Tuesday, December 10, 2013

ಕನ್ನಡದ ನಾಡಿಮಿಡಿತ ಅರಿತ ಕಥೆಗಾರ: ‘ನಾಡಿ’

ಮಡಿಕೇರಿಯಲ್ಲಿ ಬರುವ ಜನವರಿ 7 ರಿಂದ 9 2014ರ ವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜರವರು ಆಯ್ಕೆಗೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಇವರು ಸೃಷ್ಟಿಸಿರುವ ಅನೇಕ ಕಥೆ-ಕಾದಂಬರಿಗಳು ಜನಮಾನಸವನ್ನು ಸೂರೆಗೂಂಡಿವೆ. ಅದರಲ್ಲಿ ಕೆಲವಷ್ಟು ಚಲನಚಿತ್ರಗಳಾಗಿಯೂ ಹೆಸರು ಮಾಡಿವೆ. ಇಂತಹಾ ಅಪೂರ್ವ ಸಾಹಿತಿಯೊಬ್ಬರಿಗೆ ಕನ್ನಡ ಸಮ್ಮೇಳನದ ಅಧ್ಯಕ್ಷಗಿರಿ ಪ್ರಾಪ್ತವಾದ ಹಿನ್ನೆಲೆಯಲ್ಲಿ ಅವರ ಬದುಕು-ಬರಹದ ಕುರಿತ ಕಿರುನೋಟವೊಂದು ಇಲ್ಲಿದೆ.

    ನನ್ನ ಎಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ನಮಸ್ಕಾರ.
    ಈ ಬಾರಿ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ನಡೆಯಲಿರುವ ಎಂಭತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸಾಹಿತಿ ನಾರ್ಬರ್ಟ್ ಡಿಸೋಜಾರವರಿಗೆ ಈ ಮೂಲಕ ನನ್ನ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.
    ಕನ್ನಡ ಭಾಷೆ, ಸಾಹಿತ್ಯ ಉಳಿಯಬೇಕು. ಸರ್ಕಾರ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸಬೇಕು, ಇದೇ ಮುಂತಾದ ಹೇಳಿಕೆಗಳನ್ನು ನೀಡುತ್ತಾ ತಾವು ಹಿಂದಿನಿಂದ ಆಂಗ್ಲ ಸಾಹಿತ್ಯ, ಭಾಷೆಗೆ ಕುಮ್ಮಕ್ಕು ನೀಡುತ್ತಿರುವ, ಜತೆಗೆ ಆಡಳಿತಾರೂಢ ಸರ್ಕಾರಗಳಿಂದ ತಮಗೆ ಬೇಕಾದ ಅನುಕೂಲಗಳಾನ್ನು ಪಡೆದುಕೊಳ್ಳುವ ಸಲುವಾಗಿ ತಮ್ಮನ್ನು ತಾವು ಸಾಹಿತಿಗಳೆಂದು ಬಿಂಬಿಸಿಕೊಳ್ಳುವ ಒಂದು ವರ್ಗವೇ ನಮ್ಮ ನಡುವಿರುವ ಈ ದಿನಗಳಲ್ಲಿ ತಾವು ಬದುಕಿ ಬಾಳಿದ ಮಲೆನಾಡಿನ ಐಸಿರಿಯ ನಡುವಿನ ಪುಟ್ಟ ಊರು ಸಾಗರದ ಸುತ್ತ ಮುತ್ತ ನಡೆವ ಬೆಳವಣಿಗೆಗಳಿಂದ ಸ್ಪೂರ್ತಿಗೊಂಡು ಅತಿ ಸಾಮಾನ್ಯ ವಸ್ತುವನ್ನಿಟ್ಟುಕೊಂಡು ಓದುಗರಮನಸ್ಸಿಗೆ ತಟ್ಟುವಂತೆ ಕಥೆ ಹೆಣೆಯಬಲ್ಲ ಜಾಣ ಕಥೆಗಾರರಾದ ನಾ. ಡಿಸೋಜಾರಂಥವರು ಯಾವುದೇ ಪ್ರಚಾರವನ್ನು ಬಯಸದೆ ತಮ್ಮ ಪಾಡಿಗೆ ತಾವು  ಕನ್ನಡದ ಕೆಲಸದಲ್ಲಿ ತೊಡಗಿರುವಂತಹವರೂ ನಮ್ಮೊಡನಿರುವುದು ನಮಗೆಲ್ಲರಿಗೂ ನಿಜಕ್ಕೂ ಖುಷಿಯ ಸಂಗತಿ. ಇಂತಹಾ ಅಪ್ಪಟ ಕನ್ನಡ ಪ್ರೇಮಿಯೊಬ್ಬರಿಗೆ ಈ ಬಾರಿ ಕನ್ನಡಮ್ಮನ ತೇರನ್ನೆಳೆಯುವ ಅವಕಾಶ ದೊರೆತಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ನಾ. ಡಿಸೋಜಾರವರ ಬದುಕು-ಬರಹಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.
ಸಾಹಿತಿ ನಾ. ಡಿಸೋಜ
    ಇದೀಗ 75ರ ಹರೆಯದ ನಾ. ಡಿಸೋಜಾ ಕಳೆದ ಕಾಲಮಾನದ ಸಾಕ್ಷಿಪ್ರಜ್ಞೆಯಾಗಿ ಹಲವಾರು ಸಂಗತಿಗಳನ್ನು ತಮ್ಮ ಕೃತಿಗಳ ಮೂಲಕ ದಾಖಲು ಮಾಡಿರುವುದನ್ನು ನಾವು ನೋಡುತ್ತೇವೆ. ಅದರಲ್ಲಿಯೂ ತಾವು ಬದುಕಿ ಬಾಳಿದ ಮಲೆನಾಡಿನ ಪರಿಸರ, ಅಲ್ಲಿನ ಜನರ ಮನದ ತಲ್ಲಣಗಳು,  ಪರಿಸರ ನಾಶ, ಮಲೆನಾಡಿನ ಒಂದು ಕಾಲದ ಮಾಮೂಲಿ ಅತಿಥಿಯಾಗಿದ್ದ ಪ್ಲೇಗ್ ಎಂಬ ಮಹಾಮಾರಿಯಂತಹಾ ವಿಷಯಗಳಿಂದ ಹಿಡಿದು ಮಲೆನಾಡಿಗರ ಬದುಕನ್ನು ಮುಳುಗಿಸಿದ ಲಿಂಗನಮಕ್ಕಿಯಂತಹಾ ಯೋಜನೆಗಳಿಂದುಂಟಾದ ಪರಿಣಾಮಗಳನ್ನು ಸಹ ಇವರ ಸಾಹಿತ್ಯ ಕೃತಿಗಳಲ್ಲಿದೆ. ಮಲೆನಾಡಿನ ಅಪರೂಪದ ಚಿತ್ರಗಳು, ಅಲ್ಲಿನ ಕೆಲ ವಿಶೇಷ ವ್ಯಕ್ತಿಗಳು, ಅಲ್ಲದೆ ಸಮಾಜದ ಕೆಲ ಧೀಮಂತ ವ್ಯಕ್ತಿಗಳೂ ಇವರ ಕೃತಿಗಳಲ್ಲಿ ಹಾದು ಹೋಗಿದ್ದಾರೆ.
    ಕಾದಂಬರಿ, ಸಣ್ಣ ಕಥೆ, ಮಕ್ಕಳ ಸಾಹಿತ್ಯ, ನಾಟಕ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಾಲ್ಲಿ ಕೆಲಸ ಮಾಡಿರುವ ಡಿಸೋಜಾರವರು ಹುಟ್ಟಿದ್ದು 1937 ಜೂನ್ 6 ರಂದು ಶಿವಮೊಗ್ಗದ ಸಾಗರದಲ್ಲಿ.  ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಎಫ್. ಪಿ. ಡಿಸೋಜಾ ಹಾಗೂ ರೂಪೀನಾ ಡಿಶೋಜಾರವರ ಪುತ್ರನಾಗಿ ಜನಿಸಿದ ಡಿಸೋಜಾರ ಬಾಲ್ಯದಿಂದಲೂ ಮನೆಯಲ್ಲಿ ಸಾಹಿತ್ಯದ ವಾತಾವರಣಾವಿದ್ದಿತು. ತಂದೆ ಎಫ್.ಪಿ. ಡಿಸೋಜಾರವರಿಗೆ ಸಾಹಿತ್ಯ, ಸಂಗೀತದ ಕಡೆ ಒಲವಿತ್ತು, ತಾಯಿ ರೂಪಿನಾ ಡಿಸೋಜಾ ಕೂಡಾ ತಾವು ಮಕ್ಕಳಿಗೆ ಜನಪದ ಕಥೆಗಳನ್ನು ಹೇಳುತ್ತಿದ್ದರು. 
    ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮಿಡಿಯೆಟ್ ಶಿಕ್ಷಣ ಪೂರೈಸಿದ ಡಿಸೋಜಾಗೆ ತಮ್ಮ ಹೈಸ್ಕೂಲ್ ಅವಧಿಯಿಂದಲೇ ಸಾಹಿತ್ಯದ ಕಡೆಗೆ ಒಲವಿದ್ದಿತು. ಶಿವರಾಮ ಕಾರಂತರ ಜೀವನ ದೃಷ್ಟಿ, ಆದರ್ಶ, ಬದುಕನ್ನು ಪ್ರೀತಿಸುವ ಬಗೆ, ಈ ಎಲ್ಲಾ ಅಂಶಗಳು ಡಿಸೋಜಾರವರ ಮೇಲೆ ಗಾಢವಾಗಿ ಪರಿಣಾಮ ಬೀರಿದ್ದವು, ಇದಲ್ಲದೆ ವಿದ್ಯಾರ್ಥಿ ದೆಸೆಯಲ್ಲಿ ಅವರಿಗೆ ದೊರೆತ ಗೋರೂರು ರಾಮಸ್ವಾಮಿ ಅಯ್ಯಂಗಾರರ ಒಡನಾಟ, ಅವರು ಸಾಹಿತ್ಯ ಸೃಷ್ಟಿಗೆ ನೀಡಿದ ಸ್ಪೂರ್ತಿಯಿಂದಾಗಿ ನಾ. ಡಿಸೋಜಾರವರು ಒಬ್ಬ ಮಹತ್ವದ ಸಾಹಿತಿಗಳಾಗಲು ಸಾಧ್ಯವಾಯಿತು.
    ತಮ್ಮ ಕಾಲೇಜು ಶಿಕ್ಶಣದೊಂದಿಗೆ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಗಳಲ್ಲಿಯೂ ತೇರ್ಗಡೆ ಹೊಂದಿದ್ದ ಡಿಸೋಜಾರವರು ತಮ್ಮ ವಿದ್ಯಾಭ್ಯಾಸದ ಅವಧಿಯ ಬಳಿಕ ಲೋಕೋಪಯೋಗಿ ಇಲಾಖೆಯಲ್ಲಿ ಬೆರಳಚ್ಚುಗಾರರಾಗಿ 1959ರಿಂದ 1995ರ ವರೆಗೆ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಶರಾವತಿ ಯೋಜನೆ, ಕಾರ್ಗಲ್, ತೀರ್ಥಹಳ್ಳಿ, ಸಾಗರ, ಮಾಸ್ತಿಕಟ್ಟೆ ಇದೇ ಮೊದಲಾದ ಮಲೆನಾಡು ಪ್ರದೇಶಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆದ ನಾ. ಡಿಸೋಜಾರವರಿಗೆ ಮಲೆನಾಡಿನ ಪರಿಸರ, ಜನ ಜೀವನ, ಅಲ್ಲಿನ ಜನರ ಸಮಸ್ಯೆಗಳು, ಆತಂಕಗಳೆಲ್ಲದರ ಸ್ಪಷ್ಟ ಚಿತ್ರಣವೊಂದು ಲಭ್ಯವಾಯಿತು. ಇದೆಲ್ಲದರ ಹಿನ್ನೆಲೆಯನ್ನಿಟ್ಟುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಡಿಸೋಜಾರವರಿಂದ ಶ್ರೇಷ್ಠ ಗುಣಮಟ್ಟದ ಸಾಹಿತ್ಯ ಕೃತಿಗಳು ಹೊರಬಂದವು.
    ನಾ. ಡಿಸೋಜಾರವರ ಸಾಹಿತ್ಯ ಸೃಷ್ಟಿಯ ಹರವು ಅಗಾಧವಾದದ್ದು. ಈ ಮೊದಲೇ ಹೇಳಿದಂತೆ ಕಾದಂಬರಿ, ಸಣ್ಣ ಕಥೆ, ನಾಟಕ, ಮಕ್ಕಳ ಸಾಹಿತ್ಯ ಇಂತಹಾ ನಾನಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ‘ಅಕ್ಷರ ಕೃಷಿಕ’ ಈ ಡಿಸೋಜಾ. ಡಿಸೋಜಾರ ಮೊದಲ ಕಾದಂಬರಿ‘ಬಂಜೆ ಬೆಂಕಿ’ಯು ಪ್ರಕಟವಾದುದು 1964ರಲ್ಲಿ. ‘ಮುಳುಗಡೆ’, ‘ದ್ವೀಪ’, ‘ತಿರುಗೋಡಿನ ರೈತ ಮಕ್ಕಳು’, ‘ಒಡ್ಡು’, ‘ಒಂದು ಜಲಪಾತದ ಸುತ್ತ’, ‘ಕೆಂಪು ತ್ರಿಕೋನ’, ‘ಪ್ರೀತಿ ಎಂಬ ಚುಂಬಕ’, ‘ಪ್ರಜ್ಞಾಬಲಿ’, ‘ದೇವರಿಗೇ ದಿಕ್ಕು’, ‘ಇಕ್ಕೇರಿಯಲ್ಲಿ ಕ್ರಾಂತಿ’, ‘ಮುಖವಾಡ’ ಇದೇ ಮೊದಲಾದ ನಲವತ್ತು ಕಾದಂಬರಿಗಳನ್ನು ಬರೆದಿರುವ ನಾ. ಡಿಸೋಜಾ ‘ನೆಲೆ’, ‘ತಿಂಗಳ ಪೂಜೆಗೆ ಬಂದ ಮಗ’, ‘ದೇವರ ಶಿಲುಬೆ ಮನೆಗೆ ಬಂದದ್ದು’, ‘ಬಣ್ಣ; , ‘ಪಿಟೀಲು’, ‘ಕೊನೆ’, ‘ಸಮಾಧಿ’ ಇಂತಹಾ ಕಾದಂಬರಿಗಳಲ್ಲಿ ಕ್ರೈಸ್ತ ಸಮಾಜದಲ್ಲಿರುವ ಅಂಧಶ್ರದ್ದೆಗಳ ಕುರಿತು ತೋರಿಸಿ ಕೊಟ್ಟಿದ್ದಾರಲ್ಲದೆ ಅವುಗಳು ಪಡೆದುಕೊಳ್ಲಬೇಕಾದ ಚಲನಾಶೀಲತೆಯ ಕುರಿತೂ ಚರ್ಚಿಸಿದ್ದಾರೆ.
    ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ಸಲ್ಲಿಸಿರುವ ಡಿಸೋಜಾರವರು ಮಕ್ಕಳಿಗಾಗಿ ಮಿನಿ ಕಾದಂಬರಿ, ನಾಟಕ, ಸಣ್ಣ ಕಥೆ, ಜೀವನಚರಿತ್ರೆಗಳನ್ನು ಬರೆದಿದ್ದಾರೆ. ಬಾಲಗಂಧರ್ವ, ಕದಂಬ ಮಯೂರಶರ್ಮ, ಸದಾಶಿವ ಬ್ರಹ್ಮೇಂದ್ರ, ಬಿಹಾರಿ ದಾಸ್ ಇದೇ ಮೊದಲಾದ ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಮಕ್ಕಳ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿರುವ ಗರಿಮೆ ನಾ. ಡಿಸೋಜಾರವರದು. ‘ದೇವರಿಗೆ ದಿಕ್ಕು’, ‘ತಬ್ಬಲಿ’, ‘ಕೃಷ್ಣನ ಕೊಡುಗೆ’, ‘ಹಕ್ಕಿಗಳಿಗೆ ಬಂತು ಬಣ್ಣ’, ಇದೇ ಮುಂತಾದ ಮಕ್ಕಳ ನಾಟಕಗಳನ್ನು ರಚಿಸಿರುವ ಡಿಸೋಜಾರವರು ‘ಗೇರುಸೊಪ್ಪೆ’, ‘ಪಾರಿವಾಳ ದ್ವೀಪ’, ‘ಮತ್ತೆ ಹೇಳಿದ ಅಜ್ಜಿ ಕಥೆಗಳು’, ‘ಹಿತೋಪದೇಶದ ಕಥೆಗಳು’, ‘ಗುರುದೇವರ ಕಥೆಗಳು’ ಇಂತಹಾ ಮಿನಿ ಕಾದಂಬರಿ, ಸಣ್ಣ ಕಥೆಗಳನ್ನು ಮಕ್ಕಳಿಗಾಗಿ ಸೃಷ್ಟಿಸಿದ್ದಾರೆ. ಡಿಸೋಜಾರವರು ಸ್ವತಃ ಪ್ರಕೃತಿ ಪ್ರೇಮಿಯಾಗಿದ್ದರಿಂದ ಇವರ ಎಲ್ಲಾ ಕಾದಂಬರಿ, ನಾಟಕ, ಕಥೆಗಳಲ್ಲಿ ಕಾಡಿನ ಸೌಂದರ್ಯ, ಅಲ್ಲಿನ ಖಗ-ಮೃಗಗಳ ಝೇಂಕಾರ, ಬೆಟ್ಟ-ಗುಡ್ದಗಳ ರಮಣೀಯತೆ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿರುತ್ತವೆ.
    ತಮ್ಮ ಮನೆ ಮಾತು ಕೊಂಕಣಿಯಾದರೂ ಕನ್ನಡಾಂಬೆಯ ಸೇವೆ ಮಾಡಿದ ಈ ಅಪರೂಪದ ಸಾಹಿತಿಗೆ ಅವರ ಸಾಹಿತ್ಯ ಪ್ರತಿಭೆಯನ್ನು ಮೆಚ್ಚಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಮುಖ್ಯವಾಗಿ 1988ರಲ್ಲಿ ‘ಬೆಳಕಿನೊಡನೆ ಬಂತು ನೆನಪು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ, 1990ರಲ್ಲಿ ‘ಕಾಡಿನ ಬೆಂಕಿ’ ಕಾದಂಬರಿಯು ಚಲನಚಿತ್ರವಾಗಿ ರಜತ ಕಮಲ ಪುರಸ್ಕಾರಕ್ಕೆ ಭಾಜನವಾಯಿತು. ಮುಂದೆ 2008ರಲ್ಲಿ  ಗಿರಿಶ್ ಕಾಸರವಳ್ಳಿ ನಿರ್ದೇಶನದಲ್ಲಿ ‘ದ್ವೀಪ’ಕಾದಂಬರಿಯು ಚಲನಚಿತ್ರವಾಗಿ ಸ್ವರ್ಣ ಕಮಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಇದಲ್ಲದೆ 1993ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ನಿರಂಜನ ಸಾಹಿತ್ಯ ಪ್ರಶಸ್ತಿ, 2007ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಗಳು ನಾ. ಡಿಸೋಜಾರ ಸಾಹಿತ್ಯ ಸೇವೆಗಾಗಿ ಒಲಿದು ಬಂದ ಗೌರವ ಪುರಸ್ಕಾರಗಳು. ‘ಮುಳುಗಡೆಯ ಊರಿಗೆ ಬಂದವರು’ ಕೃತಿಗಾಗಿ ಬಾಲ ಸಾಹಿತ್ಯಕ್ಕಾಗಿ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರಕ್ಕೂ ಡಿಸೋಜಾರವರು ಭಾಜನರಾಗಿದ್ದಾರೆ.
    ಇನ್ನು ‘ಬಳುವಳಿ’, ‘ಬೆಟ್ಟದ ಪುರದ ದಿಟ್ಟ ಮಕ್ಕಳು’, ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿ ಜನ ಮನ್ನಣೆಯನ್ನು ಗಳಿಸಿದ್ದರೆ ‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಪರಾರಿಯಾಗುವ ಹುಡುಗ’, ‘ಬಣ್ಣ’ ಇದೇ ಮೊದಲಾದ ಕಾದಂಬರಿಗಳು ವಿವಿಧ ವಿಶ್ವವಿದ್ಯಾನಿಲಯಗಳ ಪದವಿ ವಿಭಾಗದ ಪಠ್ಯಗಳಾಗಿ ಆಯ್ಕೆಗೊಂಡಿವೆ. ಅಲ್ಲದೆ ನಾ. ಡಿಸೋಜಾರ ಕಥೆ, ಕಾದಂಬರಿಗಳು ಕೊಂಕಣಿ, ಮಲಯಾಳಂ, ಹಿಂದಿ, ಇಂಗ್ಲೀಷ್, ಸಂಸ್ಕೃತ, ತೆಲುಗು ಭಾಷೆಗಳಿಗೆ ಅನುವಾದಗೊಂಡು ಅಲ್ಲಿನ ಓದುಗರಿಂದಲೂ ಸಾಕಷ್ಟು ಮೆಚ್ಚುಗೆ ಗಳಿಸಿದೆ.
    ಇಂತಹಾ ಕನ್ನಡದ ಸೇವಾಕರ್ತನಿಗೆ ಈ ಬಾರಿ ಮಡಿಕೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಒಲಿದಿರುವುದು ನಿಜಕ್ಕೂ ನಮಗೆಲ್ಲರಿಗೂ ಅತ್ಯಂತ ಸಂತೋಷದ ಸಂಗತಿ. “ಹದಿನೈದು ದಿನಕ್ಕೊಂದು ಭಾಷೆ ಸಾಯುತ್ತಿದೆ!” ಎನ್ನುವ ವಿಶ್ವಸಂಸ್ಥೆಯ ವರದಿ ಹಿನ್ನೆಲೆಯಲ್ಲಿ ಕನ್ನಡವೂ ಅಳಿಯುವ ಭಾಷೆ ಆಗಬಾರದೆಂದರೆ ಇಂತಹಾ ಸಮ್ಮೇಳನಗಳ ಅವಶ್ಯಕತೆ ತುಂಬಾ ಇದೆ.” ಎಂದು ಖಚಿತವಾಗಿ ನಂಬಿರುವ ಡಿಸೋಜಾರವರಿಗೆ ಒಲಿದ ಅಧ್ಯಕ್ಷಗಿರಿಗಾಗಿ ಅವರನ್ನು ಇನ್ನೊಮ್ಮೆ ಅಭಿನಂದಿಸುತ್ತಾ.....
    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ಇದೋ ನನ್ನ ಆಹ್ವಾನ,
    ಬನ್ನಿ ಮಡಿಕೇರಿಗೆ....
    ಕನ್ನಡಮ್ಮನ ಜಾತ್ರೆಗೆ....
    ನಾವು- ನೀವೆಲ್ಲರೂ ಕೂಡಿ ಕನ್ನಡದ ಹಿರಿಮೆಯನ್ನು ಜಗದಗಲ ಸಾರೋಣ....
    ಕನ್ನಡ ತೇರನು ಎಳೆಯೋಣಾ...
    ನಮಸ್ಕಾರ

No comments:

Post a Comment