Sunday, July 27, 2014

ಎಲ್ಲಾ ಅನಿಷ್ಟಗಳಿಗೂ ಶನೀಶ್ಚರ ಕಾರಣನಲ್ಲ!

ಮೊನ್ನೆ ತಾನೇ ಕೋಲಾರದಲ್ಲಿ ನಡೆದ ಘಟನೆ.
ಆ ಮನೆಯಲ್ಲಿನ ಎರಡರಿಂದ ಎರಡೂವರೆ ವರ್ಷಗಳಿರಬಹುದಾದ ಹೆಣ್ಣು ಮಗುವೊಂದು ಜೋರಾಗಿ ಅಳುತ್ತಲಿತ್ತು. ಮಗುವಿನ ತಾಯಿ ಒಳಗೆಲ್ಲೋ ಇದ್ದವಳು ಬಂದು ನೋಡಿದಾಗ ಮಗುವಿನ ಮೈಮೇಲೆಲ್ಲಾ ಉಗುರಿನಿಂದ ಪರಚಿದಂತೆ ಗಾಯಗಳಾಗಿದ್ದವು. ಆ ತಾಯಿಗೆ ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಯಿತು. ಮಗುವನ್ನು ಕೇಳಿದಳು.. “ಕಂದಾ ಏನಾಯ್ತು, ಯಾಕೆ ಅಳ್ತಾ ಇದ್ದೀಯಾ?”

ಮಗು ಮುಗ್ದತೆಯ ದನಿಯಲ್ಲಿ ಹೇಳಿತು, “ಅಮ್ಮಾ... ಅಣ್ಣ ಅಬ್ಬು ಮಾಡಿದ!”



ನಮ್ಮ ಸಾಮಾಜಿಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ದೂರದ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಗಳಂತಹಾ ಘಟನೆಗಳು ಇಂದು ದಿನನಿತ್ಯವೂ ನಮ್ಮ ರಾಜ್ಯದಲ್ಲಿಯೂ ನಡೆಯುತ್ತಿರುವುದು ಖಂಡಿತವಾಗಿಯೂ ಸುಸಂಸ್ಕೃತಿಗೆ ಹೆಸರಾದ ಕನ್ನಡಿಗರಿಗೆ ಶೋಭಿಸುವ ವಿಚಾರವಲ್ಲ.

ಇಷ್ಟಕ್ಕೂ ನಮ್ಮ ಯುವಜನತೆಯಲ್ಲಿ ಇಂತಹಾ ಕ್ರೌರ್ಯವು ಮೂಡುವಂತಾಗಲು ಮೂಲ ಪ್ರೇರಣೆ ಏನು? ಇಂದಿನ ಕುಟುಂಬದಲ್ಲಿಯೂ, ಮಾದ್ಯಮದಲ್ಲಿಯೂ, ಶಾಲಾ ಪರಿಸರದಲ್ಲಿಯೂ ಗಂಡಸಿಗೆ ಯಾವ ಬಗೆಯ ನೈತಿಕತೆಯ ಸಂದೇಶ ರವಾನಿಸಲಾಗುತ್ತಿದೆ? ಅತ್ಯಾಚಾರ ಪ್ರಕರಣಗಳು ವರದಿಯಾದಾಗ ಮೊದಲಿಗೆ ಎಲ್ಲರ ದೃಷ್ಟಿ ಬೀಳುವುದೂಸಹ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮೇಲೆ. ಅದಾಕ್ಷಣದಲ್ಲಿ ಅವಳ ಮೇಲೆ ಅನುಕಂಪ, ಕರುಣೆಗಳು ತಾನಾಗಿ ಉಕ್ಕಿ ಹರಿಯುತ್ತದೆ. ಅದೇನೋ ಸರಿಯಾದುದೆ, ಆದರೆ ಇದರ ಫಲಿತವು ಮಾತ್ರ ಶೂನ್ಯ. ಕಾರಣವೇನೆಂದರೆ ಜನರು ಅದಾವುದನ್ನೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ! ಜನರ ಮನಸ್ಸು ಹೃದಯ ಅಷ್ಟೊಂದು ಕಠಿಣವಾಗಿದೆ, ಅಥವಾ ಅವರಿಗೆ ಅದರ ಬಗೆಗೆ ಚಿಂತಿಸಿ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಷ್ಟು ಸಮಯವಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಸಮೂಹ ಮಾದ್ಯಮಗಳು ಅವರನ್ನು ಆ ಮನಸ್ಥಿತಿಗೆ ತಂದು ನಿಲ್ಲಿಸಿವೆ!

ಸಮೂಹ ಮಾದ್ಯಮಗಳಲ್ಲಿ ಎಲ್ಲೆಡೆಯೂ ಹೆಣ್ಣಿನ ಅಂಗಾಂಗಗಳ ಪ್ರದರ್ಶನದ ವಿಜೃಂಭಿಸುವಿಕೆಯನ್ನೂ, ಗಂಡುಗಳ ಅನಾಗರಿಕ ಹಾಗೂ ಒರಟುತನವೇ ಅವನ ಪೌರುಷದ ಸಂಕೇತವೆಂಬಂತೆ ತೋರಿಸಲಾಗುತ್ತದೆ. ಇವುಗಳ ಮದ್ಯೆ ಮಾನವರಲ್ಲಿನ ನೈತಿಕ ಮೌಲ್ಯಗಳು ಅದಃಪತನದತ್ತ ಸಾಗುತ್ತಿರುವುದು ಯಾರ ಗಮನಕ್ಕೂ ಬರುವುದಿಲ್ಲ.

ಇನ್ನು ಅತ್ಯಾಚಾರಿಗಳೆಂದ ತಕ್ಷಣವೇ ಅವರೆಲ್ಲರೂ ರಾಕ್ಷಸರು, ಕಾಮ ಪಿಶಾಚಿಗಳು ಎನ್ನುವಂತೆ ಬಿಂಬಿಸಲಾಗುತ್ತದೆ. ಆದರೆ ನಿಜವಾದ ವಸ್ತುಸ್ಥಿತಿಯು ಹಾಗಿರುವುದಿಲ್ಲ. ಅವರೆಲ್ಲರಿಗೂ ಲೈಂಗಿಕತೆಯೇ ಪರಮ ಗುರಿಯಾಗಿರಲಾರದು. ಅವುಗಳಿಗೆ ಬೇರೆ ಬೇರೆ ಕಾರಣಗಳೂ ಇರಬಹುದು. ಮುಖ್ಯವಾಗಿ ಅಂತಹವರಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುವ ಮಹತ್ವಾಕಾಂಕ್ಷೆಯು ಬಲವಾಗಿರುತ್ತದೆ. ಅಲ್ಲದೆ ಬಹುತೇಕರು ತಮ್ಮ ಬಾಲ್ಯ ಜೀವನದಲ್ಲಿ ತಮ್ಮ ತಾಯಿ ಇಲವೇ ಅನ್ಯ ಹೆಣ್ಣೋರ್ವಳಿಂದ ಅತಿಯಾದ ನೋವನ್ನನುಭವಿಸಿರುತ್ತಾರೆ. ಅದರಿಂದಾಗಿ ಅವರಲ್ಲಿ ಮಹಿಳಾ ವರ್ಗದ ಮೇಲೆಯೇ ಸೇಡು ತೀರಿಸಿಕೊಳ್ಳುವ ಹಂಬಲ ಬಲವತ್ತಾಗಿರುತ್ತದೆ. ತಮ್ಮ ಸ್ನೇಹಿತರ ಪ್ರಚೋದನೆಯಿಂದಲೂ, ತಮ್ಮಲ್ಲಿನ ಅಧಿಕಾರದ ಬಲದಿಂದಲೂ, ಅತ್ಯಾಚಾರಿಗಳಾದವರೂ ಅನೇಕರಿರುತ್ತಾರೆ. ಅವರುಗಳೊಂದಿಗೇ ತಾವು ಅಪರಾಧವನ್ನೇ ಮಾಡಿದರೂ ಯಾವುದೇ ಕಠಿಣ್ ಶಿಕ್ಷೆ ಆಗುವುದಿಲ್ಲ. ನ್ಯಾಯಾಲಯ, ಕಾನೂನಿನ ಕಡಿವಾಣಗಳಿಂದ ಅತ್ಯಂತ ಸುಲಭವಾಗಿ ತಪ್ಪಿಸಿಕೊಳ್ಲುವುದು ಸಾಧ್ಯವಿದೆ ಎನ್ನುವ ತರ್ಕ ಯುವಜನತೆಯಲ್ಲಿ ಬಲವಾಗಿ ಬೆಳೆದಿರುವುದು ಇಂದಿನ ಈ ಸ್ಥಿತಿಗೆ ಮೂಲ ಕಾರಣವೆನ್ನಬೇಕು.

ಇದಲ್ಲದೆ ಇಂದಿನ ದಿನಗಳಲ್ಲಿ ಮನೆ, ಕುಟುಂಬಗಳಲ್ಲಿ ನೈತಿಕತೆಯ ವಾತಾವರಣವು ಕಾಣದಿರುವುದು, ಓದಿನಲ್ಲಿ ಹಿಂದುಳಿದ ಪರಿಣಾಮದಿಂದ ಮನೆ ಹಾಗೂ ಶಾಲೆಯಲ್ಲಿ ತಿರಸ್ಕಾರಕ್ಕೆ ಒಳಗಾಗುವ ಮೂಲಕವೋ, ಬದುಕಿನ ಕುರಿತ ಸ್ಪಷ್ಟ ಆಲೋಚನೆ, ಗುರಿಗಳಿಲ್ಲದ ಸನ್ನಿವೇಶಗಳಲ್ಲಿಯೋ ಅತ್ಯಾಚಾರವೆಸಗುವ ಮನೋಭವನೆ ತಾನೇ ತಾನಾಗಿ ಬೆಳೆಯಲು ಅವಕಾಶಗಳಿವೆ. ಸಿನಿಮಾ, ಕಿರುತೆರೆಗಳಲ್ಲಿನ ಕಾರ್ಯಕ್ರಮಗಳಿಂದ ಪ್ರಬಾವಕ್ಕೊಳಗಾಗಿಯೋ, ಪ್ರೀತಿಯೆನ್ನುವ ಆಕರ್ಷಣೆಗೆ ಬಿದ್ದು ಹುಡುಗಿಯನ್ನು ಕೇಳಿದಾಗ ಆ ಹುಡುಗಿ ಅದಕ್ಕೊಪ್ಪದೇ ಹೋದ ಸಮಯದಲ್ಲಿ ಅವಳನ್ನು ಹೇಗಾದರೂ ಒಪ್ಪಿಸಿ ತನ್ನವಳನ್ನಾಗಿಸಿಕೊಳ್ಳುವ ಹುಚ್ಚು ಕೋಡಿಯ ಮನಸಿನ ಬೆನ್ನೇರಿದಾಗಲೂ ಸಹ ಇಂತಹಾ ಘಟನೆಗಳು ಸಂಭವಿಸುತ್ತವೆ. ಮನಃಶಾಸ್ತ್ರದ ಅನುಸಾರವಾಗಿ ಮಾನವನು ಇತರೆ ಪ್ರಾಣಿಗಳಂತಿರದೆ ತನ್ನ ಮೂಲಭೂತ ಅಗತ್ಯಗಳಾದ ಹಸಿವು, ನೀರಡಿಕೆ, ನಿದ್ರೆ ಹಾಗೂ ಮೈಥುನಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಒಂದು ಶಿಸ್ತುಬದ್ದವಾದ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾನೆ ಅದೇ ‘ನಾಗರಿಕತೆ’. ಈ ಬಗೆಯ ನಾಗರಿಕತೆಯನ್ನು ಮಕ್ಕಳಿಗೆ ಅವರು ಬೆಳೆಯುತ್ತಿರುವಾಗಲೇ ಕುಟುಂಬ, ಸಮಾಜ ಮತ್ತು ಅವರ ಸುತ್ತಲಿನ ಪರಿಸರವು ಕಲಿಸಬೇಕಾಗುತ್ತದೆ. ಆದರೆ ಇಂದು ಆ ಕೆಲಸವು ಆಗುತ್ತಲಿಲ್ಲ. ಬದಲಿಗೆ ಮಾನವನನ್ನು ಕೇವಲ ಹಣಗಳಿಕೆಯೇ ಮುಖ್ಯ ಉದ್ದೇಶವೆಂದೂ, ಐಷಾರಾಮಿ ಜೀವನ ನಡೆಸುವುದೇ ದ್ಯೇಯವೆಂದೂ ಅನಂಬುವಂತೆ ಮಾಡಲಾಗುತ್ತಿದೆ. ಇದರಿಂದಾಗಿಯೇ ಸಮಾಜದಲ್ಲಿನ ನಿಜವಾದ ಮೌಲ್ಯಗಳು ಕಣ್ಮರೆಯಾಗಿ ಕ್ರೌರ್ಯವೊಂದೇ ವಿಜೃಂಭಿಸುತ್ತಿದೆ.

ಇದೆಲ್ಲಾ ಕೊನೆಗಾಣಬೇಕಾದರೆ ಮೊದಲು ನಾವು ಸರಿಯಾಗಬೇಕು. ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು. ಎಲ್ಲವಕ್ಕೂ ಪೋಲೀಸ್ ಹಗೂ ಸರ್ಕಾರದತ್ತ ಬೊಟ್ಟು ಮಾಡಿ ಸುಮ್ಮನೇ ಕೂರುವ ನಮ್ಮ ಮನಸ್ಥಿತಿ ಬದಲಾಗಬೇಕು. ಕೇವಲ ಕಾನೂನು, ನೀತಿ ನಿಯಮಗಳಿಂದ ಏನೂ ಬದಲಾವಣೆ ಸಾಧ್ಯವಿಲ್ಲ. ಮಾಲ್, ಬಾರ್, ಪಬ್ ಗಳ ಸಮಯ ಬದಲಿಸಿದ ಮಾತ್ರಕ್ಕೆ ಎಲ್ಲವೂ ಸರಿ ಹೋಗುವುದೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಮೌಲ್ಯಾಧಾರಿತ ನೈತಿಕ ಶಿಕ್ಷಣ ಜಾರಿಗೆ ಬರಬೇಕು. ಮಹಿಳೆಯರ ಕುರಿತು ಗೌರವ, ಭಯ ಭಕ್ತಿಯೊಂದಿಗೆ ಆರಾಧನಾ ಭಾವವಿದ್ದ ಪರಂಪರೆ ನಮ್ಮದು. ಇಂದು ಪುನಃ ಅಂತಹಾ ಭವನೆ ಮೂಡಿಸುವ ಪ್ರಯತ್ನಗಳಾಗಬೇಕು. ಇದಕ್ಕಾಗಿ ಮಹಿಳೆಯರೂ ಸಹ ಬದಲಾಗಬೇಕು. ಮಹಿಳೆ ಇಂದಿನ ಆಧುನಿಕ ಜೀವನ ಶೈಲಿಯನ್ನು ರೂಡಿಸಿಕೊಂಡಿದ್ದರಲ್ಲಿ ಅದೇನೂ ತಪ್ಪಲ್ಲ. ಆದರೆ ತಮ್ಮ ನಡತೆ, ಮಾತುಗಳಲ್ಲಿ ಪರರ ಮನಸ್ಸಿನಲ್ಲಿ ತಮ್ಮ ಕುರಿತಂತೆ ಗೌರವ ಭವನೆ ಮೂಡುವಂತೆ ವರ್ತಿಸಬೇಕಿದೆ. ತಾನು ಪುರುಷನಿಗೆ ಸರಿ ಸಮಾನಳು ಎನ್ನುವ ಹುಮ್ಮಸ್ಸಿನಲ್ಲಿ ಧೂಮಪಾನ, ಮದ್ಯಪಾನಗಳು, ಮಾದಕ ವ್ಯಸನಗಳ್ ಚಟಕ್ಕೆ ಬಲಿ ಬೀಳದೆ ತನ್ನ ಪರಿಮಿತಿ ಹಾಗೂ ಬದುಕಿನ ನೈಜ ಉದ್ದೇಶವನ್ನು ಅರಿತುಕೊಳ್ಳಬೇಕು. ಸಮಾಜದಲ್ಲಿ ಪುರುಷ ಹಾಗೂ ಮಹಿಳೆಯರಿಬ್ಬರೂ ಪರಸ್ಪರವಾಗಿ ತಮ್ಮ ದೃಷ್ಟಿಕೋನಗಳನ್ನು ಬದಲಾಯಿಸಿಕೊಳ್ಳಬೇಕು, ಸುಧಾರಿಸಿಕೊಳ್ಳಬೇಕು. ಹೀಗಾದಾಗ ಮತ್ತೆ ಮತ್ತೆ ಇಂತಹಾ ಅತ್ಯಾಚಾರ ಪ್ರಕರಣಗಳು ಸಂಭವಿಸಲಾರವು, ಪುನರಾವರ್ತನೆಗೊಳ್ಳಲಾರವು.

ಇನ್ನು ನಮ್ಮ ಕಾನೂನು , ಪೋಲೀಸ್ ವ್ಯವಸ್ಥೆ ಕೂಡಾ ಬದಲಾಗಬೇಕಿದೆ. ಅತ್ಯಾಚಾರಿಗಳಿಗೆ ಕೇವಲ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದಕ್ಕೆ ಬದಲಾಗಿ ಕಠಿಣವ್ದ ದಂಡನೆಯಾಗಬೇಕು. ಅಪರಾಧಿಗಳು ತಾವು ಯಾವುದೇ ಕಾರಣಕ್ಕೂ ನ್ಯಾಯಾಲಯದ ಶಿಕ್ಷೆಯ್ಂದ ತಪ್ಪಿಸಿಕೊಳ್ಳಲು ಅವಕಾಶಗಳನ್ನು ನೀಡಬಾರದು. ಪ್ರಾಚೀನ ಭರತದಲ್ಲಿ ಸಮಾಜ ಘಾತುಕ ಕೆಲಸ ಮಾಡಿದವರಿಗಾಗಿ ‘ಬಹಿಷ್ಖಾರ’ ಎನ್ನುವ ಘೋರ ಶಿಕ್ಷೆ ಕಾದಿರುತ್ತಿತ್ತು. ಅಂತಹಾ ವ್ಯಕ್ತಿಗೆ ಊರಿನವರಾಗಲೀ ಪರ ಊರಿನವರಾಗಲಿ ಅನ್ಮ ಆಹಾರಗಳನ್ನು ನೀಡುತ್ತಿರಲಿಲ್ಲ. ಬರಬರುತ್ತಾ ಅದು ಜಾತಿ ವಿಜಾತಿಗಳ ವಿಚಾರದಲ್ಲಿ ಅದು ದುರ್ಬಳಕೆಯಾಗತೊಡಗಿದ ಪರಿಣಾಮ ಬ್ರಿಟೀಷರು ಆ ಕಾನೂನನ್ನು ಕೊನೆಗೊಳಿಸಿದರು. ಇದೀಗ ಅತ್ಯಾಚಾರಿಗಳಿಗೂ ಅಂತಹುಏ ಕಠಿಣ ಶಿಕ್ಷೆ ಒದಗಿದಾಗ ಯಾರೊಬ್ಬರೂ ಅಂತಹಾ ಕೃತ್ಯಗಳಿಗಿಳಿಯಲಾರರೇನೋ? ಒಟ್ತಾರೆಯಾಗಿ ಭಾರತದಲ್ಲಿ ಕಾನೂನು ವ್ಯವಸ್ಥೆ ಬಲಗೊಳ್ಳಬೇಕು. ಸುಸ್ಥಿರವಾದ ಬಲವಾದ ಕಾನೂನುಗಳು ಜಾರಿಯಾದಲ್ಲಿ ಖಂಡಿತವಾಗಿಯೂ ಇಂತಹಾ ಅಪರಾಧ ಪ್ರಕರಣಗಳನ್ನು ತಡೆಗಟ್ತಬಹುದು. ಈ ಬಗೆಯ ಸುಧಾರಣೆಗಾಗಿ ನಮ್ಮಯ ಸರ್ಕಾರಗಳು ನೈತಿಕ ಸ್ಥೈರ್ಯವನ್ನು ಪ್ರದರ್ಶಿಸಬೇಕು.


ಅಂತಿಮವಾಗಿ ಹೇಳುವುದೆಂದರೆ ‘ಎಲ್ಲಾ ಅನಿಷ್ಟಗಳಿಗೂ ಶನೀಶ್ಚರನೇ ಕಾರಣ’ ಎಂದು ಸುಮ್ಮನಾಗದೆ ಬದಲಾವಣೆಯು ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಇಂದಿನಿಂದಲೇ ನಾವೆಲ್ಲರೂ ಅದಕ್ಕಾಗಿ ಕಟಿಬದ್ದರಾದೆವಾದರೆ ಶಿಸ್ತುಬದ್ದ, ಸುಸಂಸ್ಕೃತ ಸಮಾಜ ಕಟ್ಟುವುದೇನೂ ಕಷ್ಟದ ವಿಚಾರವಲ್ಲ. ಅದೆಲ್ಲವನ್ನೂ ಬಿಟ್ಟು ಇದೇನು ಮಹಾ ಎಂದು ವಾರ್ತಾ ವಾಹಿನಿಗಳಲ್ಲಿ ಬರುವ ಅತ್ಯಾಚಾರ ವಿಚಾರದ ವರದಿಗಳನ್ನು ನೋಡುತ್ತಾ ಕುಳಿತೆವೆಂದರೆ ನಾಳೆ ನಮ್ಮಗಳ ಮನೆಯಲ್ಲಿಯೂ ಒಬ್ಬೊಬ್ಬ ಕೀಚಕನ ಉದಯವಾಗುತ್ತದೆ, ಎಚ್ಚರ!

(ನನ್ನ ಈ ಲೇಖನವು ಜುಲೈ 23 ರಂದು ‘ನಿಲುಮೆ’ ಯಲ್ಲಿಯೂ ಪ್ರಕಟವಾಗಿದ್ದು ಉತ್ತಮ ಪ್ರತಿಕ್ರಿಯೆಗಳು ದೊರೆತಿದೆ. ಅಂತೆಯೇ ‘ಸಂಪದ’ ಹಾಗೂ ‘ಸ್ವಸ್ಥಿ’ ಗಳಲ್ಲಿಯೂ ಪ್ರಕಟವಾಗಿ ಮೆಚ್ಚುಗೆ ಗಳಿಸಿರುತ್ತದೆ. ಕೊಂಡಿಗಳಿಗಾಗಿ ನನ್ನ ಫೇಸ್ ಬುಕ್ ಖಾತೆ (https://www.facebook.com/raghavendra.adiga.9) ಯನ್ನು ಪರಿಶೀಲಿಸಿರಿ... ) 

Monday, July 21, 2014

ಸರಸಮ್ಮನ ಸಮಾಧಿ: ‘ಸಮಾಧಿ’ಯಾಗಬಾರದ ಸತ್ಯದ ಕಥೆ

‘ನಾನೂ ಅಲ್ಲಿಗೇ ಹೋಗುವುದಾಯಿತೆ?’ ಎಂದು ಜಾನಕಿ ತೀರಾ ನಿಟ್ಟುಸಿರು ಬಿಡುವುದಾಯಿತು. ಅವಳ ಹ್ಣೆ ಬೆವರಿತ್ತು. ಸೆಕೆ ದಿವಸವೇನಲ್ಲ, ಅವಳಿಗಷ್ಟೊಂದು ಗಾಬರಿಯೂ ಆಗಿರಲಿಲ್ಲ. ಆದರೂ ಜಾನಕಿ, ನೆರೆಮನೆ ಸೀತಕ್ಕನೊಡನೆ ಮಾತನಾಡುತ್ತಾ ಕುಳಿತಿದ್ದವಳು ಹಣೆಯ ಬೆವರನ್ನು ಸವರಿಕೊಳ್ಳಬೇಕಾಯಿತು. ಕೈ ನೋಡುತ್ತಾಳೆ, ಬೆರಳುಗಳಿಗೆ ಕುಂಕುಮದ ನೀರು ಕರಗಿ ರಕ್ತದಂತೆ ಅಂಟಿಕೊಂಡಿತ್ತು. ಅದನ್ನು ಕಂಡು ಸೀತಕ್ಕನೊಡನೆ, “ಸೀತಕ್ಕ... ಇಲ್ಲಿ ನೋಡು ನನ್ನ ಕೈಬೆರಳನ್ನು..” ಎಂದಳು. ಒಮ್ಮಿಂದೊಮ್ಮೆಗೆ ‘ರಕ್ತ!’ ಎಂದು ಸೀತಕ್ಕ ಹೇಳುವ ಮೊದಲೇನೆ ಜಾನಕಿ “ರಕ್ತ ಅಲ್ಲ. ರಕ್ತದ ಹಾಗೆ...... ಇದೆಯಷ್ಟೆ. ಹಣೆ ಬೆವರಿ ಕುಂಕುಮವನ್ನು ತೇಲಿಸಿತು ನೋಡು ನಾನು ಬೆವರು ಉಜ್ಜಿಕೊಂಡೆನಲ್ಲ, ಈಗ ಅದೇ ರಕ್ತದ ಹಾಗೆ ಬೆರಳಿಗೆ ಅಂಟಿತು. ಸೀತಕ್ಕ ಏನು ರಕ್ತ, ಏನು ಬೆವರು! ಏನು ಕುಂಕುಮ! ನೋಡೆ, ಈ ಮನೆಯಲ್ಲಿ ಇಷ್ಟು ವರ್ಷಗಳ್ ನಾನು ಕಳೆದದ್ದು ಅಂತೀಯಾ. ಅದು ಹೀಗೆ ರಕ್ತ ಸೇರಿಸಿದ್ದು ಅಂತಿಟ್ಟುಕೊ! ಐದು ಮಕ್ಕಳನ್ನು ಹಡೆದ ಹೊಟ್ಟೆ ಇದು. ವರ್ಷ ಮೂವ್ವತ್ತೈದು ಮೀರಿತು. ಈ ಕುಂಕುಮದ ಗತಿ, ಇದು ಇದ್ದರೂ ಅಷ್ಟೆ.. ಇಲ್ಲದಿದ್ದ್ರೂ ಅಷ್ಟೆ ಅಂಬ ಹಾಗೆ.” ಎಂದು ಮಾತುಗಳನ್ನು ನಿಲ್ಲಿಸಿ, ಮೋರೆ ತಗ್ಗಿಸಿ ಬೆಅಳಿಗೆ ಅಂಟಿದ ಕುಂಕುಮದ ನೀರನ್ನೇ ಕಾಣುತ್ತಿದ್ದಳು. ಇಷ್ಟರ ತನಲ ಹಣೆ ಬೆವತಿದ್ದರೆ, ಈಗ ಕಣ್ಣುಗಳು 
ನೀರನ್ನು ಹನಿಯುವ ಹಾಗಾಯಿತು.
Sarasammana Samadhi  by Dr. Shivarama Karantha - Cover Page


ಸೀತಕ್ಕನಿಗೆ ಇದೊಂದು ಹೊಸ ಚಿತ್ರವಲ್ಲ. ಸೀತಕ್ಕ ಸ್ವತಃ ಕಣ್ಣೀರು ಸಾವಿರ ಸಾರಿ ಕರೆದವಳು. “ಕಣ್ಣೀರೆಂಬುದು ಹೆಂಗಸರ ಹಣೆಬರಹ.” ಎಂದು ಅವಳಾ ಒಂದು ಕಾಲದಲ್ಲಿ ಬದುಕಿದ್ದ ಗಂಡ ಹೇಳುತ್ತಿದ್ದರೂ ಸೀತಕ್ಕನ ಕಣ್ಣೀರು ಬೇರೆ ಕಡಿಮೆಯಾಗಿರಲಿಲ್ಲ. ಈಗ ಅವಳು ಕುಂಕುಮದ ಋಣವಿಲ್ಲದವಳು. ಆದರೂ ನೆಂತರ ಕಾಟ, ಬಡತನದ ಹಿಂಸೆ ಎಂದು ಕಣ್ಣೀರಿನ ಸ್ನಾನ ತಪ್ಪುತ್ತಿರಲಿಲ್ಲ. ಹೀಗೆ ತನಗೆ ಗಂಗಾ ಭಾಗೀರತಿ ತಪ್ಪದಿದ್ದರೂ ಬೇರೆಯವರು ಗೋಳುಗೆರೆಯುವುದನ್ನು ಕಂದರೆ ಸೀತಕ್ಕನಿಗೆ ಆಗದು. ಅದರಲ್ಲೂ ಅವಳ ಜೀವದ ಜಾನಕಿ ಅಳುವುದೆಂದರೆ ಅವಳ ಅಕ್ಕನೋ, ತಂಗಿಯೋ ಅತ್ತಂತೆ.......
***
ಇವು ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯ ಮೊದಲ ಪುಟದ ಸಾಲುಗಳು.
ಡಾ. ಕೆ. ಶಿವರಾಮ ಕಾರಂತರು ಕನ್ನಡದ ಮಹೋನ್ನತ ಸಾಹಿತಿಗಳು, ಕಾದಂಬರಿಕಾರರು. ಇವರ ‘ಮೂಕಜ್ಜಿಯ ಕನಸುಗಳು’, ‘ಮೈಮನಗಳ ಸುಳಿಯಲ್ಲಿ’, ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’ ಇವೇ ಮೊದಲಾದ ಕಾದಂಬರಿಗಳು ಬಹು ಪ್ರಸಿದ್ದವೂ, ಕನ್ನಡದ ಮೇರು ಕೃತಿಗಳು ಎನಿಸಿವೆ. ಇದೇ ಕಾರಂತರು ತಾವು ನಲವತ್ತರ ದಶಕದಲ್ಲಿ ಬರೆದ ‘ಸರಸಮ್ಮನ ಸಮಾಧಿ’ ಸಹ ಉತ್ತಮವಾದ ಕಾದಂಬರಿಯಾಗಿದ್ದು (ಕಾದಂಬರಿಯು ದೂರದರ್ಶನದಲ್ಲಿ ಧಾರವಾಹಿಯಾಗಿಯೂ ಯಶಸ್ವಿ ಪ್ರದರ್ಶನ ಕಂಡಿದೆ. ಅಲ್ಲದೆ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.) ಜನರು ತಲೆಮಾರುಗಳಿಂದ ಪೋಷಿಸಿಕೊಂಡು ಬಂದ ಮೂಡನಂಬಿಕೆಗಳನ್ನು ಪ್ರಶ್ನಿಸುವುದಲ್ಲದೆ, ಅದರ ನಂಬಿಕೆಗಳ, ಆಚರಣೆಗಳ ಕುರಿತಂತೆ ಸತ್ಯಾಸತ್ಯತೆಗಳನ್ನು ಪರಿಶೋಧಿಸುವ ಕೆಲಸ ಮಾಡುತ್ತದೆ.  
Dr. K. Shivarama Karantha (October 10, 1902 – December 9, 1997)


ಅಂದು ಜಾರಿಯಲ್ಲಿದ್ದ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಗೆ ತನ್ನದಾದ ಸ್ವತಂತ್ರ ಅಸ್ತಿತ್ವವಿರಲಿಲ್ಲ. ಅವಳ ಭಾವನೆಗಳಿಗೆ ಬೆಲೆ ಇರಲಿಲ್ಲ. ಭಾರತೀಯ ಪರಂಪರೆ, ಸಂಸ್ಕೃತಿಗಳು ತಾವು ಹೆಣ್ಣಿನ ಮನಸ್ಸಿನ ಮೇಲೆ ಹೇರುತ್ತಾ ಬಂದ ಪಾಪ-ಪುಣ್ಯ, ನ್ಯಾಯ-ನೀತಿ, ಸ್ವರ್ಗ-ನರಕಗಳೆನ್ನುವ ನಂಬಿಕೆಗಳು ಅವರನ್ನು ಒಂದು ಬಗೆಯ ಮನೋದಾಸ್ಯದಿಂದ ಬಂಧಿತರನ್ನಾಗಿಸಿದ್ದವು. ಹೀಗಾಗಿ ಅವರಾರೂ ಸಹ ಅವುಗಳನ್ನು ಪ್ತಶ್ನಿಸುವ ಧೈರ್ಯವನ್ನು ಬೆಳೇಸಿಕೊಂಡಿರುವುದಿಲ್ಲ. ಮಾನವನು ಬದುಕುವ ರೀತಿಯೇ ತೀರಾ ವೈಚಿತ್ರ್ಯದಿಂದ ಕೂಡಿದೆ. ಪರರ ವಿಚಾರಗಳಲ್ಲಿ ತಾವು ತೋರಿಸುವ ಆಸಕ್ತಿಯನ್ನು ತಮ್ಮನ್ನು ತಾವು ತಿದ್ದಿಕೊಳ್ಳುವುದಕ್ಕೂ ಸರಿ ದಾರಿಯಲ್ಲಿ ನಡೆಯುವುದಕ್ಕೂ ಅವನು ತೋರಿಸಲಾರ. ಅಲ್ಲದೆ ಪರರ ವಿಷಯಗಳಲ್ಲಿ ಯಾವೆಲ್ಲಾ ದೋಷಾರೋಪಣೆ,ತರ್ಕಗಳನ್ನು ಮಾಡಲೂ ಹೇಸದ ಮಾನವನು ತನ್ನದೇ ವಿಚಾರ ಬಂದಾಗ-ಎಂದರೆ ಅದೇ ವಿಷಯಗಳನ್ನು ತನಗೇ ಅಳವಡಿಸಿಕೊಳ್ಳಬೇಕಾದಾಗ ಮಾತ್ರ ಹಿಂಜರಿಯುತ್ತಾನೆ, ಅಲ್ಲದೆ ತಾನದರಿಂದ ಪಾರಾಗುವ ಸಲುವಾಗಿ ಯಾವ ಕೆಲಸಗಳಾನ್ನು ಮಾಡಲೂ ತಯಾರಾಗುತ್ತಾನೆ. ಇಂತಹಾ ಮನಸ್ಥಿತಿಯ ಗಂಡು-ಹೆಣ್ಣುಗಳ ಜೀವನದಲ್ಲಿ ನಡೆಯಬಹುದಾದ ಘಟನೆಗಳು ಅವರುಗಳ ಬದುಕನ್ನು ಎಲ್ಲಿಗೆ ಹೋಗಿ ತಲುಪಿಸುತ್ತವೆ ಎನ್ನುವುಅನ್ನು ಕಾದಂಬರಿಯು ಬಹಳ ಚೆನ್ನಾಗಿ ಚಿತ್ರಿಸಿದೆ. .

ಒಟ್ಟಿನಲ್ಲಿ 1930-40 ರ ಸಮಾಜದಲ್ಲಿನ ಮಹಿಳೆಯರ ಬದುಕಿನ ಚಿತ್ರಣವನ್ನು ನಮ್ಮ ಕಣ್ಮುಂದೆ ತರುವ ಈ 120 ಪುಟಗಳ ಚಿಕ್ಕ ಕಾದಂಬರಿ ಗಾತ್ರದಲ್ಲಿ ಚಿಕ್ಕದಾದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಹೀಗಾಗಿ ಕನ್ನಡ ಅಭಿಮಾನಿಗಳದ ತಾವೆಲ್ಲರೂ ಡಾ. ಕಾರಂತರ ಈ ಕಾದಂಬರಿಯನ್ನು ತಪ್ಪದೆ ಓದುವಿರೆಂದು ಆಶಿಸುತ್ತಾ.....

ನಮಸ್ಕಾರ. 

Sunday, July 20, 2014

ನಾದಿನ್ ಗಾರ್ಡಿಮರ್ (Nadine Gordimer )

ದಕ್ಷಿಣ ಆಫ್ರಿಕಾದ ದಮನಿತರ ದನಿಯಾಗಿದ್ದ ಖ್ಯಾತ ಮಹಿಳಾ ಸಾಹಿತಿ ನಾದಿನ್ ಗಾರ್ಡಿಮರ್ ಇತ್ತೀಚೆಗೆ (ಜುಲೈ 13 2014)  ನಮ್ಮನ್ನು ಅಗಲಿದ್ದಾರೆ. ಈ ಸಮಯದಲ್ಲಿ ಅವರ ಬಫ಼ುಕಿನ ಬಗೆಗಿನ ಕಿರುನೋಟವನ್ನು ನಿಮ್ಮೊಂದಿಗೆ ಹಂಚಿಕೊಳ್ಲುವ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ.

15 ಕಾದಂಬರಿ, 21 ಕಥಾ ಸಂಕಲನ, ಹಲವಾರು ಪ್ರಬಂಧಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ಸಲ್ಲಿಸಿದ್ದ ನಾದಿನ್ ತಮ್ಮ ೯೦ ರ ಅಂಚಿನಲ್ಲಿ ನಮ್ಮನ್ನೆಲ್ಲಾ ತೊರೆದು ಹೊರಟು ಹೋಗಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ನಡೆದ ಹೋರಾಟದ ಭಾಗವೇ ಇವರು  ತಮ್ಮ ಸಮಕಾಲೀನರಾಗಿದ್ದ ದಕ್ಷಿಣ ಆಫ್ರಿಕಾ ಗಾಂಧಿ ನೆಲ್ಸನ್‌ ಮಂಡೇಲಾ ಅವರನ್ನು ಬಹುವಾಗಿಯೇ  ಪ್ರಭಾವಿಸಿದ್ದರು.

Nadine Gordimer (20 November 1923 – 13 July 2014)

ನಾದಿನ್ ಗಾರ್ಡಿಮರ್ ಯುರೋಪಿನಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಬಂದಿದ್ದ ಯಹೂದಿ ಕುಟುಂಬದ ಕುಡಿಯಾಗಿದ್ದರು. ತಂದೆ ಇಸಿಡೊರ್‌ ಗಾರ್ಡಿಮರ್‌ ವೃತ್ತಿಯಲ್ಲಿ ಕೈಗಡಿಯಾರ ತಯಾರಕರು. ರಷ್ಯಾದ ಝಾರ್‌ ದೊರೆಗಳ ಹಿಡಿತದಲ್ಲಿದ್ದ ಈಗಿನ ಲಿಥುವೇನಿಯಾಕ್ಕೆ ಸೇರಿದವರು. ತಾಯಿ ಹನ್ನಾ ಲಂಡನ್‌ನವರು. ನಾದಿನ್‌ ಹುಟ್ಟಿದ್ದು ಟ್ರಾನ್ಸ್‌ವಾಲ್‌ ಸಮೀಪದ ಗಣಿಗಳ ಪಟ್ಟಣ ಸ್ಪ್ರಿಂಗ್ಸ್‌ನಲ್ಲಿ. ಸ್ವತಃ ನಿರಾಶ್ರಿತರಾದರೂ ಆಕೆಯ ತಂದೆಗೆ ಕಪ್ಪುಜನರ ಸಂಕಷ್ಟಗಳ ಬಗ್ಗೆ ಸಹಾನುಭೂತಿ ಇರಲಿಲ್ಲ. ಆದರೆ, ಕಪ್ಪುಜನರ ಬಡತನ ಹಾಗೂ ಅವರ ಶೋಷಿತ ಜೀವನವನ್ನು ಹತ್ತಿರದಿಂದ ಕಂಡ ಅಮ್ಮ ಹನ್ನಾ,  ಕಪ್ಪುಜನರ ಮಕ್ಕಳಿಗಾಗಿ ಬಾಲವಾಡಿಯೊಂದನ್ನು ತೆರೆದಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಎದ್ದುಕಾಣುತ್ತಿದ್ದ ಜನಾಂಗೀಯ ತಾರತಮ್ಯ ಹಾಗೂ ಆರ್ಥಿಕ ಅಸಮಾನತೆಯ ಬಗ್ಗೆ ಪುಟ್ಟ ನಾದಿನ್‌ಗೆ ನಿಧಾನಕ್ಕೆ ಅರಿವಾಗತೊಡಗಿತ್ತು. ನಾದಿನ್‌ ಅಮ್ಮ ಹನ್ನಾಗೆ ತನ್ನ ಮಗಳು ದೈಹಿಕವಾಗಿ ದುರ್ಬಲಳು ಎಂಬ ಭಾವನೆಯಿತ್ತು. ಜ್ವರ ಬಂದ ಕಾರಣಕ್ಕೆ ಶಾಲೆಯಿಂದ ಬಿಡಿಸಿಬಿಟ್ಟರು. ಮನೆಪಾಠದ ಮೂಲಕ ಓದು ಮುಂದುವರಿಸಬೇಕಾಯಿತು.

ಬಾಲ್ಯಸಹಜ ಚಟುವಟಿಕೆಯಿಂದ ದೂರವಿದ್ದ ಏಕಾಂಗಿ ನಾದಿನ್‌, ಪುಸ್ತಕಗಳ ನಂಟು ಬೆಳೆಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಭಾವನೆಗಳನ್ನು ಬರಹದಲ್ಲಿ ಇಳಿಸತೊಡಗಿದರು. 1937ರಲ್ಲಿ ಇನ್ನೂ 14 ವರ್ಷದವರಿದ್ದಾಗ ಅವರ ಮೊದಲ ಕಥೆ ಪ್ರಕಟವಾಯಿತು. 1948ರಲ್ಲಿ ಸ್ಪ್ರಿಂಗ್ಸ್‌ನಿಂದ ಜೋಹಾನ್ಸ್‌ಬರ್ಗ್‌ಗೆ ಸ್ಥಳಾಂತರಗೊಂಡರು. ಬೋಧನಾ ಕಾರ್ಯದಲ್ಲಿ ತೊಡಗಿಕೊಂಡು ಬರಹ ಕೃಷಿ ಮುಂದುವರಿಸಿದರು.

1949ರಲ್ಲಿ ಸ್ಥಳೀಯ ದಂತವೈದ್ಯ ಗೆರಾಲ್ಡ್‌ ಗಾವ್ರನ್‌ ಅವರನ್ನು ನಾದಿನ್‌ ವರಿಸಿದರು. 1950ರಲ್ಲಿ ಈ ದಂಪತಿಗೆ ಒರಿಯನ್‌ ಎಂಬ ಪುತ್ರಿಯೂ ಜನಿಸಿದಳು. ಆದರೆ, ಬಹುಕಾಲ ಬಾಳದ ಈ ದಾಂಪತ್ಯ ಮೂರು ವರ್ಷದೊಳಗೆ ವಿಚ್ಛೇದನದಲ್ಲಿ ಅಂತ್ಯವಾಯಿತು.

1954ರಲ್ಲಿ ಕಲಾಕೃತಿಗಳ ಡೀಲರ್‌ ಆಗಿದ್ದ ರೇನ್‌ಹೋಲ್ಡ್‌ ಕ್ಯಾಸಿರರ್‌ ಎಂಬ ಗಣ್ಯ ವ್ಯಕ್ತಿಯನ್ನು ನಾದಿನ್‌ ಮದುವೆಯಾದರು. 2001ರಲ್ಲಿ ವೃದ್ಧಾಪ್ಯ ಸಂಬಂಧಿ ಕಾಯಿಲೆಯಿಂದ ಕ್ಯಾಸಿರರ್‌ ನಿಧನರಾಗುವವರೆಗೆ ಪ್ರೀತಿ ತುಂಬಿದ ತುಂಬು ದಾಂಪತ್ಯವನ್ನು ನಾದಿನ್‌ ಅನುಭವಿಸಿದರು.

ಸ್ಥಳೀಯ ಕಪ್ಪುಜನರ ನೋವು ಅವರ ಬರಹಗಳಲ್ಲಿ ಕಾಣತೊಡಗಿತು. ಪರಿಣಾಮ, ಅವರ ‘ದಿ ಲೇಟ್‌ ಬೂರ್ಜ್ವಾಸ್‌ ವರ್ಲ್ಡ್‌’, ‘ಅ ವರ್ಲ್ಡ್‌ ಆಫ್‌ ಸ್ಟ್ರೆಂಜರ್ಸ್‌’, ‘ಬರ್ಗರ್ಸ್‌ ಡಾಟರ್‌’ ಮತ್ತು ‘ಜುಲೈಸ್‌ ಪೀಪಲ್‌’ ಕೃತಿಗಳ ಮೇಲೆ ದಕ್ಷಿಣ ಆಫ್ರಿಕಾ ಸರ್ಕಾರ ನಿಷೇಧ ಹೇರಿತ್ತು. ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಅಕ್ರಮ ಸಂಘಟನೆ ಎಂದು ಸರ್ಕಾರ ಘೋಷಿಸಿದ್ದರೂ ಅದರ ಸಕ್ರಿಯ ಸದಸ್ಯೆಯಾಗಿ ಅದು ಏರ್ಪಡಿಸುವ ಪ್ರತಿಭಟನೆಗಳಲ್ಲಿ ನಾದಿನ್‌ ಸದಾ ಭಾಗಿಯಾಗುತ್ತಿದ್ದರು. ಜಾಗತಿಕ ವೇದಿಕೆಗಳಲ್ಲಿ ದಕ್ಷಿಣ ಆಫ್ರಿಕಾದ ಕರಾಳ ರಾಜಕೀಯ ಸನ್ನಿವೇಶದ ಚಿತ್ರಣ ನೀಡತೊಡಗಿದರು.

1974ರಲ್ಲಿ ಅವರ ‘ದಿ ಕನ್ಸರ್ವೇಷನಿಸ್ಟ್‌’ ಕೃತಿಗೆ ಬೂಕರ್‌ ಪ್ರಶಸ್ತಿ ಬಂತು. 1991ರಲ್ಲಿ ನೊಬೆಲ್‌ ಪ್ರಶಸ್ತಿ ಅರಸಿಕೊಂಡು ಬಂತು. 

ಆಧಾರ: ಪ್ರಜಾವಾಣಿ

Saturday, July 19, 2014

ಕ್ರಾಂತಿಯ ಶಿಶು ನೆಪೋಲಿಯನ್ ಬೋನೋಪಾರ್ಟೆ ಜೀವನದ ಎರಡು ಪ್ರಸಂಗಗಳು - Two Episodes of the Life of a Child of the Revolution, Napoleon Bonoparte

ಅದೊಂದು ಸೈನಿಕ ಶಾಲೆ. ಇನ್ಸ್‌ಪೆಕ್ಷನ್‌ಗಾಗಿ ಹಿರಿಯ ಸೈನ್ಯ ಅಧಿಕಾರಿಯೊಬ್ಬರು ಆ ಶಾಲೆಗೆ ಭೇಟಿಯಿತ್ತಿದ್ದಾರೆ. ವಿದ್ಯಾರ್ಥಿಗಳು ಶಿಸ್ತಿನಿಂದ ಸಾಲಾಗಿ ನಿಂತಿದ್ದಾರೆ. ಆ ಅಧಿಕಾರಿ ಒಬ್ಬೊಬ್ಬ ಹುಡುಗನ ಎದುರು ನಿಂತು ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂದು ಕೇಳುತ್ತಾ ಬರುತ್ತಿರುತ್ತಾನೆ. ಅದು ಸೈನಿಕ ಶಾಲೆಯಾಗಿದ್ದರಿಂದ ಹುಡುಗರಲ್ಲನೇಕರು ‘ನಾನೊಬ್ಬ ಶೂರ ಸೈನಿಕನಾಗುತ್ತೇನೆ’ ಎನ್ನುತ್ತಿದ್ದರು.ಕೆಲವರು ‘ನಾನು ದಿಟ್ಟ ಸೈನ್ಯಾಧಿಕಾರಿಯಾಗುತ್ತೇನೆ’ ಎಂದು ಎದೆಯುಬ್ಬಿಸಿ ಹೇಳುತ್ತಿದ್ದರು.
ಪ್ರಸನ್ನವದನನಾದ ಸೈನಿಕ ಅಧಿಕಾರಿ ಮುಂದೆ ನಡೆಯುತ್ತಾ ಒಬ್ಬ ಕುಳ್ಳಗೆ, ದುರ್ಬಲನಾಗಿ ಕಾಣುತ್ತಿದ್ದ  ಹುಡುಗನ ಎದುರು ನಿಂತ.
‘ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ?’ - ಕೇಳಿದರು.
ಆತನ ಪ್ರಶ್ನೆಯ ಕೊನೆಗೆ ವ್ಯಂಗ್ಯ ಬೆರೆತಿದ್ದು ಎದ್ದು ಕಾಣುತ್ತಿತ್ತು.
‘ಇಡೀ ಯುರೋಪ್ ಖಂಡದ ಚಕ್ರವರ್ತಿಯಾಗುತ್ತೇನೆ’ ಕೊಂಚವೂ ವಿಚಲಿತನಾಗದೆ ಉತ್ತರಿಸಿದ ಆ ಬಾಲಕ.
ಸೈನ್ಯಾಧಿಕಾರಿ ಈ ಪುಟ್ಟ ಪೋರನನ್ನು ಕೊಂಚ ಗಾಬರಿ, ಕೊಂಚ ಅನುಮಾನ, ಕೊಂಚ ಉಡಾಫೆಯ ದೃಷ್ಟಿಯಲ್ಲಿ ನೋಡುತ್ತಾ ಮುಂದಕ್ಕೆ ಹೋದ ಆದರೆ ಆ ಹುಡುಗ ಪಾಲಿಗೆ ಆ ಮಾತು ಕೇವಲ ಉಡಾಫೆಯ ಮಾತಾಗಿರಲಿಲ್ಲ. ಮುಂದೆ ಆತ ಇಡೀ ಯುರೋಪನ್ನು ತನ್ನ ಕಾಲಡಿ ಹಾಕಿಕೊಂಡ ಸಾಮ್ರಾಟನಾದ.
‘ಅಸಾಧ್ಯ ಎಂಬ ಪದ ನನ್ನ ಶಬ್ಧಕೋಶದಲ್ಲೇ ಇಲ್ಲ. ಅದೇನಿದ್ದರೂ ಮೂರ್ಖರ ಶಬ್ಧಕೋಶದಲ್ಲಿ ದೊರೆಯುವ ಪದ’ ಎಂದು ಅಬ್ಬರಿಸಿದ್ದ
ಆತ ನೆಪೋಲಿಯನ್ ಬೊನಾಪಾರ್ಟೆ!
***
Napoleon Bonoparte (15 August 1769 – 5 May 1821)

ನೆಪೋಲಿಯನ್ ಬೊನಪಾರ್ಟೆ ಯೂರೋಪಿನ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದ ಮಹಾವೀರ. ಫ್ರಾನ್ಸ್‌ನ ಅಧಿಪತಿಯಾಗಿ ಅವನು ತುಂಬಾ ಹೆಸರು ಗಳಿಸಿದ್ದ. ತನ್ನ ಅಧಿಕಾರಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿ ಯಶಸ್ವಿಯಾಗಿದ್ದ. ಅಂತಹ ಒಂದು ಯುದ್ಧ ಇಂಗ್ಲೆಂಡಿನೊಡನೆ ಸಹ ನಡೆಯಿತು. ಆ ಘೋರ ಯುದ್ಧದಲ್ಲಿ ಅನೇಕ ಆಂಗ್ಲ ಸೈನಿರು ಸೆರೆ ಸಿಕ್ಕಿದ್ದರು. ಅವರನ್ನೆಲ್ಲಾ ಸೆರೆಮನೆಗೆ ಕಳುಹಿಸಿ ವಿದ್ರೋಹಿಗಳೆಂಬ ಪಟ್ಟ ಕಟ್ಟಿದ್ದ. ಹೀಗಾಗಿ ಅವರಿಗೆ ಒಂದಿಲ್ಲೊಂದು ದಿನ ಮರಣದಂಡನೆ ಶಿಕ್ಷೆ ಕಾದಿತ್ತು.
ಒಮ್ಮೆ ಒಬ್ಬ ಆಂಗ್ಲ ಖೈದಿಯೊಬ್ಬನನ್ನು ಜೈಲಿನ ತೋಟದಲ್ಲಿ ಕೆಲಸ ಮಾಡಲು ಒಯ್ಯಲಾಗಿತ್ತು. ಸೆರೆಮನೆಯ ಗೋಡೆಗೆ ತಾಗಿಕೊಂಡು ಒಂದು ಮರದ ಒಣ ಬೊಡ್ಡೆ ಇದ್ದುದನ್ನು ಗಮನಿಸಿ, ಅದನ್ನು ಪ್ರತಿದಿನ ಯಾರಿಗೂ ಕಾಣದಂತೆ ಕೆತ್ತಿ ಅದನ್ನು ದೋಣಿಯಂತೆ ಮಾಡಿಕೊಂಡು ಅಲ್ಲಿಯೇ ಮುಚ್ಚಿಟ್ಟಿದ್ದ. ಒಂದುದಿನ ಅದನ್ನು ತೆಗೆದುಕೊಂಡು ಕಣ್ತಪ್ಪಿಸಿ ಹೊರಗೋಡಿದ. ಹಾಗೆ ಹೋಗುವಾಗ ಅಲ್ಲಿಯೇ ಇದ್ದ ಗಿಡದಲ್ಲಿ ಬಿಟ್ಟಿದ್ದ ಕೆಲವು ಸೇಬನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಇನ್ನೇನು ನೀರಿಗೆ ಇಳಿಯಬೇಕು, ಅಷ್ಟರಲ್ಲಿ ನೆಪೋಲಿಯನ್ನನ ಸೈನಿಕರು ಅವನನನ್ನು ಹಿಡಿದು ಚಕ್ರವರ್ತಿಯ ಎದುರು ನಿಲ್ಲಿಸಿದರು. ನೆಪೋಲಿಯನ್‌ಗೆ ನಖಶಿಖಾಂತ ಸಿಟ್ಟುಬಂತು. ಕೈನಲ್ಲಿ ಹಿಡಿದಿದ್ದ ಗಂಟನ್ನು ನೋಡಿ ಅದೇನೆಂದು ವಿಚಾರಿಸಿದ. ಆಗ ಆ ಖೈದಿ ಹೇಳಿದ, 'ಇದರಲ್ಲಿ ಸೇಬಿನ ಹಣ್ಣುಗಳಿವೆ. ಅದನ್ನು ನನ್ನ ಪ್ರೀತಿಯ ತಾಯಿಗೆ ನೀಡಲೆಂದು ತೆಗೆದುಕೊಂಡಿದ್ದೆ.’

``ನನ್ನ ತಾಯಿ ನನ್ನನ್ನು ಕಷ್ಟಪಟ್ಟು ಸಾಕಿ ನನಗೆ ದೇಶಪ್ರೇಮವನ್ನು ಕಲಿಸಿದ್ದಳು. ನಾನು ದೊಡ್ಡವನಾದ ಮೇಲೆ ನನ್ನನ್ನು ಸೈನ್ಯಕ್ಕೆ ಸೇರಿಸಿ ತಾಯಿನಾಡಿನ ಸೇವೆ ಮಾಡಲು ಹರಸಿ ಕಳುಹಿಸಿದ್ದಳು. ಇಂದು ನನ್ನ ತಾಯಿಯನ್ನು ನೋಡುವ ಉತ್ಕಟ ಆಸೆಯಿಂದಾಗಿ ಹೀಗೆ ತಪ್ಪಿಸಿಕೊಳ್ಳುವ ಉಪಾಯ ಮಾಡಿದೆ’’ ಎಂದು ಹೇಳಿ ಶಿಕ್ಷೆಗೆ ತಯಾರಾಗಿ ನಿಂತುಬಿಟ್ಟ. ತಾಯಿಯ ಬಗ್ಗೆ ಅಗಾಧ ಪ್ರೀತಿಯನ್ನು ಹೊಂದಿದ ಆಂಗ್ಲ ಖೈದಿಯ ಬಗ್ಗೆ ನೆಪೋಲಿಯನ್ನನ ಮನ ಮಿಡಿಯಿತು. ಅವನ ಮಾತೃ ಪ್ರೀತಿ, ದೇಶದ ಬಗ್ಗೆ ಇರಿಸಿಕೊಂಡ ಗೌರವ ಕಂಡು ಸಂತಸವಾಯಿತು. ಅವನನ್ನು ಗೌರವಪೂರ್ವಕವಾಗಿ ಬಿಡುಗಡೆಗೊಳಿಸಿ ಒಂದು ಹಡಗಿನಲ್ಲಿ ಅವನ ದೇಶಕ್ಕೆ ಕಳುಹಿಸಿಕೊಟ್ಟ. ಹಾಗೆಯೇ ಅವನಿಗೆ ಒಂದು ಬುಟ್ಟಿತುಂಬಾ ಸೇಬು ಹಣ್ಣು ತುಂಬಿ ಅವನ ತಾಯಿಗೆ ತನ್ನ ಕಾಣಿಕೆ ಎಂದು ಹೇಳಿ ನೀಡಿದ.

Wednesday, July 02, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 27

ಪುರಿ (Puri)

ಭಾರತದ ಪೂರ್ವ ಕರಾವಳಿ ರಾಜ್ಯವಾದ ಒಡಿಶ್ಯಾ ರಾಜ್ಯದ ಜಗತ್ಪ್ರಸಿದ್ದ ಯಾತ್ರಾಸ್ಥಳವೇ ಪುರಿ. ಇಲ್ಲಿನ ಶ್ರೀ ಜಗನ್ನಾಥ ತನ್ನ ಭಕ್ತರಿಂದ ಜಗದೊಡೆಯ, ಜಗತ್ಪಾಲಕ, ಜಗತ್ರಕ್ಷಕನೆಂದೆಲ್ಲಾ ಕೊಂಡಾಡಲ್ಪಟ್ಟಿದ್ದಾನೆ. ಇಂತಹಾ ಬಲರಾಮ ಸುಭದ್ರೆಯರೊಡಗೂಡಿ ನೆಲೆಸಿರುವ ಜಗನ್ನಾಥ ಸ್ವಾಮಿಗೆ ಪ್ರತಿ ವರ್ಷವೂ ಆಶಾಢ ಮಾಸದಲ್ಲಿ ರಥಯಾತ್ರೆಯು ನೆರವೇರುತ್ತದೆ. ಭಾರತದಲ್ಲಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ಹೆಸರಾಗಿರುವ ಪುರಿ ಜಗನ್ನಾಥ ರಥಯಾತ್ರೆಗೆ ಕೋಟ್ಯಾಂತರ ಭಕ್ತರು ಸಾಕ್ಷಿಯಾಗುತ್ತಾರೆ.
 
Sri Jagannatha Swami, Puri, Odishya



***

Jagannatha Swami Temple, Puri
ಬಹುಕಾಲದ ಹಿಂದೆ ಮರಕತದಿಂದ ಮೈದುಂಬಿದ ನೀಲಮಾಧವನನ್ನು ನೀಲಗಿರಿಯ ಬುಡಕಟ್ಟಿನ ಅರಸನಾದ ವಿಶ್ವವಸುವು ಅರ್ಚಿಸುತ್ತಿದ್ದನು. ಅದೇ ವೇಳೆಯಲ್ಲಿ ಆವಂತಿ ರಾಜ್ಯದ ರಾಜನಾಗಿದ್ದ ಇಂದ್ರದ್ಯುಮ್ನನು ತಾನು ಸಹ ಮಹಾನ್ ವಿಷ್ಣುಭಕ್ತನಾಗಿದ್ದು ಅವನಿಗೆ ಸಹ ವಿಶ್ವವಸುವು ಪೂಜಿಸುತ್ತಿದ್ದ ನೀಲಮಾಧವ ವಿಗ್ರಹವನ್ನು ಹೇಗಾದರೂ ಪಡೆಯಬೇಕೆನ್ನುವ ಬಯಕೆಯುಂಟಾಯಿತು. ತನ್ನ ಈ ಕಾರ್ಯವನ್ನು ಸಾಧಿಸುವುದಕ್ಕಾಗಿ ಆ ರಾಜನು ವಿದ್ಯಾಪತಿ ಎನ್ನುವ ಬ್ರಾಹ್ಮಣಾನೋರ್ವನನ್ನು ಕಳುಹಿಸಿದ. ಆ ವಿದ್ಯಾಪತಿಯು ತಾನು ದಟ್ಟಾರಣ್ಯದ ಗುಹೆಗಳಲ್ಲಿ ವಿಗ್ರಹವನ್ನು ಹುಡುಕುತ್ತಾಬರಲು ವಿಶ್ವವಸುವಿನ ಪುತ್ರಿಯಾದ ಲಲಿತೆಯಲ್ಲಿ ಅನುರಕ್ತಳಾಗಿ ಅವಳನ್ನು ವರಿಸಿದನು. ಲಲಿತೆಯ ಮಾತಿಗೆ ಕಟ್ಟುಬಿದ್ದ ವಿಶ್ವವಸು ಅಳಿಯನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿ ವಿಗ್ರಹವಿದ್ದ ಸ್ಥಳಕ್ಕೆ ಕರೆದೊಯ್ಯಲು ವಿದ್ಯಾಪತಿಯು ಸಾಸಿವೆ ಬೀಜಗಳನ್ನು ದಾರಿಯುದ್ದಕ್ಕೂ ಚೆಲ್ಲಿದನು. ಕೆಲದಿನಗಳ ಬಳಿಕ ಚಿಗುರಿದ ಸಾಸಿವೆ ಗಿಡದ ಜಾಡನ್ನು ಹಿಡಿದು ಇಂದ್ರದ್ಯುಮ್ನನ ಸೈನ್ಯ ಸಮೇತನಾಗಿ ವಿಗ್ರಹವಿರುವ ಸ್ಥಳಕ್ಕೆ ಬರಲು ವಿಗ್ರಹವೇ ಕಣ್ಮರೆಯಾಯಿತು. ವಿಗ್ರಹವು ನಾಪತ್ತೆಯಾಗಿದ್ದರಿಂದಾಗಿ ಬೇಸರಗೊಂಡು ಸಾಯಲು ಹೊರಟ ಇಂದ್ರದ್ಯುಮ್ನನಿಗೆ ಅಶರೀರವಾಣಿಯೊಂದು ಕೇಳಿಸಿ ಅದರ ಅನುಜ್ಞೆಯಂತೆಯೇ ತಾನು ವಿಷ್ಣು
ದೇವಾಲಯವನ್ನು ನಿರ್ಮಾಣ ಮಾಡಿದನು. ನಾರದರು ಅದರಲ್ಲಿ ನರಸಿಂಹ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು.


Jagannatha Swami Rathayathra, Puri 
ಇಷ್ಟಾದ ಬಳಿಕ ಇಂದ್ರದ್ಯುಮ್ನನ ಕನಸಿನಲ್ಲಿ ಬಂದ ಶ್ರೀ ಜಗನ್ನಾಥ ಸ್ವಾಮಿಯು ಸಮುದ್ರದಲ್ಲಿ ತೇಲಿಬರುವ ಮರದ ದಿಮ್ಮಿಯೊಂದರಿಂದ ವಿಷ್ಣು, ಬಲರಾಮ, ಸುಭದ್ರೆಯರ ಮೂರ್ತಿಗಳನ್ನು ನಿರ್ಮಿಸುವಂತೆ ನಿರ್ದೇಶಿಸಿದನು. ಅದಾಗ ಬಡಗಿಯ ವೇಷದಲ್ಲಿ ಬಂದ ದೇವಶಿಲ್ಪಿ ವಿಶ್ವಕರ್ಮನು ತಾನೇ ಆ ವಿಗ್ರಹಗಳನ್ನು ನಿರ್ಮಾಣ ಮಾದಲ್ಲು ತೊಡಗಿಕೊಂಡನು. ಆ ಸಮಯದಲ್ಲಿ ವಿಶ್ವಕರ್ಮನು “ತನ್ನ ಕೆಲಸ ಪೂರ್ಣ್ಗೊಂಡ ಬಳಿಕ ನಾನೇ ಹೇಳುತ್ತೇನೆ. ನಾನು ಹೇಳುವವರೆವಿಗೂ ಯಾರೂ ಆ ಕೊಠಡಿಯ ಬಾಗಿಲನ್ನು ತೆರೆಯಬಾರದು.” ಎನ್ನುವುದಾಗಿ ಅಪ್ಪಣೆ ಮಾಡಿದನು. ಇದಾಗಿ ಹಲವಾರು ದಿನಗಳುರುಳಿದರೂ ಸಹ ವಿಗ್ರಹ ನಿರ್ಂಆಣದ ಕೆಲಸದ ಸದ್ದೇ ಕೇಳಿಸದ ಕಾರಣದಿಂದ ದಿಗಿಲುಗೊಂಡ ಇಂದ್ರದ್ಯುಮ್ನ ಮಹಾರಾಜನು ಬಾಗಿಲನ್ನು ತೆರೆಯಿಸಲು ವಿಶ್ವಕರ್ಮನು ತಾನು ಅದೃಷ್ಯನಾಗಿದ್ದನು. ಪ್ರತಿಮೆಗಳು ಅಪೂರ್ಣಗೊಂಡಿದ್ದವು. ಅದೇ ಸಮಯದಲ್ಲಿ ಆ ಅಪೂರ್ಣ ವಿಗ್ರಹಗಳನ್ನೇ ಪ್ರತಿಷ್ಠೆ ಮಾಡುವಂತೆ ರಾಜನಿಗೆ ದೈವದ ಅಪ್ಪಣೆಯಾಗಲು ಅದೇ ಅಪೂರ್ಣ ವಿಗ್ರಹಗಳನ್ನು ನೇಮದಿಂದ ಪ್ರತಿಷ್ಠಾಪನೆ ಮಾಡಿಸಿದನು. ಇದೇ ಕಾರಣದಿಂದ ಜಗನ್ನಾಥನಿಗೆ ‘ದಾರುಬ್ರಹ್ಮ’ ಎಂಬ ಹೆಸರು ಪ್ರಾಪ್ತಿಯಾಯಿತು. ಅಂದಿನಿಂದ ಇಂದಿನವರೆಗೂ ಅದೇ ಸ್ವರೂಪದಲ್ಲಿ ತನ್ನ ಭಕ್ತಜನರಿಂದ ಪೂಜೆಗೊಳ್ಳುತ್ತಿರುವ ಜಗನ್ನಾಥ, ಬಲಭದ್ರ, ಸುಭದ್ರೆಯರು ವಿಷ್ಣು, ಶಿವ ಹಾಗೂ ಶಕ್ತಿಯ ಸ್ವರೂಪರಾಗಿದ್ದಾರೆ.