ನಂಜನಗೂಡು (Nanjanagud)
ಭಾಗ - 1
ಕುಂಡಿನಿ (ಕೌಂಡಿನ್ಯ) ಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧವಾದ ಶಿವ ಕ್ಷೇತ್ರ ಹಾಗೂ ಪುಣ್ಯ ಭೂಮಿ. ನಂಜನಗೂಡಿನ ಹಿಂದಿನ ಹೆಸರು ಗರಳಪುರಿ. ಗರಳ ಎಂದರೆ ವಿಷ ಅರ್ಥಾತ್ ಹಾಲಾಹಲ. ಹಾಲಾಹಲವನ್ನೇ ಕುಡಿದ ನಂಜುಂಡ ನೆಲೆಸಿಹ ಪುಣ್ಯ ಭೂಮಿಯೇ ನಂಜನಗೂಡು ಕ್ಷೇತ್ರ.
ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ
ಕೇವಲ 28 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯ ಕ್ಷೇತ್ರದ ಮಹಿಮೆಯ ಬಗ್ಗೆ ಹಲವು ಪುರಾಣಗಳಲ್ಲಿ ಬಣ್ಣಿಸಲಾಗಿದೆ. ಸ್ಕಂದ ಪುರಾಣದಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ. ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಪವಿತ್ರ ಕ್ಷೇತ್ರ ನಂಜನಗೂಡು. ತನ್ನ ಶ್ರೀಮಂತ ಪರಂಪರೆಯಿಂದಾಗಿ ಸಹಾ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಪಟ್ಟಣ ಮೊದಲಿಗೆ ಗಂಗರ ಆಳ್ವಿಕೆಗೆ ಒಳಪಟ್ಟಿತ್ತು, ನಂತರ ಹೊಯ್ಸಳರು ಇದನ್ನು ಆಳಿದರು , ಆನಂತರ ಮೈಸೂರು ಒಡೆಯರು ಇದನ್ನು ಆಳಿದರು. ಇತಿಹಾಸದಲ್ಲಿ ದಾಖಲಾದಂತೆ ಶ್ರೀರಂಗಪಟ್ಟಣವನ್ನು ಆಳಿದ ಹೈದರಾಲಿ ಮತ್ತು ಆತನ ಮಗ ಟಿಪ್ಪುಸುಲ್ತಾನ್ ನಂಜನಗೂಡಿನೊಂದಿಗೆ ತುಂಬಾ ಹತ್ತಿರದ ಬಾಂಧವ್ಯವನ್ನು ಹೊಂದಿದ್ದರು.
ನಂಜನಗೂಡಿಗೆ ಭೇಟಿ ಕೊಡುವವರು ಶ್ರೀ ರಾಘವೇಂದ್ರ ಸ್ವಾಮಿ ಮಠ (ರಾಘವೇಂದ್ರ ಸ್ವಾಮಿಗಳ ಪ್ರತೀಕ ಸನ್ನಿಧಾನ) ಮತ್ತು ಪರಶುರಾಮ ಕ್ಷೇತ್ರಗಳಿಗೆ ಭೇಟಿ ಕೊಡಬಹುದು.
ನಂಜನಗೂಡು ರಾಜ್ಯದ ಅತಿ ದೊಡ್ಡ ದೇವಾಲಯವೂ ಹೌದು. ದ್ರಾವಿಡ ಶೈಲಿಯಲ್ಲಿರುವ ದೇಗುಲ 117 ಮೀಟರ್ ಉದ್ದ ಹಾಗೂ 48 ಮೀಟರ್ ಅಗಲ ಇದೆ. 147 ಕಂಬಗಳಿಂದ ಕೂಡಿದ ದೇವಾಲಯದ ಒಟ್ಟು ವಿಸ್ತೀರ್ಣ 4,831 ಚ.ಮೀ ಎಂದರೆ ಇದರ ವಿಸ್ತಾರದ ಅರಿವಾಗುತ್ತದೆ. ದೇವಾಲಯದ ಹೊರ ಗೋಡೆ ಸುಮಾರು 3.7 ಮೀಟರ್ ಎತ್ತರ ಇದ್ದು, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಅಧಿಷ್ಠಾನ, ಕಂಬಸಾಲಿನ ಕೈಸಾಲೆ, ಮೇಲೆ ಸುತ್ತಲೂ ದೇವತೆಗಳ ಶಿಲ್ಪಗಳ ಕೂಟ ಮತ್ತು ಶಿಖರ ಗೆಜ್ಜೆಹಾರವಿದೆ. ದೇವಾಲಯದ ಮಹಾದ್ವಾರ ಬೃಹತ್ ರಚನೆಯಿಂದ ಕೂಡಿದ್ದು, ಬಾಗಿಲವಾಡದಲ್ಲಿ ಮೋಹಿನಿ, ದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆ. ಇನ್ನು ಇದರ ಮೇಲಿರುವ ಗೋಪುರ ಏಳು ಅಂತಸ್ತುಗಳಿಂದ ಕೂಡಿದ್ದು, ಸುಮಾರು 37 ಮೀಟರ್ ಎತ್ತರ ಇದೆ. ಅದರ ಮೇಲೆ 7 ಸುವರ್ಣ ಲೇಪಿತ ಕಳಶಗಳಿವೆ. ಅಕ್ಕ ಪಕ್ಕದಲ್ಲಿ ಕೊಂಬುಗಳಿವೆ.
ಪ್ರತಿವರ್ಷ ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಇಲ್ಲಿ ಪಂಚರಥೋತ್ಸವ ಜರುಗುತ್ತದೆ. ನಂಜನಗೂಡಿನಲ್ಲಿ ಶ್ರೀಕಂಠಮುಡಿ, ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ, ತಮ್ಮ ಮುಡಿಯನ್ನು ನೀಡಿ, ಕಪಿಲೆಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ. ಪ್ರತಿವರ್ಷ ಕಾರ್ತೀಕದಲ್ಲಿ ಚಿಕ್ಕ ರಥೋತ್ಸವ ಜರುಗುತ್ತದೆ, ಪ್ರತಿ ಹುಣ್ಣಿಮೆಯ ದಿನ ಇಲ್ಲಿ ರಥೋತ್ಸವ ಜರುಗುತ್ತದೆ.
ಪ್ರತಿ ಸೋಮವಾರ, ಮಹಾಶಿವರಾತ್ರಿ, ಮಾಸ ಶಿವರಾತ್ರಿ, ಹಬ್ಬ ಹರಿದಿನಗಳು ಹಾಗೂ ಆಷಾಢದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
***
ನಂಜನಗೂಡಿಗೆ ಈ ಹಿಂದೆ ಗರಳಪುರಿ ಎಂದು ಕರೆಯಲಾಗುತ್ತಿತ್ತು. 'ಗರಳ' ಎಂದರೆ ವಿಷ ಎಂದರ್ಥ. ಹಿಂದೆ ಇಲ್ಲಿ ತ್ರಿಯಂಬಕ ರಾಕ್ಷಸನ ಮಗನಾದ ಕೇಶಿ ಎನ್ನುವ ರಾಕ್ಷಸ ವಾಸವಾಗಿದ್ದ. ಪುರಾತನ ಕಾಲದಲ್ಲಿ ಇಲ್ಲಿ ದಂಡಕಾರಣ್ಯ ಬೆಳೆದು ನಿಂತಿತ್ತು. ಇಲ್ಲಿನ ಋಷಿಮುನಿಗಳು ಯಾವುದೇ ತಪಸ್ಸು ಮಾಡಿದರೂ, ಯಾಗಗಳನ್ನು ಮಾಡಿದರೆ ಕೇಶಿ ರಾಕ್ಷಸನು ಅದನ್ನು ಹಾಳು ಮಾಡಿ ಬಿಡುತ್ತಿದ್ದನು. ದೇವತೆಗಳಿಗೂ ಅವನು ಉಪಟಳ ನೀಡುತ್ತಿದ್ದ. ಕಡೆಗೆ ಋಷಿಗಳು ಪರಮೇಶ್ವರನ ಮೊರೆ ಹೊಕ್ಕು ಕೇಶಿ ರಾಕ್ಷಸನಿಂದ ತಮಗೆ ಮುಕ್ತಿ ನೀಡಬೇಕೆಂದು ಕೋರಿದ್ದರು. ಅದರಂತೆಯೇ ಶಿವನು ಅವರುಗಳಿಗೆಲ್ಲಾ ಕಪಿಲಾ ಕೌಂಡಿನಿ ಸಂಗಮದಲ್ಲಿ ಯಜ್ಞವನ್ನು ನೆರವೇರಿಸುವಂತೆ ಅಪ್ಪಣೆಕೊಟ್ಟನು. ಯಜ್ಞವನ್ನು ನಡೆಸುತ್ತಿರುವಲ್ಲಿ ಹವಿಸ್ಸನ್ನು ತಿನ್ನುವುದಕ್ಕೂ ಯಜ್ಞವನ್ನು ಕೆಡಿಸುವುದಕ್ಕೂ ಬಂದ ಕೇಶೀರಾಕ್ಷಸನನ್ನು ಪರಮೇಶ್ವರನು ಸಂಹರಿಸಿದನು. ಹಾಗೆಯೇ ರಾಕ್ಷಸನ ದೇಹವನ್ನು ಅಲ್ಲಿ ಉರಿಯುತ್ತಿದ್ದ ಯಾಗದ ಕುಂಡದಲ್ಲಿ ಹಾಕಿದನು. ಆಗ ಆ ದೇಹದಿಂದ ವಿಷ ಜ್ವಾಲೆಯು ಉತ್ಪನ್ನವಾಗಿ ಸುತ್ತಲಿನ ಪರಿಸರವನ್ನೆಲ್ಲಾ ಆವರಿಸಿಕೊಳ್ಳುತ್ತದೆ. ಇದರಿಂದ ಜಗತ್ತಿಗೆ ಕೆಡುಕಾಗಲಿದೆ ಎನ್ನುವುದನ್ನು ಅರಿತ ಪರಮೇಶ್ವರ ಆ ವಿಷ ಜ್ವಾಲೆಯನ್ನು ಅಂಗೈನಲ್ಲಿ ಎತ್ತಿ ಪಾನ ಮಾಡುತ್ತಾನೆ. ಇದನ್ನು ಕಂಡ ಪಾರ್ವತಿಯು ವಿಷವು ಶಿವನ ದೇಹವನ್ನು ಸೇರದಂತೆ ಅವನ ಕುತ್ತಿಗೆಯನ್ನು ಗಟ್ಟಿಯಾಗಿ ಅದುಮಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಗಂಟಲಿನಲ್ಲಿಯೇ ನಿಂತು ಬಿಡುತ್ತದೆ. ಆಗ ಅವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಪರಮೇಶ್ವರನು ನೀಲಕಂಠನಾಗುತ್ತಾನೆ. 'ಶ್ರೀಕಂಠೇಶ್ವರ' ಎನಿಸುತ್ತಾನೆ.
ಮುಂದೆ ಪರಮೇಶ್ವರ ಇದೇ ದಂದಕಾರಣ್ಯ, ಗರಳಪುರಿಯಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಇಲ್ಲಿಯೇ ನೆಲೆಸುತ್ತಾನೆ.
ಕಾಲಾನಂತರದಲ್ಲಿ ಕ್ಷತ್ರಿಯ ಸಂಹಾರವನ್ನು ಮಾಡಿದ್ದ ಪರಶುರಾಮ ತಾನು ಮಾಡಿದ್ದ ಪಾಪದ ಪ್ರಾಯಶ್ಚಿತ್ತಕ್ಕಾಗಿ ತಪಸ್ಸನ್ನು ಆಚರಿಸಲು ಸ್ಥಳಕ್ಕಾಗಿ ಹುಡುಕುತ್ತಾ ಗರಳಪುರಿಗೆ ಬರುತ್ತಾನೆ. ಇಲ್ಲಿನ ಪರಿಸರ ಕಂಡು ಸಮ್ಮೋಹಗೊಂಡು ಇಲ್ಲಿಯೇ ತಪಸ್ಸಾಚರಿಸಲು ನಿರ್ಧರಿಸುತ್ತಾನೆ.
ತನ್ನ ಗಂಡು ಕೊಡಲಿಯಿಂದ ತಪಸ್ಸಿಗೆ ಜಾಗವನ್ನು ಮಾಡಿಕೊಳ್ಳಲು ಪೊದೆಯೊಂದನ್ನು ತರಿದಾಗ ಅಲ್ಲಿ ಅದಾಗಲೇ ತಪಸ್ಸು ಮಾಡುತ್ತಿದ್ದ ಪರಮೇಶ್ವರನ ಹಣೆಗೆ ಪರಶುರಾಮನ ಕೊಡಲಿ ತಾಕಿ ಗಾಯವಾಗುತ್ತದೆ. ರಕ್ತ ಚಿಮ್ಮುತ್ತದೆ. ಅದನ್ನು ಕಂಡ ಪರಶುರಾಮನು ಬೆಚ್ಚಿ ಬೀಳುತ್ತಾನೆ. ಪರಮೇಶ್ವರನೇ ಇಲ್ಲಿ ತಪಸ್ಸಾಚರಿಸುತ್ತಿರುವುದು ತಿಳಿದ ಪರಶುರಾಮ ಅವನಲ್ಲಿ ತನ್ನ ತಪ್ಪಿಗಾಗಿ ಕ್ಷಮೆ ಬೇಡುತ್ತಾನೆ. ಶಿವನು ಕ್ಷಮಿಸಿದ್ದಲ್ಲದೆ ಅವನಿಗೆ ಇದೇ ಸ್ಥಳದಲ್ಲಿ ತಪಸ್ಸಾಚರಿಸುವಂತೆ ಹೇಳುತ್ತಾನೆ. ಪರಮೇಶ್ವರನ ಅಪ್ಪಣೆಯಂತೆ ಪರಶುರಾಮ ಇದೇ ಗರಳಪುರಿಯಲ್ಲಿ ಶಿವ, ಆದಿಕೇಶವನನ್ನು ಕುರಿತು ತಪಸ್ಸಾಚರಿಸಿ ತನ್ನ ಪಾಪಗಳನ್ನು ಪರಿಹಾರ ಮಾಡಿಕೊಳ್ಲುತ್ತಾನೆ.
ಮುಂದೆ ಪರಮೇಶ್ವರನೇ ಪ್ರತ್ಯಕ್ಷನಾಗಿ ಪರಶುರಾಮನಿಗೆ "ನಿನ್ನ ಮಾತೃಹತ್ಯಾ ದೋಷ ಸೇರಿದಂತೆ ಸಕಲ ದೋಷಗಳು ನಿವಾರಣೆಯಾಗಿದೆ." ಎಂದು ಹೇಳಿದ್ದಲ್ಲದೆ ಇಲ್ಲಿ ಪರಶುರಾಮನಿಗಾಗಿ ಒಂದು ಗುಡಿ ನಿರ್ಮಿಸಿ ಅಲ್ಲಿ ಪರಶುರಾಮನ ಮೂರ್ತಿಯನ್ನು ಸ್ಥಾಪಿಸುತ್ತಾನೆ. ಮತ್ತು
"ಯಾರು ಇಲ್ಲಿ
ಬಂದು ನನ್ನ ದರ್ಶನ ಮಾಡುತ್ತಾರೆಯೋ ಅವರು ನಿನ್ನ ದರ್ಶನವನ್ನೂ ಮಾಡಿಕೊಂಡು ಹೋಗಬೇಕು. ಅದರಿಂದಲೇ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ" ಎಂದು ಪರಮೇಶ್ವರನೇ ಪರಶುರಾಮನಿಗೆ ಮಾತು ನೀಡುತ್ತಾನೆ. ಅಲ್ಲಿಂದ ಇಂದಿನವರೆಗೂ ಭಕ್ತಾದಿಗಳು ನಂಜುಂಡೇಶ್ವರನ ದರ್ಶನದ ನಂತರ ಪರಶುರಾಮನ ದರ್ಶನವನ್ನೂ ಮಾಡಿ ಪಾಪಗಳನ್ನೆಲ್ಲಾ ಪರಿಹರಿಸೆಂದು ಬೇಡಿಕೊಳ್ಳುವ ಮೂಲಕ ಕೃತಾರ್ಥರಾಗುತ್ತಾರೆ.
ಆದರೆ ಕ್ಷತ್ರಿಯರಾದ ಮೈಸೂರಿನ ಒಡೆಯರ್ ಕುಟುಂಬದವರು ಮಾತ್ರ ಕ್ಷತ್ರಿಯ ಸಂಹಾರ ಮಾಡಿದ ಅದರ ಪಾಪ ಪರಿಹಾರಕ್ಕಾಗಿ ಇಲ್ಲಿಗೆ ಬಂದು ತಪಸ್ಸಾಚರಿಸಿದ್ದ ಪರ್ಶುರಾಮನ ಸನ್ನಿಧಿಗೆ ತೆರಳುವುದಿಲ್ಲ ಎನ್ನುವುದು ಒಂದು ಅಚ್ಚರಿಯ ಸತ್ಯ ಸಂಗತಿ.
***
ಒಮ್ಮೆ ಪಾರ್ವತೀ ಪರಮೇಶ್ವರರು ನಂದಿಯ ಮೇಲೆ ಕುಳಿತು ಲೋಕ ಸಂಚಾರಮಾಡುತ್ತಿದ್ದಾಗ, ಪಾರ್ವತಿ ದೇವಿಯು ಭೂ ಲೋಕದಲ್ಲಿ ಪರಮಪವಿತ್ರವಾದ ಕ್ಷೇತ್ರ ಯಾವುದೆಂದು ಕೇಳಿದರಂತೆ. ಆಗ ಶಿವ ಕಪಿಲಾ -ಕೌಂಡಿನೀ ನದಿಗಳ ಸಂಗಮಸ್ಥಳವಾದ ಗರಳಪುರಿ ಕ್ಷೇತ್ರವೆ ಪರಮ ಪಾವನವಾದ ಕ್ಷೇತ್ರ ಎಂದು ಹೇಳಿದರಂತೆ.
***
ಸಮುದ್ರಮಥನ ಕಾಲದಲ್ಲಿ ಅಮೃತ ಲಕ್ಷ್ಮಿ ಉಚ್ಚೈಸ್ರವಸ್ಸು ಮುಂತಾದೆಲ್ಲವೂ ಹುಟ್ಟಿದುವಲ್ಲದೇ ಕಾಲಕೂಟವೆಂಬ ವಿಷವೂ ಹುಟ್ಟಿತು. ಪರಮೇಶ್ವರನು ಲೋಕೋದ್ಧಾರಕ್ಕಾಗಿ ಆಕಾಲಕೂಟವನ್ನು ಧರಿಸುವಲ್ಲಿ ಒಂದು ತೊಟ್ಟು ವಿಷವು ದರ್ಭೆಯ ಮೇಲೆ ಬಿತ್ತು. ಅಮೃತವನ್ನು ಹಂಚುತ್ತಿದ್ದ ಮೋಹಿನಿಯನ್ನು ಕೇಶೀ ರಾಕ್ಷಸನು ಮೋಹಿಸಲು ಒಂದು ತೊಟ್ಟು ವಿಷವನ್ನು ಅವನಿಗೆ ಕುಡಿಸಿದಳು. ಶ್ರೀ ನಾರಾಯಣ ಹಸ್ತಸ್ಪರ್ಶವಾದ್ದರಿಂದ ಇವನು ಬಲಿಷ್ಠನಾದ್ದನು. ಆ ವಿಷಸಂಭಂದ ಇಲ್ಲಿ ನಿಂತಿದ್ದರಿಮದ ಇದಕ್ಕೆ “ ಗರಳಪುರಿ” ಅಥವಾ “ ನಂಜನಗೂಡು” ಎಂಬ ಹೆಸರು ಬಂದಿತು.
***
ಪಾತಾಳದಲ್ಲಿ ಕಪಿಲ ಋಷಿಗಳು ತಪಸ್ಸು ಮಾಡುವಾಗ ಸಗರ ಚಕ್ರವರ್ತಿಯ 64 ಸಾವಿರ ಮಕ್ಕಳು ಅವರ ತಪ್ಪಸಿಗೆ ವಿಘ್ನಮಾಡಿದುದಕ್ಕಾಗಿ ಸುಟ್ಟು ಬೂದಿಯಾಗುತ್ತಾರೆ. ಕಪಿಲ ಋಷಿಗಳು ತಪೋಭಂಗವಾದುದರಿಂದ ಅಲ್ಲಿಂದ ನೀಲಾಚಲಕ್ಕೆ ಹೋಗುತ್ತಾರೆ. ಅಲ್ಲಿ, ಪರಮೇಶ್ವರನು ಪ್ರತ್ಯಕ್ಷನಾಗಿ “ ನಿನ್ನ ಬ್ರಹ್ಮರಂಧ್ರದಿಂದ” ಕಪಿಲಾ ನದಿ ಹುಟ್ಟಿ ಜಗದ ಕೊಳೆ ತೊಳೆಯುತ್ತಾಳೆ ಎಂದು ಹರಸುತ್ತಾರೆ. ಕಪಿಲ ಮಹರ್ಷಿಗಳ ಬ್ರಹ್ಮರಂಧ್ರದಿಂದ ಹುಟ್ಟಿದ ನದಿ ಕಪಿಲಾ ನದಿಯಾಗಿದೆ.ಈ ನದಿಯಲ್ಲಿ ವೃಶ್ಚಿಕ ಸಂಕ್ರಮಣದಲ್ಲಿ ಒಂದು ತಿಂಗಳು ಸ್ನಾನ ಮಾಡಿ ಶಿವ ದರ್ಶನ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಕಾರ್ತೀಕ ಸೋಮವಾರ ಪೌರ್ಣಮಿ ದಿನ ಅರುಣೋದಯದಲ್ಲಿ ಇಲ್ಲಿ ಸ್ನಾನ ಮಾಡಿದರೆ ಸಕಲ ಪಾಪ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ.
No comments:
Post a Comment