Monday, November 25, 2013

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -13

 ತುಳಜಾಪುರ(Tulajapur)
    ತುಳಜಾಪುರ, ಮಹಾರಾಷ್ಟ್ರದಲ್ಲಿರುವ ಚತುರ್ ಪವಿತ್ರ ಶಕ್ತಿಪೀಠಗಳಲ್ಲಿ ಒಂದು. ಇಲ್ಲಿ ನೆಲೆಸಿರುವ ತುಳಜಾಪುರ ಅಂಬಾ ಭವಾನಿಯು ಯುಗ ಯುಗಾದಿಗಳಿಂದಲೂ ತನ್ನನ್ನು ನಂಬಿದ ಭಕ್ತರಿಗೆ ತನ್ನ ಸಂಪೂರ್ಣ ಅನುಗ್ರಹವನ್ನು ತೋರುತ್ತಾ ಬಂದಿದ್ದಾಳೆ. ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಮಾಹಾರಜರ ಕುಲದೈವವಾಗಿದ್ದ ಈ ಶಕ್ತಿ ದೇವತೆಯನ್ನು ಇಂದಿಗೂ ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ ಅನೇಕ ಸಮುದಾಯದವರು ತಮ್ಮ ಕುಲದೈವವೆಂದು ನಂಬಿ ಆರಾಧಿಸುತ್ತಾ ಬರುತ್ತಿದ್ದಾರೆ.
    ಶ್ರೀ ದೇವಿ ಭಾಗವತದ ಪ್ರಕಾರವಾಗಿ ಮಾತೆ ಆದಿ ಪರಾಶಕ್ತಿಯು ಭಗವಾನ್ ಮಹಾವಿಷ್ಣುವಿನ ಸಹೋದರಿಯಾಗಿದ್ದು ದ್ವಾಪರ ಯುಗದಲ್ಲಿ ಶ್ರೀ ಹರಿಯ ಕೃಷ್ಣಾವತಾರದ ವೇಳೆ ತನಗೆ ದೇವಿಯ ವಿಶೇಷ ಸಹಕಾರ ಬೇಕೆಂದು ಮಹಾವಿಷ್ಣುವು ಕೋರಿದಾಗ ಆದಿ ಪರಾಶಕ್ತಿಯು ಯಶೋಧೆಯ ಗರ್ಭದಲ್ಲಿ ಕೃಷ್ಣನಿಗೆ ಸಹೋದರಿಯಾಗಿ ಜನ್ಮಿಸುತ್ತಾಳೆ. ಇದೇ ಕಾರಣಾವಾಗಿ ಭವಾನಿ ಅಮ್ಮನವರ ಕೈಗಳಾಲ್ಲಿ ಶಂಖ ಹಾಗೂ ಚಕ್ರಗಳಿರುವುದನ್ನು ನಾವು ಕಾಣುತ್ತೇವೆ,
    ಇನ್ನೊಂದು ಕಥೆಯ ಪ್ರಕಾರ ಮಾತುಂಗ ಮತ್ತು ಆತನ ಸಹಚರರು ಬ್ರಹ್ಮದೇವರಿಗೆ ಸಹಾಯ ಮಾಡುತ್ತಿದ್ದ ದೇವಾನುದೇವತೆಗಳು ಹಾಗೂ ಮಾನವರಿಗೆ ದಿನವೂ ಉಪಟಳಗಳನ್ನು ನೀಡುತ್ತಿದ್ದರು. ಇದಕ್ಕಾಗಿ ದೇವತೆಗಳು ಈ ಉಪಟಳಾಗಳಿಂದ ತಮ್ಮನ್ನು ಪಾರು ಮಾಡುವಂತೆ ಪರಾಶಕ್ತಿಯಲ್ಲಿ ಮೊರೆಯಿಟ್ಟಾಗ ಆಕೆ ತಾನು ಭವಾನಿಯ ರೂಪದಲ್ಲಿ ರೌದ್ರ ರೂಪಿಯಾಗಿ ಸಪ್ತ ಮಾತೃಕೆಗಳ ಶಕ್ತಿ ಸಹಿತವಾಗಿ ಮಾತುಂಗ ಮತ್ತು ಅವನ ಸಂಗಡಿಗರನ್ನು ಸಂಹರಿಸಿದಳು.
    ಅಂತೆಯೇ ಮಹಿಷಾಸುರನೆಂಬ ರಕ್ಕಸನು ತಾನು ಯಮುನಾಚಲ(ಈಗ ದೇವಿ ತುಳಜಾಭವಾನಿ ದೇವಾಲಯವಿರುವ ಪ್ರದೇಶ)ದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಸಾಧು ಋಶಿಮುನಿಗಳಿಗೆ ತೊಂದರೆ ಕೊಡುತ್ತಿರಲು ಅವನನ್ನು ಸಂಹರಿಸಲು ತಾಯಿ ಪರಾಶಕ್ತಿಯು ತಾನು ಭವಾನಿ ರೂಪದಲ್ಲಿ ಕಾಣಿಸಿಕೊಂಡಳು. ಹಾಗೆ ಕಾಣಿಸಿಕೊಂಡು ಮಹಿಷಾಸುರನನ್ನು ಸಂಹರಿಸಿದ ತರುವಾಯ ಅಲ್ಲಿನ ಭಕ್ತಕೋಟಿಯ ಕೋರಿಕೆಯ ಮೇರೆಗೆ ತಾಯಿಯು ಅದೇ ಯಮುನಾಚಲದಲ್ಲಿ ಶಾಶ್ವತವಾಗಿ ನೆಲೆಯಾದಳು.
    ಇಷ್ಟೆಲ್ಲದರ ಜತೆಗೆ ಹದಿನೇಳನೇ ಶತಮಾನದಲ್ಲಿ ಮಹಾರಾಷ್ಟ್ರವನ್ನು ಆಳಿದ್ದ ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿಯ ಭಕ್ತಿಗೆ ಒಲಿದ ತಾಯಿಯು ಶಿವಾಜಿಯವರಿಗೆ ತನ್ನ ಅಮೂಲ್ಯ ಖಡ್ಗವನ್ನು ವರದಾನವಾಗಿತ್ತು ಆಶೀರ್ವದಿಸಿದಳು. ಈ ಒಂದು ಖಡ್ಗ ಅವರ ಬಳಿ ಇದ್ದ ಕಾರಣಾದಿಂದಾಗಿಯೇ ಶಿವಾಜಿಯವರು ತಾವು ಹೋದ ಕಡೆಯಲ್ಲೆಲ್ಲಾ ವಿಜಯಿಗಳಾಗಲು ಸಾಧ್ಯವಾಯಿತು.
    ಹೀಗೆ ಪುರಾಣ ಕಾಲದಿಂದ ಇತಿಹಾಸ ರಾಜ ಮಹಾರಾಜರವರೆಗೂ ತನ್ನನ್ನು ನಂಬಿ ಬಂದ ಭಕ್ತರಿಗೆ ತನ್ನ ಕೃಪಾಶೀರ್ವಾದವನ್ನು ನೀಡುತ್ತಾ ಬಂದಿರುವ ತುಳಜಾಪುರದ ಶ್ರೀ ಅಂಬಾ ಭವಾನಿಯು ತನ್ನನ್ನು ನಂಬಿದವರ ಕೈಬಿಡುವುದಿಲ್ಲ ಎಂಬ ನಂಬಿಕೆ ಆ ಭಾಗದ ಜನರಲ್ಲಿ ಬಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ಆದಿ ಶಂಕರರ್ರ ನುಡಿಯನ್ನು ಕಾಣಬಹುದು- “ಯಾರು ದಿನಕ್ಕೆ ಮೂರು ಬಾರಿ ನಿಜವಾದ ದೃಢ ಭಕ್ತಿಯಿಂದ ‘ಭವಾನಿ’ಯ ನಾಮಸ್ಮರಣೆಯನ್ನು ಮಾಡುವರೋ ಅಂಥವರಿಗೆ ದುಃಖ,ಅನಿರೀಕ್ಷಿತ ಅವಘಡಗಳಾಗಲಿ ಸಂಭವಿಸದು”.
    ನಮಸ್ಕಾರ.

 

No comments:

Post a Comment