Sunday, December 26, 2021

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 111

ಸೋಂದಾ (Sonda)

ಭಾಗ- 2

ಸೋಂದಾ ಕ್ಷೇತ್ರ ಬೆಂಗಳೂರಿನಿಂದ 422 ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ 20 ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರಕ್ಕೆ ಸೋಂದ, ಸೋದೆ, ಸ್ವಾದಿ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಮಾಧ್ವ ಬ್ರಾಹ್ಮಣರು ಭೇಟಿ ಕೊಡುವ ಈ ಕ್ಷೇತ್ರದಲ್ಲಿ ವಾದಿರಾಜರ ಮೂಲ ಬೃಂದಾವನ, ರಮಾತ್ರಿವಿಕ್ರಮ ದೇವರ ಗುಡಿ, ಭೂತರಾಜರ ಸನ್ನಿಧಿ, ಧವಳ ಗಂಗಾ, ಮುಖ್ಯಪ್ರಾಣ ದೇವರು, ಗೋಪಾಲಕೃಷ್ಣ, ಸಂತಾನ ಗೋಪಾಲಕೃಷ್ಣ, ಅರಳಿಕಟ್ಟೆ, ನಾಗಬನ, ವೇದ ಮಂದಿರ, ಪಾಪ ವಿಮೋಚನಾ ತೀರ್ಥ, ಚಂದ್ರಮೌಳೇಶ್ವರ, ಹಾಗೂ ವೀಣೆಸಹಿತ ಹನುಮಂತ ದೇವರು ನೆಲೆಸಿದ್ದಾರೆ.

ಆ ಜಾಗದಿಂದ ಸ್ವಲ್ಪ ದೂರ ಕಾಡಿನ ಹಾದಿಯಲ್ಲಿ ನಡೆದು ಸಾಗಿದರೆ ಶಾಲ್ಮಲಿ ನದಿ ಹರಿಯುವ ತಪೋವನ ಎಂಬ ಅದ್ಭುತವಾದ ಸ್ಥಳವಿದೆ. ಮುಂಚೆ ಈ ಜಾಗಕ್ಕೆ ನಡೆದೇ ಹೋಗಬೇಕಿತ್ತು. ಇತ್ತೀಚಿಗೆ ವಾಹನ ವ್ಯವಸ್ಥೆಯನ್ನು ಸಹ ಮಾಡಿದ್ದರೆ. ಸೋಂದಾ ಕ್ಷೇತ್ರಕ್ಕೆ ಬರುವ ಬಹುಪಾಲು ಜನ ತಪೋವನಕ್ಕೆ ಖಂಡಿತವಾಗಿ ಭೇಟಿ ಕೊಡುವರು . ಹಾಗೆಯೇ ಸೋಂದಾ ಕ್ಷೇತ್ರದ ಸುತ್ತ ಮುತ್ತ ನೋಡಬಹುದಾದ ಜಾಗಗಳೆಂದರೆ ಸ್ವರ್ಣವಲ್ಲಿ ಮಠ, ವೆಂಕಟರಮಣ ದೇವಸ್ಥಾನಗಳಾಗಿದೆ.

***

ಸೋಂದೆಯಲ್ಲಿನ ಶ್ರೀ ಅವರ್ಣಪಲ್ಲೀ ಮಠ ಉತ್ತರ ಕನ್ನಡ ಜಿಲ್ಲೆಯ ಶಿರಸಿ  ತಾಲೂಕಿನ ಶಾಲ್ಮಲಾ ನದಿ ದಂಡೆಯ ಮೇಲಿದೆ. ಇದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ಅದ್ವೈತ ತತ್ವವನ್ನು ಪ್ರತಿಪಾದಿಸಿದ ಆದಿ ಶಂಕರರ ಕಾಲದ ಇತಿಹಾಸದ ಹಿನ್ನೆಲೆ ಹೊಂದಿದೆ.

ಶ್ರೀ ಲಕ್ಷ್ಮೀ ನರಸಿಂಹ ದೇವರು

ಈ ಪೀಠದ ಮೊದಲ ಗುರುಗಳಾದ ಶ್ರೀ ವಿಶ್ವವಂದ್ಯ ಸರಸ್ವತಿಯವರು ಆದಿ ಶಂಕರರಿಂದ ಆಶೀರ್ವಾದ ಪಡೆದಿದ್ದು  ಮಠವು ಕಾಶಿಯ ದಶಾಶ್ವಮೇಧಘಾಟ್‌ನಲ್ಲಿ ಸ್ಥಾಪನೆಯಾಯಿತು ಮತ್ತು ನಂತರ ಕ್ರಮವಾಗಿ ಉಜ್ಜೈನಿ, ಗೋಕರ್ಣ, ಕಡ್ತೊಕೆ, ಸಹಸ್ರಲಿಂಗ ಮತ್ತು ಈಗಿನ ಸ್ವರ್ಣವಲ್ಲಿಗೆ ಸ್ಥಳಾಂತರಗೊಂಡಿತು. ರಾಜಮನೆತನದ ಪ್ರೋತ್ಸಾಹ ಮತ್ತು ಜನರ ನಂಬಿಕೆಯಿಂದಾಗಿ, ಮಠವು ಇಡೀ ಗೋಕರ್ಣ-ಮಂಡಲಕ್ಕೆ ಗುರುಪೀಠವಾಗಿ ಅಭಿವೃದ್ದಿ ಕಂಡಿದೆ. 


ಶ್ರೀ ಚಂದ್ರಮೌಳೇಶ್ವರ ದೇವರು




ಶ್ರೀ ರಾಜರಾಜೇಶ್ವರೀ ದೇವರು
ಶ್ರೀ ಮಠವು ವಿಶ್ವಾದ್ಯಂತ ಅನುಯಾಯಿಗಳು ಮತ್ತು ಭಕ್ತರನ್ನು ಹೊಂದಿದೆ. ಇದು ಮೇಲಿನ ಘಟ್ಟದಲ್ಲಿ 16 ಸೀಮೆಗಳು ಮತ್ತು ಕೆಳಗಿನ ಹಲವಾರು ಸ್ಥಳಗಳೂ ಸೇರಿ  ಭಾರತದಾದ್ಯಂತ ಅನೇಕ ಶಿಷ್ಯರನ್ನು ಒಳಗೊಂಡಿದೆ. ಹವ್ಯಕರು, ರಾಮಕ್ಷತ್ರಿಯರು, ಶೀಲಿಗಳು, ಸಿದ್ಧಿಗಳು, ಮರಾಠಿಗಳು, ಗೌಳಿಗಳು, ಭಂಡಾರಿಗಳು ಮತ್ತು ಕುಂಬಿಗಳು ಮತ್ತು ಇನ್ನೂ ಅನೇಕರು ಈ ಮಠದ ಭಕ್ತರು ಮತ್ತು ಆಸ್ತಿಕರ ಜೊತೆಗೆ ಸಾಂಪ್ರದಾಯಿಕ ಶಿಷ್ಯರಾಗಿದ್ದಾರೆ.

***

 ಕರ್ಣಾಟಕದ ಧರ್ಮ ಸಂಸ್ಥಾನಗಳಲ್ಲಿ ಉತ್ತರಕನ್ನಡದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಮಹತ್ತರವಾದ ಸ್ಥಾನವಿದೆ. ಹನ್ನೆರಡುನೂರು ವರ್ಷಗಳ ಭವ್ಯವಾದ ಐತಿಹಾಸಿಕ ಪರಂಪರೆಯುಳ್ಳ ಈ ಮಹಾಗುರುಪೀಠವು ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶಗಳನ್ನು ಪ್ರಸಾರ ಮಾಡುತ್ತ ಬಂದಿದೆ.ಭಾರತದ ಅದ್ವೈತ ಪೀಠಗಳಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನ ಪ್ರಮುಖವಾದದ್ದು. ಶ್ರೀ ಆದಿಶಂಕರರ ವೇದಾಂತಸಾರವನ್ನು, ಉಪದೇಶಾಮೃತವನ್ನು ಭಾವ ಗಂಗೆಯಾಗಿ ಹರಿಸುತ್ತ ಬಂದ ಈ ಗುರುಪೀಠ ಸಮನ್ವಯ ಸಂಸ್ಕೃತಿಯನ್ನು ಸಾರುತ್ತಲಿದೆ. ಭಾವೈಕ್ಯತೆಯನ್ನು ಸನಾತನ ಪರಂಪರೆಯ ಆದರ್ಶಗಳನ್ನೂ ಜನತೆಯ ಜೀವನದಲ್ಲಿ ಅಳವಡಿಸುವುದರಲ್ಲಿ ಅದು ಅದ್ವಿತೀಯ ಕಾರ್ಯಮಾಡಿದೆ. ಸುಂದರವಾದ ನಿಸರ್ಗದ ಮಡಿಲಲ್ಲಿ ನಿತ್ಯಹರಿದ್ವರ್ಣಗಳಿಂದ ಕೂಡಿದ ವನಸಿರಿಯ ಮಡಿಲಲ್ಲಿ ಶಾಲ್ಮಲಾ ನದಿಯ ತೀರದಲ್ಲಿರುವ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನಕ್ಕೆ ಪ್ರಾಚೀನ ಪರಂಪರೆಯಿದೆ. ಸಾಂಸ್ಕೃತಿಕವಾದ ಇತಿಹಾಸವಿದೆ. ಅದ್ವೈತ ಸಿದ್ಧಾಂತದ ಪ್ರವರ್ತಕರೂ ಭಾರತೀಯ ವೇದಾಂತದ ವಿಭೂತಿಪುರುಷರೂ ಆದ ಶ್ರೀಆದಿಶಂಕರಾಚಾರ್ಯಯರ ಅನುಜ್ಞೆಯಂತೆ ಶ್ರೀ ಭಾಸ್ಕರೇಂದ್ರ ಸರಸ್ವತಿಯವರ ಸಂಮುಖದಲ್ಲಿ ಗುಣನಿಧಿ ಎಂಬ ವಟುವು ಸಂನ್ಯಾಸ ದೀಕ್ಷೆ ಸ್ವೀಕರಿಸಿ ಶ್ರೀ ವಿಶ್ವವಂದ್ಯ ಸರಸ್ವತೀ ಎಂಬ ಅಭಿಧಾನ ಹೊಂದಿ ಶ್ರೀ ಸ್ವರ್ಣವಲ್ಲೀ ಗುರುಪೀಠಪರಂಪರೆಯ ಆದ್ಯಯತಿಗಳಾದರು. ಶ್ರೀ ವಿಶ್ವವಂದ್ಯ ಸರಸ್ವತಿಯವರಿಂದ ಈಗಿನ ಗಂಗಾಧರೇಂದ್ರ ಸರಸ್ವತೀ ಯತಿವರ್ಯರವರೆಗೆ ಐವತ್ನಾಲ್ಕು ಯತಿವರೇಣ್ಯರು ಈ ಮಹಾಗುರುಪೀಠದ ಪರಂಪರೆಯಲ್ಲಿ ಧರ್ಮಜ್ಯೋತಿಯನ್ನು ಬೆಳಗಿರುವುದು ಮಹತ್ತ್ವಪೂರ್ಣವಾದ ಅಂಶವಾಗಿದೆ. ಶ್ರೀ ಸ್ವರ್ಣವಲ್ಲೀ ಗುರುಪೀಠ ಪರಂಪರೆಯ ನಲವತ್ತೊಂದನೆ ಯತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಬರೆದ “ಜ್ಞಾನದೀಪಿಕಾ”ಸಂಸ್ಕೃತಕೃತಿಯು ಮಠದ ಗುರುಪರಂಪರೆಯನ್ನು ವಿಸ್ತಾರವಾಗಿ ತಿಳಿಸುತ್ತದೆ.

ಪ್ರಕಾಂಡ ಪಂಡಿತರಾಗಿದ್ದ ಬೃಹತ್ ಗಂಗಾಧರೇಂದ್ರರು “ಪ್ರಣವಕಲ್ಪಿ” “ಸಂಸ್ಕೃತ ಚಂದ್ರೋದಯ” “ಶುಕಾಷೈಕಂ ವ್ಯಾಖ್ಯಾ” “ಸ್ವರಾಜ್ಯಸಿದ್ಧಿ” ಇವೇ ಮೊದಲಾದ ಸಂಸ್ಕೃತ ಕೃತಿಗಳನ್ನೇ ರಚಿಸಿದ್ದಾರೆ. ಅವರ “ಸ್ವರಾಜ್ಯಸಿದ್ಧಿ” ಗ್ರಂಥವನ್ನು ಕರ್ಣಾಟಕ ವಿಶ್ವವಿದ್ಯಾಲಯದಿಂದ ಬಿ .ಆರ್ ಮೋಡಕ್ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಶ್ರೀ ಗಂಗಾಧರೇಂದ್ರರು ರಚಿಸಿದ “ಜ್ಞಾನದೀಪಿಕೆ” ಶ್ರೀ ಸ್ವರ್ಣವಲ್ಲೀ ಪರಂಪರೆಯ ಅಧ್ಯಯನಕ್ಕೆ ಪ್ರಮುಖ ಆಕರ ಗ್ರಂಥವಾಗಿದೆ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಇತಿಹಾಸಕ್ಕೆ ಸಂಬಧಿಸಿದಂತೆ ಅಪೂರ್ವವಾದ ಆಕರ ಸಾಮಗ್ರಿಗಳಿವೆ. ಶಾಸನಗಳು,ತಾಮ್ರಶಾಸನಗಳು,೩೦ ಸಾವಿರಕ್ಕೂ ಅಧಿಕ ಐತಿಹಾಸಿಕ ಲೇಖನಗಳು,ಕಡತಗಳು,ಕೈಷಿಯತ್ತುಗಳು ಶ್ರೀ ಸ್ವರ್ಣವಲ್ಲೀ ಚರಿತ್ರೆಯನ್ನು ಬಿತ್ತರಿಸುತ್ತವೆ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಐತಿಹಾಸಿಕ ದಾಖಲೆಗಳು ಎಂಬ ಬೃಹತ್ಸಂಪುಟವನ್ನು ಪ್ರಸಿದ್ಧ ಇತಿಹಾಸ ವಿದ್ವಾಂಸರಾದ ಡಾ. ಎ ಕೆ ಶಾಸ್ತ್ರಿಯವರು ಸಿದ್ಧಪಡಿಸಿಕೊಟ್ಟಿದ್ದು ಅದನ್ನೇ ಕರ್ಣಾಟಕರಾಜ್ಯ ಪತ್ರಾಗಾರ ಇಲಾಖೆ ಪ್ರಕಟಿಸಿದೆ.

ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು

ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು
ಭಾರತದ ಪುಣ್ಯ ಕ್ಷೇತ್ರವಾದ ಗೋಕರ್ಣದ ಬ್ರಾಹ್ಮಣ ವೃಂದದ ಅಪೇಕ್ಷೆಯಂತೆ ಮಠವು ಉಜ್ಜಯಿನಿಯಿಂದ ಗೋಕರ್ಣಕ್ಕೆ ಸ್ಥಳಾಂತರಿಸಲ್ಪಟ್ಟಿತು. ಹತ್ತೊಂಬತ್ತರಿಂದ ಇಪ್ಪತ್ತೈದರವರೆಗಿನ ಸ್ವಾಮಿಗಳು ಗೋಕರ್ಣಕ್ಷೇತ್ರದ ಮಠದಲ್ಲಿದ್ದರು.

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನವು ಕಾಶಿ, ಉಜ್ಜಯಿನಿ, ಗೋಕರ್ಣ,ಕಡತೋಕೆ ಸಹಸ್ರಲಿಂಗ ಹೊನ್ನಹಳ್ಳಿ (ಶ್ರೀ ಸ್ವರ್ಣವಲ್ಲೀ) ಹೀಗೆ ಅದು ನಡೆದು ಬಂದ ಸ್ಥಳಗಳು ಅದರ ಐತಿಹಾಸಿಕ ಪರಂಪರೆಯ ದ್ಯೋತಕವಾಗಿದೆ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಪ್ರಾಚೀನ ಕಾಲದಿಂದಲೂ ರಾಜಮನ್ನಣೆ ಗೌರವಾದರಗಳು ಪ್ರಾಪ್ತವಾಗುತ್ತ ಬಂದಿವೆ. ಉಜ್ಜಯಿನಿಯ ದೊರೆ ವಿಕ್ರಮಾರ್ಕನು ವಿಶ್ವವಂದ್ಯ ಸರಸ್ವತಿಗಳ ಅನುಚರರಾದ ನಾರಾಯಣಣೇಂದ್ರ ಸರಸ್ವತಿಗಳಿಗೆ ವಿಕ್ರಮಾರ್ಕನು ಶಕ ಕ್ರಿ.96( ಕ್ರಿ. ಶ 905 ) ಕ್ರೋಧನಸಂವತ್ಸರದ ಚೈತ್ರಶುಕ್ಲ ಅಷ್ಟಮಿಯಂದು ಕಿರೀಟ, ಶ್ವೇತಚ್ಛತ್ರ, ಮನೆ, ಮಕರತೋರಣ, ವ್ಯಾಖ್ಯಾನಸಿಂಹಾಸನ ಮೊದಲಾದ ವಸ್ತು ವಡವೆಗಳನ್ನೂ ಬಿರುದಾವಳಿಗಳನ್ನೂ ನೀಡಿ ತಾಮ್ರಶಾಸನಗಳನ್ನು ಅರ್ಪಿಸಿ ಗೌರವಿಸಿದನು. ಪ್ರಥಮಗುರುಗಳಾದ ವಿಶ್ವವಂದ್ಯರನ್ನು ಹೊರತುಪಡಿಸಿ ಮುಂದಿನ ಹದಿನೇಳು ಗುರುಗಳು ವಿಕ್ರಮಾರ್ಕನಿಂದ ನಿರ್ಮಿಸಲ್ಪಟ್ಟು ಕಾಳೀಕಾ ದೇವಾಲಯದ ಸಮೀಪದಲ್ಲಿಯ ಮಠದಲ್ಲಿದ್ದರು.

ಭಾರತದ ಪುಣ್ಯಕ್ಷೇತ್ರವಾದ ಗೋಕರ್ಣದ ಬ್ರಾಹ್ಮಣವೃಂದದ ಅಪೇಕ್ಷೆಯಂತೆ ಮಠವು ಉಜ್ಜಯಿನಿಯಿಂದ ಗೋಕರ್ಣಕ್ಕೆ ಸ್ಥಳಾಂತರಿಸಲ್ಪಟ್ಟಿತು.ಹತ್ತೊಂಬತ್ತರಿಂದ ಇಪ್ಪತ್ತೈದರವರೆಗಿನ ಸ್ವಾಮಿಗಳು ಗೋಕರ್ಣ ಕ್ಷೇತ್ರದ ಮಠದಲ್ಲಿದ್ದರು. ಇಪ್ಪತ್ತಾರರಿಂದ ಇಪ್ಪತ್ತೆಂಟನೆಯ ಸ್ವಾಮಿಗಳು ಚಂದಾವರದ ಚಂದ್ರಸೇನನಿಂದ ನಿರ್ಮಿತವಾದ ಕಡತೋಕೆಯ ಮಠದಲ್ಲಿದ್ದರು. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ದೇದೀಪ್ಯಮಾನವಾಗಿ ಬೆಳಗಿದುದು ಸ್ವಾದಿ ಅರಸರ ಮನೆತನದ ಕಾಲದಲ್ಲಿ ಎಂಬುದು ಈಗ ಜನಜನಿತವಾಗಿದೆ.ವಿಜಯನಗರ ಸಾಮ್ರಾಜ್ಯದ ಪ್ರಭುತ್ವದಲ್ಲಿದ್ದ ಸ್ವಾದಿ ಅರಸು ಮನೆತನ ಎರಡು ಶತಮಾನಕ್ಕೂ ಹೆಚ್ಚುಕಾಲ ರಾಜ್ಯಭಾರ ಮಾಡಿರುವುದು ಕಂಡುಬರುತ್ತದೆ.

ಸುಧಾಪುರದ ಅರಸರು ಮಾಡಿದ ಪ್ರಾರ್ಥನೆಯಂತೆ ಶಾಲ್ಮಲೀತೀರದ ಸಹಸ್ರಲಿಂಗ ಪುಣ್ಯಸ್ಥಳಕ್ಕೆ ಇಪ್ಪತ್ತೊಂಬತ್ತನೆಯ ಯತಿಗಳಾದ ವಿಶ್ವವಂದ್ಯರು ಕಡತೋಕೆಯಿಂದ ಸಹಸ್ರಲಿಂಗಕ್ಕೆ ಪರಿವಾರ ಸಮೇತ ಬಂದು ವ್ಯಾಖ್ಯಾನಸಿಂಹಾಸನವನ್ನೇರಿ ಆಶೀರ್ವದಿಸಿದರು.ಸ್ವಾದಿ ಅರಸನಾದ ಇಮ್ಮಡಿ ಅರಸಪ್ಪನಾಯಕ ( ಕ್ರಿ.ಶ.1555-1602) ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಗ್ರಾಮಗಳನ್ನು ದತ್ತುಬಿಟ್ಟು ಆಚಂದ್ರಾರ್ಕ ಧರ್ಮ ಕಾರ್ಯವನ್ನು ನಡೆಸಿಕೊಂಡು ಬರುವಂತೆ ಮಾಡಿದುದು ಈ ಗುರುಪೀಠದ ಪರಂಪರೆಯ ಉತ್ಕರ್ಷಕ್ಕೆ ಕಾರಣವಾಯಿತು. ಸ್ವಾದಿ ಅರಸರು ವೀರಶೈವ ಧರ್ಮಾನುಯಾಯಿಗಳಾಗಿದ್ದರೂ ಅದ್ವೈತ, ದ್ವೈತ ,ಜೈನ ಮೊದಲಾದ ಮಠಗಳ ಏಳಿಗೆಯನ್ನು ಬಯಸುವವರು.ಧರ್ಮಸಮನ್ವಯವು ಅವರ ಆಡಳಿತದ ವೈಶಿಷ್ಟ್ಯವಾಗಿತ್ತು. ಇಮ್ಮಡಿ ಅರಸಪ್ಪ ನಾಯಕ ಕ್ರಿ.ಶ. 1957ರಲ್ಲಿ ಬರೆಯಿಸಿದ ಸ್ವರ್ಣವ್ವಲ್ಲೀ ಮಠದ ಶಾಸನವು ಮಠದ ಚರಿತ್ರೆಯ ದೃಷ್ಟಿಯಿಂದ ಮಹತ್ತ್ವಪೂರ್ಣವಾದುದು. ಶ್ರೀ ಸ್ವರ್ಣವಲ್ಲೀ ಮಠದ ಇಪ್ಪತ್ತೊಂಬತ್ತನೆಯ ಯತಿಗಳಿಂದ ಮೂವತ್ತಮೂರನೆಯ ಯತಿಗಳವರೆಗೆ ಸಹಸ್ರ ಲಿಂಗದಲ್ಲಿ ಮಠವು ಪ್ರಧಾನ ಕೇಂದ್ರವಾಗಿ ಬೆಳೆಯಿತು.

ಇಮ್ಮಡಿ ಅರಸಪ್ಪ ನಾಯಕನು ಶ್ರೀ ಸ್ವರ್ಣವಲ್ಲೀಮಠದ ಯತಿಗಳ ಅಶೀರ್ವಾದದಿಂದ ಪುತ್ರಸಂತಾನ ಭಾಗ್ಯವನ್ನು ಪಡೆದನೆಂದೂ ಅವನ ಕಾಲದಲ್ಲೇ ಸಹಸ್ರಲೀಂಗದಿಂದ ಈಗಿನ ಸ್ಥಳದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಬರುವಂತೆ ಕಾಡು ಕಡಿಸಿ ಲಕ್ಷ್ಮೀನೃಸಿಂಹ, ಕಾಶೀ ವಿಶ್ವೇಶ್ವರ ದೇವಾಲಯಗಳನ್ನು ಕಟ್ಟಿಸಿದ ಸಂಗತಿಯು ಈ ಕೆಳಗಿನ ಶಾಸನದಿಂದ (ಕ್ರಿ. ಶ.1555)ತಿಳಿದು ಬರುತ್ತದೆ. ಶ್ರೀಮಾನ್ ಆಳ್ವ ಮಹಾಪ್ರಭು ಸದ್ಧರ್ಮ ಸಿಂಹಾಸನಾಧೀಶ್ವರರಾದ ಶ್ರೀಅರಸಪ್ಪನಾಯಕರವರು …. ವಂಶಾಭಿವೃದ್ಧಿಯಾಗಲೆಂದು ನಮ್ಮ ವಂಶಸ್ಥರಿಂದ ಶಾಲ್ಮಲೀ ತೀರದಲ್ಲೂ ನಿರ್ಮಾಣವಾಗಿದ್ದ ಸಹಸ್ರಲಿಂಗ ಮಠದಲ್ಲೂ ಯೋಗಾನುಷ್ಠಾನದಿಂದಲೂ ಶ್ರೀನರಸಿಂಹದೇವರನ್ನೂ ಚಂದ್ರಮೌಳೇಶ್ವರದೇವರನ್ನೂ ಆರಾಧಿಸುತ್ತಲಿರುವಾಗ್ಗೆ ಸಹಸ್ರಲಿಂಗ ಮಠಕ್ಕೆ ಎರಡು ಮೂರು ಬಾರಿ ದಸ್ಸೂಪದ್ರವದಿಂದ ತಪೋಯೋಗಾನುಷ್ಠಾನಕ್ಕೆ ವಿಘ್ನವಿಲ್ಲದೆ ಸರಾಗದಿಂದ ನಡೆಯಬೇಕೆಂದು ಚಿತ್ತಕ್ಕೆ ಗೋಚರವಾದ ಕಾರಣ ಗೋಸೂರು ಅಡವಿ ಎಂಬ ಕಾನನ್ನು ಕಡಿಸಿ ಮಠವನ್ನು ಕಟ್ಟಿಸಿ ತನ್ಮಧ್ಯದಲ್ಲಿ ಶ್ರೀನರಸಿಂಹ ದೇವರಿಗೆ ಶ್ರೀ ಕಾಶೀವಿಶ್ವೇಶ್ವರ ದೇವರಿಗೆ ಶ್ರೀ ಶಂಕರಾಚಾರ್ಯರಿಗೆ ಹೀಗೆ ಶಿವಾಲಯವಾದ ದೇವಾಲಯವನ್ನು ನಿರ್ಮಿಸಿ ಈ ಮಠಕ್ಕೆ ಶ್ರೀ ಸ್ವರ್ಣವಲ್ಲೀ ನಾಮಧೇಯವನ್ನಿಟ್ಟು ಪೂಜೆ ವಿನಿಯೋಗ ನಿತ್ಯದಲ್ಲೂ ನಡೇಯಬೇಕೆಂದು ಸೋದಾ ಗ್ರಾಮಕ್ಕೆ ಹೊನ್ನವಳ್ಳೀ ಗ್ರಾಮವೆಂದು ಹೆಸರಿಸಿ ನಿರ್ಮಿಸಿ ಈ ಗ್ರಾಮವನ್ನು ನಾವೇ ಕಟ್ಟಿಸಿದ ಶ್ರೀಸ್ವರ್ಣವಲ್ಲೀ ಎಂಬ ಮಠವನ್ನೂ ಕೂಡ ನಮ್ಮ ವಂಶಸ್ಥರಿಗೆಲ್ಲ ಶಿವ ಸಾಯುಜ್ಯ ಮೋಕ್ಷಪದವು ಸ್ಥಿರವಾಗಬೇಕೆಂದು ಶ್ರೀಪಾದಂಗಳಿಗೆ ಸಹಿರಣ್ಯೋದಕ ಪೂರ್ವಕವಾಗಿ ಒಪ್ಪಿಸಿಕೊಟ್ಟು ಇದ್ದೇನೆ.

ಇಮ್ಮಡಿ ಅರಸಪ್ಪ ನಾಯಕ ಲಕ್ಷ್ಮೀನರಸಿಂಹ ದೇವಾಲಯ ಕಟ್ಟಿಸಿದ್ದನ್ನು ದೇವಾಲಯದ ಗೋಡೆಯಲ್ಲಿರುವ ತಿಗಳಾರಿ ಲಿಪಿಯಲ್ಲಿರುವ ಸಂಸ್ಕೃತ ಅಪೂರ್ಣ ಶಿಲಾಶಾಸನವು ತಿಳಿಸುತ್ತದೆ.ಇದರಲ್ಲಿ ಯೋಗಾನರಸಿಂಹ ಹಾಗೂ ನಮಸ್ಕರಿಸುತ್ತಿರುವ ಅರಸಪ್ಪ ನಾಯಕ ಶಿಲ್ಪವಿರುವುದನ್ನು ನಾವು ಕಾಣುತ್ತೇವೆ. ಸ್ವಾದಿ ಅರಸು ಮನೆತನಕ್ಕೆ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀರಕ್ಷೆ ಇರುವುದರಿಂದಲೇ ಅದು ತನ್ನ ಸಾಮ್ರಾಜ್ಯವನ್ನು ನಡೆಸಲು ಸಾಧ್ಯವಾಯಿತೆಂಬುದು ವಿದಿತವಾಗುತ್ತದೆ. ಸ್ವಾದಿ ಅರಸರು ಶ್ರೀ ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಗಳಿಗೆ,ಯಜ್ಞಯಾಗಾದಿಗಳಿಗೆ ವಿಶೇಷ ಸಹಾಯ ಮಾಡುತ್ತಿದ್ದರೆಂಬುದು ಶಾಸನಗಳಲ್ಲಿ ವರ್ಣಿತವಾಗಿದೆ. ಸ್ವಾದಿ ಅರಸು ಮನೆತನದ ಸವಾಯಿ ರಾಮಚಂದ್ರನ (ಕ್ರಿ.ಶ.1665-82) ಕಾಲದಲ್ಲಿ ಕೆತ್ತಲಾದ ಶ್ರೀ ಸ್ವರ್ಣವಲ್ಲೀ ಮಠದ ಲಕ್ಷ್ಮೀನರಸಿಂಹ ದೇವಾಲಯದ ಬಲಪಕ್ಕಕ್ಕಿರುವ ಶಾಸನದಲ್ಲಿ “ವಿಶ್ವೇಶ್ವರೋ ಜಯತಿ ನರಸಿಂಹೋ ಜಯತಿ”ಎಂಬ ಆರಂಭದ ಸಾಲುಗಳು ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಆದರ್ಶವಾದ ಹರಿಹರ ಸಮನ್ವಯದ ಆದರ್ಶವನ್ನು ಸಾರುತ್ತವೆ. ಲಕ್ಷ್ಮೀನರಸಿಂಹ ಹಾಗೂ ಕಾಶೀ ವಿಶ್ವೇಶ್ವರ ಇವೆರಡೂ ದೇವಾಲಯಗಳು ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಪ್ರತಿಷ್ಠಿತಗೊಂಡಿದ್ದು ಕರ್ಣಾಟಕ ಸಂಸ್ಕೃತಿಯ ಬಹುಮುಖ್ಯ ಆದರ್ಶವಾದ ಹರಿಹರ ಏಕೋಭಾವನೆಯ ಹಾಗೂ ಸಮನ್ವಯ ಸಿದ್ಧಾಂತದ ಆದರ್ಶವನ್ನು ಎತ್ತಿ ಹಿಡಿಯುತ್ತದೆ. ಅದ್ವೈತ ತತ್ತ್ವಸಿದ್ಧಾಂತದ ಕೇಂದ್ರಸಂಸ್ಥಾನದ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಹರಿಹರ ಸಮನ್ವಯವನ್ನು ಕಾಣುವುದಲ್ಲದೇ ಶಕ್ತಿದೇವತೆಯಾದ ರಾಜರಾಜೇಶ್ವರಿಯ ಉಪಾಸನೆಯ ಕೇಂದ್ರವನ್ನೂ ನಾವು ಕಾಣುತ್ತೇವೆ. ಹರಿಹರ ಸಮನ್ವಯ ಭಾವನೆ ಹವ್ಯಕ ಸಂಸ್ಕೃತಿಯ ಉದಾತ್ತತೆಯ ಪ್ರತೀಕವಾಗಿದೆ. ಶ್ರೀ ಸ್ವರ್ಣವಲ್ಲೀ ಮಠದಲ್ಲಿರುವ ಕಾಶೀವಿಶ್ವೇಶ್ವರ ಮತ್ತು ಲಕ್ಷ್ಮೀನರಸಿಂಹ ದೇವಾಲಯಗಳು ಪ್ರಾಚೀನ ಶಿಲ್ಪದ ದೃಷ್ಟಿಯಿಂದಲೂ ಮಹತ್ತ್ವ ಪಡೆಯುತ್ತದೆ.

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಗುರು ಪರಂಪರೆಯಿಂದ ಪ್ರಭಾವಿತರಾದ ರಾಜವಂಶಗಳು ಅದಕ್ಕೆ ಭಕ್ತಿಶ್ರದ್ಧೆಗಳನ್ನು ನಿರಂತರವಾಗಿ ಸಲ್ಲಿಸುತ್ತ ಬಂದಿದ್ದಾವೆ.ಉಜ್ಜಯಿನಿಯ ವಿಕ್ರಮಾದಿತ್ಯ,ವಿಜಯನಗರದ ಅರಸರು, ಚಂದಾವರದ ಚಂದ್ರಸೇನ,ಸುಧಾಪುರದ ನರಸಿಂಹ ಭೂಪಾಲ ಸೋದೆಯ ಇಮ್ಮಡಿ ಅರಸಪ್ಪ ನಾಯಕ, ರಘುನಾಥ, ಮಧುಲಿಂಗ,ಮತ್ತು ಸದಾಶಿವ ನಾಯಕರು ಕೆಳದಿಯ ವೆಂಕಟಪ್ಪ ಮತ್ತು ಬಸಪ್ಪ ನಾಯಕರು ಭೂದಾನ ಸ್ವರ್ಣದಾನ ಮಾಡಿ ಶ್ರೀ ಸ್ವರ್ಣವಲ್ಲೀ ಮಠದ ಕೃಪಾಶೀರ್ವಾದ ಪಡೆದದ್ದು ಗಮನಿಸುವ ಅಂಶವಾಗಿದೆ.ಟಿಪ್ಪೂ ಬ್ರಿಟೀಶರೂ ಮಠಕ್ಕೆ ಗೌರವ ಸೂಚಿಸಿದ ಉಲ್ಲೇಖವಿದೆ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನವು ಸಮಸ್ತ ಗೋಕರ್ಣಮಂಡಲಕ್ಕೆ ಗುರುಪೀಠವಾಗುವುದರ ಜೊತೆಗೆ ಘಟ್ಟದ ಮೇಲಿನ 16 ಸೀಮೆ ಮತ್ತು ಘಟ್ಟದ ಕೆಳಗಿನ ಕೆಲ ಪ್ರದೇಶಗಳನ್ನೊಳಗೊಂಡು ಧರ್ಮದೀಪವಾಗಿ ಬೆಳಗುತ್ತಲಿದೆ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಹವ್ಯಕರು ಪ್ರಮುಖ ಶಿಷ್ಯಕೋಟಿಯಾಗಿದ್ದರೂ ರಾಮಕ್ಷತ್ರಿಯರು, ಸರ್ವಧರ್ಮಕ್ಕೆ ಸೇರಿದ ಅಪಾರ ಭಕ್ತಕೋಟಿಯಿದೆ. ವಿವಿಧ ಜನಾಂಗ ಜನಸಮುದಾಯಕ್ಕೆ ಸೇರಿದ ಭಕ್ತರು ಶ್ರೀ ಸ್ವರ್ಣವಲ್ಲೀ ಮಠಕ್ಕೆ ನಡೆದುಕೊಳ್ಳುವುದರಿಂದ ಇದು ನಮ್ಮ ಮಠವೆಂಬ ಪ್ರೀತಿಗೆ ಪಾತ್ರವಾಗಿದೆ. ಶ್ರೀ ಸ್ವರ್ಣವಲ್ಲೀ ಮಠಕ್ಕೆ ಸರ್ವಮತದ ಜನರು ಬಂದು ತಮ್ಮ ಭಕ್ತಿ ಶ್ರದ್ಧೆಯನ್ನು ತೋರಿಸುತ್ತಾರೆ. ಸರ್ವಧರ್ಮ ಸಮಭಾವವೇ ದೊಡ್ಡ ಆದರ್ಶವಾಗಿ ಇಲ್ಲಿ ಕಾಣುತ್ತದೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿ ಪರಂಪರೆಯು ಅಪೂರ್ವ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ಆದಿ ಶಂಕರಾಚಾರ್ಯರ ಅದ್ವೈತ ಪರಂಪರೆಗೆ ಈ ಮಹಾಸಂಸ್ಥಾನ ಸೇರಿದೆ. ರಾಜಾಶ್ರಯದಲ್ಲಿ ಬೆಳೆದು ಬಂದ ಈ ಮಹಾಸಂಸ್ಥಾನದಲ್ಲಿ ಇದುವರೆಗೆ 53 ಯತಿಗಳು ಆಗಿಹೋಗಿದ್ದಾರೆ. 54 ನೇ ಯತಿವರೇಣ್ಯರಾಗಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪ್ರಸ್ತುತ ಪೀಠವನ್ನು ಮುನ್ನಡೆಸುತಿದ್ದಾರೆ. ಪ್ರಸ್ತುತ ಮಹಾಸ್ವಾಮಿಗಳವರ ಹಾಗೂ ಹಿಂದಿನ 6 ಯತಿಗಳ ಕುರಿತು ಲಭ್ಯವಿರುವ ದಾಖಲೆಗಳ ಆಧಾರದಿಂದ ಮಾಹಿತಿ ನೀಡಲಾಗಿದೆ. ಮತ್ತು ಹಿಂದಿನ ಯತಿಗಳ ದಾಖಲೆಗಳಿದ್ದರೂ ಅವಕಾಶದ ಮಿತಿಯಿಂದಾಗಿ ಇಲ್ಲಿ ಅವನ್ನು ಪ್ರಸ್ತಾಪಿಸಲಾಗುತ್ತಿಲ್ಲ. ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1778-ಕ್ರಿಶ 1816) (48 ನೇ ಪೀಠಾಧಿಪತಿಗಳು) ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಪೀಠ ಪರಂಪರೆಯ 48ನೇ ಯತಿವರೇಣ್ಯರಾಗಿದ್ದರು. ಇವರು 38 ವರ್ಷಗಳ ಕಾಲ ಕ್ರಿಶ 1816 ರವರೆಗೆ ಪೀಠಾಧಿಪತಿಗಳಾಗಿ ಈ ಮಹಾಸಂಸ್ಥಾನವನ್ನು ಅಭಿವೃದ್ಧಿಪಡಿಸಿದರು. ಶ್ರೀಮಠದ ಆರಾಧ್ಯ ದೇವರುಗಳ ಪೂಜೆ, ನಿತ್ಯ ನೈಮಿತ್ತಿಕ ಉತ್ಸವಾದಿಗಳನ್ನು ಸಾಂಗವಾಗಿ ನೆರವೇರಿಸಿಕೊಂಡು ಬಂದಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಶಿಷ್ಯರಿಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.

ಆಗ ರಾಜಕೀಯವಾಗಿ ಬ್ರಿಟಿಷ್ ಕಂಪನಿ ಸರಕಾರದ ಕಾಲವಾಗಿತ್ತು. ಹೈದರ್ ಅಲಿ ಟಿಪ್ಪು ಸುಲ್ತಾನರ ಆಡಳಿತವನ್ನು ಇವರು ಕಂಡಿದ್ದಾರೆ. ಟಿಪ್ಪು ಸುಲ್ತಾನನ ಆಳ್ವಿಕೆಗೆ ಸಂಬಂಧಿಸಿದ 8 ಕಡತಗಳು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಲಭ್ಯವಿವೆ. ಟಿಪ್ಪುವಿನ ಆಳ್ವಿಕೆಗೂ ಪೂರ್ವದಲ್ಲಿ ಸೋದೆಯ ಅರಸ 2ನೇ ಅರಸಪ್ಪ ನಾಯಕನು ಶ್ರೀಮಠಕ್ಕೆ ಎರಡು ತಾಲೂಕುಗಳಲ್ಲಿಯೆ ಒಟ್ಟೂ 75 ಗ್ರಾಮಗಳನ್ನು 1556 ರಲ್ಲಿಯೇ ಇನಾಮು ಜಮೀನುಗಳಾಗಿ ಧರ್ಮ-ಸಾಧನವನ್ನು ಬರೆಸಿಕೊಟ್ಟಿದ್ದನು. ಟಿಪ್ಪುವಿನ ಕಾಲದಲ್ಲಿ ಪುನಃ 33 ಹಳ್ಳಿಗಳನ್ನು ಇನಾಮು ಜಮೀನೆಂದು ನೀಡಿದ ಬಗ್ಗೆ ದಾಖಲೆಗಳಿವೆ. ವಿವಿಧ ಸೀಮೆಗಳ ಕೃಷಿಕರು ವಾರ್ಷಿಕವಾಗಿ ಶ್ರೀಮಠಕ್ಕೆ ಕಂದಾಯ ರೂಪದಲ್ಲಿ ಕಾಣಿಕೆ ನೀಡುವದಾಗಿ ಧರ್ಮಶಾಸನ ಬರೆದುಕೊಟ್ಟ ಬಗ್ಗೆ ದಾಖಲೆ ಪತ್ರಗಳಿವೆ. ಜಯಂತಿ ಉತ್ಸವದಲ್ಲಿ ಸೀಮಾ ಶಿಷ್ಯರಿಗೆ ರಾಯಸ ಕಳಿಸಲಾಗುತ್ತಿತ್ತು. ಹಿಂದೆಂದಿಗಿಂತಲೂ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಕಾಲದಲ್ಲಿ ದೇವರ ಜಯಂತಿ, ರಥೋತ್ಸವ, ಕಾರ್ತೀಕ ದೀಪಾರಾಧನೆ, ಶ್ರೀಗಳವರ ಪಾದಸೇವೆ ಮುಂತಾದ ಕಾರ್ಯಕ್ರಮಗಳು ಹೆಚ್ಚು ವಿಜ್ರಂಭಣೆಯಿಂದ ನಡೆಯುತ್ತಿದ್ದವು. ಶಿಷ್ಯರೂ ಕೂಡ ತಮ್ಮ ಪಾಲಿನ ವಾರ್ಷಿಕ ಕಾಣಿಕೆಗಳನ್ನು ಸಮರ್ಪಕವಾಗಿ ಶ್ರೀ ಮಠಕ್ಕೆ ಸಲ್ಲಿಸುತ್ತಿದ್ದರು.

ಕ್ರಿಶ 1801 ಮಾರ್ಚ 13ರಂದು ಡಾ|| ಫ್ರಾನ್ಸಿಸ್ ಬುಕಾನನ್ ಸೋಂದಕ್ಕೆ ಆಗಮಿಸುತ್ತಾನೆ ಮತ್ತು ಶ್ರೀಗಳವರನ್ನು ಸಂದರ್ಶಿಸಲು ಬಯಸುತ್ತಾನೆ. ಆದರೆ ಕಾರಣಾಂತರಗಳಿಂದ ಶ್ರೀಗಳವರನ್ನು ಭೆಟ್ಟಿಯಾಗಲಿಲ್ಲ ಎಂದು ಉಲ್ಲೇಖಿಸುತ್ತಾನೆ. ಇವರ ಕಾಲದಲ್ಲಿ ಗೋಕರ್ಣದ ವಿಘ್ನೇಶ್ವರ ಉಪಾಧ್ಯಾಯರ ಮಗ, ದಾಮೋದರ ಉಪಾಧ್ಯಾಯನಿಗೆ ಕೋಟಿತೀರ್ಥದ ಕಟ್ಟೆಯ ಮೇಲಿರುವ ಮಠದ ಸ್ಥಳವನ್ನು ಮೂಲಕ್ಕೆ ಬರೆಸಿಕೊಟ್ಟಿದಕ್ಕೆ ಕ್ರಿಶ 1802 ರ ಮೂಲಸಾಧನಪಟ್ಟಿ ಲಭ್ಯವಿದೆ. ಮಂಕಿ, ಗೇರುಸೊಪ್ಪೆ, ಕುದ್ರಿಗೆ, ನಗರೆ, ಬೈಲೂರು ಸ್ಥಳಗಳ ಕ್ಷತ್ರಿಯ ವರ್ಗದವರು ಗುರುಕಾಣಿಕೆ ಮತ್ತು ಮದುವೆಗೆ ಸಂಬಂಧಿಸಿ ಕಾಣಿಕೆ ಸಲ್ಲಿಸುವದಾಗಿ ಬರೆಸಿ ಒಪ್ಪಿಸಿದ ಧರ್ಮಸಾಧನವಿದೆ. ಸವಣೂರು, ಮೈಸೂರು ಜಿಲ್ಲೆಗಳಲ್ಲಿ ಹೊನ್ನಳ್ಳಿ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಂಚಾರ ಮಾಡುವದರಿಂದ, ಅವರನ್ನು ಅಟಕಾಯಿಸದೆ ಬಿಡುವಂತೆ ಕಾನಡಾ ಜಿಲ್ಲಾ ಮೆಜಿಸ್ಟ್ರೇಟ್ ಅಧಿಕಾರ ಸ್ಥಾನದಿಂದ ದಿನಾಂಕ 15.10.1813 ರಂದು ರಹದಾರಿ ಪತ್ರ ನೀಡಿದ್ದರು.

ಶ್ರೀ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1817- ಕ್ರಿಶ 1826) 49 ನೇ ಪೀಠಾಧಿಪತಿಗಳು. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 49ನೇ ಪೀಠಾಧಿಪತಿಗಳು ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳಾಗಿದ್ದರು. ಇವರು ಕ್ರಿಶ 1817 ರಿಂದ 9 ವರ್ಷಗಳ ಕಾಲ ಈ ಪೀಠದಲ್ಲಿ ವಿರಾಜಮಾನರಾಗಿದ್ದರು. ಇವರ ಪೂರ್ವಾಶ್ರಮ ತೋಟದಸೀಮೆಯ ಹುಳಗೋಳವಾಗಿತ್ತು. ಈ ವೇಳೆಗೆ ಬ್ರಿಟಿಷ ಕಂಪನಿ ಸರಕಾರದ ಪ್ರಾಬಲ್ಯ ಸಾಕಷ್ಟಿತ್ತು. ಇವರು ಪೀಠಾಧಿಪತಿಗಳಾಗಿದ್ದಾಗ ಥಾಮಸ್ ಹ್ಯಾರಿಸ್ರವರು ಕಾನಡಾ ಜಿಲ್ಲಾ ಕಲೆಕ್ಟರರಾಗಿದ್ದರು. ನರಸಿಂಹ ಭಟ್ರು ಅಂದಿನ ಶ್ರೀ ಮಠದ ಪಾರುಪತ್ಯಗಾರರಾಗಿದ್ದರು. ಭೂ ವ್ಯವಹಾರ, ಕಂದಾಯ, ಕಾಣಿಕೆ ಇತ್ಯಾದಿ ವ್ಯವಹಾರಗಳು ನಡೆದ ಬಗ್ಗೆ ದಾಖಲೆಗಳು ಲಭ್ಯವಿದೆ.

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1826 ರಿಂದ ಕ್ರಿಶ 1864) 50ನೇ ಪೀಠಾಧಿಪತಿಗಳು. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 50ನೇ ಪೀಠಾಧಿಪತಿಗಳು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳಾಗಿದ್ದರು. ಇವರ ಪೂರ್ವಾಶ್ರಮ ಯಲ್ಲಾಪುರ ಸೀಮೆ ಕವಡಿಕೆರೆಯಾಗಿದೆ. ಇವರು ಕ್ರಿಶ 1864 ರ ವರೆಗೆ ಸುಮಾರು 38 ವರ್ಷಗಳ ಕಾಲ ಈ ಸಂಸ್ಥಾನದ ಪೀಠಾಧಿಪತಿಗಳಾಗಿದ್ದರು. ಧರ್ಮಸಾಧನ, ಜಾಹಿರನಾಮೆ, ರಾಯಸ, ಬಿನ್ನವತ್ತಳೆ, ರಾಜೀನಾಮೆ, ಮೂಲಗೇಣಿ ಇತ್ಯಾದಿ ವಿಷಯಗಳಲ್ಲಿ ಸಾಕಷ್ಟು ಪತ್ರ ವ್ಯವಹಾರಗಳು ನಡೆಯುತ್ತಿದ್ದ ಬಗ್ಗೆ ಐತಿಹಾಸಿಕ ದಾಖಲೆಗಳಿವೆ. ನೃಸಿಂಹ ಜಯಂತಿ ಉತ್ಸವದ ಸಂಬಂಧ ಚಂದಾವರ, ಹಳದೀಪುರ, ಹೊನ್ನಾವರ, ಹೊಸಪಟ್ಟಣ, ಹೆಗಡೆ, ಮಿರ್ಜಾನ, ಗೇರುಸೊಪ್ಪೆ, ಕುದ್ರಿಗೆ ಭಾಗದ ಕ್ಷತ್ರಿಯ ವರ್ಗದ ಸಮಸ್ತರು ಕ್ರಿಶ 1827 ರಲ್ಲಿ ಧರ್ಮಸಾಧನ ಬರೆಸಿಕೊಟ್ಟಿದ್ದರು. ಶಿಷ್ಯವಿಚಾರಣೆ ಮುಂತಾದ ಕೆಲಸದ ಬಗ್ಗೆ ಹೊನ್ನಳ್ಳಿ ಮಠದ ಸ್ವಾಮಿಗಳು ಸಂಚಾರ ಮಾಡುವದರಿಂದ ಅವರಿಗೆ ಯಾರೂ ಹರಕತ್ತು ಮಾಡದಂತೆ ಕಾನಡಾ ಜಿಲ್ಲಾ ಸಬ್ ಕಲೆಕ್ಟರ್ ರಹದಾರಿ ಪತ್ರ ನೀಡಿದ್ದರು. 1853 ರಲ್ಲಿ ಶೀಲಿಗ ಸಮಾಜದ ಗಣ್ಯರು ಶ್ರೀ ದೇವರ ನೈವೇದ್ಯದ ಬಗ್ಗೆ ವರ್ಷಂಪ್ರತಿ ಎರಡು ವರಹ (8ರೂಪಾಯಿ)ಗಳನ್ನು ಕೊಡುವದಾಗಿ ಕರಾರು ಪತ್ರ ನೀಡಿದ್ದರು. ದುರ್ಮರಣ, ಘಟಕ್ರಿಯೆ ಇತ್ಯಾದಿಗಳಲ್ಲಿ ಪ್ರಾಯಶ್ಚಿತ ಕುರಿತು ಸ್ವಾಮಿಗಳಿಗೆ ಬಿನ್ನಹ ಪತ್ರ ಬರೆದುಕೊಳ್ಳುವದು ರೂಢಿಯಲ್ಲಿತ್ತು. (ಸೀಮೆಯಲ್ಲಿ ವೈದಿಕ ಕ್ರತ್ಯಗಳು ಸರಿಯಾಗಿ ನಡೆಯುತ್ತಿಲ್ಲವೆಂದು ಶ್ರೀಗಳವರಲ್ಲಿ ದೂರು ನೀಡಿದ ದಾಖಲೆಗಳಿವೆ.

ಶ್ರೀ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1865 ರಿಂದ ಕ್ರಿಶ 1880) 51ನೇ ಪೀಠಾಧಿಪತಿ. ಇವರ ಪೂರ್ವಾಶ್ರಮ ತೋಟದಸೀಮೆಯ ಹುಳಗೋಳವಾಗಿತ್ತು. ಶ್ರೀ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಪೀಠದ 51ನೇ ಪೀಠಾಧಿಪತಿಗಳಾಗಿದ್ದಾರೆ. ಇವರು ಕ್ರಿಶ 1865 ರಿಂದ 15 ವರ್ಷಗಳ ಕಾಲ ಈ ಪೀಠದಲ್ಲಿ ವಿರಾಜಮಾನರಾಗಿದ್ದರು. ಭೂ ವ್ಯವಹಾರ, ಮೂಲಗೇಣಿ, ದೀಪಾರಾಧನೆ ಕಾಣಿಕೆ, ನೃಸಿಂಹ ಜಯಂತಿ ಉತ್ಸವ ಕಾಣಿಕೆ ಇತ್ಯಾದಿ ವ್ಯವಹಾರಗಳು ನಡೆದುಕೊಂಡು ಬಂದ ಬಗ್ಗೆ ದಾಖಲೆಗಳಿವೆ. ಕೆಲವು ಜನರು ತಮ್ಮ ಗೇಣಿ ಜಮೀನನ್ನು ರಾಜೀನಾಮೆ ನೀಡಿ ಶ್ರೀಗಳವರಿಗೆ ಬರೆದು ಕೊಟ್ಟ ಬಗ್ಗೆ ದಾಖಲೆಗಳು ಲಭ್ಯವಿದೆ.

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1880 ರಿಂದ ಕ್ರಿಶ 1918) 52ನೇ ಪೀಠಾಧಿಪತಿಗಳು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 52ನೇ ಪೀಠಾಧಿಪತಿಗಳ ಅಭಿದಾನವು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಎಂದಾಗಿತ್ತು. ಇವರ ಪೂರ್ವಾಶ್ರಮ ತೋಟದ ಸೀಮೆಯ ಅರಸಾಪುರವಾಗಿತ್ತು. ಇವರು ಸುಮಾರು 38 ವರ್ಷಗಳ ಕಾಲ ಕ್ರಿಶ 1918 ರ ವರೆಗೆ ಪೀಠಾಧಿಪತಿಗಳಾಗಿದ್ದರು. ಶ್ರೀ ಮಹಾಸಂಸ್ಥಾನಕ್ಕೆ ಸಂಬಂಧಿಸಿದ ಇದುವರೆಗಿನ ಐತಿಹಾಸಿಕ ದಾಖಲೆಗಳು, ಆಡಳಿತ ವ್ಯವಹಾರ ಸಂಬಂಧಿ ದಾಖಲೆಗಳು, ಲೇವಾ-ದೇವಿ ದಾಖಲೆಗಳು ಇವುಗಳನ್ನು ಇವರು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟಿದ್ದರು. ಇವು ಆ ಕಾಲದ ಸ್ವರ್ಣವಲ್ಲೀ ಮಹಾಸಂಸ್ಥಾನದ ಬೆಳವಣಿಗೆಯನ್ನರಿಯಲು ಸಹಾಯಕವಾಗಿವೆ. ಸಂಸ್ಥಾನದಲ್ಲಿ ವ್ಯವಸ್ಥಿತ ಆಡಳಿತ ರೂಪಿಸಿ, ಆರ್ಥಿಕ ಪ್ರಗತಿಗಾಗಿ ಶ್ರಮಿಸಿ, ನಿತ್ಯ ನೈಮಿತ್ತಿಕ ಧರ್ಮಾಚರಣೆಗಳನ್ನು ಕೈಕೊಂಡು ಶಿಷ್ಯರ ಕ್ಷೇಮಾಭ್ಯುದಯಕ್ಕೆ ಸದಾ ಚಿಂತಿಸುತ್ತಾ ಸಕಲಧರ್ಮ ಸಮನ್ವಯ ದೃಷ್ಟಿಯನ್ನು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಅನುಸರಿಸಿದ್ದರು.

ಇವರ ಅವಧಿಯಲ್ಲಿ ಒಂದು ಮಹತ್ವದ ಘಟನೆ ನಡೆಯಿತು. ಪ್ರಾಚೀನ ಸ್ಮಾರಕಗಳ ರಕ್ಷಣೆಯ 1904 ರ ಕಾಯಿದೆ ಪ್ರಕಾರ ಹೊನ್ನೆಹಳ್ಳಿ ಮಠವು ಸರಕಾರದ ಅಧೀನದಲ್ಲಿ ರಕ್ಷಿಸಲ್ಪಡಬೇಕೆಂದು ಬ್ರಿಟೀಷ ಸರಕಾರವು 13.09.1909 ರಂದು ನೋಟಿಸ ಜಾರಿಗೊಳಿಸಿತ್ತು. ಇದಕ್ಕೆ ಶ್ರೀಗಳವರು ಈ ಮಠವು ಇಲ್ಲಿಯ ಪೀಠಾಧಿಪತಿಗಳಿಗೆ ಸೇರಿದ ಸ್ವತಂತ್ರ ಆಸ್ತಿಯೇ ಹೊರತು ಸಾರ್ವಜನಿಕ ಆಸ್ತಿಯಲ್ಲ. ಒಂದು ವೇಳೆ ಸರಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾದಲ್ಲಿ ಅಪಾರ ಶಿಷ್ಯರ ಭಾವನೆಗಳಿಗೆ ನೋವುಂಟಾಗುತ್ತದೆ. ಆದ್ದರಿಂದ ಈ ಆದೇಶ ರದ್ದುಪಡಿಸಬೇಕೆಂದು ವಿನಂತಿಸಿಕೊಂಡಿದ್ದರು.

ಇವರು ಸ್ವರ್ಣವಲ್ಲೀ ಮಠದ ಗುರುವಂಶಾವಳಿ ಮತ್ತು ಸಂಸ್ಥಾನದ ಪೂರ್ವ ಚರಿತ್ರೆಯನ್ನು ಲಭ್ಯವಿದ್ದ ಆಕರ ಸಾಮಗ್ರಿಗಳ ಆಧಾರದಿಂದ ಮತ್ತೊಮ್ಮೆ ಬರಸಿದರೆಂದು ತಿಳಿಯುತ್ತದೆ. ಶಿಷ್ಯರ ಅಭ್ಯುದಯಕ್ಕಾಗಿ ಶ್ರೀಗಳು ಅನೇಕ ಪ್ರಗತಿಪರ ಕಾರ್ಯಗಳನ್ನು ಹಮ್ಮಿಕೊಂಡರು. ಸಂಸ್ಥಾನದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು ಆಡಳಿತ ಮಂಡಳಿಯನ್ನು ಸ್ಥಾಪಿಸಿ, ಅನುಗುಣವಾದ ನಿಯಮಾವಳಿಯನ್ನು ರೂಪಿಸಿದರು ಇವರ ಅವಧಿಯಲ್ಲಿ ಶ್ರೀ ಮಠದ ಮೇಲೆ ಕಳ್ಳರ ದಾಳಿ ನಡೆದು ಅಪಾರ ನಷ್ಟ ಉಂಟಾಯಿತು. ಶ್ರೀಗಳವರು ಹತಾಶರಾಗದೆ ಶಿಷ್ಯರಲ್ಲಿ ಧೈರ್ಯ ಮತ್ತು ಸ್ಫೂರ್ತಿ ತುಂಬಿ ಸಂಸ್ಥಾನದ ಕೆಲಸ ಕಾರ್ಯಗಳನ್ನು ಮುನ್ನಡೆಸಿದರು.

ವಾರ್ಷಿಕ ಉತ್ಸವಗಳು, ರಥೋತ್ಸವ, ಧರ್ಮಶಿಷ್ಟಾಚಾರ, ಪೌರೋಹಿತ್ಯ, ಆಚಾರ ವಿಚಾರ, ಪ್ರಾಯಶ್ಚಿತ್ತ, ಕ್ರಿಯಾಚರಣೆ, ತ್ರಿರಾತ್ರಾಶೌಚ, ವೃಷೋತ್ಸರ್ಗ ಮುಂತಾದ ಧಾರ್ಮಿಕ ವಿಷಯಗಳ ಬಗ್ಗೆ ಶ್ರೀಗಳು ಸಾಕಷ್ಟು ಗಮನ ಹರಿಸುತ್ತಿದ್ದರು. ಕರಾವಳಿ ಪ್ರದೇಶದ ರಾಮಕ್ಷತ್ರಿಯ ಶಿಷ್ಯರಿಗೆ ಪುರೋಹಿತರಾಗಿ ಕಾರ್ಯನಿರ್ವಹಿಸಬೇಕೆಂದು ಗೋಕರ್ಣ ಹೊಸಮನೆ ಶಿವರಾಮ ಭಟ್ಟರಿಗೆ ಶ್ರೀಗಳವರು ನಿರೂಪ ಕಳಿಸಿದ ದಾಖಲೆ ಇದೆ.

ಶ್ರೀ ಗಂಗಾಧರೇಂದ್ರ ಸರಸ್ವತಿಗಳ ಕಾಲದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪೀಠವು ಸ್ಪಂದಿಸುತ್ತಿದ್ದ ಬಗ್ಗೆ ದಾಖಲೆಗಳಿವೆ. ಅಂದಿನ ದಿನಗಳಲ್ಲಿ ಬಹಳಷ್ಟು ಜನರು ಅನಕ್ಷರಸ್ಥರಾಗಿದ್ದುದರಿಂದ ಅವರನ್ನು ಸುಶಿಕ್ಷಿತರನ್ನಾಗಿ ಮಾಡಲು ಸಂಸ್ಥಾನವು ಪ್ರಯತ್ನಿಸುತ್ತಿತ್ತು. ಸ್ವರ್ಣವಲ್ಲೀ ಮಠಕ್ಕೆ ಪೂಜೆ-ಪುನಸ್ಕಾರ, ಯತಿಗಳ ಭಿಕ್ಷೆ, ಸಂತರ್ಪಣೆ, ಧರ್ಮ ಕಾರ್ಯಗಳಿಗೋಸ್ಕರ ಕಾಲಕಾಲಕ್ಕೆ ರಾಜಮಹಾರಾಜರಿಂದ ನೀಡಲ್ಪಟ್ಟ ಭೂಮಿಯನ್ನು ಸಂಸ್ಥಾನದ ಯತೀಶ್ವರರು ತಮ್ಮ ಶಿಷ್ಯರಿಗೆ ಮೂಲಗೇಣಿ ಅಥವಾ ಚಾಲಗೇಣಿ ಕರಾರಿನ ಮೇರೆಗೆ ದಯಪಾಲಿಸುತ್ತಿದ್ದರು. ಮಠದ ಭೂಮಿಯನ್ನು ಚಾಲಗೇಣಿ ಕರಾರಿನನ್ವಯ ಸೋಂದಾ ಮುಸಲ್ಮಾನರಿಗೂ ನೀಡುತ್ತಿದ್ದರೆಂದು ತಿಳಿದು ಬರುತ್ತದೆ.

ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1918 ರಿಂದ ಕ್ರಿಶ 1990 ) 53 ನೇ ಪೀಠಾಧಿಪತಿಗಳು. ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 53ನೇ ಪೀಠಾಧಿಪತಿಗಳಾಗಿದ್ದರು. ಇವರು ಕ್ರಿಶ 1990 ರ ವರೆಗೆ ಸುದೀರ್ಘ 72 ವರ್ಷಗಳ ಕಾಲ ಈ ಪೀಠವನ್ನಲಂಕರಿಸಿದ್ದರು. ಇವರು ಪೂರ್ವಾಶ್ರಮದಲ್ಲಿ ಭರತನಹಳ್ಳಿ ಸೀಮೆಯ ಅರಳಿಮಕ್ಕಿಯವರಾಗಿದ್ದರು. ಇವರು 11ನೇ ವಯಸ್ಸಿನಲ್ಲಿ ದಿನಾಂಕ 31.1.1917 ರಂದು ಅಂದಿನ ಪೀಠಾಧಿಪತಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಇವರನ್ನು ಶಿಷ್ಯರನ್ನಾಗಿ ಸಕಲ ವೈಭವಗಳೊಂದಿಗೆ ಸ್ವೀಕರಿಸಿದರು. “ಈ ಮಠ, ಈ ಆಸ್ತಿ ಸಂಪತ್ತು, ಈ ದೇವರು ಸಹಿತ ಶಿಷ್ಯರದ್ದು. ನಾವು ಸನ್ಯಾಸಿಗಳು, ದಂಡ ಕಮಂಡಲಗಳಷ್ಟೇ ನಮ್ಮ ಆಸ್ತಿ. ಕೌಪೀನ, ಕಾಷಾಯ ವಸ್ತ್ರಗಳೇ ನಮ್ಮ ಸಂಪತ್ತು ” ಎಂದು ತಮ್ಮ ಗುರುಗಳು ನಿರ್ದೇಶನ ನೀಡುತ್ತಿದ್ದರು. ಎಂದು ಶ್ರೀ ಸರ್ವಜ್ಞೇಂದ್ರ ಸರಸ್ವತೀಗಳು ಹೇಳುತ್ತಿದ್ದರು.

ಹಿಂದಿನ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಬ್ರಹ್ಮೀಭೂತರಾದಾಗ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳಿಗೆ ಕೇವಲ 13 ವರ್ಷ ವಯಸ್ಸು. ಆದ್ದರಿಂದ ಅವರ ಪೂರ್ವಾಶ್ರಮದ ತಾಯಿ ಮತ್ತು ಅಣ್ಣ ತಮ್ಮಂದಿರನ್ನು ಮಠದಲ್ಲಿಯೇ ವಾಸ್ತವ್ಯ ಮಾಡುವಂತೆ ಆಡಳಿತ ಮಂಡಳಿಯವರು ವ್ಯವಸ್ಥೆ ಮಾಡಿದ್ದರು. ಹಾನಗಲ್ ಮಹಾದೇವ ಶಾಸ್ತ್ರಿಗಳು ಗುರುಗಳಿಗೆ ವೇದಾಂತ ಪಾಠ ಮಾಡಿದರು. ಶ್ರೀಗಳವರು ಸಂಸ್ಕೃತ ವಾಜ್ಮಯದಲ್ಲಿ ಪಾಂಡಿತ್ಯ ಸಂಪಾದಿಸಿಕೊಂಡಿದ್ದರು. ಮುಂದೆ ಅವರು “ಪ್ರಹ್ಲಾದ ಚರಿತಂ” ಎಂಬ ಸಂಸ್ಕೃತ ನಾಟಕ ರಚಿಸಿದರು. ಕೂಡ್ಲಿ ಶೃಂಗೇರಿ ಮಠದ ವಿದ್ಯಾಭಿನವ ವಾಲುಕೇಶ್ವರ ಭಾರತಿ ಮಹಾಸ್ವಾಮಿಗಳಲ್ಲಿ ಶ್ರೀ ಸರ್ವಜ್ಞೇಂದ್ರರು ವೇದ ಮತ್ತು ವೇದಾಂತವೇ ಮೊದಲಾದ ಶಾಸ್ತ್ರಗಳನ್ನು ಅಧ್ಯಯನ ಮಾಡಿದರು.

ಅಂದಿನ ಮಠದ ಆರ್ಥಿಕ ಪರಿಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಅಡಿಕೆಗೆ ಬಂಗಾಲಿ ಮಣಕ್ಕೆ 3 ರೂಪಾಯಿ ದರವಿದ್ದಕಾಲ. ಗುರುಗಳು ವಿದ್ಯಾಭ್ಯಾಸಕ್ಕೂ ಪರದಾಡಬೇಕಾದ ಸ್ಥಿತಿ ಇತ್ತು. ಶಿರಸಿಯ ನೀಲಕಂಠರಾವ್ ಪಟವರ್ಧನ ಕುಟುಂಬವೇ ಶ್ರೀಗಳವರ ವಿದ್ಯಾಭ್ಯಾಸಕ್ಕೆ ಮುಂದಾಗಿ ವ್ಯವಸ್ಥೆ ಮಾಡಿತ್ತು. ಕೂಡ್ಲಿ ಶೃಂಗೇರಿ ಸ್ವಾಮಿಗಳೇ ಸರ್ವಜ್ಞೇಂದ್ರರಿಗೆ ಶ್ರೀಚಕ್ರವನ್ನು ಮಾಡಿಸಿಕೊಟ್ಟರು. ಅಂದು ಪುನಃ ಪ್ರಾರಂಭವಾದ ಶ್ರೀಚಕ್ರಪೂಜೆ ಇಂದಿನವರೆಗೂ ಸಾಗಿ ಬಂದಿದೆ. ಪೂಜಾನುಷ್ಠಾನಗಳಲ್ಲಿ ಸಮಯ ಪಾಲನೆ, ಯತಿಗಳಲ್ಲಿರಬೇಕಾದ ಆಶ್ರಮ ಧರ್ಮಶ್ರದ್ಧೆ, ಪಾಂಡಿತ್ಯ ಮತ್ತು ಕರ್ತವ್ಯ ನಿಷ್ಠೆ ಈ ವಿಷಯಗಳಲ್ಲಿ ಶ್ರೀ ಸರ್ವಜ್ಞೇಂದ್ರರು ಹೆಸರುವಾಸಿಯಾಗಿದ್ದರು.

1956 ರಲ್ಲಿ ಶ್ರೀರಾಜರಾಜೇಶ್ವರೀ ಸಂಸ್ಕೃತ ವಸತಿ ಪಾಠ ಶಾಲೆಯನ್ನು ಶ್ರೀಗಳವರು ಪ್ರಾರಂಭಿಸಿದರು. 1961 ರ ಡಿಸೆಂಬರ ದಿನಾಂಕ 8ರಿಂದ ದಿನಾಂಕ 15ರ ವರೆಗೆ 8 ದಿನಗಳ ಕಾಲ ಶ್ರೀಮಠದಲ್ಲಿ ಶ್ರೀಗಳವರ ಸಂಕಲ್ಪದಂತೆ ಸಹಸ್ರಚಂಡಿಯಾಗ ನೆರವೇರಿತು. ಶಿಷ್ಯರು ಸೇರಿ ಶ್ರೀಗಳವರ ಸಂಕಲ್ಪವನ್ನು ಅತ್ಯಂತ ಉತ್ಸಾಹದಿಂದ ಪೂರೈಸಲು ಹಗಲಿರುಳೂ ಶ್ರಮಿಸಿದರು. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿತ್ತು.

ಶ್ರೀ ಮಠದ ಜೀರ್ಣೋದ್ಧಾರ ಕಾರ್ಯವನ್ನೂ ಶ್ರೀಗಳವರು ಕೈಕೊಂಡರು. ನೃಸಿಂಹ ದೇವರ ಎದುರಿನ ಘಂಟೆ ಮಂಟಪವನ್ನು ಶ್ರೀರಾಮ ಕ್ಷತ್ರೀಯ ಶಿಷ್ಯರು, ಮುಖ ಮಂಟಪವನ್ನು ತೋಟದ ಸೀಮಾಧ್ಯಕ್ಷ ಹುಳಗೋಳದ ವೆಂಕಟ್ರಮಣ ಹೆಗಡೆಯವರು, ಮತ್ತು ಗಂಗಾ ವಿಶ್ವೇಶ್ವರ ಮಂದಿರದ ಮುಖ ಮಂಟಪವನ್ನು ಭರತನಹಳ್ಳಿ ಸೀಮೆಯ ಭಂಡೀಮನೆ ರಾಮಚಂದ್ರ ಹೆಗಡೆಯವರು ಕಟ್ಟಿಸಿದ್ದರು.

1963 ರಲ್ಲಿ ಶ್ರೀಗಳವರು ಕಾಶಿಯಾತ್ರೆ ಕೈಕೊಂಡಿದ್ದರು. ಆ ಸಂದರ್ಭದಲ್ಲಿ ದೆಹಲಿಯ ಅಂದಿನ ರಾಷ್ಟ್ರಪತಿ ಡಾ|| ರಾಧಾಕೃಷ್ಟನ್ ರು ಭೇಟಿಯಾಗಿ ಆಶೀರ್ವಾದ ಪಡೆದರು. ಧರ್ಮ ಸಂಬಂಧಿ ವಿಷಯಗಳು ಸಂಸ್ಥಾನದಲ್ಲಿ ಪ್ರಸ್ತಾಪಿಸಲ್ಪಟ್ಟಾಗ, ಅಂಥ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಂಬಂಧಿಸಿದ ವ್ಯಕ್ತಿಗಳನ್ನು ಸಂಸ್ಥಾನಕ್ಕೆ ಕರೆಸಲಾಗುತ್ತಿತ್ತು. ವಿಚಾರಣೆ ನಡೆಸಿ ಅಪ್ಪಣೆಕೊಡುವ ಪರಮಾಧಿಕಾರ ಶ್ರೀಗಳವಾರದಾಗಿತ್ತು. ಮಹಾಸಂಸ್ಥಾನದ ಆಡಳಿತ ನಿರ್ವಹಣೆಗಾಗಿ ಅಂಗೀಕರಿಸಿದ ಘಟನೆ ಮತ್ತು ನಿಯಮಾವಳಿಗಳನ್ನೊಳಗೊಂಡ 8 ಪುಟಗಳ ಕಿರುಹೊತ್ತಿಗೆಯನ್ನು 1963 ರಲ್ಲಿ ಪ್ರಕಟಿಸಲಾಯಿತು. ಸೀಮೆಗಳಲ್ಲಿಯ ಅನೇಕ ಭೂಮಿಗಳು ಮಠಕ್ಕೆ ಸೇರಿದ್ದರಿಂದ ಮಠಕ್ಕೆ ವಾರ್ಷಿಕ ಗೇಣಿ ಕೊಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಈ ಪದ್ದತಿ ಈಗ ರದ್ದಾಗಿದೆ.

ಕಳೆದ ಶತಮಾನದ ಆರಂಭದಲ್ಲಿ ಸ್ವರ್ಣವಲ್ಲೀಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು ಏಳು ದಶಕಕ್ಕೂ ಹೆಚ್ಚುಕಾಲ(1917-1990) ಶ್ರೀಮಠದ ಸರ್ವತೋಮುಖ ಬೆಳವಣಿಗೆಗೆ ಕಾರಣವಾದರು.ಆರ್ಥಿಕವಾಗಿ ತುಂಬ ಸಂಕಟಕಾಲದಲ್ಲಿ ತಮ್ಮ ತಪಸ್ಸಿನ ಪ್ರಭಾವದಿಂದ ಈ ಧರ್ಮಸಂಸ್ಥಾನ ಅಭಿವೃದ್ಧಿ ಹೊಂದುವಂತೆ ಮಾಡಿದರು. ಶ್ರೀಮಠದ ಆರಾಧ್ಯ ದೇವರಾದ ಶ್ರೀ ರಾಜರಾಜೇಶ್ವರಿಯ ಆರಾಧನೆಯನ್ನು 55 ವರ್ಷಗಳ ಕಾಲ ಮಾಡುವ ಮೂಲಕ ಶ್ರೀಚಕ್ರಪೂಜೆಯ ಮಹಾಸ್ವಾಮಿಗಳೆಂದೂ ಪ್ರಸಿದ್ಧರಾದರು.ಶ್ರೀಲಲಿತಾ ಆರಾಧನೆ, ತಪಸ್ಸು ಕಠಿಣವಾದ ಅನುಷ್ಠಾನ ಪರಂಪರೆಯನ್ನು ಅವರು ಕೈಗೊಂಡರು.ತ್ರಿಕಾಲ ಪೂಜೆ ಮಾಡುವ ಮೂಲಕ ಶ್ರೀ ಸರ್ವಜ್ಞೇಂದ್ರರು ದಿವ್ಯ ತಪಸ್ವಿಗಳಾಗಿ ಖ್ಯಾತರಾದರು. ಗುರುಗಳು ಮಾಡಿದ ಸಹಸ್ರ ಚಂಡಿ ಯಾಗ ಅಭೂತಪೂರ್ವವಾಗಿತ್ತು. ಸರ್ವಧರ್ಮ ಸಮನ್ವಯದೃಷ್ಟಿಯ ಗುರುಗಳು ದ್ವೈತಪೀಠವಾದ ಉಡುಪಿಗೆ ತೆರಳಿ ಕೃಷ್ಣಾರ್ಚನೆ ಮಾಡಿದವರು.ಕಾಶಿಗೆ ತೆರಳಿ ವಿಶ್ವನಾಥನನ್ನು ಆರಾಧಿಸಿದವರು. ಭಾರತದ ರಾಷ್ಟ್ರಪತಿ ಶ್ರೇಷ್ಠ ತತ್ತ್ವಜ್ಞಾನಿ ಡಾ. ರಾಧಾಕೃಷ್ಣನ್ ಅವರನ್ನೂ, ಜ್ಞಾನಪೀಠಪ್ರಶಸ್ತಿ ಪುರಸ್ಕೃತ ವರಕವಿ ಬೇಂದ್ರೆಯವರನ್ನೂ ಆಶೀರ್ವದಿಸಿದವರು. ಸಾಮಾಜಿಕ ಕಾರ್ಯಗಳಲ್ಲೂ ಗುರುಗಳು ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇಂದಿನ ಶಿರಸಿ ಭಾಗದ ಅನೇಕ ಶೈಕ್ಷಣಿಕ ಸಹಕಾರಿ ಧಾರ್ಮಿಕ ಸಂಸ್ಥೆಗಳನ್ನು ಆರಂಭಿಸಲು ಆಶೀರ್ವದಿಸಿದವರು. ಶಿರಸಿಯ ತೋಟಗಾರರ, ಸೊಸಾಯಿಟಿ, ಎಮ್. ಎಮ್. ಕಾಲೇಜಿನ ಉದ್ಘಾಟನೆ ಮಾಡಿದ ಶ್ರೀ ಶ್ರೀ ಸರ್ವಜ್ಞೇಂದ್ರರ ಕೃಪೆಯಿಂದ ಅವು ಬೆಳೆದು ನಿಂತಿವೆ. ವೇದವಿದ್ಯಾ ವ್ಯಾಸಂಗಕ್ಕೆ ಉತ್ತೇಜನ ನೀಡಿದ ಗುರುಗಳು ಮಠದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ವೇದಾಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟು ಉಚಿತ ಪ್ರಸಾದ ನಿಲಯ ಸ್ಥಾಪಿಸಿದರು.

ಶ್ರೀ ಶ್ರೀ ಸರ್ವಜ್ಞೇಂದ್ರರು ಬರೆದ “ಪ್ರಹ್ಲಾದ ಚರಿತಮ್” ನಾಟಕ “ಯತಿಪರಿಚಯ” ವೆಂಬ ಸಂಸ್ಕೃತ ಕಾವ್ಯ ಅವರ ಪ್ರತಿಭೆ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.

ಮಾಹೇಂದ್ರೋ ವೈದಿಕೇಂದ್ರೋ ವಿಯದಮಲ ತನುರ್ವೈಭವೇಂದ್ರಶ್ಚಿದೇಂದ್ರೋ

ಭಾಲೇಭಾಭಾವಕೇಂದ್ರೋ ಭವಭಯತಮಸೋಭಾಸ್ಕರೇಂದ್ರೋ ಭವೇಂದ್ರಃ|

ಇಂದ್ರಃ ಪ್ರಾಣೇಶ್ವರಾಣಾಂ ಗಗನ ಚರಮರುಜ್ಜೀವನೇಂದ್ರೋ ಕವೀಂದ್ರೋ

ಸರ್ವಜ್ಞೇಂದ್ರೋ ದ್ವಿಜೇಂದ್ರೋ ಮಮ ಸ ಗಣಪತಿ ರ್ವೈದ್ಯುತೇಂದ್ರೋ ಹೃದೀಂದ್ರಃ ||

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1991 ರಿಂದ ಪೀಠಾಧಿಪತಿಗಳಾಗಿದ್ದಾರೆ) 54ನೇ ಪೀಠಾಧಿಪತಿಗಳು ಇಂದಿನ ಶ್ರೀ ಗಂಗಾಧರೇಂದ್ರರು ಪೂರ್ವಾಶ್ರಮದಲ್ಲಿ ತೋಟದ ಸೀಮೆಯ ನಿಡಗೋಡಿನ ವೈದಿಕ ಮನೆತನದವರಾಗಿದ್ದಾರೆ. ಮುಮುಕ್ಷುವಾಗಿದ್ದ ಅವರಿಗೆ ಸನ್ಯಾಸಾಶ್ರಮ ಈ ಸಾಧನೆಗೆ ಸರಿಯಾದ ದಾರಿಯೆಂದು ದೃಢವಾಗಿತ್ತು. ಇವರು ದಿನಾಂಕ 2.2.1991 ರಂದು ತಮ್ಮ 22ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ರಾರಾಜಿಸುತ್ತಿದ್ದಾರೆ. ಅಂದಿನಿಂದ ಈ 25 ವರ್ಷಗಳಲ್ಲಿ ಶ್ರೀಗಳವರು ಕೈಕೊಂಡ ಕಾರ್ಯ ಚಟುವಟಿಕೆಗಳು ಬಹುಮುಖವಾಗಿದ್ದು ಚರಿತ್ರೆ ನಿರ್ಮಿಸಿವೆ. ಪರಂಪರೆಯನ್ನು ಉಳಿಸಿಕೊಂಡು ಆಧುನಿಕತೆಗೆ ಸ್ಪಂದಿಸುತ್ತಿರುವ ಶ್ರೀಗಳವರ ನಡೆ ರಾಷ್ಟ್ರವ್ಯಾಪಿ ಜನಮನ್ನಣೆಯನ್ನು ಗಳಿಸಿದೆ.

ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶ್ರೀಗಳವರ ಸಾಧನೆ ಅಸಾಧಾರಣವಾಗಿದೆ. ತ್ರಿಕಾಲ ದೇವತಾರ್ಚನೆ ಹಾಗೂ ಪ್ರತಿನಿತ್ಯ ತಪಸ್ಸಾಧನೆ ಇವುಗಳ ಬಲದಿಂದ ಶ್ರೀಗಳವರು ಆತ್ಮೋನ್ನತಿಯನ್ನು ಪಡೆದು ಕೊಳ್ಳುವದರ ಜೊತೆಗೆ ಶಿಷ್ಯ ಕಲ್ಯಾಣಕ್ಕಾಗಿಯೂ ಪ್ರಾರ್ಥಿಸುತ್ತಿದ್ದಾರೆ. ಯುಗಾದಿ, ಶ್ರೀ ಲಕ್ಷ್ಮೀ ನೃಸಿಂಹ ಜಯಂತಿ, ಶಂಕರ ಜಯಂತಿ, ಶರನ್ನವರಾತ್ರಿ, ಇತ್ಯಾದಿ ವಾರ್ಷಿಕ ಉತ್ಸವಗಳನ್ನು ಪರಂಪರೆಗೆ ಚ್ಯುತಿ ಬರದಂತೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಆಕರ: https://www.swarnavalli.org/history/index.php

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 110

 ಸೋಂದಾ  (Sonda)

ಸೋಂದಾ ಕ್ಷೇತ್ರ ಬೆಂಗಳೂರಿನಿಂದ 422 ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ 20 ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರಕ್ಕೆ ಸೋಂದ, ಸೋದೆ, ಸ್ವಾದಿ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಮಾಧ್ವ ಬ್ರಾಹ್ಮಣರು ಭೇಟಿ ಕೊಡುವ ಈ ಕ್ಷೇತ್ರದಲ್ಲಿ ವಾದಿರಾಜರ ಮೂಲ ಬೃಂದಾವನ, ರಮಾತ್ರಿವಿಕ್ರಮ ದೇವರ ಗುಡಿ, ಭೂತರಾಜರ ಸನ್ನಿಧಿ, ಧವಳ ಗಂಗಾ, ಮುಖ್ಯಪ್ರಾಣ ದೇವರು, ಗೋಪಾಲಕೃಷ್ಣ, ಸಂತಾನ ಗೋಪಾಲಕೃಷ್ಣ, ಅರಳಿಕಟ್ಟೆ, ನಾಗಬನ, ವೇದ ಮಂದಿರ, ಪಾಪ ವಿಮೋಚನಾ ತೀರ್ಥ, ಚಂದ್ರಮೌಳೇಶ್ವರ, ಹಾಗೂ ವೀಣೆಸಹಿತ ಹನುಮಂತ ದೇವರು ನೆಲೆಸಿದ್ದಾರೆ.

ಆ ಜಾಗದಿಂದ ಸ್ವಲ್ಪ ದೂರ ಕಾಡಿನ ಹಾದಿಯಲ್ಲಿ ನಡೆದು ಸಾಗಿದರೆ ಶಾಲ್ಮಲಿ ನದಿ ಹರಿಯುವ ತಪೋವನ ಎಂಬ ಅದ್ಭುತವಾದ ಸ್ಥಳವಿದೆ. ಮುಂಚೆ ಈ ಜಾಗಕ್ಕೆ ನಡೆದೇ ಹೋಗಬೇಕಿತ್ತು. ಇತ್ತೀಚಿಗೆ ವಾಹನ ವ್ಯವಸ್ಥೆಯನ್ನು ಸಹ ಮಾಡಿದ್ದರೆ. ಸೋಂದಾ ಕ್ಷೇತ್ರಕ್ಕೆ ಬರುವ ಬಹುಪಾಲು ಜನ ತಪೋವನಕ್ಕೆ ಖಂಡಿತವಾಗಿ ಭೇಟಿ ಕೊಡುವರು . ಹಾಗೆಯೇ ಸೋಂದಾ ಕ್ಷೇತ್ರದ ಸುತ್ತ ಮುತ್ತ ನೋಡಬಹುದಾದ ಜಾಗಗಳೆಂದರೆ ಸ್ವರ್ಣವಲ್ಲಿ ಮಠ, ವೆಂಕಟರಮಣ ದೇವಸ್ಥಾನಗಳಾಗಿದೆ.

ಮಳೆಗಾಲದಲ್ಲಂತೂ ಇಲ್ಲಿನ ಸೌಂದರ್ಯ ವರ್ಣಿಸಲು ಪದಗಳು ಸಾಲದು. ಮಳೆಗಾಲದಲ್ಲಿ ವಾರಾಂತ್ಯಗಳು ಬಿಟ್ಟರೆ ವಾರದ ದಿನಗಳಲ್ಲಿ ಹೆಚ್ಚು ಜನಸಂದಣಿ ಇರುವುದಿಲ್ಲ. ಪ್ರಶಾಂತವಾಗಿರುತ್ತದೆ ಸದಾಕಾಲ ಸುರಿಯುತ್ತಿರುವ ಆ ಮಳೆಯನ್ನೂ ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಒಂದೇ ಒಂದು ತೊಂದರೆ ಎಂದರೆ ಮಳೆಗಾಲದಲ್ಲಿ ತಪೋವನಕ್ಕೆ ಭೇಟಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಕಾಡಿನ ಹಾದಿಯಾದ್ದರಿಂದ ಜಿಗಣೆಗಳ ಕಾಟ ಹೆಚ್ಚಾಗಿ ಇರುತ್ತದೆ. ಕ್ಷೇತ್ರದಲ್ಲಿ ಊಟದ ಬಗ್ಗೆಯಂತೂ ಎರಡು ಮಾತಿಲ್ಲ. ಬೇಸಿಗೆಯಲ್ಲಿ ಇಲ್ಲಿನ ವಿಶೇಷ ಹಲಸಿನಕಾಯಿ ಹುಳಿ ಮಳೆಗಾಲದಲ್ಲಿ ಮಂಗಳೂರು ಸೌತೆಕಾಯಿ ಹುಳಿ.ಸವಿಯನ್ನು ಸವಿದೇ ಅನುಭವಿಸಬೇಕು.

ಇನ್ನು ಮೂಲತಃ ವಾದಿರಾಜರ ಮಠದಲ್ಲಿ ಒಟ್ಟು ಐದು ಬೃಂದಾವನಗಳಿವೆ. ಮಧ್ಯದಲ್ಲಿರುವ ಬೃಂದಾವನವು ವಾದಿರಾಜರದ್ದಾಗಿದ್ದರೆ ಅದರ ಎಡ ಹಾಗೂ ಬಲಕ್ಕಿರುವ ಎರಡೆರಡು ಬೃಂದಾವನಗಳು ಬ್ರಹ್ಮ, ವಿಷ್ಣು, ಶಿವ ಹಾಗೂ ವಾಯುವನ್ನು ಪ್ರತಿನಿಧಿಸುತ್ತವೆ.

ಮಠದ ಆವರಣದಲ್ಲಿ ಎರಡು ಕಲ್ಯಾಣಿಗಳಿದ್ದು ಅವುಗಳು ಧವಳಗಂಗಾ ಹಾಗೂ ಶೀತಲಗಂಗಾ ಎಂಬ ಹೆಸರುಗಳಿಂದ ಕರೆಯಲ್ಪಡುತ್ತವೆ. ಎರಡೂ ಕಲ್ಯಾಣಿಯ ನೀರು ಬಲು ಪವಿತ್ರವಾದುದೆಂದು ನಂಬಲಾಗುತ್ತದೆ. ಈ ಪವಿತ್ರ ನೀರಿನಲ್ಲಿನ ಸ್ನಾನವು ಪಾಪ ಕಮ್ರಗಳ ಜೂತೆಗೆ ಆರೋಗ್ಯದ ತೊಂದರೆಗಳನ್ನೂ ಸಹ ನಾಶಪಡಿಸುತ್ತವೆ ಎನ್ನಲಾಗಿದೆ. ಈ ಎರಡೂ ಕೊಳಗಳಲ್ಲಿನ ನೀರು ಭಾರತದ ಎಲ್ಲ ನದಿಗಳ ಸಂಗಮದ ನೀರು ಎನ್ನಲಾಗುತ್ತದೆ. ಧವಳಗಂಗಾ ಕಲ್ಯಾಣಿಯು ಮೂರು ಮೂಲೆಗಳನ್ನು ಹೊಂದಿದ್ದು ಅದರಲ್ಲಿ ಎರಡು ಮೂಲೆಗಳನ್ನು ಮಾತ್ರವೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿಡಲಾಗಿದೆ. ಮೂರನೇಯ ಮೂಲೆಗೆ ಪ್ರವೇಶಿಸಲು ಅನುಮತಿಯಿಲ್ಲ ಹಾಗೂ ಈ ಮೂಲೆಯು ಭೂತರಾಜರು ಮಾತ್ರವೆ ಉಪಯೋಗಿಸುತ್ತಾರೆಂಬ ಪ್ರತೀತಿಯಿದೆ. ಇನ್ನುಳಿದಂತೆ ವಾದಿರಾಜರಿಂದ ಪ್ರತಿಷ್ಠಾಪಿತ ಚಂದ್ರಮೌಳೀಶ್ವರ, ಆಂಜನೇಯ, ವೇಣುಗೋಪಾಲಸ್ವಾಮಿಯರ ಸನ್ನಿಧಿಗಳು ಹಾಗೂ ಮಠದ ಆವರಣದಲ್ಲಿ ವೇದವ್ಯಾಸರ ಚಿಕ್ಕ ದೇಗುಲ ಮತ್ತು ನಾಗಗಳಿಗೆ ಮುಡಿಪಾದ ನಾಗವನವಿದೆ.

***

ವಾದಿರಾಜರು

ವಾದಿರಾಜರು (ಕ್ರಿ.ಶ. ೧೪೮೦ - ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.

ವಾದಿರಾಜರು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾರೋಹಣ ಮಾಡಿ ಈ ಭರತ ಭೂಮಿಯಲ್ಲಿ 120 ವರ್ಷಗಳ ಕಾಲ ಬಾಳಿ ನಮ್ಮನ್ನು ಪುನೀತರನ್ನಾಗಿ ಮಾಡಿದ ಯತಿವರೇಣ್ಯರು ನಮ್ಮ ಶ್ರೀ ವಾದಿರಾಜರು. ಕ್ರಿಶ 1480- ಕ್ರಿಶ. 1600 ರ ಈ ಸಮಯದಲ್ಲಿ ಅವರು ಮಾಡಿದ ಸಮಾಜ ಸುಧಾರಣೆಗಳು, ಧಾರ್ಮಿಕ ಕಾರ್ಯಗಳು ಅಲೌಕಿಕವಾದದ್ದು ಹಾಗೂ ಅಸಾಮಾನ್ಯವಾದುದು. ಉಡುಪಿ ಜಿಲ್ಲೆಯ  ಕುಂಭಾಸಿಯ ಹತ್ತಿರ ಹೂವಿನಕೆರೆ ಎಂಬ ಚಿಕ್ಕ ಗ್ರಾಮದಲ್ಲಿ ದೇವರ ರಾಮಭಟ್ಟ ಮತ್ತು ಗೌರಿದೇವಿ ದಂಪತಿಗಳ ಮೊದಲ ಸಂತಾನ ಶ್ರೀ ವಾದಿರಾಜರು. ಅತ್ಯುತ್ತಮ ವಾಗ್ಮಿಗಳು, ಅದ್ಭುತ ಗ್ರಂಥರಚನಕಾರರು ಹಾಗೂ ಅದ್ವಿತೀಯ ಸಮಾಜ ಸುಧಾರಕರು. ಸಂಸ್ಕೃತ ಮತ್ತು ಕನ್ನಡದಲ್ಲಿ ಅದ್ಭುತ ಗ್ರಂಥಗಳನ್ನು ರಚಿಸಿದ ಇವರ ಮಹಿಮೆಗೆ ಎಣೆಯಿಲ್ಲ. ವಿಷಯಾನುಸಾರವಾಗಿ ಭಾಷೆ, ಅದಕ್ಕನುಗುಣವಾಗಿ ಭಾವನೆ ಎಲ್ಲವೂ ಮಿಳಿತವಾಗಿರುವುದು ಶ್ರೀ ವಾದಿರಾಜರ ಗ್ರಂಥಗಳಲ್ಲಿ. ಮಹಾನ್ ಶ್ರೇಷ್ಠ ದಾಸರಾದ ಶ್ರೀ ಕನಕದಾಸರಿಗೆ ಮನ್ನಣೆಯನ್ನು ನೀಡಿ ಉಡುಪಿಯಲ್ಲಿ ನೆಲೆ ನೀಡಿದವರು ಶ್ರೀ ವಾದಿರಾಜರು. ವಾದಿರಾಜ ಯತಿವರ್ಯರ ಆರಾಧ್ಯ ದೈವ ಹಯವದನ ಅಥವಾ ಹಯಗ್ರೀವ. ತಮ್ಮ ಎಂಟನೇಯ ವಯಸ್ಸಿನಲ್ಲೆ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ಈ ಮಹಾನುಭಾವರು 112 ವರ್ಷಗಳ ಕಾಲ ಸತತವಾಗಿ ದೈವ ಚಿಂತನೆ, ಹರಿ ಕೀರ್ತನೆ, ಧರ್ಮಪ್ರಸಾರ ಹಾಗೂ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಕುಡುಮ ಎಂದು ಕರೆಯಲ್ಪಡುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳ ಎಂದು ಹೆಸರು ಬದಲಿಸಿದವರು ಇದೇ ವಾದಿರಾಜರು.

ಸೋದೆ ಮಠದ ಪರಂಪರೆಯ ಯತಿಗಳಾದ ರಾಜರು ಉಡುಪಿಯ ಎರಡು ತಿಂಗಳ ಪೂಜಾ ಪದ್ಧತಿಯನ್ನು ಎರಡು ವರ್ಷಗಳ ಪದ್ಧತಿಯನ್ನಾಗಿ ಜಾರಿಗೆ ತಂದು ಪರ್ಯಾಯ ಮಹೋತ್ಸವಕ್ಕೆ ಹೆಚ್ಚಿನ ಮೆರುಗನ್ನು ನೀಡಿದರು. ಯತಿಗಳ ಮೂಲ ಆರೋಹಣಕ್ಕನುಸಾರವಾಗಿ ಫಲಿಮಾರು ಮಠದಿಂದ ಪರ್ಯಾಯ ಮಹೋತ್ಸವ ಪ್ರಾರಂಭವಾಗಿ ಆ ನಂತರ ಕ್ರಮಶಃ ಆರನೇಯವರಾಗಿ ಶ್ರೀ ವಾದಿರಾಜರು ಕ್ರಿ.ಶ.1532 ರಲ್ಲಿ ತಮ್ಮ ಮೊದಲ ಪರ್ಯಾಯ ಪೂಜೆಯನ್ನು ಆಚರಿಸಿದರು. ಕ್ರಿ.ಶ. 1580ರಲ್ಲಿ ಅವರ ನಾಲ್ಕನೆಯ ಮತ್ತು ಕೊನೆಯ ಪರ್ಯಾಯ. ಆಗ ಅವರಿಗೆ ೧೦೦ರ ವಯಸ್ಸು.

ವಾದಿರಾಜರು ತಮ್ಮ ವೃದ್ಧಾಪ್ಯದಲ್ಲಿ ಸೋದೆಯಲ್ಲಿ ವಾಸ ಮಾಡಿದರು. ಭಾರತೀಯ ಯತಿಗಳ ಇತಿಹಾಸದಲ್ಲಿ ಸಶರೀರವಾಗಿ ಬೃಂದಾವನ ಮಾಡಿದವರಲ್ಲಿ ವಾದಿರಾಜರು ಮೊದಲನೇಯವರು. 120 ವರ್ಷಗಳ ಅವರ ಜೀವಿತ ಕಾಲದಲ್ಲಿ ಅವರು ಮಾಡಿದ ಕೆಲಸಗಳು ಎಲ್ಲರಿಂದ ಮಾನ್ಯವಾಯಿತು. ಪಾಮರರನ್ನು ಉದ್ಧಾರ ಮಾಡಿದರು. ಸಂಸ್ಕೃತಕ್ಕೆ ಸಮನಾದ ಸ್ಥಾನವನ್ನು ಕನ್ನಡಕ್ಕೂ ಕೊಟ್ಟು ಉದ್ಧಾರ ಮಾಡಿದರು.ಶ್ರೀ ವಾದಿರಾಜರು ಕ್ರಿ.ಶ. 1600 ಫಾಲ್ಗುಣ ಬಹುಳ ತೃತೀಯಾ ದಿವಸ ವೃಂದಾವನಸ್ಥರಾದ ಶ್ರೀ ವಾದಿರಾಜರು ಅಂದಿನಿ0ದ ಇಂದಿನವರೆಗೆ ಸೇವೆ ಮಾಡುವ ಭಕ್ತಾದಿಗಳಿಗೆ ವಿವಿಧ ಇಷ್ಟಾರ್ಥಗಳನ್ನು ನೀಡುತ್ತಿದ್ದಾರೆ. 

***

ಇಲ್ಲಿನ ಮುಖ್ಯ ದೇವರು ಶ್ರೀ ರಮಾತ್ರಿವಿಕ್ರಮ ದೇವರು, ಶ್ರೀ ವಾದಿರಾಜರು ಮತ್ತು ಶ್ರೀ ಭೂತರಾಜರು. ಶ್ರೀ ವಾದಿರಾಜರು ಯತಿಗಳು. ಅವರ ಮೂಲ ಬೃಂದಾವನ ಇಲ್ಲಿಯೇ ಇರುವುದು. ಪ್ರತಿನಿತ್ಯ ಪ್ರಾತಹ ಕಾಲದಲ್ಲಿ ಮತ್ತು ಸಂಧ್ಯಾಕಾಲದಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ. ಇಲ್ಲಿನ ವಿಶೇಷ ಪೂಜೆ ಎಂದರೆ ಭೂತರಾಜರಿಗೆ ಅನ್ನದ ಬಳಿ ಪೂಜೆ. ಬೇಸಿಗೆ ಕಾಲದಲ್ಲಿ ರಮಾತ್ರಿವಿಕ್ರಮ ದೇವಸ್ಥಾನದ ಮುಂಭಾಗದಲ್ಲಿ ಇರುವ ವಿಶೇಷ ಪೀಠದಲ್ಲಿ ಈ ಪೂಜೆ ನೆರವೇರಿಸಲಾಗುವುದು. ಮಳೆಗಾಲದಲ್ಲಿ ಅಲ್ಲಿ ನಡೆಸಲು ಆಗದ ಕಾರಣ ಭೂತರಾಜರ ಗುಡಿಯ ಮುಂದೆಯೇ ಮಾಡುತ್ತಾರೆ. ಎರಡು ಅಡಿಯಷ್ಟು ಎತ್ತರಕ್ಕೆ ಅನ್ನದ ರಾಶಿ ಹಾಕಿ ಅದಕ್ಕೆ ಕುಂಕುಮದ ನೀರನ್ನು ಕಲಸಿ ಅನ್ನದ ರಾಶಿಗೆ ಆ ನೀರನ್ನು ಹಾಕಿ ಕೆಂಪನೆ ಬಣ್ಣದ ರಾಶಿ ಮಾಡಿ ಅದಕ್ಕೆ ಒಡೆದ ತೆಂಗಿನ ಕಾಯಿಯನ್ನು ಕಣ್ಣಿನಂತೆ ಇತ್ತು ಅದಕ್ಕೊಂದು ರೂಪ ಕೊಟ್ಟು ಅದರ ಮುಂದೆ ಕುಳಿತು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರದಲ್ಲಿ ಒಂದು ಪಂಜನ್ನು ಸಿದ್ಧಮಾಡಿ ಅದರಿಂದಲೇ ಆರತಿ ಮಾಡಿ ನಂತರ ಕಲಸಿದ್ದ ಕುಂಕುಮದ ನೀರನ್ನು ಆ ಪಂಜಿನ ಮೂಲಕ ನೆರೆದಿದ್ದ ಭಕ್ತರ ಮೇಲೆ ಪ್ರೋಕ್ಷಣೆ ಮಾಡುತ್ತಾರೆ. ನಂತರ ಅದೇ ನೀರನ್ನು ತೀರ್ಥವನ್ನಾಗಿ ನೀಡುತ್ತಾರೆ. ಪ್ರತಿದಿನವೂ ಈ ಪೂಜೆ ನಡೆದರೂ ಹುಣ್ಣಿಮೆಯಂದು ಬಹಳ ವಿಶೇಷ ಈ ಪೂಜೆಗೆ.

ಶ್ರೀ ಭೂತರಾಜರು

ಒಮ್ಮೆ ವ್ಯಾಸರಾಜರು ಮಠಕ್ಕೆ ಭೇಟಿ ಕೊಟ್ಟರು. ಅಂದು ದ್ವಾದಶಿ. ವಾದಿರಾಜರು ಇನ್ನೇನು ಪೂಜೆಗೆ ಕೂಡಬೇಕು. ಅಷ್ಟರಲ್ಲಿ ಭೋಜನಕ್ಕೆ ಕುಳಿತ ವ್ಯಾಸರಾಜರು ವಾದಿರಾಜರನ್ನು ಕುರಿತು "ರಾಜರು ಬರದೆ ನಾವು ಹೇಗೆ ಭೋಜನ ಸ್ವೀಕರಿಸುವುದು ಅವರು ಬಂದು ಇಲ್ಲೇ ಪಕ್ಕದಲ್ಲೇ ಕುಳಿತುಕೊಳ್ಳಲಿ" ಎಂದರು. ಅದರಂತೆಯೇ ವಾದಿರಾಜರು ಬಂದು ವ್ಯಾಸರಾಜರ ಪಕ್ಕದಲ್ಲಿ ಕುಳಿತು ಭೋಜನ ಮುಗಿಸಿ ನಂತರ ತಮ್ಮ ಶಿಷ್ಯ ವೃಂದಕ್ಕೆ ಹೇಳಿದರು ನೀವೆಲ್ಲ ಇಲ್ಲೇ ಇರಿ ನಾನು ಈಗಲೇ ಬರುತ್ತೇನೆ ಎಂದು ಹೇಳಿ ಹೊರಟರು. ಅವರು ಸೀದಾ ಬಂದು ತಲುಪಿದ್ದು ಶಾಲ್ಮಲಿ ನದಿಯ ಬಳಿಗೆ. ನದಿಯ ಬಳಿಗೆ ಬಂದವರೇ ಒಂದು ದೊಡ್ಡ ಎಲೆಯನ್ನು ತಮ್ಮ ಮುಂದೆ ಇಟ್ಟುಕೊಂಡು ಕುಳಿತರು. ತಾವು ಮಠದಲ್ಲಿ ಮಾಡಿದ ಅಷ್ಟು ಊಟವನ್ನು ಮತ್ತೆ ಎಲೆ ಮೇಲೆ ತಂದರು. ಅದು ಬಡಿಸಿದಾಗ ಹೇಗಿತ್ತೋ ಹಾಗೆಯೇ ಇತ್ತು. ಒಂದು ಚೂರು ಜೀರ್ಣವಾಗಿರಲಿಲ್ಲ. ಇದೆಲ್ಲಾ ಅವರ ಯೋಗಶಕ್ತಿಯಿಂದ ಸಾಧ್ಯವಾಯಿತು. ನಂತರ ಮತ್ತೆ ಸ್ನಾನ ಮಾಡಿ ಪೂಜೆ ಮುಗಿಸಿ ನಂತರ ಬಂದು ಭೋಜನ ಮುಗಿಸಿದರು. ಇದೆಲ್ಲವನ್ನು ಅವರನ್ನೇ ಹಿಂಬಾಲಿಸಿಕೊಂಡು ಬಂದ ಅವರ ಶಿಷ್ಯ ನಾರಾಯಣ ಶರ್ಮ ದೂರದಿಂದ ಮರದ ಮೇಲೊಂದರ ಮೇಲೆ ಹತ್ತಿ ನೋಡುತ್ತಿದ್ದ. ವಾಪಸ್ ಮಠದ ಕಡೆ ಹೊರಟಿದ್ದ ವಾದಿರಾಜರಿಗೆ ಅಡ್ಡ ಬಂದ ನಾರಾಯಣ ಶರ್ಮ ಗುರುಗಳೇ ನೀವು ಮಾಡಿದ್ದೆಲ್ಲವನ್ನೂ ನಾನು ನೋಡಿದೆ ಎಂದಾಗ ಕುಪಿತಗೊಂಡ ವಾದಿರಾಜರು ಅವನನ್ನು ಶಪಿಸಿಬಿಟ್ಟರು. ಕೂಡಲೇ ಅವನು ರಾಕ್ಷಸರೂಪಿಯಾಗಿಬಿಟ್ಟ.


ತನ್ನ ತಪ್ಪಿನ ಅರಿವಾದ ನಾರಾಯಣ ಶರ್ಮ ಶಾಪದ ಪರಿಹಾರವೆನೆಂದು ಕೇಳಲು ವಾದಿರಾಜರು ಹೇಳಿದರು ನೀನು ಕಾಡುಗಳಲ್ಲಿ ತಿರುಗುತ್ತ ದಾರಿಹೋಕರಲ್ಲಿ "ಆ ಕಾ ಮಾ ವೈ ಕೋ ನಾ ಸ್ನಾತಹ" ಎಂದು ಕೇಳು ಯಾರು ನಿನಗೆ ಉತ್ತರ ನೀಡುತ್ತಾರೋ ಅಂದು ನಿನಗೆ ಶಾಪ ವಿಮೋಚನೆ ಎಂದು ಹೇಳಿದರು. ಅಂದಿನಿಂದ ನಾರಾಯಣ ಶರ್ಮನು ಕಾಡುಗಳಲ್ಲಿ ಅಲೆಯುತ್ತ ದಾರಿಹೋಕರಲ್ಲಿ ತನ್ನ ಪ್ರಶ್ನೆಯನ್ನು ಕೆಳುತ್ತಿದ್ದನು. ಆದರೆ ಯಾರಿಂದಲೂ ಉತ್ತರ ದೊರಕುತ್ತಿರಲಿಲ್ಲ. ಹಾಗೆಯೇ ತನ್ನ ರಾಕ್ಷಸ ಗುಣದಿಂದಾಗಿ ದಾರಿಹೋಕರನ್ನು ಕೊಂದು ತಿನ್ನುತ್ತಿದ್ದನು. ತನ್ನ ಶಿಷ್ಯನ ಗತಿ ಕೇಳಿ ವಾದಿರಾಜರು ಮರುಗಿ ತಾವೇ ಕಾಡಿಗೆ ಹೊರಟರು. ಆಗ ಆ ನಾರಾಯಣಭೂತ ರಾಜರನ್ನೇ ಆ ಪ್ರಶ್ನೆ ಕೇಳಿದಾಗ "ರಂಡ ಪುತ್ರ ತ್ವಮ ನ ಸ್ನಾತಹ" (ಅಂದರೆ ವ್ಯಭಿಚಾರಿಯ ಮಗನು ಅಥವಾ ನಿನ್ನಂಥ ಬ್ರಹ್ಮರಾಕ್ಷಸನು ಆಶ್ವಯುಜ, ಕಾರ್ತೀಕ, ಮಾಘ, ವೈಶಾಖ ಮಾಸಗಳಲ್ಲಿ ಸ್ನಾನ ಮಾಡುವುದಿಲ್ಲ) ಎಂದ ಕೂಡಲೇ ಆತನಿಗೆ ಶಾಪ ವಿಮೋಚನೆಯಾಯಿತು. ಈಗ ಅವನು ತನ್ನ ಪೂರ್ವ ಜನ್ಮದ ಪ್ರತಾಪ ರುದ್ರನ ಅವತಾರ ತಾಳಿದ್ದನು. ಶಾಪ ವಿಮೋಚನೆ ಯಿಂದ ಆತನ ದೇಹ ಪ್ರಖರವಾಗಿ ಹೊಳೆಯುತ್ತಿತ್ತು. ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಜ್ವಲಿಸುತ್ತಿತ್ತು. ಶಾಪ ವಿಮೋಚನೆ ಮಾಡಿದ ವಾದಿರಾಜರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರತಾಪ ರುದ್ರನು ತಮಗೆ ನಾನು ಶಾಶ್ವತವಾಗಿ ಸೇವೆ ಮಾಡಬೇಕೆಂದು ಹಂಬಲವಾಗಿದೆ ಎಂದು ತಿಳಿಸಿದರು. ವಾದಿರಾಜರು ಅವರನ್ನು ಹರಸುತ್ತ ನೀನು ಭಾವೀರುದ್ರನಾಗಿ ಸೋದೆಯ ಕ್ಷೇತ್ರಪಾಲಕನಾಗಿ ಮುಂದೆ ಭೂತರಾಜರು ಎಂದು ಪ್ರಸಿದ್ಧಿ ಪಡೆಯುತ್ತೀಯ ಎಂದರು. ಅಂದಿನಿಂದ ಭೂತರಾಜರು ವಾದಿರಾಜರಿಗೆ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಒಮ್ಮೆ ವಾದಿರಾಜರು ಭೂತರಾಜರಿಗೆ ಬದರಿಕಾಶ್ರಮದಲ್ಲಿ ಇರುವ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಪೂಜೆಗಾಗಿ ತರಲು ಹೇಳಿದಾಗ ಕೂಡಲೇ ಹೊರಟ ಭೂತರಾಜರು ಬದರಿಕಾಶ್ರಮದಿಂದ ತಮ್ಮ ರಥದಲ್ಲಿ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಆಕಾಶಮಾರ್ಗದಲ್ಲಿ ಬರುತ್ತಿದ್ದಾಗ ದೈತ್ಯನೊಬ್ಬನು ಎದುರಾದನು. ವಾದಿರಾಜರು ಹೇಳಿದ ಮುಹೂರ್ತದಲ್ಲಿ ಅಲ್ಲಿರಬೇಕೆಂದು ಯೋಚಿಸಿ ಭೂತರಾಜರು ಸಮಯ ವ್ಯರ್ಥ ಮಾಡದೆ ತಮ್ಮ ರಥದ ಒಂದು ಚಕ್ರವನ್ನು ಕಿತ್ತು ಆ ದೈತ್ಯನ ಮೇಲೆ ಎಸೆದಾಗ ಆತ ಕೂಡಲೇ ಅಸುನೀಗಿದ. ವಿಗ್ರಹವನ್ನು ಹೊತ್ತ ಭೂತರಾಜರು ಸೋದೆಯಲ್ಲಿ ಬಂದಿಳಿದಾಗ ವಾದಿರಾಜರು ಆ ವಿಗ್ರಹವನ್ನು ಅಲ್ಲೇ ಸ್ಥಾಪಿಸುತ್ತ ಇದು ಕಲಿಯುಗವಾದ್ದರಿಂದ ಈ ಬಂಗಾರದ ರಥ ಹಾಗೆಯೇ ಈ ಬಂಗಾರದ ವಿಗ್ರಹ ಎರಡೂ ಕಲ್ಲಿನ ರೂಪದಲ್ಲಿ ಇರುತ್ತದೆ ಎಂದರು.

ಇಂದಿಗೂ ನೀವು ಸೋದೆಯಲ್ಲಿ ಆ ಒಂದು ಚಕ್ರವಿಲ್ಲದ ರಥವನ್ನು ನೋಡಬಹುದು.

ಆಚರಣೆ ಮತ್ತು ಸೇವಾ ಪದ್ಧತಿ

ಈ ಕ್ಷೇತ್ರದ ಪದ್ಧತಿಯಂತೆ ಇಲ್ಲಿಗೆ ಬಂದ ಕೂಡಲೇ ಮಾಡಬೇಕಾದ ಕೆಲಸವೆಂದರೆ ಭೂತರಾಜರ ಸನ್ನಿಧಿಯಲ್ಲಿ ತೆಂಗಿನ ಕಾಯಿ ಉರುಳಿಸುವುದು. ನೀವು ನಿಮ್ಮ ಸ್ವಂತ ವಾಹನದಲ್ಲಿ ಬಂದಿದ್ದರೆ ಚಕ್ರಕ್ಕೊಂದು ಎಂಬಂತೆ ಕಾಯಿ ಉರುಳಿಸಬೇಕು. ಇನ್ನು ಇಲ್ಲಿನ ವಿಶೇಷ ಸೇವಾ ಪದ್ಧತಿ ಎಂದರೆ ಕಾಯಿ ಕಟ್ಟಿಕೊಂಡು ಸೇವೆ ಮಾಡುವುದು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಸೇವೆಯನ್ನು ಮಾಡುವರು. ಇಲ್ಲಿ ಸೇವೆ ಮಾಡಿ ನಿಶ್ಚಿತ ಫಲ ಕಂಡವರು ಬಹಳಷ್ಟು ಮಂದಿ ಇದ್ದಾರೆ. ಈಗಲೂ ಕಾಣುತ್ತಿದ್ದರೆ. ಈ ಸೇವೆಯ ರೀತಿ ಹೀಗಿದೆ.

ಮೊದಲಿಗೆ ಧವಳಗಂಗೆಯಲ್ಲಿ ಮಿಂದು ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಬಂದು ವಾದಿರಾಜರ ಬೃಂದಾವನದ ಬಳಿ ಬಂದರೆ ಅಲ್ಲಿ ಅರ್ಚಕರು ಬಂದು ಆ ಕಾಯನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿ ತಂದುಕೊಡುತ್ತಾರೆ. ಆ ಸಮಯದಿಂದ ಆ ಕಾಯನ್ನು ನೆಲಕ್ಕೆ ತಾಗಿಸುವಂತಿಲ್ಲ. ಹಾಗೆಯೇ ಆ ಕಾಯನ್ನು ತೆಗೆದುಕೊಂಡು ಹೋಗಿ ಒಂದು ವಸ್ತ್ರದಲ್ಲಿ ಕಟ್ಟಿ ನಿಮ್ಮ ಟೊಂಕಕ್ಕೆ ಕಟ್ಟಿಕೊಳ್ಳಬೇಕು. ನಂತರ ಧವಳಗಂಗೆಯಲ್ಲಿ ಏಳು ಬಾರಿ ಮುಳುಗಿ ಮೇಲಕ್ಕೆ ಬಂದು ಮೈ ಒರೆಸಿಕೊಳ್ಳಬಾರದು. ಹಾಗೆಯೇ ಬಟ್ಟೆಯಿಂದ ನೀರನ್ನು ಮಾತ್ರ ಹಿಂಡಿ ಅದೇ ಒದ್ದೆ ಬಟ್ಟೆಯಲ್ಲಿ ಹೆಂಗಸರು ಹಣೆಗೆ ಕುಂಕುಮ ಇಟ್ಟುಕೊಂಡು, ಗಂಡಸರು ಗೋಪಿಚಂದನವನ್ನು ಹಚ್ಚಿಕೊಂಡು ಮೊದಲಿಗೆ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರಿಗೆ ನಮಸ್ಕಾರ ಹಾಕಿ ಎಡಕ್ಕೆ ತಿರುಗಿದರೆ ತುಳಸಿ ಬೃಂದಾವನ ಇದೆ ಅದಕ್ಕೆ ನಮಸ್ಕಾರ ಹಾಕಿ, ಪ್ರದಕ್ಷಿಣೆ ರೀತಿಯಲ್ಲಿ ಬಂದರೆ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ ಅದಕ್ಕೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಸಂತಾನ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ. ಅಲ್ಲೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಅರಳಿ ಕಟ್ಟೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೇದ ಮಂದಿರ ಅಲ್ಲೊಂದು ನಮಸ್ಕಾರ ಹಾಕಿ ಹಾಗೆಯೇ ಹೊರಗಿನಿಂದಲೇ ವಾದಿರಾಜರಿಗೆ ನಮಸ್ಕಾರ ಹಾಕಿ ಮುಂದಕ್ಕೆ ಸಾಗಿದರೆ ಅಲ್ಲಿ ಯತಿಗಳ ಬ್ರುಂದಾವನಗಳಿವೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ನಾಗಬನ ಅಲ್ಲೊಂದು ನಮಸ್ಕಾರ, ಮುಂದೆ ಪಾಪ ವಿಮೋಚನಾ ತೀರ್ಥ ಅಲ್ಲೊಂದು ನಮಸ್ಕಾರ, ನಂತರ ಹೊರಗಿನಿಂದಲೇ ಭೂತರಾಜರಿಗೆ ನಮಸ್ಕಾರ ಹಾಕಿ ಮುಂದೆ ಬಂದರೆ ಚಂದ್ರಮೌಳೇಶ್ವರ ಸನ್ನಿಧಿ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೀಣೆ ಸಹಿತ ಮುಖ್ಯಪ್ರಾಣ ದೇವರು ಅಲ್ಲಿಗೆ ಒಂದು ನಮಸ್ಕಾರ ಹಾಕಿದರೆ ಒಂದು ಸುತ್ತು ಮುಗಿದಂತೆ. ಇದೆ ಪದ್ಧತಿಯಲ್ಲಿ ಒಟ್ಟು ಏಳು ಸುತ್ತು ಪ್ರದಕ್ಷಿಣೆ ಹಾಕಬೇಕು. ಅಂದರೆ ಒಟ್ಟು ೪೯ ಸಲ ಮುಳುಗಬೇಕು. ಏಳು ಪ್ರದಕ್ಷಿಣೆಯ ನಂತರ ಮೇಲಕ್ಕೆ ಬಂದು ರಮಾತ್ರಿವಿಕ್ರಮ ದೇವರಿಗೆ ತಮ್ಮ ಶಕ್ತ್ಯಾನುಸಾರ ಪ್ರದಕ್ಷಿಣೆ ನಮಸ್ಕಾರ ಹಾಕಬೇಕು. ನಂತರ ಧವಳಗಂಗೆ ಬಲೆ ಬಂದು ಟೊಂಕಕ್ಕೆ ಕಟ್ಟಿದ್ದ ಆ ಕಾಯನ್ನು ವಸ್ತ್ರದ ಸಮೇತ ಹಾಗೆಯೇ ಬಿಚ್ಚಿ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರ ಗುಡಿಯ ಕಟ್ಟಡಕ್ಕೆ ಇರುವ ಕಂಬಿಗಳಿಗೆ ಕಟ್ಟಬೇಕು. ನಂತರ ಸ್ನಾನ ಮಾಡಿ ಒಣಗಿದ ವಸ್ತ್ರವನ್ನು ಉಟ್ಟಿ ವಾದಿರಾಜರ ಸನ್ನಿಧಿಗೆ ಬಂದು ೧೦೮ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಬೇಕು. ಇಲ್ಲೂ ಅಷ್ಟೇ ಶಕ್ತಿ ಇದ್ದರೆ ಒಮ್ಮೆಲೇ ೧೦೮ ಹಾಕಬಹುದು ಇಲ್ಲದ್ದಿದ್ದರೆ ಊಟವಾದ ನಂತರವೂ ಹಾಕಬಹುದು. ಇಷ್ಟು ಮಾಡಿದರೆ ಒಂದು ದಿನದ ಸೇವೆ ಮುಗಿಯುವುದು. ಈ ರೀತಿ ೩,೫,೭ ಹೀಗೆ ಬೆಸ ಸಂಖ್ಯೆಯಲ್ಲಿ ತಮ್ಮ ಶಕ್ತ್ಯಾನುಸಾರ ದಿನಗಳಷ್ಟು ಸೇವೆ ಮಾಡಬಹುದು. ಸೇವೆ ಮಾಡುವ ಅಷ್ಟು ದಿವಸ ಪಾಲಿಸಬೇಕಾದ ನಿಯಮಗಳೆಂದರೆ ಒಂದೇ ಹೊತ್ತು ಊಟ, ರಾತಿಯ ಹೊತ್ತು ಫಲಾಹಾರ ಸೇವಿಸಬೇಕು, ಮಧ್ಯಾಹ್ನ ಮಲಗಬಾರದು, ಕಾಲಿಗೆ ಚಪ್ಪಲಿ ತೊಡಬಾರದು, ತಲೆಗೆ ಎಣ್ಣೆ ಹಚ್ಹ ಬಾರದು, ಮುಖ್ಯವಾಗಿ ಆ ಸ್ಥಳ ಬಿಟ್ಟು ಹೊರಗೆ ಹೋಗಬಾರದು. ಹೀಗೆ ತಾವು ಅಂದುಕೊಂಡಷ್ಟು ದಿನಗಳ ಕಾಲ ಸೇವೆಯನ್ನು ಮುಗಿಸಿದ ಮೇಲೆ ಅಂದರೆ ಮೂರು ದಿವಸ ಸೇವೆ ಇದ್ದರೆ ನಾಲ್ಕನೇ ದಿವಸ ಬೆಳಿಗ್ಗೆ ಆ ಸ್ನಾನ ಮಾಡಿ ಆ ಕಾಯನ್ನು ಬಿಚ್ಚಿಕೊಂಡು ಮರಳಿ ವಾದಿರಾಜರ ಸನ್ನಿಧಿಗೆ ಬಂದು ಅರ್ಚಕರ ಕೈಗೆ ಕೊಟ್ಟರೆ ಅವರು ಪುನಃ ಬೃಂದಾವನದ ಬಳಿ ಇಟ್ಟು ಪೂಜಿಸಿ ಕೊಡುತ್ತಾರೆ. ನಂತರ ಊರಿಗೆ ಮರಳಿದ ಮೇಲೆ ಆ ಕಾಯಿಂದ ಏನಾದರೂ ಸಿಹಿಯನ್ನು ಮಾಡಿ ಪ್ರಸಾದವಾಗಿ ಸ್ವೀಕರಿಸಬೇಕು.

ಭೂತರಾಜರ ಸ್ತೋತ್ರ -

"ರಕ್ತಂ ವಿಚಿತ್ರವಸನಂ ಮಣಿಕುಂಡಲಾಡ್ಯಂ ಬಂದೂಕಪುಷ್ಪ ಸದ್ರುಶಾಧಾರ ಪಾಣಿಪಾದಂ

ಉದ್ಯದ್ದಿನೇಶ ಕರುಣಾರುಣ ದೇಹಭಾಜಾಂ ನಾರಾಯಣಂ ನಮತಾಂ ಚಾಪಶರಾನ್ ಧಧಾನಂ"

ವಾದಿರಾಜ ಪಾಹಿಮಾಂ ಭೂತರಾಜ ರಕ್ಷಮಾಂx`


Sunday, December 19, 2021

ರವಿಚಂದ್ರನ್ ಇಂತಹಾ ಪಾತ್ರಗಳಿಗೂ ಬಣ್ಣ ಹಚ್ಚುತ್ತಾರೆ!

 ರವಿಚಂದ್ರನ್ ಇಂತಹಾ ಪಾತ್ರಗಳಿಗೂ ಬಣ್ಣ ಹಚ್ಚುತ್ತಾರೆ! ಇದು ನನ್ನ ಕಲ್ಪನೆಯನ್ನೂ ಮೀರಿದ್ದು... "ಪ್ತ್ರೇಮಲೋಕ", "ರಣಧೀರ"ದಿಂದ "ಮಲ್ಲ", "ಸಾಹುಕಾರ"ದಂತಹಾ ಸಿನಿಮಾಗಳಲ್ಲಿ ಕ್ಕಾಣಿಸಿಕೊಂಡಿದ್ದ ಕ್ರೇಜಿಸ್ಟಾರ್ ರವಿ ಮಾಮ ಕಿಚ್ಚ ಸುದೀಪ್ ಅವರ "ಮಾಣಿಕ್ಯ" ನಂತರದಲ್ಲಿ ಸಾಕಷ್ಟು ವಿಭಿನ್ನ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ. ಆದರೂ ಇತ್ತೀಚೀ ಬಿಡುಗಡೆಯಾದ ಅವರ ಅಭಿನಯದ "ಕನ್ನಡಿಗ" ಸಿನಿಮಾ ಇದೆಯಲ್ಲ ಅದು ನನ್ನನ್ನು ಈ ಬರಹ ಬರೆಯದೇ ಹೋದರೆ ಆಗುವುದೇ ಇಲ್ಲ ಎಂಬಷ್ಟು ಕಾಡಿಸಿದ್ದು ಸುಳ್ಳಲ್ಲ.... ರವಿಚಂದ್ರನ್ "ಸಿಪಾಯಿ", "ರಾಮಾಚಾರಿ", "ಅಣ್ಣಯ್ಯ" ಹೀಗೆ ಸಾಲು ಸಾಲು ಯಶಸ್ವಿ ಚಿತ್ರಗಳಲ್ಲಿ ಅದರಲ್ಲಿಯೂ ಸಂಗೀತವೇ ಪ್ರಧಾನವಾಗಿರುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದವರು ಇಂದು ಒಂದು ಐತಿಹಾಸಿಕ ಕಥಾನಕದಲ್ಲಿ ಗುಣಭದ್ರ ಎಂಬ ಐತಿಹಾಸಿಕ ಪಾತ್ರದ ಮೂಲಕ ತೆರೆಗೆ ಬಂದಿರುವುದು ನಿಜಕ್ಕೂ ಸಂಭ್ರಮದ ವಿಚಾರ.

ಕನ್ನಡ ಭಾಷೆಗೆ ಅಪೂರ್ವ ಕೊಡುಗೆ ನೀಡಿದ್ದ ಜರ್ಮನ್ ಮೂಲದ ಫರ್ಡಿನಾಂಡ್ ಕಿಟಲ್ ಅವರ ಕಥಾನಕ ಆಧಾರಿತ "ಕನ್ನಡಿಗ" ನಿಜಕ್ಕೂ ಪ್ರತಿ ಕನ್ನಡಿಗರೂ ನೋಡಲೇಬೇಕಾದ ಚಿತ್ರ. ಹೊಸ ನಿರ್ದೇಶಕ ಬಿ.ಎಂ. ಗಿರಿರಾಜ್ ಇದಕ್ಕೆ ಮುನ್ನ "ಜಟ್ಟ" ಸಿನಿಮಾದ ಮೂಲಕ ಪ್ರಥಮ ಹೆಜ್ಜೆಯಲ್ಲೇ ದೊಡ್ಡ ಯಶಸ್ಸು ಕಂಡಿದ್ದರು. ಈ ಸಿನಿಮಾದಲ್ಲಿ ಇನ್ನಷ್ಟು ಎತ್ತರಕ್ಕೇರಿದ್ದಾರೆ ಎನ್ನುವುದು ನನ್ನ ಭಾವನೆ. 

ಇನ್ನು ನಾನಿಲ್ಲಿ ಬರೆದಿರುವುದು ಸಿನಿಮಾ ವಿಮರ್ಶೆ ಅಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.. ಸಿನಿಮಾ ಆಗಲಿ, ಪುಸ್ತಕವೇ ಆಗಲಿ, ನಾಟಕವಾಗಿರಲಿ ನೋಡಿದ ಪ್ರೇಕಹಾಕ ಅಥವಾ ಓದಿದ ಓದುಗನನ್ನು ಅದರ ಬಗ್ಗೆ ಮಾತನಾಡುವಂತೆ, ಬರೆಯುವಂತೆ ಕಾಡಬೇಕು. ಅಷ್ಟರಮಟ್ಟಿಗೆ ಅದು ಮನಸ್ಸಿಗೆ ನಾಟಿದ್ದೇ ಆದಲ್ಲಿ ಆ ಸಿನಿಮಾ ಅಥವಾ ನಾಟಕ, ಕಥೆ ಗೆದ್ದಿದೆ ಎಂದೇ ಅರ್ಥ... ಈ ನಿಟ್ಟಿನಲ್ಲಿ "ಕನ್ನಡಿಗ" ಸಿನಿಮಾ ನಿಜವಾಗಿ ಗೆಲುವು ಕಂಡಿದೆ.

ಇಂತಹಾ ಸಿನಿಮಾಗಳನ್ನು ತಾಯಿ ತಂದೆಗಳು ತಮ್ಮ ಮಕ್ಕಳೊಂದಿಗೆ ಆಗಮಿಸಿ ಸಿನಿಮಾ ಮಂದಿರಗಳಲ್ಲಿ ನೋಡಿದ್ದಾದರೆ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಇಂದಿನ ಆಧುನಿಕ ಕಾಲದಲ್ಲಿ ಮೊಬೈಲ್ ಮಾಯಾಲೋಕ ತೆರೆದಿದೆ ಎನ್ನುವುದು ಸತ್ಯವಾದರೂ ದೊಡ್ಡ ಪರದೆಯ ಮೇಲೆ ಸಿನಿಮಾ ಮೂಡಿಬಂದಿದ್ದಾದರೆ ಇನ್ನಷ್ಟು ಚೆನ್ನಿತ್ತು ಎನ್ನುವುದು ನನ್ನ ವೈಯುಕ್ತಿಕ ಭಾವನೆ. ಆರಂಭದಲ್ಲಿ ಇದೊಂದು ಸಾಕ್ಷಿಚಿತ್ರವೇನೋ ಎನ್ನಿಸುತ್ತದೆಯಾದರೂ ಚಿತ್ರ ಮುಂದುವರಿದ ಹಾಗೆಲ್ಲಾ ಪಕ್ಕಾ ವಾಣಿಜ್ಯ ಚಿತ್ರದಲ್ಲಿರಬೇಕಾದ ಎಲ್ಲವೂ ಇದೆ ಎನ್ನುವುದು ಸಾಬೀತಾಗುತ್ತದೆ. 

ರವಿಚಂದ್ರನ್ ಈ ಚಿತ್ರದಲ್ಲಿ ಲಿಪಿಕಾರ ವಂಶದ ಕಡೆಯ ಕುಡಿ ಗುಣಭದ್ರನಾಗಿ ಕಾಣಿಸಿಕೊಂಡಿದ್ದಾರೆ. ಹತ್ತನೇ ಶತಮಾನದಲ್ಲಿ ಬದುಕಿ ದಾನಚಿಂತಾಮಣಿಯೆಂದೇ ಪ್ರಸಿದ್ಧಳಾದ ಅತ್ತಿಮಬ್ಬೆಯ ವಂಶಜನಾದ  ಸಮಂತಭದ್ರ ಎಂಬ  ಜೈನ ವೀರ ಸೇನಾನಿ, 16ನೇ ಶತಮಾನದಲ್ಲಿ  ಕನ್ನಡನೆಲವನ್ನು, ಆಳುತ್ತಿದ್ದ ಸಾಳ್ವ ವಂಶದ ಅರಸಿ ಕಾಳುಮೆಣಸಿನ ರಾಣಿಯೆಂದೇ ಪ್ರಸಿದ್ಧಳಾದ ಕನ್ನಡತಿ ರಾಣಿ ಚೆನ್ನಭೈರಾದೇವಿಯ ಸೇನಾ ನಾಯಕನೀತ.

ರಾಣಿ ಚೆನ್ನಾಭೈರಾದೇವಿಯಿಂದ ಆಣತಿಗೊಂಡು ಕನ್ನಡ ನೆಲವನ್ನು, ಕನ್ನಡವನ್ನು ಉಳಿಸುವ ಪಣತೊಟ್ಟು , ಕತ್ತಿ ಬಿಟ್ಟು, ಕಂಠ ಹಿಡಿದು ( ಕಂಠ ಎಂದರೆ ಹಿಂದೆ  ಓಲೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಕಬ್ಬಿಣದ ಲೇಖನಿ) ಕನ್ನಡವ ಕಾವ ಧೀರನಾಗುತ್ತಾನೆ. 

ಕನ್ನಡ ಸೇವೆಗಾಗಿ ರಾಣಿಯಿಂದ ಒಂದು ದ್ವೀಪವನ್ನು ಉಡುಗೊರೆಯಾಗಿ ಪಡೆದು, ಅಲ್ಲೊಂದು ಕನ್ನಡಮ್ಮನ ದೇವಳ ಕಟ್ಟಿಸಿ, ತನ್ನ ಮುಂದಿನ ಇಡೀ ಬದುಕನ್ನು  ಕನ್ನಡದ ಏಳಿಗೆಗಾಗಿ ಸವೆಸಬೇಕೆಂದು ಆಜ್ಞೆಗೊಂಡಿದ್ದರಿಂದ ಹಾಗೆಯೇ ಬದುಕುತ್ತಾನೆ. ಮುಂದೆ ಆತನ ವಂಶಸ್ಥರು ಕನ್ನಡ ಸೇವೆಯ ಕೆಲಸವನ್ನು ಮುಂದುವರೆಸಿಕೊಂಡು ಬರುತ್ತಾರೆ.

 ಮುಂದೆ 1858 ರಲ್ಲಿ ಆತನ ಎಂಟನೇ ತಲೆಮಾರಿನ ಕುಡಿ "ಗುಣಭದ್ರ" ನು ತನ್ನ ವಂಶಸ್ಥರು ರಾಣಿ ಚೆನ್ನಭೈರಾದೇವಿ ಕೊಟ್ಟಿದ್ದ ದ್ವೀಪವನ್ನು ಮತ್ತು ಆ ದ್ವೀಪದ ಗುಹೆಯಲ್ಲಿ ಕನ್ನಡದ ಇತಿಹಾಸ, ಸಾಹಿತ್ಯ, ಕಲೆಗೆ ಸಂಬಂಧಿಸಿದ ಶಾಸನ, ಹಸ್ತಪ್ರತಿಗಳನ್ನು ರಕ್ಷಿಸಿ ಕಾಪಾಡಿಕೊಂಡು ಹೋಗಲು  ಪಣತೊಟ್ಟು, ನಿಲ್ಲುತ್ತಾನೆ. ಮುಂದೆ ಆತ ತನ್ನ ವಂಶಜರು ಒಂದು ಕಠಿಣ ವ್ರತದಂತೆ ಪಾಲಿಸಿಕೊಂಡು ಬಂದಿದ್ದ ಕನ್ನಡವನ್ನು ಕಾಪಾಡುವ ಕೆಲಸವನ್ನು ಗುಣಭದ್ರ ಹೇಗೆ ಮಾಡುತ್ತಾನೆ. ಅದರಲ್ಲಿ ಅವನು ಯಶಸ್ಬಿಯಾಗುತ್ತಾನೋ? ಇಲ್ಲವೋ ಎನ್ನುಗ್ಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಿರಿ.

ನಿರ್ದೇಶಕ ಬಿ.ಎಂ. ಗಿರಿರಾಜ್ ಅವರೊಂದಿಗೆ ರವಿಚಂದ್ರನ್
ಆದರೆ ಈಗಿಲ್ಲಿ ನಾವು ಗಮನಿಸಬಹುದಾದ ವಿಷಯವೆಂದರೆ ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸ ಇದೆ, ಪಂಪ, ರನ್ನಾದಿ ಕವಿಗಳಿದ್ದರು ಎನ್ನುವುದನ್ನೆಲ್ಲಾ ನಾವು ಆಹಿತ್ಯ ಚತ್=ರಿತ್ರೆ ಪುಸ್ತಕದಲ್ಲಿ ಓದಿದ್ದೇವೆ. ಆದರೆ ಕನ್ನಡ ಲಿಪಿಯನ್ನು ಹಲವಾರು ತಲೆಮಾರುಗಳವರೆಗೆ  ಕಾಪಾಡಿಕೊಂಡು ಬಂದು ನಮ್ಮವರೆವಿಗೆ ತಲುಪಿಸಿದವರು ಈ ಲಿಪಿಕಾರರು. ಆ ವಿಶೇಷವಾದ ಲಿಪಿಕಾರರ ಬಗ್ಗೆ ನಾವಿಂದಿಗೂ ಸಾಕಷ್ಟು ಗಮನವನ್ನೇ ನೀಡಿಲ್ಲ ಎನ್ನುವುದು ವಿಪರ್ಯಾಸ. ನಿರ್ದೇಶಕರು ಈ ಸಿನಿಮಾದ ಮೂಲಕ ಕನ್ನಡದ ಲಿಪಿಕಾರರ ಬಗ್ಗೆ ಹೊಸದೊಂದು ಹೊಳಹನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ತಪ್ಪಲ್ಲ. ಇನ್ನು ಮುಂಡಾದರೂ ಕನ್ನಡದ ಸಾಹಿತಿಗಳು, ಕಾವ್ಯ ರಚನೆಗಾರರ ಕುರಿತ ಸಂಶೋಧನೆಗಳಂತೆ ಲಿಪಿಕಾರರ ಬಗ್ಗೆ ಸಹ ಸಾಕಷ್ಟು ಅಧ್ಯಯನಗಳು ನಡೆಯಲಿ.

ಅಂದ ಹಾಗೆ ಈ ಚಿತ್ರದಲ್ಲಿ ಕೇವಲ ಕನ್ನಡ ಮಾತ್ರವೇ ಇಲ್ಲ ಬದಲಿಗೆ ಜಾತಿ, ಧರ್ಮ, ದೇಶ, ಪ್ರೀತಿ, ಪ್ರೇಮ ಎಲ್ಲವೂ ಇದೆ.

ಪಾತ್ರಧಾರಿಗಳ ಬಗ್ಗೆ ಹೇಳುವುದಾದರೆ ಮೈತ್ರಿ ಖ್ಯಾತಿಯ ಜಗ್ಗ , ಜೀವಿಕ, ರಚನಾ, ಬ್ರಹ್ಮಾಂಡ ಗುರುಜೀ,  ಪಾವನಾ, ಬಾಲಾಜಿ ಮನೋಹರ್, ಜಯಶ್ರೀ ಹೋಗೆ ಎಲ್ಲರೂ ಒಬ್ಬರಿಗಿಂತ ಒಬ್ಬರು ಹೆಚ್ಚು ಇಷ್ಟವಾಗುತ್ತಾರೆ. ಇನ್ನು ರವಿ ಬಸ್ರೂರು ಹಿನ್ನಲೆ ಸಂಗೀತ,ಶಿವಣ್ಣ ಹಾಡಿರುವ ಕನ್ನಡಂ ಗೆಲ್ಗೆ ಹಾಡು. ಅದ್ಭುತವಾಗಿದೆ. ಇಲ್ಲೇ ಇನ್ನೊಂದು ವಿಷಯ ಹೇಳುವುದಾದರೆ ರವಿಚಂದ್ರನ್ ಅವರ ಹೆಸರು ಎಲ್ಲಾ ಚಿತ್ರಗಳಲ್ಲಿ ತೆರೆ ಮೇಲೆ ಬರುವಾಗ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಎಂದು ಬರುತ್ತಿದ್ದದ್ದಾರೆ "ಕನ್ನಡಿಗ"ದಲ್ಲಿ ಮಾತ್ರ ಡಾ.ರವಿಚಂದ್ರ ಎಂದು ಬರುತ್ತದೆ!

ರವಿಚಂದ್ರನ್ ಅವರ ಅಭಿನಯದ, ನಿರ್ದೇಶಕ ಪಿ. ವಾಸು ಅವರ  "ದೃಶ್ಯ 2" ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಇದು ಮಲಯಾಳಂ ಚಿತ್ರದ ರಿಮೇಕ್ ಆಗಿದ್ದರೂ ಅದ್ಭುತ ಕಥೆ, ಪಾತ್ರಧಾರಿಗಳ ಮನಮುಟ್ಟುವ ಅಭಿನಯ ನಮಗೆ ಕನ್ನಡದ ಚಿತ್ರವನ್ನೇ ನೋಡಿದಂತಾಗುತ್ತದೆ. ಇನ್ನು ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಕಲಾವಿದ ಶಿವರಾಮ್ ಅವರ ಕೊನೆಯ ಚಿತ್ರ ಸಹ ಇದಾಗಿತ್ತು ಎನ್ನುವುದನ್ನು ನಾನಿಲ್ಲಿ ಸ್ಮರಿಸಬೇಕು.

ಇರಲಿ ಕನ್ನಡ ಭಾಷೆಯ ಮೇಲಿನ ಪ್ರೇಮವನ್ನು ಇಷ್ಟೋಂದು ನೀಟಾಗಿ ವಾಣಿಜ್ಯ ಚಿತ್ರವೊಂದರ ಮೂಲಕ ಸಹ ತೋರಿಸಬಹುದು ಎಂದು ಹೇಳುವುದಕ್ಕೆ ರವಿಮಾಮನ "ಕನ್ನಡಿಗ" ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಇರಲಿ ರವಿಚಂದ್ರನ್ ಅವರ ಅಭಿನಯದ. ಕನ್ನಡಿಗರು ಹೆಮ್ಮೆಪಡುವಂಥ ಸಿನಿಮಾ "ಕನ್ನಡಿಗ"zee5 ಆ್ಯಪ್ ನಲ್ಲಿ ಪ್ರಸಾರವಾಗುತ್ತಿದೆ ನೋಡಿ ಆನಂದಿಸಿ....


Wednesday, December 08, 2021

ಪುನೀತ್ ರಾಜ್ ಕುಮಾರ್ ಜೀವನ ಸಾಧನೆಯ ಪರಿಚಯ : ‘ಅನವರತ ಅಪ್ಪು’

 ಪುನೀತ್ ಅವರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತು. ಹರ್ಷ ಮಾಸ್ಟರ್ ಅವರ ‘ಅಂಜನೀಪುತ್ರ’ ಸಿನಿಮಾ ಮೂಲಕ ಅದು ನಿಜವಾಗಿತ್ತು. ನನ್ನ ‘ಕಟಕ’ ‘ಚಿತ್ರಕ್ಕೆ ಅವರು ಬಂಡವಾಳ ತೊಡಗಿಸಿದ್ದರು. ಅಲ್ಲದೆ ‘ಬಿಲಿಂಡರ್’ ಚಿತ್ರದ ಕುಂದಾಪ್ರ ಕನ್ನಡ ಭಾಷೆಯ ಹಾಡೊಂದಕ್ಕೆ ಧ್ವನಿಯಾಗಿದ್ದರು. ನನ್ನ ಅವರ ಸ್ನೇಹ ಸಂಬಂಧ ಅತ್ಯಂತ ಗಾಢವಾಗಿದ್ದು, ಅವರು ಈಗಿಲ್ಲ ಎನ್ನುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು. ಅವರು ರಾಘವೇಂದ್ರ ಅಡಿಗ ಎಚ್ಚೆನ್ ಅವರ ‘ಅನವರತ ಅಪ್ಪು’ ಕೃತಿಯಲ್ಲಿ ಬರೆದ ಬೆನ್ನುಡಿ ಹಾಗೂ ಜಯರಾಮ ಅಡಿಗರ ಅವರ ಮುನ್ನುಡಿ ನಿಮ್ಮ ಓದಿಗಾಗಿ.. 



ಮುನ್ನುಡಿ: 

ಶ್ರೇಷ್ಠ ಬಾಲನಟ ರಾಷ್ಟ್ರೀಯ ಪ್ರಶಸ್ತಿ  ಪಡೆದ ಮೊದಲ  ಕನ್ನಡ ಕಲಾವಿದ ( 'ಲೋಹಿತ್') 

-ಅಪ್ಪನಿಗಿಂತ  ಮೊದಲು ರಾಷ್ಟ್ರ ಪ್ರಶಸ್ತಿ ಪಡೆದ ಮಗ, 'ಅಪ್ಪು'

-ತಂದೆಯಂತೆಯೇ ಕರ್ನಾಟಕ ರತ್ನ ಪುರಸ್ಕೃತ.  ಅದು ಅತಿ ಚಿಕ್ಕ ವಯಸ್ಸಿನಲ್ಲೇ ಮತ್ತು ಮರಣೋತ್ತರ  ಎನ್ನುವುದು ವಿಶೇಷ.

ಈ  ಪುನೀತ್ ಹೆಸರ ನೆನೆದೊಡನೆ ಎಳೆಯರಿಗೆ  ಪುಲಕ ; ಹಿರಿಯರ ಮುದ್ದಿನ ಕಣ್ಮಣಿ ಪುಣ್ಯವಂತ ಈ ಪುನೀತ.  ಬಾಲ್ಯ ಪರ್ವದ ಬಳಿಕ ಕೋಶಾವಸ್ಥೆಯಲ್ಲಿದ್ದು ನಾಯಕನಟನಾಗಿ ಹೊಮ್ಮಿ ಪುನರವತರಿಸಿದ ಪುನೀತ ಬೆಳೆದು ತಂದೆಯ ಎಲ್ಲ ಸದಾಚಾರ, ಸದ್ಗುಣ, ವಿನಯ ಸಂಪನ್ನತೆಯ ಉತ್ತರಾಧಿಕಾರಿಯಾದ ಪರಿ ಅನನ್ಯ. 

ನನ್ನ ಹೊಸ ಪುಸ್ತಕ ಪುನೀತ್ ರಾಜ್ ಕುಮಾರ್ ಅವರ ಬದುಕಿನ ಸಾರ್ಥಕ ಪುಟಗಳು 💜 "#ಅನವರತಅಪ್ಪು ಕೃತಿಯನ್ನು  ಪುನೀತ್ ಅವರ ಸೋದರ, ನಟ Raghavendra Rajkumar ಅವರಿಗೆ ನೀಡಿದ ಕ್ಷಣ....
ಯುವರತ್ನ ಪುನೀತ್ ಗೆ ಕರ್ನಾಟಕ ರತ್ನ ಪುರಸ್ಕಾರ. ಮರಣೋತ್ತರ ವಾಗಿ ಪ್ರಕಟವಾದಾಗ  ಜನಪದ ತನ್ನ  ಒಡಲಾಳದ ಅಳಲಿಗೆ, ತಳಮಳಕ್ಕೆ ತಾನೇ ಏನೋ ಒಂದು ರೀತಿಯ ಸಾಂತ್ವನ ಪಡೆದು ಸ್ವಯಂ ಕಿಂಚಿತ್ ಸಂತೈಸಿ ಕೊಂಡಂತಾಯಿತೆಂದು ಆ ದಿನ ನನಗೆ ಅನಿಸಿತು. ಇದು ಸರ್ಕಾರದ ಪ್ರಶಸ್ತಿ ಎನ್ನುವುದಕ್ಕಿಂತ  ನಾಡಿಗೆ ನಾಡೇ ಸಲ್ಲಿಸಿದ ಪ್ರಶಸ್ತಿಯಂತೆ ಎನ್ನುವಂತಿದ್ದ ಸಂದರ್ಭ. 

ಬರೆಯುವ ಕಸುವುಳ್ಳವವರಿಗೆ ಇಂಥ ಸಂದರ್ಭಗಳಲ್ಲಿ  ದಾಖಲಿಸಬೇಕೆನಿಸುವ ನಾನಾ ಸಂಗತಿ,ಕ್ರಿಯೆ-ಪ್ರತಿಕ್ರಿಯೆ-ಪ್ರಕ್ರಿಯೆ, ವರ್ತಮಾನ, ಸಂಭಾವ್ಯತೆಗಳು ಕಾಣುತ್ತವೆ, ಸಿಗುತ್ತವೆ. ಯುವ ಪತ್ರಿಕೋದ್ಯೋಗಿ ರಾಘವೇಂದ್ರ ಅಡಿಗ ಸುಮ್ಮನಿರಲಾರದೆ ಆ ಮಾಹಿತಿಗಳನ್ನು ಜೋಡಿಸಿ ಕೊಳ್ಳುತ್ತಿದ್ದಂತೆ ಪುನೀತ್ ರಾಜ ಕುಮಾರ್ ರ ಸಮಗ್ರ ವ್ಯಕ್ತಿತ್ವದ ಅನೇಕ ಸ್ವಾರಸ್ಯಗಳನ್ನೊಳಗೊಂಡು ಈ ಕ್ಷಿಪ್ರ  ಪುಸ್ತಕ  ‌‌ರೂ‌ಪು ಗೊಂಡಿತು. 

ನನ್ನ ಹೊಸ ಪುಸ್ತಕ "#ಅನವರತಅಪ್ಪು" ಕೃತಿಗೆ ಕೇಳಿದ ತಕ್ಷಣ ಪ್ರೀತಿಯಿಂದೊಪ್ಪಿ ಮುನ್ನುಡಿ ರೂಪದಲ್ಲಿ ಎರಡು ಮಾತುಗಳನ್ನು ಬರೆದುಕೊಟ್ಟ ಹಿರಿಯ ಪತ್ರಕರ್ತರಾದ ಎಂ ಜಯರಾಮ ಅಡಿಗರಿಗೆ Jayarama Adiga ಗೌರವ ಪ್ರತಿಯನ್ನು ನೀಡಿದ ಕ್ಷಣ...
ಸಕಾಲಿಕ, ಸಮರ್ಪಕ, ಸಹಜ, ನೇರ, ಸರಳ ನಿರೂಪಣೆಯಿಂದಾಗಿ  ಪುಸ್ತಕ ಯಶಸ್ವೀ ಪ್ರಯತ್ನವಾಗಿದೆಯೆಂದು ನಾನು ಪುಸ್ತಕಕರ್ತರಾದ ಲೇಖಕ ಮತ್ತು ಪ್ರಕಾಶಕರನ್ನು ಅಭಿನಂದಿಸುತ್ತೇನೆ.  

- ಜಯರಾಮ ಅಡಿಗ

---

ಅಮರ ನಮ್ಮ ಅಪ್ಪು..

ಅಪ್ಪು ಅವರು ಸದಾ ಹಸನ್ಮುಖಿ, ಸ್ನೇಹಜೀವಿ. ಮೇಲಾಗಿ ಸದಾ ಚಟುವಟಿಕೆಯಿಂದಿರಲು ಬಯಸುತ್ತಿದ್ದರು. ಏನಾದರೂ ಹೊಸದನ್ನು ಮಾಡಲು ಹಾತೊರೆಯುತ್ತಿದ್ದರು. 

ನನ್ನ ಊಹೆ ಸತ್ಯವೆ ಅಗಿದ್ದರೆ ಅವರ ಮೊದಲ ಚಿತ್ರ ಏಪ್ರಿಲ್ 22, 2002ರಂದು ಬಿಡುಗಡೆಯಾಗಿತ್ತು. ಅಂದಿನಿಂದಲೂ ನಾನು ಅವರ ಅಭಿಮಾನಿಯಾಗಿದ್ದೇನೆ. ಈಗ ಹೇಳಬೇಕೆಂದರೆ ನನಗೆ ಅವರ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಅವಕಾಶ ದೊರೆತಿದ್ದು, ನಿಜವಾಗಿಯೂ ನನ್ನ ಭಾಗ್ಯ. ಪುನೀತ್ ಅವರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತು. ಹರ್ಷ ಮಾಸ್ಟರ್ ಅವರ ‘ಅಂಜನೀಪುತ್ರ’ ಸಿನಿಮಾ ಮೂಲಕ ಅದು ನಿಜವಾಗಿತ್ತು. ನನ್ನ ‘ಕಟಕ’ ‘ಚಿತ್ರಕ್ಕೆ ಅವರು ಬಂಡವಾಳ ತೊಡಗಿಸಿದ್ದರು. ಅಲ್ಲದೆ ‘ಬಿಲಿಂಡರ್’ ಚಿತ್ರದ ಕುಂದಾಪ್ರ ಕನ್ನಡ ಭಾಷೆಯ ಹಾಡೊಂದಕ್ಕೆ ಧ್ವನಿಯಾಗಿದ್ದರು. ನನ್ನ ಅವರ ಸ್ನೇಹ ಸಂಬಂಧ ಅತ್ಯಂತ ಗಾಢವಾಗಿದ್ದು, ಅವರು ಈಗಿಲ್ಲ ಎನ್ನುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಈಗ ಅಪ್ಪು ಅವರು ದೈಹಿಕವಾಗಿ ನಮ್ಮನ್ನಗಲಿದ್ದಾರೆ. ಆದರೆ ಅವರ ಚಿತ್ರಗಳು, ಆದರ್ಶ, ಅವರ ಸಮಾಜಮುಖಿ ಕೆಲಸಗಳು ಎಂದೆಂದಿಗೂ ಅಪ್ಪು ಅವರು ಅಮರ ಎಂದು ಸಾರುತ್ತದೆ. 

ಅವರ ಇಂತಹ ಅಮರತ್ವ ಪಡೆಯಬೇಕಿರುವ ಕೆಲಸ ಹಾಗೂ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲರ ಪ್ರೀತಿಯ ಪುನೀತ್ ಅವರ ಹುಟ್ಟಿನಿಂದ ಈವರೆಗೆ ಇಟ್ಟ ಸಾಧನೆಯ ಹೆಜ್ಜೆಗಳು, ಅವರ ಸಮಾಜ ಸೇವೆಯ ಗುಣವನ್ನೆಲ್ಲ ಸರಳ ಹಾಗೂ ಆಪ್ತ ರೀತಿಯಲ್ಲಿ ಪರಿಚಯಿಸಬೇಕು. ಈ ಮೂಲಕ ಪುನೀತ್ ಅವರನ್ನು ಜೀವಂತವಾಗಿಡಬೇಕೆಂದು ನಮ್ಮೂರಿನ ಪತ್ರಕರ್ತರಾದ ರಾಘವೇಂದ್ರ ಅಡಿಗ ಎಚ್ಚೆನ್ ಅವರು ‘ಅನವರತ ಅಪ್ಪು’ ಎನ್ನುವ ಈ ಪುಸ್ತಕವನ್ನು ಬರೆದಿದ್ದಾರೆ. ಅಪ್ಪು ಅವರ ಅಪರೂಪದ ವ್ಯಕ್ತಿತ್ವವನ್ನು ನಾವು ದಾಖಲಿಸಿಡಬೇಕಿದೆ. ಆದ್ದರಿಂದಲೇ ರಾಘವೇಂದ್ರ ಅಡಿಗರು ಬರೆದ ಈ ಪುಸ್ತಕವನ್ನು ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನು ಅರಿಯಬೇಕೆಂದುಕೊಂಡವರೆಲ್ಲರೂ ಓದಬೇಕಾಗಿದೆ ಹಾಗೂ ಇಲ್ಲಿ ಇವರು ದಾಖಲಿಸಿರುವ ಪ್ರತಿಯೊಂದೂ ಸಂಗತಿಗಳೂ ಒಟ್ಟಾದಾಗ ಪುನೀತ್ ಎಂತಹ ಅಪರೂಪದ ವ್ಯಕ್ತಿತ್ವ ಎಂದು ಅಚ್ಚರಿ ಪಡುತ್ತೇವೆ. 

ಆದ್ದರಿಂದ ನಮ್ಮೂರಿನವರೇ ಬರೆದ ನನ್ನ ಪ್ರೀತಿಯ ಪುನೀತ್ ಅವರ ಕುರಿತಾದ ಈ ಪುಸ್ತಕ ಪುನೀತ್ ರಾಜ್ ಕುಮಾರ್ ಜೀವನ ಸಾಧನೆಯನ್ನು ಪರಿಚಯಿಸುವ ಒಂದು ಅಪರೂಪದ ಪುಸ್ತಕವಾಗಿದ್ದು, ಇದು ಎಲ್ಲಾ ಕನ್ನಡಿಗರನ್ನೂ ತಲುಪಲಿ ಹಾಗೂ ಪುನೀತ್ ಅವರು ನಮ್ಮೆಲ್ಲರ ಮನದಲ್ಲಿ ಸದಾ ಜೀವಂತವಾಗಿರಲಿ ಎಂದು ಆಶಿಸುತ್ತೇನೆ. 

-ರವಿ ಬಸ್ರೂರು, ಸಂಗೀತ ನಿರ್ದೇಶಕ 

ನನ್ನ ಹೊಸ ಪುಸ್ತಕ "ಅನವರತ ಅಪ್ಪು" ಇದೀಗ ಮಾರುಕಟ್ಟೆಯಲ್ಲಿದ್ದು ಇದಕ್ಕಾಗಿ ಜಯರಾಮ ಅಡಿಗ, ರವಿ ಬಸ್ರೂರ್ ಅವರುಗಳು ಬರೆದ ಮುನ್ನುಡಿ ಹಾಗೂ ಬೆನ್ನುಡಿಗಳು ಪ್ರಸಿದ್ಧ "ಬುಕ್ ಬ್ರಹ್ಮ" ಆನ್ಲೈನ್ ತಾಣದಲ್ಲಿ ದಿನಾಂಕ 8-12-2021ರಂದು ಪ್ರಕಟವಾಗಿದೆ.