Monday, January 18, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 66

ಶ್ರೀ ಮಲೆ ಮಹದೇಶ್ವರ (Male Mahadeshwara)
ಭಾಗ –4

 ಶ್ರೀ ಮಲೆ ಮಹದೇಶ್ವರ ಬೆಟ್ಟ.  ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ, ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ ಮಹತ್ವವನ್ನು ಪಡೆದುಕೊಂಡು ಬಂದಿದೆಬೆಂಗಳೂರಿನಿಂದ 210  ಕಿ ಮೀ ದೂರ ದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಏಳು ಮಲೆಗಳು ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ, ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮಿಯ ದೇವಾಲಯವಿದೆ.
ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಮಹದೇಶ್ವರರ ಬಗ್ಗೆ ನೂರಾರು ಜಾನಪದ ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ ಕಾಲದ 1761 ಒಂದು ಶಾಸನದಲ್ಲಿ ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ. ದೇವಸ್ಥಾನಕ್ಕೆಫೆಬ್ರವರಿ ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ. ದಿನದಂದು ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.





***

ನಂತರ ಸ್ವಾಮಿ ಮಾದಪ್ಪ ತಾಳಬೆಟ್ಟಕ್ಕೆ ಬಂದರು. ಅಲ್ಲಿ ಮುಕ್ಕಡಲಿ ಮಾರಿಯನ್ನು ಭೇಟಿಯಾಗಿ ಅವಳಿಂದ ಶ್ರವಣಾಸುರನ ವಿಚಾರವನ್ನು ತಿಳಿದುಕೊಳ್ಳುತ್ತಾನೆ. ಅಲ್ಲಿಂದ ಬಿಳಿಗಿರಿ ರಂಗನಾಥನನ್ನು ದರ್ಶನ ಮಾಡಿಕೊಂಡು ಮುಂದೆ ನದಿಯ  ಸನಿಹದಲ್ಲಿ ಮಾರೀರೆಯರಿಗೆ ಹರಸಿ ಬಂಕಾಪುರಕ್ಕೆ ಆಗಮಿಸಿದನು. ಅಲ್ಲಿ ಶ್ರವಣಾಸುರನನ್ನು ಸಂಹರಿಸಿ ಶ್ರಾವಣ ಮಾಸದಲ್ಲಿ ನಿನಗೆ ಕಜ್ಜಾಯವನ್ನು ನೀಡುವ ವ್ಯವಸ್ಥೆ ನಾನು ಮಾಡಿಸುತ್ತೇನೆಂದು ಹರಸಿ ಸ್ವಾಮಿಯು ಮುಂದೆ ತವಸೆರೆ ಬೆಟ್ಟಕ್ಕೆ ಬಂದು ತಪಸ್ಸು ಮಾಡುತ್ತಾರೆ. ಅಲ್ಲಿ ಅವರಿಗೆ "ತವಸಾರಪ್ಪ" ಎಂದು ಹೆಸರಾಗುತ್ತದೆ. ಅಲ್ಲಿಂದ ನಂತರದಲ್ಲಿ ಸ್ವಾಮಿ ಮಾದಪ್ಪನು ಪಯಣಿಸಿ ಮಾರ್ಗದಲ್ಲಿ ಒಂದು ಕರಿ ಬಂಡೆಯ ಮೇಲೆ ಮಲಗಿ ಆಯಾಸ ಪರಿಹರಿಸಿಕೊಳ್ಳುತ್ತಿರಲು ಬಿಸಿಲು ಬೀಳುತ್ತಿದ್ದ ಸಮಯಕ್ಕೆ ಆನೆಗಳು ಅಲ್ಲಿಗೆ ಬಂದು ಸ್ವಾಮಿಗೆ ಎಳತಾದ ಸೊಪ್ಪಿನಿಂದ ನೆರಳನ್ನು ನೀಡುತ್ತಿವೆ. ಜತೆಗೆ ತಮ್ಮ ಸೊಂಡಿಲಿನಿಂದ ಸ್ವಾಮಿಗೆ ದಿಂಬನ್ನು ಮಾಡುತ್ತವೆ. ಆಗ ಮಾದಪ್ಪನು ಆನೆಗಳಿಗೆ ಮುಂದೆ ಸ್ಥಳವು "ಆನೆ ತಲೆ ದಿಂಬ" ಎಂದು ಹೆಸರಾಗಲಿ, ನಿಮ್ಮಗಳ ಸೇವೆಗಾಗಿ ಭೂಲೋಕದ ಜನರು ಗಜಗೌರಿ ವ್ರತವನ್ನು ಮಾಡಲಿ." ಎಂದು ಹರಸುತ್ತಾನೆ.
ಅಲ್ಲಿಂದ ಮಾದಪ್ಪನು ನಡುಮಲೆಗೆ ಬಂದು ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದುಕೊಂಡನು. ಮುಂದೆ ಆಲಂಬಾಡಿ ಚಿತ್ತೇಗೌಡರ ಹಸುಗಳನ್ನು ತನ್ನತ್ತ ಕರೆಸಿಕೊಂದನು. ಆಗ ತನ್ನ ಲೀಲೆಯಿಂದ ಚಿಂಜೇಗೌಡನಿಂದ ಹದಿನಾರಂಕಣದ ಗುಡಿಯನ್ನು ಕಟ್ಟಿಸಿಕೊಂಡನು. ನಂತರದಲ್ಲಿ ಶಾಂತ ಮಲ್ಲಿಕಾರ್ಜುನ ಸ್ವಾಮಿಯವರಿಂದ ಬೇಡ ಕಂಬಳಕ್ಕೆ ನೂರೊಂದು ವಕ್ಕಲನ್ನು ಮಾಡಿಕೊಂಡನು.  ಅವರೆಲ್ಲರಿಗೂ ಲಿಂಗಧಾರಣೆಯನ್ನು ಮಾಡಿಸಿದ. ಅವಲರೆಲ್ಲರೂ ಮಾದಪ್ಪನ ಬಳಿಯೇ ಉಳಿದರು. ಅವರೆಲ್ಲರೂ ಸೇರಿ ಅಲ್ಲೊಂದು ಊರನ್ನು ಕಟ್ಟಿ ಅದಕ್ಕೆ "ದೇವರ ಹಳ್ಳಿ" ಎಂದು ನಾಮಕರಣ ಮಾಡಿದರು. ಬಳಿಕ ಶಾಂತವೀರ ಸ್ವಾಮಿಗಳು ತಾವು ತಪವನ್ನಾಚರಿಸಿ ಲಿಂಗೈಕ್ಯರಾದರು. ಸ್ಥಳವೇ ಇಂದು " ಸಾಲೂರು  ಮಠ" ಎಂದು ಕರೆಯಲ್ಪಟ್ಟು ಪ್ರತಿದಿನವೂ ಸಾವಿರಾರು ಜಂಗಮರು ಆಗಮಿಸುವ ಯಾತ್ರಾ ಸ್ಥಳವಾಗಿದೆ.

ಮುಂದೆ ಕಾವೇರಿ ನದಿ ತಿರುಗುವ ಎಡಯಲ್ಲಿ ಮಾದಪ್ಪನು ತಪವನಾಚರಿಸುತ್ತಿರಲು ಅಲ್ಲಿಗೆ ಗಂಗಾಧರ (ಹಿಂದೆ ಹಾವಾಗಲೆಂದು ಶಾಪ ಹೊಂದಿದ ಮಾಂತ್ರಿಕ) ಆಗಮಿಸಿ ಸ್ವಾಮಿಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಕ್ಷಮೆ ಯಾಚಿಸುತ್ತಾನೆ. ಆಗ ಮಾದಪ್ಪನು "ಅಯ್ಯಾ ಮುಂದೆ ಕಲಿಯುಗದಲ್ಲಿ ನೀನಿಲ್ಲಿ ಕಲ್ಲಾಗಿತು, ನಾನು ಲಿಂಗರೂಪಿಯಾಗಿರುತ್ತೇನೆ. ನನ್ನ ಭಕ್ತಗಣಗಳಿಗೆ ರಕ್ಷಕನಾಗಿದ್ದು ನನ್ನ ಸೇವೆಯಲ್ಲಿ ಭಾಗಿಯಾಗು. ನೀನಿರುವ ಸ್ಥಳವು "ನಾಗಮಲೆ"ೆಂದು ಹೆಸರಾಗಲಿ."ಎಂದು ಆಶೀರ್ವದಿಸುತ್ತಾನೆ. ಮುಂದೆ ಮಾದಪ್ಪನು ನಡುಮಲೆಗೆ ಬಂದು ನಾನಾರಿಂದ ಪೂಜೆಗೊಳ್ಳಬೇಕೆನ್ನುವುದನ್ನು ನಿರ್ಧರಿಸುತ್ತಿದ್ದಾನೆ.
ಬೇಡ ಕಂಪಣವೆನ್ನುವಲ್ಲಿ ಮಾದಪ್ಪನ ಅನುಗ್ರಹವಿರುವ ಓರ್ವ ಹೆಣ್ಣು ಮಗಳು ಹುಟ್ಟಿರುತ್ತಾಳೆ. ಅವಳ ಹೆಸರು ಸಂಕಮ್ಮ, ಆಕೆ ಮಾದೇಶ್ವರನ ಪರಮ ಭಕ್ತಳಾಗಿ ಬೆಳೆದು ಒಡ್ದವಳಾಗಿದ್ದಾಳೆ. ವಳಿಗೆ ದೇವಗಾರ ನೀಲಯ್ಯನೊಡನೆ ವಿವಾಹವಾಗುತ್ತದೆ. ನೀಲಯ್ಯನು ಸಂಕಮ್ಮನ ಮನೆಯಲ್ಲಿ ಹನ್ನೆರಡು ವರ್ಷಗಳ ಕಾಲ ಇದ್ದನು. ಆಗ ಅವನ ದಾಯಾದಿಗಳು ಸುಮ್ಮನಾಗಿರಲಿಲ್ಲ. ಅವರೆಲ್ಲರೂ ನೀಲಯ್ಯನನ್ನು ಕೊಂಕು ಮಾತುಗಳಿಂದ ಚುಚ್ಚುತ್ತಲೂ, ಅಪಹಾಸ್ಯವನ್ನು ಮಾಡುತ್ತಲೂ ಇದ್ದರು. ಆಗ ನೀಲಯ್ಯನು ತಕ್ಷಣವೇ ತನ್ನ ಪತ್ನಿಯೊಂದಿಗೆ ಒಂದು ತಿಂಗಳಿಗಾಗುವಷ್ಟು ಸಾಮಾನನ್ನು ತೆಗೆದುಕೊಂಡು   ಮನೆ ತೊರೆಯುತ್ತಾನೆ.


ಅಲ್ಲಿಂದ ಅಲರುಗಳು ಬಹುದೂರ ನಡೆದು ಒಂದು ಗವಿಯಲ್ಲಿ ವಾಸಕ್ಕೆ ನಿಲ್ಲುತ್ತಾರೆ. ಸಂಕಮ್ಮ ಆ ಗವಿಯಲ್ಲಿ ವಾಸ ಮಾಡಿದ್ದಕ್ಕಾಗಿ ಆ ಪ್ರದೇಶವನ್ನಿಂದು "ಸಂಕಮಲೆ" ಎಂದು ಕರೆಯಲಾಗುತ್ತದೆ. ಅಲ್ಲಿ ಅವರು ವಾಸ ಮಾಡುತ್ತಿರಲು ಅವರು ಮನೆಯಿಂದ ತಂದಿದ್ದ ಸಾಮಾನುಗಳು ಖಾಲಿಯಾಗುತ್ತದೆ. ಆಗ ನೀಲಯ್ಯನು ನಾನಿನ್ನು ಬೇಟೆಯಾಡಲು ಹೊರಡಬೇಕಾಗಿದೆ ಎಂದು ತೀರ್ಮಾನಿಸಿದ. ಹೋಗಿ ಬರಲು ಒಟ್ಟೂ ಒಂಭತ್ತು ದಿನಗಳಾಗುತ್ತವೆ. ಅಷ್ಟರವರೆಗೂ ಈ ಸುಕುಮಾರಿ ಒಬ್ಬಳೇ ಇರಬೇಕು. ಅವಳಾನ್ನಾರಾದರೂ ಹಾರಿಸಿಕೊಂಡು ಹೋದರೆ ಏನುಗತಿ ಎಂದು ತರ್ಕಿಸಿ ಅವಳನ್ನು ಕರೆದು ಅವಳ ಸೀರೆ, ಕುಪ್ಪಸವನ್ನೆಲ್ಲಾ ಬಿಚ್ಚಲು ಹೇಳಿ ಅವಳಿಗೆ ತೇಗದೆಲೆಗಳನ್ನು ತೊಡಿಸಿದ. ಬಾಯಿ ತೆರೆಯಲು ಹೇಳಿ ಮಾತನಾಡಲೂ ಆಗದಂತೆ ನೆಗ್ಗಿಲ ಮುಳ್ಳನ್ನು ಚುಚ್ಚಿದನು. ಮತ್ತು ಕೈ ಕಾಲುಗಳನ್ನು ಸರಪಣಿಗಳಿಂದ ಬಂಧಿಸಿ ಗವಿಯ ಬಾಯಿಗೆ ಬಂಡೆಯನ್ನು ತುರುಕಿ ತಾನು ಕಾಡಿನೊಳಗಡೆ ನಡೆದನು. ಮೂರು ದಿನಗಳು ಕಳೆಯಿತು. ಆ ಸಂಕವ್ವೆ ತಾನು ಉಪವಾಸವಿದ್ದಳು. ಮೈಮೇಲಿನ ಎಲೆಗಳು ಒಣಗಿವೆ. ಗೆದ್ದಿಲುಗಳು ತಿಂದು ಹಾಕಿದ ಪರಿಣಾಮ ಬರಿ ಮೈನಲ್ಲಿ ಮಲಗಿದ್ದಳೆ. ಆಗ ಅಲ್ಲಿದ್ದ ಕಟ್ಟಿರುವೆಗಳು ಅವಳ ಮೈಯನ್ನು ಮುತ್ತುತ್ತವೆ. ಕಚ್ಚುತ್ತವೆ. ಆಗ ನೋವು ತಾಳಲಾರದೆ, ಹಸಿವು , ನೀರಡಿಕೆಗಳನ್ನು ತಾಳಲಾರದೆ ಮಾಯಕಾರ ಮಾದಪ್ಪನನ್ನು ಬೇಡಿಕೊಳ್ಳುತ್ತಾಳೆ. ಆಗ ಮಾದಪ್ಪ ತಪಸ್ಸಿನಲ್ಲಿ ನಿರತನಾದವನು ಎಚ್ಚೆತ್ತು ಬೇಡರ ಕನ್ನಯ್ಯನಿಗೆ ತನ್ನ ಹುಲಿಯನ್ನು ತಯಾರು ಮಾಡೆಂದು ಅಪ್ಪಣೆ ಕೊಡಿಸಿ ಅವಳನ್ನು ರಕ್ಷಿಸಲು ಹೊರಡುತ್ತಾನೆ. ಹಾಗೆ ಬಂದ ಮಾದಪ್ಪನು ಗವಿಯ ಬಾಯಿಯ ಬಂಡೆಯನ್ನು ಸರಿಸಿ ಒಳಬಂದು ವಿಭೂತಿಯನ್ನು ಮಂತ್ರಿಸಿ ಅವಳಿಗೆ ಕೊಟ್ತನು. ತಕ್ಷಣವೇ ಅವಳ ಕಷ್ತಗಳೆಲ್ಲ ನೀಗಿದವು. ಅವಳಿದ್ದ ಗವಿಯು ಅರಮನೆಯಾಯಿತು. ತೊಟ್ಟಿದ್ದ ಸೊಪ್ಪಿನ ಉಡುಗೆ ರೇಶಿಮೆಯ ಸೀರೆಯಾಯಿತು. ಮನೆಯ ಹೊರಗೆ ಚಿನ್ನದ ಕಂಸಾಳೆಗಳ ನಾದ ಪ್ರರಂಭವಾಗಿ ಮಾದಪ್ಪನ ಆಗಮನವನ್ನು ಸಾರುತ್ತಿದ್ದವು. ಆಗ ಸಂಕವ್ವೆಯು ತಾನು ಮುತ್ತು ರತ್ನಗಳನ್ನು ತಂದು ಮಾದಪ್ಪನ ಪಾದಕ್ಕೆ ಸಮರ್ಪಿಸಿದಳು. ಆನಂದದಿಂದ ಆರತಿ ಎತ್ತಿ ಸಂಭ್ರಮಿಸಿದಳು. ಆಗ ಮಾದಪ್ಪನು "ತಾಯೀ, ನಿನಗೆ ಮಕ್ಕಳಿದ್ದಾರೆಯೇ?" ಎಂದು ಕೇಳಲು "ಅಯ್ಯಾ ಮಾದಪ್ಪ ಮದುವೆಯಾಗಿ ಒಂಭತ್ತು ವರ್ಷಗಳಾದವು. ಮಕ್ಕಳಾಗಿಲ್ಲ." ಎನ್ನಲು ಮಾದಪ್ಪನು ಬಂಜೆಯಾದವಳ ಬಳಿ ಭಿಕ್ಷೆ ಸ್ವೀಕರಿಸಲಾರೆ ಎನ್ನುತ್ತಾನೆ. ಆಗ ಸಂಕವ್ವೆ ನನ್ನ ಮನೆ ದೇವರಾದ ನೀನೇ ಹಾಗೆಂದರೆ ನನ್ನ ಗತಿಯೇನು ಎಂದು ವಿಲಾಪಿಸುತ್ತಾಳೆ. ಆಗ ಮಾದೇಶನು "ನಿನಗೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತೇನೆ, ಆದರೆ ಗಂಡು ಮಗುವಾದರೆ ಗುಡ್ದದವನನ್ನಾಗಿಯೂ, ಹೆಣ್ಣಾದರೆ ಗುಡ್ಡಿಅನ್ನಾಗಿಯೂ ಬಿಡಬೇಕು. ಸಮ್ಮತವೆ?" ಎಂದು ಕೇಳಲು ಸಂಕವ್ವೆ ಸಂತೋಷದಿಂದ ಒಪ್ಪಿಕೊಳ್ಳುತ್ತಾಳೆ.
ಮಾದಪ್ಪನು ಅನುಗ್ರಹಿಸಿ ಹೊರಡುತ್ತಾನೆ. ಆಗ ಅದೇ ಸಮಯಕ್ಕೆ ಬೇಟೆಗೆ ಹೋಗಿದ್ದ ಅವಳ ಪತಿ ನೀಲಯ್ಯನು ಆಗಮಿಸುತ್ತಾನೆ. ಗುಹೆಯ ಬದಲಾಗಿ ಮನೆಯನ್ನು ಕಂಡು, ಅವಳ ಅಲಂಕಾರವನ್ನು ಕಂಡು ಕುಪಿತಗೊಂಡು, ಇವಳು ಯಾರನ್ನೋ ಮಾಡಿಕೊಂಡಿದ್ದಾಳೆ ಎಂದು ಶಂಕಿಸಿ ಅವಳನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಮಾಯಕಾರ ಮಾದೇಶನು ಅವಳ ತದ್ರೂಪವನ್ನು ಒಂದು ಮರದ ಕೊಂಬೆಯಿಂದ ನಿರ್ಮಿಸಿರುತ್ತಾನೆ ಮತ್ತು ನೀಲಯ್ಯ ಅದನ್ನೇ ತನ್ನ ಪತ್ನಿಯೆಂದು ಭಾವಿಸಿ ಕಡಿದು ಹಾಕುತ್ತಾನೆ. ಆಗ ಆ ಶಬ್ದದಿಂದ ಕುಪಿತಗೊಂಡ ಸಂಕವ್ವೆ ಹೊರ ಬಂದು ನೋಡಲು ನೀಲಯ್ಯನು "ಎಲೆ ಹೆಣ್ಣೆ ಏನು ಮಾಡುತ್ತಿರುವೆ? ನಾನು ಬೇಟೆಗೆ ಹೋದ ಬಳಿಕ ಯಾರೊಡನೆ ವಾಸಿಸುತ್ತಿದ್ದೆ?" ಎಂದು ಕೇಳಲು :ಶಿವ ಶಿವಾ! ನಾನೇನೂ ತಪ್ಪು ಮಾಡಿಲ್ಲಸ್ವಾಮಿ.ನಮ್ಮ ಮನೆ ದೇವರಾದ ಮಾಯಕಾರ ಮಾದಪ್ಪನ ಕೃಪೆ ಇದು."ಎನ್ನಲು ಅವನು ನಂಅದೆ ಅವಳನ್ನು ನಡುಮನೆಗೆ ಕರೆದು ಕುದಿವ ಎಣ್ಣೆ ಬಾಣಲೆಯಲ್ಲಿ ಕುಳ್ಳಿರಲು ಹೇಳಿದ ಅವಳು ಮಾದಪ್ಪನನ್ನು ನೆನೆದು ಕುಳಿತಿರಲು ಆ ಎಣ್ಣೆಯೂ ತಣ್ಣನೆಯ ನೀರಾಯಿತು. ಅವನಾಗ ಇವಳಾರೋ ಮಂತ್ರ್ವಾದಿಯನ್ನೇ ವರಿಸಿದ್ದಾಳೆಂದು ನಂಬಿ ಮೂರು ಖಂಡುಗ ಎಳ್ಳು, ರಾಗಿ ಹಾಗೂ ನವಣೆಯನ್ನು ಮಿಶ್ರ ಮಾಡಿ ಅವಳನ್ನು ಕರೆದು "ನೋದು ರಾತ್ರಿ ಬೆಳಗಾಗುವುದರೊಳಗೆ ಈ ಮೂರೂ ಧಾನ್ಯಗಳು ಬೇರೆ ಬೇರೆಯಾಗಿರಬೇಕು. ಇಲ್ಲವಾದರೆ ನಿನ್ನ ತಲೆಯನ್ನು ಆಹುತಿ ತೆಗೆದುಕೊಳ್ಳುತ್ತೇನೆ." ಎನ್ನುತ್ತಾನೆ. ಮಾಯಕಾರ ಮಾದಪ್ಪನ ಸಹಾಯದಿಂದ ರಾತ್ರಿ ಬೆಳಗಾಗುವುದರಲ್ಲಿ ಆ ಧಾನ್ಯಗಳೂ ಬೇರೆ ಬೇರೆಯಾಗಿದ್ದವು , ಆದರೆ ನೀಲಯ್ಯ ಇನ್ನೂ ತನ್ನ ಪತ್ನಿಯನ್ನು ನಂಬಲು ತಯಾರಿರಲಿಲ್ಲ.
ಕಡೆಗೆ ಕೆಂದದ ರಾಶಿಯ ಮೇಲೆ ಮೂರು ಬೊಗಸೆ ಕೆಂದವನ್ನು ಉಡಿಯಲ್ಲಿರುವಂತೆ ನಡೆಯಲು ಸಂಕಮ್ಮನಿಗೆ ಹೇಳಲು ಅವಳು ಹಾಗೆಯೇ ಮಾಡುತ್ತಾಳೆ. ಆಗ ಅವನು ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟು ಮಾದೇಶನ ಒಕ್ಕಲಾಗಿ ಬಾಳಲು ಸಮ್ಮತಿಸಿ ಬಾಳುತ್ತಾನೆ. ಮುಂದೆ ಅವರಿಗೆ ಆವಳಿ ಜವಳಿ ಮಕ್ಕಳಾಗುತ್ತಾರೆ. ಅವರಿಬ್ಬರನ್ನೂ ಚೆನ್ನಾಗಿ ಬೆಳೆಸಿದ ನೀಲಯ್ಯ-ಸಂಕಮ್ಮ ದಂಪತಿಗಳು ಆ ಮಕ್ಕಳನ್ನು ಮಠಕ್ಕೆ ನೀಡುತ್ತಾರೆ. ಮಠದಲ್ಲಿ ಅವರಿಗೆ "ಕಾರಯ್ಯ" ಹಾಗೂ "ಬಿಲ್ಲಯ್ಯ"ಎಂದು ನಾಮಕರಣ ಮಾಡುತ್ತಾರೆ. ಕಾರಯ್ಯನಿಗೆ ಮಂತ್ರ, ತಂತ್ರಗಳನ್ನು ಕಲಿಸಿ ಪರಿಶೆ ಜನರನ್ನು ನೋಡಿಕೊಳ್ಳಲಿಕ್ಕಾಗಿ ನೇಮಿಸಿದ ಮಾದಪ್ಪನು ಬೀರಯ್ಯನಿಗೆ ಅನುಸಾಲಮ್ಮನನ್ನು ತಂದು ಮದುವೆ ಮಾಡಿಸುತ್ತಾನೆ. ಆ ದಂಪತಿಗಳಿಗೆ ಶೇಶಣ್ಣನೆನ್ನುವ ಗಂಡು ಮಗು ಜನ್ಮಿಸುತ್ತದೆ.
ಅವನಿಗೆ ಮಠಕ್ಕೆ ಬಂದ ಜನಗಳನ್ನು ಕಾಯುವ ಕೆಲಸ ಹಚ್ಚಲಾಯಿತು. ಆ ಶೇಶಣ್ಣನೂ ದೊಡ್ದವನಾದನು. ಆಗ ಮಾದಪ್ಪ " ಶೇಶಣ್ಣ ನೀನು ದೀಕ್ಷೆ ತೆಗೆದುಕೊಂಡು ನಾಲ್ಕಾರು ಮನೆಯಿಂದ ಭಿಕ್ಷೆ ಎತ್ತಿ ಗುಡ್ದರನ್ನು ಸಲಹುವಂತವನಾಗು." ಎಂದಾಗ ಾವನು ಅದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆಗ ಮಾದಪ್ಪ ತಾನು ಮಂತ್ರದಿಂದ ದನಗಳ ಹಟ್ಟಿಯಲ್ಲಿ ಒಂದು ಹುಲಿಯನ್ನು ಸೃಷ್ಟಿಸುತ್ತಾನೆ. ಮರುದಿನ ಯಥಾಪ್ರಕಾರ ಶೇಶಣ್ಣ ಕೊಳಲನೂದಲು ದನಗಳೆಲ್ಲವೂ ಎದ್ದು ಮೇಯಲು ಹೊರ ಹೋಗುತ್ತವೆ. ಆದರೆಆ ಒಂದು ಹುಲಿ ಮಲಗಿರುತ್ತದೆ. ಆಗ ಶೇಶಣ್ಣ ಅದೂ ಸಹ ದನವೆಂದೇ ಭಾವಿಸಿ ದೊಣ್ಣೆಯಿಂದ ಬೀಸಿ ಹೊಡೆಯುತ್ತಾನೆ. ಆಗ ಒಂದೇ ನೆಗೆತದಲ್ಲಿ ಎದ್ದ ಆ ಭಯಂಕರ ವ್ಯಾಘ್ರವು ಶೇಶಣ್ಣನ ಮೇಲೆರಗಿ ಅವನ ಹೊಟ್ಟೆಯನ್ನೇ ಬಗೆದು ಹಾಕುತ್ತದೆ.
ಶೇಶಣ್ಣ್ ಸತ್ತು ಮಲಗಿರಲು ತಾಯಿ ಅನುಸಾಲಮ್ಮ ನನ್ನ ಮಗನನ್ನು ಹುಡುಕುತ್ತಾ ಬರುತ್ತಾಳೆ. ಆಗ ತೊಟ್ಟಿಯಲ್ಲಿ ಸತ್ತು ಬಿದ್ದ ಶೇಶಣ್ಣನನ್ನು ಕಂಡು ಗಾಬರಿಯಿಂದ ತನ್ನ ಪತಿ ಬಿಲ್ಲಯ್ಯನಿಗೆ ಸುದ್ದಿ ತಿಳಿಸಲು ಬಿಲ್ಲಯ್ಯನು ಮಾದಪ್ಪನ ಬಳಿ ಸಾರಿ ತನ್ನ ಮಗನನ್ನು ಉಳಿಸಿ ಕೊಡುವಂತೆ ಕೇಳುತ್ತಾನೆ. ಆಗ ಮಾದಪ್ಪ "ನಿನ್ನೆಗೆ ಅವನ ಆಯಸ್ಸು ತೀರಿದೆ. ಚಿಂತೆ ಬೇಡ ಅವನಿಗೆ ನಾನು ಹನ್ನೆರಡು ವರ್ಷಗಳಿಗೊಮ್ಮೆ ಜಾತ್ರೆ ಮಾಡಿಸುತ್ತೇನೆ. ಹಸಿ ಬತ್ತ, ಹಸಿ ಕೊಂಡದಿಂದ ಜಾತ್ರೆ ಮಾಡಿಸುತ್ತೇನೆ. ಇವನನ್ನು ಕರೆದುಕೊಂಡು ಹೋಗಿ ಅಂತರಗಂಗೆ ಹತ್ತಿರ ನಿಕ್ಷೇಪವನ್ನು ಮಾಡಿರಿ. ಎಂದು ಅಪ್ಪಣೆ ಮಾಡಲು ದಂಪತಿಗಳು ಹಾಗೆಯೇ ಮಾಡಿದರು.
ನಂತರದಲ್ಲಿ ಆ ದಂಪತಿಗಳಿಗೆ ಕಾಳ ಮಾದ ಒಡೆಯರು, ಬೋಳಮಾದ ಒಡೆಯರು, ಕೆಂಪಮಾದ ಒಡೆಯರು ಎನ್ನುವ ಮೂವರು ಮಕ್ಕಳಾದರು. ಅವರ ವಂಶದವರೇ ಈಗ ನಾಲ್ಕು ನಾಲ್ಕು ತಿಂಗಳಿಗೆ ಸೇವೆ ಮಾಡಿಕೊಂಡು ಬರುತ್ತಿದ್ದಾರೆ,
ಹೀಗೆ ತಮಡಿಗಳನ್ನು ಪಡೆದ ನಂತರ ಅಲ್ಲಿನ ನೇರಳೆಕೆರೆ ಎನ್ನುವ ಜಾಗದಲ್ಲಿ ಪಟಗಾರ ರಾಯಣ್ಣ ನಾಯಕನೆನ್ನುವನಿದ್ದ. ಅವನನ್ನು ಓಕುಳಿ ಸೇವೆಗೆ ಕತೃವಾಗಿಸಿಕೊಳ್ಳುತ್ತಾರೆ. ಹೀಗೆ ಆನಂದದಿಂದ ಸ್ವಾಮಿಯು ನಡುಮಲೆಯಲ್ಲಿ ನೆಲೆಸಿರಲು ಅದೊಮ್ಮೆ ಸರಗೂರಿನ ಮೂಗಪ್ಪ ಹಾಗೂ ರಾಮವ್ವೆ ಬರುತ್ತಾರೆ. ಹಾಗೆ ಬಂದ ಮೂಗಪ್ಪ,"ತಂದೆ ನನಗೆ ವಯಸ್ಸಾಗಿದೆ. ನಾನು ಬೆಟ್ಟವನ್ನೇರಲುಸಾಧ್ಯವಿಲ್ಲವಲ್ಲ." ಎಂದಾಗ ಮಾದಪ್ಪನು ಅವರಿಗೊಂದು ಲಿಂಗವನ್ನು ನೀಡಿ "ಇದನ್ನು ನಿನ್ನ ಊರಾದ ಸರಗೂರಿನಲ್ಲಿ ಪ್ರತಿಷ್ಠೆ ಮಾಡು. ಯಾರಿಗೆ ನನ್ನ ಏಳು ಮಲೆ ಬೆಟ್ಟವನ್ನೇರಲು ಸಾಧ್ಯವಿಲ್ಲವೋ ಅಂತಹವರು ಸರಗೂರಿಗೆ ಬಂದು  ದರ್ಶನ ಮಾಡಿದರೆ ನನಗೆ ಸಂತೋಷವಾಗುತ್ತದೆ" ಎಂದು ಅಭಯ ನೀಡುತ್ತಾರೆ. ಆಗ ರಾಮವ್ವೆ "ಸ್ವಾಮಿ ನಮ್ಮ ವಂಶದಲ್ಲಿ ಯಾರೇ ಎಣ್ಣೆ ಮಜ್ಜನ ಮಾಡಿಸಿದರೂ ಅವರಿಗೆ ದರ್ಶನ ನೀಡುವಂತೆ ಪ್ರಾರ್ಥಿಸಿಕೊಳ್ಳುತ್ತಾಳೆ. ಸ್ವಾಮಿಯು ಅದಕ್ಕೆ ಸಮ್ಮತಿಸಿ ಅನುಗ್ರಹಿಸುತ್ತಾನೆ.
ಹೀಗೆ ಸ್ವಾಮಿಯು ದಿನ ದಿನಕ್ಕೆ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರಲು ಒಂದು ಮಹಾ ಶಿವರಾತ್ರಿಯ ದಿನ ಹಾಲಂಬಾಡಿ ಜುಂಜೇಗೌಡರು ಕಟ್ಟಿಸಿಕೊಟ್ಟ ಗುಡಿಯ ಒಳಗೆ ಲಿಂಗರೂಪಿಯಾಗಿ ನೆಲೆಸುತ್ತಾರೆ. ಅಲ್ಲಿಂದ ಇಂದಿನವರೆಗೂ ಲಕ್ಷಂತರ ಭಕ್ತರಿಗೆ ಮಾದಪ್ಪನು ಅಭಯವನ್ನಿತ್ತು ಆಶೀರ್ವಾದ, ಸಕಲಯ್ಶ್ವರ್ಯ, ಸಿರಿ ಸಂಪತ್ತನ್ನು ಕರುಣಿಸುತ್ತಾ ಬರುತ್ತಿದ್ದಾನೆ. 

"ಏಳು ಮಲೆ, ಎಪ್ಪತ್ತೇಳು ಮಲೆ ಮಾಯಕಾರ ಮಾದಪ್ಪನಿಗೆ ಉಘೇ.... ಉಘೇ....!!"

No comments:

Post a Comment