ನನ್ನೆಲ್ಲಾ
ಆತ್ಮೀಯ ಸ್ನೇಹಿತರಿಗೆ ನಮಸ್ಕಾರ.
ಮೊನ್ನೆ ತಾನೆ
ಚುನಾವಣೆ ಹಣಾಹಣಿಗಳೆಲ್ಲಾ ಮುಗಿದು ನರೇಂದ್ರ ಮೋದಿ ನೇತೃತ್ವದ ಭಾರತೀಯ
ಜನತಾ ಪಕ್ಷವು ಅಧಿಕಾರಕ್ಕೆ ಬಂದಿದೆ. ಇಂತಹಾ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದ ಸಚಿವರಾದ ಜಿತೇಂದ್ರ
ಸಿಂಗ್ “ಕಾಶ್ಮೀರಕ್ಕೆ ಒದಗಿದ 370 ನೇ ವಿಧಿಯನ್ನು ರದ್ದುಪಡಿಸುವ ಕುರಿತಂತೆ ಸಮಾಲೋಚಿಸಲು ಸರ್ಕಾರವು
ಸಿದ್ದವಿದೆ.” ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕಾಶ್ಮೀರ
ಮುಖ್ಯಮಂತ್ರಿ ಉಮರ್ ಅಬ್ದುಲ್ಲ ತಾವು ``ಹಾಗೆ ಮಾಡಿದ್ದಾದಲ್ಲಿ ಮೋದಿ ಆಡಳಿತ ಒಂದು ಕಹಿ ನೆನಪಾಗಿ
ಉಳಿಯಲಿದೆ. ಅಲ್ಲದೆ ಆ ಭಾಗ ಭರತದಿಂದ ಬೇರ್ಪಡುವ ಸಾಧ್ಯತೆಯೂ ಇದೆ.” ಎಂದಿದ್ದರೆ. ಈ ಮೂಲಕ ಕಾಶ್ಮೀರ
ಹಾಗೂ 370 ನೇ ವಿಧಿಯ ಕುರಿತಾದ ಚರ್ಚೆ ಪುನಃ ಮುನ್ನೆಲೆಗೆ ಬಂದಿದೆ. ಕಾಶ್ಮೀರದ ಸ್ವಾಯತ್ತೆಯ ಕುರಿತಾದ
ಈ ಚರ್ಚೆ ಕೇವಲ ಚರ್ಚೆಯಾಗಿರದೆ ವಿವಾದದ ಸ್ವರೂಪ ಪಡೆದುಕೊಂಡಿರುವುದು ನಿಜಕ್ಕೂ ವಿಷಾದದ ಸಂಗತಿ. ಈ
ಎಲ್ಲಾ ಹಿನ್ನೆಲೆಯಲ್ಲಿ ಈ 370 ನೇ ವಿಧಿ - ಹಾಗೆಂದರೆ ಏನು? ಅದರ ಹಿನ್ನೆಲೆಗಳನ್ನು ಇದರ ಪರಿಣಾಮಗಳನ್ನು,
ಪರಿಹಾರ ಮಾರ್ಗೋಪಾಯಗಳನ್ನು ತಿಳಿಸಿಕೊಡುವ ಪ್ರಯತ್ನವು ಇಲ್ಲಿದೆ.
370 ನೇ ವಿಧಿಯ ಪರಿಭಾಷೆ
ಭಾರತದ ಸಂವಿಧಾನದಲ್ಲಿರುವ
21 ನೇ ಪರಿಚ್ಚೇದವು ಭಾರತದ ಯಾವೊಂದು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ನೆರವಾಗುತ್ತದೆ. ಇದೇ
ಪರಿಚ್ಚೇದದಡಿಯಲ್ಲಿ ಬರುವ ವಿಧಿ 370. ಇದರ ಮೂಲಕ ಯಾವುದೇ ಒಂದು ಪ್ರಾಂತ್ಯಕ್ಕೆ ತತ್ಕಾಲಿಕವಾಗಿ ವಿಶೇಷ
ಸ್ಥಾನಮಾನ ಕಲ್ಪಿಸಬಹುದು. ಅಂತಹಾ ಸ್ಥಾನಮಾಮ ಪಡೆದ ರಾಜ್ಯವು ದೇಶದ ಇತರೆ ರಾಜ್ಯಗಳಿಗೆ ಅನ್ವಯಿಸುವ
ಕೆಲವು ನಿರ್ದಿಷ್ಟ ಕಾನೂನಿನಿಂದ ಮುಕ್ತವಾಗಿರುತ್ತದೆ. ಕೆಲವೊಂದು ವಿಶೇಷ ಕಾನೂನುಗಳನ್ನು ಹೊರತು ಪಡಿಸಿ
ಉಳಿದೆಲ್ಲಾ ಸಮಯದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಅಂತಿಮ ತೀರ್ಮಾನವನ್ನು ಆಯಾ ರಾಜ್ಯದ ವಿಧಾನ
ಸಭೆಗೇ ಬಿಡಬೇಕಾಗುತ್ತದೆ.
ವಿಧಿ ಜಾರಿಗೊಂಡ ಹಿನ್ನೆಲೆ
ಅದು 1947 ರ
ಸಮಯ. ಭಾರತ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿತ್ತು. ಇಡೀ ದೇಶ ಸಂಭ್ರಮಾಚರಣೆಯಲ್ಲಿತ್ತು. ಆದರೆ
ಕಾಶ್ಮೀರ ಮಾತ್ರ ತನ್ನದೇ ಪ್ರತ್ಯೇಕತೆಯನ್ನು ಸಾರಿತ್ತು! ಅಲ್ಲಿನ ಮಹಾರಾಜ ಹರಿಸಿಂಗ್ ತನ್ನದು ಪ್ರತ್ಯೇಕ
ರಾಜ್ಯವೆನ್ನುವುದಾಗಿ ಘೋಷಿಸಿದ್ದನು. ಅದಕ್ಕೆ ಒಪ್ಪಿಕೊಂಡ ಎರಡೂ ದೇಶಗಳು (ಭಾರತ ಹಾಗೂ ಪಾಕಿಸ್ತಾನ)
ಸಹ ತಾವು ಕಾಶ್ಮೀರದ
ಮೇಲೆ ಧಾಳಿ ಮಾಡಬಾರದೆನ್ನುವ ತೀರ್ಮಾನಕ್ಕೆ ಬಂದವು. ಆದರೆ ಪಾಕಿಸ್ತಾನವು
ಆ ತೀರ್ಮಾನವನ್ನು ಹೆಚ್ಚು ಕಾಲ ಪಾಲಿಸದೆ 1947 ಅಕ್ಟೋಬರ್ 6 ರಂದು `ಆಜಾದ್ ಕಾಶ್ಮೀರ್’ ಗಾಗಿ ಕಾಶ್ಮೀರದ
ಮೇಲೆ ಯುದ್ದ ಸಾರಿತು. ಆಗ ಅಲ್ಲಿನ ರಾಜ ಹರಿಸಿಂಗ್ ಭಾರತದ ಸಹಾಯವನ್ನು ಯಾಚಿಸಿದ್ದರು. ಕಾಶ್ಮೀರವು
ಸಂಪೂರ್ಣವಾಗಿ ಭಾರತದೊಡನೆ ವಿಲೀನವಾಗುವುದಾದರೆ ಆಗ ಮಾತ್ರ ಭಾರತದ ನೆರವು ನೀಡುವುದಾಗಿ ಅಂದಿನ ಸರ್ಕಾರ
ಭರವಸೆ ನೀಡಿತು. ಅದಕ್ಕೊಪ್ಪದೆ ಹೋದ ಮಹಾರಾಜ ಹರಿಸಿಂಗ್ ಗೆ ಭಾರತದ ಪ್ರಧಾನಿಗಳಾಗಿದ್ದ ನೆಹರೂ ರವರು
ಭಾರತದೊಡನೆ ಜಮ್ಮು ಕಾಶ್ಮೀರವು ವಿಲೀನಗೊಳ್ಳಬೇಕು. ಸಂವಿಧಾನದ 370 ನೇ ವಿಧಿಯ ಪ್ರಕಾರ ರಕ್ಷಣೆ, ವಿದೇಶಾಂಗ,
ಸಂವಹನದ ಕ್ಷೇತ್ರದ ಹೊರತಾಗಿ ಭಾರತದ ಬೇರಾವ ಕಾನೂನುಗಳು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ಎಂಬ ಸಂಧಾನ
ಸೂತ್ರವನ್ನು ಮುಂದಿಟ್ಟರು. ಈ ರಾಜೀ ಸೂತ್ರಕ್ಕೆ ಒಪ್ಪಿದ ಮಹಾರಾಜ ಹರಿಸಿಂಗ್ ಒಪ್ಪಂದಕ್ಕೆ ಸಹಿ ಹಾಕಿದರು.
ಪಾಕಿಸ್ತಾನದ ಧಾಳಿಯ್ಯನ್ನು ಭಾರತವು ಧೈರ್ಯವಾಗಿ ಹಿಮ್ಮೆಟ್ಟಿಸಿತು. ಅಂದಿನಿಂದಲೂ ಜಮ್ಮು ಕಾಶ್ಮೀರಕ್ಕೆ
370 ನೇ ವಿಧಿಯು ಅನ್ವಯವಾಗಿದೆ.
ವಿಧಿಯ ಪರಿಣಾಮ
ಈ 370 ನೇ ವಿಧಿಯಿಂದಾಗಿ
ಭಾರತದ ಸರ್ವೋಚ್ಚ ಸಾಂವಿಧಾನಿಕ ಸಂಸ್ಥೆಯಾದ ಸಂಸತ್ತಿಗೆ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿ ಕಾನೂನನ್ನು
ರೂಪಿಸುವ ಅಧಿಕಾರವು ಇರುವುದಿಲ್ಲ. ಒಂದು ವೇಳೆ ಹಾಗೇನಾದರೂ ಕಾನೂನನ್ನು ರೂಪಿಸಬೇಕಾದಲ್ಲಿ ಅದನ್ನು
ರಾಷ್ಟ್ರಪತಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮುಟ್ಟಿಸಿ ಆ ರಾಜ್ಯದ ವಿಧಾನ ಸಭೆಯಲ್ಲಿ ಮಂಡಿಸಬೇಕು! ಇನ್ನೂ
ಕೆಲವು ಕಾನೂನುಗಳನ್ನು ಅಲ್ಲಿನ ರಾಜ್ಯ ಸರ್ಕಾರದ ಅನುಮತಿ ಪಡೆದು ಸಂಸತ್ತಿನಲ್ಲಿ ಮಂಡನೆ ಮಾಡಬಹುದಾಗಿದೆ.
ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವು ಅಸ್ತಿತ್ವದಲ್ಲಿದೆ. ಈ ಪ್ರತ್ಯೇಕ ಸಂವಿಧಾನವನ್ನು ಅಲ್ಲಿನ
ವಿಧಾನ ಸಭೆಯು ಜನವರಿ 26, 1957 ರಂದು ಸರ್ವಾನುಮತದಿಂದ ಅಂಗೀಕರಿಸಿದೆ!
ಇದು ದೇಶದಲ್ಲಿ
ಜಾರಿಯಲ್ಲಿರುವ ಎರಡನೇ ಸಂವಿಧಾನ!
ಕಾಶ್ಮೀರದ ಸಂವಿಧಾನವು
ತಿದ್ದುಪಡಿಗೊಳ್ಳುವುದೂ ಸಹ ಆ ರಾಜ್ಯದ ವಿಧಾನ ಸಭೆಯಲ್ಲಿಯೇ! ವಿಧಾನ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು
ಆ ರಾಜ್ಯ ಅರ್ಕಾರದ ಅನುಮತಿಯೊಡನೆ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಬಹುದು.
ಈ 370 ನೇ ವಿಧಿಯ
ಪರಿಣಾಮವಾಗಿ ಭಾರತದ ಬೇರೆಲ್ಲಾ ರಾಜ್ಯಗಳಿಗೆ ಅನ್ವಯಿಸುವ ಸಂವಿಧಾನದ 238 ನೇ ವಿಧಿಯು ಜಮ್ಮು ಕಾಶ್ಮೀರಕ್ಕೆ
ಅನ್ವಯವಾಗುವುದಿಲ್ಲ. ಅಲ್ಲದೆ ಸಂವಿಧಾನದ 360 ನೇ ವಿಧಿಯನ್ವಯ ದೇಶಾದ್ಯಂತ ಆರ್ಥಿಕ ತುರ್ತು ಸ್ಥಿತಿಯನ್ನು
ಘೋಷಿಸುವ ಅಧಿಕಾರವು ಕೇಂದ್ರ ಸರ್ಕಾರಕ್ಕಿದೆ. ಆದರೆ ಈ ಬಗೆಯ ತುರ್ತು ಪರಿಸ್ಥಿತಿಯನ್ನು ಸಹ ಆರಾಜ್ಯದಲ್ಲಿ
ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ! ಹೊರದೇಶಗಳ ಆಕ್ರಮಣದ ವೇಳೆಯಲ್ಲಿ ಮಾತ್ರವೇ ಅಲ್ಲಿ ತುರ್ತು ಪರಿಸ್ಥಿತಿ
ಘೋಷಿಸಲು ಸಾಧ್ಯ! ಇನ್ನು ಒಂದು ವೇಳೆ ಅಂತಹಾ ಸನ್ನಿವೇಶಗಳಿದ್ದು ತುರ್ತು ಸ್ಥಿತಿ ಘೋಷಿಸಲೇ ಬೇಕಾದಲ್ಲಿ
ಅದಕ್ಕೆ ಅಲ್ಲಿನ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು! ಭಾರತದ ರಾಷ್ಟ್ರಪತಿಗಳು ಆ ರಾಜ್ಯದಲ್ಲಿ ತುರ್ತು
ಪರಿಸ್ಥಿತಿ ಘೋಷಿಸಬೇಕೆಂದು ಕೋರಿ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು!
ಇನ್ನೂ ಒಂದು
ಮುಖ್ಯ ಸಂಗತಿ ಏನೆಂದರೆ ಬೇರೆ ರಾಜ್ಯದವರು ಈ ರಾಜ್ಯದಲ್ಲಿ ಆಸ್ತಿ ಖರೀದಿಸುವಂತಿಲ್ಲ, ಆದರೆ ಜಮ್ಮು
ಕಾಶ್ಮೀರ ರಾಜ್ಯದವರು ಭಾರತದ ಇತರೆ ರಾಜ್ಯಗಳಲ್ಲಿಯೂ ಆಸ್ತಿ ಖರೀದಿಸಬಹುದು! ಜಮ್ಮು ಕಾಶ್ಮೀರದ ನಾಗರಿಕರು
ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ! ದೇಶದ ಎಲ್ಲಾ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಸಹ ಸಂವಿಧಾನದ ವಿಧಿ
226 ರ ಅನುಸಾರ ಸಂವಿಧಾನದ ತಿದ್ದುಪಡಿಯನ್ನು ಮಾಡುವ ಅಧಿಕಾರವನ್ನು ಹೊಂದಿದ್ದರೂ ಜಮ್ಮು ಕಾಶ್ಮೀರ
ರಾಜ್ಯದ ಉಚ್ಚ ನ್ಯಾಯಾಲಯವು ಮಾತ್ರ ಇದರಿಂದ ಮುಕ್ತ! ಯಾವೊಂದು ಕಾನೂನನ್ನೂ ಸಹ ಅಸಂವಿಧಾನಿಕವೆನ್ನುವ
ಹಕ್ಕು ಆ ನ್ಯಾಯಾಲಕ್ಕಿಲ್ಲ. ಬೇರೆಲ್ಲಾ ರಾಜ್ಯಗಳ ವಿಧಾನ ಸಭೆಗಳ ಆಡಳಿತ ಅವಧಿ 5 ವರ್ಷಗಳಾಗಿದ್ದರೆ
ಜಮ್ಮು ಕಾಶ್ಮೀರದ ವಿಧಾನ ಸಭೆ ಆಡಳಿತದ ಅವಧಿ 6 ವರ್ಷಗಳು!
ಆ ರಾಜ್ಯದ ಶಾಶ್ವತ ನಾಗರಿಕರಾದವರಿಗೆ ಮಾತ್ರವೇ ಅಲ್ಲಿ ಆಸ್ತಿ ಖರೀದಿಸುವ ಹಕ್ಕಿದೆ, ಅಲ್ಲಿನ
ಸರ್ಕಾರಿ ಹುದ್ದೆಗಳಿಗೆ ನೇಮಕವಾಗುವ ಅಧಿಕಾರವಿದೆ! ಇನ್ನು ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಜಾರಿಯಾಗಬೇಕಾದರೂ ಸಹ ಅಲ್ಲಿನ ಗವರ್ನರರ ಅನುಮತಿ ಬೇಕು.
ಇದಕ್ಕೆ ಪರಿಹಾರವೇನು?
ಹೀಗೆ ನಾನಾ
ಕಾರಣಗಳಿಂದ ಪ್ರತ್ಯೇಕವಾದ ಸಂವಿಧಾನದೊಡನೆ ಗುರುತಿಸಿಕೊಂಡಿರುವ ಕಾಶ್ಮೀರವನ್ನು ಭಾರತದ ಒಕ್ಕೂಟ ವ್ಯವಸ್ಥೆಯ
ಅಡಿಯಲ್ಲಿ ತರಲು ಎಂದಿಗೂ ಸಾಧ್ಯವಿಲ್ಲವೆ? ಹಿಗೊಂದು ಪ್ರಶ್ನೆ ನಿಮ್ಮಲ್ಲೇನಾದರೂ ಇದ್ದಿತಾದರೆ ಅದಕ್ಕೆ
ಉತ್ತರ, ನಾಯಕರಲ್ಲಿ ನಿಜವಾದ ಇಚ್ಚಾಶಕ್ತಿಯಿದ್ದರೆ ಅದು ಸಾಧ್ಯವಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಜಮ್ಮು ಕಾಶ್ಮೀರದ ವಿಧಾನ ಸಭೆಯು
ಸರ್ವಾನುಮತದ ನಿರ್ಣಯವನ್ನು ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಆ ಬಳಿಕ ಕೇಂದ್ರವು ಸಂವಿಧಾನ
ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮೂರನೇ ಎರಡರಷ್ಟು ಬಹುಮತಗಳೊಂದಿಗೆ
ಅಂಗೀಕಾರವಾಗಬೇಕು. ನಂತರ ಅದಕ್ಕೆ ರಾಷ್ಟ್ರಪತಿಗಳ ಸಹಿಯು ಬೀಳುವ ಮೂಲಕ ಕಾಯ್ದೆಯು ಜಾರಿಯಾಗಬಲ್ಲುದು.
ಆದರೆ ಈ ಕಾಯ್ದೆ
ತಿದ್ದುಪಡಿ ವಿಚಾರಗಳ ಕುರಿತ ಹಾಗೆ ಸಂವಿಧಾನ ತಜ್ಞರುಗಳೇ ಬೇರೆ ಬಗೆಯಲ್ಲಿ ವಾದಗಳನ್ನು ಮುಂದಿಡುತ್ತಾರೆ.
ಅವರುಗಳ ಪ್ರಕಾರವಾಗಿ ಈ ಸಮಸ್ಯೆಯ ಪರಿಹಾರವು ಈ ಮೇಲೆ ಹೇಳಿರುವಷ್ಟು ಸುಲಭ ಸಾಧ್ಯವಲ್ಲ! ಸಂವಿಧಾನ
ತಿದ್ದುಪಡಿಗಾಗಿ ಸಂಸತ್ತಿಗಿರುವ ಅಧಿಕಾರವು ಯಾವುದೇ ಕಾರಣದಿಂದ ಮುಕ್ತವಾಗಿ ಇಲ್ಲ. ಕಾನೂನನ್ನು ತಿದ್ದುಪಡಿಗೊಳಿಸಲು
ಸಂವಿಧಾನದ 368 ನೇ ವಿಧಿಯು ಸಂಸತ್ತಿಗೆ ಅಧಿಕಾರವನ್ನು ನೀಡಿದ್ದರೂ ಸಹ 7 ನೇ ಅನುಸೂಚಿಯ ತಿದ್ದುಪಡಿಗೆ
ಇದೇ ವಿಧಿಯು ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸಿದೆ! ಭಾರತ ದೇಶದ ಅರ್ಧಕ್ಕಿಂತಲೂ ಹೆಚ್ಚಿನ ರಾಜ್ಯಗಳ
ಶಾಸಕಾಂಗಗಳಿಂದ ಅಂಗೀಕಾರ ದೊರೆಯದ ಹೊರತಾಗಿ 7 ನೇ ಅನುಸೂಚಿ ಪಟ್ಟಿಗೆ ಸಂಸತ್ತು ಬದಲಾವಣೆ ತರುವುದು
ಅಸಾಧ್ಯ!
ಇನ್ನು ದೇಶದ
ಇತರೆ ಕೆಲವು ರಾಜ್ಯಗಳಲ್ಲಿಯೂ ಸಹ ಇಂತಹುದೇ ಕಾಯ್ದೆಗಳು ಜಾರಿಯಲ್ಲಿದೆ. ಅಂಡಮಾನ್ ಮತ್ತು ನಿಕೋಬಾರ್,
ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲ ಪ್ರದೇಶಗಳಲ್ಲಿ ಸಹ ರಾಜ್ಯದ ವಿಧಾನಸಭೆಗೆ ವಿಶೇಷಾಧಿಕಾರ ಇರುವಂತೆ
ಕಾನೂನುಗಳು ಜಾರಿಯಲ್ಲಿದೆ. ಅದಕ್ಕೆ ಉದಾಹರಣೆ ಎಂದರೆ ಸಂವಿಧಾನದ 371 (ಜೆ) ವಿಧಿಯ ಅನುಸಾರ ಮಿಜೋರಾಂ
ಶಾಸಕಾಂಗದ ಒಪ್ಪಿಗೆ ಇಲ್ಲದೆ ಸದರಿ ರಾಜ್ಯದ ಭೂಮಿಯ ಒಡೆತನ ಹಾಗೂ ವರ್ಗಾವಣೆಗೆ ಸಂಸತ್ತಿಗೆ ಯಾವುದೇ
ಅಧಿಕಾರವಿಲ್ಲ!
370 ನೇ ವಿಧಿ
ಎನ್ನುವುದು 1947 ರ ಸಮಯದಲ್ಲಿ ಅನಿವಾರ್ಯಾವಾಗಿತ್ತು. ಅಂದು ಆ ವಿಧಿಯು ಕಾಶ್ಮೀರಿಗಳ ಆತ್ಮಗೌರವದ
ವಿಚಾರವಾಗಿತ್ತು. ಆದರೆ ಆ ವಿಧಿ ಇದ್ದರೂ, ಇಲ್ಲದಿದ್ದರೂ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆನ್ನುವುದರಲ್ಲಿ
ಎರಡನೇ ಮಾತಿಲ್ಲ. ರಾಜ್ಯದ ಕೆಲವು ಪ್ರದೇಶಗಳಾನ್ನು ನೆರೆ ರಾಷ್ಟ್ರ ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿದ್ದು
ಆ ಬಗ್ಗೆ ಭಾರತದ ವಿರೋಧವು ಇದ್ದೇ ಇದೆ. ಹಾಗೆನ್ನುವ ಮಾತ್ರಕ್ಕೆ ಕಾಶ್ಮೀರ ರಾಜ್ಯಕ್ಕೆ ಮಾತ್ರವೇ ಬೇರೆ
ಯಾವ ರಾಜ್ಯಕ್ಕಿಲ್ಲದ ಸ್ವಾಯತ್ತೆಯನ್ನು ನೀಡಬೆನ್ನುವುದು ಸರ್ವಥಾ ಸರಿಯಲ್ಲ. ಒಂದೇ ದೇಶದಲ್ಲಿ ಮತ್ತೊಂದು
ದೇಶದ ಪರಿಕಲ್ಪನೆ, ಒಂದು ಸಂವಿಧಾನವನ್ನು ಸರ್ವೋಚ್ಚ ಎಂದು ಸಾರುವ ದೇಶದಡಿಯಲ್ಲಿಯೇ ಇನ್ನೊಂದು ಪ್ರತ್ಯೇಕ
ಸಂವಿಧಾನವಿರುವುದು ಎಷ್ಟರ ಮಟ್ಟಿಗೆ ಸರಿಯಾದುದು? ಹೀಗಾಗಿ ಇದೀಗ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ
ಪಕ್ಷದ ಸರ್ಕಾರದ ಅವಧಿಯಲ್ಲಿಯೇ ಈ ವಿಧಿಯನ್ನು ರದ್ದುಪಡಿಸಬೇಕೋ? ಇಲ್ಲವೇ ಮುಂದುವರಿಸಿಕೊಂಡು ಹೋಗಬೇಕೋ
ಎನ್ನುವುದರ ಬಗ್ಗೆ ವಿಚಾರಪೂರ್ಣವಾದ ಚರ್ಚೆಯಾಗಲಿ, ಹಾಗೆ ಚರ್ಚೆ, ವಿಚಾರ ವಿನಿಮಯಗಳ ನಡೆದು ಅಂತಿಮ
ತೀರ್ಮಾನವಾಗಲಿ ಎನ್ನುವುದು ಬಹುತೇಕ ಎಲ್ಲಾ ಭಾರತೀಯರ ಆಶಯ. ಇಂತಹಾ ವಿಚಾರಗಳಲ್ಲಿ ಭಾವೋದ್ವೇಗಕ್ಕೆ
ಅವಕಾಶ ಕೊಡದೆ ಸಮಚಿತ್ತದಿಂದ ವಿಶ್ಲೇಷಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕು.
No comments:
Post a Comment