Friday, January 31, 2025

"ಗಣ" Movie Review: ಹೊಸತನವಿಲ್ಲದ ಮತ್ತೊಂದು ಟೈಮ್ ಟ್ರಾವೆಲಿಂಗ್ ಕಥೆ

 ಚಿತ್ರ: ಗಣ

ನಿರ್ದೇಶಕ: ಹರಿಪ್ರಸಾದ್ ಜಕ್ಕ

ನಿರ್ಮಾಣ: ಚೆರಿ ಕ್ರಿಯೇಷನ್ಸ್ ಲಾಂಛನ, ಪಾರ್ಥು 

ತಾರಾಂಗಣ: ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು

ರೇಟಿಂಗ್: 2.5/5

-ರಾಘವೇಂದ್ರ ಅಡಿಗ ಎಚ್ಚೆನ್.


ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ "ಗಣ" ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.  ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.  ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು "ಗಣ" ಚಿತ್ರದ ತಾರಾಬಳಗದಲ್ಲಿದ್ದಾರೆ  2021ರಲ್ಲಿ ಬಿಡುಗಡೆಯಾದ ನಿರ್ದೇಶಕ ಹರಿಪ್ರಸಾದ್ ಜಕ್ಕ ಅವರ ತೆಲುಗು ಚಿತ್ರ ಪ್ಲೇ ಬ್ಯಾಕ್ ಚಿತ್ರದ  ಯಥಾವತ್ ರಿಮೇಕ್ ಚಿತ್ರವೇ "ಗಣ". ಮೂಲ ಚಿತ್ರ ಕ್ರಾಸ್ ಕನೆಕ್ಷನ್ ಕಥೆ ಆಧರಿಸಿದ್ದ ಭಾರತದ ಮೊದಲ ಚಿತ್ರವೆಂದು ಹೇಳಲಾಗಿತ್ತಾದರೂ ಇಲ್ಲಿ ಕನ್ನಡ ಪ್ರೇಕ್ಷಕರಿಗೆ ಸರಿಹೊಂದುವಂತೆ ಕೆಲವು ಮಾರ್ಪಾಡು ಮಾಡಿಕೊಂಡು ತೆರೆಗೆ ತರಲಾಗಿದೆ. 

ಗಣ ಎಂಬ ಪತ್ರಕರ್ತ, ಹಳೆಯ ಲ್ಯಾಂಡ್ ಲೈನ್ ದೂರವಾಣಿಯನ್ನು ಹೊಂದಿರುವ ಹಳೆಯ ಮನೆಗೆ ತೆರಳುತ್ತಾನೆ. ಲ್ಯಾಂಡ್ ಲೈನ್ ಮತ್ತು ಮೊಬೈಲ್ ಫೋನ್ ಗಳು ಕೆಲವೊಮ್ಮೆ ಕ್ರಾಸ್ ಕನೆಕ್ಷನ್ ಗೆ ಹೆಸರುವಾಸಿಯಾಗಿದ್ದರೂ , ಗಣನಿಗೆ ಸುಜಾತಾ ಎನ್ನುವವಳಿಂದ ಅನಿರೀಕ್ಷಿತ ಕರೆ ಬರುತ್ತದೆ, ಅವಳು ಬೇರೊಬ್ಬನೊಡನೆ ಮಾತನಾಡಲು ಬಯಸಿರುತ್ತಾಳೆ. ವಿಚಿತ್ರ ಎನಿಸುವಂತೆ  ಆಕೆ 1993 ರ ಕಾಲದ ಸುಜಾತಾ 2022 ರ ಗಣ ಎಂಬ ಪತ್ರಕರ್ತನನ್ನು ಸಂಪರ್ಕಿಸಿದ್ದಾಳೆ.ಎರಡು ವಿಭಿನ್ನ ಕಾಲಘಟ್ಟದ ವ್ಯಕ್ತಿಗಳು ಮಾತಿಗಿಳಿಯುತ್ತಾರೆ.

ಸುಜಾತಾ ತನ್ನ ಪಾಸ್ಪೋರ್ಟ್ ಸಮಸ್ಯೆಗಳಿಗೆ ಸಹಾಯವನ್ನು ಕೇಳುತ್ತಾಳೆ ಮತ್ತು ಕ್ರೈಂ ರಿಪೋರ್ಟರ್ ಆದ  ಗಣ ಇದರ ತನಿಖೆ ಪ್ರಾರಂಭಿಸುತ್ತಾನೆ. ಇದು ಆತನನ್ನು ಕೊಲೆ ಪ್ರಕರಣವೊಂರ ಸತ್ಯ ತಿಳಿಯುವಂತೆ  ಪ್ರೇರೇಪಿಸುತ್ತದೆ. ಮುಂದೆ ಏನಾಗಲಿದೆ ಎನ್ನುವುದನ್ನು ಪ್ರೇಕ್ಷಕರು ತಾವು ಈಗಾಗಲೇ  ಪ್ಲೇ ಬ್ಯಾಕ್ ಸಿನಿಮಾ ನೋಡದಿದ್ದಲ್ಲಿ ಚಿತ್ರಮಂದಿರಗಳಲ್ಲಿ ತಿಳಿಯಬಹುದಾಗಿದೆ. 

ಮೂರು ತಿಂಗಳ ಹಿಂದೆ, ಮರ್ಫಿ ಎಂಬ ಕನ್ನಡ ಸಿನಿಮಾ ತೆರೆಗೆ ಬಂದಿದ್ದು ಅದೂ ಸಹ ಇದೇ ಬಗೆಯ ಕಥಾವಸ್ತುವನ್ನು ಹೊಂದಿತ್ತು, ವಿಭಿನ್ನ ಕಥಾಹಂದರಕ್ಕೆ ತೆರೆದುಕೊಳ್ಳುವ ಮುನ್ನ ಗಣ ಚಿತ್ರದ ಕಥೆಗೆ ಸಾಕಷ್ಟು ಸಮೀಪದ ಹೋಲಿಕೆಯನ್ನು ಆ ಚಿತ್ರ ಸಹ ಹೊಂದಿದೆ. ಅಂತೆಯೇ, ಭಾರತೀಯ ಚಿತ್ರರಂಗದಲ್ಲಿ ಟೈಮ್ ಟ್ರಾವೆಲ್ ಅನ್ನು ಕೇಂದ್ರವಾಗಿಸಿಕೊಂಡ ಹಲವಾರು ಚಲನಚಿತ್ರಗಳು ಬಂದಿದೆ.. ಗಣ ಅವುಗಳಲ್ಲಿ ಒಂದಾಗಿದೆ, ಆದರೆ ಇದು ಮತ್ತೊಂದು ಚಿತ್ರದ ರಿಮೇಕ್ ಅನ್ನು ಹೊರತುಪಡಿಸಿ, ಹೊಸದಾಗಿ ಏನನ್ನೂ ಹೇಳುವುದರಲ್ಲಿ ಸೋತಿದೆ. ಕಥಾವಸ್ತುವು ಪ್ರೇಕ್ಷಕರಿಗೆ ತೆರೆದುಕೊಳ್ಳುತ್ತಿದ್ದಂತೆ, ಪ್ರೇಕ್ಷಕರ ಕುತೂಹಲಕ್ಕೆಲ್ಲಾ ತೆರೆ ಬೀಳುತ್ತದೆ., ಅಚ್ಚರಿಯ ಭಾವವನ್ನು ಅಥವಾ ಇತರ ಅಗತ್ಯ ಅಂಶಗಳ ಪ್ರಚೋದಿಸಲು ವಿಫಲವಾಗುತ್ತದೆ, ವಿಶೇಷವಾಗಿ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಮರ್ಫಿಯ ಹಿನ್ನೆಲೆಯಲ್ಲಿ ನೋಡಿದಾಗ "ಗಣ" ಸಿನಿಮಾದಲ್ಲಿ ಬೇರೆಯಾದ ವಿಶೇಷತೆಗಳೇನೂ ಕಾಣುವುದಿಲ್ಲ.

"ಗಣ" ಕೇವಲ ಒಂದು ನಿಷ್ಠಾವಂತ ರಿಮೇಕ್ ಚಿತ್ರ ಎನ್ನುವುದಕ್ಕೆ ಮಾತ್ರ ಸೀಮಿತವಾಗಿದೆ. ಸಿನಿಮಾವು ಕ್ರಾಸ್ ಕನೆಕ್ಷನ್  ಅಥವಾ ಟೈಮ್ ಟ್ರಾವೆಲಿಂಗ್ ವಿಷಯಗಳ ಹೆಚ್ಚು ಅರಿವಿಲ್ಲದವರಿಗೆ ಉತ್ತಮವಾದ ಅನುಭವ ನೀಡಬಹುದು ಹೊರತು ಉಳಿದವರಿಗೆ, ಇದು ಎರಡು ವಿಭಿನ್ನ ಅವಧಿಗಳ ನಡುವಿನ ಸಿನಿಮಾಗಳ ಸಾಲಿನಲ್ಲಿ ಬಂದ ಮತ್ತೊಂದು ಚಿತ್ರ ಮಾತ್ರ.

ನೀವು ಟೈಮ್ ಟ್ರಾವೆಲ್ ಮತ್ತು ಕ್ರಾಸ್-ಕನೆಕ್ಷನ್ ಗಳಂತಹಾ ವೈಜ್ಞಾನಿಕ ಹಿನ್ನೆಲೆಯ ಸಿನಿಮಾವನ್ನು ನೋಡಲು ಇಷ್ಟಪಡುವಿರಾದರೆ ಗಣ ಯೋಗ್ಯ ಆಯ್ಕೆಯಾಗಿದೆ. ಆದರೆ ಇಲ್ಲಿ ರೋಮಾಂಚನಕಾರಿಯಾದ ಯಾವುದೇ ಹೊಸ ಬಗೆಯ ಅನುಭವವನ್ನೂ ಸಹ ನೋಡುವುದು ಸಾಧ್ಯವಿಲ್ಲ.


Sunday, January 26, 2025

ನಟ ಶಿವರಾಜ್ ಕುಮಾರ್ ಅವರು ಬದುಕಿನ ಯುದ್ಧ ಗೆದ್ದು ಬಂದಿರುವುದು ನಮಗೆಲ್ಲಾ ಸಂಭ್ರಮದ ಕ್ಷಣ: ಕೆ.ವಿ.ಪ್ರಭಾಕರ್

 ಬಾಕಿ ಉಳಿದಿರುವ ಐದೂ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಇದೇ ವರ್ಷ ಘೋಷಣೆ : ಕೆವಿಪಿ ಭರವಸೆ

ಬಾಕಿ ಉಳಿದಿರುವ ಐದೂ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಇದೇ ವರ್ಷ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಭರವಸೆ ನೀಡಿದರು. 

ಶ್ರೀ ರಾಘವೇಂದ್ರ ಚಿತ್ರವಾಣಿಯ 49ನೇ  ವಾರ್ಷಿಕೋತ್ಸವ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ಸಾಧಕರಿಗೆ 24ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.‌

"ಸೊಸೆ ತಂದ ಸೌಭಾಗ್ಯ" ಸಿನಿಮಾದಿಂದ ಪಿಆರ್ ಒ ಕ್ಷೇತ್ರಕ್ಕೆ ಆಗಮಿಸಿದ ರಾಘವೇಂದ್ರ ಚಿತ್ರವಾಣಿ ಈಗ ಕನ್ನಡ ಚಿತ್ರರಂಗದ ಸೌಭಾಗ್ಯ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. 
ಈ ವಾರ ಸಿನಿಮಾ ಜಗತ್ತಿಗೆ ಸಂಭ್ರಮದ ವಾರ. 2019 ನೇ ಸಾಲಿನ ರಾಜ್ಯ ಸಿನಿಮಾ ಪ್ರಶಸ್ತಿಗಳು ಹಾಗೂ ನೆನ್ನೆ ಅನಂತನಾಗ್ ಅವರೂ ಸೇರಿ ಸಿನಿಮಾ ಕ್ಷೇತ್ರದ ದಿಗ್ಗಜರಿಗೆ ಪದ್ಮ‌ ಪ್ರಶಸ್ತಿಗಳು ಲಭಿಸಿವೆ. ಇದು ಸಂಭ್ರಮದ ವಾರ ಎಂದರು. 

ಐದು ವರ್ಷಗಳಿಂದ ರಾಜ್ಯ ಸಿನಿಮಾ ಪ್ರಶಸ್ತಿಗಳು ಸ್ಥಗಿತಗೊಂಡಿದ್ದವು. ನಾವು ಈಗಗಲೇ 2019 ರ ಪ್ರಶಸ್ತಿ ಘೋಷಣೆಯಾಗಿದ್ದು ಬಾಕಿ ಇರುವ ಐದೂ ವರ್ಷಗಳ ಪ್ರಶಸ್ತಿಯನ್ನೂ ಇದೇ ವರ್ಷ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದರು. 
ಸಿನಿಮಾ PRO ಗಳಿಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ನಟಿ ಜಯಂತಿ ಅವರ ಹೆಸರಿನ ಪ್ರಶಸ್ತಿ ಸ್ಥಾಪಿಸಲು ಈಗಾಗಲೇ ಸರ್ಕಾರಿ ಆದೇಶ ಆಗಿದೆ ಎಂದು ತಿಳಿಸಿದರು.
ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಹಿರಿಯ ಪತ್ರಕರ್ತೆ ವಿಜಯಮ್ಮ, ಹಿರಿಯ ಪತ್ರಕರ್ತರಾದ ಸದಾಶಿವ ಶೆಣೈ,  ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ನಟಿ ರಾಗಿಣಿ,  ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್,  ಉಮೇಶ್ ಬಣಕಾರ್, ಸಂಜಯ್ ಗೌಡ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Saturday, January 25, 2025

"ಪಾರ್ಲರ್ ಹುಡುಗಿಯೂ ಮರಳುಗಾಡಿನ ಮಹಲು": ಪುಟ್ಟ ಕಾದಂಬರಿಯ ದಟ್ಟ ಸ್ವಪ್ನಸೌಧ

 ಬರಹಗಾರ್ತಿ ಗೀತಾ ಕುಂದಾಪುರ ಅವರು ಎಂಕಾಂ ಪದವಿ ಪಡೆದಿರುವ ಇವರು ವಿದೇಶಗಳಲ್ಲಿ ಪ್ಲಾನರ್‌ ಮತ್ತು ಪ್ರಾಜೆಕ್ಟ್ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಿಗೆ ಲೇಖನ ಕತೆಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಬರೆದ ಸಣ್ಣ ಕತೆಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು ‘ಅಪ್ರಮೇಯ’ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರ ಇನ್ನೊಂದು ಕೃತಿ ದ್ವೀಪಗಳತ್ತ ಯಾನ - ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕಥನ. ಕಡಲ್ಗಳ್ಳರ ಸರಹದ್ದಿನಲ್ಲಿ ಎನ್ನುವುದು ಅವರ ಪ್ರವಾಸ ಕಥನ ‘ ಇಲ್ಲಿ ಲೇಖಕಿ  ರಷ್ಯಾ ಮತ್ತು ಸ್ಕ್ಯಾಂಡಿನೆವಿಯಾ ಪ್ರವಾಸ ಕೈಗೊಂಡವೇಳೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.  ಒಂಟಿ ಪಯಣಿಗರು.ಎನ್ನುವುದು ಇವರ ಇನ್ನೊಂದು ಕಥಾ ಸಂಕಲನ. ಇದೀಗ ಲೇಖಕಿ ಗೀತಾ ತಮ್ಮ ಮೊಟ್ಟ ಮೊದಲ ಕಾದಂಬರಿ ಪ್ರಕಟಿಸಿದ್ದು "ಪಾರ್ಲರ್ ಹುಡುಗಿಯೂ ಮರಳುಗಾಡಿನ ಮಹಲು" ಎನ್ನುವುದು ಈ ಕಾದಂಬರಿಯ ಶೀರ್ಷಿಕೆ.


ಈ ಕಾದಂಬರಿ ಲಾವಣ್ಯ ಎನ್ನುವ ಮದ್ಯಮವರ್ಗದ ಕುಟುಂಬದಿಂದ ಬಂದ ಹುಡುಗಿಯೊಬ್ಬಳ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಮದುವೆ ವಯಸ್ಸಿಗೆ ಬಂದಿದ್ದರೂ ನಾನಾ ಕಾರಣದಿಂದ ಸೂಕ್ತ ವರ ಸಿಕ್ಕದೆ ಮದುವೆಯಾಗದೆ ಇದ್ದ ಲಾವಣ್ಯ ತನ್ನ ಸಂಬಂಧಿಕರಿಂದ ನಾನಾ ಬಗೆಯ ಚುಚ್ಚುಮಾತುಗಳನ್ನು ಕೇಳಬೇಕಾಗುತ್ತದೆ. ಆದರೆ ಇದರಿಂದ ನೊಂದು ಕುಗ್ಗಿ ಹೋಗದ ಆಕೆ ತನ್ನ ಆತ್ಮವಿಶ್ವಾಸ, ಪ್ರಯತ್ನದಿಂದ ಮುಂದುವರಿದು ಗಲ್ಫ್ ರಾಷ್ಟ್ರ ಕತಾರ್ ಗೆ ತೆರಳಿ ಅಲ್ಲಿ ಬ್ಯೂಟಿಷಿಯನ್ ಆಗಿ ಬೆಳೆಯುತ್ತಾಳೆ.

ಮೇಲ್ನೋಟಕ್ಕೆ ಕಾದಂಬರಿ ಹೆಣ್ಣೊಬ್ಬಳ ಜೀವನದ ಕಥೆಯಾಗಿ ಅಲ್ಲದೆ ಹೆಣ್ಣೊಬ್ಬಳು ತನ್ನ ಸಾಹಸ ಪ್ರವೃತ್ತಿಯಿಂದ ಎಲ್ಲವನ್ನೂ ಎದುರಿಸಿ ದಿಟ್ಟವಾಗಿ ಮುನ್ನಡೆಯುವ, ಬೆಳೆದು ಎತ್ತರಕ್ಕೇರುವ ಕಥೆ ಎನಿಸುತ್ತದೆ. ಲಾವಣ್ಯ ತಾನು ಕತಾರ್ ನಲ್ಲಿ ಕೆಲಸ ಮಾಡಿ ತನ್ನ ತಾಯಿ, ಮನೆಯವರಿಗೆ ಹಣ ಕಳಿಸುತ್ತಾ ಜೊತೆಗೆ ತನ್ನನ್ನು ಆಡಿಕೊಂಡಿದ್ದವರ ಮುಂದೆ ತಾನು ಏನೆನ್ನುವುದನ್ನು ಕೆಲಸದ ಮೂಲಕವೇ ತೋರಿಸಿಕೊಡುವ ಕಥೆ ಈ ಕಾದಂಬರಿ.

ಇಲ್ಲಿ ನನಗೆ ಕಂಡ ಹಾಗೆ ಲಾವಣ್ಯಳ ಜೀವನದ ಕಥೆಯ ಜೊತೆಗೆ ಕತಾರ್ ಅಥವಾ ಇತರೆ ಗಲ್ಫ್ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳ ಜೀವನ ಹೇಗಿರುತ್ತದೆ ಎನ್ನುವುದನ್ನೂ ಲೇಖಕಿ ತೆರೆದಿಡುತ್ತಾರೆ. ದೂರ ದೇಶಗಳಿಗೆ ಕನಸುಗಳನ್ನು ಕಟ್ಟಿಕೊಂಡು ಕೆಲಸಕ್ಕೆ ಬರುವ ಹೆಣ್ನು ಮಕ್ಕಳು ಅಲ್ಲಿ ಪಡುವ ಬವಣೆಗಳ ಚಿತ್ರಣ ಇಲ್ಲಿದೆ. ಇಲ್ಲಿನ ಕಥಾ ನಾಯಕಿಗೆ ಒಲಿದು ಬಂದಂತೆ ಎಲ್ಲಾ ಹೆಣ್ಣು ಮಕ್ಕಳ ಜೀವನದಲ್ಲಿ ಅದೃಷ್ಟ ಕೈಗೂಡಿ ಬರುವುದಿಲ್ಲ ಎನ್ನುವುದು ಸತ್ಯ. ಇದರಲ್ಲಿ ಬರುವ ಪಾರ್ವತಿ, ಪಸೀದ, ಲೋಲಿಟಾ ಅಂತಹಾ ಪಾತ್ರಗಳು ಇದಕ್ಕೆ ನಿದರ್ಶನ. 


ಒಟ್ಟಾರೆ ಕಾದಂಬರಿ ಸರಳವಾಗಿದ್ದು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಗುರಿ, ಮಹತ್ವಾಕಾಂಕ್ಷೆಯಿದ್ದು ಸಾಧನೆಯ ಛಲ, ಪ್ರಯತ್ನ ಸೇರಿದರೆ ಯಾವುದೇ ಕಷ್ಟಗಳನ್ನೆದುರಿಸಿ ಬದುಕಬಹುದು ಎನ್ನುವುದಕ್ಕೆ ಲಾವಣ್ಯ ಪಾತ್ರ ಒಂದು ಉದಾಹರಣೆ. ಹಾಗೆಯೇ ಇಲ್ಲಿ ಮದ್ಯಮವರ್ಗದ ಮನೆ, ಅಲ್ಲಿನ ಸಂಬಂಧಗಳ ನಡುವಿನ ತಾರತಮ್ಯವನ್ನೂ ಲೇಖಕಿ ಸೂಕ್ತವಾಗಿ ಚಿತ್ರಿಸಿದ್ದಾರೆ.  ಆದರೆ ಕಾದಂಬರಿಯ ಪ್ರಾರಂಭದಲ್ಲಿದ್ದ ಸಮಾಧಾನಕರ ಕಥನ ಶೈಲಿ ಕಾದಂಬರಿಯ ಕಡೆ ಕಡೆಯಲ್ಲಿ ತುಸು ಹೆಚ್ಚಿನ ವೇಗದ ಗತಿಯಲ್ಲಿ ಸಾಗಿದಂತೆ ಎನಿಸುತ್ತದೆ. ಲಾವಣ್ಯಗೆ ಸಲ್ಮಾ ಸಿಕ್ಕ ನಂತರ ಮತ್ತು ಕಾದಂಬರಿಯನ್ನು ಸುಖಾಂತಗೊಳಿಸಬೇಕೆನ್ನುವ ಕಾರಣದಿಂದ ಶ್ರೀಕಾಂತನ ಪಾತ್ರ ಪ್ರವೇಶವಾಗಿದೆ ಎನಿಸಿತು. ಅಲ್ಲದೆ ಅವನ ಲಾವಣ್ಯಳ ಮದುವೆ ಆಗುತ್ತದೆ ಎನ್ನುವುದರೊಂದಿಗೆ ಕಥೆ ಮುಕ್ತಾಯವಾಗಿದ್ದು ಕೊನೆಯಲ್ಲಿ ಕಥೆ ಅವಸರದಲ್ಲಿ ಸಾಗಿತು ಎನಿಸಿತು. ಇದು ಹೊರತು ಲೇಖಕಿಯ ಮೊದಲ ಪ್ರಯತ್ನಕ್ಕೆ ನಾವು ಮೆಚ್ಚುಗೆ ಸೂಚಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. 



Friday, January 24, 2025

ಡಾ.ರಾಜ್ ವಿನಯದ ಗುಣ ಅವರಿಗಿಂತ ಎತ್ತರದ್ದು: ಸಿಎಂ ಸಿದ್ದರಾಮಯ್ಯ

 ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. 

ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನ ಕಾರ್ಯಕ್ರಮದಲ್ಲಿ ಗೋವಿಂದು ಅವರನ್ನು ಸನ್ಮಾನಿಸಿ, ಅಭಿನಂದಿಸಿ ಮಾತನಾಡಿದರು. 

ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.

ಕನ್ನಡ ಕೆಲಸಕ್ಕೆ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುವುದು ಎಂದರು. 

ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೇ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್ ಅವರೇ ಸಾಟಿ. ಇವರಿಗೆ ಸಾಟಿ ಆಗುವವರು ಯಾರೂ ಇನ್ನೂ ಬಂದಿಲ್ಲ ಎಂದರು.

ಡಾ.ರಾಜ್ ಅವರ ಗೋಕಾಕ್ ಚಳವಳಿಯಲ್ಲಿ ನಾನೂ ಅವರ ಭಾಷಣ ಕೇಳಲು ಹೋಗಿದ್ದೆ. ರಾಜ್ ಅವರಿಂದಾಗಿ ಕನ್ನಡ ಹೆಚ್ಚು ಶಕ್ತಿಯುತವಾಗಿ ಬೆಳೆಯಿತು ಎಂದರು‌.


ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದಾಗ ಸಾ.ರಾ.ಗೋವಿಂದು ಮತ್ತು ಹಿರಿಯ ಪತ್ರಕರ್ತ ವೆಂಕಟೇಶ್  ಅವರ ಪರಿಚಯ ಮೊದಲ ಬಾರಿ ಆಯಿತು. ಇವರ ಕನ್ನಡ ಪರ ಹೋರಾಟದ ಬಗ್ಗೆ ಆಗಲೇ ನನಗೆ ಅಭಿಮಾನ ಇತ್ತು. ನನಗೆ ಕನ್ನಡ ನಾಡು, ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದೆ. ಇದನ್ನು ಗ್ರಹಿಸಿಯೇ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನನ್ನನ್ನೇ ಕನ್ನಡ ಕಾವಲು ಸಮಿತಿಗೆ ಅಧ್ಯಕ್ಷನನ್ನಾಗಿಸಿದರು ಎಂದು ಸ್ಮರಿಸಿ, ಗೋವಿಂದು ಅವರ ಬದುಕು ಅವರ ಹೋರಾಟಗಳ ಕಾರಣದಿಂದಾಗಿ ಸಾರ್ಥಕವಾಗಿದೆ ಎಂದರು. 

ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಕ್ಕೂ ಇವತ್ತಿಗೂ ಕನ್ನಡದಲ್ಲೇ ಸಹಿ ಹಾಕ್ತೀನಿ ಎಂದರು. 

ಬೇರೆ ಧರ್ಮ ಮತ್ತು ಇತರೆ ಭಾಷೆಗಳ ಬಗ್ಗೆ ಸಹಿಷ್ಣತೆ ಇರಬೇಕು. ನಮ್ಮ ಭಾಷೆ ಬಗ್ಗೆ ಅಭಿಮಾನ ಹೆಚ್ಚಾಗಿರಬೇಕು. ತಾಯಿ ಭಾಷೆ, ತಾಯಿ ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. 

ಸಾ.ರಾ.ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಕನ್ನಡ ಪರವಾದ ಹೋರಾಟಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಇವರ ಹೋರಾಟದ ಫಲವಾಗಿ ಕನ್ನಡ ಚಿತ್ರರಂಗದ ಅಡಿಪಾಯ ಗಟ್ಟಿ ಆಯಿತು ಎಂದು ಶ್ಲಾಘಿಸಿದರು. 

ಹಿರಿಯ ಸಾಹಿತಿ ಹಂಪನಾ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋ.ರು.ಚನ್ನಬಸಪ್ಪ, ನಾಡೋಜ ಬರಗೂರು ರಾಮಚಂದ್ರಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಹಿರಿಯ ಪತ್ರಕರ್ತರಾದ ವೆಂಕಟೇಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Monday, January 20, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷ ಸಂಭ್ರಮ

 ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ), ಬೆಂಗಳೂರು ಅರ್ಪಿಸುವ 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷದ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಗರದ ನಯನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ ಇದು14ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಇದನ್ನು ಕಾರ್ಯಕ್ರಮ ನಿರ್ವಾಹಕರು ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಪ್ರತಿಭಾ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಗೌರವ ಸೂಚಿಸುವ ಕೆಲಸವನ್ನು ಇದು ನಿಮ್ಮ ವಾಹಿನಿ ಕಲಾ ವೇದಿಕೆ ಮಾಡಿಕೊಂಡು ಬರುತ್ತಿದೆ. ಇದು ಹಾಗೇ ಮುಂದುವರಿಯಲಿ, ವೇದಿಕೆಗೆ ನನ್ನ ಸಹಕಾರ ಪ್ರೋತ್ಸಾಹ ಸಹ ಇರುತ್ತದೆ ಎಂದು ಅವರು ಹೇಳಿದರು.

ಬೆಳಿಗ್ಗೆ ಹತ್ತರಿಂದ ರಾತ್ರಿ ಎಂಟರವರೆಗೆ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು. 

ಅನ್ಮೂಲ್ ವಿಜಯ್ ಭಟ್ಕಳ್, ಡಾ. ಮೋನಿಷಾ ನವೀನ್, ಭಜರಂಗಿ ಚೇತನ್ ರಾಜ್, ಚಂದ್ರಶೇಖರ ಜಿ. , ಅಂಕಿತಾ ಜೈರಾಮ್, ಸುಕೃತಿ ಎಂ.ಎಸ್., ಸೆಲ್ವಕುಮಾರ್, ವರ್ಷಿಣಿ, ಲಿಖಿತ್ ಎನ್. ಜಾಲಿ ಜಾಲಿ ಜ್ಯಾಕ್, ಚಂದ್ರಿಕಾ ಬಿ.ವಿ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಹನ್ನೆರಡಕ್ಕೂ ಹೆಚ್ಚು ಭರತನಾಟ್ಯ, ಕೂಚುಪುಡಿ, ಕಥಕ್, ಹಿಪ್ ಹಾಪ್ ಡ್ಯಾನ್ಸ್, ವೆಸ್ಟರ್ನ್ ಡ್ಯಾನ್ಸ್, ಮೊದಲಾದ ವೈವಿದ್ಯಮಯ ಕಾರ್ಯಕ್ರಮ ನಡೆಯಿತು. 


ಇದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 


ಕಾರ್ಯಕ್ರಮದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) ಪ್ರಧಾನ ಕಾರ್ಯದರ್ಶಿ ಆಗಿರುವ ಕಿಶೋರ್ ಕುಮಾರ್ ಕೆ.ಎಸ್. ಉಪಸ್ಥಿತರಿದ್ದರು. 

Sunday, January 19, 2025

ಬಕುಲದ ಕವಿ ಸು.ರಂ. ಎಕ್ಕುಂಡಿ

 ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು  20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಬಾಲ್ಯದಲ್ಲಿ ಬಹಳ ಬಡತನ ಇದ್ದ ಕಾರಣ ಇವರಿಗೆ ವಿದ್ಯೆ ಕಲಿಯಲು ಬಹಳ ಕಷ್ಟವಾಗಿತ್ತು. ತಮ್ಮ ಐದನೇ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ಎಕ್ಕುಂಡಿಯವರು ಸವಣೂರಿನ ಶ್ರೀ ಸತ್ಯಭೋಧ ಸೇವಾಸಂಘ ನಡೆಸುತ್ತಿದ್ದ ವಾಚನಾಲಯದ ಸದಸ್ಯರ ಪುಸ್ತಕಗಳನ್ನು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಹೊತ್ತುಕೊಂಡರು. ಇದರಿಂದ ದೊರೆತ ಅಲ್ಪ ಆದಾಯದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. 


ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು.  ಇವರು ಪ್ರಧಾನವಾಗಿ ಕವಿಯಾಗಿ ಹೆಸರು ಪಡೆದವರು. ಇವರ ಕಾವ್ಯದಲ್ಲಿ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯ ಮೈವೆತ್ತಿ ನಿಂತಿದೆ. ಅಲ್ಲಿಯ ಸಮುದ್ರ, ಮುಸಲಧಾರೆ ಮಳೆ, ಹಕ್ಕಿಪಕ್ಷಿಗಳ ಕಲರವ, ಹಾಲಕ್ಕಿ ಒಕ್ಕಲಿಗರ ಶ್ರಮಜೀವನ, ತೆಂಗಿನಮರಗಳ ಸೊಬಗು ಇವರ ಕವಿತೆಗಳಲ್ಲಿ ಜೀವಂತಿಕೆ ಪಡೆದಿವೆ. 

ವಾದ ವಿವಾದಗಳಿಂದ ಸದಾ ದೂರವೇ ಇರುತ್ತಿದ್ದ ಎಕ್ಕುಂಡಿ ಮಾನವೀಯ ಅಂತಃಕರಣವನ್ನೇ ತಮ್ಮ ಕಾವ್ಯದಲ್ಲೂ ಉಸಿರಾಡಿದವರು. ಹೊಗಳಿಕೆ ತೆಗಳಿಕೆಗಳಿಗೆ ನಿರ್ಲಿಪ್ತ ಭಾವ ಅವರದು. ಇವರ ಕಾವ್ಯಗಳಲ್ಲಿ ಕಥನ ಕವನಗಳ, ಬರಹಗಳಲ್ಲಿ ಮಾಧ್ವ ನಿಲುವು, ಮಾರ್ಕ್ಸ್‌ವಾದಿ ಧೋರಣೆ ಇವೆರಡೂ ಕಂಡುಬರುತ್ತವೆ ಎಂಬ ಮಾತಿದೆ. ಬದುಕಿನ ಆಚರಣೆಗೆ ನಂಬಿದ ಸಿದ್ಧಾಂತಗಳಲ್ಲಿ, ಮನುಕುಲದ ಏಳ್ಗೆಗಾಗಿ ಕ್ರೌರ್ಯವನ್ನು ನಿರಾಕರಿಸುವ ಮಾನವೀಯ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಅವರು ಅನುಸರಿಸಿದ ರೀತಿ ಅದು. ಪುತಿನ ಅವರು ಬಣ್ಣಿಸಿದಂತೆ ಎಕ್ಕುಂಡಿ ಯವರು "ಸಹಜ ಕವಿ". ಅವರ ಕಾವ್ಯದ ಕೇಂದ್ರಬಿಂದು ಮನುಷ್ಯನೇ. ಇವರ ಕಾವ್ಯದಲ್ಲಿ ಜನಸಾಮಾನ್ಯರು ಅತಿ ಸಹಜವಾಗಿ ಮೂಡಿ ಬಂದರು. ಎಕ್ಕುಂಡಿ ಯವರ " ಮಿಥಿಲೆ" ಕವಿತೆ ಎಲ್ಲರ ಮೈಮನಸ್ಸನ್ನು ಆವರಿಸಿಕೊಳ್ಳುವಂತದ್ದು.

ಎಕ್ಕುಂಡಿ ಅವರ ಕಾವ್ಯದ ಕೇಂದ್ರ ಮನುಷ್ಯನೇ ಆಗಿರುವುದಕ್ಕೂ, ಅವರ ಪ್ರಧಾನ ಕಾವ್ಯಪ್ರಕಾರ ಕಥನಕವನವೇ ಆಗಿರುವುದಕ್ಕೂ ಕಾರಣಗಳು ಸ್ಪಷ್ಟವಾಗಿಯೇ ಇವೆ.  ‘ಬೆಳ್ಳಕ್ಕಿಗಳು’ ಸಂಕಲನದ ಕೆಲವು ರಚನೆಗಳು ಕೊಂಚ ಭಿನ್ನವಾದರೂ ಒಟ್ಟಾರೆ ಎಕ್ಕುಂಡಿ ಕಾವ್ಯಪ್ರಪಂಚ ಕಥನಕವನಗಳಿಂದಲೇ ಸಮೃದ್ಧವಾಗಿವೆ.  ‘ಕೊರಗು’ ಎಂಬ  ಕವನದಲ್ಲಿ ಏನಿಲ್ಲ ಎಂದು ಹೇಳುವಾಗ, ‘ಬುತ್ತಿ’ ಕವನದಲ್ಲಿ ಏನಾಗಬೇಕು ಎಂದು ಒತ್ತಿ ಹೇಳುವಾಗ, ‘ಬೆಳ್ಳಕ್ಕಿಗಳು’ ಕವನದಲ್ಲಿ ಭರವಸೆಯ ಹಾಡನ್ನು ಹಾಡುವಾಗ, ‘ಶರಣು’ ಕವನದಲ್ಲಿ ತನ್ಮಯತೆಯಿಂದ ಪ್ರಾರ್ಥಿಸುವಾಗ ಕೂಡ ಮನುಷ್ಯಾವಸ್ಥೆಯ ನೆಲೆಗಳಿಂದ ಎಕ್ಕುಂಡಿ ಕವನಗಳು ಬಿಡುಗಡೆ ಹೊಂದಿವೆ ಅನ್ನಿಸುವುದಿಲ್ಲ.  ಪ್ರಕೃತಿಯನ್ನು ಕುರಿತು ಹಾಡುವಾಗಲೂ ಕವಿ, ಮನುಷ್ಯ ಸಮಾಜವು ಪ್ರಕೃತಿಯಿಂದ ಪಡೆಯಬಹುದಾದ ಜೀವನೋತ್ಸಾಹದ ಕಡೆಗೆ ಒಂದು ಕಣ್ಣಿಟ್ಟಿರುವುದು ಕಾಣುತ್ತದೆ’  (-ಟಿ. ಪಿ. ಅಶೋಕ) 

ಎಕ್ಕುಂಡಿಯವರೇ ಬಣ್ಣಿಸುವ ಹಾಗೆ – ಅವರ ಕಾವ್ಯ –  ‘ಶಬರಿ, ಸುಧಾಮ, ಗಜೇಂದ್ರ, ಕುಬ್ಜೆ ಮತ್ತು ಪುರಂದರದಾಸರ ಭಕ್ತಿ ಮತ್ತು ಪ್ರೇಮಗಳನ್ನು ಕುರಿತು ಬಣ್ಣಿಸುತ್ತದೆ.   ಏಸು, ಪ್ರವಾದಿ ಹಾಗೂ ದೇವರ ದಾಸೀಮಯ್ಯರಂಥ ಆತ್ಮದ ಒಕ್ಕಲಿಗರನ್ನು ಬಣ್ಣಿಸುತ್ತದೆ’.

ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ರಶಿಯನ್ ಕಾದಂಬರಿಗಳು


ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಂದ ಪ್ರಶಸ್ತಿ ಪುರಸ್ಕಾರಗಳು- ಲೆನಿನ್ನರ ನೆನಪಿಗೆ ಎನ್ನುವ ಕೃತಿಗೆ 1970ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ. "ಮತ್ಸ್ಯಗಂಧಿ" ಕವನ ಸಂಕಲನಕ್ಕೆ 1975 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ. ಬೆಳ್ಳಕ್ಕಿಗಳು ಹಸ್ತಪ್ರತಿಗೆ 1982 ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ. ಬಕುಲದ ಹೂವುಗಳು" ಎಂಬ ಕೃತಿಗೆ 1992ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಮಸಣದ ಹೂವು" ಚಿತ್ರಕ್ಕಾಗಿ ಇವರ ಸಾಹಿತ್ಯ ಗೀತೆ ಬಳಸಿಕೊಳ್ಳಲಾಗಿತ್ತು. ಸಾಹಿತ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ ಸು.ರಂ. ಎಕ್ಕುಡಿಯವರು 20-08-1995ರಂದು ನಿಧನರಾದರು. 


ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕವನ ಸಂಕಲನವಾದ ”ಬಕುಲದ ಹೂಗಳು’  ಎಂಬ ಕೃತಿಗೆ 1992  ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.  ಜನರ ನೋವು ನಲಿವುಗಳನ್ನೇ ಕಾವ್ಯವಾಗಿಸಿಕೊಂಡ ಸರಳ ಕವಿ ಸು. ರಂ ಎಕ್ಕುಂಡಿಯವರು. ಇವರ ಕವಿತೆಗಳ ಮೂಲ ಜನಸಾಮಾನ್ಯರೇ ಆದ್ದರಿಂದ ಬಡವರ, ದುಡಿವವರ ಪರ ಬರೆದ ಕವಿ ಎಕ್ಕುಂಡಿಯವರು.

ಪ್ರಸ್ತುತ ಬಕುಲದ ಹೂಗಳು ಕವನ ಸಂಕಲದಲ್ಲಿ 35  ಕವಿತೆಗಳಿವೆ. ನಿರ್ದಿಷ್ಟ ನಾಮರೂಪಧಾರಿಯಾದ ವ್ಯಕ್ತಿಗಳು ಒಂದು ನಿಶ್ಚಿತ ಜೀವನ ಸಂದರ್ಭಕ್ಕೆ ಸ್ಪಂದಿಸುವ ವರ್ಣನಾತ್ಮಕ ಕಥನ ಈ ಸಂಗ್ರಹದುದ್ದಕ್ಕೂ ಕಂಡು ಬರುತ್ತದೆ. 

ಪುರಾಣೀಕರಣವು ಎಕ್ಕುಂಡಿಯವರ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಕೊಳದ ಗೌರಿ, ಇಬ್ಬರು ರೈತರು, ಬಕುಲದ ಹೂಗಳು, ಈ ಸಂಗ್ರಹದ ಮುಖ್ಯ ಕವಿತೆಗಳಾಗಿವೆ. 

Monday, January 13, 2025

'ಹಳದಿ ಚೇಳಿನ ಒಡೆಯ ಸುದರ್ಶನ ದೇಸಾಯಿ

- ರಾಘವೇಂದ್ರ ಅಡಿಗ ಎಚ್ಚೆನ್. 

ಸುದರ್ಶನ ದೇಸಾಯಿರವರು ಕನ್ನಡದ ಪತ್ತೆದಾರಿ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಹೆಸರನ್ನು ಸಂಪಾದಿಸಿದವರು. ಸುದರ್ಶನ ದೇಸಾಯಿ ಅವರು. ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯಲ್ಲಿನ  ರೋಚಕವಾದ,ಕುತೂಹಲಕಾರಿ ಕಥಾ ವಸ್ತುಗಳು ಓದುಗರನ್ನು ಬಹಳವಾಗಿಯೇ ಆಕರ್ಷಿಸಿದ್ದವು. ಕನ್ನಡದ ಪತ್ತೇದಾರಿ ಲೇಖಕರನ್ನು ಒಟ್ಟುಗೂಡಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಪ್ರಥಮ ಪತ್ತೇದಾರಿ ಸಾಹಿತ್ಯ ಸಮ್ಮೇಳನವನ್ನು ಇವರು ನೆರವೇರಿಸಿದ್ದರು. ಇವರ ಹಳದಿ ಚೇಳು,ಕೆಂಪು ಜೇಡ,ಅಗ್ನಿ ಪರ್ವತ, ಕೆರಳಿದ ಸರ್ಪ, ವಿಚಿತ್ರ ಅಪರಾಧಿ ಮುಂತಾದ ಕೃತಿಗಳು ಸಾಕಷ್ಟು ಜನಪ್ರಿಯತೆ ಗಳಿಸಿದವು. ಇವುಗಳಲ್ಲಿ  'ಹಳದಿ ಚೇಳು' ಕಾದಂಬರಿಯಂತೂ  ಅಪಾರ ಜನಪ್ರಿಯತೆ ಗಳಿಸಿತ್ತು. ಹೀಗಾಗಿ ಅವರು  ತಮ್ಮ ನಿವಾಸಕ್ಕೆ ಅವರು 'ಹಳದಿ ಚೇಳು' ಎಂದೇ ಹೆಸರಿಟ್ಟಿದ್ದರು. 




1979ರಲ್ಲಿ ಬರೆದ ಮನೋವೈಜ್ಞಾನಿಕ ಕಾದಂಬರಿ ‘ತಿರುವು’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡನಂತರ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರವರು ಇದೇ ಕಾದಂಬರಿಯನ್ನು ಆಧರಿಸಿ ‘ಮಾನಸ ಸರೋವರ’ ಎಂಬ ಹೆಸರಿನಿಂದ ಚಿತ್ರವನ್ನು ನಿರ್ದೇಶಿಸಿದರು. ಇವರ ಮೊದಲ ಸಾಮಾಜಿಕ ಕಾದಂಬರಿ ‘ಹಾಲಿನ ಕಡಲು ಜೀನಿನ ಒಡಲು’. ನಂತರ ‘ನೀರ ಮೇಲಿನ ಹೆಜ್ಜೆ’, ‘ಸಂಜೆ ಮಲ್ಲಿಗೆ’, ‘ಅಮರದೀಪ, ‘ಸೇವಕ’, ‘ಎಂಟೆದೆ ಬಂಟ’(ಚಲನಚಿತ್ರವಾಗಿದೆ) , ‘ಅಗ್ನಿ ಪರ್ವತ’ ಮುಂತಾದ 20ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ದೇಸಾಯರ ಜನಪ್ರಿಯ ಕಾದಂಬರಿಗಳಲ್ಲಿ ‘ಶರವೇಗದ ಸರದಾರ’ವೂ ಒಂದು. ಕುಮಾರ ಬಂಗಾರಪ್ಪ ಅವರ ನಾಯಕತ್ವದಲ್ಲಿ ಅದು ಚಲನಚಿತ್ರವಾಯಿತು ( ನಟ ಸಿ. ಆರ್. ಸಿಂಹ ಅದರ ನಿರ್ದೇಶಕ.)  ಅವರ ನೂರನೇ ಕೃತಿ  ‘ಸಾಂವಿ'.  ಪತ್ತೇದಾರಿ ಸಾಹಿತ್ಯ ಕುರಿತು ("ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ" ) ನೂರು ವರ್ಷದ ಇತಿಹಾಸ ಬರೆದಿದ್ದಾರೆ. ಇದೊಂದು ಸಂಶೋಧನಾತ್ಮಕ ಆಕರ ಗ್ರಂಥವಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಇವರಿಗೆ "'ಆದರ್ಶ ಶಿಕ್ಷಕ' ಎಂದು ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಅಲ್ಲದೆ ರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಬಂದಿತ್ತು. ಎರಡು ಬಾರಿ ಪತ್ತೇದಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದಇವರ ಮನೆ 'ಹಳದಿ ಚೇಳು' ವಿನ ಸುತ್ತಮುತ್ತಲಿನ ಪ್ರದೇಶಕ್ಕೆ ಧಾರವಾಡ ನಗರಪಾಲಿಕೆಯು "ಸುದರ್ಶನ ದೇಸಾಯಿ ಕಾಲನಿ" ಎಂದು ನಾಮಕರಣ ಮಾಡಿದೆ.


ಇಂತಹಾ ಲೇಖಕರ ಹಳದಿ ಚೇಳು ಕೃತಿ ಇಂದಿಗೂ ಬಹು ವಿಶಿಷ್ಟವಾಗಿ ಓದಿಸಿಕೊಳ್ಳುವ ಪುಸ್ತಕವೆಂದರೆ ತಪ್ಪಲ್ಲ. ಈ ಮೊದಲೇ ಹೇಳಿದಂತೆ ಲೇಖಕರಿಗೆ ಬಹಳ ಪ್ರಸಿದ್ಧಿ ತಂದು ಕೊಟ್ಟ ಪತ್ತೇದಾರಿ ಕೃತಿಯಿದು. ಇದನ್ನು ಜೇಮ್ಸ್ ಬಾಂಡ್ ಶೈಲಿಯ ಚಲನಚಿತ್ರವಾಗಿ ಸಹ ನಿರ್ಮಾಣ ಮಾಡುವಷ್ಟು ಸಾಹಸ, ಪ್ರಣಯ, ರೋಚಕತೆ, ದೇಶಭಕ್ತಿ, ಭಾವುಕತೆ‌ ಹಾಗೂ ರೋಮಾಂಚಕ ಅಂಶಗಳನ್ನು ಒಳಗೊಂಡಿದೆ. ಅತ್ಯಂತ ರೋಚಕತೆ ಜೊತೆಗೆ ರಕ್ತಪಾತದಿಂದ ಕೂಡಿದ ಕಥಾವಸ್ತುವಿದು. ಓದುಗರು ಊಹೆ ಮಾಡಲೂ ಸಾಧ್ಯವಿರದ ತಿರುವುಗಳಿವೆ. ಒಂದಷ್ಟು ಕಾಮಭರಿತ ಸನ್ನಿವೇಶಗಳನ್ನು ತುರುಕಲಾಗಿದೆ ಎನ್ನಿಸಿತು. ಹೇಮಂತನ ಪ್ರಳಯ ರುದ್ರನಂತಹ ವರ್ತನೆ, ಶತ್ರುಗಳನ್ನು ಶಿಕ್ಷಿಸಲು ಅವನು ಬಳಸುವ ವಿವಿಧ ಕ್ರೂರ ವಿಧಾನಗಳು, ಗುಪ್ತಚರ ಏಜೆಂಟರು ಬಳಸುವ ಹಲವು ಬಗೆಯ ಸಲಕರಣೆಗಳು, ಮೃತ್ಯು ಕಣ್ಣೆದುರು ತಾಂಡವವಾಡುತ್ತಿದ್ದರೂ ಅಂಜದ ಆ ನಡೆ, ಅಲ್ಲದೇ ಪ್ರತೀ ಬಾರಿಯೂ ಸಾವನ್ನು ಗೆದ್ದು ಬಂದು ಶತ್ರುಗಳಿಂದಲೇ ಪ್ರಶಂಸೆಗೆ ಒಳಗಾಗುವ ಆ ಅಸೀಮ ಧೈರ್ಯ ಹಾಗೂ ದೇಶಭಕ್ತಿಯ ಕಿಚ್ಚು... ಎಲ್ಲವೂ ಓದುಗರನ್ನು ಬಿಟ್ಟೂ ಬಿಡದೇ ಓದಿಸಿಕೊಂಡು ಹೋಗುತ್ತದೆ. 

ಇನ್ನು ಇವರದೇ ಕಾದಂಬರಿ ಆಧರಿಸಿ ಅನೇಕ ಚಲನಚಿತ್ರಗಳೂ ಬಂದಿವೆ. ಅವುಗಳಲ್ಲಿ ಕೆಲವು ಮೇಲೆ ಹೆಸರಿಸಲಾಗಿದೆ. ಮತ್ತು ಈ ಕೆಳಗೆ ಅವುಗಳ ಸಂಪೂರ್ಣ ಪಟ್ಟಿ ಇದೆ- 

ಶ್ರೀನಾಥ್, ಪದ್ಮಾವಾಸಂತಿ, ರಾಮಕೃಷ್ಣ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಮಾನಸ ಸರೋವರ"

ಕುಮಾರ್ ಗೋವಿಂದ್, ಸಂಗೀತಾ ಅಭಿನಯದ  ಗುರುಪ್ರಸಾದ್ ನಿರ್ದೇಶನದ ಮೃತ್ಯು ಬಂಧನ

ಕುಮಾರ್ ಬಂಗಾರಪ್ಪ, ಯಮುನಾ ಅಭಿನಯದ ಎಚ್.ಎನ್. ಶಂಕರ್ ನಿರ್ದೇಶನದ ಕೆರಳಿದ ಸರ್ಪ
ಅಂಬರೀಶ್, ರಜನಿ, ವಜ್ರಮುನಿ ಅಭಿನಯದ ಡಿ. ರಾಜೇಂದ್ರ ಬಾಬು ನಿರ್ದೇಶನದ ಎಂಟೆದೆ ಬಂಟ
ಕುಮಾರ್ ಬಂಗಾರಪ್ಪ, ಅಶ್ವಿನಿ ಭವೆ ಅಭಿನಯದ ಕೆ.ವಿ. ಜಯರಾಂ ನಿರ್ದೇಶನದ ಶರವೇಗದ ಸರದಾರ
ಅನಂತ್ ನಾಗ್, ಗೀತಾ ಅಭಿನಯದ ಕೆ.ವಿ. ಜಯರಾಂ ನಿರ್ದೇಶನದ ಅರುಣ ರಾಗ 







Sunday, January 12, 2025

ಯಾವುದೇ ಕಾರ್ಯ ಯಾಂತ್ರಿಕವಾದರೆ ಅಲ್ಲಿ ಹೊಸ ವಿಚಾರಗಳು ಮೂಡಲು ಆಸ್ಪದವಿಲ್ಲ: ಎಸ್.ಎಲ್. ಭೈರಪ್ಪ

ಯಾವುದೇ ಕಾರ್ಯ ಯಾಂತ್ರಿಕವಾದರೆ ಅಲ್ಲಿ ಹೊಸ ವಿಚಾರಗಳು ಮೂಡಲು ಆಸ್ಪದವಿರುವುದಿಲ್ಲ ಅಂತಹ ಕ್ರಿಯೆಗಳಿಂದ ಸಮಾಜಕ್ಕೆ ಹೊಸ ತೇನನ್ನು ನೀಡಲಾಗುವುದಿಲ್ಲ ಸಾಹಿತ್ಯೋತ್ಸವವನ್ನು ವರ್ಷ ವರ್ಷ ನಡೆಸಿಯೂ ಹೊಸತನವನ್ನು ಕಾಪಾಡಿಕೊಂಡು ಗುರಿಯನ್ನು ತಲುಪುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಹೇಳಿದ್ದಾರೆ. ಏಳನೇ ವರ್ಷದ ಮಂಗಳುರು ಸಾಹಿತ್ಯೋತ್ಸವ (ಲಿಟ್ ಫೆಸ್ಟ್) ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.=


ಮಂಗಳೂರು ಲಿಟ್ ಫೆಸ್ಟ್ ತನ್ನ ಏಳನೆಯ ಆವೃತ್ತಿಯನ್ನು ಆಚರಿಸುತ್ತಿರುವುದು ನನಗೆ ಬಹಳ ಸಂತೋಷ ನೀಡಿದೆ ವರ್ಷ 2017 ರಲ್ಲಿ ಮೊದಲ ಬಾರಿ ನಾನು ಭಾಗವಹಿಸಿದ್ದೆ ಮಂಗಳೂರಿನವರು ಏನನ್ನು ಮಾಡಿದರು ಅದರಲ್ಲಿ ಒಂದು ಅಚ್ಚುಕಟ್ಟು ದೂರದೃಷ್ಟಿ ಇದ್ದೆ ಇರುತ್ತೆ ಈ ಕಾರಣಕ್ಕೆ ಹೋಟೆಲ್ ಉದ್ಯಮದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಎಂದರು.


ಈ ಭೂಮಿ ಕನ್ನಡ ನಾಡಿಗೆ ಅನೇಕ ವೈದ್ಯರು ಶಿಕ್ಷಕರನ್ನು ಮಾತ್ರವಲ್ಲ ಪ್ರಾಜ್ಞ ಸಾಹಿತ್ಯಗಳನ್ನು ನೀಡಿ ನೀಡಿದೆ ಶಿವರಾಮ ಕಾರಂತರು ರಾಷ್ಟ್ರಕವಿ ಗೋವಿಂದ ಪೈ ಪಂಜೆ ಮಂಗೇಶ್ ರಾಯರು ಸೇಡಿಯಾಪು ಕೃಷ್ಣ ಭಟ್ಟರು, ವ್ಯಾಸರಾಯ ಬಲ್ಲಾಳರು ಯಶವಂತ ಚಿತ್ತಾಲರು ಹೀಗೆ ಹೆಸರುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ ಶಿವರಾಮ ಕಾರಂತರಂತೂ ತುರ್ತು ಪರಿಸ್ಥಿತಿಯಲ್ಲಿ ತಮ್ಮ ರಾಷ್ಟ್ರ ಪ್ರಶಸ್ತಿ ಪದ್ಮಭೂಷಣವನ್ನು ಹಿಂತಿರುಗಿಸುವುದನ್ನು ಮರೆಯಲಾದೀತೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾಗಲೂ ರಾಷ್ಟ್ರದ ಹಿತ ಐಕ್ಯಗಳಿಗೆ ಪ್ರಾಧಾನ್ಯ ನೀಡಿದವರು ಕಾರಂತರು  ಅಂತಹ ಹಿನ್ನೆಲೆಯಲ್ಲಿ ಬಂದ ನೀವು ಸಾಹಿತ್ಯೋತ್ಸವಕ್ಕೆ ಒಂದು ಗುರಿಯನ್ನು ಇರಿಸಿಕೊಂಡು ಸಾಗುತ್ತಿದ್ದೀರಿ ಎಂಬುದು ನನ್ನ ಭಾವನೆ ಎಂದು ಭೈರಪ್ಪ ಹೇಳಿದ್ದಾರೆ. 


ಇದನ್ನು ನಾನು ಕಳೆದ ಬಾರಿಯೇ ವ್ಯಕ್ತಪಡಿಸಿದ್ದೆ ಈಗ ಪ್ರತಿ ವರ್ಷವೂ ಸ್ವಲ್ಪ ಸ್ವಲ್ಪವಾಗಿ ಗುರಿಯನ್ನು ತಲುಪುತ್ತಿದ್ದೀರಿ ಎಂದು ಭಾವಿಸಿದ್ದೇನೆ ವರ್ಷಕ್ಕೊಮ್ಮೆ ದೇಶದ ಮೂಲೆ ಮೂಲೆಗಳಿಂದ ಪ್ರತಿಷ್ಠಿತರನ್ನು ಸಾಧಕರನ್ನು ಕರೆಸಿ ಅವರಿಗೆ ಹಲವು ವೇದಿಕೆಗಳನ್ನು ಒದಗಿಸಿ ವಿಚಾರ ಸಂಕೀರ್ಣಗಳನ್ನು ಏರ್ಪಡಿಸುತ್ತಿದ್ದೀರಿ ಇದು ಸಾಹಸ ನಿಜ ಆದರೆ ಇಲ್ಲಿ ಚರ್ಚಿಸಲ್ಪಡುತ್ತಿರುವ ವಿಚಾರಗಳು ತಲುಪಬೇಕಾಗದವರನ್ನು ತಲುಪುತ್ತಿವೆಯೇ ನೀವು ನಿರೀಕ್ಷಿಸಿದ ಪರಿಣಾಮ ಆಗುತ್ತಿದೆಯೇ ಎಂಬ ಆತ್ಮವಿಶ್ವಾಸವು ಬಹಳ ಮುಖ್ಯ ಅದಿಲ್ಲವಾದರೆ ವರ್ಷಕ್ಕೊಂದಾವರ್ತಿ ನಡೆಸಲೇಬೇಕಾದ ಕಾರ್ಯಕ್ರಮವಾಗಿ ಇದು ಯಾಂತ್ರಿಕತೆಗೆ ತಿರುಗುತ್ತದೆ ಯಾವುದೇ ಕಾರ್ಯ ಯಾಂತ್ರಿಕವಾದರೆ ಅಲ್ಲಿ ಹೊಸ ವಿಚಾರಗಳು ಮೂಡಲು ಆಸ್ಪದವಿರುವುದಿಲ್ಲ ಅಂತಹ ಕ್ರಿಯೆಗಳಿಂದ ಸಮಾಜಕ್ಕೆ ಹೊಸ ತೇನನ್ನು ನೀಡಲಾಗುವುದಿಲ್ಲ ಸಾಹಿತ್ಯೋತ್ಸವವನ್ನು ವರ್ಷ ವರ್ಷ ನಡೆಸಿಯೂ ಹೊಸತನವನ್ನು ಕಾಪಾಡಿಕೊಂಡು ಗುರಿಯನ್ನು ತಲುಪುವ ಹೊಣೆಗಾರಿಕೆ ನಿಮ್ಮ ಮೇಲಿದೆ ಅದನ್ನು ತಲುಪುತ್ತಿರುವುದೇ ತಲುಪುತ್ತಿರೆ ಎಂಬ ಭರವಸೆ ನನಗಿದೆ ಆದ್ದರಿಂದಲೇ ಈ ಒಳಸಿನಲ್ಲಿ ಪುನಃ ನಿಮ್ಮನ್ನೆಲ್ಲ ನೋಡಲು ಬಂದಿದ್ದೇನೆ ಈ ಉತ್ಸವ ಈ ಉತ್ಸವ ಹೊಸ ತಿಳಿವು ಪ್ರೇರಣೆಯಾಗಲಿ ಮುಖ್ಯವಾಗಿ ಯುವ ಮನಸ್ಸುಗಳನ್ನು ರಾಷ್ಟ್ರ ಹಿತದ ಚಿಂತನೆಗೆ ಹೆಚ್ಚಲಿ ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. 

ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ. ರವಿ ಮುಖ್ಯ ಅತಿಥಿಯಾಗಿದ್ದರು. ಭಾರತ್ ಫೌಂಡೇಷನ್ ಟ್ರಸ್ಟ್ ಪ್ರತಿನಿಧಿ ಸುನೀಲ್ ಕುಲಕರ್ಣಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. 

Friday, January 10, 2025

ವೈಕುಂಠ ಏಕಾದಶಿ, ಉಪವಾಸ ಮತ್ತು ಧಾನ್ಯಗಳನ್ನು ತಿನ್ನದಿರಲು ಕಾರಣವೇನು?

ವೈಕುಂಠ ಏಕಾದಶಿಯು ವೈದಿಕ ಪಂಚಾಂಗದ ಪ್ರಕಾರ ಧನುರ್ಮಾಸದಲ್ಲಿ (ಸೂರ್ಯನು ಧನು ರಾಶಿಯಲ್ಲಿರುವಾಗ) ಸಂಭವಿಸುವ ಶುಕ್ಲ ಪಕ್ಷ ಏಕಾದಶಿಯಾಗಿದೆ.ಇದು ಇಂಗ್ಲಿಷ್ ಕ್ಯಾಲೆಂಡರ್ನಲ್ಲಿ ಡಿಸೆಂಬರ್ ಮಧ್ಯ ಭಾಗದಿಂದ ಜನವರಿ ಮಧ್ಯ ಬಾಗದವರೆಗೆ ಇರುತ್ತದೆ. ಚಂದ್ರನ ತಿಂಗಳುಗಳ ಪೈಕಿ ಮಾರ್ಗಶೀರ ಶುಕ್ಲ ಪಕ್ಷ ಏಕಾದಸಿಯನ್ನು 'ಮೋಕ್ಷದಾ ಏಕಾದಸಿ' ಎಂದು ಕರೆಯಲಾಗುತ್ತದೆ.ವೈಕುಂಠ ಏಕಾದಶಿಯ ಉಪವಾಸವು ಆ ವರ್ಷದ ಉಳಿದ 23 ಏಕಾದಶಿಗಳ ಉಪವಾಸಕ್ಕೆ ಸಮಾನವಾಗಿದೆ ಎಂದು ವಿಷ್ಣು ಪುರಾಣವು ಹೇಳುತ್ತದೆ.. 

ಪದ್ಮ ಪುರಾಣದಲ್ಲಿ ವೈಕುಂಠ ಏಕಾದಶಿಯ ಕಥೆ

ದೇವತೆಗಳಿಗೆ 'ಮುರನ್' ಎಂಬ ರಾಕ್ಷಸನ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಾಗಲಿಲ್ಲ, ಅವರು ಶಿವನ ಬಳಿಗೆ ಹೋದರು, ಶಿವನು ಅವರನ್ನು ವಿಷ್ಣುವಿನ ಬಳಿಗೆ ಕರೆದೊಯ್ದನು. ವಿಷ್ಣು ಮತ್ತು ರಾಕ್ಷಸನ ನಡುವೆ ಯುದ್ಧವು ನಡೆಯಿತು ಮತ್ತು ಮುರನ್ ನನ್ನು ಕೊಲ್ಲಲು ಹೊಸ ಶಸ್ತ್ರಾಸ್ತ್ರದ ಅಗತ್ಯವಿದೆ ಎಂದು ವಿಷ್ಣು ಅರಿತುಕೊಂಡನು. ವಿಶ್ರಾಂತಿ ಪಡೆಯಲು ಮತ್ತು ಹೊಸ ಶಸ್ತ್ರಾಸ್ತ್ರವನ್ನು ಸೃಷ್ಟಿಸಲು, ವಿಷ್ಣು ಬದರಿಕಾಶ್ರಮದ (ಬದರಿನಾಥ್) ಹೈಮಾವತಿ ದೇವಿಯ ಹೆಸರಿನ ಗುಹೆಗೆ ವಿಷ್ಣು ಆಗಮಿಸಿದರು.. ಮುರನ್ ಮಲಗಿದ್ದ ವಿಷ್ಣುವನ್ನು ಕೊಲ್ಲಲು ಪ್ರಯತ್ನಿಸಿದಾಗ, ವಿಷ್ಣುವಿನಿಂದ ಹೊರಹೊಮ್ಮಿದ ಸ್ತ್ರೀ ಶಕ್ತಿಯು ತನ್ನ ನೋಟದಿಂದ ಮುರನ್ ನನ್ನ್ನು ಸುಟ್ಟು ಬೂದಿಯಾಗಿಸಿತು. ಪ್ರಸನ್ನನಾದ ವಿಷ್ಣು, ದೇವಿಯನ್ನು 'ಏಕಾದಶಿ' ಎಂದು ಕರೆದನು (ಆ ದಿನವೂ ವೈದಿಕ ಪಂಚಾಂಗದಲ್ಲಿ ಚಂದ್ರನ  11 ನೇ ದಿನವಾಗಿತ್ತು) ಮತ್ತು ವರವನ್ನು ಬೇಡಿಕೊಳ್ಳುವಂತೆ ಕೇಳಿದನು.  ಏಕಾದಶಿ, ಆ ದಿನದಂದು ಉಪವಾಸವನ್ನು ಆಚರಿಸುವ ಜನರು ತಮ್ಮ ಪಾಪಗಳಿಂದ ಮುಕ್ತರಾಗಬೇಕೆಂದು ವಿಷ್ಣುವನ್ನು ಬೇಡಿಕೊಂಡಳು. ಆ ದಿನ ಉಪವಾಸವನ್ನು ಆಚರಿಸಿ ಏಕಾದಶಿಯನ್ನು ಪೂಜಿಸುವ ಜನರು ವೈಕುಂಠವನ್ನು ಪಡೆಯುತ್ತಾರೆ ಎಂದು ವಿಷ್ಣು ಘೋಷಿಸಿದರು. ಆ ರೀತಿಯಲ್ಲಿ, ಮೊದಲ ಏಕಾದಶಿ, ಅದು ಧನುರ್ಮಾಸ ಶುಕ್ಲ ಪಕ್ಷ ಏಕಾದಶಿ ಆಗಿತ್ತು. 

ಭಗವಾನ್ ವಿಷ್ಣುವು ತನ್ನ ವಿರುದ್ಧ ಇಬ್ಬರು ರಾಕ್ಷಸರು ಹೋರಾಟ ನಡೆಸುತ್ತಾರೆ ಎನ್ನುವುದು ತಿಳಿದೂ  ವೈಕುಂಠದ (ತನ್ನ ವಾಸಸ್ಥಾನ) ದ್ವಾರವನ್ನು ತೆರೆದನು ಎಂದು ವಿಷ್ಣು ಪುರಾಣವು ಹೇಳುತ್ತದೆ. ಯಾರು ತಮ್ಮ ಕಥೆಯನ್ನು ಕೇಳುತ್ತಾರೋ ಮತ್ತು ವೈಕುಂಠ ದ್ವಾರ ಎಂದು ಕರೆಯಲ್ಪಡುವ ವಿಷ್ಣುವಿನ ಮನೆಯ ಬಾಗಿಲಿನಿಂದ ಹೊರಬರುವುದನ್ನು ನೋಡುತ್ತಾರೋ ಅವರು ವೈಕುಂಠವನ್ನು ಸಹ ತಲುಪುತ್ತಾರೆ ಎಂಬ ವರವನ್ನೂ ಏಕಾದಶಿಗೆ ವಿಷ್ಣು ಕರುಣಿಸಿದನು. . ಈ ದಿನದಂದು ವಿಷ್ಣು ದೇವಾಲಯಗಳಲ್ಲಿ ಭಕ್ತರಿಗೆ ವೈಕುಂಠ ದ್ವಾರದ ರೀತಿಯ ಬಾಗಿಲಿನ ರಚನೆಯನ್ನು ಮಾಡಲಾಗುತ್ತದೆ.


ರಾಕ್ಷಸ ಮುರನ್ ಜನರಲ್ಲಿರುವ ರಾಜಸಿಕ ಮತ್ತು ತಾಮಸಿಕ ಗುಣಗಳನ್ನು ಸೂಚಿಸುತ್ತದೆ, ಇದು ಕಾಮ, ಭಾವೋದ್ರೇಕ, ಜಡತ್ವ, ದುರಹಂಕಾರ ಇತ್ಯಾದಿಗಳಿಗೆ ಕಾರಣವಾಗಿದೆ. ಈ ಪ್ರವೃತ್ತಿಗಳನ್ನು ಜಯಿಸಿದಾಗ, ಮೋಕ್ಷವನ್ನು, ಸ್ವಯಂ ವಿಮೋಚನೆ ಅಥವಾ ಸಾಕ್ಷಾತ್ಕಾರವನ್ನು ಪಡೆಯಲು ಅನಿವಾರ್ಯವಾದ ಮನಸ್ಸಿನ ಶುದ್ಧತೆ, ಸತ್ವವನ್ನು ಪಡೆಯುತ್ತಾನೆ. ಆತ್ಮವನ್ನು ಶುದ್ಧ ಪ್ರಜ್ಞೆ ಎಂದು ಅರಿತುಕೊಳ್ಳಲು, ಮನಸ್ಸಿನ ಶುದ್ಧತೆಯ ಅಗತ್ಯವಿದೆ. ಕೆಲವು ಆಹಾರಗಳ ಸೇವನೆಯಿಂದ ಉಂಟಾಗಬಹುದಾದ ಪ್ರವೃತ್ತಿಗಳನ್ನು ದೂರವಿಡಲು ಉಪವಾಸವು ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಎಚ್ಚರವಾಗಿರುವುದು (ಜಾಗರಣೆ) ಅರಿವಿನ ಸಂಕೇತವಾಗಿದೆ, ಅಥವಾ ಮನಸ್ಸಿನ ವಿಷಯಗಳ ಬಗ್ಗೆ ಜಾಗರೂಕರಾಗಿರುವುದು. ಮನಸ್ಸನ್ನು ನೋಡಿದಾಗ ಅದು ನಿಶ್ಚಲವಾಗುತ್ತದೆ. ನಿಶ್ಚಲತೆಯಲ್ಲಿ ನೆಲೆಗೊಳ್ಳುವುದು ಎಂದರೆ ಮನಸ್ಸನ್ನು ತನ್ನೊಂದಿಗೆ ವಿಲೀನಗೊಳಿಸುವ ಮೂಲಕ ಪಡೆದ ಸ್ವಾತಂತ್ರ್ಯ ಅಥವಾ ಶಾಂತಿಯನ್ನು ಸಾಧಿಸುವುದು. ಇದು ಶ್ರಮದಾಯಕ ಉಪವಾಸ ಮತ್ತು ಜಾಗರಣೆಯ ನಂತರ ವಿಷ್ಣುವಿನ ಕಡೆಗೆ ಮನಸ್ಸು ಸ್ವಯಂಚಾಲಿತವಾಗಿ ಲೀನವಾಗುವ ಸಂಕೇತವಾಗಿದೆ.

ಮುರನ್ ನೆಲೆಸಿರುವ  ಕಾರಣ ಅಕ್ಕಿ ಅಥವಾ ಇತರ ಯಾವುದೇ ಧಾನ್ಯವನ್ನು ನಿಷೇಧಿಸಲಾಗಿದೆ ಎಂಬ ನಂಬಿಕೆ ಇದೆ. ಸಾಂಕೇತಿಕವಾಗಿ, ಅಕ್ಕಿಯನ್ನು ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ. ಇದರಿಂದ ಜಾಗರೂಕತೆಗೆ ಅಡ್ಡಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಮನರಂಜನೆಯ ನಕಾರಾತ್ಮಕ ಪ್ರವೃತ್ತಿಗಳು ಅರಿವು ಅಥವಾ ಪ್ರಜ್ಞೆಯ ಕಡೆಗೆ ಪಯಣಿಸಲು  ಅಡ್ಡಿಯಾಗಬಹುದು. ಈ ಶುಭ ದಿನದಂದು ಆಚರಣೆಗಳ ಮಹತ್ವವನ್ನು ಅರ್ಥಮಾಡಿಕೊಳ್ಳದಿದ್ದರೂ ಸಹ ಅವುಗಳನ್ನು ಪಾಲಿಸುವುದು ಪ್ರಯೋಜನಕಾರಿಯಾಗಿದೆ. ಮಹಾಭಾರತದಲ್ಲಿ, ಭಗವದ್ಗೀತೆಯಲ್ಲಿ, ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ ಕೃಷ್ಣ ಮತ್ತು ಅರ್ಜುನರ ನಡುವಿನ ಸಂಭಾಷಣೆಯೂ ಇದೇ ದಿನದಂದು ನಡೆಯಿತು.

ಏಕಾದಶಿಯ ಉಪವಾಸವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಎಂದು ಆಯುರ್ವೇದ ಸೂಚಿಸುತ್ತದೆ.

ಏಕಾದಶಿ ತಿಥಿ ಚಂದ್ರನ ಪ್ರತಿ ಚಕ್ರದ 11 ನೇ ದಿನದಂದು ಸಂಭವಿಸುತ್ತದೆ, ಅದು ಭೂಮಿ ಅಥವಾ ಸೂರ್ಯನೊಂದಿಗೆ ತ್ರಿಗುಣವನ್ನು ರೂಪಿಸುತ್ತದೆ. ಈ ದಿನದಿಂದ ನಮ್ಮ ದೇಹ ಮತ್ತು ಮನಸ್ಸಿನಲ್ಲಿನ ದ್ರವಗಳ ಮೇಲೆ ಚಂದ್ರನ ಪ್ರಭಾವವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಎಲ್ಲಿಯವರೆಗೆ ಪ್ರಮುಖ ಅಂಗಗಳಾದ ಮೆದುಳು, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಅಲ್ಲಿಯವರೆಗೆ ನಮ್ಮ ದೇಹಕ್ಕೆ ಯಾವುದೇ ರೋಗ ಬರುವುದಿಲ್ಲ. ಎಲ್ಲಾ ರೋಗಗಳು ಅಜೀರ್ಣದಿಂದ ಪ್ರಾರಂಭವಾಗುತ್ತವೆ. ಆದರೆ ಈ 11ನೇ ದಿನದಿಂದ ನಮ್ಮ ದೇಹವು ಚಂದ್ರನ ಆಯಸ್ಕಾಂತೀಯ ಸೆಳೆತಕ್ಕೆ ಸಿಲುಕುತ್ತದೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯು ನಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ಅಗತ್ಯವಾದ ದ್ರವಗಳನ್ನು ಸ್ರವಿಸುವುದಿಲ್ಲ. ಈ 11ನೇ ದಿನದಿಂದ ಅಮಾವಾಸ್ಯೆ ಅಥವಾ ಹುಣ್ಣಿಮೆಯ ನಂತರದ 5ನೇ ದಿನದವರೆಗೆ, ನಮ್ಮ ಮೇಲೆ ಚಂದ್ರನ ಗರಿಷ್ಠ ಪ್ರಭಾವ ಇರುತ್ತದೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಸಮತೋಲನಗೊಳ್ಳುತ್ತದೆ.ಇದು ಮೆದುಳಿನ ಕಾರ್ಯಚಟುವಟಿಕೆ ಕುಸಿಯುವಂತೆ ಮಾಡುತ್ತದೆ ಮತ್ತು ಸ್ಮರಣೆ ಚಿಂತನೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ.

ಏಕಾದಶಿ ದಿನದಂದು ಉಪವಾಸ ಮಾಡುವುದು ಹೇಗೆ?

ಏಕಾದಶಿಗೆ ಮುಂಚಿನ ದಿನ (ಅಂದರೆ ದಶಮಿ) ನಾವು ಮಧ್ಯಾಹ್ನದ ಊಟವನ್ನು ಮಾತ್ರ ತೆಗೆದುಕೊಳ್ಳಬೇಕು ಮತ್ತು ರಾತ್ರಿಯ ಊಟವನ್ನು ಬಿಟ್ಟುಬಿಡಬೇಕು. ಆ ರಾತ್ರಿಯಲ್ಲಿ ಹಣ್ಣುಗಳು (ಬೀಜಗಳಿಲ್ಲದ) ಮತ್ತು ಹಾಲು ಮಾತ್ರ ತೆಗೆದುಕೊಳ್ಳಬಹುದು. ನಾವು ಸಂಪೂರ್ಣ ಉಪವಾಸವನ್ನು ಕಾಪಾಡಿಕೊಳ್ಳಬೇಕು ಮತ್ತು ವಿಷ್ಣುವಿನ ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಬೇಕು. ಅಕ್ಕಿ ಮತ್ತು ಇತರ ಧಾನ್ಯಗಳಾದ ಗೋಧಿ, ತರಕಾರಿಗಳು ಮತ್ತು ಹಣ್ಣುಗಳೊಂದಿಗೆ ಬೇಯಿಸಿದ ಯಾವುದನ್ನಾದರೂ ಬೀಜಗಳೊಂದಿಗೆ ತೆಗೆದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆ ರಾತ್ರಿ, ನಾವು ಇಡೀ ರಾತ್ರಿ ಎಚ್ಚರವಾಗಿರಬೇಕು ಮತ್ತು ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಬೇಕು, ಹೆಚ್ಚಾಗಿ ಮುಂಜಾನೆಯ ಸಮಯದಲ್ಲಿ. ವರ್ಷದ ಅವಧಿಯಲ್ಲಿ, ಏಕಾದಶಿ ಉಪವಾಸವನ್ನು ಒಮ್ಮೆಯಾದರೂ ಮುರಿಯುವವರು, ವಾರ್ಷಿಕ ಭೀಮ ನಿರ್ಜಲ ಏಕಾದಸಿಯನ್ನು ಆಚರಿಸಬೇಕು [ಇದು ಹಿಂದೂ ತಿಂಗಳಾದ ಜ್ಯೇಷ್ಠದ (ಸುಮಾರು ಜೂನ್) ಶುಕ್ಲ ಪಕ್ಷ  ಚಂದ್ರನ 11 ನೇ ದಿನದಂದು ಸಂಭವಿಸುತ್ತದೆ] ನಿರ್ಜಲ ಏಕಾದಶಿ ಕುಡಿಯುವ ನೀರು ಅಥವಾ ಇತರ ಯಾವುದೇ ದ್ರವದಿಲ್ಲದೆ 24 ಗಂಟೆಗಳ ಉಪವಾಸವನ್ನು ಮಾಡಬೇಕಾಗುತ್ತದೆ.  ಅಲ್ಲದೆ, ಟೊಮೆಟೊ, ಹೂಕೋಸು, ಬದನೆಕಾಯಿ ಮತ್ತು ಎಲೆಗಳುಳ್ಳ ತರಕಾರಿಗಳಂತಹ ಕೆಲವು ತರಕಾರಿಗಳನ್ನು ಏಕಾದಶಿಯಂದು ಬಿಡಬೇಕು. ಮಸಾಲೆಗಳು, ಲವಣಗಳನ್ನು ಸಹ ತಪ್ಪಿಸಬೇಕು. ಮಜ್ಜಿಗೆ, ಮೊಸರು , ಕಾಫಿ ಮತ್ತು ಚಹಾವನ್ನು ಸಹ ನಿಷೇಧಿಸಲಾಗಿದೆ.

ಇತರ ಧರ್ಮಗಳಲ್ಲಿ ಉಪವಾಸದ ಸಮಯದಲ್ಲಿ ಅಕ್ಕಿ ಮತ್ತು ಧಾನ್ಯಗಳ ನಿಷೇಧ 

ಅಬ್ರಹಾಮಿಕ್ ಧರ್ಮಗಳು ಕೆಲವು ಉಪವಾಸಗಳ ಸಮಯದಲ್ಲಿ ಅಕ್ಕಿ, ಗೋಧಿ ಇತ್ಯಾದಿ ಧಾನ್ಯಗಳನ್ನು ದೂರವಿಡುವ ಈ ಪರಿಕಲ್ಪನೆಯನ್ನು ಅಳವಡಿಸಿಕೊಂಡಿವೆ. ಆಡಮ್, ಈವ್ ಮತ್ತು ಅವರ ಹೆಣ್ಣುಮಕ್ಕಳನ್ನು ಉಲ್ಲೇಖಿಸುವ ಕಥೆಗಳಿವೆ, ಅಕ್ಕಿ ಮತ್ತು ಧಾನ್ಯಗಳು ಹೇಗೆ ಸಿನ್ ಅನ್ನು ಸಾಗಿಸುತ್ತವೆ, ಅದನ್ನು ಮೊದಲ ಬಾರಿಗೆ ಸೇವಿಸುವುದರಿಂದ ಮಾನವ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಹೇಗೆ ಪ್ರಾರಂಭಿಸಿದೆ ಇತ್ಯಾದಿ ವಿವರವಿದೆ. 

.

Wednesday, January 08, 2025

ಕೆ.ವಿ. ಅಯ್ಯರ್ "ರೂಪದರ್ಶಿ" ಮತ್ತು "ಶಾಂತಲಾ": ಒಂದು ಅವಲೋಕನ

 -ರಾಘವೇಂದ್ರ ಅಡಿಗ ಎಚ್ಚೆನ್.


ಕನ್ನಡನಾಡು ಕಂಡ ಅತ್ಯಂತ ಅಪರೊಪದ ಸಾಹಿತಿಗಳಲ್ಲಿ ಒಬ್ಬರೆಂದರೆ ಪ್ರೊ. ಕೆ.ವಿ. ಅಯ್ಯರ್. ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿದ್ದವರು. ಬಡತನದಿಂದಾಗಿ ಬೆಂಗಳೂರಿನ ಹೋಟೆಲಿನಲ್ಲಿ ಇಡ್ಲಿ, ದೋಸೆ ಹಿಟ್ಟು ರುಬ್ಬುತ್ತಿದ್ದ ಕೈಗಳು, ಲೇಖನಿ ಹಿಡಿದು ಶಾಂತಲಾ, ರೂಪದರ್ಶಿ, ಲೀನಾದಂತಹ ಉತ್ಕೃಷ್ಟ ಕಾದಂಬರಿಗಳನ್ನು ಸಮುದ್ಯತಾ"ದಂತಹ ಅನನ್ಯ ಕಥಾಸಂಕಲನಗಳನ್ನು ರಚಿಸಿ ಕನ್ನಡದ ಓದುಗರ ಮನೆ ಮನಗಳನ್ನು ಸೂರೆಗೈದ ಪ್ರಸಂಗವೇ ಅದ್ಭುತ. ರೋಚಕ. ಕೆ.ವಿ. ಅಯ್ಯರ್ ಉಪನ್ಯಾಸಕರು  ಅಂಗ ಸಾಧನೆ ಇವರ  ಪ್ರಮುಖ ಹವ್ಯಾಸಗಳಲ್ಲೊಂದು . ಮತ್ತು ರಂಗ ಚಟುವಟಿಕೆಗಳಲ್ಲಿ ಸಹ ಇವರು ಸಕ್ರಿಯರಾಗಿರುತ್ತಿದ್ದರು.  ಅಂಗಸಾಧನೆಯಿಂದ ಹೆಚ್ಚು ಜನಪ್ರಿಯರಾಗಿ  ಹಲವಾರು ಶಿಷ್ಯರನ್ನು ಸಂಪಾದಿಸಿದರು.. ಅವರು  ಕಾದಂಬರಿ ಕ್ಷೇತ್ರಕ್ಕೆ ಬಂದಿದ್ದೇ ಒಂದು ಆಕಸ್ಮಿಕ. ಕಾದಂಬರಿ ಬರೆಯಬಲ್ಲಿರಾ ಎಂಬ ಸವಾಲು ಸ್ವೀಕರಿಸಿ ಅವರು ಬರೆದ ಎರಡು ಕಾದಂಬರಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿಯುವಂತಹವು. ಅವೇ ಶಾಂತಲಾ ಮತ್ತು ರೂಪದರ್ಶಿ.


 "ರೂಪದರ್ಶಿ"ಇಟಲಿಯ ಫ್ಲಾರೆನ್ಸ್ ನಗರದ ಕ್ರೈಸ್ತ ದೇವಾಲಯವೊಂದರಲ್ಲಿ ಏಸುಕ್ರಿಸ್ತನ ಜೀವನ ವೃತ್ತಾಂತವನ್ನು ಸಮಗ್ರವಾಗಿ ವಿವರಿಸುವ ಚಿತ್ರಗಳನ್ನು ಚಿತ್ರಿಸಲು ಕಲಾವಿದ ಮೈಕಲ್ ಏಂಜಿಲೋ ಅವರನ್ನು ಕೇಳಿಕೊಂಡಿದ್ದು, ಅದನ್ನು ಆತ ಪೂರ್ಣಗೊಳಿಸಲು ಒಪ್ಪಿ, ಪಡಬಾರದ ಕಷ್ಟ ಪಡುವುದು, ಗುರಿ ಸಾಧನೆಯನ್ನು ಅರ್ಧಕ್ಕೆ ಕೈ ಬಿಡುವ ಬೇಸರ ಹಾಗೂ ಹೇಗಾದರೂ ಮಾಡಿ ಪೂರ್ಣಗೊಳಿಸುವ ಅನಿವಾರ್ಯತೆ ಇಂತಹ ದ್ವಂದ್ವಗಳ ಮಧ್ಯೆ ಬದುಕು ಸವೆಸುವುದು, ಪಾತ್ರಗಳ ಹುಡುಕಾಟದಲ್ಲಿ ಬಸವಳಿದು ಹೋಗುವುದು ಒಬ್ಬ ನೈಜ ಕಲಾವಿದನ ಮಾನಸಿಕ ತೊಳಲಾಟ ಎಲ್ಲವನ್ನೂ ಕೃತಿ ಕಲಾತ್ಮಕವಾಗಿ ಹೆಣೆದುಕೊಳ್ಳುತ್ತಾ ಹೋಗುತ್ತದೆ. ಮನುಷ್ಯ ಸಂಬಂಧಗಳ ಹುಡುಕಾಟದ ಸಂವೇದನಾಶೀಲತೆಯು ಇಡೀ ಕಾದಂಬರಿಯನ್ನು ಆವರಿಸಿದೆ.   'ರೂಪದರ್ಶಿ ' ಅವರೇ     ತಿಳಿಸಿರುವಂತೆ   'ರೀಡರ್ಸಡೈಜಸ್ಟ್'  ಪುಸ್ತಕ ದಲ್ಲಿ  ಬಂದಿದ್ದ     ಒಂದೂವರೆ   ಪುಟದ   ಕಥೆಯಾಧಾರಿತ.  ಅದು   ಕಾದಂಬರಿ  ಬರೆಯಲು   ಪ್ರೇರಣೆಯಂತೆ.  ಒಬ್ಬ ಶಿಲ್ಪಿ ಅಥವಾ ಚಿತ್ರಕಾರ ಹಾಗೂ ಆತನ ರೂಪದರ್ಶಿ ನಡುವಿನ ಕಥೆ ಇದಾಗಿದ್ದು, ಮನುಷ್ಯ ಸಂಬಂಧಗಳ ಹುಡುಕಾಟವನ್ನು ಕೆ.ವಿ ಅಯ್ಯರ್ ಅವರು ಮನ ಮುಟ್ಟುವಂತೆ ರೂಪಿಸಿದ್ದಾರೆ

ಇದು ಕಾಲ್ಪನಿಕ ಕಥೆ. ಪ್ರಮುಖ ಪಾತ್ರಗಳಾಗಿ ಇಲ್ಲಿ ವಿಶ್ವ ವಿಖ್ಯಾತ ಮೈಕೆಲೆಂಜಲೋ ಮತ್ತು ಅರ್ನೆಸ್ಟೋ ಇದ್ದಾರೆ.   ಇಲ್ಲಿ ಚಿತ್ರಕಾರನುೊಬ್ಬ ಜೀಸಸ್ ನ ಜೀವನದ ವಿವಿಧ ಹಂತಗಳನ್ನು ಚಿತ್ರಿಸಲು ನಿರ್ಧರಿಸುತ್ತಾನೆ. ಬಾಲ ಯೇಸುವಿನ ಚಿತ್ರಕ್ಕೆ ರೂಪದರ್ಶಿಯಾದ ವ್ಯಕ್ತಿ ಮುಂದೆ ಕ್ರೂರಿ ಜುದಾಸನ ಚಿತ್ರಕ್ಕೂ ರೂಪದರ್ಶಿಯಾಗುವ ಚಿತ್ರವಿದೆ. ಇದು ವ್ಯಕ್ತಿಯ ಸಹವಾಸಗಳು ಅವನ ಒಳ್ಳೆಯತನವನ್ನು ಹೇಗೆ ನಾಶಗೊಳಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಕನ್ನಡಕ್ಕೆ ಇದೊಂದು ಶ್ರೇಷ್ಠ ಕಾದಂಬರಿ  ಕೆ.ವಿ.ಅಯ್ಯರ್ ಅವರ ‌ಭಾಷೆ ಸಂಪತ್ಭರಿತವಾದದ್ದು. ನೇರ ಸುಲಲಿತ ಭಾಷೆಯಲ್ಲಿ ಅವರು ಪ್ರಸಂಗಗಳ ನಿರೂಪಿಸುವಾಗ ಕಣ್ಣೀರು ಬರುವಷ್ಟು ಹೃದಯಸ್ಪರ್ಶಿಯಾಗಿ ಬರೆಯುತ್ತಾರೆ. ಈ ಕಾದಂಬರಿಯಲ್ಲಿ ದೇವರು, ನಂಬಿಕೆ, ಮನುಷ್ಯ ಸಂಬಂಧ, ಕ್ರೌರ್ಯ, ವಂಚನೆ ಹೀಗೆ ಹಲವು ರಸಗಳನ್ನು ಕಾಣಬಹುದು. ಈ ಕಾದಂಬರಿಯನ್ನು ಮುಂದುವರೆಸಿ ಲೀನಾ ಎಂಬ ಮತ್ತೊಂದು ಭಾಗವನ್ನು ಕೆ. ವಿ ಅಯ್ಯರ್ ನೀಡಿದ್ದಾರೆ.  ರೂಪದರ್ಶಿಯ ಮುಂದಿನ ಭಾಗವಾಗಿ ಅವರು ಲೀನಾ ಎಂಬ ಪುಟ್ಟ ಕೃತಿಯನ್ನೂ ಬರೆದಿದ್ದಾರೆ.


ಕೆ.ವಿ. ಅಯ್ಯರ್ ಅವರ ಮತ್ತೊಂದು ಮಹತ್ವದ ಕೃತಿ "ಶಾಂತಲಾ" ಶಾಂತಲಾ-ಕೆ.ವಿ. ಅಯ್ಯರ್ ಅವರ ಐತಿಹಾಸಿಕ ಕಾದಂಬರಿ. ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನ ರಾಣಿ ಶಾಂತಲಾ. ಗೆಳತಿ ಲಕ್ಷ್ಮೀಯಿಂದ ದೂರ ಇರಲಾಗದೇ ಲಕ್ಷ್ಮೀಯೂ ವಿಷ್ಣುವರ್ಧನನ್ನು ಮದುವೆಯಾಗುವುದು. ಶಾಂತಲಾ ದೇವಿಯ ದೈವಿಕ ವ್ಯಕ್ತಿತ್ವ, ಶಾಂತಲಾ ಲಕ್ಷ್ಮಿಯರ ನಡುವಿನ ಸ್ನೇಹ, ಶಾಂತಲಾ ಪುತ್ರ ವಿಷ್ಣುವಿನ ಶೌರ್ಯ ಹಾಗೂ ಸಾವು ಮಂತ್ರಿ ಗಂಗರಾಜನ ರಾಜನಿಷ್ಠೆ ಪ್ರತಿ ಪಾತ್ರ ಹಾಗೂ ಸನ್ನಿವೇಶಗಳು ಸಂವೇದನಶೀಲವಾಗಿವೆ. ವಿಷ್ಣುವರ್ಧನ, ಶಾಂತಲಾ ಹಾಗೂ ಲಕ್ಷ್ಮೀ ಐತಿಹಾಸಿಕ ಸಾಮ್ರಾಜ್ಯವೊಂದರ ಆಡಳಿತದ ವಿದ್ಯಮಾನಗಳು ವರ್ತಮಾನದಲ್ಲೂ ಕಾಣುತ್ತಿದ್ದೇವೆ ಎಂಬಷ್ಟು ಇಲ್ಲಿಯ ಪಾತ್ರ-ಸನ್ನಿವೇಶಗಳು ಜೀವಂತಿಕೆ ಮರೆಯುತ್ತವೆ.  ಶಾಂತಲೆಯೂ ಸಹ ಶಿವಗಂಗೆ ಬೆಟ್ಟಕ್ಕೆ ಹೋಗಿ ಮೇಲಿಂದ ಬಿದ್ದು ಅಸು ನೀಗುತ್ತಾಳೆ ಎಂಬ ದೃಶ್ಯ ವರ್ಣಿಸುವಾಗ ಈ ಪುಸ್ತಕವು ಕೇವಲ ಒಂದು ಕೃತಿಯಾಗಿ ಉಳಿಯದೇ ಓದುಗನ ಇಡೀ ಭಾವದ ಮೊತ್ತವೇ ಆಗಿರುತ್ತದೆ. ಈ ಕಾದಂಬರಿಯು ಮೊದಲು 1954ರಲ್ಲಿ ಬೆಂಗಳೂರಿನ ವ್ಯಾಯಾಮಶಾಲೆ ಪ್ರಕಟಿಸಿತ್ತು.

ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳು ಬಹಳಷ್ಟು ಸಕಾರಾತ್ಮಕ  ಪಾತ್ರಗಳಾಗಿ ಬಂದಿರುವುದು ವಿಶೇಷವಾಗಿದೆ.  ರಾಣಿಯರಲ್ಲಿ ಶಾಂತಲೆಯ ಪಟ್ಟದರಸಿಯಾದರು ಇತರರಾಣಿಗಳಲ್ಲಿ ಈ ಕಚ್ಚಾಟವಿದ್ದರೂ ಅದು ಅದು ಹೆಚ್ಚಾಗಿ ಕಾದಂಬರಿಯಲ್ಲಿ ವ್ಯಕ್ತವಾಗದೆ, ಶಾಂತಲೆಯ ಗುಣ ,ರೂಪ ಅವಳ ನಾಟ್ಯ ಸಾಧನೆಗಳನ್ನು ಅಯ್ಯರ್  ಬಹಳಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ . ನಾಟ್ಯರಾಣಿಯ ಮನ ಹೀಗೂ ಇರಬಹುದೇ ಎಂಬಷ್ಟು ಅಚ್ಚರಿಯನ್ನು ಉಂಟುಮಾಡುವಂತೆ ಶಾಂತಲೆ ಓದುಗರ ಮನದಲ್ಲಿ ಗಾಢವಾಗುತ್ತಾ ಹೋಗುತ್ತಾಳೆ. ಇಲ್ಲಿ ಶಾಂತಲೆ ಮತ್ತು ವಿಷ್ಣುವರ್ಧನ ಬದುಕಿನಷ್ಟೇ ವರ್ಣಮಯವಾಗಿ ಮೂಡಿ ಬಂದಿರುವುದರಿಂದ " ಸಾವು"..!?  ಹೌದು ಸಾವು ಎನ್ನುವುದು ಇಲ್ಲಿ ಭೈರ , ಗರುಡ, ಸತಿ ಪದ್ಧತಿ ಕೊನೆಯ ಅರ್ಥ ಕಾದಂಬರಿಯಲ್ಲಿ ವಿಜೃಂಭಿಸುತ್ತವೆ . ಕಾದಂಬರಿಯ ಬರೆಯುವ ಕಾಲಕ್ಕೆ ಸತಿ ಪದ್ಧತಿ ಅಂತ ಆತ್ಮಾರ್ಪಣೆ  ಸಮಾಜದಲ್ಲಿ ಸಾಮಾನ್ಯವಾಗಿತ್ತು  ಎಂಬುದನ್ನು ಲೇಖಕರು ಹೇಳುತ್ತಾರೆ.! ಕಾಲದ ಪರಿಣಾಮದಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.  ಆಗ ನೆನಪಾಗುವುದು ಓದಿನ ಮಧ್ಯದಲ್ಲಿ ರಾಜಾರಾಮ್ ಮೋಹನ್ ರಾಯ್ ಅವರು .....

ಇನ್ನು ವಿವಾಹದ ಸಮಯದಲ್ಲಿ ಅನಿವಾರ್ಯವಾಗಿ ಹಲವು ಯುವತಿಯರನ್ನು ವಿವರಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ ವಿಷ್ಣುವರ್ಧನ ಅ ಯುವತಿಯರ ಪಟ್ಟಿಯನ್ನು ಪಟ್ಟಿಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಅಸಮಾನ್ಯವಾದ ಸಂಗತಿಯಾಗಿ ಇಂದಿಗೂ ಮುಂದೆಯೂ ಓದುಗರಿಗೆ ಕಾಣ ಸಿಗುತ್ತದೆ.... ಶಾಂತಲೆಯ  ನಿರ್ಧಾರ , ಕುವರ  ವಿಷ್ಣುವಿನ ತ್ಯಾಗ,ಒಂದು  ರೋಚಕತಿರುವನು ನೀಡಿ ಕಾದಂಬರಿಯ ಅಂತಿಮ ಘಟ್ಟಕ್ಕೆ ತಂದು ನಿಲ್ಲಿಸುತ್ತದೆ.  ಬೇಲೂರು ಹಳೇಬೀಡು, ದೇವಾಲಯಗಳ ವೀಕ್ಷಣೆ. ಅಲ್ಲಿ ಕಳೆದ ಸಮಯಗಳೇ ತಮಗೆ ಪ್ರೇರಣೆ ಈ  ಕಾದಂಬರಿಯನ್ನು ರಚಿಸಲು ಎಂದು ಹೇಳಿದ ಲೇಖಕರ ಮಾತುಗಳು ಕಾದಂಬರಿಯ ಉದ್ದಕ್ಕೂ ಶಾಂತಲೆಯನ್ನು ಅವರು ತಮ್ಮ ಮಗಳಂತೆ ಚಿತ್ರಿಸಿರುವುದು ಕಂಡುಬರುತ್ತದೆ  ಜಪ, ತಪ ,ಪ್ರಾರ್ಥನೆ, ವ್ರತ ಆಧ್ಯಾತ್ಮಿಕವಾಗಿ ಪ್ರಕಟವಾದರೆ  ಸಾಹಸ , ಧೈರ್ಯ , ಚಾಣಾಕ್ಷತನ  ರಾಜ ವರ್ಚಸ್ಸಿನಂತೆ ಕಾದಂಬರಿಯಲ್ಲಿ ಅನುರಣಿಸುತ್ತದೆ .  ಈ ಕಾದಂಬರಿಯಲ್ಲಿ ವಿಷ್ಣುವರ್ಧನ ಆಳ್ವಿಕೆಯ ವೀರಜೀವನ, ರಾಜಮಾತೆ ರಾಜಪತ್ನಿಯರ ಜೀವನದ ಸಂಕಟ,ಸುಖ ದುಃಖ, ತಾಯಿ ಮಕ್ಕಳ, ರಾಜ ಮಂತ್ರಿ,  ಇತ್ಯಾದಿ ಸಂಬಂಧಗಳ ಸೊಗಸು ಅಮೋಘವಾಗಿ ಚಿತ್ರಿತವಾಗಿದೆ.

ಶಾಂತಲೆ ವಿಷ್ಣುವರ್ಧನ್ ದಾಂಪತ್ಯ, ಶಾಂತಲೆಯ ರಾಜ ನೀತಿ , ಆಧ್ಯಾತ್ಮ ಸಾಧನೆ, ಗಂಗರಾಜರ ಸೇವೆ, ರಾಜಮಾತೆಯ ವಿಶಾಲ ಹೃದಯ  , ಕುವರ ವಿಷ್ಣುವಿನ ರಾಜನಿಷ್ಠೆ. ಕಾದಂಬರಿಯನ್ನು ಅದ್ವಿತೀಯವಾಗಿಸಿವೆ. ಕಾದಂಬರಿಯ ಅಂತ್ಯದಲ್ಲಿ ಶಾಂತಲೆ ಮತ್ತೆ ಉದ್ಭವಿಸಿ ಬರುವುದು  ಫ್ಯಾಂಟಸಿ ಎನಿಸುತ್ತದೆ . ಆದರೆ ಇದು ಕಥೆಯನ್ನು ಧನಾತ್ಮಕವಾಗಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗುತ್ತದೆ.

ಈ ಪುಸ್ತಕ ಅದೆಷ್ಟು ಮನಕಲಕುತ್ತದೆ ಎಂದರೆ  ಕಥೆ ಓದಿ ಮುಗಿದರೂ ಕಥೆಗಾರರು ಹೇಳುವ"ಹೊಯ್ಸಳ ರಾಜ್ಯದ ಮಹಾಸಂಪತ್ತನ್ನು ಮಲ್ಲಿಕಾಫರನೂ,ಗಃಗೂಸಲಾರನೂ ಆ ಕಾಲದಲ್ಲಿ ದೋಚಿದ್ದು ಇರಲಿ,ಸುಂದರವಾದ ಮೂರ್ತಿಗಳ ಕಣ್ಣು ಕಿತ್ತು, ಮುಖತಲೆಗಳನ್ನು ಜಜ್ಜಿರುವವರು ನಾವು.ಮಂಗನ ಕೈಯ್ಯ ಮಾಣಿಕ್ಯವಾಗಿದೆ ಈ ಬೃಹತ್ ಕಲಾಸೃಷ್ಟಿ.ಈ ರೂಕ್ಷಕೃತ್ಯಗಳಿಗೆ ವಿಷ್ಣವರ್ಧನ,ಶಾಂತಲೆಯರ ಆತ್ಮಗಳು ಅದೆಷ್ಟು ನೋಯುವುವೇ!ಈ ಕಥೆ ಅದಕ್ಕಾಗಿ ನನ್ನ ಹೃದಯ ಮಿಡಿದ ಕಂಬನಿ" ಎಂಬ ಮಾತು ಮರೆಯಲಸಾಧ್ಯ."...ಮಾತಿಗೆ ಪ್ರತ್ಯಕ್ಷದರ್ಶಿಯಾಗಿದೆ.

ಇಂದಿನ ದಿನಮಾನಕ್ಕೆ ಈ ಕಾದಂಬರಿಯ ಪ್ರಸ್ತುತತೆ

ಕಾದಂಬರಿಯಲ್ಲಿ ಅರಸ , ಅರಸೋತ್ತಿಗೆ , ವಂಶೋದ್ಧಾರ , ರಾಜ್ಯ ವಿಸ್ತಾರ ಇವುಗಳೆಲ್ಲವೂ ಇವೆ .ಈಗ ಅರಸನೂ ಇಲ್ಲಾ ..ಅರಸೋತ್ತಿಗೆಯೂ ಇಲ್ಲ .  ಎಲ್ಲಾ ಪ್ರಜಾ ಸರ್ಕಾರ . ವಂಶೋದ್ಧಾರಕನ ಪ್ರಶ್ನೆಯೇ ಬರುವುದಿಲ್ಲಾ . ಏನಿದ್ದರೂ ಪತಿ ಪತ್ನಿ ಸಂಬಂಧ ಮಾತ್ರ . ಅದೂ ಒಬ್ಬ ಳೇ ಪತ್ನಿ . ದಾಂಪತ್ಯದಲ್ಲಿ ಮೊದಮೊದಲ ವರ್ಷಗಳಲ್ಲಿ ಮಕ್ಕಳು ಬೇಡವೆಂದು ಕೆಲವು ದಂಪತಿಗಳು ನಿರ್ಧರಿಸುತ್ತಾರೆ . ನಂತರ ಕೆಲವರಿಗೆ ಕಾರಾಣಾಂತರಗಳಿಂದ ಮಕ್ಕಳ ಸೌಭಾಗ್ಯ ಸಿಗುವುದಿಲ್ಲ.  ಹಿಂದೆ ಒಂದು ವಾಡಿಕೆ ಮಾತಿತ್ತು . ಬಹಳ ವರ್ಷ ಮಕ್ಕಳಾಗದಿದ್ದಾಗ  ‘ ನಮ್ಮದೇನು ರಾಜ ವಂಶವೇ ‘ . ಏನೇ ಹೇಳಿದರೂ ಎಷ್ಟೇ ಪತಿಪತ್ನಿಯರಲ್ಲಿ ಪ್ರೀತಿ ಅನ್ಯೋನ್ಯತೆ ಇದ್ದರೂ ಮಕ್ಕಳಿಲ್ಲದೇ ಇದ್ದರೆ ಏನೋ ಕೊರತೆ , ಏಕತಾನತೆ  , ಉದಾಸೀನತೆ ಕಾಡುತ್ತದೆ …..ಈಗ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ .ತಂತ್ರಜ್ಞಾನಗಳು ಬಂದಿವೆ . ಈಗಿನ ವಿದ್ಯಾವಂತ ದಂಪತಿಗಳಿಗೆ ತಿಳಿದಿದೆ . ಮಾರ್ಗದರ್ಶನ ಮಾಡುವವರಿದ್ದಾರೆ . ಯಾರೂ ಯಾರಿಗಾಗಿಯೂ ಪ್ರಾಣ ತ್ಯಾಗ ಮಾಡುವುದಿಲ್ಲ. .

ಶಾಂತಲಾ ಮತ್ತು ರೂಪದರ್ಶಿ ಕನ್ನಡ ಸಾಹಿತ್ಯ ಪ್ರೇಮಿಗಳೆಲ್ಲರೂ ಓದಬೇಕಾದ ಪುಸ್ತಕಗಳೆಂದರೆ ಸುಳ್ಳಲ್ಲ.

 

Tuesday, January 07, 2025

ಜಯಂತಿ ಅವರು ನನ್ನನ್ನು ಸದಾ ಪ್ರೀತಿಯಿಂದ ಹೀರೋ ಅಂತ ಕರೆಯುತ್ತಿದ್ದರು: ಒಡನಾಟ ಸ್ಮರಿಸಿದ ಸಿ.ಎಂ.ಸಿದ್ದರಾಮಯ್ಯ

 *ಜಯಂತಿ ಅವರು ನನ್ನನ್ನು ಸದಾ ಪ್ರೀತಿಯಿಂದ ಹೀರೋ ಅಂತ ಕರೆಯುತ್ತಿದ್ದರು: ಒಡನಾಟ ಸ್ಮರಿಸಿದ ಸಿ.ಎಂ.ಸಿದ್ದರಾಮಯ್ಯ* 

*ಜಯಂತಿ ಅವರು ಅಪಾರ ಮನುಷ್ಯತ್ವ ಹೊಂದಿದ್ದ ಸ್ನೇಹಜೀವಿ: ಸಿ.ಎಂ‌ ಬಣ್ಣನೆ*

*ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ : ಸಿ.ಎಂ ಘೋಷಣೆ*

ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. 

ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಾಶಿವ ಶೆಣೈ ಅವರ ಅಭಿನಯ ಶಾರದೆ ಜಯಂತಿ ಅವರ ಜೀವನಗಾಥೆ "Lovely But lonely" ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ಜಯಂತಿ ಅವರು ನನ್ನನ್ನು ಸದಾ ಪ್ರೀತಿಯಿಂದ ಹೀರೋ ಅಂತ ಕರಿಯುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿದರು. 

ಜಯಂತಿ ಅವರು ಅಪಾರ ಮನುಷ್ಯತ್ವ ಹೊಂದಿದ್ದ ಸ್ನೇಹಜೀವಿ ಆಗಿದ್ದರು. ಕಲಾವಿದೆಯಾಗಿ ಜಯಂತಿಗೆ ಜಯಂತಿಯವರೇ ಸಾಟಿ ಆಗಿದ್ದರು. ಅವರು ಮಾನವೀಯವಾಗಿ ಬದುಕನ್ನು ನಡೆಸಿ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ ಎಂದರು. 

ನನ್ನ ಮತ್ತು ಜಯಂತಿ ಅವರ ರಾಜಕೀಯ ಮೌಲ್ಯಗಳು ಒಂದೇ ಆಗಿದ್ದರು. ಸಮಾಜ ಪ್ರೇಮಿ, ಮಾನವೀಯತೆಯ ಪ್ರೇಮಿ ಆಗಿದ್ದರು ಎಂದು ಬಣ್ಣಿಸಿದರು. 

ವಿಶ್ವದ ಯಾವುದೇ ಭಾಷೆಯ ಸಿನಿಮಾಗಳಿಗಿಂತ ಕನ್ನಡ ಭಾಷೆ ಸಿನಿಮಾಗಳು ಹಿಂದೆಲ್ಲಾ ಒಳ್ಳೆ ಗುಣಮಟ್ಟ ಕಾಯ್ದುಕೊಂಡಿವೆ. ನಾನು ಸದಾ ನಮ್ಮ ಕನ್ನಡ ಚಿತ್ರರಂಗದ ಪ್ರೋತ್ಸಾಹಕ್ಕೆ ನಿಲ್ಲುತ್ತೇನೆ. ಕನ್ನಡ ಸಿನಿಮಾಗಳಿಗೆ  100% ತೆರಿಗೆ ವಿನಾಯ್ತಿ ಘೋಷಿಸಿದ್ದು ನಾನೇ ಎಂದರು.

ಪಿ.ಲಂಕೇಶ್ ಅವರು ನನಗೆ ಗುರುಗಳ ರೀತಿ. ಪತ್ರಿಕೆ ಕಚೇರಿಗೆ ಹೋಗಿ ಮಾರ್ಗದರ್ಶನ ಪಡೆಯುತ್ತಿದ್ದೆ ಎಂದು ಸ್ಮರಿಸಿದರು. 

ನಟ ರಮೇಶ್ ಅರವಿಂದ್, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ದೇಶಕಿ ಕವಿತಾ ಲಂಕೇಶ್ , ಹಿರಿಯ ಪತ್ರಕರ್ತ ಸಮೀವುಲ್ಲಾ , ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಮತ್ತು ಕೃತಿಯ ಲೇಖಕರಾದ ಸದಾಶಿವ ಶೆಣೈ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರು ಉಪಸ್ಥಿತರಿದ್ದರು.

Sunday, January 05, 2025

ಮಕರ ಸಂಕ್ರಾಂತಿ 2025 ಮಹತ್ವ ಮತ್ತು ಪರಿಣಾಮಗಳು



ಮಕರ ಸಂಕ್ರಾಂತಿಯನ್ನು  ಉತ್ತರ ಗೋಳಾರ್ಧದಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ ಮತ್ತು  ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಈ ಹಬ್ಬದ ಆಚರಣೆ ನಡೆಯುತ್ತದೆ.  ಸೂರ್ಯನು ಮಕರ ಸಂಕ್ರಾಂತಿ ವೃತ್ತದಿಂದ ದೂರ ಉತ್ತರ ಗೋಳಾರ್ಧದ ಕಡೆಗೆ ತನ್ನ ಚಲನೆಯನ್ನು ಪ್ರಾರಂಭಿಸುತ್ತಾನೆ. ಅದಕ್ಕಾಗಿಯೇ ಮುಂದಿನ 6 ತಿಂಗಳುಗಳನ್ನು 'ಉತ್ತರಾಯಣ" (ಉತ್ತರ+ ಆಯಣ ಅಂದರೆ ಉತ್ತರದೆಡೆಗೆ ಸೂರ್ಯನ ಚಲನೆ)ಎಂದು ಕರೆಯಲಾಗುತ್ತದೆ.

ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಸಮಯದಲ್ಲಿ, ಸೂರ್ಯನು ಪ್ರತಿ ವರ್ಷ ಜನವರಿಯ ಮಧ್ಯದಿಂದ ಜುಲೈ ಮಧ್ಯಭಾಗದ ನಡುವೆ ಅನುಕ್ರಮವಾಗಿ ಈಶಾನ್ಯದ ದಿಕ್ಕಿನಲ್ಲಿ (ಸ್ವಲ್ಪಮಟ್ಟಿಗೆ} ಉದಯಿಸುತ್ತಾನೆ ಮತ್ತು ವಾಯುವ್ಯ ದಿಕ್ಕಿನಲ್ಲಿ ್ಮುಳುಗುತ್ತಾನೆ.ಈ ಅವಧಿಯನ್ನು ವೈದಿಕ ಪದಗಳಲ್ಲಿ ಉತ್ತರಾಯಣ ಎಂದು ಕರೆಯಲಾಗುತ್ತದೆ ಮತ್ತು ಇದರರ್ಥ ಮೊದಲೇ ಹೇಳಿದಂತೆ ಉತ್ತರ ದಿಕ್ಕಿನೆಡೆಗೆ ಸೂರ್ಯನ ಚಲನೆ. .ಉಳಿದ 6 ತಿಂಗಳುಗಳನ್ನು (ಜುಲೈ-ಜನವರಿ) ದಕ್ಷಿಣಾಯಣ ಎಂದು ಕರೆಯಲಾಗುತ್ತದೆ, ಅಂದರೆ ಸೂರ್ಯನ ದಕ್ಷಿಣ ಚಲನೆ ಎಂದರ್ಥ.ಮೂಲತಃ, ಇದನ್ನು ಪ್ರಾಚೀನ ಭಾರತದಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯೆಂದು ಆಚರಿಸಲಾಗುತ್ತಿತ್ತು, ಆದರೆ ನಂತರ ವಿಷುವತ್ ಸಂಕ್ರಾಂತಿಯ ಪ್ರಭಾವದಿಂದ  ಅಯನ ಸಂಕ್ರಾಂತಿಯು ನಿರಂತರವಾಗಿ ವರ್ಷಕ್ಕೆ 50′′ ದರದಲ್ಲಿ ಮೊದಲಿಗೆ ನಡೆಯುತ್ತದೆಯಾದ್ದರಿಂದ, ಚಳಿಗಾಲದ ಅಯನ ಸಂಕ್ರಾಂತಿಯು ಈಗ ಪ್ರತಿ ವರ್ಷ ಡಿಸೆಂಬರ್ 21 ರಂದು ಸಂಭವಿಸುತ್ತದೆ.ಈ ವರ್ಷದ ಮಕರ ಸಂಕ್ರಾಂತಿ (ಸಂಕ್ರಾಂತಿ = ಟ್ರಾನ್ಸ್ಮಿಗ್ರೇಷನ್) 14 ಜನವರಿ 2025 ರಂದು 06:31 ಗಂಟೆಗೆ ಸಂಭವಿಸುತ್ತದೆ.ಸೂರ್ಯೋದಯಕ್ಕೆ ಸ್ವಲ್ಪ ಮೊದಲು, ಮಧ್ಯರಾತ್ರಿಯಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದರಿಂದ, 2025ರ ಜನವರಿ 14ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ .2025ರ ಜನವರಿ 14ರಂದು ಸೂರ್ಯೋದಯದಿಂದ 11 ಗಂಟೆಗಳ ಕಾಲವನ್ನು ಸಂಕ್ರಾಂತಿ ಪುಣ್ಯಕಾಲದ ಮುಹೂರ್ತ ಎಂದು ಕರೆಯಲಾಗುತ್ತದೆ ಮತ್ತು ಮಹಾಪುಣ್ಯಕಾಲದ ಮುಹೂರ್ತವು ಸೂರ್ಯೋದಯದ ಸಮಯದಿಂದ ಕೇವಲ ಆರಂಭಿಕ 90 ನಿಮಿಷಗಳು ಮಾತ್ರ.ಸ್ನಾನ ಮಾಡಲು, ಸೂರ್ಯನಿಗೆ ಅರ್ಘ್ಯ ಅರ್ಪಿಸಲು, ಏಕಾಂಗಿಯಾಗಿ ಧ್ಯಾನಕ್ಕೆ ಕುಳಿತುಕೊಳ್ಳಲು ಮತ್ತು ಕಳೆದ 6 ತಿಂಗಳುಗಳಿಂದ ನಿಮ್ಮ ಮನಸ್ಸು ಮತ್ತು ದೇಹವನ್ನು ತೊಂದರೆಗೊಳಪಡಿಸುತ್ತಿರುವುದನ್ನು ಅರಿತುಕೊಳ್ಳಲು ಇದು ಅತ್ಯುತ್ತಮ ಸಮಯವಾಗಿದೆ.ದೇವಾಲಯದಲ್ಲಿ ಅಥವಾ ಶಾಂತಿಯುತ ಸ್ಥಳದಲ್ಲಿ ಕಳೆಯಲು ಮತ್ತು ಮೌನವಾಗಿ ಗಾಯತ್ರಿ ಮಂತ್ರವನ್ನು ಪಠಿಸಲು ಇದು ಅತ್ಯುತ್ತಮ ಸಮಯವಾಗಿದೆ.

ಸೂರ್ಯ ಸಿದ್ಧಾಂತವು  ರಾಶಿ ಚಿಹ್ನೆಗಳ ಹನ್ನೆರಡು ವಿಭಾಗಗಳಲ್ಲಿ ನಾಲ್ಕನ್ನು ನಾಲ್ಕು ಅಯನಸ್ಥ ಮತ್ತು ಸಮಸ್ಥಾನಿಕ ಬಿಂದುಗಳೊಂದಿಗೆ ಜೋಡಿಸುವ ಮೂಲಕ ಈ ವ್ಯತ್ಯಾಸವನ್ನು ಸರಿದೂಗಿಸುತ್ತದೆ .ವೇದಗಳಲ್ಲಿ, ಉತ್ತರಾಯಣವನ್ನು ದೇವತೆಗಳ ದಿನ (ಸ್ವರ್ಗದಲ್ಲಿರುವ ದೇವತೆಗಳು) ಮತ್ತು ದಕ್ಷಿಣಾಯಣವನ್ನು ದೇವತೆಗಳ ರಾತ್ರಿ ಎಂದು ಕರೆಯಲಾಗುತ್ತದೆ. ಇದು ಚಳಿಗಾಲದ ಅಯನ ಸಂಕ್ರಾಂತಿಯ ನಂತರ ಉತ್ತರ ಧ್ರುವದಲ್ಲಿ 6 ತಿಂಗಳ ಹಗಲು ಮತ್ತು ಬೇಸಿಗೆಯ ಅಯನ ಸಂಕ್ರಾಂತಿಯ ನಂತರ 6 ತಿಂಗಳ ರಾತ್ರಿಯನ್ನು ಸೂಚಿಸುತ್ತದೆ. .ಉತ್ತರಾಯಣವು ವರ್ನಲ್ ಮತ್ತು ಶರತ್ಕಾಲದ ವಿಷುವತ್ ಸಂಕ್ರಾಂತಿಯ ನಡುವಿನ ಅವಧಿಯಾಗಿದೆ (ಉತ್ತರ ಧ್ರುವದಲ್ಲಿ ಮಧ್ಯರಾತ್ರಿಯ ಸೂರ್ಯ ಇದ್ದಾಗ) ಇದಕ್ಕೆ ವಿರುದ್ಧವಾಗಿ, ದಕ್ಷಿಣ ಧ್ರುವದಲ್ಲಿ ಮಧ್ಯರಾತ್ರಿಯ ಸೂರ್ಯನಿರುವ ಶರತ್ಕಾಲ ಮತ್ತು ವಸಂತ ವಿಷುವತ್ ಸಂಕ್ರಾಂತಿಯ ನಡುವಿನ ಅವಧಿಯನ್ನು ದಕ್ಷಿಣಾಯಣ ಎಂದು ವ್ಯಾಖ್ಯಾನಿಸಲಾಗಿದೆ. ಈ ಅವಧಿಯನ್ನು ಪಿತೃ ಆಯಣ ಎಂದೂ ಕರೆಯಲಾಗುತ್ತದೆ (ಪಿತೃಗಳೊಂದಿಗೆ (ಎಂದರೆ ಪೂರ್ವಜರು) ದಕ್ಷಿಣ ಧ್ರುವದಲ್ಲಿ ಜೋಡಿಸಲಾಗಿದೆ)ಸಾಮಾನ್ಯವಾಗಿ ಉತ್ತರಾಯಣವು ಪ್ರಾರಂಭವಾದಾಗ, ಅದು ಚಳಿಗಾಲದ ಆರಂಭವಾಗಿರುತ್ತದೆ. ವಿಷುವತ್ ಸಂಕ್ರಾಂತಿಯು ಆಗಮಿಸುವಾಗ  ಅದು ಅಯನಂಶವನ್ನು ಹೆಚ್ಚಿಸುತ್ತದೆ ಮತ್ತು ಮಕರ ಸಂಕ್ರಾಂತಿಯೂ ಸಹ ಬರುತ್ತದೆ ಸಾ. ಶ. 1000 ರಲ್ಲಿ ಮಕರ ಸಂಕ್ರಾಂತಿ ಡಿಸೆಂಬರ್ 31 ರಂದು ಇತ್ತು ಮತ್ತು ಈಗ ಅದು ಜನವರಿ 14 ರಂದು ಬರುತ್ತದೆ; 9000 ವರ್ಷಗಳ ನಂತರ ಮಕರ ಸಂಕ್ರಾಂತಿ ಜೂನ್ ನಲ್ಲಿ ಇರುತ್ತದೆ .ಜೂನ್ ತಿಂಗಳಲ್ಲಿ ಉತ್ತರಾಯಣವನ್ನು ನೋಡುವುದು ಈಗ ಅಸಂಬದ್ದ ಎಂದು ತೋರುತ್ತದೆ, ಸೂರ್ಯನು ತನ್ನ ಆರೋಹಣವನ್ನು ಮೇಲ್ಮುಖವಾಗಿ ಅಂದರೆ ದಕ್ಷಿಣಾಯಣವನ್ನು ಪ್ರಾರಂಭಿಸುತ್ತಾನೆ. ಉತ್ತರಾಯಣದ ನಿಜವಾದ ದಿನಾಂಕವಾದ ಡಿಸೆಂಬರ್ 21 ಮತ್ತು ಜನವರಿ 14ರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲದ ಕಾರಣ ಈ ತಪ್ಪು ಕಲ್ಪನೆ ಮುಂದುವರಿಯುತ್ತದೆ. ಆದಾಗ್ಯೂ, ಮುಂದಿನ ಕೆಲವು ಸಹಸ್ರಮಾನಗಳಲ್ಲಿ ವಿಷುವತ್ ಸಂಕ್ರಾಂತಿಯು ಮತ್ತಷ್ಟು ಇಳಿಯುತ್ತಾ ಸಾಗುವುದರಿಂದದ ವ್ಯತ್ಯಾಸವು ಗಮನಾರ್ಹವಾಗಿರುತ್ತದೆ. ಉತ್ತರಾಯಣವು ಭೂಮಿಯ ಮೇಲೆ ದಿನವು ಚಿಕ್ಕದಾಗಿರುವ ದಿನವಾಗಿದೆ. ಭಗವದ್ಗೀತೆಯ ಪ್ರಕಾರ 5.21.7 "ಉತ್ತರಾಯಣದ ಆರಂಭದಿಂದ ದಿನಗಳ ಅವಧಿ ಹೆಚ್ಚಾಗಲು ಪ್ರಾರಂಭವಾಗುತ್ತದೆ". ಶ್ರೀಮದ್ ಭಾಗವತದ ಪ್ರಕಾರ ಆ ದಿನವು ಡಿಸೆಂಬರ್ 22 (~ 3800 ವರ್ಷಗಳ ಹಿಂದೆ ಭಾಗವತವನ್ನು ರಚಿಸಿದಾಗ)ವೈದಿಕ ಧರ್ಮದಲ್ಲಿ, ದೇವರಿಗೆ ಯಾವುದೇ ಆಕಾರವಿಲ್ಲ ಮತ್ತು ನಮಗೆ, ಸಮಯ ಅಥವಾ ಕಾಲವು ದೇವರ ಅಭಿವ್ಯಕ್ತಿಯಾಗಿದೆ.


ಮಕರ ಸಂಕ್ರಾಂತಿ 2025ರ ಫಲ

ಸಂಕ್ರಾಂತಿ ಪುರುಷ ಹೆಸರು = ಮಹೋದರ 

ಸಂಕ್ರಾಂತಿ ಕರಣ = ಬಾಲವ 

ಸಂಕ್ರಾಂತಿ ವಾರದ ದಿನ = ಮಂಗಳವಾರ (ಸೂರ್ಯೋದಯದ ನಂತರ ಮಂಗಳವಾರ) 

ಸಂಕ್ರಾಂತಿ ತಿಥಿ = ಕೃಷ್ಣಪ್ರತಿಪತ್ 

ಸಂಕ್ರಾಂತಿ ದಿನಾಂಕ = 14 ಜನವರಿ 2025 (ಏಕೆಂದರೆ ಸೂರ್ಯೋದಯದ ಮೊದಲು ಜನವರಿ 14ರ ದಿನ ಆಗಮನವಾಗಿರುತ್ತದೆ) 

ಸಂಕ್ರಾಂತಿ ಕ್ಷಣ = 06:31 (ಭಾರತೀಯ ಕಾಲಮಾನ) 

ಸಂಕ್ರಾಂತಿ ಘಟಿ = 60 (ರಾತ್ರಿಮಾನ) 

ಸಂಕ್ರಾಂತಿ ಚಂದ್ರನ ಚಿಹ್ನೆ = ಕರ್ಕಟಕ 

ಸಂಕ್ರಾಂತಿ ನಕ್ಷತ್ರ = ಪುನರ್ವಾಸು (ಕರ್ಕಾಟಕ ಹಾಗೂ ಸಿಂಹ) 

ವಿಷ್ಣು ಅಥವಾ ನಾರಾಯಣನನ್ನು ಸೂರ್ಯ ದೇವರ ಮೂಲಕ ಪೂಜಿಸಲಾಗುತ್ತದೆ ಮತ್ತು ಈ ಸೂರ್ಯನ ವಿಷುವತ್ ಸಂಕ್ರಾಂತಿಯನ್ನು ಹಬ್ಬಗಳಾಗಿ ಆಚರಿಸಲಾಗುತ್ತದೆ. 

 ಸಂಕ್ರಾಂತಿ ಪುರುಷನು ವ್ಯಾಘ್ರ ವಾಹನದಲ್ಲಿ (ಹುಲಿ) ಮಹೋದರ (ಸಾಂಪ್ರದಾಯಿಕ ಉದ್ಯಮಿಗಳಿಗೆ ಹಾನಿಕಾರಕ) ಆಗಿ ಪ್ರವೇಶಿಸುತ್ತಾನೆ ಇದು ರಾಜರು, ವ್ಯಾಪಾರಿಗಳು, ಕಾಡು ಪ್ರಾಣಿಗಳು, ಅಪರೂಪದ ಪ್ರಭೇದಗಳಿಗೆ ಕೆಟ್ಟ ಶಕುನವಾಗಿದೆ. ನೀಲಿ ಹವಳ (ರತ್ನದ ವ್ಯಾಪಾರಕ್ಕೆ ಕೆಟ್ಟದು) ಧರಿಸಿರುವ ಕೆಂಪು ಬಣ್ಣದ ಬಟ್ಟೆಗಳನ್ನು (ತೀವ್ರ ಅಪಾಯ ಅಥವಾ ಹೊಂದಾಣಿಕೆಯಿಲ್ಲದ ಪರಿಸ್ಥಿತಿಗಳು) ಧರಿಸಿರುವ ಬೇಲ್ ಎಲೆಗಳ ನೀರಿನಿಂದ (ಒಳ್ಳೆಯದು) ಅವನು ಬೆಳ್ಳಿಯ ಬೌಲ್ (ಬೆಳ್ಳಿಯ ಬೆಲೆಗಳು ಏರಿಳಿತಗೊಳ್ಳುತ್ತವೆ) ಹಿಡಿದು ಪಾಯಸಾ ಅಥವಾ ಖೀರ್ (ಸಿಹಿ ಅಕ್ಕಿ) (ಧಾರ್ಮಿಕ ಜನರಿಗೆ ಕೆಟ್ಟದು) ಮತ್ತು ಬಾಳೆಹಣ್ಣಿನ ಹಣ್ಣು (ಕೃಷಿಗೆ ಒಳ್ಳೆಯದು) ಹುಲಿಯ ಮೇಲೆ ಕುಳಿತು (ಕಾಡು ಪ್ರಾಣಿಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಕೆಟ್ಟದು) ಕೆಂಪು ಛತ್ರಿ ಮತ್ತು ಸ್ಪಿಯರ್ ಶಸ್ತ್ರ (ಯುದ್ಧದ ಭಯ) ಜಾತಿ/ಚಮೇಲಿ/ಮಲ್ಲಿಗೆ ಹೂವು ಯುವಕರಲ್ಲಿ ವ್ಯಸನವನ್ನು ಸೂಚಿಸುತ್ತದೆ, ದಕ್ಷಿಣಕ್ಕೆ ಪ್ರಯಾಣಿಸುತ್ತದೆ ಮತ್ತು ಉತ್ತರ-ಪಶ್ಚಿಮವನ್ನು ಎದುರಿಸುತ್ತಿದೆ (ಭಾರತ, ಶ್ರೀಲಂಕಾ, ಏಷ್ಯಾ ಪೆಸಿಫಿಕ್ ದ್ವೀಪಗಳು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ಮಧ್ಯ-ಪೂರ್ವ, ರಷ್ಯಾ, ಉಕ್ರೇನ್)-ಕಳೆದ ವರ್ಷ ಇದು ಉತ್ತರ-ಪೂರ್ವ ಭಾರತದ ರಾಜ್ಯಗಳು, ಚೀನಾ, ಚೀನಾ ಮತ್ತು ಜಪಾನ್ (ಕೋಪಗೊಂಡ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ) ಈ ವರ್ಷ (2025) ಅಗತ್ಯ ವಸ್ತುಗಳ ಬೆಲೆಗಳಲ್ಲಿ ಹೆಚ್ಚಳ, ಹೆಚ್ಚು ಹೈನು ಉತ್ಪಾದನೆ, ಪ್ರಾಣಿ ಪ್ರಭೇದಗಳ ಅಳಿವು, ಪ್ರವಾಹ, ಆರ್ಥಿಕ ಹಿಂಜರಿತವನ್ನು ಕಾಣಲಿದೆ. ಸರ್ವಾಧಿಕಾರಿಗಳಿಗೆ ಮತ್ತು ರಾಜಮನೆತನಗಳಿಗೆ ಇದು ಕೆಟ್ಟ ಸಮಯ. ಕುಟುಂಬದ ವ್ಯಾಪಾರ, ವ್ಯಾಪಾರ ಮತ್ತು ಚಿನ್ನ, ರತ್ನದ ವ್ಯಾಪಾರ ನಡೆಸುವವರಿಗೆ ಕೆಟ್ಟದು. ಸಾಮಾನ್ಯವಾಗಿ, ಮಕರ ಸಂಕ್ರಾಂತಿ 2025 ಮಕರ ರಾಶಿಯಲ್ಲಿ ಸೂರ್ಯನೊಂದಿಗೆ ಕುಂಭ ರಾಶಿಯಲ್ಲಿ ಶನಿ ಮತ್ತು ಶುಕ್ರನೊಂದಿಗೆ ಚಂದ್ರನ ಚಿಹ್ನೆಗಳು ಮತ್ತು ಮಕರ, ಮೀನ, ಸಿಂಹ, ಮಿಥುನ, ಮೇಷ ಮತ್ತು ವೃಶ್ಚಿಕಗಳಲ್ಲಿ ಜನಿಸಿದ ಜನರಿಗೆ ಅದೃಷ್ಟ, ಸಂಪತ್ತು ಮತ್ತು ಆರೋಗ್ಯವನ್ನು ತರುತ್ತದೆ. ವೃಷಭ, ಕನ್ಯಾ, ವೃಶ್ಚಿಕ, ಧನು ರಾಶಿಯಲ್ಲಿ ಜನಿಸಿದವರಿಗೆ ಇದು ಸರಾಸರಿ ತಿಂಗಳಾಗಿರುತ್ತದೆ. ಇದು ಇತರ ಚಿಹ್ನೆಗಳಿಗೆ ಕೆಟ್ಟದ್ದಾಗಿರುತ್ತದೆ.

Wednesday, January 01, 2025

ಚದುರಂಗರ ಕಾದಂಬರಿಗಳು - ಒಂದು ಪರಿಚಯ

-ರಾಘವೇಂದ್ರ ಅಡಿಗ ಎಚ್ಚೆನ್.

 ಚದುರಂಗ  ಹೆಸರಿನಿಂದ ಬರೆಯುತ್ತಿದ್ದ ಲೇಖಕರ ಹೆಸರು ಸುಬ್ರಹ್ಮಣ್ಯ ರಾಜು ಅರಸು. ಸರ್ವಮಂಗಳಾ, ಉಯ್ಯಾಲೆ, ವೈಶಾಖ, ಹೆಜ್ಜಾಲ ಕಾದಂಬರಿಗಳಲ್ಲದೆ ಅನೇಕ ಕಥಾಸಂಕಲನ, ನಾಟಕಗಳು, ಕವನಸಂಕಲನ ಬರೆದ ಹೆಗ್ಗಳಿಕೆ ಚದುರಂಗರದು. ಚಲನಚಿತ್ರ ನಿರ್ದೇಶಕರಾಗಿದ್ದುಕೊಂಡು "ಭಕ್ತ ಕುಂಬಾರ "ಕಥಾ ಲೇಖಕರಾಗಿದ್ದು, " ಸರ್ವಮಂಗಳಾ" ಪ್ರಶಸ್ತಿ ವಿಜೇತ ಚಿತ್ರದ ನಿರ್ಮಾಪಕರಾಗಿದ್ದು,   " ಉಯ್ಯಾಲೆ"  ಚಿತ್ರಕಥೆಯನ್ನು ಬರೆದು ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. "ವೈಶಾಖ " ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುತ್ತದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿ.ವಿ.ಯ ಗೌರವ ಡಾಕ್ಟರೇಟ್ ಗೆ ಕೂಡಾ ಪಾತ್ರರಾಗಿದ್ದಾರೆ.


ಚದುರಂಗ ಅವರ ಕಾದಂಬರಿ-ಸರ್ವಮಂಗಳಾ. 1958ರಲ್ಲಿ ಬರೆದ ಈ ಕಾದಂಬರಿ, ಅದೇ ಹೆಸರಿನಿಂದ 1968 ರಲ್ಲಿ ಚಲನಚಿತ್ರವಾಯಿತು. ಈ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಕೌಟುಂಬಿಕ ಕಥಾ ವಸ್ತುವನ್ನು ಒಳಗೊಂಡ ಈ ಕಾದಂಬರಿಯು ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆಯೊಂದಿಗೆ ಓದುಗರ ಗಮನ ಸೆಳೆಯುತ್ತದೆ. ಈ ಮೊದಲು ಈ ಕಾದಂಬರಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತ್ತು. ಈ ಕಾದಂಬರಿ ಇದೇ ಹೆಸರಿನಲ್ಲಿ ಚಲನಚಿತ್ರವಾಗಿತ್ತು. ಇದರಲ್ಲಿ ರಾಜ್ ಕುಮಾರ್, ಕಲ್ಪನಾ, ಅಶ್ವಥ್ , ಸಂಪತ್ ನಟಿಸಿದ್ದಾರೆ. 

ಐವತ್ತು ವರ್ಷಗಳ ಅವಧಿಯಲ್ಲಿ ಬೆಳೆದು ಬಂದ ಎರಡು ತಲೆಮಾರುಗಳ ಜೀವನದ ಕಥೆ ಈ ಸರ್ವಮಂಗಳಾ. ಸಹಜವಾದ ಪ್ರಕೃತಿ ಸೌಂದರ್ಯ ಇಡೀ ಕಾದಂಬರಿಯಲ್ಲಿ ತುಂಬಿಕೊಂಡಿದ್ದು ಓದುಗನ ಮನಸ್ಸಿಗೆ ಸುಖ ಶಾಂತಿಯ ಅನುಭವ ನೀಡುತ್ತದೆ. ಇಲ್ಲಿ ಬಳಸಿದ ಆಡುಭಾಷೆ ಕಥೆಗೆ ಇನ್ನೂ ಮೆರುಗು ನೀಡಿದೆ. ಹಳ್ಳಿಯ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತ ಆಚಾರ ವ್ಯವಹಾರ, ಅಲ್ಲಿನ ಜಾತ್ರೆ, ಹಬ್ಬ ಹರಿದಿನ, ದೇವರ ಸೇವೆ, ಮದುವೆ ಇತ್ಯಾದಿ ವಿವರಗಳು ಮನ ತುಂಬುತ್ತವೆ. ಕಥಾ ಕಾಲ ಘಟ್ಟ ೧೯೩೦ರ ಆಸುಪಾಸಿನಲ್ಲಿ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ನಡೆಯುತ್ತದೆ. ವಿಶೇಷವೆಂದರೆ ಚದುರಂಗರ ಹುಟ್ಟೂರು ಸಹ ಕಲ್ಲಹಳ್ಳಿ. ಅವರ ನಿಜ ನಾಮಧೇಯ ಸುಬ್ರಹ್ಮಣ್ಯರಾಜು ಅರಸು.  ಇದೊಂದು 'ಅಮರ ಪ್ರೇಮ'ದ ಕಥೆಯೆನ್ನಬಹುದು.  ಇಷ್ಟೇ ಅಲ್ಲದೆ  ಇಲ್ಲಿ ಕಥೆಯ ಮೂಲಕ ಅಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳೆಡೆಗೆ ಓದುಗರ ಗಮನ ಸೆಳೆದಿದ್ದಾರೆ.


ಚದುರಂಗದ ಇನ್ನೊಂದು ಮಹತ್ವದ ಕಾದಂಬರಿ "ಉಯ್ಯಾಲೆ"  ಉಯ್ಯಾಲೆ ಹೆಸರಿನಲ್ಲೇ ನಿರ್ಮಾಣಗೊಂಡ ಚಲನಚಿತ್ರಕ್ಕೆ ಅವರೇ ಚಿತ್ರಕಥೆಯನ್ನು ಬರೆದರು. ಈ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿಯೂ ಬಂದಿದೆ. ಹೆಣ್ಣುಗಂಡಿನ ಸೂಕ್ಷ್ಮ ಮನಸ್ಸಿನ ಚಿತ್ರಣ.ವನ್ನು ಕಾದಂಬರಿ ಒಳಗೊಂಡಿದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. . ಬರೆದು 60 ವರ್ಷಗಳೇ 


ಕಳೆದುಹೋಗಿದ್ದರೂ, ಇದರಲ್ಲಿ ವಿಶ್ಲೇಷಣೆ ಗೊಳಗಾದ  ಪತಿಪತ್ನಿಯರ ಮಧ್ಯದಲ್ಲೇಳುವ ಸಾಮರಸ್ಯದ ಸಮಸ್ಯೆ ಇಂದಿಗೂ ಹಳತಾಗಿಲ್ಲ. ಕಾನೂನು ರೀತ್ಯಾ ಸಮಸ್ಯೆಗೆ ಈ ಕಾಲದಲ್ಲಿ ಪರಿಹಾರ ಸಿಗಬಹುದು.ಆದರೆ ಮನದ ಭಾವನೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿಡಲು ಸಾಧ್ಯವಿಲ್ಲ. ಹಾಗೊಂದು ಪ್ರಯತ್ನ ನಡೆದರೂ ಫಲ ಪ್ರದವಾಗಲಿಕ್ಕಿಲ್ಲ, ಅದರಲ್ಲೂ ಹೆಣ್ಣಿನ ಮನಸ್ಸಿನ ನೆಮ್ಮದಿ ಉಳಿಯುವುದು ಅಸಾಧ್ಯ. ಮಧ್ಯದಲ್ಲಿ ಸಿಲುಕಿದ ಮಕ್ಕಳು ಅನಾಥ ಪ್ರಜ್ಞೆಯಲ್ಲಿ ಬೆಳೆದು ತಮ್ಮ  ಜೀವನದಲ್ಲಿ ಸೋಲುವುದು ಮಾತ್ರವಲ್ಲ, ಸುತ್ತಲಿನ ಸಮಾಜಕ್ಕೂ ಕಂಟಕಪ್ರಾಯರಾಗುವ ಸಾಧ್ಯತೆ ಹೆಚ್ಚು.  ಉಯ್ಯಾಲೆಯ ಕಥೆಯು ಏಕಕಾಲದಲ್ಲಿ ಸರಳವೂ ಮತ್ತುಗಹನವೂ ಆಗಿದೆ.  ವಿವಾಹಬಾಹಿರ ಪ್ರೇಮ ಸಾರ್ವಕಾಲಿಕ ವಸ್ತು. ಸುಂದರ ಭಾಷೆ, ಮನ ಮೋಹಕ ಶೈಲಿ. ವಿಚಾರಪೂರ್ಣ ಕಥೆಯನ್ನು ಹೊಂದಿದ ಕಾದಂಬರಿ "ಉಯ್ಯಾಲೆ". ಇದರಲ್ಲಿ ಸಿಕ್ಕಲಾರದ ಮತ್ತು ಸಿಕ್ಕಬಾರದವರ ನಡುವಿನ ಪ್ರೇಮಕಥೆಗಳಲ್ಲಿನ ' ರೊಮ್ಯಾಂಟಿಸಂ' ನ ಗುಣ ಕಾಣಬಹುದು. 


ಚದುರಂಗರಿಗೆ ಕೇಂದ್ರ ಸಾಹಿತ್ಯ ಅಕಾಶೆಮಿ ಪ್ರಶಸ್ತಿ ಗಳಿಸಿಕೊಟ್ಟ ಮಹತ್ವದ ಕೃತಿ "ವೈಶಾಖ" . ‘ದರುಮನಳ್ಳಿ’ ಈ ಕಾದಂಬರಿಯ ಕೇಂದ್ರ ಬಿಂದುವಾಗಿದ್ದು ಅಂದಿನ ಜಾತಿಕಲಹ, ಪಂಚಾಯ್ತಿ ರಾಜಕೀಯ, ಸಂಪ್ರದಾಯದ ಕುರಿತು ಗ್ರಾಮೀಣ ಸೊಗಡಿನಲ್ಲಿ ಓದಿಸಿಕೊಂಡು ಹೋಗುತ್ತದೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಮತ್ತು ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿರುವುದು ಈ ಕೃತಿಯ ‘ಶ್ರೇಷ್ಠತೆ-ಒಳದನಿ’ಗೆ ಸಾಕ್ಷಿ. ವೈಶಾಖ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸಿರುವ ಕಾದಂಬರಿ.   ಈ ಕಾದಂಬರಿಯಲ್ಲಿ ಅತ್ಯಂತ ಸುಸಂಸ್ಕೃತ ಭಾಷಾ ಬಳಕೆಯ ಜೊತೆ ಜೊತೆಗೇ ಗ್ರಾಮ್ಯ ಭಾಷೆಯನ್ನೂ ಅತ್ಯಂತ ಸಮರ್ಥವಾಗಿ ಬಳಸಿದ್ದಾರೆ.  ಮೇಲ್ವರ್ಗ ಮತ್ತು ಕೆಳವರ್ಗದ ಜನ ಜೀವನ, ಅವರ ಆಗು ಹೋಗುಗಳನ್ನು ಜೊತೆಜೊತೆಗೇ ಕಟ್ಟಿಕೊಡುತ್ತಾ ಹೋಗುತ್ತಾರೆ.  ಕಾರಂತರ ಮರಳಿ ಮಣ್ಣಿಗೆ, ಕುವೆಂಪುರವರ ಮಲೆಗಳಲ್ಲಿ ಮದುಮಗಳುಗಳಂತೆ ಅಪ್ಪಟ ಪ್ರಾದೇಶಿಕ ಕಂಪನ್ನು ಇದು ಪಸರಿಸುತ್ತದೆ.  ಕಥಾ  ಸಾಂದ್ರತೆ ಮತ್ತು ಅನುಭವ ಸಾಂದ್ರತೆಗಳೆರಡನ್ನೂ ನಾವಿಲ್ಲಿ ಕಾಣಬಹುದು.  ಈ ಕಾದಂಬರಿಯಲ್ಲಿ ಗ್ರಾಮೀಣ ಪರಿಸರದ, ಸಂಕೀರ್ಣತೆ ಇದೆ, ಗ್ರಾಮ್ಯ ಭಾಷೆ ಹೇರಳವಾಗಿ ಸೊಗಸಾಗಿ ಮೂಡಿಬಂದಿದೆ .ಈ ಮೊದಲೇ ಹೇಳಿದಂತೆ  ಹಳ್ಳಿಯೊಳಗಿನ ಜಾತಿಕಲಹ, ಪಂಚಾಯ್ತಿ ರಾಜಕೀಯ,ದ್ವೇಷ, ವಂಚನೆ,ಅಸೂಯೆ, ಪ್ರೀತಿ, ಕಾಮ, ಧಾರ್ಮಿಕತೆ, ಸಂಪ್ರದಾಯ, ಪ್ಲೇಗ್ ರೋಗ, ಮುಗ್ಧತೆ ಹೀಗೆ ಎಲ್ಲವೂ ಇಲ್ಲಿದೆ. ಹಲವಾರು ವರ್ಷಗಳವರೆಗೆ  ಕಾವು ಕುಳಿತು ಅನುಭವವೇ ಹೂವಾಗಿ ಅರಳಿದಂತಿರುವ ಚದುರಂಗ ರ   ಬಹು ನಿರೀಕ್ಷಿತ ಕಾದಂಬರಿ ಇದು. ಕಾವೇರಿ-ಲಕ್ಷ್ಮಣ ತೀರ್ಥ  ನದಿಗಳ  ನಡುವಿನ ಪ್ರದೇಶದ  ಜೀವನ ಇಲ್ಲಿ ಒಡ ಮೂಡಿದೆ.  ಪ್ರಾದೇಶಿಕತೆಯ ಬಂಧನ ಗಳನ್ನು  ಕಿತ್ತೆಸೆದು  ಸಾರ್ವತ್ರಿಕತೆ ಯತ್ತ ಈ  ಕಾದಂಬರಿ ಹೆಜ್ಜೆ  ಇಡುತ್ತದೆ. "ಗ್ರಾಮ ಭಾರತ 'ವಾಗಿ ತೋರುವ ಈ  ಕಾದಂಬರಿಯಲ್ಲಿ ಬರುವ ನೋವು ,ವಿಸ್ಮಯ ,ಕ್ರೌರ್ಯ, ಇವೆಲ್ಲವೂ ಭಾರತದ ಮೂಲ ಜೀವನಾಡಿಯಲ್ಲಿ ಅಭೇದ್ಯ ವಾಗಿ  ನುಸುಳಿರುವ ಅಂಶ ಗಳೆಂದು ಈ  ಕಾದಂಬರಿ ಬಹು ಮಾರ್ಮಿಕವಾಗಿ ಧ್ವನಿಸುತ್ತದೆ. ಇಲ್ಲಿಯ ಹರಿಜನರ ಸಂಕಟ ಇಡೀ  ಮಾನವ ಜನಾಂಗದಲ್ಲಿ ತುಳಿತಕ್ಕೆ  ಸಿಕ್ಕ  ಮೌನಿಗಳ ವ್ಯಸನವಾಗಿ ತೋರುವುದರಿಂದಲೆ ಕನ್ನಡ ಸಾಹಿತ್ಯಕ್ಕೆ  "ವೈಶಾಖ " ಒಂದು ಅಪೂರ್ವ  ಕಾಣಿಕೆಯಾಗಿದೆ.


ಚದುರಂಗ ಅವರ ನಾಲ್ಕನೆ ಹಾಗೂ ಕಡೆಯ ಕಾದಂಬರಿ "ಹೆಜ್ಜಾಲ" ಈ ಕೃತಿಯು ಕೃಷಿ ಕಾರ್ಮಿಕ ಜೀವನದ ಚಿತ್ರಣವನ್ನು ನೀಡುತ್ತದೆ. ಹೆಜ್ಜಾಲ ಎಂಬುದು ದೊಡ್ಡ ಆಲದ ಮರ. ಕಾಲೂರ ಎಂಬುವವನು ೀ ಕಾದಂಬರಿಯ ಕಥಾನಾಯಕ. ಈತ ಸ್ವಭಾವದಲ್ಲಿ ಅಲೆಮಾರಿ. ನಿಂತಲ್ಲಿ ನಿಲ್ಲಲಾರ; ಕೂತಲ್ಲಿ ಕೂಡಲಾರ. ಈತನ ಜೀವನವು ಅಲದೂರಿನಲ್ಲಿ ಆರಂಭವಾಗಿ ದಾವಣಗೆರೆ ಬಳಿಯ ಜಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ. ಆದರೆ, ಕಥೆ ಆರಂಭವಾಗುವುದು ಜಗಳೂರಿನಿಂದಲೇ. ಅಲದೂರು-ಕಾಲೂರಿನ ಹುಟ್ಟೂರು. ಬೆಟ್ಟದಪುರ, ರಾಮನಾಥಪುರ, ಶ್ರೀನಿವಾಸಪುರ ಹೀಗೆ ಜೀವನ ಸಾಹಿ, ಕೆಲವು ದಿನಗಳು ಕಾಫಿ ತೋಟದಲ್ಲಿ ಕಳೆಯುತ್ತಾನೆ. ಈ ಬದುಕಿನ ಸುಂದರ ಘಟನೆಗಳನ್ನು ಚಿತ್ರಿಸುವ ಕಾದಂಬರಿಯು, ಬದುಕಿನ ಅತಂತ್ರತೆಯನ್ನು, ಎಷ್ಟೊಂದು ಎಚ್ಚರಿಕೆಯೊಂದಿಗೆ ಹೆಜ್ಜೆ ಇಡಬೇಕು ಎಂಬುದರ ಸೂಕ್ಷ್ಮತೆಯನ್ನು ಕಾಣಿಸುತ್ತದೆ.   "ವೈಶಾಖ"ದಂತೆಯೇ ಇಲ್ಲಿಯೂ ಹಳ್ಳಿಯ ಪರಿಸರವಿದೆ. ಅಲ್ಲಿ ಕಥೆ ನೆನಪುಗಳ ಮುಖಾಂತರವೇ ವಿಸ್ತರಿಸಿಕೊಳ್ಳುತ್ತದೆ ಹಾಗೆ ಇಲ್ಲಿಯೂ ಕೂಡ ಕಥೆ ವಿಸ್ತಾರವಾಗುವುದು ನೆನಪುಗಳಿಂದಲೇ. ಈ ಕಾದಂಬರಿಯನ್ನು ಗಂಗೂರ ಎಂಬ ಪಾತ್ರದ ಆತ್ಮಕಥೆ  ಎಂದೂ ಕರೆಯಬಹುದು.  ವಿಶಿಷ್ಟ ರೀತಿಯ ವಸ್ತು ವಿನ್ಯಾಸ, ಪಾತ್ರ ವೈವಿಧ್ಯ, ಜಾನಪದ ಪ್ರಜ್ಞೆ, ಗ್ರಾಮೀಣ ಜೀವನ ಸಂಸ್ಕೃತಿಯ ಗಾಢ ಚಿತ್ರಣ, ತಾಂತ್ರಿಕ ಕೌಶಲ, ಜೀವನ ದರ್ಶನದ ಸಮಗ್ರತೆ ಈ ಕಾದಂಬರಿಯ ವೈಶಿಷ್ಟ್ಯ. ಬರಹದ ಸವಿ, ಗಟ್ಟಿತನದ ಮೂಲಕ ಈ ಕಾದಂಬರಿ ಮನಸೆಳೆಯುತ್ತದೆ. ಕಥೆಯ ಚೌಕಟ್ಟು ಈ ಕೃತಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶ.  ಆದರೆ ಕಾದಂಬರಿ ಎಲ್ಲಿಯೂ ಬೋರ್ ಎನಿಸುವುದಿಲ್ಲ. ಸಾವಕಾಶವಾಗಿ ಓದಬಹುದು.  ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ.  ಪ್ರೀತಿ, ದಯೆ, ಹಠ, ಅಹಂಕಾರ, ದಾಯಾದಿತನ ಹೀಗೆ ಅನೇಕ ಅಂಶಗಳನ್ನೊಳಗೊಂಡ ಒಂದೊಳ್ಳೆ ಗ್ರಾಮೀಣ ಸೊಗಡಿನ ಕಾದಂಬರಿ ಹೆಜ್ಜಾಲ.