Saturday, September 12, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 57

ಇಡಗುಂಜಿ (Idagunji)

Lord Sri Ganesha, Idagunji, Honnavara, UK



ಕರ್ನಾಟಕದ  ಕರಾವಳಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ಕೇವಲ 14 ಕಿ.ಮೀ ಅಂತರದಲ್ಲಿದೆ ಇಡಗುಂಜಿ. ಶರಾವತಿ ನದಿಯ ತಟದಲ್ಲಿರುವ ಈ ಕ್ಷೇತ್ರಕ್ಕೆ  ಮುಂಚೆ ಇಡಾಕುಂಜ ಎಂದು ಕರೆಯಲಾಗುತ್ತಿತ್ತು. ಇಡಾ ಎಂದರೆ ಆನೆ, ಕುಂಜ ಎಂದರೆ ಸಸ್ಯರಾಶಿ.  ದಟ್ಟವಾದ ಗೋಂಡಾರಣ್ಯದ ಮಧ್ಯದಲ್ಲಿರುವ ಈ ಪ್ರದೇಶ ನಂತರ ಇಡಗುಂಜಿಯಾಗಿ ರೂಢಿಯಲ್ಲಿದೆ.   ಎಲ್ಲಾ ದೇವರುಗಳಲ್ಲಿ  ಗಣೇಶನೇ ಪ್ರಥಮ ಪೂಜ್ಯನು. ವಿಘ್ನನಿವಾರಕ ನೆಲೆಸಿರುವ ಈ ಕ್ಷೇತ್ರವು ಎಲ್ಲಾ ಸಮುದಾಯದವರಿಗೂ   ಪ್ರಮುಖ ಯಾತ್ರಾಸ್ಥಳವಾಗಿದ್ದು  ನಂಬಿ ಬಂದ ಭಕ್ತರ ಎಲ್ಲಾ  ಇಷ್ಟಾರ್ಥಗಳನ್ನು ಪೂರೈಸಲು  ಗಣೇಶ  ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ. ಸಂಕಷ್ಟಿ, ವಿನಾಯಕ ಚೌತಿ, ರಥಸಪ್ತಮಿ  ಇನ್ನಿತರ   ಹಬ್ಬ ಹರಿದಿನಗಳಲ್ಲಿ  ಮತ್ತು ವಿಶೇಷ  ದಿನಗಳಲ್ಲಿ  ಇಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ದೇವಾಲಯದಲ್ಲಿ  ಪ್ರತೀ ವರ್ಷ ರಥ ಸಪ್ತಮಿಯಂದು ವಿಶೇಷ ಜಾತ್ರೆ ನಡೆಯುತ್ತದೆ.   ವರ್ಷದಲ್ಲಿ ಒಂದು ದಶಲಕ್ಷ ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾರೆ.  


***

Lord Sri Ganesha temple, Idagunji, Honnavara, UK
ದ್ವಾಪರ  ಯುಗದ ಅಂತ್ಯದಲ್ಲಿ ಅಂದರೆ ಕಲಿಯುಗದ ಆರಂಭದಲ್ಲಿ  ಭೂಮಿಯ ಮೇಲಿರುವ ರಾಕ್ಷಸರನ್ನು ಸಂಹಾರ ಮಾಡಲೆಂದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ಅರಣ್ಯಕ್ಕೆ  ಬಂದರು. ಸಾಧು ಸಂತರಿಗೆ  ಅವರ ಯಜ್ಞ  ಯಾಗಕ್ಕೆ   ಸಹಾಯವಾಗಲೆಂದು  ಚಕ್ರತೀರ್ಥ ಮತ್ತು ಬ್ರಹ್ಮತೀರ್ಥ ಎಂಬ ಎರಡು  ಹೊಂಡಗಳನ್ನು  ಇಲ್ಲಿ  ನಿರ್ಮಿಸಿದ್ದರು.  ಕೆಲ ಕಾಲದ ನಂತರ  ರಾಕ್ಷಸರ ತೊಂದರೆ ಹೆಚ್ಚಾದಾಗ ವಾಲಖೀಲ್ಯ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಬೇಡಿಕೊಂಡಾಗ  ನಾರದರು  ಗಣೇಶನ ತಾಯಿ ಪಾರ್ವತಿಯ ಬಳಿ ಹೋಗಿ ಬಾಲ ಗಣೇಶನನ್ನು  ಭೂಲೋಕಕ್ಕೆ ಕಳುಹಿಸಿಕೊಡುವಂತೆ  ಬೇಡಿಕೊಂಡರು.  ಗಣೇಶನನ್ನು  ಕರೆತಂದು ಮುನಿಗಳ ಮುಖಾಂತರ ಈ ಕ್ಷೇತ್ರದಲ್ಲಿ    ನಂತರ ಗಣೇಶನ ಆಶೀರ್ವಾದದಿಂದ ವಾಲಖೀಲ್ಯ  ಮುನಿಗಳು ಇಲ್ಲಿ  ತಪ್ಪಸ್ಸಾಚರಿಸಿ ಸಿದ್ಧಿ  ಪಡೆದುಕೊಂಡರು. ನಾರದರು ಇಲ್ಲಿ  ದೇವತೀರ್ಥವೆಂಬ ಇನ್ನೊಂದು ಹೊಂಡವನ್ನೂ ನಿರ್ಮಿಸಿದರು 

No comments:

Post a Comment