Saturday, June 20, 2015

ಅಂತಕರಣ ಕಲಕಿದಳು ಅರುಣಾ

ಇತ್ತೀಚೆಗೆ ನಮ್ಮ ಸ್ನೇಹಿತರು ಪ್ರಾರಂಭಿಸಿದ ಪತ್ರಿಕೆ 'ಸಿಂಹ ದ್ವನಿ' ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡ 42 ವರ್ಷಗಳ ಕಾಲ ಕೋಮಾದಲ್ಲಿದ್ದು ಇತ್ತೀಚೆಗೆ ಸಾವನ್ನಪ್ಪಿದ ದಾದಿ ಅರುಣಾ ಶಾನಭಾಗರ ಕುರಿತಾದ ನನ್ನ ಲೇಖನ

'Simha Shakthi'Kannada monthly



ಇದನ್ನು ಅತ್ಯಾಚಾರದ ಘೋರ ನರಕವೆನ್ನಬೇಕೋನರ್ಸ್ ಸೇವೆಯ ಪರಾಕಷ್ಠೆಯೆನ್ನಬೇಕೋ.. ತಿಳಿಯುತ್ತಿಲ್ಲ...
ಆಕೆ 42 ವರ್ಷಗಳಿಂದ ಮರಣಶಯ್ಯೆಯಲ್ಲಿದ್ದಳು. ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ ಅತ್ತ ಸಾಯಲೂ ಆಗದ ಇತ್ತ ಬದುಕಲೂ ಆಗದ ಸ್ಥಿತಿಯಲ್ಲಿ ನರಳುತ್ತಿದ್ದ ಅವಳ ಹೆಸರು ಅರುಣಾ ರಾಮಚಂದ್ರ ಶಾನಭಾಗ!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರ ಎನ್ನುವ ಪುಟ್ಟ ಊರಲ್ಲಿ ಜನಿಸಿದ ಅರುಣಾ ನೂರಾರು ಕನಸುಗಳನ್ನು ಹೊತ್ತು  ಮುಂಬೈಗೆ ಬಂದರು. ರೋಗಿಗಳ ಸೇವೆಯ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲಿನ ಕೆಇಎಂ ಆಸ್ಪತ್ರೆಯಲ್ಲಿ ನರ್ಸಿಂಗ್ ಟ್ರೈನಿಂಗ್ ಪಡೆದು, ಅಲ್ಲೇ ಕೆಲಸವನ್ನೂ ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಅದೇ ಆಸ್ಪತ್ರೆಯ ಕಿರಿಯ ವೈದ್ಯರೊಬ್ಬರು ಅರುಣಾರನ್ನ ಇಷ್ಟಪಡುತ್ತಾರೆ. ನಿಶ್ಚಿತಾರ್ಥ ಕೂಡ ಆಗುತ್ತೆ.

ಬಂದನೊಬ್ಬ ಕೀಚಕ
ಆದರೆ ಆದರ್ಶದ ಬದುಕಿನ ಸ್ವಪ್ನ ಕಟ್ಟಿಕೊಂಡಿದ್ದ ಅರುಣಾರ ಬಾಳಿನಲಿ ಕೀಚಕನೊಬ್ಬ ಪ್ರವೇಶಿಸುತ್ತಾನೆ.
ನರ್ಸ್ ವೃತ್ತಿಯಲ್ಲಿದ್ದ ಅರುಣಾರನ್ನು ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ನಾಯಿಗಳ ಪ್ರಯೋಗಾಲಯದ ಕೆಲಸಕ್ಕೆ ನೇಮಿಸಲಾಗುತ್ತದೆ. ಅಲ್ಲಿ ಅದಾಗಲೇ ತಾತ್ಕಾಲಿಕವಾಗಿ ನೇಮಕವಾಗಿದ್ದ ಸೋಹನ್ ಲಾಲ್ ಎನ್ನುವ ಸಹಾಯಕ ನಾಯಿಗಳನ್ನು ನಿರ್ದಯವಾಗಿ ಹಿಂಸಿಸುತ್ತಿದ್ದುದಲ್ಲದೆ ಅವುಗಳಿಗಾಗಿ ಮೀಸಲಾಗಿದ್ದ ಮಾಂಸವನ್ನೂ ಕದಿಯುತ್ತಿದ್ದನು. ಅದನ್ನು ಗಮನಿಸಿದ ಅರುಣಾ ಅವನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಮೇಲಿನ ಅಧಿಕಾರಿಗಳಿಗೆ ಹೇಳುವುದಾಗಿಯೂ ಎಚ್ಚರಿಸುತ್ತಾರೆ. ಇದೇ ವಿಚಾರದಲ್ಲಿ ಅವನಲ್ಲಿ ಅರುಣಾ ಬಗ್ಗೆ ಸೇಡಿನ ಭವನೆ ಮೂಡುತ್ತದೆ.

'' ದುರ್ದಿನ
ಅರುಣಾಗೆ ತಕ್ಕ ಶಾಸ್ತಿ ಮಾಡಲೇಬೇಕೆಂದು ಪಣದೊಟ್ಟ ಸೋಹನ್ ಲಾಲ್ 1973 ನವೆಂಬರ್ 27 ಸಂಜೆ ನಿರ್ಜನವಾದ ಪ್ರಯೋಗಾಲಯದಲ್ಲಿ ಕಾದು ಕುಳಿತನು. ನಾಯಿಗಳಿಗಾಗಿ ಇದ್ದ ಲೋಹದ ಸರಪಣಿಯನ್ನು ಕೈಯಲ್ಲಿ ಹಿಡಿದ್ದ ಆತನ ಮನದಲಿ ಇನ್ನೇನು ಕೆಲಸಕ್ಕೆ ಹಾಜರಾಗಲಿದ್ದ ಅರುಣಾರ ಬಗೆಗೆ ದ್ವೇಷದ ಕಿಚ್ಚು ಹತ್ತಿಕೊಂಡಿತ್ತು.
ಇದೆಲ್ಲಾ ಏನೂ ಅರಿಯದ ಅರುಣಾ ಎಂದಿನಂತೆ ಸಮಯಕ್ಕೆ ಸರಿಯಾಗಿ ಬರುತ್ತಾರೆ. ಅದೇ ತಕ್ಷಣ ಸೋಹನ್ ತನ್ನ ಕೈಯಲ್ಲಿನ ಸರಪಣಿಯಿಂದ ಅರುಣಾ ಕತ್ತನ್ನು ಬಿಗಿದು ಕೆಡವಿಕೊಂಡು ಒಂದು ಕೈಯಲ್ಲಿ ಸರಪಣಿ ಹಗಂಟು ಇನ್ನೊಂದರಲ್ಲಿ ಆಕೆಯ ಬಾಯನ್ನು ಮುಚ್ಚಿ ಇಲ್ಲೇನು ನಡೆಯುತ್ತಿದೆ ಎನ್ನುವುದು ಅರುಣಾರ ಗಮನಕ್ಕೆ ಬರುವ ಮುನ್ನವೇ ಆಕೆಯ ಮೇಲೆ ಬಲಾತ್ಕಾರವೆಸಗುತ್ತಾನೆ.

ಕರುಣಾಲಯದಲ್ಲಿ.....
ಅರ್ಧರಾತ್ರಿಯಲ್ಲಿ ಪ್ರಯೋಗಾಲಯದ ತೆರೆದ ಬಾಗಿಲು, ಉರಿವ ದೀಪವನ್ನು ಕಂಡು ಒಳಬಂದ ವಾರ್ಡ್ ಬಾಯ್ ಗೆ ಅರುಣಾ ಪ್ರಜ್ಜ ಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಾಣುತ್ತದೆ. ನೆಲಕ್ಕೆ ಬಲವಾಗಿ ಅಪ್ಪಳಿಸಿದ ಕಾರಣ ಅವಳ ತಲೆಯಿಂದ ಸಾಕಷ್ಟು ರಕ್ತ ಸೋರಿ ಹೋಗಿರುತ್ತದೆ ಕತ್ತಿಗೆ ಬಲವಾಗಿ ಸರಪಣಿ ಬಿಗಿದದ್ದರಿಂದ ಮೆದುಳಿಗೆ ಪ್ರಾಣವಾಯುವಿನ ಪೂರೈಕೆಯೂ ಸ್ಥಗಿತಗೊಂಡು  ಮೆದುಳು ನಿಷ್ಕ್ರಿಯವಾಗಿರುತ್ತದೆ.
ಅಂತಹಾ ದಾರುಣ ಸ್ಥಿತಿಯಲ್ಲಿದ್ದ ಅರುಣಾರನ್ನು ಕೆಇಎಂ ಆಸ್ಪತ್ರೆ ಸಿಬ್ಬಂದಿಗಳೇ ಆರೈಕೆ ಮಾಡುತ್ತಾರೆ. ಅದೂ ಒಂದೆರಡು ದಿನಗಳಲ್ಲ, ತಿಂಗಳಲ್ಲ....ಬರೋಬ್ಬರಿ 42 ವರ್ಷಗಳು! ಮೊದಮೊದಲು ಅವರೊಂದಿಗೆ ಮದುವೆ ನಿಶ್ಚಯವಾಗಿದ್ದ ಗೆಳೆಯ, ಮನೆಯವರು ಬಂಧುಗಳು ಪ್ರತಿದಿನವೆನ್ನುವಂತೆ ಬರುತ್ತಿದ್ದರು. ಕಾಲ ಸರಿದಂತೆ ಅವರ ಬರುವಿಕೆಯೂ ಕ್ರಮೇಣ ಕಡಿಮೆಯಾಗಿ ನಂತರದಲ್ಲಿ  ನಿಂತೇ ಹೋಗುತ್ತದೆ. ಸೋಹನ್ ಲಾಲ್ ವಿರುದ್ಧ ಹಲ್ಲೆ ಮತ್ತು ದರೋಡೆ ಪ್ರಕರಣ ದಾಖಲಾಗಿ ಕೇವಲ ಏಳು ವರ್ಷ ಜೈಲುವಾಸದ ಶಿಕ್ಷೆಯಾಗುತ್ತದೆ. ಶಿಕ್ಷೆ ಪೂರ್ಣಗೊಳಿಸಿ ಜೈಲಿಂದ ಬಿಡುಗಡೆಯಾಯಾದ ಆತ ಕೆಲ ದಿನಗಳ ಬಳಿಕ ಎಲ್ಲಿದ್ದನೆನ್ನುವುದೂ ತಿಳಿಯದಾಗುತ್ತದೆ.

ದಾದಿಯರ ಪ್ರೀತಿ
ಮುಂಬಯಿಯ ಕೆಇಎಂ ಆಸ್ಪತ್ರೆಯ ದಾದಿಯರ ಪ್ರೀತಿಯಲ್ಲಿ ಕುಂದು ಬರಲಿಲ್ಲ ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿರುವ ಒಂದೇ ಹಾಸಿಗೆಯ 4 ವಾರ್ಡ್ಗೆ ಅಂಟಿಕೊಂಡಿರುವ ಕೋಣೆ ಆಕೆಯ ಪ್ರಪಂಚವಾಯಿತು. ಹಾಸಿಗೆಯಲ್ಲಿದ್ದ ಚಂದದ ಹೆಣ್ಣು ನಿಧಾನವಾಗಿ ಸತ್ವಗುಂದಿದ ಸೂಕ್ಷ್ಮದೇಹಿಯಾಯಿತು. ಆದರೆ ನರ್ಸುಗಳಿಗೆಲ್ಲಾ ವರ ಅರುಣಾ ತಮ್ಮ ಹೊಟ್ಟೆಯ ಮಗುವೆನ್ನುವಂತಾ ಪ್ರೀತಿ ಇರುತ್ತದೆ ಕೋಣೆಯಲ್ಲಿನ ಸ್ಟೂಲ್ ಮೇಲೆ ಅವಳಿಷ್ಟದ ತಾರೆ ಜಯಾ ಬಾಧುರಿ ಚಿತ್ರವಿಡುತ್ತಾರೆ.ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಪ್ರತಿನಿತ್ಯ ಬಂದು ಹೊಸ ಹೊಸ ಹೂವನ್ನು ಇಟ್ಟು ಹೋಗುತ್ತಾರೆ.
ನರ್ಸುಗಳ ಬ್ಯಾಚ್ ಗಳು ಬದಲಾಗುತ್ತದೆ. ವೈದ್ಯರುಗಳು ನಿವೃತ್ತ್ರಾಗಿ ಅವರ ಜಾಗಕ್ಕೆ ಹೊಸಬರು ಬರುತ್ತಾರೆ ಆದರೆ ಅರುಣಾರ ಬಗೆಗಿದ್ದ ಕಾಳಜಿ ಕುಂದುವುದಿಲ್ಲ. ಸದ್ಗುರು ವಾಮನರಾವ್ ಪೈ ಅವರ ಭಕ್ತಿಗೀತೆಗಳ ಸಂಗೀತಕ್ಕೆ ಸ್ಪಂದಿಸುತ್ತಿದ್ದ ಅರುಣಾಗೆ 2010 ರಿಂದೀಚೆಗೆ ಆಹಾರವನ್ನು ನಳಿಕೆಗಳ ಮೂಲಕವೇ ನೀಡಬೇಕಾಯಿತು. ತಲೆ, ಬಾಚಿದ್ದು ಸ್ವಚ್ಛಗೊಳಿಸಿದ್ದು ಎಲ್ಲವೂ ಸರದಿಯ ಮೇಲೆ ಶುಶ್ರೂಷಕಿಯರೇ ಮಾಡಿದರು ವರ್ಷಗಳ ಕಾಲ ಹಾಸಿಗೆಯಲ್ಲಿ ಮಲಗಿದ್ದ ಅರುಣಾರ ಬೆನ್ನಿನಲ್ಲಿ ಒಂದೇ ಒಂದು ಹುಣ್ಣೂ ಮೂಡಲು ಬಿಡದ ದಾದಿಯರ ಸೇವೆಗೆ ಪ್ರಶಂಸಿಸದಿರಲಾದೀತೆ?
ಪ್ರತಿ ವರ್ಷ ಹೊಸ ನರ್ಸ್ಗಳ ತಂಡ ಬಂದಾಗ ಅರುಣಾ ಬಳಿ ಕರೆದೊಯ್ದು ಆಕೆಯನ್ನು ಪರಿಚಿಯಿಸಿ, ಆಕೆಯನ್ನು ಪರಿಸ್ಥಿತಿಗೆ ದೂಡಿದ ಘಟನೆಯನ್ನು ವಿವರಿಸಿ ಆಕೆ ನಮ್ಮೊಳಗೊಬ್ಬಳು ಎಂಬುದನ್ನು ಮನವರಿಕೆ ಮಾಡಲಾಗುತ್ತಿತ್ತು.ಆಕೆಯ ಹುಟ್ಟಿದ ಹಬ್ಬವನ್ನೂ ಆಚರಿಸಲಾಗುತ್ತಿತ್ತು!ಇದೆಲ್ಲವೂ ಅಲ್ಲಿನ ದ್ದಿಯರು ಅರುಣಾ ಬಗ್ಗೆ ಇಟ್ಟಿದ್ದ ಪ್ರೀತಿ, ಗೌರವಕ್ಕೆ ಸಾಕ್ಷಿ.

ದಯಾಮರಣದ ಪ್ರಶ್ನೆ
My article about Aruna Shanabhaga
ಅರುಣಾಗೆ ಮಾತನಾಡುವ ಚೇತನವಿರಲಿಲ. ಅವರು ಕೋಮಾದಲ್ಲಿದ್ದು ಕಾಲು ಶತಮಾನವಾಗಿತ್ತು. ಇಂತಹಾ ದಯನೀಯ ಸ್ಥಿತಿಯಲ್ಲಿರುವ ಆಕೆಗೆ ದಯಾಮರಣ ಕೊಡಬೇಕೆಂದು ಕೋರಿ ಪಿಂಕಿ ವಿರಾನಿ ಎನ್ನುವ ಪತ್ರಕರ್ತೆ 2010 ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ದಯಾಮರಣ ನೀಡಲು ನಿರಾಕರಿಸಿದ್ದ ಕೋರ್ಟ್ ಆಕೆಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನಷ್ಟೆ ನಿಲ್ಲಿಸಲು ಅನುಮತಿಸಿತ್ತು. ಅದರಂತೆ ಕಳೆದ 4 ವರ್ಷಗಳಿಂದ ಅವರಿಗೆ ಯಾವ ಚಿಕಿತ್ಸೆಯನ್ನೂ ನೀಡುತ್ತಿರಲಿಲ್ಲ. ಆದರೆ ಆಸ್ಪತ್ರೆಯ ದಾದಿಯರು ಮಾತ್ರ ಆರೈಕೆ ಮಾಡುವುದು ನಿಲ್ಲಿಸಲಿಲ್ಲ.
ವಿಚಾರವೇನೆಂದರೆ ಅರುಣಾಗೆ ದಯಾಮರಣ ನೀಡಬೇಕೆನ್ನುವ ಕೂಗು ಬಲವಾಗಿ ಕೇಳಬಂದಾಗ ಕೆಇಎಂ ಆಸ್ಪತ್ರೆಯ ನರ್ಸುಗಳು, ವೈದ್ಯರೂ ಅದನ್ನು ಬಲವಾಗಿ ವಿರೋಧಿಸಿದ್ದರು.ಅರುಣಾ ಸಾವಿನ ಬಳಿಕ ಮತ್ತೆ ದಯಾಮರಣದ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ದಯಾಮರಣ ಅಥವಾ ಇಚ್ಚಾಮರಣ ಬೇಕೆ? ಬೇದವೆ? ಎನ್ನುವ ಪ್ರಶ್ನೆ ಮೂಡಿದೆ. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಇನ್ನೂ ಕೆಲವರು ದಯಾಮರಣಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರುತ್ತಲೂ ಇದ್ದಾರೆ. ಏನಾದರೂ ದೇಶದಲ್ಲಿ ದಯಾಮರಣ ಕುರಿತಾದ ಪ್ರಶ್ನೆಯನ್ನು ಮೊದಲ ಬಾರಿಗೆ ಹುಟ್ಟುಹಾಕಿದ ಪ್ರಕರಣ - ಅರುಣಾ ಶಾನಭಗ ಪ್ರಕರಣಾವೆನ್ನುವುದರಲ್ಲಿ ಅನುಮಾನವಿಲ್ಲ.

ಅರುಣಾ ಪುಸ್ತಕ, ಚಲನಚಿತ್ರ
ಮುಂಬೈ ಮೂಲದ ಪತ್ರಕತರ್ತೆ ಪಿಂಕಿ ಬವಿರಾನಿ ಅರುಣಾ ಶಾನಭಾಗರ ಜೀವನ ಕುರಿತ 'ಅರುಣಾಸ್ ಸ್ಟೋರಿ' ಪುಸ್ತಕವನ್ನು ಹೊರತಂದಿದ್ದರು.1998 ರಲ್ಲಿ ಪ್ರಕತಗೊಂಡಿದ್ದ ಪುಸ್ತಕ ಕನ್ನದ, ಹಿಂದಿ, ಮರಾಠಿಯಲ್ಲಿಯೂ ಬಂದಿತ್ತು. ಅರುಣಾ ಬದುಕನ್ನು ಆಧರಿಸಿ 'ಮರೆಯಂ ಪೈಯಂಬೋಲ್' ಮಲಯಾಳಂ ಬಾಷೆಯ  ಚಿತ್ರವೂ ನಿರ್ಮಾಣವಾಗಿತ್ತು.

ಕೀಚಕ ಎಲ್ಲಿ?
ಅರುಣಾ ಶಾನ್ಭಾಗ್ ಮೇಲಿನ ಹಲ್ಲೆ ಆರೋಪಿಯಾಗಿದ್ದ ಪಾತಕಿ ಸೋಹನ್ಲಾಲ್ ಉತ್ತರ ಪ್ರದೇಶದ ಘಾಜಿಯಾಬಾದ್ ಪಾರ್ಪಾ ಎಂಬ ಹಳ್ಳಿಯಲ್ಲಿ ವ್ಯಕ್ತಿ ಕಾರ್ಮಿಕನಾಗಿ ಕೂಲಿ ಕೆಲಸ ಮಾಡಿಕೊಂಡಿದ್ದನು.ತಾನು ಮಾಡಿದ ಕೃತ್ಯಕ್ಕೆ ಅವನಿಗೆ ಪಶ್ಚಾತ್ತಾಪವಾಗಿದೆ "ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ, ಎಲ್ಲವೂ ಆಗಿದ್ದು ಕೋಪದಿಂದ.ನೆನಪುಗಳಿಂದ ನನಗೂ ಸಾಕಾಗಿಹೋಗಿದೆ. ನಾನು ಈಗಲೇ ಸಾಯಬೇಕು...." ಇದು ಆತನ ಮನದ ಮಾತುಗಳು.

ಅರುಣಾ ನೆನಪು ಅಮರ
ವಿನಾಕಾರಣ ಒಂದು ಜೀವಹಾನಿಯಾಗಿದೆ. ಚೂಟಿಯಾಗಿದ್ದು ಕೆಲಸ ಮಾಡುವ  ಸ್ಥಳದಲ್ಲಿ ತನ್ನ ಚುರುಕಾದ ನಡತೆ, ನೇರ ಮಾತುಗಳಿಂದ 'ಚಟಕ್ ಚಾಂದಿನಿ' (ಚುರುಗುಡುವ ಬೆಳದಿಂಗಳು) ಎಂದು ಕರೆಸಿಕೊಂಡಿದ್ದ ಅರುಣಾ ಶಾನಭಾಗ  ಇದೀಗ ತಮ್ಮ 66 ನೇ ವಯಸ್ಸಿನಲ್ಲಿ ಸಹಜ ಸಾವನ್ನು ಕಂಡಿದ್ದಾರೆ.

ಅತ್ಯಾಚಾರಕ್ಕೊಳಗಾಗಿ ಜೀವಚ್ಚವವಾಗಿದ್ದ ಅರುಣಾಗೆ  ಕಡೆಗೂ ಭಗವಂತನೇ ಮರಣವನ್ನು ಕರುಣಿಸಿದ. ಅರುಣಾ ಆತ್ಮಕ್ಕೆ ಶಾಂತಿ ಸಮಾಧಾನಗಳು ದೊರೆಯಲಿ, ಅವರನ್ನು ಇಷ್ಟು ವರ್ಷ ಶುಶ್ರೂಷೆ ಮಾಡಿದ ದಾದಿಯರ ಸೇವಾ ಮನೋಭಾವ ಮುಂದಿನ ಪೀಳಿಗೆಯವರಿಗೆಲ್ಲಾ ಮಾದರಿಯಾಗಿರುತ್ತದೆ. ಮೂಲಕ ಅರುಣಾ ಪ್ರತಿಯೊಬ್ಬರ ಮನದಲ್ಲಿಯೂ ನೆಲೆಸಿರುತ್ತಾರೆ ಎನ್ನಬಹೂದು

No comments:

Post a Comment