Saturday, September 26, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 58

ಮೈಸೂರು (Mysore)

ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು 'ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ' ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು  ''ಅರಮನೆಗಳ ನಗರ'' ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ. ಜತೆಗೆ ದೇಶದ ಅತ್ಯಂತ ಸ್ವಚ್ಚ ನಗರವೆನ್ನುವ ಕೀರ್ತಿಗೂ ಭಾಜನವಾಗಿದೆ. 

***


ಹಿಂದೆ ಮೈಸೂರಿಗೆ ಮಹಿಷಪುರ ಎಂದು ಕರೆಯಲಾಗುತ್ತಿತ್ತು. ಮಹಿಷಾಸುರನೆಂಬ ರಾಕ್ಷಸ ತನ್ನ ದುರ್ವರ್ತನೆಯಿಂದ ಋಷಿಮುನಿಗಳಿಗೆ ತೊಂದರೆ ನೀಡುತ್ತಿದ್ದ. ಆತನ ಸಂಹಾರ ಸುಲಭ ಸಾಧ್ಯವಾಗಿರುವುದಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರಾದಿ ಎಲ್ಲ ದೇವತೆಗಳು ತಮ್ಮ ಶಕ್ತಿಯನ್ನು ಧಾರೆ ಎರೆದು ಹೊಸ ಶಕ್ತಿಯನ್ನು ರೂಪಿಸುತ್ತಾರೆ. ಹಾಗೆ ರೂಪ ತಾಳಿದ ಮಹಾಮಾತೆಯೇ ಚಾಮುಂಡೇಶ್ವರಿ.
ಹೀಗೆ ಅವತರಿಸಿದ ತಾಯಿ ಮನುಕುಲದ ಕಲ್ಯಾಣಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ವಿವಿಧ ರೂಪದಲ್ಲಿ ಮಹಿಷಾಸುರ, ಚಂಡ-ಮುಂಡ, ಶುಂಭ-ನಿಶುಂಭ ಮುಂತಾದ ರಾಕ್ಷಸರನ್ನು ಸಂಹರಿಸಿ, ಮಹಾಬಲಗಿರಿಯಲ್ಲಿ (ಚಾಮುಂಡಿಬೆಟ್ಟ) ನೆಲೆಸುತ್ತಾಳೆ.
ಚಾಮುಂಡೇಶ್ವರಿಯಿಂದ ಸಂಹಾರಗೊಂಡ ಮಹಿಷಾಸುರ ರಾಕ್ಷಸಜನ್ಮವನ್ನು ಅಂತ್ಯಗೊಳಿಸಿ ತನಗೆ ಮುಕ್ತಿ ನೀಡಿದ ದೇವಿಯಲ್ಲಿ ತನಗೂ ಭಕ್ತರಿಂದ ಪೂಜೆ ಸಲ್ಲಬೇಕೆಂದು ಪ್ರಾರ್ಥನೆ ಮಾಡುತ್ತಾನೆ. ಅದಕ್ಕೆ ದೇವಿಯು; ‘ವರ್ಷಕ್ಕೊಮ್ಮೆ ನನ್ನ ವರ್ಧಂತಿಯ ಮರುದಿನ ನಿನಗೆ ಭಕ್ತರು ಪೂಜೆ ಸಲ್ಲಿಸಲಿ’ ಎಂದು ಹೇಳುತ್ತಾಳೆ. ಅದರಂತೆ ಪ್ರತಿ ಆಷಾಢಮಾಸದಲ್ಲಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಜರುಗಿದ ಮರುದಿನ ಮಹಿಷಾಸುರನಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ, ಬಗೆಬಗೆಯ ಭಕ್ಷ್ಯೋಜ್ಯಗಳನ್ನು ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದೆ.

***

ದುರ್ಗೆಯು ಚಂಡ ಮತ್ತು ಮುಂಡರ ವಿರುದ್ಧ ಯುದ್ಧ ಮಾಡುವಾಗ, ಕೋಪೋಕ್ತಳಾಗಿ ಭಯಾನಕ ಕಾಳಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ದೇವರ ಈ ಇಬ್ಬರು ಶತ್ರುಗಳ ತಲೆ ಕಡಿದು, ಆ ತಲೆಗಳನ್ನು ದೇವಿ ಮಾತೆಗೆ ಅರ್ಪಿಸುತ್ತಾಳೆ. ಕಾಳಿಯ ಈ ಪರಾಕ್ರಮ ಅವಳಿಗೆ ಚಾಮುಂಡಿ ಎಂಬ ಹೆಸರನ್ನು ತಂದಿತು 
ಅಸುರ ರಕ್ತಬೀಜ'ತನ್ನ ಒಂದೇ ಒಂದು ಹನಿ ರಕ್ತವು ನೆಲಕ್ಕೆ ಬಿದ್ದರೆ ಅವರಿಂದ ಅಸಂಖ್ಯಾತ ಅಸುರರನ್ನು ಹುಟ್ಟಿಸುವಶಕ್ತಿ' ಹೊಂದಿದ್ದನು. ಇವನನ್ನು ಕೊಲ್ಲಲು ಕಾಳಿದೇವಿಯನ್ನು ಕರೆಯಿಸಲಾಯಿತು. ದೇವಿ ಮಹಾತ್ಮೆಯ ಪ್ರಕಾರ, ಚಾಮುಂಡಿಯು ರಕ್ತಬೀಜನಿಂದ ಹೊರಬಂದ ಎಲ್ಲ ರಕ್ತವನ್ನು ತನ್ನ ದೊಡ್ಡ ನಾಲಿಗೆಯಿಂದ ನೆಕ್ಕಿ ಕುಡಿದಳು. ತನ್ನ ಬಾಯಿಯನ್ನು ಪಾತಾಳ ಮುಟ್ಟುವಂತೆ ಅಗಲವಾಗಿ ತೆರೆದು ರಕ್ತಬೀಜ ಮತ್ತು ಅವನಿಂದ ಉತ್ಪತ್ತಿಯಾದಅಸುರನನ್ನು ತನ್ನ ಬಾಯಿಯಲ್ಲಿ ಹಾಕಿಕೊಂಡಳು.

***

ಉಜ್ಜಯನಿ ರಾಜನಾದ ಬಿಜ್ಜಲರಾಯನಿಗೆ ಏಳು ಹೆಣ್ಣು ಮಕ್ಕಳಿದ್ದು ಅವರಲ್ಲಿ ಚಾಮುಂಡಿ ಒಬ್ಬಳು. ಈ ಅಕ್ಕ ತಂಗಿಯರು ಯಾವುದೋ ಕಾರಣಕ್ಕಾಗಿ ತಮ್ಮಲ್ಲಿಯೇ ಜಗಳಾಡಿ ಉತ್ತರದ ಕಡೆ ಹೊದರು. ಆವಾಗ ಚಾಮುಂಡಿಯು ಮಹಿಷಾ ಮಂಡಳ ಎಂಬ ಸಮೃದ್ಧ ರಾಜ್ಯದಲ್ಲಿ ನೆಲೆಯೂರಲು ನಿರ್ಧರಿಸಿದಳು. ಉತ್ತನಹಳ್ಳಿಯ ತನ್ನ ತಂಗಿ ಉರಿಕಾಂತಿಯ ಸಹಾಯದಿಂದ, ಚಾಮುಂಡಿ ಮಹಿಷನನನ್ನು ವಧಿಸಿ, 'ಮಹಿಷಮರ್ದಿನಿ' ಎಂದು ಪ್ರಸಿದ್ಧಳಾದಳು.

***

ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.
ಮಹಿಷನನ್ನು ಕೊಂದ ನಂತರ ಚಾಮುಂಡಿ ಯುದ್ದದಿಂದಾದ ಶರೀರದ ಆಯಾಸವನ್ನು ನೀಗಿಸಿ ಕೊಳ್ಳಲು, ನಂಜನಗೂಡಿನ ಕಪಿಲಾ ನದಿ ತಟಕ್ಕೆ ಬಂದು, ಮಧ್ಯರಾತ್ರಿಯಲ್ಲಿ ಸ್ನಾನ ಮಾಡಿ, ತನ್ನ ತಲೆಗೂದಲನ್ನು ಹರವಿ ಒಣಗಿಸುತ್ತಾ ಇರಬೇಕಾದರೆ, ರಾತ್ರಿ ಸಂಚಾರಕ್ಕೆ ಬಂದ ಶಿವ, ಈಕೆಯಲ್ಲಿ ಅನುರಕ್ತನಾಗುತ್ತಾನೆ. ಶಿವನಿಗೆ ವಿವಾಹವಾಗಿರುವುದರ ಅರಿವಿರದ ಚಾಮುಂಡಿ ತಾನೂ ಕೂಡ ಶಿವನಲ್ಲಿ ಅನುರಕ್ತಳಾಗುತ್ತಾಳೆ.
ತದ ನಂತರ ಈ ಸುದ್ದಿ ಶಿವನ ಧರ್ಮಪತ್ನೀಯಾದ ಪಾರ್ವತಿಗೆ ಗೊತ್ತಾಗಿ ಅವಳು ಚಾಮುಂಡಿಯೊಂದಿಗೆ ಜಗಳವಾಡುತ್ತಾಳೆ. ಪಾರ್ವತಿಯ ಮಾತಿನಿಂದ ಮುಖಭಂಗಗೊಂಡ ಚಾಮುಂಡಿ ಮೈಸೂರಿಗೆ ಬರುವ ಹಾದಿಯಲ್ಲಿ ಆಕಸ್ಮಿಕವಾಗಿ ಸುತ್ತೂರಿನೆಡೆಗೆ ಸಾಗುತ್ತಿದ್ದ ಮಹದೇಶ್ವರನ ಬಳಿ ಹೋಗಿ ಪ್ರೇಮಭಿಕ್ಷೆ ಬೇಡುತ್ತಾಳೆ.ಇದರಿಂದ ಕಂಗಾಲಾದ ಮಹದೇಶ್ವರ ಏನೊಂದು ಮಾತನಾಡದೆ ಚಾಮುಂಡಿಯಿಂದ ತಪ್ಪಿಸಿಕೊಳ್ಳಲು ಬಿರಬಿರನೆ ನಡೆದು ಹೋಗುತ್ತಾನೆ. ಪಟ್ಟು ಬಿಡದ ಚಾಮುಂಡಿಯು ಆತನನ್ನು ಹಿಂಬಾಲಿಸಿದಾಗ, ಮಹದೇಶ್ವರ ಆಕೆಯಿಂದ ತಪ್ಪಿಸಿಕೊಳ್ಳಲು ಎಪ್ಪತ್ತೇಳು ಮಲೆಯಲ್ಲಿ ನೆಲೆಸಿದನಂತೆ. ನಂತರ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿದಳಂತೆ. ಇವಳನ್ನು ಸಿಂಹವಾಹಿನಿಯೆಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ.
ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿಯ ಜಯಂತ್ಯೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.ಮೈಸೂರು ದಸರಾ ಸೇಎರಿದಂತೆ ದಿನನಿತ್ಯವೂ ಸಾವಿರ ಸಂಖ್ಯೆಯೆ ಭಕ್ತಾದಿಗಳು ತಾಯಿಯ ದರ್ಶನ ಪಡೆದು ಪುನೀತರಾಗುತ್ತಾರೆ.

No comments:

Post a Comment