Sunday, October 18, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 60

ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ
(Bhagandeshwar and Thalakaveri)

ಕರ್ನಾಟಕದ ಸ್ವಿಜರ್ ಲ್ಯಾಂಡ್ ಎಂದು ಕರೆಯುವ ಕೊಡಗಿನಲ್ಲಿ ಹಲವಾರು ಪುಣ್ಯ ಹಾಗೂ ಪ್ರವಾಸಿ ಸ್ಧಳಗಳಿವೆ. ಅಂತಹ ಪುಣ್ಯ ಸ್ಧಳಗಳಲ್ಲಿ ಒಂದು ಕೊಡಗಿನ ತಲ ಕಾವೇರಿ. ಕೋಡಗಿನ ಮುಖ್ಯ ಪಟ್ಟಣ ಮಡಿಕೇರಿಯಿಂದ 48 ಕಿ. ಮೀ. ದೂರದಲ್ಲಿರುವ ಈ ಪ್ರದೇಶ ಮೂರು ರಾಜ್ಯಗಳಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಧಳ. ಕರ್ನಾಟಕ , ತಮಿಳುನಾಡು , ಕೇರಳ ರಾಜ್ಯಗಳಿಗೆ ನೀರಿನ ಆಶ್ರಯ ನೀಡಿರುವ ಕಾವೇರಿ ಉಗಮ ಗೋಳ್ಳವುದು ತಲಕಾವೇರಿಯಲ್ಲಿ. ಪ್ರಕೃತಿಯ ರಮ್ಯ ನೋಟದ ನಡುವೆ ಭಕ್ತಿ ಭಾವವನ್ನು ಉಂಟುಮಾಡುವ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ ಕಾವೇರಿ ತೀರ್ಥೋದ್ಭವದ ವೇಳೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

Goddess Cauveri at Thalakaveri, 

***
ಪೂರ್ವಕಾಲದಲ್ಲಿ ಕವೇರನೆಂಬ ಬ್ರಾಹ್ಮಣೋತ್ತಮನು ಬ್ರಹ್ಮಗಿರಿಯಲ್ಲಿ ವಾಸಿಸಿಕೊಂಡಿದ್ದು ತನಗೆ ಸಂತತಿಯಾಗಬೇಕೆಂದು ಬಯಸಿ ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದನು. ವಿಪ್ರೋತ್ತಮನ ತಪಸ್ಸಿಗೆ ಒಲಿದು ಬ್ರಹ್ಮದೇವನು ಪ್ರತ್ಯಕ್ಷನಾಗಿ 'ನೀನು ಪೂರ್ವಕಾಲದಲ್ಲಿ ಪುತ್ರಸಂತಾನ ಪ್ರಾಪ್ತಿಯಾಗಲು ಬೇಕಾದ ಧರ್ಮವನ್ನು ಮಾಡಿರುವುದಿಲ್ಲ ಹಾಗಾಗಿ ನಿನಗೆ ಲೋಪಾಮುದ್ರೆಯೆಂಬ ನಾಮಾಂಕಿತವನ್ನೊಳಗೊಂಡ ನನ್ನ ಮಾನಸಪುತ್ರಿಯನ್ನು ಮಗಳಾಗಿ ನೀಡುವೆನು' ಎಂದು ಹೇಳಿ ಕುಮಾರಿಯನ್ನು ಪುತ್ರಿಯಾಗಿ ಸ್ವೀಕರಿಸುವಂತೆ ಆಜ್ಞೆ ನೀಡಿದನು. ಅನುಸಾರವಾಗಿ ಕವೇರನು ಲೋಪಾಮುದ್ರೆಯನ್ನು ಸಂತೋಷದಿಂದ ಸ್ವೀಕರಿಸಿ ಅನೇಕ ವಿಧದಲ್ಲಿ ದಿವ್ಯ ಕುಮಾರಿಯನ್ನು ಸ್ತುತಿಸಿ ಕೊಂಡಾಡಿದನು. ದೇವದಾನವರು ಕ್ಷೀರಸಮುದ್ರವನ್ನು ಮಥನ ಮಾಡಿದಾಗ ಉತ್ಪತ್ತಿಯಾದ ಅಮೃತವನ್ನು ಅಸುರರು ಅಪಹರಿಸಿದರು. ಅದನ್ನು ಕೈವಶ ಮಾಡಿಕೊಳ್ಳಲು ದೇವದೇವತೆಗಳ ಪರವಾಗಿ ವಿಷ್ಣು ಅಂಶದಿಂದ ಹುಟ್ಟಿದ ಮೋಹಿನಿಯಂತೆಯೇ ಲಕ್ಷ್ಮಿದೇವಿಯ ಅಂಶದಿಂದ ಹುಟ್ಟಿದವಳೇ ಶ್ರೀ ಲೋಪಾಮುದ್ರೆ. ನಂತರ ಅವಳನ್ನು ಶ್ರೀ ಹರಿಯು ಬ್ರಹ್ಮದೇವನಿಗೆ ಆಶೀರ್ವಾದಪೂರ್ವಕವಾಗಿ ನೀಡಿ ಮಾನಸಪುತ್ರಿಯಾಗಿ ಸ್ವೀಕರಿಸೆಂದನು. ಹೀಗೆ ದಿವ್ಯಾಂಶ ಸಂಭೂತಳಾದ ಶ್ರೀ ಲೋಪಾಮುದ್ರೆಯ ದಿವ್ಯ ತೇಜಸ್ಸು-ಯೋಗ್ಯತೆಗಳನ್ನು ಕಂಡು ತಪೋಘನನಾದ ಕವೇರನು ಆಕೆಯನ್ನು ಪುನಃಪುನಃ ಸ್ತುತಿಸಿದನು. ಜಗತ್ತಿನ ಸಮಸ್ತ ಪ್ರಾಣಿಗಳಿಗೂ ಕಲ್ಯಾಣಾನುಗ್ರಹದೇವತೆಯಾದ ಶ್ರೀದೇವಿಯೇ ಆಗಿದ್ದ ಶ್ರೀ ಲೋಪಾಮುದ್ರಾ ದೇವಿಯು ಕವೇರ ಮುನಿಯನ್ನು ಸಂತೈಸುತ್ತಾ 'ತಂದೆಯೇ! ನಾನು ಲೋಕ ಕಲ್ಯಾಣವನ್ನು ಸಾಧಿಸಲು ನದಿರೂಪವಾಗಿ ಹರಿದು ಸಮುದ್ರವನ್ನು ಸೇರುವೆನು. ಜನರು ನನ್ನನ್ನು ಲೋಕದಲ್ಲಿ ಬ್ರಹ್ಮಪುತ್ರಿಯೆಂದೂ, ಮಾಯೆ ಎಂದೂ, ಕಾವೇರಿ ಎಂದೂ ಕರೆಯುವರು. ಜನರ ಪಾಪಗಳನ್ನು ನಾನು ನಾಶ ಮಾಡುವವಳೆಂದು ಲೋಕಪ್ರಸಿದ್ಧಳಾಗುವೆನು ಎಂದು ಹೇಳಿದಳು. ನಂತರ ಕವೇರ ಮುನಿಯು ಲೋಪಾಮುದ್ರೆಯ ಅನುಗ್ರಹಕ್ಕೆ ಪಾತ್ರನಾಗಿ ದೇಹತ್ಯಾಗ ಮಾಡಿ ತನ್ನ ಸತಿಸಹಿತನಾಗಿ ಬ್ರಹ್ಮಲೋಕವನ್ನು ಸೇರಿದನು. ಇಳೆಗೆ ಇಳಿದು ಬಂದ ದೇವಕುವರಿ ಶ್ರೀ ಲೋಪಾಮುದ್ರೆಯು ಜಗತ್ಕಲ್ಯಾಣವನ್ನು ಸಾಧಿಸುವ ದೃಷ್ಟಿಯಿಂದ ಶಿವನನ್ನು ಕುರಿತು ಕಠೋರ ತಪಸ್ಸನ್ನು ಆಚರಿಸುತ್ತಾ, ಬ್ರಹ್ಮರ್ಷಿಗಳ ಒಡನೆ ಬ್ರಹ್ಮಗಿರಿಯ ಪವಿತ್ರ ನೆಲೆಯಲ್ಲಿ ವಾಸಿಸುತ್ತಾ ಇದ್ದಳು.
Goddess Cauveri temple, Thalakaveri

ದಿವ್ಯವಾದ ಕಾಂತಿಯಿಂದಲೂ, ತಪಸ್ಸಿನ ತೇಜಸ್ಸಿನಿಂದಲೂ ಕೂಡಿ ಕಾವೇರಿಯು ಬ್ರಹ್ಮಗಿರಿಯ ತಪ್ಪಲಿನಲ್ಲಿ ಬ್ರಹ್ಮರ್ಷಿಗಳ ಪವಿತ್ರವಾದ ಆಶ್ರಮದಲ್ಲಿ ಆನಂದವಾಗಿ ಬಾಳುತ್ತಿದ್ದಳು. ಆ ಸಂದರ್ಭದಲ್ಲಿ ಋಷಿವರ್ಯರಾದ ಅಗಸ್ತ್ಯಮುನಿಗಳು ಉತ್ತರ ಭಾರತದಿಂದ ದಕ್ಷಿಣಾಪಥಕ್ಕೆ ಬಂದವರು ಬ್ರಹ್ಮಗಿರಿಗೆ ಸಂದರ್ಶನವಿತ್ತರು. ಬ್ರಹ್ಮಋಷಿಗಳನೇಕರ ತಪೋಧಾಮವಾದ ಬ್ರಹ್ಮಗಿರಿಯಲ್ಲಿದ್ದ ವಸಿಷ್ಠ ಇತ್ಯಾದಿ ಮಹರ್ಷಿಗಳನ್ನು ಭೇಟಿಮಾಡಿ ಅವರಿಂದ ಆತಿಥ್ಯವನ್ನು ಪಡೆದು ಋಷ್ಯಾಶ್ರಮದ ಮೂಲ ಶಕ್ತಿಯೋ ಎಂಬಂತಿದ್ದ ಶ್ರೀ ಕಾವೇರಿ ದೇವಿಯನ್ನು ಕಂಡು ಹರ್ಷಗೊಂಡರು. ತ್ರಿಕಾಲ ಜ್ಞಾನಿಯೂ, ಮುನಿಪುಂಗವರೂ ಆದ ಅಗಸ್ತ್ಯ ಮಹರ್ಷಿಗಳು ಕಾವೇರಿ ದೇವಿಯ ಜನ್ಮದ ಮೂಲ ಉದ್ದೇಶವನ್ನು ಗ್ರಹಿಸಿಕೊಂಡರು. ಅಗಸ್ತ್ಯ ಋಷಿಗಳು ಶ್ರೀ ಕಾವೇರಿಯನ್ನು ವಿವಾಹವಾಗಲು ಬಯಸಿದರು. ಮಹರ್ಷಿಗಳ ಬಯಕೆಗೆ ಕಾವೇರಿದೇವಿಯು ಒಪ್ಪಿ 'ತನ್ನನ್ನು ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದೆಂದೂ, ಹೋದರೆ ತಾನು ಸಲಿಲೇಶ್ವರನಾದ ಸಮುದ್ರದೆಡೆಗೆ ನದಿಯಾಗಿ ಹೊರಟು ಹೋಗುತ್ತೇನೆ' ಎಂತಲೂ ಹೇಳಿದಳು. ಶ್ರೀದೇವಿಯು ಹೇಳಿದ ನಿಬಂಧನೆಗೆ ಋಷಿ ಅಗಸ್ತ್ಯರು ಸಮ್ಮತಿಸಿದರು. ಅನುಸಾರವಾಗಿ ಋಷ್ಯಾಶ್ರಮದ ಪವಿತ್ರ ನೆಲೆಯಲ್ಲಿ ದೇವದೇವತೆಗಳ ಸಮ್ಮುಖದಲ್ಲಿ ಶ್ರೀಅಗಸ್ತ್ಯ ಕಾವೇರಿಯರ ಕಲ್ಯಾಣವು ವೇದೋಕ್ತ ರೀತಿಯಲ್ಲಿ ಬಹಳ ವೈಭವದಿಂದ ನಡೆಯಿತು. ನಂತರ ಕೆಲವು ಸಮಯದ ತನಕ ನೂತನ ದಂಪತಿಗಳು ಗೃಹಸ್ತಾಶ್ರಮ ಜೀವನವನ್ನು ಸುಖವಾಗಿ ಸಾಗಿಸುತ್ತಾ ಬಂದರು. ಹೀಗಿರುವಾಗ ಒಂದು ದಿನ ಬ್ರಾಹ್ಮೀಮುಹೂರ್ತದಲ್ಲಿ ಮಹರ್ಷಿ ಅಗಸ್ತ್ಯರು ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನಕಾ ನದಿಯ ತೀರಕ್ಕೆ ಸ್ನಾನಕ್ಕೆಂದು ತೆರಳಿದರು. ತೆರಳುವ ಮುನ್ನ ತಮ್ಮ ಪವಿತ್ರ ಕಮಂಡಲದೊಳಗೆ ಶ್ರೀ ಕಾವೇರಿಯನ್ನು ಆವಾಹನೆ ಮಾಡಿ ತಮ್ಮ ಶಿಷ್ಯರಿಗೆಲ್ಲಾ 'ಜಾಗ್ರತೆ ನೋಡಿಕೊಳ್ಳಿ' ಎಂದು ಹೇಳಿ ತೆರಳಿದರು. ಲೋಕಪಾವನೆಯಾಗಿ, ಲೋಕೇಶ್ವರಿಯಾಗಿ, ಲೋಕೋಪಯೋಗಿ ನದಿಯಾಗಿ ಬೆಳಗಬೇಕಾಗಿ ಇಳೆಗೆ ಇಳಿದು ಬಂದ ಮಹಾತಾಯಿ ಕಾವೇರಿ ಇದೇ ಸಂದರ್ಭವನ್ನು ನಿರೀಕ್ಷಿಸುತ್ತಿರಬೇಕು! ತನ್ನ ನಿಬಂಧನೆಯನ್ನು ಪತಿಯಾದ ಅಗಸ್ತ್ಯರು ಉಲ್ಲಂಘಿಸಿದರೆಂದು ಹೇಳಿ ಹೊರಡುವ ಅವಕಾಶ ಒದಗಿ ಬಂತು. ಕಾವೇರಿ ಕೂಡಲೇ ಕಮಂಡಲುವಿನಿಂದ ಹೊರಬಂದು ಪಕ್ಕದ ಬ್ರಹ್ಮಕುಂಡಿಕೆಯನ್ನು ಸೇರಿ ಅಲ್ಲಿಂದ ಜಲರೂಪಳಾಗಿ, ನದಿಯಾಗಿ ಹರಿಯ ಹೊರಟಳು. ಅವಳ ಹರಿವಿಕೆಯನ್ನು ತಡೆಯ ಹೋದ ಶಿಷ್ಯರಿಗೆ ಕಾಣಿಸಿಕೊಳ್ಳದೆ ಗುಪ್ತಗಾಮಿನಿಯಾಗಿ ಸ್ವಲ್ಪದೂರ ಹರಿದು ಮತ್ತೆ ಕಾಣಿಸಿಕೊಂಡಳು. ಆಗ ಸ್ನಾನಾಹ್ನಿಕಗಳನ್ನು ಮುಗಿಸಿ ಬಂದ ಮುನಿ ಪುಂಗವರಿಗೆ ತನ್ನ ಸತಿ ಎಸಗಿದ ಕಾರ್ಯದ ಅರಿವಾಗಿ "ನದಿಯಾಗಿ ಮುಂದೆ ಹರಿಯುವುದು ಬೇಡ. ಮರಳಿ ತನ್ನ ಪತ್ನಿಯಾಗಿ ಶರೀರಧಾರಿಯಾಗಿ ಬಾಳು' ಎಂದು ಅವರು ಬಹು ವಿಧದಲ್ಲಿ ಶ್ರೀಕಾವೇರಿಯನ್ನು ಕೇಳಿಕೊಂಡರು. ಓಂಕಾರೇಶ್ವರಿಯೂ, ಜಗನ್ಮಾತೆಯೂ, ಇಚ್ಛಾಜ್ಞಾನಕ್ರಿಯಾಶಕ್ತಿಸ್ವರೂಪಿನಣಿಯಾದ ಶ್ರೀ ಕಾವೇರಿ ದೇವಿಯು ಓಂಕಾರೇಶ್ವರರಾದ ಅಗಸ್ತ್ಯ ಮುನಿಗಳಿಗೆ ಸಮಾಧಾನ ಹೇಳುತ್ತಾ, ಲೋಕಕಲ್ಯಾಣಕ್ಕಾಗಿ ತಾನು ನದಿರೂಪ ತಳೆದು ಲೋಕೋಪಕಾರ ಮಾಡುವೆನೆಂದು ಸ್ಪಷ್ಟಪಡಿಸಿದಳು. ಅಗಸ್ತ್ಯರು ಶಿಷ್ಯವರ್ಗದವರನ್ನೊಡಗೂಡಿಕೊಂಡು ಶ್ರೀ ಕಾವೇರಿಯು ನದಿಯಾಗಿ ಹರಿದು ಮುಂದುವರಿದಂತೆ ಹಿಂಬಾಲಿಸುತ್ತಾ ತೆರಳಿದರು. ಕಾವೇರಿಯು ನದಿಯಾಗಿ ಹರಿದು ಕೆಲವು ಮೈಲುಗಳಷ್ಟು ಮುಂದೆ ತೆರಳಿದಾಗ ನಾಗಲೋಕದವರು ಹಾದಿಗೆ ಅಡ್ಡಲಾಗಿ ಬಂದು ಶ್ರೀಮಾತೆಯನ್ನು ಸ್ತುತಿಸಿ ಮಾತೆಯನ್ನು ನದಿಯಾಗಿ ಹರಿಯದೆ ಉಳಿಯಬೇಕೆಂದು ಪ್ರಾರ್ಥಿಸಿದರು. ಅವರನ್ನು ಸಮಾಧಾನಗೊಳಿಸಿ ಶ್ರೀಕಾವೇರಿಯು ಮುಂದೆ ಸರಿದಳು. ನಾಗಲೋಕದವರು ಶ್ರೀಮಾತೆಯನ್ನು ತಡೆದ ಸ್ಥಳವು ನಾಗತೀರ್ಥವೆಂದು ಪ್ರಸಿದ್ಧವಾಯಿತು. ನಾಗತೀರ್ಥದಿಂದ ಮುಂದೆ ಸಾಗಿದ ಶ್ರ್ರೀಕಾವೇರಿಯು ಭಾಗಮಂಡಲ ಕ್ಷೇತ್ರದಲ್ಲಿ ಕನಕ, ಸುಜ್ಯೋತಿ ನದಿಗಳನ್ನು ಒಡಗೂಡಿಕೊಂಡು ಮುಂದೆ ತೆರಳಿದರು. ಹೀಗೆ ಕೆಲವು ಮೈಲುಗಳು ಸಾಗಿದಾಗ ವಲಂಬುರಿ (ಬಲಮುರಿ) ಎಂಬ ಊರಿಗೆ ತಲುಪಿದಳು. ಅಲ್ಲಿ ಕೊಡಗನ್ನು ಆಳುತ್ತಿದ್ದ ಚಂದ್ರವರ್ಮ ರಾಜನ ಸಂತತಿಯವರೂ, ಮಾತೆಯ ಭಕ್ತರಾದವರೆಲ್ಲರೂ ಶ್ರೀಮಾತೆಯನ್ನು ಎದುರುಗೊಂಡರು. ಶ್ರೀಕಾವೇರಿ ನದಿಯ ನೀರಿನ ಹರಿಯುವಿಕೆಯ ರಭಸಕ್ಕೆ ಅಲ್ಲಿ ನೆರೆದಿದ್ದ ಸ್ತ್ರೀಯರ ಸೀರೆ ನೆರಿಗೆಯು ಹಿಂಬದಿಗೆ ಸರಿದು ಹೋಯಿತು. ನೆರೆದಿದ್ದ ಜನಸಮೂಹ, ತನ್ನ ಪತಿದೇವ, ಭಕ್ತ ವರ್ಗದವರೆಲ್ಲರನ್ನೂ ಶ್ರೀಮಾತೆ ಕೆಲವು ಮಾತುಗಳನ್ನು ಹೇಳಿದಳು. ತನ್ನ ಪತಿಯನ್ನು ಉದ್ದೇಶಿಸಿ, ತಾನು ಲೋಕೋಪಕಾರಕ್ಕಾಗಿ ನದಿಯಾಗಿ ಹೊರಟು ಹೋಗುವೆನೆಂದೂ, ಆದರೆ ದ್ವಿರೂಪ ತಾಳಿ ಒಂದು ರೂಪದಲ್ಲಿ ಕಾವೇರಿಯಾಗಿ ನದಿಸ್ವರೂಪದಲ್ಲಿ ಲೋಕೋಪಕಾರ ಕೆಲಸಕ್ಕೆ ತೆರಳಿ ಸಮುದ್ರವನ್ನು ಸೇರುವೆನೆಂತಲೂ, ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ "ಸತ್ಯ, ಧರ್ಮ, ಪ್ರೇಮ, ಭಕ್ತಿ, ಶ್ರದ್ಧೆಗಳಿಂದ ಕೂಡಿದವರಾಗಿ ಸದಾ ಸುಖಿಯಾಗಿರಿ. ಈ ದಿನ ಇಲ್ಲಿ ಹಿಂದೆ ಸರಿದುಹೋದ ಸ್ತ್ರೀಯರ ಸೀರೆ ನೆರಿಗೆಗಳು ನಾನು ನದಿರೂಪ ತಳೆದು ಹರಿದುದರ ಜ್ಞಾಪಕಾರ್ಥವಾಗಿ ಮುಂದೆಯೂ ಹೀಗೆಯೇ ನಿತ್ಯಾಚರಣೆಯಲ್ಲಿ ನೆರಿಗೆ ಕ್ರಮದಿಂದ ಸ್ತ್ರೀಯರಿಂದ ಅನುಸರಿಸಲ್ಪಡುವಂತಾಗಲಿ. ವರ್ಷಕ್ಕೊಮ್ಮೆ ಸೂರ್ಯನು ತುಲಾರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣ ಕಾಲದಲ್ಲಿ ಗಂಗಾದಿ ಸಮಸ್ತ ಪುಣ್ಯ ತೀರ್ಥಗಳಿಂದ ನಾನು ಒಡಗೂಡುವವಳಾಗುತ್ತೇನೆ" ಎಂದು ಹೇಳಿ ಆಶೀರ್ವದಿಸಿ ಮುಂದೆ ನದಿರೂಪವಾಗಿ ತೆರಳಿದಳು. ನೆರೆದಿದ್ದ ಜನಸ್ತೋಮ ಜಯಕಾವೇರಿ - ಜಯ ಜಗನ್ಮಾತೆ ಎನ್ನುತ್ತಾ ಒಕ್ಕೊರಲಿನಿಂದ ಶ್ರೀಮಾತೆಯನ್ನು ಕೊಂಡಾಡಿದರು. ಮಹರ್ಷಿಗಳಾದ ಶ್ರೀ ಅಗಸ್ತ್ಯರು ಶ್ರೀ ಕಾವೇರಿಯನ್ನು ಆಶೀರ್ವದಿಸಿ ಅವಳ ಮೂಲಕ ಲೋಕಕ್ಕೆ ಕಲ್ಯಾಣ ಉಂಟಾಗಲಿ ಎಂದು ಹಾರೈಸಿದರು. ಬಲಮುರಿಯಿಂದ ಮುಂದೆ ಗುಹ್ಯ-ರಾಮಸ್ವಾಮಿ ಕಣಿವೆ-ಕನ್ನಂಬಾಡಿಗಳನ್ನು ಹಾದು ಪಶ್ಚಿಮವಾಹಿನಿಯಾಗಿ ಶ್ರೀರಂಗಪಟ್ಟಣದ ಹತ್ತಿರ ಹರಿದು ಪುನಃ ಪೂರ್ವಾಭಿಮುಖಿಯಾಗಿ ಸಾಗಿ ಶ್ರೀರಂಗಪಟ್ಟಣವನ್ನು ಸೇರಿದಳು. ಮುಂದಕ್ಕೆ ಸಾಗಿ ತಿರುಮಕೂಡಲು-ತಲಕಾಡು-ಮೆಟ್ಟೂರು-ಶ್ರೀರಂಗಂ-ತಿರುಚಿನಾಪಳ್ಳಿ-ಕುಂಭಕೋಣಂ ಇತ್ಯಾದಿ ಊರುಗಳನ್ನು ಸೇರುತ್ತಾ ಕೊನೆಗೆ ಪೂರ್ವ ಸಮುದ್ರವನ್ನು ಸೇರಿದಳು.
ಕಾವೇರಿ ನದಿಗೆ ಅಲ್ಲಲ್ಲಿ ಹರಿದು ಸೇರಿದ ಅನೇಕ ಉಪನದಿಗಳ ಪೈಕಿ ಕನ್ನಿಕೆ ಮತ್ತು ಸುಜ್ಯೋತಿ ಎಂಬ ಎರಡು ನದಿಗಳು ಪ್ರಸಿದ್ಧವಾಗಿದ್ದವು. ಅವುಗಳಿಗೆ ತಮ್ಮದೇ ಆದ ಪೌರಾಣಿಕ ಹಿನ್ನಲೆಯಿದೆ. ಸುಜ್ಯೋತಿಯು ಕನಕೆಯಂತೆ ಕಾವೇರಿಯನ್ನು ನದಿರೂಪಳಾಗಿ ಹರಿದು ಸೇರಿ ಸಂಗಮವಾಗುವುದನ್ನು ಭೌತಿಕ ಚಕ್ಷುಗಳಿಂದ ಕಾಣಲು ಸಾಧ್ಯವಿಲ್ಲ. ಗಂಗಾ, ಯಮುನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಸರಸ್ವತಿ ನದಿ ಹೇಗೆ ಅಜ್ಞಾತವಾಗಿ ಸಂಗಮವಾಗಿದೆಯೋ ಹಾಗೆಯೇ ಕನ್ನಿಕೆ-ಕಾವೇರಿ ನದಿಗಳ ಒಡನೆ ಸುಜ್ಯೋತಿಯು ಸಂಗಮವಾಗಿರುತ್ತದೆ
ಕನ್ನಿಕೆಯು ಪೌರಾಣಿಕವಾಗಿ ಇಂದ್ರನ ಪರಿಚಾರಿಕೆಯಾದ ಯಕ್ಷಸ್ತ್ರೀಯಾಗಿದ್ದಳು. ಹಿಂದೆ ಸುಯಜ್ಞೆಯೆಂಬ ವಿಪ್ರಶ್ರೇಷ್ಠನೊಬ್ಬನಿದ್ದು ಅವನು ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸನ್ನು ಆಚರಿಸಿದನು. ಭಕ್ತನ ತಪಸ್ಸಿಗೆ ಒಲಿದ ಭಗವಾನ್ ಶ್ರೀಹರಿಯು ತಾಪಸೋತ್ತಮನಾದ ಸುಯಜ್ಞನಿಗೆ ತನ್ನಂಶದಿಂದ ಉತ್ಪನ್ನಳಾದ ಕನ್ನಿಕೆ ಸುಜ್ಯೋತಿ ಎಂಬುವಳನ್ನು ನೀಡಿ, ಬ್ರಹ್ಮಗಿರಿಯ ಬಳಿಯ ಗಜರಾಜನಿಗೆ ತೆರಳಿ ಅಲ್ಲಿ ಪುತ್ರಿಯೊಡನೆ ಇರು ಎಂದು ಹೇಳಿ ಅಂತರ್ಧಾನನಾದನು. ಸುಯಜ್ಞನು ವರಲಬ್ಧೆಯಾದ ಕುವರಿ ಸುಜ್ಯೋತಿಯೊಡನೆ ಗಜರಾಜಗಿರಿಗೆ ಬಂದನು. ಅಲ್ಲಿದ್ದ ಶುಭಕಾರಿಣಿ ಯಕ್ಷಿಣಿಯಾದ ಕನ್ನಿಕೆಯೊಡನೆ ಪುತ್ರಿ ಸುಜ್ಯೋತಿಯನ್ನು ಕೂಡಿಕೊಂಡು ಶುದ್ಧಚಾರಿತ್ರ್ಯವಂತನೂ, ತಪೋನಿಷ್ಠನೂ ಆಗಿ ಬಾಳಹೊರಟನು. ಕೆಲವು ಕಾಲಾನಂತರ ಶ್ರೀಮಹಾವಿಷ್ಣುವಿನ ದರ್ಶನ ಹೊಂದಿ ವೈಕುಂಠಧಾಮಕ್ಕೆ ತೆರಳಿದನು. ತಂದೆಯ ನಿರ್ಗಮನದ ನಂತರ ಪುತ್ರಿ ಸುಜ್ಯೋತಿಯು ಭಗವಂತನ ದರ್ಶನಕ್ಕಾಗಿ ವಿಶೇಷವಾದ ತಪಸ್ಸನ್ನೆಸಗಿದಳು. ಅಷ್ಟರಲ್ಲಿ ದೇವಲೋಕದ ಒಡೆಯನಾದ ದೇವೇಂದ್ರನು ಅಲ್ಲಿಗೆ ಆಗಮಿಸಿ ಸುಜ್ಯೋತಿಯನ್ನು ವಿವಾಹವಾಗಲು ಬಯಸಿದನು. ಅವನು ಸುಜ್ಯೋತಿಯನ್ನು ಕುರಿತು "ಸಹಸ್ರ ಸಂವತ್ಸರಗಳ ನಂತರ ನದಿಯಾಗಿ ತೆರಳು. ಆ ತನಕ ನನ್ನೊಡನೆ ಪತ್ನಿಯಾಗಿ ಬಾಳಿಕೊಂಡಿರು" ಎಂಬುದಾಗಿ ಹೇಳಿದನು. ಇಂದ್ರನ ಈ ಬಯಕೆಯಿಂದ ಅಸಂತುಷ್ಟನಾದ ಸುಜ್ಯೋತಿಯು ಗೆಳತಿ ಕನ್ನಿಕೆಯೊಡನೆ ಮಾತನಾಡಿ ಆಕೆಯನ್ನು ಒಡಗೂಡಿಕೊಂಡು ನದಿರೂಪಳಾಗಿ ಹರಿಯ ಹೊರಟಳು. ತನ್ನ ಮಾತನ್ನು ಲೆಕ್ಕಿಸದೆ ನದಿಯಾಗಿ ಸರಿದ ಸುಜ್ಯೋತಿಯನ್ನು ಕಂಡು ಇಂದ್ರನು 'ಜಲಶೂನ್ಯಳಾಗು' ಎಂದು ಆಕೆಗೆ ಶಾಪವನ್ನು ಕೊಟ್ಟನು. ಸುಜ್ಯೋತಿಯು ಇಂದ್ರನಲ್ಲಿ ಮರುಸಮಾಧಾನದ ವರಬೇಡಲು ಇಂದ್ರನು ಪರಮಪಾವನೆಯಾದ ಕಾವೇರಿ ನದಿಯ ಪವಿತ್ರವಾರಿ ಸೋಂಕಿದಾಗ ಜಲಪೂರ್ಣಳಾಗೆಂದು ಮರುವರವನ್ನಿತ್ತನು. ಅನುಸಾರವಾಗಿ ಸುಜ್ಯೋತಿಯು ಕನ್ನಿಕಾ-ಕಾವೇರಿ ಸಂಗಮದ ಪವಿತ್ರ ಮುಹೂರ್ತವನ್ನು ನಿರೀಕ್ಷಿಸುತ್ತಾ ಇದ್ದಳು. ಮಂಗಳ ಮುಹೂರ್ತದಲ್ಲಿ ಪವಿತ್ರ ಕಾವೇರಿ-ಕನ್ನಿಕೆಯರ ಸಂಗಮವಾದಾಗ ಸುಜ್ಯೋತಿಯು ಸೇರಿ ಜಲ ಶೂನ್ಯತೆಯನ್ನು ಕಳೆದುಕೊಂಡು ಜಲಪೂರ್ಣತೆಯನ್ನು ಪಡೆದು ಪವಿತ್ರ ನದಿಯಾಗಿ ರೂಪಾಂತರ ಹೊಂದಿದಳು.
***
Sri Bhagandeshwara temple, Bhagamandala

ಭಾಗಮಂಡಲ ಕ್ಷೇತ್ರಕ್ಕೆ ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ಧವಾಗಿರುತ್ತದೆ. ಇಲ್ಲಿ ಶ್ರೀ ಭಗಂಡೇಶ್ವರ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಮಹಾವಿಷ್ಣು ದೇಗುಲಗಳಿವೆ. ಶ್ರೀ ಮಹಾಗಣಪತಿ ಸನ್ನಿಧಿಯು ದೇಗುಲದ ಹೊರ ಅಂಗಣದಲ್ಲಿದೆ.
ಹಿಂದೆ ಭಗಂಡರೆಂಬ ಮುನಿವರ್ಯರು ಇಲ್ಲಿ ವಾಸವಾಗಿದ್ದು, ಷಣ್ಮುಖಸ್ವಾಮಿಯನ್ನು ಕುರಿತು ತಪಸ್ಸು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಸುಬ್ರಹ್ಮಣ್ಯಸ್ವಾಮಿಯ ದಿವ್ಯ ನೆಲೆಯಾಗಿದ್ದು ಸ್ಕಂದಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದ್ದ ಇಂದಿನ ಭಾಗಮಂಡಲದ ಭೂ ಭಾಗವನ್ನು ಭಗಂಡ ಋಷಿಗಳ ಮೇಲೆ ಸುಪ್ರೀತರಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಅನುಗ್ರಹ ಪೂರ್ವಕವಾಗಿ ಅವರಿಗೆ ಕೊಡುಗೆಯಾಗಿ ನೀಡುತ್ತಾರೆ. ಋಷಿಗಳ ಪರಮಪಾವನನಾದ ತಪೋಭೂಮಿ ಹಾಗೂ ದೇವನೆಲೆಯಾದ ಸ್ಕಂದ ಕ್ಷೇತ್ರದಲ್ಲಿ ಸರ್ವಜೀವರ ಕ್ಷೇಮಕ್ಕಾಗಿ ಶಿವಲಿಂಗವೊಂದನ್ನು ಭಗಂಡ ಮಹರ್ಷಿಗಳು ಪ್ರತಿಷ್ಠಾಪಿಸುತ್ತಾರೆ. ಭಗಂಡ ಋಷಿಯು ನೆಲೆಸಿ ತಪಸ್ಸನ್ನು ಎಸಗಿ ಷಣ್ಮುಖಸ್ವಾಮಿಯಿಂದ ಅನುಗ್ರಹವಾಗಿ ಪಡೆದ ಕ್ಷೇತ್ರವಾದ್ದರಿಂದ ಭಗಂಡಕ್ಷೇತ್ರ ಎಂದು ಹೆಸರಾಯಿತು. ಅದೇ ಹೆಸರು ಮುಂದೆ ಭಾಗಮಂಡಲ ಎಂದು ರೂಪಾಂತರವನ್ನು ಹೊಂದಿತು. ಭಗಂಡ ಋಷಿಗಳು ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಭಗಂಡೇಶ್ವರನೆಂದು ಸ್ತುತಿಸಿ ಶಿವನನ್ನೇ ಪ್ರಧಾನವಾಗಿ ಪೂಜಿಸುವಂತಾಯಿತು. ಮಹಾ ತಪಸ್ವಿಗಳಾದ ಭಗಂಡ ಮಹರ್ಷಿಗಳು ತಪಸ್ಸನ್ನು ಎಸಗಿದ ಭೂಮಿಯಾದುದರ ಜೊತೆಗೆ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಸ್ವಕೀಯ ಕ್ಷೇತ್ರವಾಗಿಸಿಕೊಂಡಿದ್ದ ಭೂಭಾಗವಾಗಿದ್ದು, ಋಷಿ ಪ್ರತಿಷ್ಠೆಯಿಂದಾದ ಶಿವದೇಗುಲದಿಂದ ಕೂಡಿರುವ ಭಾಗಮಂಡಲವು ಪುರಾಣ ಪ್ರಸಿದ್ಧವಾದ ಪವಿತ್ರ ಕ್ಷೇತ್ರ ಎಂಬುದರಲ್ಲಿ ಸಂದೇಹವಿಲ್ಲ.

Friday, October 16, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 59

ಭಕ್ತಾಪುರ (ನೇಪಾಳ) – Bhakthapur (Nepal)



ಹಿಂದೂ, ಬೌದ್ದ ಸಂಸ್ಕೃತಿಗಳ ನೆಲೆವೀಡಾದ ನೇಪಾಳದಲ್ಲಿರುವ ಭಕ್ತಾಪುರ ಅಲ್ಲಿನ ತುಳಜಾ ಭವಾನಿ (ತಲೈಜು ಭವಾನಿ) ದೇವಾಲಯದಿಂದಲೂ, ಅರಮನೆಗಳಿಂದಲೂ ಪ್ರಸಿದ್ದವಾಗಿದೆ. ರಲ್ಲಿ ಭಾರತದ ಓರ್ವ ಅರಸನಾದ ಹರಸಿಂಗ ದೇವ ಭಕ್ತಾಪುರಕ್ಕೆ ಆಗಮಿಸಿದ್ದನು. ಅವನ ಕುಲದೇವಿಯಾದ ತುಳಜಾ ಭವಾನಿಯನ್ನೂ ಜತೆಗೊಯ್ದಿದ್ದ ಅರಸನು ಭಕ್ತಾಪುರದ ರಾಜನಾಗಿ ಪ್ರಾಚೀನವಾದ ತುಳಜಾ ಭವಾನಿ ದೇವಾಲಯವನ್ನು ನಿರ್ಮಿಸಿದನು. ನೇಪಾಳಿಗರ ಬಾಯಲ್ಲಿ ತುಳಜಾ ಭವಾನಿಯು ತಲೇಜು ಭವಾನಿಯಾಗಿ ಕಠ್ಮಂಡು ಕಣಿವೆಯ ರಕ್ಷಕಿ ಎನಿಸಿದಳು.

ಕುಮಾರಿ ದೇವಿ (Kumari Devi, Nepal)
ಹರಸಿಂಗನ ಕಾಲದಿಂದಲೂ ತಲೇಜು ಭವಾನಿಯನ್ನು ಕುಮಾರಿ ದೇವತೆಯ ಸ್ವರೂಪದಲ್ಲಿ ಆರಾಧಿಸುವ ಸಂಪ್ರದಾಯವು ಬೇಳೆದು ಬಂದಿದೆ. ನೇಪಾಳದ ಕಠ್ಮಂಡು ಕಣಿವೆಯ ಮೂರು ಜಿಲ್ಲೆಗಳಲ್ಲಿಯೂ ತಲೇಜು ಭವಾನಿಯ ದೇವಾಲಯಗಳಿದ್ದು ಅವುಗಳಲ್ಲಿ ಭಕ್ತಾಪುರದ ದೇವಾಲಯವೇ ಅತ್ಯಂತ ಪುರಾತನವಾದದ್ದು.
ಅದರಂತೆ ಇಂದಿಗೂ ನೇಪಾಳದ ಗರ್ಭಿಣಿ ಮಹಿಳೆಯರು ತಾವು ಕನಸಿನಲ್ಲಿ ಕೆಂಪು ಸರ್ಪವನ್ನು ಕಂದದ್ದಾದರೆ ದೇವಿ ತಲೇಜು ಭವಾನಿಯು ತಮ್ಮ ಗರ್ಭದಲ್ಲಿ ಕುಮಾರಿ ದೇವಿಯ ಸ್ವರೂಪದಲ್ಲಿ ಅವತರಿಸುತ್ತಾಳೆಂದು ನಂಬುವರು.

***

ದರ್ಬಾರ್ ಚೌಕ, ಭಕ್ತಾಪುರ್ (Darbar Circle, Bhakthapur, Nepal) 
ನೇಪಾಳದ  ಅರಸ ಜಯಪ್ರಕಾಶ ಮಲ್ಲನಿಗೆ ತ್ರಿಪಾಸಾ ಹೆಸರಿನ ಪಗಡೆಯಾಟವು ಅತ್ಯಂತ ಪ್ರಿಯವಾಗಿತ್ತು. ಅದೊಂದು ದಿನ ರಾತ್ರಿಯ ವೇಳೆ ಅವನೊಬ್ಬನೇ ತನ್ನ ಕೋಣೆಯಲ್ಲಿ ಆಟವನ್ನಾಡುತ್ತಿರಲು ಒಂದು ಕೆಂಪು ಸರ್ಪ ಅವನ ಮುಂದೆ ಬಂದಿತು. (ಕೆಂಪು ಸರ್ಪವು ತಲೇಜು ಭವಾನಿಯ ವಾಹನ.) ರಾಜನೆದ್ದು ದೇವಿಯನ್ನು ಸ್ವಾಗತಿಸಿದನು. ಅವಳು ರಾತ್ರಿಯಿಡೀ ಅವನೊಡನೆ ಆಟವನ್ನಾಡಿದ್ದಳು.


ತಲೇಜು ಭವಾನಿ (Thalelu Bhavani, Bhkthapur, Nepal)
ಅಂದಿನಿಂದಲೂ ಪ್ರತಿ ದಿನದ ರಾತ್ರಿ ದೇವಿಯು ಅರಸನೊಡನೆ ತ್ರಿಪಾಸಾ ಆದಲು ಬರುತ್ತಿದ್ದಳು. ಬೆಳಗಿನ ಸೂರ್ಯೋದಯದ ಒಳಗೆ ಮರೆಯಾಗುತ್ತಿದ್ದಳು. "ತನ್ನ ಆಗಮನದ ವಿಚಾರವನ್ನು ರಾಜನು ಮೂರನೆಯವರಿಗೆ ಹೇಳಬಾರದು" ಎಂದು ದೇವಿಯು ಅರಸನಿಗೆ ಅಪ್ಪಣೆ ಕೊಡಿಸಿದ್ದು ಅದರಂತೆಯೇ ರಾಜನು ವಿಚಾರವನ್ನು ಯಾರಲ್ಲಿಯೂ ಹೇಳಿರಲಿಲ್ಲ. ಅದೊಂದು ದಿನ ರಾತ್ರಿಯ ವೇಳೆಯಲ್ಲಿ ಅರಸನು ಯಾರೊಡನೆ ಕಳೆಯುತ್ತಾನೆನ್ನುವ ಕೆಟ್ಟ ಕುತೂಹಲದಿಂದ ಅರಸನ ಕೋಣೆಗೆ ರಾಣಿಯು ಪ್ರವೇಶಿಸಿದಳು. ರಾಣಿಗೆ ತಲೇಜು ದೇವಿ ಕಾಣಿಸಿಕೊಂಡಳು, ಮತ್ತು ಅವಳು ತಾನು ಕೂಡಲೇ ಸರ್ಪವನ್ನೇರಿ ಮರೆಯಾದಳು. ಅದಾಗ ರಾಜ ಅವಳನ್ನು ತಡೆಯಲು ಪ್ರಯತ್ನಿಸಿದ. ಬಗೆ ಬಗೆಯಾಗಿ ಬೇಡಿಕೊಂಡನಾದರೂ ಅವಳು ಹೊರಟು ಹೋದಳು. ಹಾಗೆ ಹೊರಡುವುದಕ್ಕೂ ಮುನ್ನ - "ಮುಂದೆ ತಾನು ರತ್ನಾವಳಿಯ ನೇವಾರಿ ಶಾಕ್ಯ ಪಂಥದ ಜನರ ನಡುವೆ ಅವತರಿಸುತ್ತೇನೆ. ಅಲ್ಲಿ ನನ್ನನ್ನು ಹುಡುಕಬಹುದು." ಎಂದು ನುಡಿದಳು. ಅದರಂತೆಯೇ ರಾಜನು ಅವಳನ್ನು ಹುಡುಕುತ್ತಾ ತಾನೂ ಅರಮನೆಯನ್ನು ಬಿಟ್ಟು ಹೊರಟನು.

***

ತಲೇಜು ಭವಾನಿ ದೇವಾಲಯ (Thalelu Bhavani temple, Bhkthapur, Nepal)
ನೇಪಾಳದ ಅರಸ ತ್ರೈಲೋಕ್ಯ ಮಲ್ಲನು ರಾಜ್ಯವನ್ನಾಳುತ್ತಿರಲು ದೇವಿ ತಲೇಜು ಭವಾನಿಯು ಪ್ರತಿದಿನ ರಾತ್ರಿಯ ವೇಳೆ ಮಾನವ ರೂಪ ಧರಿಸಿ ಬರುತ್ತಿದ್ದಳು. ಅರಸನು ಅವಳೊಡನೆ ರಾಜ್ಯದ ಕ್ಷೇಮ ಸಮಾಚಾರಗಳನ್ನು ಚರ್ಚಿಸುತ್ತಿದ್ದ. ಅದೊಮ್ಮೆ ಅರಸನು ತಾನು ದೇವಿಯೊಡನೆ ದೇಹ ಸಂಪರ್ಕ ಬೇಳೇಸಲು ಮುಂದಾದಾಗ ಅವಳು ಕೋಪಗೊಂಡು ಅವನಿಂದ ದೂರಾದಳು. ಅದಾದ ನಂತರ ಅರಸನು ತಾನು ಪಶ್ಚಾತ್ತಾಪದಿಂದ ಕೂಡಿ ದೇವಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸಿದನು. ಮತ್ತು ಮರಳಿ ಬರುವಂತೆ ಪ್ರಾರ್ಥಿಸಿದನು. ಅಂತ್ಯದಲ್ಲಿ ದೇವಿಯು "ತಾನು ಶಾಕ್ಯ ಕುಟುಂಬದ ಕನ್ಯೆಯ ದೇಹದಲ್ಲಿ ಕಾಣಿಸಿಕೊಳ್ಳುತ್ತೇನೆ" ಎಂದು ನುಡಿದಳು.

***

ನೇಪಾಳದ  ಅರಸ ಜಯಪ್ರಕಾಶ ಮಲ್ಲನ ಕಾಲದಲ್ಲಿ ಓರ್ವ ಎಳೆ ಬಾಲೆಯ ಮೈಮೇಲೆ ದೇವಿ ತಲೇಜು ಆವಾಹನೆಯಾಗುವಳೆಂದು ಅವಳನ್ನು ರಾಜ್ಯದಿಂದಲೇ ಗಡಿಪಾರು ಮಾಡಲಾಗಿತ್ತು. ಇದನ್ನು ತಿಳಿದ ರಾಣಿಯು ಆ ಬಾಲಕಿಯನ್ನು ಕೂದಲೇ ಹುಡುಕಿ ತರುವಂತೆ ತನ್ನ ಪತಿಯನ್ನು ವಿನಂತಿಸಿದ್ದಳು. ಆ ಹುಡುಗಿಯನ್ನು ದೇವಿಯ ಜೀವಂತ ಅವತಾರವೆಂದು ಪೂಜಿಸಬೇಕೆಂದು ಅಣತಿ ಮಾಡಿದ್ದಳು. 

Wednesday, October 07, 2015

ಕುಪ್ಪಳ್ಳಿ, ಕವಿಶೈಲ - ಆದ್ಯಾತ್ಮಿಕ ಅನುಭೂತಿ ನೀಡುವ ಸ್ಮರಣೀಯ ಸ್ಥಳ



ನಾನು ಹಾಗೂ ನನ್ನ ಅಣ್ಣ ಪ್ರಭಾಕರ ಅಡಿಗ ಕವಿಶೈಲದ ಬಂಡೆಯ ಮೇಲೆ
ನಾನು ಮೊನ್ನೆ ಗಾಂಧಿ ಜಯಂತಿಯಂದು ಕನ್ನಡದ ಮಹಾನ್ ಕವಿ ರಸಋಷಿ ಕುವೆಂಪು ಜನ್ಮಭೂಮಿ ಕುಪ್ಪಳ್ಳಿಗೆ ನನ್ನ ಅಣ್ಣನೊಡನೆ ಭೇಟಿ ನೀಡಿದ್ದೆ. ಅಲ್ಲಿನ ಸುಂದರ ಪ್ರಕೃತಿ, ನಯನಮನೋಹರ ಹಸಿರು ವಾತಾವರಣ ನನ್ನನ್ನು ಮಂತ್ರಮುಗ್ದನನ್ನಾಗಿಸಿತು. ಅಂತಹಾ ಹಚ್ಚ ಹಸಿರಿನ ನಡುವೆ ಇರುವ ಕವಿಮನೆ ನಿಜಕ್ಕೂ ಪ್ರಶಾಂತವಾಗಿದ್ದು ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಮನಸ್ಸಿಗೆ ಶಾಂತಿ ಸಮಾಧಾನವನ್ನು ನೀಡುತ್ತದೆ.


ಕವಿಶೈಲದ ವರ್ಣನೆ ಇರುವ ಕಲ್ಲು




ಪ್ರಪಂಚದ ಹದಿನೆಂಟು ಜೀವ ವೈವಿದ್ಯದ ತಾಣದಲ್ಲಿ ಒಂದಾದ ಸ್ಥಳ ಸಹ್ಯಾದ್ರಿ ಬೆಟ್ಟ, ಅದರ ತಪ್ಪಲಲ್ಲೆ ಇರುವುದು ಕುವೆಂಪುರವರ ಬಾಲ್ಯ ಕಳೆದ ಮನೆ, ಈಗಕವಿಮನೆಯಾಗಿದೆಇನ್ನೂರು ವರ್ಷ ಹಳೆಯದಾದ ಮನೆಯು, ಮಲೆನಾಡಿನ ಸೌಂದರ್ಯವನ್ನು ತನ್ನ ಒಡಲಲ್ಲೆ ಇನ್ನೂರು ವರ್ಷ ಇಟ್ಟುಕೊಂಡಿದ್ದ ಮನೆಯು ಎಂತವರನ್ನು ಏನನ್ನು ಮಾತನಾಡಿಸದೆ ತನ್ನ ಕಡೆಗೆ ದಿಟ್ಟಿಸುವಂತೆ ಮಾಡುತ್ತದೆ.
ಕುವೆಂಪು ಬಳಸುತ್ತಿದ್ದ ಎತ್ತಿನ ಗಾಡಿ ಇರುವ ಕೋಣೆ
ಕುಪ್ಪಳ್ಳಿಯಲ್ಲಿ ಹುಟ್ಟಿ ಮೈಸೂರಿನಲ್ಲಿ ನಿಂತು ಅಖಂಡ ವಿಶ್ವಕ್ಕೆ ವಿಶ್ವಮಾನವ ಸಂದೇಶ ಕೊಟ್ಟ ಕುವೆಂಪುರವರ ಮನೆ ಇಂದು ಪ್ರವಸಿತಾಣ. ಅತ್ಯುತ್ತಮ ಕೃತಿಗಳನ್ನು ಕೊಟ್ಟು, ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು, ಬದುಕಿನ ಅರ್ಥವನ್ನು ತಿಳಿಸಿಕೊಟ್ಟು ಅಮರರಾದ ಕವಿ ಕುವೆಂಪುರವರ ಮನೆ ಇಂದಿನ ಆದುನಿಕ ಮನೆ ತರಹದ ಫಾಸ್ಟ್ ಫುಡ್ ನಂತೆ ಅಲ್ಲ. ಕವಿ 

ಮನೆಯ ಅಡುಗೆ ಮನೆ, ಸ್ನಾನದ ಕೋಣೆಯಿಂದ ಹಿಡಿದು ಮಲಗುವ ಕೋಣೆಯ ತನಕ ಎಲ್ಲೆಲ್ಲೂ ಎಲ್ಲವೂ ಸತ್ವ ಭರಿತ ವೈಶಿಷ್ಟವುಳ್ಳ ವಸ್ತುಗಳು, ಕುವೆಂಪು ತಮ್ಮ ನೆನಪಿನ ದೋಣಿಯಲ್ಲಿ ಉಲ್ಲೇಖಿಸಿರುವ ಹಾಗೆ ನನ್ನ ಹುಟ್ಟು ಅರ್ಥಾತ್ ಅದು ನನ್ನ ಅಜ್ಜಿ ನನ್ನನ್ನು ತಯಾರಿಸಿದಳು ಎಂದು. ಅದಕ್ಕೆ ಮೇಲೆ ನಾನು ಹೇಳಿದ್ದು " ಬದುಕಿಗೆ ಬೇಕಾದ ಅಗತ್ಯ ತಿಳುವಳಿಕೆ ನೀಡುವಲ್ಲಿ ವಿಫಲರಾದ ಹಿರಿಯರು ಕೂಡ ಇದರಲ್ಲಿ ಭಾಗಿ " ಎಂದು. ಕುವೆಂಪು ಉಪಯೋಗಿಸಿದ ವಸ್ತುಗಳು ಅವರ ಎಲ್ಲಾ ಡಾಕ್ಟರೇಟ್ ಪದವಿಗಳು, ಅವರ ಮಧುವೆಯ ಕರೆಯೋಲೆ, ತುಂಬು  ಕುಟುಂಬದ ಚಿತ್ರಗಳು, ಕುಲಪತಿಯಾಗಿ ಕುವೆಂಪು, ಅಜ್ಜನಾಗಿ ಕುವೆಂಪು ಹೀಗೆ ಹಲವು ಬಗೆಯ ವಿಚಾರಗಳು ನಮಗೆ ನೋಡ ಸಿಗುತ್ತವೆ.
ಕುಪ್ಪಳ್ಳಿ ಮಹಾಮನೆಯ ಮೂಲ ಹೆಬ್ಬಾಗಿಲು
ಕುಪ್ಪಲ್ಲಿ ಕವಿಮನೆ
ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನವು ಮನೆಯನ್ನು, ಅದರ ಮೂಲ ವಿನ್ಯಾಸಕ್ಕೆ ಹಾಳಾಗದಂತೆ ನವೀಕರಿಸಿ, ಒಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡಿಸಿದೆಮನೆಯ ಒಳಗೆ ಕುವೆಂಪುರವರು ಕುಪ್ಪಳ್ಳಿ ಮತ್ತು ಮೈಸೂರಿನಲ್ಲಿ ಇದ್ದಾಗ ಬಳಸುತ್ತಿದ್ದ ವಸ್ತುಗಳು, ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಬಳಸುತ್ತಿದ್ದ ದೊಡ್ಡ ಗಾತ್ರದ ಅಡಿಗೆ ಮನೆಯ ವಸ್ತುಗಳು, ಅವರ ಸಾಹಿತ್ಯ ಭಂಡಾರ, ಅವರ ಪ್ರಶಸ್ತಿಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆಕುವೆಂಪುರವರ ವಿವಾಹದ ಮುದ್ರಿತ ಪತ್ರ ಮತ್ತು ವಿವಾಹ ಮಂಟಪ ಗಮನ ಸೆಳೆಯುವಂತ ವಸ್ತುಗಳಾಗಿವೆಕುವೆಂಪುರವರ ಕೆಲವು ಕಾದಂಬರಿಗಳ ಮೊದಲ ಮುದ್ರಿತ ಪ್ರತಿಗಳನ್ನು ಪ್ರದರ್ಶಿಸಲಾಗಿದೆಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಶ್ರೀ ರಾಮಾಯಣದರ್ಶನಂಮಹಾಕಾವ್ಯದ ಮೊದಲ ಹಸ್ತಪ್ರತಿ ಇದರಲ್ಲಿ ಪ್ರಮುಖವಾದದ್ದುಕರ್ನಾಟಕ ರತ್ನ, ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪತ್ರಗಳು, ಫಲಕಗಳನ್ನು ಮೊದಲ ಬಾರಿ ಕಂಡ ನನಗೆ,ಆದ ಸಂಭ್ರಮ ಅದನ್ನು ಬರವಣಿಗೆಯಲ್ಲಿ ವರ್ಣಿಸಲು ಸಾಧ್ಯವಿಲ್ಲ!
ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು,
ಕಲಾವಂಥನಿಗೆ ಅದು ಸಗ್ಗವೀಡು.
ಕವಿಶೈಲದ ಕುರಿತಂತೆ ಕುವೆಂಪು ಆಡಿರುವ ಮಾತುಗಳು ಅಕ್ಷರಶಃ ನಿಜ.
ಕುವೆಂಪು ಸಮಾಧಿ
ಕವಿಶೈಲದ ನಿಜಮನಾಮ ಆಗ್ಗೆದಿಬ್ಬಣಕಲ್ಲು. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.
ಕವಿಶೈಲದ ಸುಂದರ ಪ್ರಕೃತಿಯ ಮಡಿಲಲ್ಲಿ ಇಂದು ವಿವಿಧ ಸಾಹಿತಿಗಳ ಹಸ್ತಾಕ್ಷರಗಳನ್ನೊಳಗೊಂಡ ಬಂಡೆಯ ಮೇಲೆ ಕುವೆಂಪು ತಾವು ಅನವರತ ಕುಳಿತು ಧ್ಯಾನಸ್ಥರಾಗುತ್ತಿದ್ದರು. ಇಂದು ಅದೇ ಸ್ಥಳದ ಎದುರಲ್ಲಿ ಅವರು ಸಮಾಧಿಸ್ಥರಾಗಿದ್ದಾರೆ (ಅದೇ ಕಲ್ಲಿನ ಎದುರು ಅವರ ಸಮಾಧಿ ಇದೆ.)

ಕುವೆಂಪು ಪುತ್ರರಾದ ಪೂರ್ಣಚಂದ್ರ ತೇಜಸ್ವಿ ಸಮಾಧಿ
ಒಟ್ಟಾರೆ ಹೇಳಬೇಕೆಂದರೆ ನಾನು ಸ್ಥಳಕ್ಕೆ ಭೇಟಿ ನೀಡುವ ಸುಯೋಗ ಕೂಡಿಬಂದದ್ದುಆದು ನನ್ನ ಸುಕೃತವೇ ಸರಿ. ಕುವೆಂಪುವಿನಂತಹಾ ಧ್ಯಾನಸ್ಥ ಕವಿ ನಡೆದ ಮಣ್ಣಿನಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದೇ ನ್ನಡಿಗರಾದ ನಾವೆಲ್ಲ ಹೆಮ್ಮೆ ಪಡಬಹುದಾದ ಸಂಗತಿ.