ಪಾತಾಳ ಭುವನೇಶ್ವರ (Pathala Bhuvaneshwara)
ಉತ್ತರಾಖಂಡ ಮೂಲತಃ ದೇವಭೂಮಿ ಎಂದೇ ಕರೆಯಲ್ಪಡುವ ನಾಡು. ಅಲ್ಲಿನ ಪಿತೌರಾಗಢ ಜಿಲ್ಲೆಯಲ್ಲಿನ ಪಾತಾಳ ಭುವನೇಶ್ವರ ಸಹ ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. .ಇದು ಒಂದು ಚಿಕ್ಕ ಹಳ್ಳಿಯಾಗಿದ್ದು ಸಮುದ್ರ ಮಟ್ಟದಿಂದ 1350 ಮೀಟರ್ ಎತ್ತರದಲ್ಲಿದೆ. ಇದು ಪುರಾತನ ಶೈವ ಕ್ಷೇತ್ರವಾಗಿದ್ದು ಗುಹಾಂತರ ದೇವಾಲಯ ಇಲ್ಲಿದೆ.
ಈ ಗುಹೆಗೆ ಹೋಗಬೇಕಾದರೆ 2 ರಿಂದ 3 ಕಿ,ಮೀ ನಡೆಯಬೇಕಾಗುತ್ತದೆ. ಆದರೆ ಇಲ್ಲಿ ಕೇವಲ ಒಂದು ಗುಹೆ ಮಾತ್ರವೇ ಇರುವುದಲ್ಲ. ಬದಲಾಗಿ ಇದೊಂದು ಗುಹಾಲಯದ ಸಮುದಾಯವಾಗಿದೆ. ಇಲ್ಲಿ ಶಿವನ ಜಟಾಝಟಂ, ಶಿವನಿಗೆ ಸುತ್ತುವರಿದ ನಾಗರ ಹಾವು, ಐರಾವತ, ಕಲ್ಪ ವೃಕ್ಷ, ಕಾಮದೇನು, ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ 33 ಕೋಟಿ ದೇವತೆಗಳ ಆಕಾರಗಳನ್ನು ಕಾಣಬಹುದಾಗಿದೆ. ದೇವಾಲಯವು ಗಂಗೋಳಿಹಟ್‌ನಿಂದ 16 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ರಾಜಾರಾಂಭ, ಪಂಚಚೂಳಿ, ನಂದಾದೇವಿ ಮತ್ತು ನಂದಾಕಟ್ಸ್ ಮೊದಲಾದ ಗಿರಿ ಶೃಂಗಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಗುಹೆಯು ಸುಮಾರು 90 ಅಡಿಗಳಷ್ಟು ಆಳವಿದೆ. ಇಲ್ಲಿನ ಗುಹೆಯೊಂದರಲ್ಲಿ ಗಣೇಶನ ರುಂಡದ ಶಿಲಾಮೂರ್ತಿ ಇದ್ದು ಆ ಮೂರ್ತಿಯ ಮೇಲೆ ನೂರ ಎಂಟು ದಳದ ಬ್ರಹ್ಮ ಕಮಲವಿದೆ. ಜತೆಗೆ ಶಂಕರಾಚಾರ್ಯರು ಸ್ಥಾಪಿಸಿದ ತಾಮ್ರದ ಶಿವಲಿಂಗವೂ ಇಲ್ಲಿದೆ. ಇಲ್ಲಿ ನಾಲ್ಕು ಯುಗಗಳನ್ನು ಸೂಚಿಸುವ ನಾಲ್ಕು ಕಲ್ಲುಗಳಿದ್ದು ಅದರಲ್ಲಿ ಒಂದು ಕಲ್ಲು ಮಾತ್ರವೇ ಇಂದಿಗೂ ಬೆಳೆಯುತ್ತಲಿದೆ. ಅದನ್ನು ಕಲಿಯುಗದ ಪ್ರತೀಕವಾಗಿರುವ ಕಲ್ಲೆಂದು ಹೇಳಲಾಗುತ್ತದೆ. ಕಲ್ಲು ಎಂದಿಗೆ ಗೋಡೆಯನ್ನು ತಲುಪುವುದೋ ಅಂದು ಕಲಿಯುಗದ ಅಂತ್ಯವೆಂದು ನಂಬಲಾಗುತ್ತದೆ.
***
ಶಿವ ಪಾವರ್ತಿಗೆ ಹುಟ್ಟಿದ್ದ ಮೊದಲ ಮಗು ವಿನಾಯಕ.
ಪಾವರ್ತಿಯು ಅದೊಂದು ದಿನ ಸ್ನಾನ ಮಾಡುವಾಗ ತನ್ನ ಮೈಗೆ ಹಾಕಿ ಕೊಂಡಿದ್ದ ಅರಿಶಿಣವನ್ನು ತನ್ನ ದೇಹದಿಂದ ಸ್ವಲ್ಪ ಸ್ವಲ್ಪವೇ ತೆಗೆದು ಒಂದು ಮಾನವಾಕೃತಿಯನ್ನು ಮಾಡಿದಳು. ಈ ಮಾನವಾಕೃತಿಯೇ ಬಾಲಕ ಗಣೇಶ.
ಒಮ್ಮೆ ಶಿವನು ಕೈಲಾಸದಲ್ಲಿ ಇಲ್ಲದ ವೇಳೆಯಲ್ಲಿ ಸ್ನಾನಕ್ಕೆ ಹೊರಟ ಪಾರ್ವತಿ ಬಾಲಕನನ್ನು ಸ್ನಾನ ಗೃಹದ ಕಾವಲು ಕಾಯಲು ಹೇಳಿ ಒಳಗೆ ಹೊರಟಳು. ತನ್ನ ತಾಯಿಯ ಆಜ್ಞೆಯನ್ನು ಶಿರಸಾವಹಿಸಿ ಬಾಲಕನು ಕಾವಲು ಕಾಯುತ್ತಿರಲು ಶಿವನು ಹೊರಗಿನಿಂದ ಬಂದ. ಪರಶಿವನನ್ನು ಬಾಲಕನು, ತಾಯಿಯ ಆಜ್ಞೆಯಂತೆ ಅಡ್ಡಗಟ್ಟಿದನು ಶಿವನು ಬಾಲಕನನ್ನು ತಾನು ಒಳ ಹೋಗಲು ಬಿಡೆಂದು ಕೇಳುತ್ತಾನೆ. ಆದರೆ ಬಾಲ ಗಣೇಶ ಅದಕ್ಕೆ ಅನುಮತಿ ನಿರಾಕರಿಸುತ್ತಾನೆ. ಆಗ ತನ್ನ ಮನೆಯಲ್ಲೇ ತನ್ನನ್ನು ಅಡ್ಡಗಟ್ಟಿದ್ದ ಹುಡುಗನನ್ನು ಕಂಡು ಶಿವನಿಗೆ ಉಗ್ರ ಕೋಪ ಬರುತ್ತದೆ. ರೋಷಕ್ಕೆ ತ್ರಿಶೂಲದಿಂದ ಬಾಲಕನ ತಲೆಯನ್ನೇ ಕಡಿದು ಹಾಕಿದ್ದ ಪರಮೇಶ್ವರ.
ಅದಾಗಿ ಸ್ವಲ್ಪ ಸಮಯದಲ್ಲಿ ಸ್ನಾನ ಮುಗಿಸಿ ಬಂದ ಪಾರ್ವತಿ ಮಗ ಸತ್ತು ಬಿದ್ದಿರುವುದನ್ನು ಕಂಡು ದುಃಖಿಸಲು ಪ್ರಾರಂಭಿಸುತ್ತಾಳೆ. ಶಿವನಿಗೂ ಇದೀಗಲೇ ತಾನು ಶಿರಚ್ಚೇಧ ಮಾಡಿದ್ದವನೇ ತನ್ನ ಮಗ ಎನ್ನುವುದು ತಿಳಿಯುತ್ತದೆ. ನಂತರ ತನ್ನ ಗಣರಿಗೆ, ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಯಾರದೇ ತಲೆಯನ್ನು ತನ್ನಿರೆಂದು ಹೇಳಲು, ಅವರುಗಳು ಆನೆಯ ತಲೆಯನ್ನು ತಂದುಕೊಟ್ಟರು. ರುಂಡವಿಲ್ಲದ ಮುಂಡಕ್ಕೆ ಆನೆಯ ತಲೆಯ ಜೋಡಿಸಿ, ಪ್ರಾಣ ತುಂಬಲು ಗಣೇಶ ಜನ್ಮ ತಳೆದ.
ಹೀಗೆ ಅಂದು ಶಿವನು ಕಡಿದು ಹಾಕಿದ್ದ ಗಣೇಶನ ರುಂಡವೇ ಇಂದು ಪಾತಾಳ ಭುವನೇಶ್ವರದ ಗುಹೆಯಲ್ಲಿದೆ! ಇಲ್ಲಿನ ನೂರ ಎಂಟು ದಳದ ಕಮಲವನ್ನೂ ಶಿವನೇ ಗಣೇಶನಿಗಾಗಿ ಇಲ್ಲಿ ಇರಿಸಿದ್ದಾನೆ. ಈ ಗುಹೆಯಿಂದ ಕೈಲಾಸ ಪರ್ವತಕ್ಕೆ ದಾರಿ ಇದೆ. ಆದರೆ ಆಮ್ಲಜನಕದ ಕೊರತೆಯಿರುವ ಕಾರಣ ಮಾರ್ಗದಲ್ಲಿ ನಡೆದು ಹೋಗುವುದು ಅತ್ಯಂತ ಕಠಿಣವಾಗಿದೆ.
ಇಂದಿಗೂ ಸಹ ಶಿವನಿಂದ ಛೇಧಿಸಲ್ಪಟ್ತ ಗಣೇಶನ ಶಿರವನ್ನು ಕಾಣಲು ಭಕ್ತರು ತಂಡ ತಂಡವಾಗಿ ಇಲ್ಲಿಗೆ ಆಗಮಿಸುತ್ತಾರೆ. ಶಿವನ ಜಟೆಯನ್ನು ಹೋಲುವ ಕಲ್ಲುಗಳೂ ಇಲ್ಲಿರುವುದು ಇನ್ನೂ ವಿಶೇಷವಾಗಿದೆ.