Tuesday, January 06, 2015

ರಾಗಗಳ ರಾಜ ಶ್ರೀ ತ್ಯಾಗರಾಜ

ಕರ್ನಾಟಕ ಸಂಗೀತದ ಪ್ರಮುಖ್ ರಚನಾಕಾರರಾಗಿಯೂ, ನಾದೋಪಾಸಕರಾಗಿಯೂ, ಶ್ರೀ ರಾಮನ ಪರಮ ಭಕ್ತರಾಗಿಯೂ ಇದ್ದ ಶ್ರೀ ತ್ಯಾಗರಾಜರ 168ನೇ ಪುಣ್ಯ ದಿನ ಇಂದು. (ಜನವರಿ 06) ಹಿನ್ನೆಲೆಯಲ್ಲಿ ತ್ಯಾಗರಾಜರ ಜೀವ ಸಾಧನೆಗಳ ಮೇಲೆ ಒಂದು ಕಿರು ನೋಟ ಇಲ್ಲಿದೆ.....

ಮೇ  4, 1767  (ಕೆಲವು ಚರಿತ್ರಜ್ಞರ ಪ್ರಕಾರ 1795) ರಲ್ಲಿ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ರಾಮಬ್ರಹ್ಮಮ್ ಮತ್ತು ಸೀತಮ್ಮನವರ ಪುತ್ರರಾಗಿ ತ್ಯಾಗರಾಜರು ಜನಿಸಿದರು. ಸೀತಾರಾಮರ ಪರಮ ಭಕ್ತರಾಗಿದ್ದ ತ್ಯಾಗರಾಜರಿಗೆ ಅವರ ತಾಯಿ ಸೀತಮ್ಮನವರು, ಬಾಲ್ಯದಿಂದಲೇ ಶ್ರೀಪುರಂದರದಾಸರ ಕೀರ್ತನೆಗಳನ್ನು ಹೇಳಿಕೊಡುತ್ತಿದ್ದರು ತಾಯಿ ಸೀತಮ್ಮನವರಿಂದ ಸಂಗೀತದ ಪ್ರಾಥಮಿಕ ಪಾಠವನ್ನು  ಕಲಿತ ತ್ಯಾಗರಾಜರು, ತಮ್ಮ 12ನೇ ವಯಸ್ಸಿನಲ್ಲೇ ಸ್ವಂತ ಕೃತಿಗಳನ್ನು ರಚಿಸಿ, ತಾವೇ ಸಂಗೀತ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡುತ್ತಿದ್ದರು.
ತ್ಯಾಗರಾಜರ  ಸಂಗೀತ ವಿದ್ವತ್ತಿಗೆ ಮಾರುಹೋದ, ಸ್ವತಃ ವೈಣಿಕರಾಗಿದ್ದ ತಾತ ಕಾಳಹಸ್ತಯ್ಯನವರು ತ್ಯಾಗರಾಜರಿಗೆ ಹಲವು ಸಂಗೀತ ಶಾಸ್ತ್ರ ಗ್ರಂಥಗಳನ್ನು ಒದಗಿಸಿ, ಸಂಗೀತದ ಬಗ್ಗೆ ಹೆಚ್ಚು ತಿಳಿಯಲು ನೆರವಾದರು. ಬಾಲ ತ್ಯಾಗರಾಜರ ಸಂಗೀತ ಸಾಧನೆಯನ್ನು ಮೆಚ್ಚಿದ ಶ್ರೀರಾಮಕೃಷ್ಣಾನಂದ ಯತಿಗಳು ಕರುಣಿಸಿದ ಸಂಗೀತ ಶಾಸ್ತ್ರದ ಒಳಮರ್ಮಗಳನ್ನು ಒಳಗೊಂಡಸ್ವರಾ-ರ್ಣ-ಗ್ರಂಥ ತ್ಯಾಗರಾಜರ ಸಂಗೀತ ವಿದ್ವತ್ತನ್ನು ಮತ್ತಷ್ಟು ಹೆಚ್ಚಿಸಿತು. ತ್ಯಾಗರಾಜರು ತಮ್ಮ 18ನೇ ವಯಸ್ಸಿನಲ್ಲಿಯೇ ರಾಮಕೃಷ್ಣಾನಂದ ಯತೀಂದ್ರರಿಂದ ಶ್ರೀ ರಾಮ ಮಂತ್ರ ದೀಕ್ಷೆ ಪಡೆದು, ಇದನ್ನು ಒಂದು ವ್ರತದಂತೆ, ಒಂದು ಸಲಕ್ಕೆ ,೨೫,೦೦೦ ರಾಮನಾಮ ಜಪದಂತೆ ವರ್ಷಾನುಗಟ್ಟಲೆ ಮಾಡಿ, ತೊಂಬತ್ತಾರು ಕೋಟಿ ರಾಮಜಪ ಮಾಡಿದ್ದರು! ತಂದೆ ರಾಮ ಬ್ರಹ್ಮರು ಕಾಲವಾದ ನಂತರ ತಮ್ಮ ಪಾಲಿಗೆ ಬಂದ ತಂದೆಯ ಪೂಜೆಯ ಕೋಣೆ ಮತ್ತು ರಾಮಪಂಚಾಯತನ ವಿಗ್ರಹಗಳನ್ನು ಸಂತೋಷದಿಂದ ಸ್ವೀಕರಿಸಿದ್ದರು. ತ್ಯಾಗರಾಜರ ಮೊದಲ ಪತ್ನಿ ಪಾರ್ವತಮ್ಮ - ಇವರ ನಿಧನದ ನಂತರ ಕಮಲಾಂಬಾರನ್ನು ಮದುವೆಯಾದರು.  ತ್ಯಾಗರಾಜರು ಗೃಹಸ್ಥರಾಗಿದ್ದೂ ವಿರಕ್ತಿಯಿಂದಿದ್ದರು. ರಾಮತಾರಕ ಮಂತ್ರದ ಸಿದ್ಧಿಯಾಗಿ ಅವರಿಗೆ ಶ್ರೀರಾಮನು ಲಕ್ಷ್ಮಣನೊಂದಿಗೆ ಸಾಕ್ಷಾತ್ಕರಿಸಿದ್ದನು. ಆನಂದ ತುಂಬಿ ತ್ಯಾಗರಾಜರು "ಏಲ ನೀ ದಯ ರಾದು" ಎಂಬ ಕೀರ್ತನೆ ರಚಿಸಿ ಹಾಡಿದ್ದರು
ಒಮ್ಮೆ ಅವರು ತಿರುಪತಿಗೆ ಹೋದಾಗ ದರ್ಶನದ ವೇಳೆ ಮುಗಿದಿದ್ದು ದೇವರ ಮುಮ್ದೆ ತೆರೆ ಹಾಕಲಾಗಿತ್ತು. ಇಷ್ಟು ದೂರ ಬಂದು ದೇವರನ್ನು ಕಾಣಲಗದಲ್ಲಾ ಎಂದು ಮರುಗಿ ತ್ಯಾಗರಾಜರು ಅಲ್ಲೇ ನಿಂತು "ತೆರೆ ತೆಗೆಯಬಾರದೇ, ತಿರುಪತಿ ವೆಂಕಟರಮಣ" (ತೆರ ತೀಯಗರಾದಾ) ಎಂದು ಹಾಡಿದರು. ಒಡನೆಯೇ ಅರ್ಚಕರೂ ಎಲ್ಲರೂ ನೋಡುತ್ತಿದ್ದಂತೆಯೇ ತೆರೆ ತನ್ನಷ್ಟಕ್ಕೆ ತಾನೇ ಪಕ್ಕಕ್ಕೆ ಸರಿದುಕೊಂಡು ಬಿಟ್ಟಿತು. ದೇವರ ದರ್ಶನ ಮಾಡಿದ ತ್ಯಾಗರಾಜರುವೆಂಕಟೇಶಾ ನಿನ್ನನ್ನು ನೋಡಲು ಹತ್ತುಸಾವಿರ ಕಣ್ಣುಗಳು ಬೇಕು" ಎಂದು ಹಾಡಿ ಕೃತಜ್ಞತೆ ಸೂಚಿಸಿದ್ದರಂತೆ.
ತ್ಯಾಗರಾಜರ  ಅತ್ಯಂತ ಪ್ರಸಿದ್ಧಿ ಪಡೆದಿರುವಪಂಚರತ್ನ ಕೃತಿಗಳುಇವು
1) ಕೋವೂರಿ ಪಂಚರತ್ನಗಳು
2) ಶ್ರೀರಂಗಂ ಪಂಚರತ್ನಗಳು
3) ತಿರುವಟ್ಟಿಯೂರ್ ಪಂಚರತ್ನಗಳು
4) ಲಾಲ್ ಗುಡಿ ಪಂಚರತ್ನಗಳು
5) ನಾರದ ಪಂಚರತ್ನಗಳು
ಇದಲ್ಲದೆಯೂ ಅಸಂಖ್ಯಾತ ಕೀರ್ತನೆಗಳನ್ನು ಸಹ ಇವರು ರಚಿಸಿದ್ದಾರೆ.

 ಶ್ರೀ ತ್ಯಾಗರಾಜ


ಕರ್ನಾಟಕ ಸಂಗೀತ ವಿದ್ವಾಂಸರಾದ ತ್ಯಾಗರಾಜರು, ಜನಪ್ರಿಯತೆ ಮತ್ತು ಶ್ರೀಮಂತಿಕೆಗಾಗಿ ಸಂಗೀತವನ್ನು ಹಾಡದೆ, ಸಂಗೀತದ ಮೂಲಕ ಭಕ್ತಿಯ ಪ್ರಸಾರ ಮಾಡಿದರುಇವರ "ಎಂದರೋ ಮಹಾನುಭಾವುಲು" ಕೃತಿಯನ್ನು ಕೇಳಿದ ನಂತರ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಇವರ ಬಗ್ಗೆ ಪ್ರಭಾವೀ ಸಲಹೆ ನೀಡಿದರು. ಆದರೆ ತ್ಯಾಗರಾಜರು ಮಹಾರಾಜರ ಆಸ್ಥಾನ ಸಂಗೀತಗಾರರಾಗುವ ಆಹ್ವಾನವನ್ನು ನಿರಾಕರಿಸಿದರುಇದರಿಂದ ಕುಪಿತಗೊಂಡಿದ್ದ ತ್ಯಾಗರಾಜರ ಸಹೋದರನು ತ್ಯಾಗರಾಜರು ಪೂಜಿಸುತ್ತಿದ್ದ ರಾಮ ಮೂರ್ತಿಯನ್ನು ಎಸೆದಿದ್ದರು. ತ್ಯಾಗರಾಜರು ತೀರ್ಥಯಾತ್ರೆಗೆ ತೆರಳಿ ದಕ್ಷಿಣ ಭಾರತದ ಶ್ರೀರಾಮ ದೇವಾಲಯಗಳಲ್ಲಿ ರಾಮನನ್ನು ಸ್ತುತಿಸುತ್ತಿದ್ದರು. ಮತ್ತು ಶ್ರೀರಾಮನ ಕುರಿತಾಗಿ ಅನೇಕ ಹಾಡುಗಳನ್ನೂ ಹಾಡಿದ್ದರು. ಕೊನೆಯಲ್ಲಿ ತಿರುವೈಯೂರಿನಲ್ಲಿ ನೆಲೆಯೂರಿದ ತ್ಯಾಗರಾಜರು, ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಂಡುಬಂದ ಸೀತಾ ಮತ್ತು ಲಕ್ಷ್ಮಣ ಹಾಗೂ ಸಣ್ಣ ಕಂಚಿನ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಿದ್ದರು. ಯೋಗ ಭಂಗಿಯಲ್ಲಿರುವ ಕಲ್ಲಿನ ಹನುಮಾನ್ ಮೂರ್ತಿಯ ಬಳಿ ಕುಳಿತುಕೊಂಡು ಅನೇಕ ಶ್ರೀರಾಮ ಕೀರ್ತನೆಗಳನ್ನು ತ್ಯಾಗರಾಜರು ಹಾಡುತ್ತಿದ್ದರು. ಕರ್ನಾಟಕ ಸಂಗೀತದಲ್ಲಿನ ಎಲ್ಲಾ ಕೀರ್ತನೆಗಳಲ್ಲಿ ತ್ಯಾಗರಾಜರು ರಚಿಸಿದ ಪಂಚರತ್ನ ಕೀರ್ತನೆಗಳಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯವಿದೆ
ತನ್ನ 80ನೆಯ ವಯಸ್ಸಿನಲ್ಲಿ (ಜನವರಿ 6, 1847) ತಿರುವೈಯೂರ ಪಟ್ಟಣದಲ್ಲಿ ತ್ಯಾಗರಾಜರು ಶ್ರೀರಾಮನ ಪಾದವನ್ನು ಸೇರಿದರು. ತ್ಯಾಗರಾಜರನ್ನು ಸಮಾಧಿ ಮಾಡಿರುವ ಸಮೀಪದಲ್ಲಿಯೇ ಸಣ್ಣ ಶ್ರೀರಾಮ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನದಲ್ಲಿ ತ್ಯಾಗರಾಜರಿಂದ ಪೂಜಿತಗೊಂಡಿದ್ದ ರಾಮ, ಸೀತಾ ಮತ್ತು ಲಕ್ಷ್ಮಣ ಮೂರ್ತಿಗಳೂ ಇವೆ. ದೇವಾಲಯದ ಒಳಗೋಡೆಗಳಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.
ಪ್ರತಿವರ್ಷ ಪುಷ್ಯ ಬಹುಳ ಪಂಚಮಿಯ ದಿನ ತ್ಯಾಗರಾಜರ ಪುಣ್ಯತಿಥಿಯನ್ನು ಆಚರಿಸಲಾಗುತ್ತದೆ. ಪಂಚರತ್ನ ಕೃತಿ ನೀಡಿದ ಮಹಾನುಭಾವನ ಗೌರವಾರ್ಥ ಐದು ದಿನಗಳ ಕಾಲ ಆರಾಧನೆ ಜರುಗುತ್ತದೆ. ಸಹಸ್ರಾರು ಸಂಗೀತ ವಿದ್ವಾಂಸರು, ತ್ಯಾಗರಾಜರ ಸಾವಿರಾರು ಕೃತಿಗಳನ್ನು ಹಾಡಿ, ಅವರಿಗೆ ಗೀತಾಂಜಲಿ ಅರ್ಪಿಸುತ್ತಾರೆ. ಪಿಟೀಲು, ಕೊಳಲು, ಮೃದಂಗವಾದಕರು ಆರಾಧನೆಯಲ್ಲಿ ಪಾಲ್ಗೊಂಡು ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ. ತ್ಯಾಗರಾಜರನ್ನು ಅವತಾರ ಪುರುಷ ಎಂದೇ ಭಾವಿಸಿದವರೂ ಉಂಟು. ಗಾಯನದಿಂದಲೇ ಶ್ರೀರಾಮನ ಒಲಿಸಿಕೊಳ್ಳುವ ಮಾರ್ಗವನ್ನು ತೋರಿದ ಸಂತರಿವರು. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಗಳೇ ತ್ಯಾಗರಾಜರಾಗಿ ಹುಟ್ಟಿದರು ಎಂಬ ನಂಬಿಕೆಯೂ ಇದೆ.
ತ್ಯಾಗರಾಜರ ಎಲ್ಲ ಕೃತಿಗಳೂ ಭಕ್ತಿ ಪ್ರಧಾನವಾಗಿದ್ದು, ಮನಸ್ಸಿಗೆ ಮುದನೀಡುತ್ತವೆ. ತ್ಯಾಗರಾಜರ ಕೃತಿಗಳನ್ನು ಸುಶ್ರಾವ್ಯ ಕಂಠಸಿರಿಯಲ್ಲಿ ಕೇಳುತ್ತಿದ್ದರಂತೂ ಶ್ರೋತೃಗಳು ತಮ್ಮ ಇರುವನ್ನೇ ಮರೆತು ತಲ್ಲೀನರಾಗುತ್ತಾರೆ. ಕೃತಿಗಳಲ್ಲಿರುವ ರಾಗಲಕ್ಷಣವೇ ಅಂತಹದ್ದು.
ಶ್ರೀತ್ಯಾಗರಾಜರು ಕರ್ನಾಟಕ ಸಂಗೀತಕ್ಕೆ ನೀಡಿರುವ ಕೊಡುಗೆಯ ಜೊತೆಜೊತೆಗೇ ಸಾಹಿತ್ಯದಿಂದ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಜೀವನೋತ್ಕರ್ಷಕ್ಕೆ ನೀಡಿರುವ ಮಾರ್ಗದರ್ಶನ ಹಾಗೂ ಸಂದೇಶಗಳು ಸರ್ವಕಾಲಿಕ.

No comments:

Post a Comment