ಆಶ್ಚರ್ಯವಾಗಬಹುದು!
ಸಹಸ್ರಾರು ಚದರ ಮೈಲಿ ವಿಸ್ತಾರದ
ಕಾಡಿನ ನಟ್ಟನಡುವೆ ನಾಲ್ಕಾರು ದಾರಿ ಕೂಡುವ ಈ
ಸರ್ಕಲ್ಲಿಗೆ ಯಾಕೆ ಜುಗಾರಿ ಕ್ರಾಸ್
ಎಂದು ಹೆಸರಿಟ್ಟಿದ್ದಾರೆ ಎಂದು! ಈ ನಿರ್ಜನ
ಪ್ರದೇಶದಲ್ಲಿ ಯಾವ ಗಿರಾಕಿ ಸಿಕ್ಕುತ್ತದೆಂದು
ಕಾಯುತ್ತಾ ಬಾಡಿಗೆ ಟ್ಯಾಕ್ಸಿಗಳು ನಿಂತಿರುತ್ತವೆಂದು!
ಈ ಕೂಡು ರಸ್ತೆಗಳಲ್ಲಿ
ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ ಮುಂತಾದಲ್ಲಿಗೂ
ಹೋಗುವ ರಸ್ತೆಗಳಿರುವುದರಿಂದ ಅಲ್ಲಿಗೆ ಹೋಗುವವರು ಟ್ಯಾಕ್ಸಿ
ಮಾಡಿಕೊಂಡು ಹೋಗುತ್ತಾರೇನೋ ಎಂದು ಶಂಕಿಸಬಹುದು. ಈ
ಪುಣ್ಯಕ್ಷೇತ್ರಗಳಿಗೆ ಹೋಗಬಹುದೆಂಬುದೇನೋ ನಿಜ! ಆದರೆ ಅಲ್ಲಿಗೆ
ಬಂದು ಟ್ಯಾಕ್ಸಿ ಮಾಡಿಕೊಂಡು ಹೋಗುವವರು ಯಾರು? ಈ ಪ್ರಶ್ನೆಗೆ
ಮಾತ್ರ ಉತ್ತರ ಕೇಳಬೇಡಿ! ಅಲ್ಲಿ
ಫಾರೆಸ್ಟ್ ಚೆಕ್ ಪೋಸ್ಟಿನ ಬಳಿ
ಒಂದು ದೊಡ್ಡ ಚಾ ಹೋಟೆಲ್ಲು
ಸದಾ ನೊಣ ಹೊಡೆಯುತ್ತಾ ಬಿದ್ದಿರುತ್ತದೆ.
ಅಲ್ಲಿರುವ ಇಬ್ಬರೇ ಗಿರಾಕಿ, ಫಾರೆಸ್ಟರ್
ಮತ್ತು ಗಾರ್ಡಿಗೆ ಹಡಬಿಟ್ಟೀ ಚಾ ಒದಗಿಸುತ್ತಾ ಅದನ್ನು
ನಡೆಸುತ್ತಿರುವವರು ಯಾರು? ಅದನ್ನು ಕಟ್ಟಿಸಿದವರು
ಯಾರು? ಹೀಗೆ ಈ ಭಯಂಕರ
ಏಕಾಂತದ ಜುಗಾರಿ ಕ್ರಾಸ್ ನೋಡಿದವರಿಗೆ
ನೂರಾರು ಕೌತುಕದ ಪ್ರಶ್ನೆಗಳು ಕಾಡುವುದರಲ್ಲಿ
ಅನುಮಾನವೇ ಇಲ್ಲ.
ಜುಗಾರಿ
ಕ್ರಾಸಿನ ಎಲ್ಲಾ ದಾರಿಗಳಿಗೂ ಒಂದೊಂದು
ಬಲವಾದ ಗಳುವನ್ನು ಅಡ್ಡಲಾಗಿ ಕವೆಗೋಲಿನ ಮೇಲೆ ಕೂರಿಸಿರುತ್ತಾರ್ರೆ. ಮೊದಲು
ಆ ಬಿದಿರು ಬೊಂಬುಗಳಿಗೆ
ಒಂದೊಂದು ಕೆಂಪು ಲಾಟೀನನ್ನು ಹೋಗಿ
ಬರುವ ವಾಹನಗಳಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗಲೆಂದು ಕಟ್ಟಿರುತ್ತಿದ್ದರು. ಆದರೆ ಅಲ್ಲಿ ನಡೆಯುವ
ಕಾಳ ವ್ಯವಹಾರದ ದಂಧೆ ಇವ್ಯಾವುದನ್ನೂ ಗಮನಿಸುವ
ಸ್ಥಿತಿಯಲ್ಲಿ ಇಲ್ಲದ್ದರಿಂದ ದಿನಕ್ಕೊಂದು ಬೊಂಬು ಮುರಿದು, ಲಾಟೀನು
ಪುಡಿಪುಡಿಯಾಗಿ, ಅರಣ್ಯಿಲಾಖೆಗೆ ಈ ಲುಕ್ಸಾನು ತಡೆಯಲಾಗದೆ
ಲಾಟೀನು ಕಟ್ಟುವುದನ್ನು ಖೈದು ಮಾಡಿ........................
***
"ಜುಗಾರಿ ಕ್ರಾಸ್"
ಪೂರ್ಣಚಂದ್ರ ತೇಜಸ್ವಿಯವರ ಮಹತ್ವದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ
ಛಾಪು ಮೂಡಿಸಿದ ಒಂದು ವಿಶಿಷ್ಟ
ಕಾದಂಬರಿ. ಕಾಡುಗಳ್ಳರ ಕಾಳದಂಧೆಗಳ ಕುರಿತು ಈ ಕೃತಿಯಲ್ಲಿ
ತೇಜಸ್ವಿಯವರು ಮಾತನಾಡುತ್ತಾ ಪ್ರಾಕೃತಿಕ ಸಂಪತ್ತನ್ನು ಕಾಪಾಡುವ ಬಗೆಗೆ ತಮ್ಮದೇ
ನೆಲೆಯಲ್ಲಿ ಚಿಂತನೆ ನಡೆಸುತ್ತಾರೆ. ತೇಜಸ್ವಿಯವರೇ
ಹೇಳಿಕೊಂಡಿರುವಂತೆ ಒಂದು ಕ್ಷಣಕ್ಕೆ ರೊಮ್ಯೋಂಟಿಕ್
ಥ್ರಿಲ್ಲರ್ ಎಂದೆನಿಸಬಹುದಾದ ಈ ಕೃತಿ ಬದಲಾಗುತ್ತಿರುವ
ಸನ್ನಿವೇಶಗಳು ಉಂಟುಮಾಡುತ್ತಿರುವ ಅವಾಂತರ ಅಪಾಯಗಳನ್ನೂ, ಅಭಿವದ್ಧಿಶೀಲ
ರಾಷ್ಟ್ರಗಳ ಪ್ರದೇಶಗಳಲ್ಲಿ ಜಾಗತಿಕ ಪರಿಣಾಮಗಳು ಸೃಷ್ಟಿಸಬಹುದಾದ
ತಲ್ಲಣಗಳನ್ನೂ ಎಳೆಎಳೆಯಾಗಿ ಪ್ರೇಕ್ಷಕರ ಮುಂದಿಡುತ್ತಾ ಹೋಗುತ್ತದೆ. ಕೇವಲ 24 ಗಂಟೆಗಳ ಅವಧಿಯ
ಕಥೆ ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ
ವಾಸ್ತವಿಕ ಸಾಮಾಜಿಕ ಕಾದಂಬರಿ. ಕುವೆಂಪು
ಅವರ ಕಾನೂರು ಹೆಗ್ಗಡತಿ, ಕಾರಂತರ
ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿ
ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ
ಅಜಗಜಾಂತರ ವ್ಯತ್ಯಾಸಕ್ಕೆ ಈ ಕಾದಂಬರಿಯೇ ಉದಾಹರಣೆ.
ಮಲೆನಾಡಿನ
ದಟ್ಟ ಕಾಡೇ ಕಾಳ ದಂಧೆಗಳ
ತವರೂರಾಗುವುದು, ಈ ವ್ಯವಹಾರಗಳ ಜೊತೆಜೊತೆಗೇ
ಡ್ರಗ್ಸ್ ಮಾಫಿಯಾ ಜೂಜು ಸೇರಿ,
ಏಲಕ್ಕಿ ಮಾರಲೆಂದು ಹೊರಟ ವಿದ್ಯಾವಂತ ರೈತ
ದಂಪತಿ ಸುರೇಶ ಮತ್ತು ಗೌರಿ
ಆ ವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳುವುದು,
ಜುಗಾರಿ ಕ್ರಾಸ್ ಎಂಬ ಊರಿನಲ್ಲಿ
ನಡೆಯುತ್ತಿದ್ದ ರಹಸ್ಯ ಕಾಳ ಧಂಧೆಯ
ಕುರಿತು ಹೇಳುತ್ತಾ ಒಬ್ಬ ಅಮಾಯಕ ಸುರೇಶ
ತನಗೆ ಗೊತ್ತಿಲ್ಲದಂತೆ ಆ ಕಾಳ ಧಂಧೆಗೆ
ಸೇರಿಬಿಡುತ್ತಾನೆ. ಹಾಗೆ ಸೇರುವ ಮುನ್ನ
ಹಾಗೂ ತದನಂತರದ ಸರಣಿ ಕಥೆಗಳನ್ನು
ಅತ್ಯಂತ ಕ್ರೀಯಾಶೀಲತೆಯಿಂದ ಹೆಣೆದಿದ್ದಾರೆ. ಸುರೇಶ ಮತ್ತು ಗೌರಿ
ಆ ಕಾಳ ಧಂಧೆಗೆ
ಆಕಸ್ಮಿಕ ವಾಗಿ ಸಿಕ್ಕು ಪಟ್ಟ
ಕಷ್ಟಗಳು ಹಾಗೂ ಅದರಿಂದ ಹೊರಬಂದ
ಪರಿ ಈ ಕಥೆಯ ಸಾರಾಂಶ
ಹುಸಿ
ಕ್ರಾಂತಿಕಾರಿ ಗಂಗೂಲಿ, ಅರವತ್ತು ಸಾವಿರ
ಲಂಚ ಕೊಟ್ಟು ಅದನ್ನು ಗಿಟ್ಟಿಸಲು
ಪೇಚಾಡುವ ಇಕ್ಬಾಲ್, ಇಪ್ಪತ್ತು ರೂಪಾಯಿಗೂ ಖೂನಿ ಮಾಡಬಲ್ಲ ಜಾನಿ
ಹೆನ್ರಿ, ಅನಧಿಕೃತವಾಗಿ ಚೆಕ್ಗಳನ್ನು ಕ್ಯಾಷ್
ಮಾಡುವ ಶೇಷಪ್ಪ ಪಾತ್ರಗಳಂತೆ ಕಾಣದೆ
ಪ್ರೇಕ್ಷಕರ ನಡುವೆ ಇರುವ ಸಹಜ
ವ್ಯಕಿಗಳಂತೆ ಗೋಚರಿಸುತ್ತಾರೆ.
ಪರಸ್ಪರ
ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ
ಸಾಗುವ ಈ ಕಾದಂಬರಿಯೊಂದು ವಿಚಿತ್ರ
ಮತ್ತು ಅಸಾಧಾರಣ ಕೃತಿ. ಜೀವನದ
ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ
ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ
ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ.
ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶವಾದ ಇವುಗಳೆಲ್ಲವನ್ನೂ
ಮೀರಿದ ಗಂಭೀರ ಎದೆಗಾರಿಕೆಯನ್ನು ಇದು
ನಮಗೆ ತೋರಿಸಿ ಕೊಡುತ್ತದೆ
ಸಂಪೂರ್ಣ
ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ.
ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು
ಅಲ್ಲಿನ ಕಷ್ಟ-ಸುಖಗಳನ್ನು ಬಹಳ
ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ
ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ
ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ.
ಈ ಕೃತಿ ಮಲೆನಾಡಿನಲ್ಲಿ
ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ಒಟ್ತಾರೆ
ಇದೊಂದು ಸಾಹಸಮಯ ಪತ್ತೇದಾರಿ ಕಾದಂಬರಿಯಂತಿದ್ದು ಕಾದಂಬರಿಯನ್ನು
ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ
ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ
ಓದುಗನಿಗೆ ಭಾಸವಾಗುತ್ತದೆ
No comments:
Post a Comment