ನಾನು
ಇತ್ತೀಚೆಗೆ ನೋಡಿದ ಉತ್ತಮ ಚಿತ್ರ
, ಕಳೆದ ಡಿಸೆಂಬರ್ನಲ್ಲಿ ನಡೆದ ಬೆಂಗಳೂರು
ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು ಸಾಕಷ್ಟು ಮೆಚ್ಚುಗೆ ಗಳಿಸಿದ್ದ
‘ಹಗ್ಗದ ಕೊನೆ’(ದೆಹಲಿ, ಅಮೆರಿಕದ ನಾರ್ತ್
ಕೆರೊಲಿನಾ (ಗ್ಲೋಬಲ್ ಫೆಸ್ಟಿವಲ್), ನೊಯ್ಡಾ, ನಾಸಿಕ್ಗಳಲ್ಲಿ
ನಡೆದ ಚಿತ್ರೋತ್ಸವಗಳಲ್ಲಿ ‘ಹಗ್ಗದ ಕೊನೆ’ಯನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದರು.
ಅವುಗಳ ಪೈಕಿ ನೊಯ್ಡಾ ಹಾಗೂ
ಸಾನಿಕ್ ಚಿತ್ರೋತ್ಸವಗಳಲ್ಲಿ ಕ್ರಮವಾಗಿ ಅತ್ಯುತ್ತಮ ಚಿತ್ರ ತೀರ್ಪಗಾರರ ಪ್ರಶಸ್ತಿ,
ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಈ
ಚಿತ್ರಕ್ಕೆ ದಕ್ಕಿದೆ.) ಪ್ರಸಿದ್ಧ ನಾಟಕಕಾರ ಪರ್ವತವಾಣಿ ಅವರು
1963ರಲ್ಲಿ ರಚಿಸಿದ ‘ಹಗ್ಗದ ಕೊನೆ’ ನಾಟಕ ನೂರಾರು ಪ್ರದರ್ಶನಗಳನ್ನು ಕಂಡು
ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದ್ದು ಇತಿಹಾಸ. ಈ ನಾಟಕಕ್ಕೆ
ಚಲನಚಿತ್ರ ರೂಪ ನೀಡಿದ ನಿರ್ದೇಶಕ
ದಯಾಳ್ ಪದ್ಮನಾಭ್ ಮತ್ತು ನಿರ್ಮಾಪಕ ಉಮೇಶ
ಬಣಕಾರ.ನಿಜಕ್ಕೂ ಉತ್ತಮವಾದ ಚಿತ್ರವೊಂದನ್ನು
ನೀಡಿದಾರೆ.
ನೇಣು
ಶಿಕ್ಷೆಗೆ ಗುರಿಯಾದ ಕೈದಿ ಹಾಗೂ
ಪೊಲೀಸ್ ಅಧಿಕಾರಿಯ ಮಧ್ಯೆ ನಡೆಯುವ ದೀರ್ಘ
ಸಂಭಾಷಣೆಯೇ ಈ ಕಥೆಯ ಪ್ರಮುಖ
ಅಂಶ. ನವೀನ್ ಕೃಷ್ಣ ಅವರು
ಮುಖ್ಯ ಕೈದಿಯ ಪಾತ್ರದಲ್ಲಿ ಹಾಗೂ
ಸಹ ಕೈದಿಗಳ ಪಾತ್ರದಲ್ಲಿ ದತ್ತಣ್ಣ
ಮತ್ತು ವಿ.ಮನೋಹರ್ ಕಾಣಿಸಿಕೊಂಡಿದ್ದರೆ,
ಸುಚೇಂದ್ರ ಪ್ರಸಾದ್ ಪೊಲೀಸ್ ಪೋಷಾಕಿನಲ್ಲಿ
ಅಬ್ಬರಿಸಲಿದ್ದಾರೆ. ನೇಣಿಗೆ ಬಲಿಯಾಗಲಿರುವ ಕೈದಿಯ
ತಾಯಿಯ ಪಾತ್ರದಲ್ಲಿ ಸಿಹಿಕಹಿ ಗೀತಾ ಅಭಿನಯಿಸಿದ್ದಾರೆ.
ಚಿತ್ರಕಥೆಯು
ನೇಣು ಕುಣಿಕೆಗೆ ಕೊರಳೊಡ್ಡಲು ಕ್ಷಣಗಣನೆಯಲ್ಲಿರುವ ಒಬ್ಬ ಕೈದಿಯ ಒಳತೋಟಿಯ
ಜೊತೆ ಜೊತೆಗೇ ಈ ನೆಲದ
ಕಾನೂನು ಕಟ್ಟಳೆಗಳ ಲೂಪ್ಹೋಲ್ಗಳನ್ನು
ತಣ್ಣಗೆ ಅನಾವರಣ ಮಾಡುತ್ತಾ ಸಾಗುತ್ತದೆ.ಗಲ್ಲು ಶಿಕ್ಷೆ ಭಾರತವೂ
ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ
ಜಾರಿಯಲ್ಲಿದೆ. ಕೆಲ ದೇಶಗಳು ಇದರ
ಹಿಂದಿರುವ ಕ್ರೌರ್ಯವನ್ನು ಮನಗಂಡು ಗಲ್ಲು ಶಿಕ್ಷೆಯನ್ನು
ರದ್ದುಗೊಳಿಸಿವೆ. ಮಾನವ ಹಕ್ಕುಗಳ ಆಧಾರದಲ್ಲಿ
ವಿಶ್ವಾದ್ಯಂತ ಈ ಗಲ್ಲುಶಿಕ್ಷೆಗೆ ಕಡಿವಾಣ
ಹಾಕಬೇಕೆಂದು ಜಾಗತಿಕ ಹೋರಾಟಗಳೇ ನಡೆಯುತ್ತಿವೆ.
'ಹಗ್ಗದ ಕೊನೆ ಚಿತ್ರ ಅಂಥಾದ್ದೊಂದು
ಮಾನವೀಯ ಕಳಕಳಿಯ ಪರವಾಗಿ ಕೈದಿಯೊಬ್ಬನ
ಆತ್ಮ ವೃತ್ತಾಂತದ ಮೂಲಕ ವಕಾಲತ್ತು ವಹಿಸುತ್ತದೆ.
ಮರಣ ದಂಡನೆಯ ಹಿಂದಿರಬಹುದಾದ ಶೀತಲ
ಕರಾಳ ಮುಖವನ್ನು ಈ ಸಮಾಜಕ್ಕೆ ಅನಾವರಣಗೊಳಿಸುತ್ತಾ
ನೇಣಿಗೆ ಕೊರಳೊಡ್ಡುವ ಕೈದಿಯ ಕಥೆ ಮನಮುಟ್ಟುವಂತಹುದು.
ಚಿತ್ರದ
ಸಾರಾಂಶವನ್ನು ಹೀಗೆ ಕಟ್ಟಿಕೊಡಬಹುದು, ಆತ
ಮೂಲತಃ ಕಳ್ಳ. ಹರ್ಡೆಂಡ್ ಪರ್ಸೆಂಟ್
ಬೇಜವಾಬ್ದಾರಿ ತಂದೆಯ, ಕಕ್ಕುಲಾತಿಯೇ ಮೈವೆತ್ತಂತಿರುವ
ತಾಯಿಯ ಏಕೈಕ ಪುತ್ರ. ಬದುಕಿನ
ಅನಿವಾರ್ಯತೆಗಳ ಹೊರಳು ಹಾದಿಯಲ್ಲಿ ಕಳ್ಳನಾಗಿ,
ಅದನ್ನೇ ಹೊಟ್ಟೆ ಹೊರೆಯುವ ವೃತ್ತಿಯನ್ನಾಗಿ
ಪರಿಗಣಿಸಿದ್ದ ಆತ ಅದೊಂದು ದಿನ
ಅಪರಾಧದ ಸುಳಿಯಲ್ಲಿ ಸಿಲುಕುತ್ತಾನೆ. ಆತನಿಗೆ ಕೋರ್ಟು ಮರಣದಂಡನೆ
ವಿಧಿಸುತ್ತದೆ.
ಜೈಲು
ವಾಸದಲ್ಲಿರುವಾಗ ಇಡೀ ಜೈಲು ವ್ಯವಸ್ಥೆಯ
ಬಗ್ಗೆ ಕೈದಿ ಕಾದಂಬರಿ ಬರೆಯುತ್ತಾ
ಕಾಲ ತಳ್ಳುತ್ತಾನೆ. ಇನ್ನೇನು ಒಂದು ರಾತ್ರಿ
ಹೊರಳಿಕೊಂಡು ಬೆಳಕು ಕಣ್ಣುತೆರೆಯುವ ಹೊತ್ತಿಗೆಲ್ಲಾ
ಈತ ನೇಣಿನ ಕುಣಿಕೆಗೆ ಕೊರಳೊಡ್ಡಿ
ಜೀವ ಬಿಡಬೇಕು... ಆ ಕೈದಿಯೊಳಗಿನ ತುಮುಲ,
ಪ್ರಶ್ನೆಗಳು ಮತ್ತು ಅವಕ್ಕೆ ಉತ್ತರಿಸಲಾಗದ
ಜೈಲಾಧಿಕಾರಿಯ ಕಂಗಾಲು ಸ್ಥಿತಿ ಪ್ರೇಕ್ಷಕನ
ಮನ ಮುಟ್ಟುವಂತೆ ಸಾಗುತ್ತದೆ. ಕೈದಿ ಅಧಿಕಾರಿಗೆ ಕೇಳುವ
ಪ್ರತಿಯೊಂದು ಪ್ರಶ್ನೆಯಲ್ಲಿಯೂ ಗಲ್ಲುಶಿಕ್ಷೆಯ ಜಾಗತಿಕ ವಿರೋಧಿ ಧ್ವನಿಯ
ಸದ್ದು ಕೇಳಿಸುತ್ತದೆ. ಜೈಲಾಧಿಕಾರಿಯ ಉತ್ತರಿಸಲಾಗದ ಸಂಕಟದಲ್ಲಿ ಈ ಕಾನೂನು, ವ್ಯವಸ್ಥೆಯ
ಅಕರಾಳ-ವಿಕರಾಳ ಮತ್ತು ನಿಷ್ಕರುಣಿ
ಸ್ವಭಾವಗಳೂ ಅವಿತಿರುವಂತೆ ಭಾಸವಾಗುತ್ತದೆ.
ನಾನು
ಚಾಕುವಿನಿಂದ ಚುಚ್ಚಿದರೆ, ಅದು ಕೊಲೆ. ನೀವು
ನನ್ನನ್ನು ಮರಣದಂಡನೆಗೆ ಗುರಿಪಡಿಸಿದರೆ, ಅದು ಶಿಕ್ಷೆ. ಒಂದು
ದೇಶ್ ಇನ್ನೊಂದು ದೇಶದ ಮೇಲೆ ಮಾಡುವ
ಯುದ್ಧ , ಅದು ಧರ್ಮ ಸಂಸ್ಥಾಪನೆ!''
'ಈ
ಗಲ್ಲು ಶಿಕ್ಷೆಯೂ ಸರ್ಕಾರಿ ಕೊಲೆ ಅನ್ಸಲ್ವೇ
ಸಾರ್?''
ಇಂತಹಾ
ಸಂಬಾಷಣೆಗಳು ಎಂತಹಾ ಪ್ರೇಕ್ಷಕರ ಹೃದಯವನ್ನೂ
ಒಂದು ಕ್ಷಣ ಕಲಕುತ್ತವೆ.
ಸಿನಿಮಾವನ್ನು
ಎರಡು ಮೂರು ಲೊಕೇಷನ್ನುಗಳಲ್ಲಿ ಚಿತ್ರೀಕರಿಸಲಾಗಿದೆ.ಗಲ್ಲು ಶಿಕ್ಷೆಯ ವಿರುದ್ಧ
ಎಂಥವರಾದರೂ ತಲೆಕೆಡಿಸಿಕೊಳ್ಳುವಂತೆ ಮಾಡುವ ಈ. ಚಿತ್ರದಲ್ಲಿ
ಸಂಭಾಷಣೆಯೇ ಅತ್ಯಧಿಕವಾಗಿರುವುದರಿಂದ ಇದನ್ನು ದೃಶ್ಯರೂಪದಲ್ಲಿ ನೋಡುವುದು
ಮಾತ್ರವಲ್ಲ, ರೇಡಿಯೋ ನಾಟಕವಾಗಿಯೂ ಕೇಳಬಹುದು.
ಅಂತಿಮ
ಕ್ಷಣಾದಲ್ಲಿ ಕೊಲೆಯ ರಹಸ್ಯ ಬಯಲಾದಾಗ
ನಿಜಕ್ಕೂ ಒಂದು ಕ್ಷಣಾ ದ್ಂಗಾಗುವ
ಪರಿಸ್ಥಿತಿ!
ಕಡೆಯದಾಗಿ ಹೇಳಬೇಕೆಂದರೆ ಇದು ತೀರಾ ಆಧುನಿಕ ಪರಿಕಲ್ಪನೆಯಾಗಿದ್ದು ಪ್ರೇಕ್ಷಕರ ಮನಸು ಮತ್ತು ಗಮನವನ್ನು ಹಿಡಿದಿಡುವ ಒಳ್ಳೆಯ ಚಿತ್ರವಾಗಿದೆ.''ಹಗ್ಗದ ಕೊನೆ'' ಒಂದು ವಿಭಿನ್ನ ಪ್ರಯತ್ನ.
ಕಡೆಯದಾಗಿ ಹೇಳಬೇಕೆಂದರೆ ಇದು ತೀರಾ ಆಧುನಿಕ ಪರಿಕಲ್ಪನೆಯಾಗಿದ್ದು ಪ್ರೇಕ್ಷಕರ ಮನಸು ಮತ್ತು ಗಮನವನ್ನು ಹಿಡಿದಿಡುವ ಒಳ್ಳೆಯ ಚಿತ್ರವಾಗಿದೆ.''ಹಗ್ಗದ ಕೊನೆ'' ಒಂದು ವಿಭಿನ್ನ ಪ್ರಯತ್ನ.
No comments:
Post a Comment