Wednesday, December 08, 2021

ಪುನೀತ್ ರಾಜ್ ಕುಮಾರ್ ಜೀವನ ಸಾಧನೆಯ ಪರಿಚಯ : ‘ಅನವರತ ಅಪ್ಪು’

 ಪುನೀತ್ ಅವರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತು. ಹರ್ಷ ಮಾಸ್ಟರ್ ಅವರ ‘ಅಂಜನೀಪುತ್ರ’ ಸಿನಿಮಾ ಮೂಲಕ ಅದು ನಿಜವಾಗಿತ್ತು. ನನ್ನ ‘ಕಟಕ’ ‘ಚಿತ್ರಕ್ಕೆ ಅವರು ಬಂಡವಾಳ ತೊಡಗಿಸಿದ್ದರು. ಅಲ್ಲದೆ ‘ಬಿಲಿಂಡರ್’ ಚಿತ್ರದ ಕುಂದಾಪ್ರ ಕನ್ನಡ ಭಾಷೆಯ ಹಾಡೊಂದಕ್ಕೆ ಧ್ವನಿಯಾಗಿದ್ದರು. ನನ್ನ ಅವರ ಸ್ನೇಹ ಸಂಬಂಧ ಅತ್ಯಂತ ಗಾಢವಾಗಿದ್ದು, ಅವರು ಈಗಿಲ್ಲ ಎನ್ನುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು. ಅವರು ರಾಘವೇಂದ್ರ ಅಡಿಗ ಎಚ್ಚೆನ್ ಅವರ ‘ಅನವರತ ಅಪ್ಪು’ ಕೃತಿಯಲ್ಲಿ ಬರೆದ ಬೆನ್ನುಡಿ ಹಾಗೂ ಜಯರಾಮ ಅಡಿಗರ ಅವರ ಮುನ್ನುಡಿ ನಿಮ್ಮ ಓದಿಗಾಗಿ.. 



ಮುನ್ನುಡಿ: 

ಶ್ರೇಷ್ಠ ಬಾಲನಟ ರಾಷ್ಟ್ರೀಯ ಪ್ರಶಸ್ತಿ  ಪಡೆದ ಮೊದಲ  ಕನ್ನಡ ಕಲಾವಿದ ( 'ಲೋಹಿತ್') 

-ಅಪ್ಪನಿಗಿಂತ  ಮೊದಲು ರಾಷ್ಟ್ರ ಪ್ರಶಸ್ತಿ ಪಡೆದ ಮಗ, 'ಅಪ್ಪು'

-ತಂದೆಯಂತೆಯೇ ಕರ್ನಾಟಕ ರತ್ನ ಪುರಸ್ಕೃತ.  ಅದು ಅತಿ ಚಿಕ್ಕ ವಯಸ್ಸಿನಲ್ಲೇ ಮತ್ತು ಮರಣೋತ್ತರ  ಎನ್ನುವುದು ವಿಶೇಷ.

ಈ  ಪುನೀತ್ ಹೆಸರ ನೆನೆದೊಡನೆ ಎಳೆಯರಿಗೆ  ಪುಲಕ ; ಹಿರಿಯರ ಮುದ್ದಿನ ಕಣ್ಮಣಿ ಪುಣ್ಯವಂತ ಈ ಪುನೀತ.  ಬಾಲ್ಯ ಪರ್ವದ ಬಳಿಕ ಕೋಶಾವಸ್ಥೆಯಲ್ಲಿದ್ದು ನಾಯಕನಟನಾಗಿ ಹೊಮ್ಮಿ ಪುನರವತರಿಸಿದ ಪುನೀತ ಬೆಳೆದು ತಂದೆಯ ಎಲ್ಲ ಸದಾಚಾರ, ಸದ್ಗುಣ, ವಿನಯ ಸಂಪನ್ನತೆಯ ಉತ್ತರಾಧಿಕಾರಿಯಾದ ಪರಿ ಅನನ್ಯ. 

ನನ್ನ ಹೊಸ ಪುಸ್ತಕ ಪುನೀತ್ ರಾಜ್ ಕುಮಾರ್ ಅವರ ಬದುಕಿನ ಸಾರ್ಥಕ ಪುಟಗಳು 💜 "#ಅನವರತಅಪ್ಪು ಕೃತಿಯನ್ನು  ಪುನೀತ್ ಅವರ ಸೋದರ, ನಟ Raghavendra Rajkumar ಅವರಿಗೆ ನೀಡಿದ ಕ್ಷಣ....
ಯುವರತ್ನ ಪುನೀತ್ ಗೆ ಕರ್ನಾಟಕ ರತ್ನ ಪುರಸ್ಕಾರ. ಮರಣೋತ್ತರ ವಾಗಿ ಪ್ರಕಟವಾದಾಗ  ಜನಪದ ತನ್ನ  ಒಡಲಾಳದ ಅಳಲಿಗೆ, ತಳಮಳಕ್ಕೆ ತಾನೇ ಏನೋ ಒಂದು ರೀತಿಯ ಸಾಂತ್ವನ ಪಡೆದು ಸ್ವಯಂ ಕಿಂಚಿತ್ ಸಂತೈಸಿ ಕೊಂಡಂತಾಯಿತೆಂದು ಆ ದಿನ ನನಗೆ ಅನಿಸಿತು. ಇದು ಸರ್ಕಾರದ ಪ್ರಶಸ್ತಿ ಎನ್ನುವುದಕ್ಕಿಂತ  ನಾಡಿಗೆ ನಾಡೇ ಸಲ್ಲಿಸಿದ ಪ್ರಶಸ್ತಿಯಂತೆ ಎನ್ನುವಂತಿದ್ದ ಸಂದರ್ಭ. 

ಬರೆಯುವ ಕಸುವುಳ್ಳವವರಿಗೆ ಇಂಥ ಸಂದರ್ಭಗಳಲ್ಲಿ  ದಾಖಲಿಸಬೇಕೆನಿಸುವ ನಾನಾ ಸಂಗತಿ,ಕ್ರಿಯೆ-ಪ್ರತಿಕ್ರಿಯೆ-ಪ್ರಕ್ರಿಯೆ, ವರ್ತಮಾನ, ಸಂಭಾವ್ಯತೆಗಳು ಕಾಣುತ್ತವೆ, ಸಿಗುತ್ತವೆ. ಯುವ ಪತ್ರಿಕೋದ್ಯೋಗಿ ರಾಘವೇಂದ್ರ ಅಡಿಗ ಸುಮ್ಮನಿರಲಾರದೆ ಆ ಮಾಹಿತಿಗಳನ್ನು ಜೋಡಿಸಿ ಕೊಳ್ಳುತ್ತಿದ್ದಂತೆ ಪುನೀತ್ ರಾಜ ಕುಮಾರ್ ರ ಸಮಗ್ರ ವ್ಯಕ್ತಿತ್ವದ ಅನೇಕ ಸ್ವಾರಸ್ಯಗಳನ್ನೊಳಗೊಂಡು ಈ ಕ್ಷಿಪ್ರ  ಪುಸ್ತಕ  ‌‌ರೂ‌ಪು ಗೊಂಡಿತು. 

ನನ್ನ ಹೊಸ ಪುಸ್ತಕ "#ಅನವರತಅಪ್ಪು" ಕೃತಿಗೆ ಕೇಳಿದ ತಕ್ಷಣ ಪ್ರೀತಿಯಿಂದೊಪ್ಪಿ ಮುನ್ನುಡಿ ರೂಪದಲ್ಲಿ ಎರಡು ಮಾತುಗಳನ್ನು ಬರೆದುಕೊಟ್ಟ ಹಿರಿಯ ಪತ್ರಕರ್ತರಾದ ಎಂ ಜಯರಾಮ ಅಡಿಗರಿಗೆ Jayarama Adiga ಗೌರವ ಪ್ರತಿಯನ್ನು ನೀಡಿದ ಕ್ಷಣ...
ಸಕಾಲಿಕ, ಸಮರ್ಪಕ, ಸಹಜ, ನೇರ, ಸರಳ ನಿರೂಪಣೆಯಿಂದಾಗಿ  ಪುಸ್ತಕ ಯಶಸ್ವೀ ಪ್ರಯತ್ನವಾಗಿದೆಯೆಂದು ನಾನು ಪುಸ್ತಕಕರ್ತರಾದ ಲೇಖಕ ಮತ್ತು ಪ್ರಕಾಶಕರನ್ನು ಅಭಿನಂದಿಸುತ್ತೇನೆ.  

- ಜಯರಾಮ ಅಡಿಗ

---

ಅಮರ ನಮ್ಮ ಅಪ್ಪು..

ಅಪ್ಪು ಅವರು ಸದಾ ಹಸನ್ಮುಖಿ, ಸ್ನೇಹಜೀವಿ. ಮೇಲಾಗಿ ಸದಾ ಚಟುವಟಿಕೆಯಿಂದಿರಲು ಬಯಸುತ್ತಿದ್ದರು. ಏನಾದರೂ ಹೊಸದನ್ನು ಮಾಡಲು ಹಾತೊರೆಯುತ್ತಿದ್ದರು. 

ನನ್ನ ಊಹೆ ಸತ್ಯವೆ ಅಗಿದ್ದರೆ ಅವರ ಮೊದಲ ಚಿತ್ರ ಏಪ್ರಿಲ್ 22, 2002ರಂದು ಬಿಡುಗಡೆಯಾಗಿತ್ತು. ಅಂದಿನಿಂದಲೂ ನಾನು ಅವರ ಅಭಿಮಾನಿಯಾಗಿದ್ದೇನೆ. ಈಗ ಹೇಳಬೇಕೆಂದರೆ ನನಗೆ ಅವರ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಅವಕಾಶ ದೊರೆತಿದ್ದು, ನಿಜವಾಗಿಯೂ ನನ್ನ ಭಾಗ್ಯ. ಪುನೀತ್ ಅವರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತು. ಹರ್ಷ ಮಾಸ್ಟರ್ ಅವರ ‘ಅಂಜನೀಪುತ್ರ’ ಸಿನಿಮಾ ಮೂಲಕ ಅದು ನಿಜವಾಗಿತ್ತು. ನನ್ನ ‘ಕಟಕ’ ‘ಚಿತ್ರಕ್ಕೆ ಅವರು ಬಂಡವಾಳ ತೊಡಗಿಸಿದ್ದರು. ಅಲ್ಲದೆ ‘ಬಿಲಿಂಡರ್’ ಚಿತ್ರದ ಕುಂದಾಪ್ರ ಕನ್ನಡ ಭಾಷೆಯ ಹಾಡೊಂದಕ್ಕೆ ಧ್ವನಿಯಾಗಿದ್ದರು. ನನ್ನ ಅವರ ಸ್ನೇಹ ಸಂಬಂಧ ಅತ್ಯಂತ ಗಾಢವಾಗಿದ್ದು, ಅವರು ಈಗಿಲ್ಲ ಎನ್ನುವುದು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಈಗ ಅಪ್ಪು ಅವರು ದೈಹಿಕವಾಗಿ ನಮ್ಮನ್ನಗಲಿದ್ದಾರೆ. ಆದರೆ ಅವರ ಚಿತ್ರಗಳು, ಆದರ್ಶ, ಅವರ ಸಮಾಜಮುಖಿ ಕೆಲಸಗಳು ಎಂದೆಂದಿಗೂ ಅಪ್ಪು ಅವರು ಅಮರ ಎಂದು ಸಾರುತ್ತದೆ. 

ಅವರ ಇಂತಹ ಅಮರತ್ವ ಪಡೆಯಬೇಕಿರುವ ಕೆಲಸ ಹಾಗೂ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲರ ಪ್ರೀತಿಯ ಪುನೀತ್ ಅವರ ಹುಟ್ಟಿನಿಂದ ಈವರೆಗೆ ಇಟ್ಟ ಸಾಧನೆಯ ಹೆಜ್ಜೆಗಳು, ಅವರ ಸಮಾಜ ಸೇವೆಯ ಗುಣವನ್ನೆಲ್ಲ ಸರಳ ಹಾಗೂ ಆಪ್ತ ರೀತಿಯಲ್ಲಿ ಪರಿಚಯಿಸಬೇಕು. ಈ ಮೂಲಕ ಪುನೀತ್ ಅವರನ್ನು ಜೀವಂತವಾಗಿಡಬೇಕೆಂದು ನಮ್ಮೂರಿನ ಪತ್ರಕರ್ತರಾದ ರಾಘವೇಂದ್ರ ಅಡಿಗ ಎಚ್ಚೆನ್ ಅವರು ‘ಅನವರತ ಅಪ್ಪು’ ಎನ್ನುವ ಈ ಪುಸ್ತಕವನ್ನು ಬರೆದಿದ್ದಾರೆ. ಅಪ್ಪು ಅವರ ಅಪರೂಪದ ವ್ಯಕ್ತಿತ್ವವನ್ನು ನಾವು ದಾಖಲಿಸಿಡಬೇಕಿದೆ. ಆದ್ದರಿಂದಲೇ ರಾಘವೇಂದ್ರ ಅಡಿಗರು ಬರೆದ ಈ ಪುಸ್ತಕವನ್ನು ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನು ಅರಿಯಬೇಕೆಂದುಕೊಂಡವರೆಲ್ಲರೂ ಓದಬೇಕಾಗಿದೆ ಹಾಗೂ ಇಲ್ಲಿ ಇವರು ದಾಖಲಿಸಿರುವ ಪ್ರತಿಯೊಂದೂ ಸಂಗತಿಗಳೂ ಒಟ್ಟಾದಾಗ ಪುನೀತ್ ಎಂತಹ ಅಪರೂಪದ ವ್ಯಕ್ತಿತ್ವ ಎಂದು ಅಚ್ಚರಿ ಪಡುತ್ತೇವೆ. 

ಆದ್ದರಿಂದ ನಮ್ಮೂರಿನವರೇ ಬರೆದ ನನ್ನ ಪ್ರೀತಿಯ ಪುನೀತ್ ಅವರ ಕುರಿತಾದ ಈ ಪುಸ್ತಕ ಪುನೀತ್ ರಾಜ್ ಕುಮಾರ್ ಜೀವನ ಸಾಧನೆಯನ್ನು ಪರಿಚಯಿಸುವ ಒಂದು ಅಪರೂಪದ ಪುಸ್ತಕವಾಗಿದ್ದು, ಇದು ಎಲ್ಲಾ ಕನ್ನಡಿಗರನ್ನೂ ತಲುಪಲಿ ಹಾಗೂ ಪುನೀತ್ ಅವರು ನಮ್ಮೆಲ್ಲರ ಮನದಲ್ಲಿ ಸದಾ ಜೀವಂತವಾಗಿರಲಿ ಎಂದು ಆಶಿಸುತ್ತೇನೆ. 

-ರವಿ ಬಸ್ರೂರು, ಸಂಗೀತ ನಿರ್ದೇಶಕ 

ನನ್ನ ಹೊಸ ಪುಸ್ತಕ "ಅನವರತ ಅಪ್ಪು" ಇದೀಗ ಮಾರುಕಟ್ಟೆಯಲ್ಲಿದ್ದು ಇದಕ್ಕಾಗಿ ಜಯರಾಮ ಅಡಿಗ, ರವಿ ಬಸ್ರೂರ್ ಅವರುಗಳು ಬರೆದ ಮುನ್ನುಡಿ ಹಾಗೂ ಬೆನ್ನುಡಿಗಳು ಪ್ರಸಿದ್ಧ "ಬುಕ್ ಬ್ರಹ್ಮ" ಆನ್ಲೈನ್ ತಾಣದಲ್ಲಿ ದಿನಾಂಕ 8-12-2021ರಂದು ಪ್ರಕಟವಾಗಿದೆ.

No comments:

Post a Comment