನ್ನು ನಿರ್ಮಿಸಿದ್ದಾರೆ, ದೇವಾಲಯಗಳಿಗೆ ಅಗಾಧ ಪ್ರಮಾಣದ ದಾನ ದತ್ತಿಗಳನ್ನು ಹಿಡುವಳಿ ಜಮೀನುಗಳನ್ನು ಚಿನ್ನಾಭರಣಗಳನ್ನು ನೀಡಿದ್ದಾರೆ. ಈ ಎಲ್ಲಾ ರಾಜ ಮಹಾರಜರುಗಳಷ್ಟೇ ಅಲ್ಲದೆ ಅಂದಿನ ಕಾಲದಲ್ಲಿ ಅಧಿಕಾರದಲ್ಲಿದ್ದ ಅಧಿಕಾರಿ ವರ್ಗ, ಜಮೀನ್ದಾರರುಗಳು, ಶೀಮಂತ ವ್ಯಾಪಾರಿಗಳು ಸಹ ತಮ್ಮ ಕ್ಷೇತ್ರಗಳಲ್ಲಿ ಬರುವ ಮುಖ್ಯ ದೇವಾಲಯ, ಗ್ರಾಮ ದೇವತೆಗಳ ಗುಡಿಗಳನ್ನು ಜೀರ್ಣೋದ್ದಾರ ಮಾಡಿಸಿದ್ದಾರೆ, ದೇವಾಲಯಗಳಿಗೆ ತಮ್ಮ ಕಾಣಿಕೆಗಳನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದ್ದಾರೆ. ಇಷ್ಟಾಗಿ ಮುಸ್ಲಿಮರ ಧಾಳಿ, ಬ್ರಿಟೀಷರ ಆಳ್ವಿಕೆಗಳ ಕಾಲದಲ್ಲಿ ತಮ್ಮ ದೇವಾಲಯಗಳ ರಕ್ಷಣೆಗೆ, ಅಲ್ಲಿನ ದೇವರ ಸಂಪತ್ತಾದ ನಗ-ನಗದುಗಳ ರಕ್ಷಣೆಗೆ ಅದೆಷ್ಟೋ ಜನರು ಟೊಂಕ ಕಟ್ಟಿ ಹೋರಾಟವನ್ನು ನಡೆಸಿದ್ದರು. ತಮ್ಮ ದೇವರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟವರೆಷ್ಟೋ? ತಮ್ಮ ದೇವರ ಚಿನ್ನಾಭರಣಗಳು ಪರರ ಪಾಲಾಗದಿರಲೆಂದು ದೇವಾಲಯದಲ್ಲಿಯೇ ನೆಲಮಾಳಿಗೆಯನ್ನು ರಚಿಸಿ ಅಲ್ಲಿ ಸುರಕ್ಷಿತವಾಗಿಡುತ್ತಿದ್ದ ರಾಜ ಮಹಾರಾಜರುಗಳು ನಮ್ಮಲ್ಲಿದ್ದರು. (ಕೇರಳದ ಅನಂತಪದ್ಮನಾಭ ದೇವಾಲಯ ಅದಕ್ಕೊಂದು ನಿದರ್ಶನ)
    ಆದರೆ ಇಂದು? ಇಂದು ಆಗುತ್ತಿರುವುದೇನು?
    ನಮ್ಮದೇ ಸರ್ಕಾರ ತಾವೇ ಮಾಡಿಕೊಂಡ ಹಗರಣಾಗಳು, ತಾವೇ ಸೃಷ್ಟಿಸಿದ ಭ್ರಷ್ಠಾಚಾರಗಳಿಂದ ಉಂಟಾದ ಆರ್ಥಿಕ ಅಧಃಪತನವನ್ನು ತಡೆಯಲು ದೇವರ ಚಿನ್ನವನ್ನು ಕೇಳುತ್ತಿದೆ!
    ಸ್ನೇಹಿತರೆ,  ನಿಮಗೆ ಗೊತ್ತಿರಲಿ ನಮ್ಮ ಕೇಂದ್ರ ಸರ್ಕಾರ ಈ ಒಂಭತ್ತು ವರ್ಷಗಳಲ್ಲಿ ಮಾಡಿದ ಹಗರಣ, ಭ್ರಷ್ಠಾಚಾರಗಳಲ್ಲಿ ಒಂದಂಶದಷ್ಟನ್ನು ಕಡಿಮೆ ಮಾಡಿದ್ದರೂ ಇಂದು ದೇಶಕ್ಕೆ ಇಂತಹಾಆರ್ಥಿಕ ದುಃಸ್ಥಿತಿ ಬರುತ್ತಿರಲಿಲ್ಲ. ನಮ್ಮ ಕೇಂದ್ರ ಸರ್ಕಾರದವರು ಎಸಗಿದ 2ಜಿ ಹಗರಣ, ಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣಗಳೇನು ಕಡಿಮೆ ಮೌಲ್ಯದವೇ? ಒಂದೊಂದೂ ಲಕ್ಷಕೋಟಿಗಳ ಲೆಕ್ಕದಲ್ಲಿ ಇರುವಂತಹವು. ಇವುಗಳಲ್ಲಿ ಒಂದನ್ನು ಮಾಡದಿದ್ದರೂ ಇಂದು ಈ ಆರ್ಥಿಕ ಕುಸಿತ ಸಂಭವಿಸುತ್ತಿರಲಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರತಕ್ಕ ಸಂಗತಿ. ಇಷ್ಟೆಲ್ಲಾ ಹಗರಣಾಗಳನ್ನು ಮಾಡಿ ತಾವು ದೇಶದ, ಜನರ ದುಡ್ದನ್ನು ದೋಚಿ ಇದೀಗ ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ನಿವಾರಣೆಗಾಗಿ ದೇವಾಲಯಗಳಲ್ಲಿನ ಚಿನ್ನವನ್ನು ಕೊಡಬೇಕೆಂದರೆ ಇದಕ್ಕೇನೆನ್ನೋಣ? ಅಷ್ಟಾಗಿ ಹೋಗಲಿ, ದೇವಾಲಯದ ಚಿನ್ನವನ್ನು ಕೊಟ್ತು ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರೋಣವೆನ್ನಿ, ಆದರೆ ನಮ್ಮ ದೇವಾಲಯದ ಚಿನ್ನವನ್ನು ಸರ್ಕಾರಕ್ಕೆ ಲೊಟ್ತರೆ ಅದನ್ನು ಅವರುಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿದ್ದಾರೆಂದು ಹೇಗೆ ನಂಬುತೀರಿ? ಕಳೆದ ಒಂಭತ್ತೂ ಕಾಲು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರಗಳನ್ನೆಲ್ಲಾ ನೋಡಿದರೆ ಯಾರಿಗಾದರೂ ಈ ಪ್ರಶ್ನೆ ಏಳದಿರುತ್ತದೆಯೆ?
    ಇಲ್ಲಿ ನಾವು ಇನ್ನೂ ಒಂದು ಅಂಶ ಗಮನಿಸಬೇಕು ಅದೆಂದರೆ, ಭಾರತವೊಂದು ಜಾತ್ಯಾತೀತ ರಾಷ್ಟ್ರ. ಈಗ ನಮ್ಮನ್ನಾಳುತ್ತಿರುವ ಪಕ್ಷವೂ ಸಹ ಅದೇ ಜಾತ್ಯಾತೀತ ನೆಲೆಗಟ್ಟಿನದು. ಅಂದಮೇಲೆ ದೇಶದ ಆರ್ಥಿಕತೆ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ದೇಶದಲ್ಲಿರುವ ಹಿಂದೂ ದೇವಾಲಯಗಳ ಚಿನ್ನವನ್ನಷ್ಟೇ ಏಕೆ ಕೇಳಬೇಕು, ಜತೆಗೆ ಈ ದೇಶದಲ್ಲಿರುವ ಚರ್ಚ್, ಮಸೀದಿಗಳ ಒಡೆತನದಲ್ಲಿರುವ ಸಂಪತ್ತನ್ನೂ ಏಕೆ ಈ ಸರ್ಕಾರ ತನ್ನ ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲ? ನಿಮ್ಗೆ ಗೊತ್ತಿರಲಿ ಸ್ನೇಹಿತರೆ, ದೇಶದ ಜನಸಂಖ್ಯೆಯ ಶೇಕಡಾ ಮೂರಕ್ಕಿಂತಲೂ ಕಡಿಮೆ ಇರುವ ಕ್ರೈಸ್ತ ಸಮುದಾಯದ ಚರ್ಚ್ ಗಳಿಗೆ ವಿದೇಶಗಳಿಂದ ಬರುತ್ತಿರುವಂತಹಾ ಹಣಾದ ಪ್ರಮಾಣ ನಮ್ಮಲ್ಲಿನ ನೌಕಾಪಡೆಯ ಬಜೆಟ್ ಗೆ ಸರಿಹೊಂದುತ್ತದೆ! ಇನ್ನು ಚರ್ಚುಗಳ ಸ್ವಾಧೀನದಲ್ಲ್ಲಿರುವ ಭೂಮಿಯ ಮೇಲೆ ಸರ್ಕಾರಕ್ಕೆ ಯಾಯುದೇ ಅಧಿಕಾರವಿರುವುದಿಲ್ಲ! ಇನ್ನು ಪ್ರತಿವರ್ಷ ಹಜ್ ಯಾತ್ರಿಕರಿಗಾಗಿ ಸಾವಿರಾರು ರೂಪಾಯಿ ಸಬ್ಸಿಡಿ ಕೊಡುವ ಸರ್ಕಾರ ದೇಶಕ್ಕೊದಗಿದ ಇಂತಹಾ ಸಂಕಟದ ಸಂದರ್ಭದಲ್ಲಿಯೂ ಮಸೀದಿಯಲ್ಲಿನ ಹಣದ ಕುರಿತಾಗಿಯಾಗಲಿ, ವಖ್ತ್ ಮಂಡಳಿಯ ವಶದಲ್ಲಿನ ಆಸ್ತಿಯ ಕುರಿತಾಗಲಿ ಮಾತನಾಡುವುದಿಲ್ಲ!! ಇದೆಲ್ಲವೂ ಏನನ್ನು ತೋರಿಸುತ್ತಿದೆ? ನಮ್ಮ ಕೇಂದ್ರ ಸರ್ಕಾರಕ್ಕೆ ದೇಶದ ಆರ್ಥಿಕತೆಯ ಸುಧಾರಣೆಯ ಬಗ್ಗೆಯಾಗಲಿ, ದೇಶದ ಜನರ ನಿಜವಾದ ಸಮಸ್ಯೆಗಳ ಬಗ್ಗೆಯಾಗಲಿ ಕಾಳಜಿಯಿಲ್ಲ, ಬದಲಾಗಿ ದೇಶದಲ್ಲಿನ ಹಿಂದೂ ಸಂಸ್ಕೃತಿಯ ಹೆಗ್ಗುರುತುಗಳಾದ ದೇವಾಲಯಗಳಲ್ಲಿನ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಹುನ್ನಾರವಷ್ಟೆ ಎಂದಾಯಿತಲ್ಲವೆ? ಇನ್ನು ತಮ್ಮದೇ ಸರ್ಕಾರದ ಸಹವರ್ತಿಗಳು, ಮತ್ತಿತರರು ಇಟ್ಟಿರುವ ಲಕ್ಷಾಂತರ ಕೋಟಿ ಕಪ್ಪು ಹಣವು ಇಂದಿಗೂ ಸ್ವಿಸ್ ಬ್ಯಾಂಕಿನ ಖಾತೆಗಳಲ್ಲಿ ಕೊಂಡವಒಳೆಯುತ್ತಿದೆ. ನಮ್ಮ ನಾಯಕರು ಎನ್ನಿಸಿಕೊಂಡವರಾಅರಿಗೂ ಆ ಕಪ್ಪು ಹಣವನ್ನು ದೇಶಕ್ಕೆ ವಾಪಾಸು ತರುವ ಇರಾದೆ ಇಲ್ಲ. (ಒಂದು ವೇಳೆ ಆ ಕಪ್ಪು ಹಣವೇನಾದರೂ ದೇಶಕ್ಕೆ ಮರಳಿ ಬಂದರೆ ದೇಶದ ಈವರೆಗಿನ ವಿದೇಶೀ ಸಾಲಗಳನ್ನೆಲ್ಲಾ ತೀರಿಸಿ ಉಳಿದ ಹಣಾದಲ್ಲಿ ದೇಶದಲ್ಲಿನ ೧.೨ ಬಿಲಿಯನ್ ಜನರಿಗೆ ಒಂದರಂತೆ ಮನೆ ಕಟ್ಟಿಸಿಕೊಡಬಹುದು ಎನ್ನುತ್ತದೆ ಒಂದು ವರದಿ!) ಈಗ ಮಾತ್ರ ಆರ್ಥಿಕ ಸುಧಾರಣೆಗಾಗಿ ದೇವಾಲಯದ ಸಂಪತ್ತಿಗೆ ಕಣ್ಣಿಟ್ಟಿರುವ ನಮ್ಮ ನಾಯಕರುಗಳನ್ನು ಏನೆನ್ನಬೇಕು?
    ಸ್ನೇಹಿತರೆ,  ಇಷ್ಟಕ್ಕೂ ನಮ್ಮ ಹಿರಿಯರು ದೇವಾಲಯಗಳನ್ನು, ಅದರಲ್ಲಿನ ಸಂಪತ್ತನ್ನೂ ಹೇಗೆ ನಿರ್ವಹಣೆ ಮಾಡುತ್ತಿದ್ದರೆಂದುಕೊಂಡಿರಿ?
    ಈ ಮೊದಲೇ ಹೇಳಿದಂತೆ ದೇವಾಲಯಗಳನ್ನು ನಿರ್ಮಿಸಿದವರು ಅಂದಿನ ನಮ್ಮ ರಾಜರುಗಳು, ಅಧಿಕಾರಿ ವರ್ಗ ಹಾಗೂ ಕೆಲ ಬಲಿಷ್ಠ ಸಮುದಾಯಗಳು. ಇಲ್ಲಿ ರಾಜರು ಕಟ್ಟಿದ ದೇವಾಲಯದ ಆಡಳಿತವು ರಾಜನ ಕೈಯಲ್ಲಿಯೂ,, ಆ ರಾಜನು ಅಧಿಕಾರಕ್ಕೆ ಬರುವ ಮೊದಲೇ ಇದ್ದ ದೇವಾಲಯಗಳ ಆಡಳಿತವು ಅಲ್ಲಿನ ವ್ಯವಸ್ಥಾಪಕರ ಕೈಯಲ್ಲಿಯೂ ಇರುತ್ತಿದ್ದವು. ಅಂದಿನ ವ್ಯವಸ್ಥಾಪಕರೆಂದರೆ ಇಂದಿನ ಟ್ರಸ್ಟಿಗಳಿಗೆ ಸಮ. ಅವರನ್ನು ಸ್ಥಾನಿಕರು(ಎಂದರೆ ಅಲ್ಲಿನ ಸ್ಥಳೀಯರು) ಎನ್ನುತ್ತಿದ್ದರು. ರಾಜ ಮಹಾರಾಜರುಗಳು ಅಂಥಹಾ ವ್ಯವಸ್ಥಾಪಕ ವರ್ಗಗಳಿರುವ ದೇವಾಲಯಗಳನ್ನು ಎಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿರಲಿಲ್ಲ, ಬದಲಾಗಿ ಅಂತಹಾ ದೇವಾಲಯಗಳಿಗೆ ಕೆಲ ವಿಶೇಷ ಸಂದರ್ಭಗಳಲ್ಲಿ ತಾನೇ ಹೊಲ ಭೂಮಿಗಳನ್ನು ದಾನ ಮಾಡುತ್ತಿದ್ದ. ಜತೆಗೆ ರಾಜ ಮಹಾರಾಜರಾದಿಯಾಗಿ ಸಾಮಾನ್ಯ ಜನರು ತಮ್ಮ ಶಕ್ತ್ಯಾನುಸಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುತ್ತಿದ್ದರು. ಎಲ್ಲಿಯವರೆಗೆಂದರೆ ಸರ್ಕಾರಕ್ಕೆ ತೆರಿಗೆ ಕಟ್ಟುವುದಕ್ಕಿಂತ ಹೆಚ್ಚಿನ ಪ್ರಮಾಣದ ಕಾಣಿಕೆಗಳನ್ನು ದೇವರಿಗೆ ಅರ್ಪಿತವಾಗುತ್ತಿದ್ದವು. ಇದಕ್ಕೆಲ್ಲಾ ಕಾರಣ ದೇವರ ಮೇಲಿನ ಭಕ್ತಿ ಹಾಗೂ ದೇವಾಲಯದ ಆಡಳಿತ ನಿರ್ವಹಣೆಯವರಲ್ಲಿ ಜನರಿಗಿದ್ದ ವಿಶ್ವಾಸ. ಎಂದರೆ ದೇವಾಲಯಗಳಿಗೆ ಕೊಟ್ಟ ಹಣ, ಕಾಣಿಕೆಗಳು ಎಂದಿಗೂ ದುರುಪಯೋಗವಾಗುವುದಿಲ್ಲ, ಬದಲಾಗಿ ಸದ್ವಿನಿಯೋಗವಾಗುತ್ತವೆ ಎನ್ನುವ ನಂಬಿಕೆ ಜನರಲ್ಲಿದ್ದುದು. (ಈ ಬಗೆಯ ನಂಬಿಕೆಯನ್ನು ರಾಜರ ಆಡಳಿತದಂತೆಯೇ ಇಂದಿನ ಜನರಲ್ಲಿಯೂ ಕಾಣಬಹುದು.) ಅಂತೆಯೇ ಅಂದು ದೇವಾಲಯಗಳು ತಮ್ಮನ್ನು ನಂಬಿದ ಜನರನ್ನು ಎಂದಿಗೂ ಕೈ ಬಿಡಲಿಲ್ಲ. ದೇವಾಲಯದಲ್ಲಿ ನಿತ್ಯಪೂಜೆಯ ಹೊರತಾಗಿ ಹಲವಾರು ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಅಂತಹಾ ವಿಶೇಷ ಪೂಜೆಗಳಿಗೆ ನಾನಾ ನಮೂನೆಯ ವಸ್ತುಗಳ ಅಗತ್ಯ ಬೀಳುತ್ತವೆ. ಆ ಎಲ್ಲಾ ವಸ್ತುಗಳ ತಯಾರಿಕೆ, ಪೂರೈಕೆಗಳನ್ನು ನಾನಾ ವರ್ಗದ ಜನರು ಮಾಡುತ್ತಾ ಬಂದಿದ್ದಾರೆ. ಆ ಮುಖೇನ ದೇವಾಲದಿಂದಲೇ ತಮ್ಮ ಬದುಕು ಕಟ್ಟಿಕೊಳ್ಳುವ ಸಾವಿರಾರು ಕುಟುಂಬಗಳು ನಮ್ಮ ಸುತ್ತ ಮುತ್ತ ಇಂದಿಗೂ ಇರುವುದನ್ನು ನಾವು ಕಾಣುತ್ತೇವೆ.     
     ಇನ್ನು ದೇವಾಲಯಗಳಲ್ಲಿ ಸಂಗ್ರಹವಾದ ಸಂಪತ್ತು ಎಂದಿಗೂ ಯಾವೊಬ್ಬ ವ್ಯಕ್ತಿಗೆ ಸೇರಿದ್ದಲ್ಲ, ಬದಲಾಗಿ ಅದು ಭಗವಂತನಿಗೆ ಸೇರಿದ ಸಂಪತ್ತು. ಅದನ್ನು ದೇವಾಲಯಗಳು ಸಮಾಜಮುಖೀ ಕಾರ್ಯಗಳಿಗೆ ಬಳಸಿಕೊಳ್ಳುತ್ತಾ ಬಂದಿವೆ. ಪ್ರತಿಯೊಂದು ದೇವಾಲಯಗಳು, ಮಠ-ಮಾನ್ಯಗಳು ತಮ್ಮದೇ ವ್ಯಾಪ್ತಿಯಲ್ಲಿ ಅನ್ನದಾನ, ವಿದ್ಯಾದಾನಗಳನ್ನು ನಡೆಸುತ್ತವೆ. ಜತೆಗೆ ಇತ್ತೀಚಿಗೆ ಕೆಲ ಮಠಗಳು ಆಸ್ಪತ್ರೆಗಳನ್ನು ತೆರೆಯುವ ಮೂಲಕ ಬಡರೋಗಿಗಳ ಶುಶ್ರೂಷೆಗೂ ನೆರವಾಗುತ್ತಿವೆ. ಅಷ್ಟೇ ಅಲ್ಲದೆ ಹಿಂದಿನ ಕಾಲದಲ್ಲಿ ಭಗವಂತನನ್ನೇ ಸಾಕ್ಷಿಯಾಗಿರಿಸಿಕೊಂಡು ಜನರು ತಮ್ಮ ನಡುವಿನ ವ್ಯಾಜ್ಯಗಳನ್ನು ನಿವಾರಿಸಿಕೊಳ್ಳುತ್ತಿದ್ದರು. (ಈಗಲೂ ಧರ್ಮಸ್ಥಳದಂತಹಾ ಕ್ಷೇತ್ರದಲ್ಲಿ ನಾವು ಹೆಗ್ಗಡೆಯವರ ಸಮ್ಮುಖದಲ್ಲಿ ನ್ಯಾಯ ತೀರ್ಮಾನವಾಗುವುದನ್ನು ನೋಡುತ್ತೇವೆ.) ಹೀಗೆ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗದೆ ಹಸಿದು ಬಂದವರಿಗೆ ಅನ್ನವನ್ನೂ, ವಿದ್ಯಾಕಾಂಕ್ಷಿಗಳಿಗೆ ವಿದ್ಯೆಯನ್ನೂ, ನ್ಯಾಯಾಕಾಂಕ್ಷಿಗಳಿಗೆ ನ್ಯಾಯದಾನವನ್ನೂ ಮಾಡುವ ಸ್ಥಳವಾಗಿದ್ದವು.

    ಹೀಗಿದ್ದ ನಮ್ಮ ಸಾಮಾಜಿಕ ವ್ಯವಸ್ಥೆಯ ಪರಿಚಯವಿಲ್ಲದ ಮುಸ್ಲಿಮ್ ದೊರೆಗಳು ನಮ್ಮ ದೇವಾಲಯದ ಸಂಪತ್ತನ್ನು ದೋಚಿದರು, ನಮ್ಮವರನ್ನು ಬಲಾತ್ಕಾರದಿಂದ ಮತಾಂತರಗೊಳಿಸಿದರು.. ಬ್ರಿಟೀಷರಂತೂ ಈ ಭಾರತೀಯರೆಲ್ಲರೂ ಅಜ್ಞಾನಿಗಳು ಇವರನ್ನು ಸರಿಯಾದ ಶಿಕ್ಷಣ ನೀಡಿ ಉದ್ದರಿಸುವುದು ನಮ್ಮ ಕರ್ತವ್ಯವೆಂಬಂತೆ ಭಾವಿಸಿ ಶಿಕ್ಷಣ ವ್ಯವಸ್ಥೆಯನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡರು. ಹಾಗೆಯೇ ನ್ಯಾಯಾಂಗ ವ್ಯವಸ್ಥೆಯೂ ತಮ್ಮ ಕೈಕೆಳಗಿರುವಂತೆ ನೋಡಿಕೊಂಡರು. ಇದಾದ ನಂತರವೇ ನಾವು ಪರಕೀಯರ ದಾಸ್ಯಕ್ಕೆ ಸಿಲುಕಿದ್ದು, ನಮ್ಮ ಸಮಾಜ ವ್ಯವಸ್ಥೆಯೊಳಗೆ ಭ್ರಷ್ಠಾಚಾರ ತಲೆಹಾಕಿದ್ದು! ಮತ್ತೀಗ ನಮ್ಮದೇ ಸರ್ಕಾರ ತಾನೇ ಮಾಡಿಕೊಂಡ ಎಡವಟ್ಟುಗಳಿಂದುಂಟಾದ ದುರ್ಗತಿಗೆ ದೇವಾಲಯದ ಚಿನ್ನಕ್ಕೆ ಬೇಡಿಕೆ ಇಟ್ಟಿದೆ!
    ಇಷ್ಟಕ್ಕೂ ನಮ್ಮ ದೇವಾಲಯಗಳಲ್ಲಿರುವ ಚಿನ್ನದ ನಿಜವಾದ ಮೌಲ್ಯವನ್ನೂ ಎಂದಿಗೂ ಸರಿಯಾಗಿ ಲೆಖ್ಖ ಹಾಕಲು ಬರುವುದಿಲ್ಲ. ಕಾರಣ ದೇವಾಲಯದಲ್ಲಿರುವ ಚಿನ್ನ, ಅದು ಇಂದು ನಿನ್ನೆಯದಲ್ಲ. ನೂರಾರು, ಸಾವಿರಾರು ವರ್ಷಗಳ ಕೆಳಗೆ ನಮ್ಮ ರಾಜ ಮಹಾರಾಜರುಗಳು ನೀಡಿದ ಚಿನ್ನಾಭರಣಗಳು ಅಲ್ಲಿವೆ. ಅವ್ಯಾವುದಕ್ಕೂ ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಬೆಲೆಗಟ್ಟಲಿಕ್ಕೆ ಸಾಧ್ಯವಿಲ್ಲ. ಇದು ಕೇವಲ ಚಿನ್ನಾಭರಣ ಮಾತ್ರವಲ್ಲ, ನಮ್ಮ ದೇಶದ ಇತಿಹಾಸ, ಪರಂಪರೆಯೂ ಇದರೊಂದಿಗೆ ಬೆಸೆದುಕೊಂಡಿದೆ. ಪ್ರಪಂಚದೆಲ್ಲೆಡೆ ಈ ನಮೂನೆಯ ಪುರಾತನ ಚಿನ್ನ ಮತ್ತಿತರೇ ಲೋಹದ ವಸ್ತುಗಳಿಗೆ ಹಲವು ಹತ್ತು ಪಟ್ಟು ಬೇಡಿಕೆ ಇದೆ.
    ಇಂತಹಾ ಚಿನ್ನಾಭರಣಗಳನ್ನು ನಮ್ಮ ಸರ್ಕಾರವೇನಾದರೂ ಅರ್ಥವ್ಯವಸ್ಥೆಯ ಸುಧಾರಣೆಯ ಹೆಸರು ಹೇಳಿಕೊಂಡು ಕರಗಿಸಿ ಮಾರಿ ಹಾಕಿದ್ದಾದರೆ ನಮ್ಮ ದೇಶದಲ್ಲಿನ ಹಿಂದೂ ಪರಂಪರೆಗೆ ಸಂಸ್ಕೃತಿಗೆ ದೊಡ್ಡ ಹೊಡೆತ ಬೀಳುತ್ತದೆ. ಇದರೊಂದಿಗೆ ಜನರ ಧಾರ್ಮಿಕ ಭಾವನೆಗೂ ಘಾಸಿಯಾಗುತ್ತದೆ. ಮತ್ತೆ ಮುಂಬರುವ ದಿನಗಳಲ್ಲಿ ಜನರು ದೇವಾಲಯಗಳಿಗೆ ಕಾಣಿಕೆ ಹಾಕುವುದನ್ನೂ, ಚಿನ್ನ, ವಜ್ರಾಭರಣಗಳನ್ನು ದಾನ ಮಾಡುವುದನ್ನೂ ಕಡಿಮೆ ಮಾಡುತ್ತಾರೆ. ಆ ಪ್ರಕಾರ ಹಿಂದೂ ಸಂಸ್ಕೃತಿಯ ಹೆಗ್ಗುರುತುಗಳಾದ ದೇವಾಲಯ ಸಂಸ್ಕೃತಿಯು ನಾಶಹೊಂದುತ್ತದೆ ಎನ್ನುವುದು ಇದರ ಹಿಂದಿರುವ ಉದ್ದೇಶ!
    ಸ್ನೇಹಿತರೇ, ಇದೊಂದು ಸಂಧಿಕಾಲ. ನಮ್ಮಲ್ಲಿ ಈ ಹಿಂದೆ ದೇವಾಲಯದ ವಿಚಾರವೆತ್ತಿದಾಗಲೆಲ್ಲಾ ಜನರು ದಂಗೆ ಎದ್ದಿದ್ದಾರೆ. ಇದೀಗ ಮತ್ತೆ ನಮ್ಮ ಸರ್ಕಾರ ದೇವಾಲಗಳಲ್ಲಿನ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ. ಇನ್ನು ನಾವು ನೀವು ಕೈಕಟ್ಟಿ ಕೂರುವಂತಿಲ್ಲ! ಎದ್ದು ನಿಲ್ಲಬೇಕಿದೆ, ನಮ್ಮ ನಾಯಕರನ್ನು ಪ್ರಶ್ನಿಸಬೇಕಿದೆ, ದೇವಾಲಯದ ಚಿನ್ನ ಮುಟ್ಟುವ ಮೊದಲು ಭ್ರಷ್ಠಾಚಾರ ಮಾಡಿ ನೀವು ಕೂಡಿಟ್ಟ ಕಪ್ಪು ಹಣವನ್ನು ವಾಪಾಸು ತನ್ನಿರೆಂದು ಆಗ್ರಹಿಸಬೇಕಿದೆ! ಇನ್ನೂ ಸುಮ್ಮನಿದ್ದರೆ ಇಂದು ದೇವಾಲಯದ ಚಿನ್ನ ಕೇಳುವವರು ನಾಳೆ ನಮ್ಮ ಮನೆಯಲ್ಲಿನ ಚಿನ್ನವನ್ನೂ ಕೇಳುವುದಿಲ್ಲವೆನ್ನಲು ಸಾಧ್ಯವೆ? ಸ್ವಲ್ಪ ಯೋಚಿಸಿ.
    ಬನ್ನಿ ಒಕ್ಕೊರಲಿಂದ ಹೇಳೋಣ, ‘ನಾರಾಯಣನ ನಗಕ್ಕೆ ಕೈ ಹಾಕಿದರೆ ನಾಶವಾದೀರಿ ಜೋಕೆ!!’
    ನಮಸ್ಕಾರ. 

Wednesday, September 11, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 6

ಭದ್ರಾಚಲ(Bhadrachalam)
    ನಮಸ್ಕಾರ ಸ್ನೇಹಿತರೆ,
    ಇಂದಿನ ಆಂಧ್ರ ಪ್ರದೇಶದ ಖಮ್ಮಮ್ ಜಿಲ್ಲೆಯ ಭದ್ರಾಚಲ ಕ್ಷೇತ್ರವು ಅತ್ಯಂತ ಪ್ರಾಚೀನವೂ ಪವಿತ್ರವೂ ಆದ ಪುಣ್ಯಕ್ಷೇತ್ರವೆನಿಸಿದೆ. ಶ್ರೀ ರಾಮತೆ ಹಾಗು ಲಕ್ಷ್ಮಣನೊಂದಿಗೆ ಪ್ರತ್ಯಕ್ಷವಾಗಿ ನೆಲೆಸಿರುವ ಭದ್ರಾಚಲ ಕ್ಷೇತ್ರ ಹಿಂದೂಗಳ ಪಾಲಿನ ಪವಿತ್ರ ಯಾತ್ರಾಸ್ಥಳಗಳಾಲ್ಲಿ ಒಂದು. ರಾಮಾಯಣದ ಕಾಲಘಟ್ಟದಲ್ಲಿ ದಂಡಕಾರಣ್ಯವಾಗಿದ್ದ ಈ ಪ್ರದೇಶದಲ್ಲಿ ರಾಮ, ಸಿತಾ ಹಾಗೂ ಲಕ್ಷ್ಮಣಾರು ತಮ್ಮ ವನವಾಸದ ಸಮಯದಲ್ಲಿ ಪರ್ಣಕುಟಿಯನ್ನು ಸ್ಥಾಪಿಸಿ ವಾಸವಾಗಿದ್ದರು. ಆದರೆ ಈ ಪ್ರದೇಶಕ್ಕೆ ಭದ್ರಾಚಲವೆಂಬ ಹೆಸರು ಬಂದುದು, ಪವಿತ್ರ ಕ್ಷೇತ್ರವಾಗಲು ಕಾರಣವಾದದ್ದು ಭಗವಾನ್ ಶ್ರೀ ರಾಮನ ಮಹಾಭಕ್ತರಾಗಿದ್ದ ಶ್ರೀ ಭದ್ರಮುನಿಗಳು.
ಶೀರಾಮನ ಪರಮ ಭಕ್ತ ಭದ್ರ ಮಹರ್ಷಿಯ ಕಥೆ :
    ಈ ಹೆಸರು ಬರಲು ಮೂಲ ಕಾರಣವಾದುದೇ ಈ ಭದ್ರ ಮಹರ್ಷಿಗಳು. ಶೀರಾಮನ ಪರಮ ಭಕ್ತರಾಗಿದ್ದ ಇವರು ರಾಮದೇವರ ಅನುಗ್ರಹಕ್ಕಾಗಿ ಹಲವು ವರುಷಗಳ ಕಾಲ ತಪಸ್ಸನ್ನಾಚರಿಸಿದ್ದರು. ರಾಮನು ತನ್ನಮಡದಿ ಸೀತಾದೇವಿಯನ್ನು ಅರಸುತ್ತಾ ದಂಡಕಾರಣ್ಯದಲ್ಲಿ ಬರುತ್ತಿರಲು ಭದ್ರ ಮಹರ್ಷಿಗಳಿಗೆ ದರ್ಶನವನ್ನು ನೀಡಿದನು. ಈ ದರ್ಶನ ಮಾತ್ರದಿಂದ ಸುಪ್ರೀತರಾದ ಭದ್ರ ಮಹರ್ಷಿಗಳು ರಾಮದೇವರಲ್ಲಿ ತನ್ನ ಕೋರಿಕೆಯನ್ನು ಇಂತು ಒಪ್ಪಿಸಿದರು-“ನೀನು ಸದಾಕಾಲವೂ ಗೋದಾವರಿ ತಟದಲ್ಲಿರುವ ಈ ದಂಡಕಾರಣ್ಯದಲ್ಲಿ ನನ್ನ ಶಿರದ ಮೇಲೆ ನೆಲೆಸಿದ್ದು ಬರುವ ಭಕ್ತಕೋಟಿಯನ್ನು ಉದ್ದರಿಸಬೇಕು” ಈ ಕೋರಿಕೆಯನ್ನು ಮನ್ನಿಸಿದ ಶೀರಾಮನು -“ನಾನೀಗ ತನ್ನ ಮಡದಿ ಸೀತಾದೇವಿಗಾಗಿ ಹುಡುಕುತ್ತಿದ್ದೇನೆ, ಲಂಕೆಯ ರಾವಣನು ಅವದ ಬಳಿಕ ನಾನು ಹಿಂತಿರುಗುವ ಸಮಯದಲ್ಲಿ ನಿನ್ನ ಅಭೀಷ್ಠೆಯನ್ನು ಪೂರೈಸುತ್ತೇನೆ” ಎಂದನು. ಅದಕ್ಕೆ ಒಪ್ಪಿಗೆ ಸೂಚಿಸಿದ ಭದ್ರ ಮಹರ್ಷಿಗಳು ರಾಮನ ಬರುವಿಕೆಗಾಗಿ ಕಾದು ಕುಳಿತರು. ಆದರೆ ಕಾರಣಾಂತರಗಳಿಂದ ರಾಮಾವತಾರದಲ್ಲಿ ಶೀ ದೇವರಿಗೆ ಭದ್ರ ಮಹರ್ಷಿಗಳ ಕೋರಿಕೆಯನ್ನು ಈಡೇರಿಸಲಾಗದೇ ಹೋಯಿತು.
    ಭದ್ರ ಮಹರ್ಷಿಗಳು ಮಾತ್ರ ರಾಮನು ಸ್ವತಾನು ಬರದಿರುವದಕ್ಕೆ ಉಗ್ರವಾದ ಪಶ್ಚಾತ್ತಾಪದ ತಪಸ್ಸನ್ನು ಕೈಗೊಂಡಿದ್ದರು. ಇದನು ಅರಿತ ವೈಕುಂಠದಲ್ಲಿನ ಮಹಾವಿಷ್ಣುವು ತಾನು ವೈಕುಂಠರಾಮನ ರೂಪದಲ್ಲಿ ಮಡದಿ ಸೀತೆ ಹಾಗೂ ಸಹೋದರ ಲಕ್ಷ್ಮಣನ ಜತೆಯಾಗಿ ಭದ್ರ ಮಹರ್ಷಿಗಳಿಗೆ ದರ್ಶನ ನೀಡಿದ್ದಲ್ಲದೆ ಅವರ ಕೋರಿಕೆಯಂತೆ ಅವರ ಶಿರಭಾಗದ ಮೇಲೆ ನೆಲೆಸಿದನು. ಇದರಿಂದಾಗಿ ಈ ಪ್ರದೇಶಕ್ಕೆ “ಭದ್ರಾಚಲ” ಎಂದು ಹೆಸರಾಯಿತು.
ಧಮ್ಮಕ್ಕ ಹಾಗೂ ಭಕ್ತ ರಾಮದಾಸರ ಕಥೆ:
    ಭದ್ರ ಮಹರ್ಷಿಗಳ ಕೋರಿಕೆಯಂತೆ ಅವರ ಶಿರಭಾಗದಲ್ಲಿ ಶೀರಾಮದೇವರು ನೆಲೆಸಿ ಹಲವು ಶತಮಾನಗಳು ಉರುಳಿದ ನಂತರ ಆ ವಿಗ್ರಹಗಳು ಗೋದಾವರಿ ನದಿಯಲ್ಲಿ ಮುಳುಗಡೆಯಾಗಿಹೋಗಿದ್ದವು. ಹೀಗಿರಲು ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಪೋಕಲ ಧಮ್ಮಕ್ಕ ಎಂಬ ಶೀರಾಮನ ಉತ್ಕಟ ಭಕ್ತೆಯಿಂದ ಆ ವಿಗ್ರಹಗಳು ಪುನಃ ಗೋಚರಿಸಿದವಲ್ಲದೆ ನಿತ್ಯಪೂಜಾದಿಗಳು ಆರಂಭಗೊಂಡವು. ಈ ಮೊದಲೇ ಹೇಳಿದಂತೆ ಧಮಕ್ಕ ರಾಮದೇವರ ಪರಮ ಭಕ್ತೆಯಾಗಿದ್ದವರು. ಭದ್ರಾಚಲದಿಂದ ಮೈಲು ದೂರದಲ್ಲಿ ವಾಸವಿದ್ದ ಈಕೆಯ ಕನಸಿನಲ್ಲಿ ಕಾಣಿಸಿಕೊಂಡ ಶೀರಾಮನು-“ಹಿಂದೆ ಋಷಿಮುನಿಗಳಿಂದ ಪೂಜಿಸಲ್ಪಟ್ಟಿದ್ದ ನನ್ನ ಮತ್ತು ಸೀತಾದೇವಿಯರ ವಿಗ್ರಹಗಳು ಇದೀಗ ಕಾಲವಶದಿಂದ ಗೋದಾವರಿಯಲ್ಲಿ ಮುಳುಗಿ ಹೋಗಿದ್ದು ನೀನದನ್ನು ಪತ್ತೆ ಮಾಡಿ ನಿತ್ಯಪೂಜೆಗೆ ಏರ್ಪಾಡು ಮಾಡು” ಎಂಬ ಆದೇಏಶವನ್ನಿತ್ತರು. ಶೀ ದೇವರ ಆದೇಶದಂತೆ ಮರುದಿನವಿಡೀ ಆ ವಿಗ್ರಹಕ್ಕಾಗಿ ಹುಡುಕಿದ ಧಮ್ಮಕ್ಕರವರಿಗೆ ನದಿಯ ತಳದಲ್ಲಿದ್ದ ಲಕ್ಷ್ಮಣ, ಸೀತಾದೇವಿಯರ ಸಹಿತವಾದ ವೈಕುಂಠರಾಮದೇವರ ವಿಗ್ರಹಗಳು ದೊರಕಿದವು. ಅದನ್ನು ಶೀ ದೇವರ ಅಣತಿಯಂತೆ ಬೆಟ್ಟದ ಮೇಲೊಂದು ಸಣ್ಣ ಹುಲ್ಲಿನ ಗುಡಿಯನ್ನು ನಿರ್ಮಿಸಿ ಅಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿ ದಿನನಿತ್ಯ ಪೂಜಿಸುತ್ತಾ ಬಂದರು.
    ಆದರೆ ಧಮ್ಮಕ್ಕರಿಗೆ ಶೀ ದೇವರಿಗೆ ದೊಡ್ಡ ದೇವಾಲಯವನ್ನು ನಿರ್ಮಿಸಬೇಕೆಬ್ನ್ನುವ ಆಸೆಯು ಬಲವಾಗುತ್ತಿತ್ತು. ಹೀಗಿರಲು ಒಂದು ದಿನ ಪುನಃ ಧಮ್ಮಕ್ಕರವರ ಕನಸಿನಲ್ಲಿ ಕಾಣಿಸಿಕೊಂಡ ರಾಮದೇವರು “ದೇವಾಲಯದ ನಿರ್ಮಾಣಕ್ಕಾಗಿಯೇ ನನ್ನ ಇನ್ನೊಬ್ಬ ಮಹಾನ್ ಭಕ್ತನು ನಿನ್ನಲ್ಲಿಗೆ ಬರಲಿದ್ದಾನೆ. ಅವನ ಬರುವಿಕೆಯನ್ನು ಕಾಯುತ್ತಿರು” ಎಂದು ಆದೇಶಿಸಿದರು. ಅದರಂತೆ ಧಮ್ಮಕ್ಕ ಆ ಭಕ್ತಶಿರೋಮಣಿಯ ಹಾದಿಯನ್ನು ಕಾಯತೊಡಗಿದರು. ಹೀಗೆ ಕಾಯುತ್ತಾ ಹಲವಾರು ವರುಷಗಳ ಬಳಿಕ ‘ಭಕ್ತ ರಾಮದಾಸ’ ಎಂದೇ ಪ್ರಸಿದ್ದನಾದ ಕಾಂಚರ್ಲ ಗೋಪಣ್ಣನೆನ್ನುವವ ಧಮ್ಮಕ್ಕನ ಜಿವಿತಾವಧಿಯ ಆಸೆಯನ್ನು ಪೂರ್ಣಗೊಳಿಸಿದನು.
    ಕಾಂಚರ್ಲ ಗೋಪಣ್ಣ ಅಥವಾ ಭಕ್ತ ರಾಮದಾಸನು ಶೀ ರಾಮನ ಸಮರ್ಥ ಭಕ್ತನಾಗಿದ್ದು ೧೬೨೦ ರಲ್ಲಿ ಆಂಧ್ರದ ಜುಮ್ಮಮೇಟ್ ತಾಲ್ಲೂಕಿನ ನೆಲ್ಕೊಂಡವೆಂಬಲ್ಲಿ ಜನಿಸಿದನು. ಲಿಂಗಣ್ಣ ಮೂರ್ತಿ ಹಾಗೂ ಕಾಮಾಂಬರವರ ಪುತ್ರನಾಗಿದ್ದ ಗೋಪಣ್ಣ ಗೋಲ್ಕೊಂಡದ ನವಾಬರಲ್ಲಿ ತಹಶೀಲ್ದಾರಿಕೆಯನ್ನು ಮಾಡಿಕೊಂಡಿದ್ದನು. ನಲ್ಕೋಂಡ ಪಗರಣದ ತಹಶೀಲ್ದಾರಿಕೆಯೊಂದಿಗೆ ಮನೆಯಲ್ಲಿ ನಿತ್ಯವೂ ರಾಮನಾಮದ ಭಜನೆ, ಬಡವರು, ದೀನರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಾಬರುತ್ತಿದ್ದ ಗೋಪಣ್ನನಿಗೆ ನವಾಬರು ಪಗರಣದ ಕಂದಾಯ ವಸ್/ಉಲಿಯ ಕೆಲಸವನೂ ಸಹ ವಹಿಸಿದ್ದರು. ಹೀಗಿರಲು ಒಂದು ದಿನ ಪಗರಣದಲ್ಲಿನ ಭದ್ರಾಚಲದಲ್ಲಿ ಶೀರಾಮನ ಪ್ರಾಚೀನ ಮೂರ್ತಿಯೊಂದು ಸಿಕ್ಕಿರುವುದಾಗಿಯೂ ಸಹಸ್ರಾರು ಜನರು ಅದನ್ನು ವೀಕ್ಷಿಸಲು ಹೋಗುತ್ತಿರುವುದಾಗಿಯೂ ಗೋಪಣ್ಣನಿಗೆ ತಿಳಿಯಿತು. ಗೋಪಣ್ಣನೂ ತಾನು ಅಲ್ಲಿಗೆ ಹೋಗಿ ಶೀ ದೇವರ ದರ್ಶನವನ್ನು ಪಡೆತ್ಯಲು ನಿರ್ಧರಿಸಿ ಭದ್ರಾಚಲದ ಮಾರ್ಗವನ್ನು ಹಿಡಿದನು. ಅಲ್ಲಿಗೆ ಹೋಗಿ ಆ ಮೂರ್ತಿಗಳ ದರ್ಶನ ಮಾಡುತ್ತಲೇ ಗೋಪಣ್ಣನ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮೊದಲೇ ಶೀ ರಾಮನ ಭಕ್ತನಾಗಿದ್ದ ಗೋಪಣ್ಣ ಶೀ ದೇವರಿಗೆ ದೇವಾಲಯವನ್ನು ನಿರ್ಮಿಸಲು ಮುಂದಾದನು, ಆ ಮುಖೇನ ‘ಭಕ್ತ ರಾಮದಾಸ’ ಎನಿಸಿದನು.
    ದೇವಾಲಯದ ನಿರ್ಮಾಣಕ್ಕಾಗಿ ಪರಗಣವಾಸಿಗಳಿಂದ ಉದಾರ ಧನ ಸಹಾಯವನ್ನು ರಾಮದಾಸನು ಕೋರಿದನು ಸಾಕಷ್ಟು ಧನ ಸಂಗ್ರಹವಾದರೂ ಸಹ ದೇವಾಲಯ ನಿರ್ಮಿಸಲು ಅದು ಸಾಲದೇ ಹೋಯಿತು. ಮಿಕ್ಕುಳಿದ ಧನವನ್ನು ಆ ವರ್ಷದ ಫಸಲು ಬಂದ ಬಳಿಕ ನೀಡುವುದಾಗಿ ಅಲ್ಲಿನ ಜನರು ನುಡಿಯಲು ಮುಂದೆ ದಾರಿ ತೋಚದೆ ಪಗರಣದ ಖಜಾನೆಯಲ್ಲಿ ಸಂಗ್ರಹವಾಗಿದ್ದ ಸರ್ಕಾರದ ಕಂದಾಯದ ಹಣ ಅರು ಲಕ್ಷ ಹಣವನ್ನು ನವಾಬರ ಅನುಮತಿಯಿಲ್ಲದೆ ದೇವಾಲಯದ ನಿರ್ಮಾಣಕ್ಕೆ ಬಳಸಿಕೊಂಡು ದೇವಾಲಯವನ್ನು ಪೂರ್ಣಗೊಳಿಸಿದನು.            
    ಹೀಗಿರಲು ದೇವಾಲಯವು ಇನ್ನೇನು ಪೂರ್ಣಗೊಳ್ಳುವ ಹಂತ ತಲುಪಿದಾಗ ಇನ್ನೊಂದು ಸಮಸ್ಯೆಯು ಉದ್ಭವಿಸಿತು. ದೇವಾಲಯದ ಶಿಖರಕ್ಕೆ ಜೋಡಿಸಲು ತಕ್ಕುದಾದ ಸುದರ್ಶನ ಚಕ್ರವು ಸಿಗದೇ ಹೋಯಿತು. ಅದೇ ಚಿಂತೆಯಲ್ಲಿ ಮುಳುಗಿದ್ದ ರಾಮದಾಸನ ಕನಸಿನಲ್ಲಿ ಕಾಣಿಸಿಕೊಂಡ ಶೀ ರಾಮನು “ಪರಮ ಪವಿತ್ರವಾದ ಸುದರ್ಶನವು ಗೋದಾವರಿ ನದಿಯ ತಳದಲ್ಲಿ ಇರುವುದು” ಎಂಬುದಾಗಿ ತಿಳಿಸಲು ರಾಮದಾಸನು ಮರುದಿನವೇ ಗೋದಾವರಿಯಲ್ಲಿದ್ದ ಆ ಪರಮ ಪವಿತ್ರ ಸುದರ್ಶನ ಚಕ್ರವನ್ನು ಪತ್ತೆ ಮಾಡಿ ಗೋಪುರದ ಮೇಲದನ್ನು ಪ್ರತಿಷ್ಠಿಸಿ ದೇವಾಲಯ ನಿರ್ಮಾಣವನ್ನು ಸಂಪೂರ್ಣಗೊಳಿಸಿದನು.
    ಹೀಗೆ ದೇವಾಲಯದ ನಿರ್ಮಾಣವಾಗಲು ರಾಮದಾಸನಿಗೆ ಮಾತ್ರ ಕಡುಕಷ್ಟದ ದಿನಗಳು ಆರಂಭವಾದವು. ನಿಜಾಮ್ ಸರ್ಕಾರದ ಖಜಾನೆ ಸೇರಬೇಕಿದ್ದ ಆರು ಲಕ್ಷ ವರಹದಿಂದ ದೇವಾಲಯವನ್ನು ನಿರ್ಮಿಸಲಾಗಿದೆ ಎಂದರಿತ ನವಾಬನು ರಾಮದಾಸನನ್ನು ಸೇವೆಯಿಂದ ವಜಾಮಾಡಿದ್ದಲ್ಲದೆ ಸುದೀರ್ಘ ಹನ್ನೆರಡು ವರ್ಷ ಗೋಲ್ಕೊಂಡದ ಸೆರೆಮನೆಯಲ್ಲಿಟ್ಟು ಅನೇಹ ಚಿತ್ರಹಿಂಸೆಗಳನ್ನು ನೀಡಿದನು. ಇಂತಹಾ ಕಷ್ಟದ ದಿನಗಳಲ್ಲಿ ಶೀ ರಾಮನನ್ನೇ ಧ್ಯಾನಿಸುತ್ತಿದ್ದ ರಾಮದಾಸನು ‘ದಾಶರಾದಿ ಶತಕ’ ಹಾಗೂ ಅನೇಕ ಕೀರ್ತನೆಗಳಿಂದ ಶೀ ರಾಮದೇವರನ್ನು ಸ್ತುತಿಸುತ್ತಾ ಕಾಲಕಳೆಯುತ್ತಾನೆ.
    ಹೀಗಿರಲು ಒಂದು ದಿನ ತನ್ನ ಭಕ್ತ ರಾಮದಾಸನ ಬಿಡುಗಡೆಗಾಗಿ ಸ್ವತಃ ಶೀ ರಾಮ ಹಾಗೂ ಲಕ್ಷ್ಮಣರು ಧಾವಿಸುತ್ತಾರೆ. ‘ತಾವು ಭಕ್ತ ರಾಮದಾಸನ ಸೇವಕರಾದ ರಾಮೋಜಿ ಹಾಗೂ ಲಕ್ಷ್ಮೋಜಿ’ ಎಂದು ಹೇಳಿಕೊಳ್ಳುವ ಈರ್ವರು ನವಾವ್ಬನ ಆಸ್ಥಾನಕ್ಕೆ ಬಂದು ನವಾಬನಲ್ಲಿ ರಾಮದಾಸನ ದರ್ಶನಕ್ಕೆ ಅನುಮತಿಗಾಗಿ ಬೇಡುತ್ತಾರೆ. ರಾಮದಾಸನನ್ನು ದರ್ಶಿಸಲು ತಡರಾತ್ರಿ ಅವರಿಗೆ ಅನುಮತಿಸಲಾಗುತ್ತದೆ. ಆ ವೇಳೆಯಲ್ಲಿ ದಿವ್ಯ ಪುರುಷರಾದ ರಾಮೋಜಿ ರಾಮದಾಸ ಮಲಹಿರುವ ದಿಂಬಿನ ಕೆಳಗೆ ಅವನು ಸರ್ಕಾರಕ್ಕೆ ಪಾವತಿ ಮಾಡಬೇಕಾದ ಆರು ಲಕ್ಷ ಮೊಹರಿನ ಗಂಟನ್ನು ಇಟ್ಟು ಹೋಗುತ್ತಾನೆ.
    ಇದಾದ ಮರುದಿನವೇ ರಾಮದಾಸನ ದಿಂಬಿನಡಿಯಲ್ಲಿದ್ದ ಆರು ಲಕ್ಷ ಮೊಹರಿನ ಸಮಾಚಾರ ನವಾಬನಿಗೆ ತಲುಪುತ್ತದೆ. ನವಾಬನು ತಕ್ಷಣವೇ ರಾಮದಾಸನನ್ನು ಬಿಡುಗಡೆಗೊಳಿಸುತ್ತಾನೆ. “ನಿನನ್ ಸೇವಕರಾದ ರಾಮೋಜಿ ಹಾಗು ಲಕ್ಷ್ಮೋಜಿಯವರುಗಳು ನಿನ್ನೆ ತಡರಾತ್ರಿ ಇಲ್ಲಿಗೆ ಬಂದಿದ್ದರು. ಅವರು ನೀನು ಕೊಡಬೇಕಿದ್ದ ಆರು ಲಕ್ಷ ಹಣವನ್ನು ಸರ್ಕಾರಕ್ಕೆ ನೀಡಿದ್ದಾರೆ” ಎಂದು ನವಾಬನೆನ್ನಲು ರಾಮದಾಸನಿಗೆ ತಕ್ಷಣವೇ ತನ್ನ ರಕ್ಷಣೆಗಾಗಿ ಬಂದುದು ಸಾಕ್ಷಾತ್ ಶೀ ರಾಮ ಹಾಗೂ ಲಕ್ಷ್ಮಣರೆನ್ನುವುದು ತಿಳಿಯುತ್ತದೆ. ಇದನ್ನು ನವಾಬರಿಗೆ ತಿಳಿಸಿದಾಗ ನವಾಬನು ಕ್ಷಣಕಾಲ ಆನಂದ ಆಶ್ಚರ್ಯಗಳಿಂದ ವಿಸ್ಮಿತನಾಗುತ್ತಾನೆ. ಮತ್ತು ಭಕ್ತ ರಾಮದಾಸನ ಪರಮ ಪವಿತ್ರ ಭಕ್ತಿಗೆ ಮೆಚ್ಚಿದ ನವಾಬನು “ಭಗವಂತನು ಕೊಟ್ಟ ಈ ಆರು ಲಕ್ಷ ಹಣವು ನಮಗೆ ಬೇಡ ನೀವೇ ಇರಿಸಿಕೊಳ್ಲಿ” ಎಂದು ಹೇಳಿದಾಗ ರಾಮದಾಸನು ಅದನ್ನು ನಯ್ವಾಗಿ ನಿರಾಕರಿಸಿ ಭಗವಂತನ ಗುರುತಿಗಾಗಿ ಕೇವಲ ಎರಡು ಮೊಹರುಗಳನ್ನು ತೆಗೆದುಕೊಳ್ಳುತ್ತಾನೆ. (ಈ ಎರಡು ಮೊಹರುಗಳನ್ನು ಶೀ ಕ್ಷೇತ್ರದಲ್ಲಿ ನಾವಿಂದಿಗೂ ಕಾಣುತ್ತೇವೆ. ದೇವಾಲಯದ ಖಜಾನೆಯಲ್ಲಿ ಇಂದಿಗೂ ಆ ಪವಿತ್ರ ಮೊಹರುಗಳನ್ನು ಸಂರಕ್ಷಿಸಿಡಲಾಗಿದೆ.)ಹೀಗೆ ಶೀ ರಾಮನ ಮಹಾಶಕ್ತಿಯನ್ನರಿತ ಗೋಲ್ಕೊಂಡದ ನವಾಬನು ಭದ್ರಾಚಲ ಕ್ಷೇತ್ರಕ್ಕೆ  ಸಾಕಷ್ಟು ದಾನ ದತ್ತಿಗಳನ್ನು ನೀಡುತ್ತಾನೆಯಲ್ಲದೆ ಶೀ ರಾಮ ನವಮಿಯೂ ಸೇರಿದಂತೆ ವರ್ಷಾವಧಿ ನಾನಾ ಉತ್ಸವಾದಿಗಳನ್ನು ನಡೆಸಲು ಅನುಮತಿಸುತ್ತಾನೆ.
    ಹೀಗೆ ಧಮ್ಮಕ್ಕನ ಮನದಲ್ಲಿನ ಆಸೆಯು ಭಕ್ತ ರಾಮದಾಸನ ಮೂಲಕ ನೆರವೇರುತ್ತದೆ, ಧಮ್ಮಕ್ಕ ಇದನ್ನೆಲ್ಲಾ ಕಣ್ಣಾರೆ ಕಂಡು ಮನಸ್ಸಂತೃಪಿಯೊಂದಿಗೆ ವಿಷ್ಣು ಭಗವಾನ್ ನಲ್ಲಿ ಐಕ್ಯಳಾಗುತ್ತಾಳೆ. ಮುಂದೆ ಭಕ್ತ ರಾಮದಾಸನು ಹಲವು ವರ್ಷಗಳ ಕಾಲ ಶೀ ರಾಮನ ಸೇವೆಯನ್ನು ಮಾಡಿ ರಾಮನಲ್ಲಿಯೇ ಐಕ್ಯಹೊಂದುತ್ತಾನೆ. 

Saturday, September 07, 2013

ಎಂದೆಂದೂ ಅಮರ ಈ ‘ಪೂರ್ಣ ಚಂದಿರ’

    ನಮಸ್ಕಾರ ಸ್ನೇಹಿತರೆ,
    ನಾಳೆ (ಸೆಪ್ಟೆಂಬರ್-8)  ಕನ್ನಡ ಸಾಹಿತ್ಯ ಲೋಕದ ಅಪೂರ್ವ ಪ್ರತಿಭೆ ಶೀ ಪೂರ್ಣಚಂದ್ರ ತೇಜಸ್ವಿಯವರ ಎಪ್ಪತೈದನೆ ಜನ್ಮದಿನ. ತೇಜಸ್ವಿಯವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸಾಹಿತ್ಯವನ್ನೋದಿದಾಗ ಸಿಗುವ ಆತ್ಮ ಸಂತೋಷದಲ್ಲಿ ಅವರು ಎಂದೆಂದಿಗೂ ನಮ್ಮೊಂದಿಗಿರುತ್ತಾರೆ. ತೇಜಸ್ವಿ ಕನ್ನಡ ಸಾಹಿತ್ಯ ಬಲ್ಲ ಎಲ್ಲರಿಗೂ ಚಿರಪರಿಚಿತ ಹೆಸರು. ನವ್ಯ ಹಾಗೂ ಬಂಡಾಯ ಕಾಲಘಟ್ಟದಲ್ಲಿ ಅತ್ಯಂತ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡ ತೇಜಸ್ವಿಯರದೇ ವಿಭಿನ್ನ ಸಾಹಿತ್ಯ ಮಾರ್ಗವೆನ್ನಬೇಕು. ತೇಜಸ್ವಿ ಕೇವಲ ಒಬ್ಬ ಲೇಖಕರಷ್ಟೇ ಆಗಿರದೆ ಅವರೊಬ್ಬ ವಿಜ್ಞಾನಿ, ಸಂಶೋಧಕ. ವಿಜ್ಞಾನ ಜಗತ್ತಿನ ಜ್ಞಾನ ಕನ್ನಡದ ಯುವ ಪೀಳಿಗೆಗೆ ಸುಲಭವಾಗಿ ದಕ್ಕಲಿ ಎಂಬ ಮಹದಾಸೆಯಿಂದ ಬರೆದ ಏಕೈಕ ಸಾಹಿತಿಯೆಂದರೆ ತಪ್ಪಾಗಲಾರದು. ಸ್ವತಂತ್ರ ಪ್ರವೃತ್ತಿಯ ಬರಹಗಾರರಾಗಿದ್ದ ತೇಜಸ್ವಿಯವರ ಸಾಹಿತ್ಯದ ಪಾತ್ರಗಳಲ್ಲಿ ಯಾವುದೇ ಪಾತ್ರ ಮುಖ್ಯ ಪಾತ್ರವೆಂದಾಗಲೀ, ಗುರುತಿಸಬರುವುದಿಲ್ಲ ಹಾಸ್ಯದ ಮೂಲಕ ದುಃಖವನ್ನು ಅನುಸಂಧಾನ ಮಾಡುವ ವಿಶಿಷ್ಟ ಶೈಲಿಯನ್ನು ತೇಜಸ್ವಿಯವರ ಸಾಹಿತ್ಯದಲ್ಲಿ ನಾವು ಕಾಣುತ್ತೇವೆ.
    ಕನ್ನಡದ ಅಗ್ರ ಕವಿಗಳಾದ ಕುವೆಂಪು ರವರ ಪುತ್ರರಾಗಿದ್ದ ಪೂರ್ಣಚಂದ್ರ ತೇಜಸ್ವಿಯವರು ತಂದೆಯವರಿಂದ ಸಾಹಿತ್ಯ ಲೋಕದ ಒಳ ಹೊರಗನ್ನು ಅರಿತುಕೊಂಡರೂ ಸಹ ತಂದೆಯನ್ನು ಅನುಸರಿಸದೆ ತಾವು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಬರೆದು ತಮ್ಮದೇ ಓದುಗ ವರ್ಗವನ್ನು ಕಟ್ಟಿಕೊಂಡವರು. ಕುವೆಂಪುರವರಂತೆಯೇ ತೇಜಸ್ವಿಯವರ ಸಾಹಿತ್ಯದಲ್ಲಿಯೂ ಕಾಡು, ಹಳ್ಳಿಯ ಜೀವನವೇ ಪ್ರಮುಖವಾದರೂ ಕುವೆಂಪು ಕಾದಂಬರಿಗಳಲ್ಲಿ ಕಾಣುವ ನಿಸರ್ಗ ನಿಬಿಡತೆ, ಗಾಂಭೀರ್ಯವನ್ನು ತೇಜಸ್ವಿಯವರಲ್ಲಿ ಕಾಣುವುದಿಲ್ಲ, ಬದಲಾಗಿ ಇಂದಿನ ವರ್ತಮಾನಕ್ಕೆ ಹೊಂದುವಂತಹಾ ಸಹಜವಾದ ಹಾಗೂ ಸರಳವಾದ ಸಾಹಿತ್ಯ ಸೃಷ್ಟಿ ಇವರದು. ಅದಕ್ಕಾಗಿಯೇ ತೇಜಸ್ವಿಯವರ ಸಾಹಿತ್ಯ ಜನರಿಗೆ ಹೆಚ್ಚು ಸಮೀಪವಾಗಿದೆ ಎನ್ನಬೇಕು. (ಎಂದ ಮಾತ್ರಕ್ಕೆ ಕುವೆಂಪು ಜನರನ್ನು ತಲುಪಿಲ್ಲವೆಂದಲ್ಲ!) ತೇಜಸ್ವಿಯವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ತಮ್ಮ ಸೃಜನಶೀಲ ಪ್ರತಿಭೆಯಿಂದ ಗುರುತಿಸಲ್ಪಟ್ಟವರು. ನೋಡಲು ಉಡಾಫೆಯ ವ್ಯಕ್ತಿಯಂತೆ ಕಾಣುತ್ತಿದ್ದರೂ ತಮ್ಮ ಗಂಭೀರ ಚಿಂತನೆಗಳಿಂದ ಕನ್ನಡಿಗರನ್ನು ಚಿಂತನೆಗೆ ಹಚ್ಚಿದವರು. ಸಮಾಜವಾದಿ ಹೋರಾಟ, ರೈತ ಸಂಘಟನೆ, ಕೃಷಿ-ಬೇಸಾಯ, ಪ್ರಗತಿಪರ ಚಿಂತನೆ, ವೈಜ್ಞಾನಿಕ ವಿಶ್ಲೇಷಣೆಗಳನ್ನು ಸರಳ ಕನ್ನಡದಲ್ಲಿ ಬರೆಯುವುದರೊಂದಿಗೆ ಕನ್ನಡ ಓದುಗ ವಲಯವನ್ನು ವಿಸ್ತರಿಸಿದವರು ತೇಜಸ್ವಿ.
    ತೇಜಸ್ವಿ ಅವರ ಎಲ್ಲ ಕೃತಿಗಳೂ ಒಂದಿಲ್ಲೊಂದು ಉತ್ಪಾತಗಳ ಅಸಂತುಲಿತ ನಡೆಯಿಂದ ಸಂಭವಿಸುವ ಸಮಸ್ಯೆಗಳ ಚಿತ್ರಣದಿಂದಲೇ ಪ್ರಾರಂಭವಾಗುತ್ತವೆ. ‘ನಿಗೂಢ ಮನುಷ್ಯರು’, ‘ಕರ್ವಾಲೋ’, ‘ಜುಗಾರಿ ಕ್ರಾಸ್’, ‘ಚಿದಂಬರರಹಸ್ಯ’ದಂಥ ಕಾದಂಬರಿಗಳು ಹಾಗೂ ‘ಪರಿಸರದ ಕತೆಗಳ’ ಮೂಲಕ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟವರು ತೇಜಸ್ವಿ. ಎಲ್ಲಾ ಕೃತಿಗಳಲ್ಲಿ ಹಳ್ಳಿಯ ಬದುಕು ಮತ್ತು ಪರಿಸರ ಪ್ರಧಾನವಾಗಿರುವುದನ್ನು ಕಾಣುತ್ತೇವೆ. ತೇಜಸ್ವಿಯವರಿಗೆ ತಮ್ಮ ಹಳ್ಳಿಯ ಪರಿಸರ ಎಷ್ಟೊಂದು ಪ್ರಿಯವಾಗಿತ್ತೆಂದರೆ ಅವರೇ ತಮ್ಮ “ಪರಿಸರದ ಕಥೆ” ಪುಸ್ತಕದಲ್ಲಿ ಹೀಗೆ ಹೇಳಿಕೊಂಡಿದ್ದಾರೆ- ‘‘ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರೇ. ನಮಗೆ ಕುತೂಹಲ ಹುಟ್ಟಿಸಬೇಕೆಂಬ ಉದ್ದೇಶವೇನೂ ಅವರಿಗೆ ಇದ್ದಂತೆ ಕಾಣಲಿಲ್ಲ.ಅದರಲ್ಲಿ ಅವರಿಗೆ ಇದ್ದ ಆಸಕ್ತಿಯ ಪರಿಣಾಮವಾಗಿಯೇ ನಮಗೂ ಆಸಕ್ತಿ ಉಂಟಾ ಯ್ತು. ನನಗಂತೂ ಈ ಆಸಕ್ತಿ ಎಷ್ಟಾಯಿತೆಂದರೆ ಓದು ಬರಹ, ವಿದ್ಯಾಭ್ಯಾಸಗಳಲ್ಲಿ ಆಸಕ್ತಿ ಕಡಿಮೆಯಾಯ್ತು. ತಂದೆಯವರ ತಾರುಣ್ಯದ ಕಾಡಿನ ಮತ್ತು ಬೇಟೆಯ ರೋಮಾಂಚಕ ಅನುಭವಗಳನ್ನು ಕೇಳಿ ಪ್ರಭಾವಿತನಾದ ನಾನು ನಮ್ಮ ತಂದೆ ಏಕಾದರೂ ಮೈಸೂರಿಗೆ ಪಾಠಹೇಳಲು ಮಲೆನಾಡನ್ನು ತೊರೆದು ಬಂದರೋ ಎಂದು ವ್ಯಥೆ ಪಡುತ್ತಿದ್ದೆ.’’
    ಹಲವಾರು ಆಂಗ್ಲ ಕವಿಗಳ ಕೃತಿಗಳನ್ನು ಕನ್ನಡಕ್ಕೆ ತಂದ ತೇಜಸ್ವಿಯವರ ಪ್ರತಿಯೊಂದು ಕೃತಿಗಳಲ್ಲಿಯೂ ವಿಭಿನ್ನತೆ, ವೈವಿದ್ಯತೆಗಳನ್ನು ಕಾಣುತ್ತೇವೆ. ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯಬಗ್ಗೆ ಹಲವಾರು ಕೃತಿಗಳನ್ನು ನೀಡಿರುವ ತೇಜಸ್ವಿ ತಮ್ಮ ‘ಕರ್ವಾಲೋ’ ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ತುವಂತಹಾ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ. ಜತೆಗೆ ಇಲ್ಲಿ ಪ್ರಕೃತಿಯ ವಿಸ್ಮಯವನ್ನು ವೈಜ್ಞಾನಿಕ ಸಾಧನಗಳ ಮೂಲಕ ಅರ್ಥೈಸುತ್ತಾ ಆಧ್ಯಾತ್ಮಿಕತೆಯ ಕಡೆಗೆ ಕೊಂಡೊಯ್ಯುವುದನ್ನು ಕಾಣಬಹುದು `ಮಹಾಯುಧ್ಧ’, `ಹಾರುವ ತಟ್ಟೆಗಳು’, `ಮಹಾನದಿ ನೈಲ್’ ನಂತಹಾ ಹಲವು ವೈಜ್ಞಾನಿಕ ಹಿನ್ನೆಲೆಯ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ತೇಜಸ್ವಿಯವರ “ಅಲೆಮಾರಿಯ ಅಂಡಮಾನ್” ಕನ್ನ್ಡಡ ಪ್ರವಾಸ ಕಥನ ಸಾಹಿತ್ಯಗಳಲ್ಲಿ ಬಹು ವಿಶಿಷ್ಟವಾಗಿ ನಿಲ್ಲಬಹುದಾದ ಕೃತಿ. ಇನ್ನು ತೇಜಸ್ವಿಯವರ ಇನ್ನೊಂದು ಪ್ರಮುಖ ಕೃತಿ “ಚಿದಂಬರ ರಹಸ್ಯ” ದಲ್ಲಿ ಪರಿಸರ ವಿನಾಶವು ಹಳ್ಳಿಯ ಜೀವನವನ್ನು ಹೇಗೆ ಬಲಿತೆಗೆದುಕೊಳ್ಳುತ್ತದೆ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿರುವುದನ್ನು ಕಾಣುತ್ತೇವೆ. “ಅಬಚೂರಿನ ಪೋಸ್ಟಾಫೀಸು” ಕೃತಿಯ ಮೂಲಕ ಬಂಡಾಯ ಸಾಹಿತ್ಯ ಸೃಷ್ಟಿಗೆ ತೊಡಗಿದ ತೇಜಸ್ವಿಯವರು “ತಬರನ ಕಥೆ” ಯಲ್ಲಿ ಇಂದಿನ ರಾಜಕೀಯವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿರುವುದನ್ನು ಕಾಣುತ್ತೇವೆ. ಈ ಎರಡು ಕಥೆಗಳು ತೇಜಸ್ವಿಯವರ ಅತ್ಯಂತ ಪ್ರಸಿದ್ದ ಕಥೆಗಳಾಗಿದ್ದುದಲ್ಲದೆ ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನವಾಯಿತೆನ್ನುವುದು ಗಮನಾರ್ಹ. ಹೀಗೆ ತೇಜಸ್ವಿಯವರ ಪ್ರಥಮ ಕೃತಿಯಿಂದ ಹಿಡಿದು ಅವರ ಮರಣ್ ಕಾಲಕ್ಕಿಂತ ಸ್ವಲ್ಪ ಮೊದಲು ಪ್ರಕಟವಾದ “ಮಾಯಾಲೋಕ-೧” ಕೃತಿಯವರೆಗೂ ಪ್ರತಿಯೊಂದು ಕೃತಿಗಳಲ್ಲಿಯೂ ಅದರದೇ ಆದ ವೈಶಿಷ್ಟ್ಯವನ್ನು ನಾವು ಕಾಣುತ್ತೇವೆ.
    ಹೀಗೆ ಒಟ್ತಾರೆಯಾಗಿ ಪೂರ್ಣಚಂದ್ರ ತೇಜಸ್ವಿ ಕನ್ನಡಕ್ಕಷ್ಟೇ ಅಲ್ಲ ವಿಶ್ವ ಸಾಹಿತ್ಯ ವಲಯದಲ್ಲೇ ಒಂದು ಮಹತ್ವದ ಹೆಸರು ಮಾಡಿದವರು ಅವರ ಸಾಹಿತ್ಯದಲ್ಲಿನ ವಾಸ್ತವಿಕತೆ, ಗಟ್ಟಿತನಗಳಿಂದ ಗುರುತಿಸಿಕೊಂಡಿರುವ ತೇಜಸ್ವಿಯವರು ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಅಜರಾಮರರಾಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅವರ ಹುಟ್ಟಿದ ಹಬ್ಬದ ಈ ಸಂದರ್ಭದಲ್ಲಿ ಅವರು ಕನ್ನಡಕ್ಕೆ ನೀಡಿದ ಸಾಹಿತ್ಯ ಕೊಡುಗೆಯನ್ನು ನೆನೆಯುತ್ತಾ, ಇಂತಹಾ ಅದ್ಭುತ ಪ್ರತಿಭೆಗಳು ಕನ್ನಡದಲ್ಲಿ ಇನ್ನಷ್ಟು ಹುಟ್ಟಿಬರಲಿ ಎಂದು ಹಾರೈಸೋಣ.
    ನಮಸ್ಕಾರ.

Thursday, September 05, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -5

ಗೋಕರ್ಣ(Gokarna)
    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನನ್ನ ನಮಸ್ಕಾರಗಳು. ಇನ್ನೇನು ನಾಲ್ಕೈದು ದಿನಗಳಿರುವ ಚೌತಿ ಹಬ್ಬಕ್ಕೆ ನೀವೆಲ್ಲರೂ ಕಾಯುತ್ತಿದ್ದೀರಿ, ಹೌದು ತಾನೆ? ನಾನಂತೂ ಕಾಯುತ್ತಿದ್ದೇನೆ, ಅದಕ್ಕೂ ಮುಂಚಿತವಾಗಿ ಗಣಪತಿಯು ಪ್ರತಿಷ್ಠಾಪಿಸಿದ ಶಿವನ ಆತ್ಮಲಿಂಗದ ಕಥೆಯನ್ನು ತಿಳಿಯೋಣವೆ?
    ಇಂದಿನ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹಿಂದೂಗಳ ಪ್ರಸಿದ್ದ ಆರಾಧನಾ ಕ್ಷೇತ್ರ ಗೋಕರ್ಣ. ಇಲ್ಲಿ ಪರಮೇಶ್ವರನು ಸ್ವಯಂ ಆತ್ಮಲಿಂಗ ಸ್ವರೂಪಿಯಾಗಿ ನೆಲೆಸಿದ್ದು, ಅವನನ್ನು ಇಲ್ಲಿ ನೆಲೆಗೊಳಿಸಿದ್ದು ಸಹ ಶಿವಸುತನಾದ ವಿಘ್ನ ನಿವಾರಕ ಗಣೇಶನೆನ್ನುವುದು ಬಹು ವಿಶೇಷ.
    ಯುಗ ಯುಗಾಂತರಗಳ ಹಿಂದೊಮ್ಮೆ ಲಂಕಾಧಿಪತಿಯಾಗಿದ್ದ ರಾವಣನು ಮಹಾ ಶಿವಭಕ್ತೆಯಾಗಿದ್ದ ತನ್ನ ತಾಯಿಯ ಪೂಜೆಯ ಸಲುವಾಗಿ ಕೈಲಾಸದಿಂದ ಶಿವನನ್ನು ಬೇಡಿ ಒಂದು ವಿಶೇಷ ಲಿಂಗವನ್ನು ತಂದು ಕೊಟ್ಟಿದ್ದನು. ಅದನ್ನು ಬಹಳ ನಿಷ್ಠೆ, ಭಕ್ತಿಯಿಂದ ಆತನ ತಾಯಿಯು ನಿತ್ಯವೂ ಪೂಜಿಸುತ್ತಿರಲು ದೇವರಾಜನಾದ ಇಂದ್ರನಿಗೆ ಇದನ್ನು ಸಹಿಸಲಾಗಲಿಲ್ಲ. ರಾಕ್ಷಸ ರಾಜ ರಾವಣನ ಅರಮನೆಯಲ್ಲಿ ಶಿವಪೂಜೆ ಅಷ್ಟು ವೈಭವಯುತ್ವಾಗಿ ನಡೆಯುವುದನ್ನು ಇಂದ್ರನು ಕಂಡು ಭಯಗೊಂಡು ಇದನ್ನು ಹೇಗಾದರೂ ಸರಿ ನಿಲ್ಲಿಸಬೇಕೆಂದು ಯೋಜಿಸಿದ. ಮತ್ತು ಶಿವಲಿಂಗವನ್ನು ಸಮುದ್ರಕ್ಕೆ ಎಸೆದು ಆಸ್ಥಾನದಲ್ಲಿ ಶಿವಪೂಜೆ ನಡೆಯದಂತೆ ಮಾಡಿದ. ಇದನ್ನು ಕಂಡು ಕುಪಿತಗೊಂಡ ರಾವಣನ ತಾಯಿಯು ತನ್ನ ಮಗನಲ್ಲಿ ವಿಚಾರವನ್ನು ತಿಳಿಸಿ ತನಗೊಂದು ಶಿವಲಿಂಗವನ್ನು ತಂದುಕೊಡುವಂತೆ ಬೇಡಿದಳು. ಅವಳ ಬೇಡಿಕೆಯನ್ನು ಮನ್ನಿಸಿದ ರಾವಣ ಮತ್ತೆ ಶಿವಲಿಂಗ ತರುವುದಕ್ಕಾಗಿ ಕೈಲಾಸದತ್ತ ಹೊರಟ.
    ಕೈಲಾಸದಲ್ಲಿ ಹಲವಾರು ವರ್ಷಗಳ ಕಾಲ ಶಿವನನ್ನು ಕುರಿತು ಮಹಾ ತಪಸ್ಸನ್ನಾಚರಿಸಿದ ರಾವಣನ ಭಕ್ತಿ ಶಿವನನ್ನು ಸಂಪ್ರೀತಗೊಳಿಸಿತು. ಅದೊಂದು ಶುಭ ಮಹೂರ್ತದಲ್ಲಿ ಶಿವನು ತನ್ನ ಪತ್ನಿ ಉಮಾದೇವಿಯ ಸಮೇತನಾಗಿ ರಾವಣನಿಗೆ ದರ್ಶನ ನೀಡಿದನು. ಭಕ್ತ ರಾವಣ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ನಿನಗೇನು ವರ ಬೇಕು ಕೇಳು ಎನ್ನುವುದಾಗಿ ಶಿವನು ಅಪ್ಪಣೆಯನ್ನಿಡಲು ರಾವಣನು ತನ್ನ ತಾಯಿಯ ನಿತ್ಯಪೂಜೆಗಾಗಿ ನಿನ್ನಲ್ಲಿರುವ ಆತ್ಮಲಿಂಗವು ಬೇಕಾಗಿದೆ ಎಂದು ಕೋರಿಕೆಯನ್ನಿಡುವನು. ಅದನ್ನು ಪರಮೇಶ್ವರನು ಸಂತೋಷದಿಂದ ಮನ್ನಿಸಿ ಸೂರ್ಯನಿಗಿಂತಲೂ ಸಾವಿರ ಪಟ್ಟು ಹೆಚ್ಚು ಪ್ರಕಾಶದಿಂದ ಪ್ರಜ್ವಲಿಸುತ್ತಿರುವ ಆತ್ಮಲಿಂಗವನ್ನು ರಾವಣನಿಗೆ ನೀಡುವನು. ಅದಾಗ ರಾವಣನ ಕಣ್ಣಿಗೆ ಮಾಯೆಯು ಆವರಿಸಿದಂತಾಗಿ ರಾವಣನು ಪರಮೇಶ್ವರನೇ ನನ್ನ ಇನ್ನೊಂದು ಕೋರಿಕೆಯನ್ನು ನಡೆಸಲಾರೆಯಾ? ಎಂದು ಕೇಳುವನು. ಪರಮೇಶ್ವರನು ಏನದು ನಿನ್ನ ಕೋರಿಕೆ? ಎನ್ನಲು ರಾವಣನು ನಿನ್ನ ಪಕ್ಕದಲ್ಲಿರುವ ಸುಂದರ ತರುಣಿಯು ನನಗೆ ಬೇಕು, ನಾನವಳನ್ನು ಲಗ್ನವಾಗಬೇಕೆಂದಿರುವೆ ಎನ್ನುವನು. ಪರಮೇಶ್ವರನು ಒಂದು ಕ್ಷಣ ಕುಪಿತಗೊಂಡರೂ ತೋರಿಸಿಕೊಳ್ಲದೆ ಓಹೋ, ಸಂತೋಷದಿಂದ ಕರೆದುಕೊಂಡು ಹೋಗು ಎನ್ನುತ್ತಾನೆ, ಜತೆಗೆ ಇನ್ನೊಂದು ಎಚ್ಚರಿಕೆಯನ್ನೂ ನೀಡುತ್ತಾನೆ, ಅದೆಂದರೆ- ಆತ್ಮಲಿಂಗವನ್ನು ನಿನ್ನ ಪ್ರಯಾಣ ಅಂತ್ಯವಾಗುವವರೆಗೂ ಎಲ್ಲಿಯೂ ನೆಲವನ್ನು ಸ್ಪರ್ಷಿಸದಂತೆ ನೋಡಿಕೊ, ಒಂದು ವೇಳೆ ಅದೆಲ್ಲಾದರೂ ಭೂಸ್ಪರ್ಷವಾದರೆ ಮತ್ತದನ್ನು ಅಲ್ಲಿಂದ ಮೇಲೆತ್ತುವುದು ಸಾಧ್ಯವಿಲ್ಲ ಒಂದು ಎಚ್ಚರಿಕೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ರಾವಣನು ತಾನು ಮೂಲೋಕವನ್ನೂ ಗೆದ್ದ ಸಂಭ್ರಮದಿಂದ ಆತ್ಮಲಿಂಗ ಹಾಗೂ ಉಮಾದೇವಿಯರೊಂದಿಗೆ ಲಂಕೆಯ ಮಾರ್ಗ ಹಿಡಿಯುತ್ತಾನೆ.
    ಇತ್ತ ಪರಮೇಶ್ವರ ರಾವಣಾನಿಗೆ ತನ್ನ ಆತ್ಮಲಿಂಗ ಹಾಗೂ ಉಮಾದೇವಿಯನ್ನು ನೀಡಿದ ಸುದ್ದಿ ತಿಳಿದು ಶಿವಪುತ್ರನಾದ ಗಣೇಶ ಮತ್ತು ಇಂದ್ರಾದಿ ದೇವತೆಗಳು ಚಕಿತಗೊಳ್ಳುತ್ತಾರೆ. ಅವರೆಲ್ಲರೂ ತಕ್ಷಣವೇ ಕೈಲಾಸಕ್ಕೆ ಧಾವಿಸಿ ಪರಮೇಶ್ವರನನ್ನು ಕಂಡು ರಾವಣಾನಿಗೆ ಆತ್ಮಲಿಂಗವನ್ನು ನೀಡಿದುದರ ಕಾರಣಾ ಮತ್ತು ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ನಿವೇದಿಸುತ್ತಾರೆ. ಎಲ್ಲರ ಮಾತನ್ನೂ ತಾಳ್ಮೆಯಿಂದಾಲಿಸಿದ ಪರಮೇಶ್ವರನು ಅಂತ್ಯದಲ್ಲಿ ಹೀಗೆನ್ನುತ್ತಾನೆ- ನೋಡಿ ನಾನು ನೀಡಿದ ವರವನ್ನು ಹಿಂಪಡೆಯಲು ಬರುವುದಿಲ್ಲ, ಆದರೆ ನೀವ್ಯಾರೂ ಇದರಿಂದ ಗಾಬರಿಯಾಗಬೇಕಿಲ್ಲ. ಎಲ್ಲವನ್ನೂ ಸರಿಯಾಗಿಸುವವ ಶ್ರೀ ಹರಿಯಿದ್ದಾನೆ. ನೀವೆಲ್ಲರೂ ಅವನ ಬಳಿ ಹೋಗಿರಿ. ಇದನ್ನು ಕೇಳಿದ ಸರ್ವ ದೇವಾನು ದೇವತೆಗಳು ಮಹಾವಿಷ್ಣುವಿನಲ್ಲಿಗೆ ತೆರಳಿ ಅವನ ಬಳಿ ನಡೆದ ಘಟನೆಗಳನ್ನು ವಿವರಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಬೇಡುತ್ತಾರೆ. ದೇವತೆಗಳ ಮಾತುಗಳನ್ನು ಆಲಿಸಿದ ಹರಿಯು ತಕ್ಷಣವೆ ಕಾರ್ಯತತ್ಪರನಾಗಿ ಬ್ರಹ್ಮಣನ ವೇಷವನ್ನು ತಾಳಿ ರಾವಣನಿಗೆ ಎದುರಾಗುತ್ತಾನೆ. ರಾವಣನನ್ನು ಕಂಡ ಬ್ರಹ್ಮಣಾ ರೂಪಿ ಶ್ರೀ ವಿಷ್ಣುವು ಎಲೈ ರಾವಣಾ ನೀನು ಅದು ಹೇಗೆ ಇಷ್ಟೊಂದು ಸುಂದರವಾದ ಯುವತಿಯನ್ನು ಹೊತ್ತು ಬರುತ್ತಿರುವೆ? ಎಂದು ಕೇಳುತ್ತಾ ಅವನನ್ನು ಮಾತಿಗೆಳೆಯುತ್ತಾನೆ. ಆಗ ರಾವಣ ಹೌದು, ಕೈಲಾಸಾಧಿಪತಿಯಾದ ಪರಮೇಶ್ವರನೇ ನನಗಿವಳನ್ನು ನೀಡಿದನು, ಅಲ್ಲಿಂದಿವಳನ್ನು ನನ್ನ ರಾಜಧಾನಿಯಾದ ಲಂಕೆಗೆ ಕರೆದೊಯ್ಯುತ್ತಿದ್ದೇನೆ ಎನ್ನುತ್ತಾ ಅವಳ ಸುಂದರ ವದನವನ್ನು ನೋಡಲೆಂಬಂತೆ ಕ್ಷಣಕಾಲ ಅವಳನ್ನು ಹೆಗಲಿನಿಂದ ಕೆಳಗಿಳಿಸುತ್ತಾನೆ. ಒಂದು ಕ್ಷಣಕ್ಕೆ ಕಾಯುತ್ತಿದ್ದ ಶ್ರೀ ವಿಷ್ಣುವು ತನ್ನ ಮಾಯೆಯಿಂದ ಉಮೆಯ ಸುಂದರವಾದ ರೂಪು ರಾವಣನ ಕಣ್ಣಿಗೆ ಕುರೂಪಿ ಮುದುಕಿಯಂತೆ ಕಾಣುವಂತೆ ಮಾಯಾಜಾಲವನ್ನು ಹೆಣೆಯುತ್ತಾನೆ. ತಾನು ಹೊತ್ತು ತಂದ ಯುವತಿ ಕುರೂಪಿಯಾದ ಮುದುಕಿಯಾದುದನ್ನು ಕಂಡ ರಾವಣ ತಾನು ಕುಪಿತಗೊಳ್ಳುತ್ತಾನೆ, ಮತ್ತು ಪುನಃ ಕೈಲಾಸಕ್ಕೆ ಹಿಂತಿರುಗಿ ಶಿವನಲ್ಲಿ ನೀನು ನೀಡಿದ ಉಮೆಯು ಹೇಗೆ ಕುರೂಪಿಯೂ, ಮುದುಕಿಯೂ ಆದಳು? ಎಂದು ಪ್ರಶ್ನಿಸುತ್ತಾನೆ. ಇಷ್ಟಿರಬೇಕಾದರೆ ಮಹಾವಿಷ್ಣುವು ಉಮೆಯಂತೆಯೇ ಸುಂದರಿಯಾದ ಮಾಯಾಸುರನ ಮಗಳಾದಂತಹಾ ಮಂಡೋದರಿಯನ್ನು ರಾವಣನ ಮುಂದೆ ನಿಲ್ಲಿಸಿ ನಿನ್ನ ಉಮೆ ಇವಳೆ ಎನ್ನುವುದಾಗಿ ನಂಬಿಸುತ್ತಾನೆ. ಅದನ್ನು ನಂಬಿದಂತಹಾ ರಾವಣ ಮಂಡೋದರಿಯನ್ನು ವಿವಾಹವಾಗಿ ಆತ್ಮಲಿಂಗದೊಂದಿಗೆ ಪುನಃ ಲಂಕೆಯ ದಾರಿ ಹಿಡಿಯುತ್ತಾನೆ.
    ಅತ್ತ ಇಂದ್ರಾದಿ ದೇವತೆಗಳು ರಾವಣನಿಂದ ಆತ್ಮಲಿಂಗವನ್ನು ಹಿಂಪಡೆಯಲು ಗಣಪತಿಯ ಸಹಾಯವನ್ನು ಬೇಡುತ್ತಾರೆ. ಅವರ ಬೇಡಿಕೆಯಂತೆ ಗಣಪತಿಯು ಬ್ರಹ್ಮಣ ಬಾಲಕನ ವೇಷದಲ್ಲಿ ಗೋವುಗಳನ್ನು ಮೇಯಿಸುವವನಂತೆ ನಟಿಸುತಾ ರಾವಣನಿಗೆ ಎದುರಾಗುತ್ತಾನೆ. ಅದಕ್ಕೆ ಸರಿಯಾಗಿ ಸಂದ್ಯಾಕಾಲವು ಸಮೀಪಿಸಿರುತ್ತದೆ. ರಾವಣನು ಸಂದ್ಯಾವಂದನೆ ಮಾಡಬೇಕಿದ್ದು ಆತ್ಮಲಿಂಗವನ್ನು ನೆಲದ ಮೇಲಿಡುವಂತಿಲ್ಲವಾದುದರಿಂದ ಸುತ್ತಲೂ ಯಾರಾದರೂ ಇದ್ದಾರೆಯೆ ಎಂಬುದಾಗಿ ಹುಡುಕುತ್ತಿರುತ್ತಾನೆ. ಅದಾಗ ಸರಿಯಾಗಿ ಪುಟ್ಟ ಬಾಲಕ ಸ್ವರೂಪಿ ಗಣಪತಿ ಅವನ ಕಣ್ಣಿಗೆ ಬೀಳುತ್ತಾನೆ. ಅವನ ಬಳಿ ಬಂದ ರಾವಣ ಎಲೈ ಬಾಲಕ ನಾನು ಸಂದ್ಯಾವಂದನೆ ಮಾಡಬೇಕಿದೆ, ನನ್ನ ಸಂದ್ಯಾವಂದನೆಯಾಗುವವರೆಗೆ ಆತ್ಮಲಿಂಗವನ್ನು ಹಿಡಿದುಕೊಂಡಿರುವೆಯೆ? ಎಂದು ಕೇಳಲು ಬಾಲಕನು ಅದಕ್ಕೊಪ್ಪಿ ಸ್ವೀಕರಿಸುತ್ತಾ ಇದೇನಿದು ಇಷ್ಟೊಂದು ಭಾರವಿದೆ, ನನಗೆ ಹೆಚ್ಚು ಸಮಯ ಹಿಡಿದುಕೊಳ್ಳಲಾಗುವುದಿಲ್ಲ, ನೀನು ಬೇಗ ಬರುವೆ ತಾನೆ? ಎನ್ನುವುದಾಗಿ ಪ್ರಶ್ನಿಸಲು ರಾವಣ, ಓಹೋ ಬೇಗನೆ ಬರುವೆನು ಎಂದಾಗ ಮತ್ತೆ ಬಾಲಕನು ಒಂದು ಷರತ್ತು ವಿಧಿಸುತ್ತಾನೆ ನಾನು ಮೂರು ಬಾರಿ ರಾವಣಾ... ರಾವಣಾ... ರಾವಣಾ... ಎಂದು ಕರೆಯುತ್ತೇನೆ ಅಷ್ಟರಲ್ಲಿ ನೀನು ಬರದಿದ್ದರೆ ನಾನಿದನ್ನು ನೆಲದ ಮೇಳಿಟ್ಟುಬಿಡುವೆನು ಇದಕ್ಕೂ ಸಹ ಒಪ್ಪಿದ ರಾವಣ ಅವಸರವಾಗಿ ಸಂದ್ಯಾವಂದನೆಗೆ ತೆರಳುತ್ತಾನೆ.
    ರಾವಣನತ್ತ ಸಂದ್ಯಾವಂದನೆಗಾಗಿ ಕುಳಿತಿರುವಾಗಲೇ ಇತ್ತ ಬಾಲಕ ಸ್ವರೂಪಿಯಾದ ಗಣಪತಿಯು ಮೊದಲ ಸಲ ರಾವಣಾ.... ಎಂದು ಕರೆಯುತ್ತಾನೆ, ಮತ್ತೆ ಸಂದ್ಯಾವಂದನೆ ಮುಗಿಸಿ ಸೂರ್ಯನಿಗೆ ಅರ್ಘ್ಯವನ್ನು ಬಿಡುವಾಗ ಎರಡನೆ ಬಾರಿ ಕರೆಯುತ್ತಾನೆ, ಹಾಗೆ ಕರೆದರೂ ಬಾರದೆ ಹೋದ ರಾವಣನನ್ನು ಮತ್ತೆ ಕೊನೆಯ ಅರ್ಘ್ಯ ಸಮರ್ಪಿಸುತ್ತಿದ್ದಾಗಲೇ ಮೂರನೆ ಬಾರಿ ಕರೆದ ಗಣಪತಿ ಆತ್ಮಲಿಂಗವನ್ನು ನೆಲದ ಮೇಲಿಟ್ಟುಬಿಡುತ್ತಾನೆ. ಇದನ್ನು ಕಂಡ ರಾವಣ ಅವಸರದಲ್ಲಿ ಅರ್ಘ್ಯವನ್ನು ಪ್ರಧಾನ ಮಾಡಿ ಗಣಾಪತಿಯಲ್ಲಿಗೆ ಓಡಿ ಬರುತ್ತಾನೆ. ಆದರೆ ಅಷ್ಟರಲ್ಲಿ ಗಣಪತಿ ಅದನ್ನು ನೆಲದಲ್ಲಿಟ್ಟಾಗಿದುದರಿಂದ ಮತ್ತದನ್ನು ಮೇಲೆತ್ತಲು ಬರುವುದಿಲ್ಲ. ಇದರಿಂದ ಕೋಪಗೊಂಡ ರಾವಣನು ಗಣಪತಿಯ ಶಿರದ ಮೇಲೆ ಬಲವಾಗಿ ಗುದ್ದುತ್ತಾನೆ. ಮತ್ತೆ ಮತ್ತೆ ಪ್ರಯತ್ನಿಸಿದರೂ ರಾವಣನ ಕೈಗೆ ಆತ್ಮಲಿಂಗವು ಸಿಗುವುದಿಲ್ಲ. ಇದರಿಂದಾಗಿ ಕುಪಿತಗೊಂಡ ರಾವಣ ಅದನ್ನು ಮಹಾಬಲೇಶ್ವರನೆಂದು ಕರೆದು ಅಲ್ಲೇ ಪೂಜಿಸುತ್ತಾನೆ.
    ಮುಂದೆ ಅದೇ ಮಹಾಬಲೇಶ್ವರ ಕ್ಷೇತ್ರವೆಂದೂ, ಗೋಕರ್ಣವೆಂದೂ ಪ್ರಸಿದ್ದವಾಗುತ್ತದೆ. ಪರಮೇಶ್ವರನು ಸ್ವತಃ ಆತ್ಮಲಿಂಗ ಸ್ವರೂಪದಲ್ಲಿ ಮಹಾಬಲೇಶ್ವರನೆನಿಸಿ ನೆಲೆಯಾದರೆ ಶಕ್ತಿ ಸ್ವರೂಪಿಣಿ ಉಮಾ ದೇವಿಯು ತಾನು ಭದ್ರಕಾಳಿಯ ರೂಪದಲ್ಲಿ ನೆಲೆಯಾಗುತ್ತಾಳೆ. ಗಣೇಶನು ತನ್ನ ಬಾಲಕ ರೂಪದಲ್ಲೇ (ರಾವಣನು ತಲೆಗೆ ಗುದ್ದಿದ್ದರಿಂದ ಗಣಪತಿಯ ತಲೆಯಲ್ಲಿ ಬಿದ್ದ ಕುಳಿಯನ್ನು ಇಂಡೂ ಸಹ ನಾವು ನೋಡಬಹುದು)ನೆಲೆಸುತ್ತಾನೆ. ಅಂತೆಯೆ ಉಳಿದ ದೇವಾನು ದೇವತೆಗಳೆಲ್ಲರೂ ಬಂದು ಪರಮೇಶ್ವರ ನೆಲೆಸಿದ ಪ್ರದೇಶದಲ್ಲಿ ಅಲ್ಲಲ್ಲಿ ನೆಲೆಸುತ್ತಾರೆ. ಹೀಗಾಗಿ ಮುಂದೆ ಇದು ಪರಷುರಾಮ ಸೃಷ್ಟಿಯಲ್ಲಿನ ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದೆಂದೂ, ಭೂ ಕೈಲಾಸವೆಂದೂ ಪ್ರಸಿದ್ದಿ ಹೊಂದುವುದಲ್ಲದೆ ಇಂದಿಗೂ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.
    ಈಗ ಹೇಳಿ ಸ್ನೇಹಿತರೆ ಕಥೆಯು ಹೇಗಿತ್ತು, ನಿಮಗೆಲ್ಲಾ ಇಷ್ಟವಾಯಿತೆ?
    ನಿಮಗೆಲ್ಲಾ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು, ಗಣೇಶನು ನಮ್ಮನ್ನೆಲ್ಲಾ ಹರಸಿ ಒಳಿತನ್ನುಂಟುಮಾಡಲಿ, ವಿಘ್ನ ನಿವಾರಕನ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲಿ.
    ನಮಸ್ಕಾರ.