ಹುಲಿಗೆ(Hulige)
Goddess Sri Huligemma devi |
ಕರ್ನಾಟಕದ ಕೊಪ್ಪಳ ಜಿಲ್ಲೆ ಸಾಕಷ್ಟು ಪೌರಾಣಿಕ, ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿರುವ ಜಿಲ್ಲೆ..
ಇಂತಹಾ ಕೊಪ್ಪಳ ಜಿಲ್ಲೆಯ ಪ್ರಸಿದ್ದ ಪೌರಾಣಿಕ, ಧಾರ್ಮಿಕ ಕ್ಷೇತ್ರ ಹುಲಿಗೆ.
ಹುಲಿಗೆ ಅಥವಾ ಹುಲಿಗಿ ಎಂದು ಕರೆಸಿಕೊಳ್ಳುವ ಶ್ರೀ ಕ್ಷೇತ್ರದಲ್ಲಿ ಮಹಾಮಾತೆ ಶಕ್ತಿ ಸ್ವರೂಪಿಣಿ,
ರೇಣುಕಾಂಬಾ ದೇವಿಯು ‘ಹುಲಿಗೆಮ್ಮ’ ಎಂಬ ಹೆಸರಿನಲ್ಲಿ ನೆಲೆಸಿದ್ದಾಳೆ. ಸರಿಸುಮಾರು ನಾಲ್ಕು ನೂರು
ವರ್ಷಗಳಿಂದ ತಾಯಿಯು ಈ ಕ್ಷೇತ್ರದಲ್ಲಿ ನೆಲೆಸಿ ತಾನು ನಂಬಿದ ಭಕ್ತರಿಗೆ ಅಭಯವನ್ನು ನೀಡುತ್ತಾ ಬಂದಿರುವುದನ್ನು
ನಾವಿಂದು ಸಹ ಕಾಣುತ್ತೇವೆ.
ನೂರಾರು ವರ್ಷಗಳ ಹಿಂದೆ ಈಗಿನ ಹುಲಿಗಿ ಗ್ರಾಮದಲ್ಲಿದ್ದ ನಾಗಜೋಗಿ ಹಾಗೂ ಬಸವಜೋಗಿ ಎನ್ನುವ
ಈರ್ವರು ಸವದತ್ತಿಯಲ್ಲಿರುವ ರೇಣುಕಾಂಬೆ ಯಲ್ಲಮ್ಮ ದೇವಿಯ ಮಹಾ ಆರಾಧಕರಾಗಿದ್ದರು. ಇಬ್ಬರೂ ಪ್ರತಿ
ಹುಣ್ಣಿಮೆಯಂದು ತಪ್ಪದೆ ಯಲ್ಲಮ್ಮ ದೇವಿಯ ದರ್ಶನಕ್ಕೆಂದು ತಮ್ಮ ಸ್ವಗ್ರಾಮದಿಂದ ಸವದತ್ತಿಗೆ ತೆರಳುತ್ತಿದ್ದರು.
ಈ ಮಾರ್ಗದಲ್ಲಿ ಯಾವುದೇ ಅಡಚಣೆಗಳು ಬಂದರೂ ತಾವು ದೇವಿಯ ದರ್ಶನ ಮಾಡುವುದನ್ನೂ, ಸೇವೆ ಸಲ್ಲಿಸುವುದನ್ನೂ
ತಪ್ಪಿಸುತ್ತಿರಲಿಲ್ಲ.
ಹೀಗಿರಲು ಅದೊಂದು ದಿನ ನಾಗ ಜೋಗಿಯವರಿಗೆ ತಾಯಿ ರೇಣುಕಾಂಬೆಯು ಕನಸಿನಲ್ಲಿ ಕಾಣಿಸಿಕೊಂಡು- “ನಾನು ನಿಮ್ಮ ಭಕ್ತಿಗೆ ಮೆಚ್ಚಿದ್ದೇನೆ, ನನ್ನ ದರ್ಶನಕ್ಕಾಗಿ
ನೀವಿನ್ನು ಸವದತ್ತಿಯವರೆಗೂ ಬರಬೇಕಾಗಿಲ್ಲ,ನಿಮ್ಮೂರಿನ ಗುಡ್ಡದ ಬುಡದಲ್ಲಿಯೇ ನಾನು ಲಿಂಗರೂಪದಲ್ಲಿ
ನೆಲೆಸಿರುತ್ತೇನೆ. ನೀವು ನನಗಾಗಿ ಅಲ್ಲೊಂದು ಗುಡಿಯನ್ನು ಕಟ್ಟಿ ಪೂಜಿಸಲು ತೊಡಗಿರಿ. ಇದರಿಂದ ನಿಮಗೂ
ಈ ಊರಿಗೂ ಸನ್ಮಂಗಳವಾಗುವುದು.” ಎಂದಂತಾಯಿತು. ಇದಾದ ಮರುದಿನವೇ ತನಗಾದ ಕನಸಿನ ಅನುಭವವನ್ನು ತನ್ನ
ಸಹವರ್ತಿ ಬಸವಜೋಗಿಗೂ ತಿಳಿಸಿದ ನಾಗಜೋಗಿಗಳು ಇಬ್ಬರೂ ಸೇರಿಕೊಂಡು ತಾಯಿಯು ನೆಲೆಸಿರುವ ಮೂಲ ಸ್ಥಾನಕ್ಕಾಗಿ
ಹುಡುಕಲಾರಂಭಿಸಿದರು. ಅದಾಗ ತಾಯಿಯು ನುಡಿದಂತೆ ಬೆಟ್ತದ ಬುಡದಲ್ಲಿ ಅವರಿಗೊಂದು ದೈವೀಪ್ಯಮಾನವಾದ ಲಿಂಗ
ಸ್ವರೂಪದ ಕಲ್ಲೊಂದು ದೊರೆಯಿತು. ಅದನ್ನು ಕಂಡು ಇಬ್ಬರ ಹೃದಯಗಳೂ ಸಂತೋಷದಿಂದ ಉಬ್ಬಿ ಹೋದವು. ಮತ್ತವರು
ತಡ ಮಾಡದೆ ಆ ಶಿಲಾಸ್ವರೂಪದ ಶಕ್ತಿದೇವತೆಗೆ ಅಲ್ಲೇ ಸಣ್ಣದೊಂದು ಗುಡಿಯನ್ನು ಕಟ್ಟಿ ಪೂಜಿಸಲು ತೊಡಗಿದರು.
Huligemma devi temple, Huligi |
ಇಷ್ಟಾಗಿ ಕಾಲಕ್ರಮೇಣ ತಾಯಿಯ ಮಹಾಮಹಿಮೆ ಊರಿಗೆಲ್ಲಾ ತಿಳಿಯಿತು. ಊರು, ಪರ ಊರುಗಳಿಂದ ಜನರು
ತಮ್ಮ ಕಷ್ಟಗಳ ಪರಿಹಾರಕ್ಕಾಗಿ ತಾಯಿಯ ಬಳಿ ಬರಲಾರಂಭಿಸಿದರು. ಆ ತಾಯಿಯೂ ಸಹ ತನ್ನಲ್ಲಿಗೆ ಶರಣು ಬಂದವರಿಗಾರಿಗೂ
ನಿರಾಶೆಗೊಳಿಸದೆ ಅವರು ಬೇಡಿದ ವರಗಳನ್ನಿತ್ತು ಭಕ್ತರ ಕಷ್ಟ ಕೋಟಲೆಗಳನ್ನು ಶಮನಗೊಳಿಸಿದಳು.
ಹೀಗೆ ಅಂದಿನಿಂದ ಇಂದಿನವರೆಗೂ ತಾಯಿಯ ದರ್ಶನ ಮಾತ್ರದಿಂದ ತಮ್ಮ ಕಷ್ಟಗಳೆಲ್ಲಾ ನಿಈಗುವುದೆಂಬ
ನಂಬಿಕೆಯಿಂದ ಹುಲಿಗೆಮ್ಮನ ದರ್ಶನಕ್ಕಾಗಿ ದಿನನಿತ್ಯವೂ ಸಾವಿರಾರು ಮಂದಿ ಬರುವರು. ಈ ಮೂಲಕ ಇಂದು ಶ್ರೀ
ಕ್ಷೇತ್ರ ಹುಲಿಗೆಯು ಭಾರತದ ಒಂದು ಪ್ರಖ್ಯಾತ ಶಕ್ತಿಪೀಠವಾಗಿದೆ.
ನಮಸ್ಕಾರ.
No comments:
Post a Comment