Monday, November 25, 2013

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -13

 ತುಳಜಾಪುರ(Tulajapur)
    ತುಳಜಾಪುರ, ಮಹಾರಾಷ್ಟ್ರದಲ್ಲಿರುವ ಚತುರ್ ಪವಿತ್ರ ಶಕ್ತಿಪೀಠಗಳಲ್ಲಿ ಒಂದು. ಇಲ್ಲಿ ನೆಲೆಸಿರುವ ತುಳಜಾಪುರ ಅಂಬಾ ಭವಾನಿಯು ಯುಗ ಯುಗಾದಿಗಳಿಂದಲೂ ತನ್ನನ್ನು ನಂಬಿದ ಭಕ್ತರಿಗೆ ತನ್ನ ಸಂಪೂರ್ಣ ಅನುಗ್ರಹವನ್ನು ತೋರುತ್ತಾ ಬಂದಿದ್ದಾಳೆ. ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಮಾಹಾರಜರ ಕುಲದೈವವಾಗಿದ್ದ ಈ ಶಕ್ತಿ ದೇವತೆಯನ್ನು ಇಂದಿಗೂ ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ ಅನೇಕ ಸಮುದಾಯದವರು ತಮ್ಮ ಕುಲದೈವವೆಂದು ನಂಬಿ ಆರಾಧಿಸುತ್ತಾ ಬರುತ್ತಿದ್ದಾರೆ.
    ಶ್ರೀ ದೇವಿ ಭಾಗವತದ ಪ್ರಕಾರವಾಗಿ ಮಾತೆ ಆದಿ ಪರಾಶಕ್ತಿಯು ಭಗವಾನ್ ಮಹಾವಿಷ್ಣುವಿನ ಸಹೋದರಿಯಾಗಿದ್ದು ದ್ವಾಪರ ಯುಗದಲ್ಲಿ ಶ್ರೀ ಹರಿಯ ಕೃಷ್ಣಾವತಾರದ ವೇಳೆ ತನಗೆ ದೇವಿಯ ವಿಶೇಷ ಸಹಕಾರ ಬೇಕೆಂದು ಮಹಾವಿಷ್ಣುವು ಕೋರಿದಾಗ ಆದಿ ಪರಾಶಕ್ತಿಯು ಯಶೋಧೆಯ ಗರ್ಭದಲ್ಲಿ ಕೃಷ್ಣನಿಗೆ ಸಹೋದರಿಯಾಗಿ ಜನ್ಮಿಸುತ್ತಾಳೆ. ಇದೇ ಕಾರಣಾವಾಗಿ ಭವಾನಿ ಅಮ್ಮನವರ ಕೈಗಳಾಲ್ಲಿ ಶಂಖ ಹಾಗೂ ಚಕ್ರಗಳಿರುವುದನ್ನು ನಾವು ಕಾಣುತ್ತೇವೆ,
    ಇನ್ನೊಂದು ಕಥೆಯ ಪ್ರಕಾರ ಮಾತುಂಗ ಮತ್ತು ಆತನ ಸಹಚರರು ಬ್ರಹ್ಮದೇವರಿಗೆ ಸಹಾಯ ಮಾಡುತ್ತಿದ್ದ ದೇವಾನುದೇವತೆಗಳು ಹಾಗೂ ಮಾನವರಿಗೆ ದಿನವೂ ಉಪಟಳಗಳನ್ನು ನೀಡುತ್ತಿದ್ದರು. ಇದಕ್ಕಾಗಿ ದೇವತೆಗಳು ಈ ಉಪಟಳಾಗಳಿಂದ ತಮ್ಮನ್ನು ಪಾರು ಮಾಡುವಂತೆ ಪರಾಶಕ್ತಿಯಲ್ಲಿ ಮೊರೆಯಿಟ್ಟಾಗ ಆಕೆ ತಾನು ಭವಾನಿಯ ರೂಪದಲ್ಲಿ ರೌದ್ರ ರೂಪಿಯಾಗಿ ಸಪ್ತ ಮಾತೃಕೆಗಳ ಶಕ್ತಿ ಸಹಿತವಾಗಿ ಮಾತುಂಗ ಮತ್ತು ಅವನ ಸಂಗಡಿಗರನ್ನು ಸಂಹರಿಸಿದಳು.
    ಅಂತೆಯೇ ಮಹಿಷಾಸುರನೆಂಬ ರಕ್ಕಸನು ತಾನು ಯಮುನಾಚಲ(ಈಗ ದೇವಿ ತುಳಜಾಭವಾನಿ ದೇವಾಲಯವಿರುವ ಪ್ರದೇಶ)ದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಸಾಧು ಋಶಿಮುನಿಗಳಿಗೆ ತೊಂದರೆ ಕೊಡುತ್ತಿರಲು ಅವನನ್ನು ಸಂಹರಿಸಲು ತಾಯಿ ಪರಾಶಕ್ತಿಯು ತಾನು ಭವಾನಿ ರೂಪದಲ್ಲಿ ಕಾಣಿಸಿಕೊಂಡಳು. ಹಾಗೆ ಕಾಣಿಸಿಕೊಂಡು ಮಹಿಷಾಸುರನನ್ನು ಸಂಹರಿಸಿದ ತರುವಾಯ ಅಲ್ಲಿನ ಭಕ್ತಕೋಟಿಯ ಕೋರಿಕೆಯ ಮೇರೆಗೆ ತಾಯಿಯು ಅದೇ ಯಮುನಾಚಲದಲ್ಲಿ ಶಾಶ್ವತವಾಗಿ ನೆಲೆಯಾದಳು.
    ಇಷ್ಟೆಲ್ಲದರ ಜತೆಗೆ ಹದಿನೇಳನೇ ಶತಮಾನದಲ್ಲಿ ಮಹಾರಾಷ್ಟ್ರವನ್ನು ಆಳಿದ್ದ ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿಯ ಭಕ್ತಿಗೆ ಒಲಿದ ತಾಯಿಯು ಶಿವಾಜಿಯವರಿಗೆ ತನ್ನ ಅಮೂಲ್ಯ ಖಡ್ಗವನ್ನು ವರದಾನವಾಗಿತ್ತು ಆಶೀರ್ವದಿಸಿದಳು. ಈ ಒಂದು ಖಡ್ಗ ಅವರ ಬಳಿ ಇದ್ದ ಕಾರಣಾದಿಂದಾಗಿಯೇ ಶಿವಾಜಿಯವರು ತಾವು ಹೋದ ಕಡೆಯಲ್ಲೆಲ್ಲಾ ವಿಜಯಿಗಳಾಗಲು ಸಾಧ್ಯವಾಯಿತು.
    ಹೀಗೆ ಪುರಾಣ ಕಾಲದಿಂದ ಇತಿಹಾಸ ರಾಜ ಮಹಾರಾಜರವರೆಗೂ ತನ್ನನ್ನು ನಂಬಿ ಬಂದ ಭಕ್ತರಿಗೆ ತನ್ನ ಕೃಪಾಶೀರ್ವಾದವನ್ನು ನೀಡುತ್ತಾ ಬಂದಿರುವ ತುಳಜಾಪುರದ ಶ್ರೀ ಅಂಬಾ ಭವಾನಿಯು ತನ್ನನ್ನು ನಂಬಿದವರ ಕೈಬಿಡುವುದಿಲ್ಲ ಎಂಬ ನಂಬಿಕೆ ಆ ಭಾಗದ ಜನರಲ್ಲಿ ಬಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ಆದಿ ಶಂಕರರ್ರ ನುಡಿಯನ್ನು ಕಾಣಬಹುದು- “ಯಾರು ದಿನಕ್ಕೆ ಮೂರು ಬಾರಿ ನಿಜವಾದ ದೃಢ ಭಕ್ತಿಯಿಂದ ‘ಭವಾನಿ’ಯ ನಾಮಸ್ಮರಣೆಯನ್ನು ಮಾಡುವರೋ ಅಂಥವರಿಗೆ ದುಃಖ,ಅನಿರೀಕ್ಷಿತ ಅವಘಡಗಳಾಗಲಿ ಸಂಭವಿಸದು”.
    ನಮಸ್ಕಾರ.

 

Saturday, November 23, 2013

ಜಗತ್ಪ್ರಸಿದ್ದ ಭಾಷಣಗಳು- 01

ಸಚಿನ್ ತೆಂಡುಲ್ಕರ್(Sachin Tendulkar)

    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನನ್ನ ನಮಸ್ಕಾರಗಳು.
    ಇತ್ತೀಚೆಗಷ್ಟೆ ಭಾರತೀಯರಷ್ಟೆ ಅಲ್ಲ ಪ್ರಪಂಚದ ಕ್ರಿಕೆಟ್ ಪ್ರಿಯರಿಗೆಲ್ಲ ‘ಕ್ರಿಕೆಟ್ ದೇವರು’ ಎನಿಸಿದ್ದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಭಾರತ ಸರ್ಕಾರ ಸಚಿನ್ ಸಾಧನೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿದೆ.
    ಈ ವೇಳೆಯಲ್ಲಿ ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಎರಡನೆ ಟೆಸ್ಟ್ ಹಾಗೂ ತಮ್ಮ ಕ್ರಿಕೆಟ್ ಜೀವನದ ಅಂತಿಮ ಟೆಸ್ಟ್ ಪಂದ್ಯವನ್ನಾಡಿ ಮುಗಿಸಿದ ಸಚಿನ್ ನವೆಂಬರ್ 16-11-2013ರಂದು ತಾವು ಮಾಡಿದ ಐತಿಹಾಸಿಕ ವಿದಾಯ ಭಾಷಣದ ಪೂರ್ಣ ಪಾಠ ನಿಮಗಾಗಿ….
………………………..
    ಗೆಳೆಯರೆ, ದಯವಿಟ್ಟು ಶಾಂತವಾಗಿರಿ, ಇಲ್ಲವಾದರೆ ನಾನು ಇನ್ನಷ್ಟು ಭಾವುಕನಾಗುತ್ತೇನೆ!
    22 ಯಾರ್ಡ್ಸ್ ನಡುವಿನ ನನ್ನ 24 ವರ್ಷಗಳ ಬದುಕು ಕೊನೆಯಾಗುತ್ತಿರುವುದನ್ನು ನಂಬಲು ಕಷ್ಟವಾಗುತ್ತಿದೆ.
    ನನ್ನ ಜೀವನ ಯಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರಿಗೆ ಕೃತಜ್ಞತೆ ಸಲ್ಲಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ನಾನು ಧನ್ಯವಾದ ಹೇಳಲೇಬೇಕಾಗಿರುವ ಹೆಸರನ್ನು ಪಟ್ಟಿ ಮಾಡಿಕೊಂಡು ಬಂದಿರುವೆ. ಯಾರ ಹೆಸರನ್ನೂ ಮರೆಯದೆ ಎಲ್ಲರನ್ನೂ ನೆನಪಿಸಿಕೊಳ್ಳಲು ಬಯಸಿರುವೆ. ಭಾವೋದ್ವೇಗದಿಂದಾಗಿ ಮಾತನಾಡಲು ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ನಾನು ಮ್ಯಾನೇಜ್ ಮಾಡಬಲ್ಲೆ
    ನನ್ನ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ ನನ್ನ ತಂದೆ. 1999ರಲ್ಲಿ ಅವರು ನಿಧನರಾದಾಗಿನಿಂದ ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವೆ. ಅವರ ಮಾರ್ಗದರ್ಶನವಿರದಿದ್ದರೆ ನಾನಿಂದು ನಿಮ್ಮ ಮುಂದೆ ನಿಂತಿರುತ್ತಿರಲಿಲ್ಲ. ಅವರು ನನಗೆ 11ನೇ ವಯಸ್ಸಿನಲ್ಲೇ ಸ್ವಾತಂತ್ರ ನೀಡಿದರು. ‘ಕನಸುಗಳನ್ನು ಬೆನ್ನಟ್ಟು. ಎಂದೂ ಅಡ್ಡದಾರಿ ಹಿಡಿಯಬೇಡ. ದಾರಿ ಕಠಿಣವಾಗಿರಬಹುದು, ಆದರೆ ಎಂದೂ ಎದೆಗುಂದಬೇಡ.’ ಎಂದವರು ಹೇಳಿದ್ದರು. ನಾನವರ ಮಾತನ್ನಷ್ಟೇ ಪಾಲಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ನನಗೆ ಉತ್ತಮ ವ್ಯಕ್ತಿಯಾಗಿರಲು ಸೂಚಿಸಿದ್ದರು. ನಾನದನ್ನು ಪಾಲಿಸುವ ಪ್ರಯತ್ನವನ್ನು ಮುಂದುವರಿಸುವೆ. ಪ್ರತಿ ಬಾರಿ ವಿಶೇಷ ಸಾಧನೆ ಬಳಿಕ ನನ್ನ ಬ್ಯಾಟನ್ನು ಆಕಾಶದತ್ತ ಪ್ರದರ್ಶಿಸುತ್ತಿದ್ದಿದ್ದು ನನ್ನ ತಂದೆಗಾಗಿ.
    ನನ್ನ ಅಮ್ಮ ಹೇಗೆ ನನ್ನಂತ ತುಂಟ ಮಗನನ್ನು ನಿಭಾಯಿಸಿದರೆಂದು ಗೊತ್ತಿಲ್ಲ. ನನ್ನನ್ನು ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ. ಆಕೆಯ ತಾಳ್ಮೆ ಅಪಾರ. ತಾಯಿಯೊಬ್ಬಳಿಗೆ ಮಗನ ಯೋಗಕ್ಷೇಮವೇ ಮುಖ್ಯ. ನನ್ನ 24 ವರ್ಷಗಳ ವೃತ್ತಿಜೀವನದಲ್ಲಿ ನನ್ನಮ್ಮ ಪ್ರತೀ ದಿನ ನನ್ನ ಬಗ್ಗೆಯೇ ಕಾಳಜಿ ಹೊಂದಿದ್ದರು. ನಾನು ಆಟವಾಡಲು ಆರಂಭಿಸಿದ ದಿನದಿಂದಲೂ ಆಕೆ ನನಗಾಗಿ ಪ್ರಾರ್ಥಿಸುತ್ತಾ ಬಂದಿದ್ದಾರೆ. ಅಮ್ಮನ ಪ್ರಾರ್ಥನೆ ಮತ್ತು ಆಶೀರ್ವಾದವೇ ನನಗೆ ಮೈದಾನಕ್ಕಿಳಿದು ಉತ್ತಮ ನಿರ್ವಹಣೆ ತೋರಲು ಸಾಮರ್ಥ್ಯ ನೀಡಿದೆ. ಅಮ್ಮನ ಎಲ್ಲಾ ತ್ಯಾಗಗಳಿಗಾಗಿ ನನ್ನ ದೊಡ್ಡ ವಂದನೆ.
    ನನ್ನ ಶಾಲೆ ಮನೆಯಿಂದ ಸಾಕಷ್ಟು ದೂರದಲ್ಲಿದ್ದ ಕಾರಣ ನಾಲ್ಕು ವರ್ಷಗಳ ಕಾಲ ನಾನು ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮನೆಯಲ್ಲಿದ್ದೆ. ಅವರು ನನ್ನನ್ನು ಅವರ ಮಗನಂತೆಯೇ ನೋಡಿಕೊಂಡರು. ದಿನವಿಡೀ ಆಟವಾಡಿ ಸುಸ್ತಾಗಿ ಅರೆನಿದ್ರೆಗೆ ಜಾರಿದ ಬಳಿಕವೂ ಚಿಕ್ಕಮ್ಮ ನನ್ನ ಬಾಯಿಗೆ ತುತ್ತು ತಿನ್ನಿಸುತ್ತಿದ್ದರು. ಇದರಿಂದಾಗಿ ಮರುದಿನ ನಾನು ಮತ್ತೆ ಹೊಸ ಚೈತನ್ಯದಿಂದ ಆಟಕ್ಕಿಳಿಯುತ್ತಿದ್ದೆ. ನಾನು ಆ ದಿನಗಳ್ನ್ನೆಂದೂ ಮರೆಯಲಾರೆ. ನಾನವರ ಮಗನಿದ್ದಂತೆ.
    ನನ್ನ ಹಿರಿಯ ಅಣ್ಣ ನಿತಿನ್ ಹಾಗೂ ಅವನ ಕುಟುಂಬವೂ ನನಗೆ ಯಾವಾಗಲೂ ಪ್ರೋತ್ಸಾಹ ತುಂಬಿದೆ. ನನ್ನ ಹಿರಿಯಣ್ಣ ಹೆಚ್ಚು ಮಾತನಾಡುವವರಲ್ಲ. ಆದರೆ ಒಂದು ಮಾತು ಮಾತ್ರ ಅವರು ಯಾವಾಗಲೂ ನನಗೆ ಹೇಳುತ್ತಿರುತ್ತಾರೆ. ‘ನೀನು ಏನೇ ಮಾಡಿದರೂ ಶೇ. 100ರಷ್ಟು ಮನಸ್ಸಿಟ್ಟು ಮಾಡುವೆ ಎನ್ನುವುದು ನನಗೆ ಗೊತ್ತು. ನಿನ್ನ ಮೇಲೆ ನನಗೆ ಪೂರ್ಣ ನಂಬಿಕೆ ಮತ್ತು ವಿಶ್ವಾಸವಿದೆ.’ ಅವರ ಪ್ರೋತ್ಸಾಹ ನನ್ನ ಪಾಲಿಗೆ ಸಾಕಷ್ಟು ಅಮೂಲ್ಯ.
ನನ್ನ ಅಕ್ಕ ಸವಿತಾ ಮತ್ತು ಆಕೆಯ ಕುಟುಂಬವೂ ಭಿನ್ನವಲ್ಲ. ನನ್ಗೆ ಮೊದಲ ಕ್ರಿಕೆಟ್ ಬ್ಯಾಟ್ ಉಡುಗೊರೆ ಕೊಟ್ಟವರು ನನ್ನ ಅಕ್ಕ. ಅದೊಂದು ಕಾಶ್ಮೀರಿ ಮರದ ಬ್ಯಾಟ್. ಅಲ್ಲಿಂದಲೇ ನನ್ನ ಪ್ರಯಾಣ ಆರಂಭಗೊಂಡಿದ್ದು. ನಾನು ಬ್ಯಾಟಿಂಗ್ ಮಾಡುವಾಗ ಉಪವಾಸ ಮಾಡುವ ಎಷ್ಟೋ ಜನರಲ್ಲಿ ನನ್ನಕ್ಕ ಕೂಡ ಒಬ್ಬರು.
    ಅಜಿತ್ ಬಗ್ಗೆ ನಾನೇನು ಹೇಳಲಿ? ನಾವಿಬ್ಬರು ಈ ಕನಸನ್ನು ಜತೆಯಾಗಿ ಅನುಭವಿಸಿದ್ದೇವೆ. ಅವರು ನನಗಾಗಿ ನನ್ನ ವೃತ್ತಿ ಜೀವನವನ್ನೇ ತ್ಯಾಗ ಮಾಡಿದ್ದಾರೆ. ನನ್ನಲ್ಲಿದ್ದ ಕ್ರಿಕೆಟ್ ಆಸಕ್ತಿಯನ್ನು ಗುರುತಿಸಿ ಅಜ್ರೇಕರ್ ಸರ್ ಬಳಿಗೆ ನನ್ನ ೧೧ನೇ ವಯಸ್ಸಿನಲ್ಲೇ ಕರೆದೊಯ್ದಲ್ಲಿಂದ ಎಲ್ಲವೂ ಆರಂಭಗೊಂಡಿತು. ಅಲ್ಲಿಂದ ಮುಂದೆ ನನ್ನ ಜೀವನವೇ ಬದಲಾಯಿತು. ಶುಕ್ರವಾರ ರಾತ್ರಿಯೂ ಅವರು ನನಗೆ ಕರೆಮಾಡಿ ನಾನು ಔಟಾದ ರೀತಿಯ ಬಗ್ಗೆ ಚರ್ಚಿಸಿದರು. ಅದು ನಾವು ಬೆಳೆಸಿಕೊಂಡು ಬಂದಿರುವ ಅಭ್ಯಾಶ. ಬಹುಷಃ ಮುಂದೆ ನಾನು ಆಟವಾಡದ ದಿನಗಳಲ್ಲಿಯೂ ನಾವಿಬ್ಬರು ತಾಂತ್ರಿಕತೆಗಳ ಕುರಿತು ಚರ್ಚಿಸಬಹುದು. ನಾವೂ ವಾಗ್ವಾದ ನಡೆಸಿದ್ದೇವೆ ಮತ್ತು ಅಭಿಪ್ರಾಯ ಭೇದ ಬಂದಿವೆ. ಆದರೆ ನಾನು ಜೀವ್ನದಲ್ಲಿ ಇಂಥದ್ದನ್ನೆಲ್ಲಾ ಪಾಲಿಸಿಕೊಂಡು ಬಂದಿದ್ದರೆ ನಾನು ಇಷ್ಟು ಉತ್ತಮ ಕ್ರಿಕೆಟಿಗನಾಗುತ್ತಿರಲಿಲ್ಲ.
    ನನ್ನ ಜೀವನದ ಅತ್ಯಂತ ಸುಂದರವಾದ ಘಟನೆ ಎಂದರೆ 1990ರಲ್ಲಿ ನಾನು ಅಂಜಲಿಯನ್ನು ಭೇಟಿಯಾದದ್ದು. ಅವು ವಿಶೇಷ ವರ್ಷಗಳು ಮತ್ತು ಈಗಲೂ ಮುಂದುವರಿದಿವೆ ಮತ್ತು ಯಾವಾಗಲೂ ಇದೇ ರೀತಿ ಮುಂದುವರಿಯುತ್ತದೆ. ನನಗೆ ಗೊತ್ತಿದೆ.... ಓರ್ವ ವೈದ್ಯೆಯಾಗಿ ಅಂಜಲಿಯ ಎದುರು ಬಹು ದೊಡ್ಡ ವೃತ್ತಿಜೀವನವಿತ್ತು. ಆದರೆ, ನಮ್ಮ ಕುಟುಂಬಕ್ಕಾಗಿ ಅಂಜಲಿ ತನ್ನ ಕನಸಿನಿಂದ ಹಿಂದೆ ಸರಿದಳು. ‘ತಾನೇ ಕುಟುಂಬದ ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ನಾನು ನಿಶ್ಚಿಂತೆಯಿಂದ ಕ್ರಿಕೆಟ್ ಆಡುವಂತೆ ನೋಡಿಕೊಂಡಳು.’ ನನ್ನೆಲ್ಲಾ ಪೂರ್ವ ಮತ್ತು ಹತಾಶೆಗಳನ್ನು ಮತ್ತು ನಾನಾಡಿದ ಎಲ್ಲಾ ಅಸಂಬದ್ದ ಮಾತುಗಳನ್ನು ಸಹಿಸಿಕೊಂಡದ್ದಕ್ಕೆ ಧನ್ಯವಾದಗಳು. ಅಂಜಲಿ ನನ್ನೆಲ್ಲಾ ಏಳು ಬೀಳುಗಳಲ್ಲಿ ಹೆಗಲು ಕೊಟ್ಟಿದ್ದಾಳೆ. ನನ್ನ ಜೀವನದ ಅತ್ಯುತ್ತಮ ಜತೆಯಾಟ ನಿನ್ನೊಂದಿಗೆ ಬಂದಿದೆ.
    ನನ್ನ ಜೀವನದ ಎರಡು ಅಮೂಲ್ಯ ವಜ್ರಗಳು ನನ್ನ ಮಕ್ಕಳಾದ ಸಾರಾ ಮತ್ತು ಅರ್ಜುನ್. ಅವರು ಈಗಾಗಲೇ ಬೆಳೆದಿದ್ದಾರೆ. ನನ್ನ ಮಗಳಿಗೆ 16 ಮತ್ತು ಮಗನಿಗೆ 14 ವರ್ಷ. ನಾನು ಅವರ ಹುಟ್ಟುಹಬ್ಬ, ರಜಾದಿನಗಳು, ಶಾಲಾ ವಾರ್ಷಿಕೋತ್ಸವ, ಕ್ರೀಡಾದಿನಗಳಂತಹಾ ವಿಶೇಷ ಸಂದರ್ಭಗಳನ್ನು ತಪ್ಪಿಸಿಕೊಂಡಿದ್ದೇನೆ. ನನ್ನನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದಗಳು. ನೀವಿಬ್ಬರು ನನ್ನ ಪ್ಲಿಗೆ ಎಷ್ಟು ವಿಶೇಷವಾದವರೆಂದರೆ ಅದನ್ನು ವಿವರಿಸಲು ಪದಗಳಿಲ್ಲ. ನಾನು ಮುಂದಿನ 16 ವರ್ಷ ಅಥವಾ ಇನ್ನುಳಿದ ಸಮಯವನ್ನು ನಿಮಗಾಗಿ ಮೀಸಲಿಡುತ್ತೇನೆ.
    ನನ್ನ ಅತ್ತೆ-ಮಾವ ನನಗೆ ಸಾಕಷ್ಟು ಬೆಂಬ್ಲ, ಪ್ರೀತಿ ಕೊಟ್ಟಿದ್ದಾರೆ. ನಮಗೆ ಯಾವಾಗಲೂ ಬೆಂಬಲ ನೀಡುವ ಮತ್ತು ಮಾರ್ಗದರ್ಶನವನ್ನು ನೀಡುವ ಕುಟುಂಬವನ್ನು ಹೊಂದುವುದು ಪ್ರಮುಖವಾದುದು. ಅವರು ಮಾಡಿದ ಅತ್ಯಂತ ಪ್ರಮುಖ ಕೆಲಸವೆಂದರೆ ನನಗೆ ತಮ್ಮ ಮಗಳು ಅಂಜಲಿ ಜತೆ ಮದುವೆಯಾಗಲು ಅವಕಾಶ ನೀಡಿದ್ದು....! 
    ಕಳೆದ 24 ವರ್ಷಗಳಲ್ಲಿ ನಾನು ಭಾರತ ತಂಡದ ಪರ ಆಡುವಾಗ ಹಲವು ಹೊಸ ಗೆಳೆಯರನ್ನು ಸಂಪಾದಿಸಿದ್ದೇನೆ. ಆದರೆ ಅದಕ್ಕೆ ಮುನ್ನ ಬಾಲ್ಯದಿಂದಲೂ ನಾನು ಗೆಳೆಯರನ್ನು ಹೊಂದಿದ್ದೆ. ಅವರೆಲ್ಲರ ಕೊಡುಗೆ ಅಪಾರ. ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಕರೆದಾಗಲೆಲ್ಲಾ ಅವರು ತಮ್ಮ ಕೆಲಸವನ್ನು ಬದಿಗಿಟ್ಟು ಬಂದು ನನಗೆ ನೆರವಾಗಿದ್ದಾರೆ. ರಜಾದಿನಗಳನ್ನು ನನ್ನೊಂದಿಗೆ ಕಳೆದಿರುವುದು ಮಾತ್ರವಲ್ಲದೆ, ಕ್ರಿಕೆಟ್ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ನಾನು ಮಾನಸಿಕ ಒತ್ತಡಕ್ಕೊಳಗಾದಾಗ ಅಥವಾ ಉತ್ತಮ ನಿರ್ವಹಣೆಗಾಗಿ ವಿಶ್ಲೇಷಣೆ ಬಯಸಿದಾಗ ನನಗೆ ನೆರವಾಗಿದ್ದಾರೆ. ನಾನು ಗಾಯಗೊಂಡಿದ್ದ ದಿನಗಳಲ್ಲಿ ನನಗೆ ನಿದ್ದೆ ಬರುತ್ತಿರಲಿಲ್ಲ ಮತ್ತು ನನ್ನ ವೃತ್ತಿಜೀವನ ಮುಗಿದು ಹೋಯ್ತೆಂದು ಚಿಂತಿತನಾಗಿದ್ದೆ. ಆದರೆ ನನ್ನ ಗೆಳೆಯರು ಮುಂಜಾನೆ 3 ಗಂಟೆಗೂ ನನ್ನ ಜತೆ ಡ್ರೈವ್ ಗೆ ಬಂದು ನನ್ನ ವೃತ್ತಿಜೀವನ ಮುಗಿದಿಲ್ಲ ಎನ್ನುವ ಭರವಸೆಯ ಮಾತನ್ನಾಡುತ್ತಿದ್ದರು. ಆ ಗೆಳೆಯರ ಹೊರತಾಗಿ ನನ್ನ ಜೀವನ ಅಪೂರ್ಣ.
    ನನಗೆ 11 ವರ್ಷವಾಗಿದ್ದಾಗ ನನ್ನ ಕ್ರಿಕೆಟ್ ಜೀವನ ಆರಂಭವಾಯಿತು. ನನ್ನ ಅಣ್ಣ ಅಜ್ರೀಕರ್ ಸರ್ ಬಳಿಗೆ ಕರೆದೊಯ್ದದ್ದೇ ಜೀವನದ ಟರ್ನಿಂಗ್ ಪಾಯಿಂಟ್. ನಾನಿಲ್ಲಿ ಅವರನ್ನು ಸ್ಟ್ಯಾಂಡ್ ನಲ್ಲಿ ನೋಡಿ ಅಪಾರ ಖುಷಿಪಟ್ಟೆ. ಸಾಮಾನ್ಯವಾಗಿ ಅವರು ಟಿವಿ ಮುಂದೆ ಕುಳಿತು ನಾನಾಡುವ ಪಂದ್ಯಗಳನ್ನು ನೋಡುತ್ತಾರೆ. ನನಗೆ 11/12 ವರ್ಷವಾಗಿದ್ದ ಸಮಯದಲ್ಲಿ ಅವರ ಸ್ಕೂಟರ್ ಮೇಲೆ ಕುಳಿತು ಸವಾರಿ ನಡೆಸುತ್ತಿದ್ದೆ ಮತ್ತು ಒಂದೇ ದಿನದಲ್ಲಿ ಕೆಲ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದೆ. ಶಿವಾಜಿ ಪಾರ್ಕ್ ನಲ್ಲಿ ಒಂದು ಇನ್ನಿಂಗ್ಸ್ ನ ಅರ್ಧ ಭಾಗ ಆಡಿದರೆ, ಉಳಿದರ್ಧವನ್ನು ಆಜಾದ್ ಮೈದಾನದ ಮತ್ತೊಂದು ಪಂದ್ಯದಲ್ಲಾಡುತ್ತಿದ್ದೆ. ನನಗೆ ಮ್ಯಾಚ್ ಪ್ರ್ಯಾಕ್ಟೀಸ್ ಸಿಗಬೇಕೆಂದು ಅವರು ನನ್ನನ್ನು ಮುಂಬೈನೆಲ್ಲೆಡೆ ಕರೆದೊಯ್ಯುತ್ತಿದ್ದರು. ಇನ್ನು ತಮಾಷೆಯಾಗಿ ಹೇಳುವುದಿದ್ದರೆ ಕಳೆದ 29 ವರ್ಷಗಳಲ್ಲಿ ನಾನು ‘ಉತ್ತಮವಾಗಿ ಆಡಿದ್ದೇನೆ’ ಎಂದು ಸರ್ ಎಂದೂ ಹೇಳಿಲ್ಲ. ಏಕೆಂದರೆ ನನಗೆ ಸಂತೃಪ್ತಿಯ ಮೈಮರೆವಿನಿಂದ ಪರಿಶ್ರಮ ಪಡುವುದನ್ನು ಬಿಟ್ಟುಬಿಡಬಹುದು ಎಂಬುದು ಕಳವಳವಾಗಿತ್ತು. ಆದರೆ ಈಗಲಾದರೂ ಅವರು ನನ್ನನ್ನು ಹೊಗಳಬಹುದು. ಯಾಕೆಂದರೆ ನಾನು ಇನ್ನು ಯಾವುದೇ ಪಂದ್ಯ ಆಡುವುದಿಲ್ಲ. ನನ್ನ ಜೀವನದಲ್ಲಿ ನಿಮ್ಮ ಕೊಡುಗೆ ಅಪಾರ, ಹೀಗಾಗಿ ಧನ್ಯವಾದಗಳು.
    ಮುಂಬೈ ಪರ ನನ್ನ ಆಟ ಇದೇ ಕ್ರೀದಾಂಗಣದಲ್ಲಿ ಆರಂಭಗೊಂಡಿತು. ಮುಂಬೈ ಕ್ರಿಕೆಟ್ ಸಂಸ್ಥೆ ನನಗೆ ಆಪ್ತವಾದುದು. ಬೆಳಗಿನ ಜಾವ 4 ಗಂಟೆಗೆ ನ್ಯೂಜಿಲ್ಯಾಂಡಿನಿಂದ ಆಗಮಿಸಿದ ಬಳಿಕ 8 ಗಂಟೆಗೆ ಇಲ್ಲಿಗೆ ಪಂದ್ಯ ಆಡಲು ಬಂದ ದಿನ ನನಗೆ ನೆನಪಿದೆ. ನನ್ನನ್ನು ಆಗ ಆಡುವಂತೆ ಬಲವಂತ ಮಾಡಿರಲಿಲ್ಲ. ಬದಲಿಗೆ ಮುಂಬೈ ಕ್ರಿಕೆಟ್ ಮೇಲಿನ ಪ್ರೀತಿಯೇ ಕಾರಣವಾಗಿತ್ತು. ತಮ್ಮ ತಂಡದೊಂದಿಗೆ ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಮತ್ತು ನನ್ನ ಕ್ರಿಕೆಟ್ ಮೇಲೆ ಗಮನ ಹರಿಸಿದ್ದಕ್ಕಾಗಿ ಎಂಸಿಎ. ಅಧ್ಯಕ್ಷರಿಗೆ ಧನ್ಯವಾದಗಳು.
    ಭಾರತ ತಂಡ ಪ್ರತಿನಿಧಿಸುವುದೇ ಒಂದು ಕನಸಾಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ದಿನದಿಂದಲೇ ಬಿಸಿಸಿಐ. ಜತೆಗಿನ ಸಂಬಂಧ ವೃದ್ದಿಸಿತು. ನನ್ನ ಪ್ರತಿಭೆಗೆ ಸೂಕ್ತ ಬೆಂಬಲವೂ ಸಿಕ್ಕಿತು. 16ನೇ ವಯಸ್ಸಿನಲ್ಲಿರುವಾಗ ನನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿ ಅವಕಾಶ ಕಲ್ಪಿಸಿದ್ದು ನನ್ನ ವೃತ್ತಿಜೀವನದ ಪ್ರಮುಖ ಹೆಜ್ಜೆ. ಅಂದಿನಿಂದ ಈ ವರೆಗಿನ ಆಯ್ಕೆ ಸಮಿತಿಗಳ ಎಲ್ಲಾ ಸದಸ್ಯರಿಗೆ ಧನ್ಯವಾದ. ಬಿಸಿಸಿಐ. ಕೂಡ ಎಲ್ಲಾ ಸಂದರ್ಭಗಳಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ನೀಡಿದ್ದನ್ನು ಈ ಕ್ಷಣದಲ್ಲಿ ಸ್ಮರಿಸಿಕೊಳ್ಳುತ್ತೇನೆ. ನಾನು ಗಾಯಾಳುವಾದಾಗ ಚೇತರಿಸಿಕೊಳ್ಳಲು ನೆರವಾದ ಸಂದರ್ಭಗಳನ್ನು ಸ್ಮರಿಸಿಕೊಳ್ಳುತ್ತೇನೆ. ಸಹಕರಿಸಿದ ಎಲ್ಲರಿಗೂ ಕೃತಜ್ಞ.
    24 ವರ್ಷಗಳ ಸುದೀರ್ಘ ವೃತ್ತಿಜೀವನ ನನ್ನ ಪಾಲಿಗೆ ವಿಶೇಷ. ಈ ವೇಳೆಯಲ್ಲಿ ಅನೇಕ ಹಿರಿಯ ಕ್ರಿಕೆಟಿಗರ ಜತೆ ಆಡುವ್ ಅವಕಾಶ ನನಗೆ ಸಿಕ್ಕಿದೆ. ಅವರಿಂದ ಸ್ಪೂರ್ತಿಯನ್ನೂ ಪಡೆದುಕೊಂಡಿದ್ದೇನೆ. ಸನ್ಮಾರ್ಗದಲ್ಲಿ ಕ್ರಿಕೆಟ್ ಸಾಧನೆಗೆ ದಾರಿ ತೋರಿದವರಿಗೆ ಥ್ಯಾಂಕ್ಸ್. ರಾಹುಲ್, ಲಕ್ಷ್ಮಣ್, ಸೌರವ್ ಮತ್ತು ಅನಿಲ್ ಸೇರಿದಂತೆ ತಂಡದ ಸದಸ್ಯರೆಲ್ಲರೂ ನನ್ನ ಮನೆಯ ಸದಸ್ಯರಿದ್ದಂತೆ. ನಿಮ್ಮೊಂದಿಗೆ ಅನೇಕ ಮಧುರ ಕ್ಷಣಗಳನ್ನು ಕಳೆದಿದ್ದೇನೆ. ಡ್ರೆಸ್ಸಿಂಗ್ ರೂಮ್ ನಲ್ಲಿ ನಿಮ್ಮೊಂದಿಗೆ ಕಳೆದ ಕ್ಷಣಗಳನ್ನು ಎಂದೆಂದೂ ಮರೆಯಲಾರೆ. ಅನೇಕ ತರಬೇತುದಾರರಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇನೆ.
    ಧೋನಿಯವರಿಂದ ಟೆಸ್ಟ್ ಕ್ಯಾಪ್ ಪಡೆದುಕೊಂಡ ಕ್ಷಣದಲ್ಲೇ ತಂಡಕ್ಕೊಂದು ಸಂದೇಶ ನೀಡಿದ್ದೇನೆ. ಈಗಲೂ ಅದನ್ನೇ ಹೇಳಲಿಚ್ಚಿಸುತ್ತೇನೆ. ನಾವೆಲ್ಲರೂ ಭಾರತೀಯ ಕ್ರಿಕೆಟ್ ನ ಭಾಗವಷ್ಟೆ, ದೇಶಕ್ಕಾಗಿ ಎಲ್ಲರೂ ದುಡಿಯೋಣ. ತಂಡದ ಸದಸ್ಯರೆಲ್ಲರೂ ಸೇರಿ ದೇಶಕ್ಕಾಗಿ ಮೌಲ್ಯಗಳನ್ನು ಉಳಿಸಿಕೊಂಡು ಸನ್ಮಾರ್ಗದಲ್ಲಿ ಆಡುತ್ತಾರೆನ್ನುವ ಆತ್ಮವಿಶ್ವಾಸ ನನಗಿದೆ. ಉತ್ತಮ ಕ್ರಿಕೆಟ್ ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ. ಹಾಗೇ ಪ್ರತಿ ಕಾಲಘಟ್ಟದ ಯುವಕರ ಮೇಲೂ ಈ ಜವಾಬ್ದಾರಿ ಇದ್ದೇ ಇರುತ್ತದೆ. ನಿಮಗೆಲ್ಲ ಶುಭವಾಗಲಿ.
    ನನ್ನ ಫಿಟ್ ನೆಸ್ ಕಾಪಾಡಿಕೊಳ್ಲಲು ಸಹಕರಿಸಿದ ವೈದ್ಯರುಗಳಿಗೆ, ಫಿಸಿಯೋಗಳಿಗೆ, ಟ್ರೇನರ್ ಗಳಿಗೆ ಥ್ಯಾಂಕ್ಸ್. ನಿಮ್ಮ ವಿಶೇಷವಾದ ಸಹಕಾರವಿಲ್ಲದೆ ನನ್ನಿಂದ ಈ ಸಾಧನೆ ಮಾಡಲು ಸಾಧ್ಯವಗುತ್ತಿರಲಿಲ್ಲ.
    ಆತ್ಮೀಯ ಸ್ನೇಹಿತರೇ, ನನ್ನ ಮೊದಲ ಮ್ಯಾನೇಜರ್ ಮಾರ್ಕ್ ಮುಸ್ಯೆರೆನಾಸ್, ೨೦೦೧ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಅವರು ಕ್ರಿಕೆಟ್ ನ ಗ್ರೇಟ್ ವೆಲ್ ವಿಷರ್. ಅದರಲ್ಲೂ ಭಾರತೀಯ ಕ್ರಿಕೆಟ್ ಎಂದರೆ ಪಂಚಪ್ರಾಣವಾಗಿತ್ತು. ದೇಶಕ್ಕಾಗಿ ನಾನು ಯಾವ ಸಂದರ್ಭದಲ್ಲಿ ಹೇಗೆ ಆಡಬೇಕೆನ್ನುವುದನ್ನು ಬಹಳ ಸೂಕ್ಷ್ಮವಾಗಿ ವಿವರಿಸುತ್ತಿದ್ದರು. ನನ್ನಿಂದ ಯಾವ ಸಂದರ್ಭದಲ್ಲಿ ಯಾವ ಸಂದೇಶ ಹೋಗಬೇಕೆನ್ನುವುದನ್ನು ಸೊಗಸಾಗಿ ನನಗೆ ವಿವರಿಸುತ್ತಿದ್ದರು. ಇಂದು ನಾನವರನ್ನು ಕಳೆದುಕೊಂಡಿದ್ದೇನೆ. ಆದರೂ ನಾನವರನ್ನು ಸ್ಮರಿಸಿಕೊಳ್ಳುವುದು ನನ್ನ ಕರ್ತವ್ಯ. ಈಗ ನನ್ನ ಮ್ಯಾನೇಜರ್ ಡಬ್ಲ್ಯೂ.ಎಸ್.ಜಿ ಮಾರ್ಕ್ ಏನೆಲ್ಲಾ ಮಾಡುತ್ತಿದ್ದರೋ ಆ ಎಲ್ಲಾ ಕೆಲಸವನ್ನು ಈಗ ಇವರಿಂದ ಮಾಡಿಸಿಕೊಳ್ಳುತ್ತಿದ್ದೇನೆ. ಕಳೆದ ೧೪ ವರ್ಷಗಳಿಂದ ವಿನೋದ್ ನಾಯ್ಡು ನನ್ನ ಮ್ಯಾನೇಜರ್ ಆಗಿದ್ದಾರೆ. ನನ್ನ ಕುಟುಂಬಕ್ಕೂ ಹತ್ತಿರದ ವ್ಯಕ್ತಿ. ನನ್ನ ಕೆಲಸಕ್ಕಾಗಿ ಅವರ ಕುಟುಂಬದ ಅನೇಕ ಸಮಯವನ್ನು ವ್ಯಯಿಸಿದ್ದಾರೆ. ಅವರಿಗೂ ಥ್ಯಾಂಕ್ಸ್.
    ನನ್ನ ಶಾಲಾ ದಿನಗಳಿಂದ ನಾನು ಉತ್ತಮ ಪ್ರದರ್ಶನ ನೀಡಿದಾಗಲೆಲ್ಲಾ ಬೆನ್ನು ತಟ್ಟಿ, ಈ ಕ್ಷಣದವರೆಗೂ ಪ್ರೋತ್ಸಾಹಿಸುತ್ತ ಬಂದ ಮಾದ್ಯಮಗಳಿಗೂ ಥ್ಯಾಂಕ್ಸ್. ಇನ್ನು ನನ್ನೆಲ್ಲಾ ಆಟಗಳಿಗೆ ಸಾಕ್ಷಿಯಾದ ಎಲ್ಲಾ ಛಾಯಾಗ್ರಾಹಕರಿಗೂ ಥ್ಯಾಂಕ್ಸ್ ಸೋ ಮಚ್.
    ನನಗೆ ಗೊತ್ತು ಈ ಸಂದರ್ಭದಲ್ಲಿ ನನ್ನ ಭಾಷಣ ಬಹಳ ಸುದೀರ್ಘವಾಗುತ್ತಿದೆ ಎಂದು. ಆದರೆ ಕಡೆಯದಾಗಿ ಒಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ನಾನು 0 ರನ್ನಿಗೆ ಔಟಾದಗಲೂ ಸಹಿಸಿಕೊಂಡು,  100 ರನ್ ಮಾಡಿದಾಗ್ ಶ್ಲಾಘಿಸಿದ ನನ್ನೆಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಅಭಾರಿಯಾಗಿದ್ದೇನೆ. ನಿಮ್ಮ ಬೆಂಬಲವನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಬೆಂಬಲವೇ ಈ ಸಾಧನೆಗೆ ಪ್ರಮುಖ ಕಾರಣ. ನನ್ನ ಯಶಸ್ಸಿಗಾಗಿ ಅನೇಕರು ದೇವರಲ್ಲಿ ಪ್ರಾರ್ಥಿಸುತ್ತಾರೆ. ನನ್ನ ಪರ ಧ್ವನಿ ಎತ್ತುತ್ತಾರೆ. ನನ್ನ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುತ್ತಾರೆ. ನನ್ನ ಸಾಧನೆಯ ಹಿಂದೆ ಅವರೆಲ್ಲರ ಪಾತ್ರವಿದೆ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿಯಾಗಿದ್ದೇನೆ. ನೀವೆಲ್ಲರೂ ನನ್ನ ನೆನಪುಗಳಿಂದ ದೂರ ಉಳಿಯಲು ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ‘ಸಚಿನ್... ಸಚಿನ್...’ ಉದ್ಘಾರ ಉಸಿರಿರುವವರೆಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತದೆ.
    ಯಾರನ್ನಾದರೂ ಸ್ಮರಿಸಲು ಮರೆತಲ್ಲಿ ಕ್ಷಮಿಸಿ. ನನ್ನ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ
    ಎಲ್ಲರಿಗೂ ಧನ್ಯವಾದ. 

(ಆಧಾರ: ವಿಜಯವಾಣಿ ದಿನಪತ್ರಿಕೆ(17/11/13)

Friday, November 15, 2013

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -12

ಕೋಟೇಶ್ವರ(Koteshvar)
    ಕರ್ನಾಟಕ ಕರಾವಳಿಯಲ್ಲಿನ ಪ್ರಸಿದ್ದ ದೇವಾಲಯಗಳಲ್ಲಿ ಮಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಾಲಯವು ಪ್ರಮುಖವಾದುದು. (ಶ್ರೀ ಕ್ಷೇತ್ರ ಕೋಟೇಶ್ವರವು ಕರ್ನಾಟಕದ ಉಡುಪಿ ಜಿಲ್ಲೆಯ ತಾಲ್ಲೂಕು ಕೇಂದ್ರ ಕುಂದಾಪುರದಿಂದ ಸುಮಾರು ಐದು ಕಿಲೋಮೀಟರ್ ಅಂತರದಲ್ಲಿದೆ.)ಶ್ರೀ ಕ್ಷೇತ್ರವು ಹೆದ್ದಾರಿಯ ಪಕ್ಕದಲ್ಲಿಯೇ ಇದ್ದರೂ ಸಾಕಷ್ಟು ಪ್ರಶಾಂತ ವಾತಾವರಣವನ್ನು ಹೊಂದಿ ಭಕ್ತ ಜನರ ಮನಸ್ಸಿಗೆ ಶಾಂತಿಯನ್ನು ನೀಡಬಲ್ಲ ಪರಿಸರದಿಂದ ಕೂಡಿದೆ.  ಪರಶುರಾಮ ಕ್ಷೇತ್ರದಲ್ಲಿನ ಸಪ್ತ ಮೋಕ್ಷದಾಯಕ ಕ್ಶೇತ್ರಗಳಲ್ಲಿ ಒಂದೆನಿಸಿರುವ ಶ್ರೀ ಕ್ಷೇತ್ರ ಕೋಟೇಶ್ವರದಲ್ಲಿನ ಕೋಟಿಲಿಂಗೇಶನು ನಾನಾ ವಿಧದ ಕೋರಿಕೆಗಳೊಂದಿಗೆ ತನ್ನಲ್ಲಿಗೆ ಆಗಮಿಸುವ ಭಕ್ತಾದಿಗಳ ಕೋರಿಕೆಗಳಾನ್ನು ಅವರವರ ಇಚ್ಚಾನುಸಾರ ಅತಿ ಶೀಘ್ರದಲ್ಲಿ ಪೂರೈಸಬಲ್ಲವನಾಗಿದ್ದಾನೆ.
    ಕೋಟೇಶ್ವರ ಕ್ಷೇತ್ರವು ಅತ್ಯಂತ ಪ್ರಾಚೀನ ಶೈವಕ್ಷೇತ್ರವೆನಿಸಿದ್ದು ಯುಗ ಕಲ್ಪಗಳಿಂದಲೂ ಪರಮೇಶ್ವರನು ಇಲ್ಲಿ ನೆಲೆಸಿ ಭಕ್ತರಿಗೆ ಅಭಯವನ್ನು ನೀಡುತ್ತಾ ಬಂದಿರುವುದಕ್ಕೆ ನಮಗೆ ಸಾಕಷ್ಟು ಆಧಾರಗಳು ದೊರೆಯುತ್ತವೆ.
    ಪುರಾಣ ಕಾಲದಲ್ಲಿ ‘ಧ್ವಜಪುರ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕೋಟೇಶ್ವರ ಕ್ಷೇತ್ರವು ಐತಿಹಾಸಿಕ ದಾಖಲೆಗಳಲ್ಲಿ ‘ಕುಡಿಕೂರು’ ಎಂದು ಗುರುತಿಸಲ್ಪಟ್ಟಿರುತ್ತದೆ.
    ಯುಗಾಂತರಗಳ ಹಿಂದೊಮ್ಮೆ ಪುಷ್ಕರ ಕಲ್ಪದಲ್ಲಿ ಸೃಷ್ಟಿಕರ್ತನಾದ ಬ್ರಹ್ಮದೇವನು ‘ಜಗತ್ತಿನ ಸರ್ವ ಜೀವಿಗಳನ್ನು ಸೃಷ್ಟಿಸುವ ತಾನೇ ಸರ್ವಶ್ರೇಷ್ಠ’ ಎನ್ನುವುದಾಗಿ ಅಹಂಕಾರವನ್ನು ತಾಳಿದ್ದನು. ಅದಾಗ ಶಿವಗಣಗಳಲ್ಲಿ ಪ್ರಮುಖನಾದ ಷಣ್ಮುಖನೆನ್ನುವವನು ಬ್ರಹ್ಮದೇವರ ಬಳಿಸಾರಿ ಶಿವತತ್ವವನ್ನು ಉಪದೇಶಿಸಿದನು. ಅದಾಗ ಬ್ರಹ್ಮದೇವನು ಶಿವತತ್ವವನ್ನು ಮೆಚ್ಚಿಕೊಂಡು ತನ್ನ ಅಹಂಕಾರದ ವರ್ತನೆಗಾಗಿ ನಾಚಿದನಲ್ಲದೆ ತನ್ನ ವರ್ತನೆಯಿಂದಾದ ಪಾಪಕರ್ಮಕ್ಕೆ ಪ್ರಯಶ್ಚಿತ್ತವನ್ನು ಹೊಂದಲು ನಿರ್ಧರಿಸಿದನು. ಇದರ ಸಲುವಾಗಿ ಪರಮೇಶ್ವರನ ಅನುಗ್ರಹವನ್ನು ಹೊಂದಲು ಶಿವನ ಕುರಿತು ಘೋರ ತಪಸ್ಸಿನಲ್ಲಿ ತೊಡಗಿದನು. ಹೀಗೆ ಹಲವು ವರುಷಗಳ ಕಾಲದ ತಪಸ್ಸಿನ ನಂತರ ಪರಮೇಶ್ವರನು ಲಿಂಗರೂಪಿಯಾಗಿ ಕಾಣಿಸಿಕೊಂಡನು. ಹಾಗೆ ಲಿಂಗ ಸ್ವರೂಪಿಯಾದ ಪರಮೇಶ್ವರನಿಗೆ ಬ್ರಹ್ಮದೇವನು ತಾನು ಸಾಷ್ಟಾಂಗ ನಮಸ್ಕರಿಸಿ ಏಳುವ ಸಮಯದಲ್ಲಿ ತನ್ನೆದುರಿಗೆ ಕೋಟಿ ಲಿಂಗಗಳನ್ನು ಕಂಡು ಆಶ್ಚರ್ಯಚಕಿತನಾದನು. ಹೀಗೆ ಬ್ರಹ್ಮದೇವನಿಗೆ ಆಶೀರ್ವದಿಸಿದ ಪರಮೇಶ್ವರನು ಆ ಶಿವಲಿಂಗದಲ್ಲಿ ಐಕ್ಯನಾದನು.
    ದೇವಾಲಯದ ಗರ್ಭಗೃಹದಲ್ಲಿ ಸಣ್ಣದಾದ ಬಾವಿಯೊಂದು ಇದ್ದು ಆ ಬಾವಿಯೊಳಗೆ ಕೈಯ್ಯಾಡಿಸಿದ್ದಾದಲ್ಲಿ ಶಿವಲಿಂಗದ ತುದಿಗಳಂತಹಾ ರಚನೆಗಳನ್ನು ಸ್ಪರ್ಶಿಸಿದ ಅನುಭವವಾಗುತ್ತದೆ. ಆ ರಚನೆಗಳನ್ನು ಕೋಟಿಲಿಂಗಗಳೆಂದು ಗುರುತಿಸಲಾಗಿದೆ. ಇಂದು ಈ ಬಾವಿಯ ಮೇಲೆ ಪಾಣಿಪೀಠವನ್ನು ಸ್ಥಾಪಿಸಿ ಅದರ ಮೇಲೆ ಪರಮೇಶ್ವರನ ಕಂಚಿನ ಪ್ರತಿಮೆಯನ್ನಿಟ್ಟು ಪೂಜೆ ಮಾಡಿಕೊಂಡು ಬರಲಾಗುತ್ತಿದೆ.
    ದೇವಾಲಯದ ಉತ್ತರ ದಿಕ್ಕಿನಲ್ಲಿ ಸಾಕಷ್ಟು ದೊಡ್ಡದಾದ ಪುಷ್ಕರಿಣಿಯು ಇದ್ದು ಇದಕ್ಕೆ ಕೋಟಿ ತೀರ್ಥವೆಂದು ಕರೆಯಲಾಗುತ್ತದೆ. ಇದರಲ್ಲಿನ ಜಲವು ಬಹಳ ಪವಿತ್ರವಾದುದೆಂದು ಭಾವಿಸಲಾಗುತ್ತದೆ.

Tuesday, November 12, 2013

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -11

ಸಮಯಪುರ(Samayapuram)
    ಸಮಯಪುರ,ತಮಿಳು ನಾಡಿನಲ್ಲಿರುವ ಸುಪ್ರಸಿದ್ದ ಶಕ್ತಿಕೇಂದ್ರಗಳಲ್ಲಿ ಒಂದು. ತಮಿಳುನಾಡಿನ ತಿರುಚನಾಪಲ್ಲಿಯಿಂದ ಹದಿನಾರು ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರದಲ್ಲಿ ಶ್ರೀ ದೇವಿಯು ಅರುಲ್ಮಿಗು ಮಾರಿಯಮ್ಮನಾಗಿ ನೆಲೆಸಿದ್ದಾಳೆ.
    ಸ್ಥಳೀಯರು ಶ್ರೀ ಮಾರಿಯಮ್ಮನನ್ನು ಕಾಳಿಯ ಅವತಾರವೆಂದೇ ಭಾವಿಸುತ್ತಾರೆ. ಅಲ್ಲದೆ ಮಹಾಮಾಯಿ ಇಲ್ಲವೆ ಸೀತಾಲ ಗೌರಿ ಎಂಬ ಹೆಸರಿನಿಂದಲೂ ಸಂಬೋಧಿಸುತ್ತಾರೆ. ಒಟ್ಟಾರೆ ಶ್ರೀ ದೇವಿಯ ಸನ್ನಿಧಿಗೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ಮುಂದೆ ಮಂಡಿಯೂರಿ ತಮ್ಮ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಾರೆ.     


    ಸಮಯಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಅನುಸಾರ ಶ್ರೀ ದೇವಿಯು ವಿಜಯನಗರ ಸಾಮ್ರಾಜ್ಯವಿದ್ದ ಕಾಲದಲ್ಲಿ ನಾಡಿನ ಉತ್ತರ ಭಾಗದಲ್ಲಿ ನೆಲೆಸಿದ್ದವಳು ಸಾಮ್ರಾಜ್ಯವು ಪತನಗೊಂಡ ನಂತರ ದಕ್ಷಿಣದ ತಮಿಳುನಾಡಿಗೆ ಬಂದು ನೆಲೆಸಿದಳೆನ್ನಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ದಕ್ಷಿಣದಲ್ಲಿ ತಿರುಚನಾಪಲ್ಲಿಯು ವಿಜಯನಗರ ಕಾಲದಲ್ಲಿ ಸಾಮ್ರಾಟರ ದಕ್ಷಿಣ ಭಾಗದ ಪ್ರಮುಖ ಸಾಮಂತ ರಾಜ್ಯವಾಗಿತ್ತು.
     ಇನ್ನೊಂದು ಕಥೆಯಂತೆ ಶ್ರೀ ಮಾರಿಯಮ್ಮ ದೇವಿಯು ತಿರುಚನಾಪಲ್ಲಿಯ ಬಳಿಯ ಶ್ರೀರಂಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಳು. ಆದರೆ ಅಲ್ಲಿನ ಕೆಲ ಅರ್ಚಕರು ಈ ಶಕ್ತಿದೇವತೆಯು ಜನರಿಗೆ ಭಯವನ್ನು ಹುಟ್ಟಿಸುತ್ತಾಳೆ, ಕೆಡುಕುಂಟಾಗುವಂತೆ ಮಾಡುತ್ತಾಳೆಂದು ಭಾವಿಸಿ ಅಲ್ಲಿನ ಕೆಲ ಕಾರ್ಮಿಕರ ಮೂಲಕ ಮಾರಿಯಮ್ಮನ ಮೂರ್ತಿಯನ್ನು ಅಲ್ಲಿಂದ ತೆಗೆಸಿ ಹಾಕಿದರು. ಆಗ ಸ್ವತಃ ಶ್ರೀ ದೇವಿಯು ಆ ಕಾರ್ಮಿಕರಿಗೆ ದಕ್ಷಿಣ ಮುಖದ ದಾರಿಯನ್ನು ತೋರಿಸಿ ಅಲ್ಲಿಗೆ ಕರೆದೊಯ್ಯುವಂತೆ ಹೇಳಿಕೊಂಡಳು. ಅದರಂತೆ ಕಾರ್ಮಿಕರು ಆ ಮೂರ್ತಿಯ ಸಮೇತ ದಕ್ಷಿಣದತ್ತ ಹೊರಟು ಕಮ್ಮನೂರು ಎನ್ನುವ ಸ್ಥಳವನ್ನು ತಲುಪಿದಾಗ ಮೂರ್ತಿಯು ಆ ನೆಲದಲ್ಲಿ ಬೇರೂರಿ ನಿಂತಿತು. ಆಗ ಕಾರ್ಮಿಕರು ಆ ಮೂರ್ತಿಯನ್ನು ಅದೇ ಊರಿನ ದಾರಿಯ ಪಕ್ಕದಲ್ಲಿಯೇ ಬಿಟ್ಟು ಹೊರಟರು.  ಅದಾಗಿ ಕೆಲ ದಿನಗಳ ಬಳಿಕ ಕಮ್ಮನೂರಿನ ದಾರಿಯಲ್ಲಿ ಸಾಗುತ್ತಿದ್ದ ಕೆಲ ದಾರಿಹೋಕರ ಕಣ್ಣಿಗೆ ಆ ಸುಂದರ ಮೂರ್ತಿಯು ಕಾಣಿಸಿಕೊಂಡಿತು. ಆ ದಾರಿಹೋಕರು ಅದನ್ನು ತಮ್ಮ ಹಳ್ಳಿಯ ಮದ್ಯ ಭಾಗದಲ್ಲಿ ಪ್ರತಿಷ್ಠೆ ಮಾಡಿ ತಮ್ಮ ಸ್ಥಳೀಯ ಮಾರಿಯಮ್ಮನ ಸ್ವರೂಪವೆಂದು ಭಾವಿಸಿ ಪೂಜಿಸುತ್ತಾ ಬಂದರು.
    ಮುಂದೆ ಹಲವು ವರ್ಷಗಳಾದ ಬಳಿಕ ತ್ರೇತಾ ಯುಗದಲ್ಲಿ ಶ್ರೀ ರಾಮನ ತಂದೆಯಾದ ದಶರಥ ಮಹಾರಾಜನು ತಾನು ಈ ಪ್ರದೇಶಕ್ಕೆ ಬಂದು ದೇವಿಯನ್ನು ನಾನಾ ವಿಧದಲ್ಲಿ ಭಕ್ತಿಪೂರ್ವಕ ಅರ್ಚಿಸಿದ್ದನು.
    ಅಲ್ಲಿಂದೀಚೆಗೆ ದ್ವಾಪರ, ಕಲಿಯುಗಗಳಾದಿಯಾಗಿ ಇಂದಿನವರೆಗೂ ಲಕ್ಷಾಂತರ ಭಕ್ತರ ಸೇವೆಯನ್ನು ಪಡೆಯುತ್ತಾ ತಾನು ವರ ಬೇಡಿದ ವರಗಳನ್ನು ಪೂರೈಸುತ್ತ ಆಶೀರ್ವಾದಪೂರ್ವಕ ನೆಲೆಸಿದ್ದಾಳೆ. 

Sunday, November 03, 2013

ದೀಪಗಳ ಹಬ್ಬ : ಬಾಳ್ವೆಯನು ಬೆಳಗಲಿ ಬೆಳಕು

ದೀಪಗಳ ಹಬ್ಬ ಮತ್ತೆ ಬಂದಿದೆ. ನಾವು ನೀವೆಲ್ಲ ಅದಕ್ಕಾಗಿ ಸಡಗರ ಸಂಭ್ರಮಗಳಿಂದ ಅಣಿಯಾಗಿದ್ದೇವೆ. ಆದರೆ ಯಾವುದೇ ಹಬ್ಬದ ಆಚರಣೆಯ ಹಿಂದಿರುವ ಅರ್ಥವನ್ನು ಅರಿತು ಆಚರಿಸುವುದಲ್ಲಿ ಅದರದೇ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ಆಚರಣೆಯ ಉದ್ದೇಶ, ಅದರ ಹಿಂದಿರುವ ಪರಂಪರೆಗಳನ್ನು ತಿಳಿಯುವ ಸಣ್ಣ ಪ್ರಯತ್ನವಿದು. ಬನ್ನಿ ಅರಿವಿನ ದೀವಿಗೆಯ ಬೆಳಗೋಣ….

    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ಕನ್ನಡ ರಾಜ್ಯೋತ್ಸವ ಹಾಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
    ``ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ
     ಮೃತ್ಯೋರ್ಮಾ ಅಮೃತಂಗಮಯ, ಓಂ ಶಾಂತಿ, ಶಾಂತಿ, ಶಾಂತಿಃ’’
     "ದೀಪಯತಿ ಸ್ವಂ ಪರ  ಇತಿ ದೀಪ:"
    ದೀಪಗಳ ಹಬ್ಬ ಮತ್ತೆ ಬಂದಿದೆ. ನಾವು ನೀವೆಲ್ಲ ಅದಕ್ಕಾಗಿ ಸಡಗರ ಸಂಭ್ರಮಗಳಿಂದ ಅಣಿಯಾಗಿದ್ದೇವೆ. ಮನೆಯಲ್ಲಿ ಅಮ್ಮ ತಮಗಾಗಿ ಸಾಕಷ್ಟು ಸಿಹಿ ಕಜ್ಜಾಯ, ತಿಂಡಿಗಳನ್ನು ತಯಾರಿಸುತ್ತಾಳೆ. ನಾವೆಲ್ಲಾ ಬೆಳೆಗ್ಗೆ ಎದ್ದು ಶುಭ್ರವಾಗಿ ಹೊಸ ಬಟ್ಟೆಗಳಾನ್ನು ತೊಟ್ಟು ಸಂಭ್ರಮಿಸುತೇವೆ. ಸಂಜೆಯಾಯಿತೆಂದರೆ ಮನೆಮುಂದೆ ಹಣತೆಗಳಾನ್ನು ಹಚ್ಚಿ, ಪಟಾಕಿಯನ್ನು ಸಿಡಿಸಿ ಹಬ್ಬವನ್ನು ಸಡಗರದಿಂದ ಆಚರಿಸುತ್ತೇವೆ.
    ಸ್ನೇಹಿತರೆ, ದೀಪಾವಳಿ ಎಂದರೆ ಇಷ್ಟೇ ಅಲ್ಲ. ಇದರ ಆಚರಣೆಯ ಹಿಂದೆ ಅದರದೇ ಆದ ಮಹತ್ವವಿದೆ. ಬನ್ನಿ ಹಾಗಾದರೆ ದೀಪಾವಳಿ ಎಂದರೆ ಏನು? ಅದರ ಆಚರಣೆಯ ಹಿಂದಿರುವ ವಿಶೇಷವೇನು ಎನ್ನುವುದನ್ನು ಸ್ಥೂಲವಾಗಿ ತಿಳಿದುಕೊಳ್ಳಲು ಪ್ರಯತ್ನಿಸೋಣ.
    ದೀಪಗಳ ಹಬ್ಬ, ದೀಪಾವಳಿ ಹಿಂದೂಗಳ ಹಬ್ಬಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿರುವ ಹಬ್ಬ. ಅಜ್ಞಾನದ ತಿಮಿರನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗುವುದೇ ಈ ದೀಪಾವಳಿ. ಕತ್ತಲೆಯಿಂದ ಬೆಳಕಿನಡೆಗೆ ನಡೆಸುವುದೇ ದೀಪಕ್ಕಿರುವ ಶಕ್ತಿ. ನಮ್ಮ ಹಿರಿಯರು ದೀಪಕ್ಕೆ ಬಹಳಷ್ಟು ಅರ್ಥವನ್ನು ಕಂಡುಕೊಂಡಿದ್ದಾರೆ. ಅದರ ಪ್ರಕಾರ ಮನೆಯನ್ನು ಬೆಳಗಲು ಐದು ಬಗೆಯ ದೀಪಗಳು ಅಗತ್ಯ. ಅವುಗಳೆಂದರೆ, ದೇವರ ಎದುರಿನ ನಂದಾದೀಪ, ಮನೆಯ ಯಜಮಾನನಲ್ಲಿನ ದಕ್ಷತೆ, ಮನೆಯ ಗೃಹಿಣಿಯಲ್ಲಿನ ಪ್ರಸನ್ನತೆ, ಮನೆಯಲ್ಲಿ ಆಟವಾಡಿ ನಲಿಯುತ್ತಿರುವ ಮಕ್ಕಳು ಹಾಗೂ ಮನೆಗೆ ಆಗಮಿಸಿದ ಅತಿಥಿ ಅಭ್ಯಾಗತರ ಸಂತೋಷ. ಇದರಲ್ಲಿ ಯಾವೊಂದು ಅಂಶವಿಲ್ಲದಿದ್ದರೂ ಆ ಮನೆ ಮತ್ತು ಮನೆಯಲ್ಲಿನ ಮನಸ್ಸುಗಳು ಮಸುಕಾಗುತ್ತವೆ.
     ಶ್ರೀರಾಮಚಂದ್ರನು ತಾನು ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂತಿರುಗಿದಾಗ ಅಲ್ಲಿನ ಪ್ರಜೆಗಳು ತಾವು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಊರಿನ ಬೀದಿಗಳನ್ನು ಸುಗಂಧಿತದ್ರವ್ಯಗಳಿಂದ ಯುಕ್ತವನ್ನಾಗಿಸಿ ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ.
ದೀಪಾವಳಿಯನ್ನು ಒಟ್ಟು ನಾಲ್ಕು ದಿನಗಳ ಕಾಲ ಆಚರೊಸಲಾಗುತ್ತದೆ. ಅದೆಂದರೆ, ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ)

    ಧನತ್ರಯೋದಶಿಯಂದು ಚಿನ್ನವನ್ನು ಖರೀದಿಸುವುದರಿಂದ ವರ್ಷವಿಡೀ ಮನೆಯಲ್ಲಿ ಲಕ್ಷ್ಮಿಯು ನೆಲೆಯಾಗುತ್ತಾಳೆ. ವ್ಯವಹಾರಸ್ಥರು ಲಕ್ಷ್ಮಿ ಪೂಜೆಯಂದು ಆಯಾ ವರ್ಷದ ಜಮಾ ಖರ್ಚಿನ ಲೆಖ್ಖವನ್ನು ನೋಡುವುದಿರುತ್ತದೆ. ಹಾಗೆ ಧನತ್ರಯೋದಶಿಯವರೆಗಿನ ಲೆಖ್ಖವನ್ನು ನೋಡಿ ಉಳಿದ ಸಂಪತ್ತನ್ನು ಸತ್ಕಾರ್ಯಗಳಿಗೆ ಬಳಸುವುದರಿಂದ ಲಕ್ಷ್ಮಿಯ ಶಾಶ್ವತ ಕಟಾಕ್ಷವು ಪ್ರಾಪ್ತವಾಗುವುವು. 
    ನರಕ ಚತುರ್ದಶಿಯಂದು ಶ್ರೀ ಕೃಷ್ಣನು ಅಸುರೀ ಶಕ್ತಿಯ ಸಂಕೇತವಾದ ನರಕಾಸುರನನ್ನು ವಧಿಸಿದನು. ಇದೇ ಕಾರಣದಿಂದ ಆ ದಿನವನ್ನು ‘ನರಕ ಚತುರ್ದಶಿ’ ಎನ್ನಲಾಗುತ್ತದೆ. ಯಾವಾಗ ಸಜ್ಜನಶಕ್ತಿಯು ಜಾಗೃತಗೊಂಡು ಸಂಘಟಿತವಾಗಿ ಕಾರ್ಯ ಮಾಡುತ್ತದೆಯೋ ಆಗ ದುರ್ಜನ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿಯ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ. ಇದುವೇ ನರಕ ಚತುರ್ದಶಿಯ ಸಂದೇಶ.
    ಚತುರ್ದಶಿಯಂದು ಮಾಡುವ ತೈಲಾಭ್ಯಂಜನ ಸ್ನಾನಕ್ಕೂ ಅದರದೇ ಆದ ಮಹತ್ವವಿದೆ. ಅಂದು ತೈಲದಲ್ಲಿ ಲಕ್ಷ್ಮಿ ದೇವಿಯೂ ನೀರಿನಲ್ಲಿ ಗಂಗಾಮಾತೆಯೂ ವಿಶೇಷವಗಿ ಸನ್ನಿಹಿತರಾಗುತ್ತರೆ. ಅಂದು ಬೆಳೆಗ್ಗೆ ಅಭ್ಯಂಗ ಸ್ನಾನವನ್ನು ಮಾಡುವುದರಿಂದ ಪ್ರತಿಯೊಬ್ಬರೂ ಶ್ರೀಲಕ್ಷ್ಮಿ ಹಾಗೂ ಗಂಗಾಮಾತೆಯ ಕೃಪೆಗೆ ಪಾತ್ರರಾಗಬಹುದು.
    ದೀಪಾವಳಿಯ ಅಮಾವಾಸ್ಯೆಯಂದು ಲಕ್ಶ್ಮಿಪೂಜೆಯನ್ನು ಮಾಡುವುದು ವಿಶೇಷ. ಹಿಂದೂ ಶಾಸ್ತ್ರಗಳ ಅನುಸಾರ ನಚಿಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವಿದು. ಅಂತೆಯೇ ಶ್ರೀ ಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ ಹೇಳಲಾಗುತ್ತದೆ. ಅಮಾವಾಸ್ಯೆಯೂ ಸಹ ಶುಭಸೂಚಕವೆನ್ನುವ ಸಂದೇಶ ಇದರ ಹಿಂದಿದ್ದಂತಿದೆ. ಅಮಾವಾಸ್ಯೆಯಂದು ಹೊರಗೆಲ್ಲಾ ಸಂಪೂರ್ಣ ಕತ್ತಲಾವರಿಸಿರುತ್ತದೆ. ಇದರಿಂದ ದೀಪಗಳ ಹೊಳಪು ಎಲ್ಲೆಲ್ಲೂ ಶೋಭಿಸುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳ ಫಸಲು ಮನೆಗೆ ಬಂದಿರುತ್ತದೆ. ರೈತರ ಕುಟುಂಬಗಳಲ್ಲಿ ಆನಂದ ಮನೆಮಾಡಿರುತ್ತದೆ. ಜನರ ಪರಿಶ್ರಮಕ್ಕೆ ತಕ್ಕ ಫಲ ಶ್ರೀದೇವರ ಕೃಪೆಯಿಂದ ಸಿಕ್ಕಿರುವುದಲ್ಲದೆ ಈ ಧವಸ ಧಾನ್ಯಗಳೇ ನಿಜವಾಗಿಯೂ ಲಕ್ಷ್ಮಿಸ್ವರೂಪವಾಗಿದೆ.
    ದೀಪಾವಳಿಯಂದು ಆಕಾಶ ಬುಟ್ಟಿಯನ್ನು ಮಾಡಿ ಅದರಲ್ಲಿ ದೀಪವಿಟ್ಟು ಆಕಾಶಕ್ಕೆ ಹಾರಿ ಬಿಡುವುದರಿಂದ ಹಿರಿಯರ ಆತ್ಮಗಳಿಗೆ ಶಾಂತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. 
    ಬಲಿಪಾಡ್ಯಮಿಯಂದು ಗೋಪೂಜೆ ಮಾಡುವುದು ಹಿಂದಿನಿಂದ ಬಂದಿರುವ ಪದ್ದತಿಯಾಗಿದ್ದು ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅದರದೇ ಆದ ಮಹತ್ವವಿದೆ. ಗೋವನ್ನು ‘ಗೋಮಾತೆ’ ಎಂದು ಸಂಬೋಧಿಸಲಾಗುತ್ತದೆ. ಶ್ರೀ ಕೃಷ್ಣನಿಗೆ ಪ್ರಿಯವಾದ ಈ ಗೋಮಾತೆಯಲ್ಲಿ ಸಕಲ ದೇವತೆಗಳೂ ನೆಲೆಸಿದ್ದಾರೆ. ತನ್ನ ಹಾಲಿನಿಂದ ಜನ ಮಾನಸವನ್ನು ಪೋಷಿಸುವ ಗೋವು ತಾನು ಕೃಷಿಗಾಗಿ ಗೊಬ್ಬರ ಹಾಗೂ ಕೃಷಿಗೆ ಉಪಯುಕ್ತವಾಗುವ ಎತ್ತುಗಳಿಗೆ ಜನ್ಮನೀಡುತ್ತದೆ. ಹೀಗೆ ನಮಗಾಗಿ ತನ್ನ ಇಡೀ ಜೀವಮಾನವನ್ನು ತ್ಯಾಗ ಮಾಡುವ ಗೋವನ್ನು ಪೂಜಿಸುವುದರ ಮೂಲಕ ಆಕಳ ಬಗ್ಗೆ ನಮಗಿರುವ ಗೌರವವನ್ನು ತೋರ್ಪಡಿಸಲು ನಮ್ಮ ಹಿರಿಯರು ಈ ದಿನವನ್ನು ಮೀಸಲಿರಿಸಿದ್ದಾರೆ.
    ಇನ್ನು ಬಲಿಪಾಡ್ಯಮಿಯ ದಿನ, ಅದು ಬಲಿಚಕ್ರವರ್ತಿಯ ಜನ್ಮೋದ್ದಾರವಾದ ದಿನ. ಈ ದಿನ ಶ್ರೀ ಮಹಾವಿಷ್ಣುವು ವಾಮನ ಅವತಾರವನ್ನೆತ್ತಿ ಬಲಿಚಕ್ರವರ್ತಿಯಿಂದ ಆತನ ಸರ್ವಸ್ವವನ್ನು ದಾನವಾಗಿ ಪಡೆದ ದಿನ. ವಾಸ್ತವದಲ್ಲಿ ಬಲಿಯು ಒಬ್ಬ ಅಸುರ ಕುಲದವನಾಗಿದ್ದಾನೆ. ಆದರೆ ಅವನು ಉದಾರ ಮನಸ್ಸಿನಿಂದ ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿ ಅವನನ್ನು ಉದ್ಧರಿಸಿದನು. ಪ್ರತಿಯೊಬ್ಬ ಮಾನವನೂ ಪ್ರಾರಂಭದಲ್ಲಿ ಅಜ್ಞಾನಿಯಾಗಿರುತ್ತಾನೆ. ಆದರೆ ಜ್ಞಾನ ಹಾಗೂ ದೈವೀ ಕೃಪೆಯಿಂದ ದೇವತ್ವಕ್ಕೇರಲು ಪ್ರಯೊಂದು ಆತ್ಮಕ್ಕೂ ಸಾಧ್ಯವೆನ್ನುವುದನ್ನು ನಾವು ಬಲಿಚಕ್ರವರ್ತಿಯ ಕಥೆಯಿಂದ ತಿಳಿಯಬಹುದಾದ ಸಂಗತಿ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮವೆತ್ತಿದರೂ ಅವನ ಪುಣ್ಯದಿಂದಾಗಿ ವಾಮನ ರೂಪದಲ್ಲಿ ಅವತರಿಸಿದ ಭಗವಂತನ ಕೃಪೆಯು ಅವನ ಮೇಲಾಯಿತು. ಅವನು ಸಾತ್ತ್ವಿಕ ಪ್ರವೃತ್ತಿಯುಳ್ಳ ದಾನಿಯಾಗಿದ್ದನು ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಸತ್ಯಮಾರ್ಗವನ್ನು ಬಿಡದೆ ಸಾಧಿಸಿದರೆ ಅಂತಹವರಿಗೆ ದೈವೀ ಕೃಪೆ ಸಿಕ್ಕಿಯೇ ಸಿಗುತ್ತದೆ, ಅಷ್ಟೆ ಅಲ್ಲ ಸಾವು ಸಹ ಅಂತಹವರಿಂದ ದೂರ ಓಡುತ್ತದೆ ಎನ್ನುವುದು ಬಲಿಚಕ್ರವರ್ತಿಯ ಜೀವನ ನಮಗೆ ತಿಳಿಸಿಕೊಡುವ ಪಾಠವಾಗಿದೆ.
    ಇಷ್ಟೇ ಅಲ್ಲದೆ ಆಶ್ವಯುಜ ಶುಕ್ಲ ಬಿದಿಗೆಯಂದು ‘ಯಮ ದ್ವಿತೀಯಾ’ ಅಥವಾ ಎಂದು ಆಚರಿಸಲಾಗುತ್ತದೆ. ಅಂದು ಯಮರಾಜನು ತನ್ನ ತಂಗಿ ಯಮಿಯ ಬಳಿ ತೆರಳಿ ಅವಳಿಗೆ ಶುಭ ಕೋರಿದ್ದ ದಿನವಾಗಿದೆ. ಅಂದು ಎಲ್ಲಾ ಅಣ್ಣಂದಿರೂ ತಮ್ಮ ತ್ಂಗಿಯರ ಮನೆಗೆ ಹೋಗಿ ಅಲ್ಲಿ ತಂಗಿಯ ಕೈಯ್ಯ ಸಿಹಿ ಅಡುಗೆಯನ್ನುಂಡು ಬರುವುದು ಪದ್ದತಿ.

ಜನಪದ ದೀವಳಿಗೆ:
    ದೀಪಾವಳಿ, ಇದು ಕೇವಲ ಹಣವಂತರ, ಹಬ್ಬವಲ್ಲ. ಬದಲಾಗಿ ಇದಕ್ಕೆ ಜನಪದ ದೀವಳಿಗೆಯ ಸ್ವರೂಪವೂ ಇದೆ. ಹಳ್ಲಿಗಾಡಿನ ಜನರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿಯೂ ಮಲೆನಾಡಿನ ಜನರು ಐದು ದಿನದ ಈ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ದೀಪಾವಳಿಯ ಈ ಸಮಯದಲ್ಲಿ ಆಚರಿಸಲ್ಪಡುವ ಅಂಟಿಗೆ ಪಿಂಟಿಗೆ, ಬುರೆ ಹಬ್ಬಗಳು ಮಲೆನಾಡಿನ ಪ್ರಮುಖ ವೈಶಿಷ್ಟ್ಯಪೂರ್ಣ ಆಚರಣೆಯಾಗಿದೆ.
    ಮಲೆನಾಡಿನವರಲ್ಲಿ ಆಚರಣೆಯಲ್ಲಿರುವ ಅಂಟಿಗೆ ಪಿಂಟಿಗೆಗೆ ಅದರದೇ ಆದ ಹಿನ್ನೆಲೆ ಇದೆ. ದೀಪಾವಳಿಯ ಸಮಯದಲ್ಲಿ ಊರಿನ ಕೆಲ ಯುವಕರು ಗುಂಪಾಗಿ ಹಬ್ಬಕ್ಕೆ ಕೆಲದಿನಗಳ ಮೊದಲೇ ತಮ್ಮಲ್ಲಿನ ಜನಪದ ಕಲೆಯ ಪ್ರದರ್ಶನಕ್ಕೆ ಸಜ್ಜಾಗುತ್ತಾರೆ. ಅದಕ್ಕಾಗಿ ಸಾಕಷ್ಟು ಅಭ್ಯಾಸದಲ್ಲಿ ತೊಡಗುವ ಯುವಕರು ದೀಪಗಳ ಹಬ್ಬದ ಹಿಂದಿನ ದಿನ ಅಂಟಿಗೆ ಪಿಂಟಿಗೆಯ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಹೀಗೆ ಒಮ್ಮೆ ಬೆಳಗಿದ ಜ್ಯೋತಿಯು ಮತ್ತೆ ಆರಿಹೋಗುವಂತಿಲ್ಲ. ತಂಡದ ಸದಸ್ಯರುಗಳು ಆ ಜ್ಯೋತಿಗೆ ಸದಾ ತೈಲವನ್ನು ಹಾಕುತ್ತಾ ಜ್ಯೋತಿಯು ಆರಿಹೋಗದಂತೆ ಕಾಪಾಡಿಕೊಳ್ಳಬೇಕೆನ್ನುವುದು ಅಂಟಿಗೆ ಪಿಂಟಿಗೆಯ ಪ್ರಮುಖ ನಿಯಮಗಳಲ್ಲಿ ಒಂದು. ತದನಂತರ ತಂಡದ ನಾಯಕನಾದವನು ಊರಲ್ಲಿನ ಮನೆ ಮನೆಗೂ ಭೇಟಿ ನೀಡಿ ಸುದ್ದಿ ಮುಟ್ಟಿಸಿ ಬರುತ್ತಾನೆ.ಆ ಬಳಿಕ ಸುಮಾರು ಎಂಟರಿಂದ ಹತ್ತು ಮಂದಿಯ ತಂಡ ಅಂಟಿಗೆ ಪಿಂಟಿಗೆ ಪದಗಳನ್ನು ಹೇಳಿಕೊಳ್ಳುತ್ತಾ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಇವರಿಗೆ ಆಯಾ ಮನೆಯ ಯಜಮಾನರು ತಾವು ಹೊಸ ಬಟ್ಟೆಯನ್ನೋ ಇಲ್ಲವೆ ತಮ್ಮ ಶ್ಕ್ತಿಗನುಸಾರವಾಗಿ ಧಾನ್ಯವನ್ನೋ ನೀಡಿ ಸತ್ಕರಿಸಬೇಕು.
    ದೀಪಾವಳಿಯ ಸಮಯದಲ್ಲಿ ನೀರು ತುಂಬುವ ದಿನದಂದು ಮಲೆನಾಡಿನ ಹಳ್ಳಿಯ ಜನರಾರೂ ರಾತ್ರಿ ಮಲಗಲಾರರು. ಇದಕ್ಕೆ ಕಾರಣವೆಂದರೆ ಅಂದು ಊರಿನ ಕೆಲ ಯುವಕರು ಗುಂಪು ಗುಂಪಾಗಿ ಹಳ್ಳಿಗರ ತೋಟಕ್ಕೆ ಕನ್ನ ಹಾಕುತ್ತಾರೆ. ತೋಟಗಳಲ್ಲಿ ಬೆಳೆದ ಹಣ್ಣು- ತರಕಾರಿಗಳನ್ನು ಕದ್ದು ತರುತ್ತಾರೆ. ಹೀಗೆ ಕದ್ದು ತರುವಾಗ ಸಮಯವಶಾತ್ ಸಿಕ್ಕಿ ಬಿದ್ದರೂ ಯಜಮಾನನು ಅವರಿಗೆ ಬೈಯ್ಯುವಂತಿಲ್ಲ, ಅದು ಆ ದಿನದ ನಿಯಮ! ಹೀಗೆ ಕಳ್ಳತನ ಮಾಡಿ ತಂದ ತರಕಾರಿ, ಹಣ್ಣುಗಳನ್ನು ಭೂಮಿ ಹುಣ್ಣಿಮೆಯಂದು ಭೂಮಿತಾಯಿಗೆ ನೈವೇದ್ಯಕ್ಕಾಗಿ ಮಾಡುವ ಅಡುಗೆಗಳಲ್ಲಿ ಬಳಸಲಾಗುತ್ತದೆ.
    ಇನ್ನು ಜನಪದರ ಪ್ರಕಾರ ದೀಪಾವಳಿ ಹಬ್ಬ ಆಚರಣೆಗೆ ಬರಲು ಕಾರಣವೆಂದು ಹೇಳಲಾಗುವ ವಿಶಿಷ್ಟ ಕಥೆಯೊಂದು ಹೀಗಿದೆ- ‘
    ಒಂದೂರಿನಲ್ಲಿ ಒಬ್ಬರಾಜನಿದ್ದನು. ಅವನಿಗೆ ಎರಡು ಹೆಣ್ಣು ಮಕ್ಕಳಿದ್ದರು. ರಾಜ್ಯವು ಸಮೃದ್ದಿಯಿಂದ ಕೂಡಿದ್ದ ಪ್ರಜೆಗಳೆಲ್ಲಾ ಸುಖ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಹೀಗಿರಲು ಒಮ್ಮೆ ರಾಜನು ತನ್ನೆರಡೂ ಮಕ್ಕಳನ್ನು ಕರೆದು ‘ತನ್ನ ರಾಜ್ಯದ ಸುಭಿಕ್ಷವಾಗಿರಲು ಕಾರಣವನ್ನು ತಿಳಿಸಿ’ ಎನ್ನಲು ಹಿರಿಯ ಮಗಳು ‘ಇದಕ್ಕೆಲ್ಲಾ ನಿನ್ನ ಆಡಳಿತವೇ ಕಾರಣ’ ಎನ್ನುತ್ತಾಳೆ. ಆದರೆ ಕಿರಿಯಳಾದ ದೀಪಾ ಮಾತ್ರವೆ ‘ಇದಕ್ಕೆಲ್ಲಾ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಕೃಪಾಕಟಾಕ್ಷವು ಕಾರಣ’ ಎಂದು ಹೇಳುವಳು. ಇದನ್ನು ಕೇಳಿದ ರಾಜನಿಗೆ ಕೋಪವುಕ್ಕಿ ಕಿರಿ ಮಗಳನ್ನು ರಾಜ್ಯದಿಂದಲೇ ಹೊರಹಾಕುತ್ತಾನೆ.
    ಹೀಗೆ ದೀಪಾ ಗಡಿಪಾರಾದ ಮೇಲೆ ರಾಜ್ಯದಲ್ಲೆಲ್ಲಾ ಕ್ಷಾಮವು ತಲೆದೋರುತ್ತದೆ. ಜನರು ಆಹಾರವಿಲ್ಲದೆ ಕಂಗಾಲಾಗುತ್ತಾರೆ. ಬಡತನವು ತಾಂಡವವಾಡುತ್ತದೆ. ಹೀಗಿರಲು ದೀಪಾಳಿಗೆ ತಾಯಿ ಶ್ರೀಲಕ್ಷ್ಮಿಯು ತಾನು ಪ್ರತ್ಯಕ್ಷವಾಗಿ ‘ನೀನು ನಿನ್ನ ತಂದೆಯ ಬಳಿ ಮರಳಿದೆಯಾದರೆ ನಿಮ್ಮ ರಾಜ್ಯವು ಪುನಃ ಸಂಋದ್ದಿಯನ್ನು ಕಾಣುತ್ತದೆ’ ಎಂದು ಅನುಗ್ರಹಿಸುತ್ತಾಳೆ. ಅದರಂತೆ ದೀಪಾಳು ತನ್ನ ತಂದೆಯ ಬಳಿ ಹಿಂತಿರುಗಿದಾಗ ರಾಜ್ಯದಲ್ಲಿ ಮತ್ತೆ ಮಳೆ-ಬೆಳೆಗಳು ಸಮೃದ್ದವಾಗಿ ಆಗುತ್ತದೆ. ಜನರೆಲ್ಲರೂ ದೀಪಾಳ ಪುನರಾಗಮನವೇ ಇದಕ್ಕೆಲ್ಲಾ ಕಾರಣವೆಂದರಿತು ಅವಳ ಹೆಸರಿನಲ್ಲಿ ‘ದೀಪಾವಳಿ’ ಎನ್ನುವ ಹಬ್ಬವನ್ನಾಚರಿಸಿದರು. ಅಂದಿನಿಂದ ದೀಪಾವಳಿ ಆಚರಣೆಗೆ ಬಂದಿತು ಎನ್ನುವ ಪ್ರತೀತಿ ಜನಪದರಲ್ಲಿದೆ.
     ಸ್ನೇಹಿತರೆ, ಹೀಗೆ ನಮ್ಮ ಪರಂಪರೆಯಲ್ಲಿ ದೀಪಾವಳಿಯ ಪ್ರತಿ ದಿನಕ್ಕೂ ಅದರದೇ ಆದ ಮಹತ್ವವಿದೆ. ನಮ್ಮ ಹಿರಿಯರು, ಜನಪದರು ಪರಂಪರೆಯಿಂದ ಆ ಮಹತ್ವವನ್ನರಿತು ಹಬ್ಬವನ್ನಾಚರಿಸಿಕೊಂಡು ಬಂದಿದ್ದಾರೆ. ಇಂದು ನಾವು ಕೂಡ ನಮ್ಮ ಆಚರಣೆಯ ಹಿಂದಿರುವ ಅರ್ಥವನ್ನು ಅರಿತುಕೊಳ್ಳುವುದರ ಮುಖೇನ ಹಬ್ಬವನ್ನು ಅರ್ಥವತ್ತಾಗಿ ಆಚರಿಸೋಣ.
    ಬನ್ನಿ, ಹಣತೆಯನ್ನು ಬೆಳಗೋಣ
    ಅಂತರಂಗದ ಕತ್ತಲನು ತೊಡೆಯೋಣ
    ಜಗದ ತುಂಬೆಲ್ಲ ಜ್ಞಾನದ ದೀವಿಗೆಯನ್ನು ಹಚ್ಚೋಣ
    ನಮಸ್ಕಾರ.