Sunday, June 30, 2013

ಗಂಗೆಯ ಕೋಪಕ್ಕೆ ನಲುಗಿದ ಉತ್ತರಾಖಂಡ!

   ಕೇದಾರನಾಥ ಸೇರಿದಂತೆ ಹಲವಾರು ಪವಿತ್ರ ಕ್ಷೇತ್ರಗಳನ್ನ ಹೊಂದಿರುವ ಉತ್ತರಾಖಂಡ್ ನಲ್ಲಿ ಇತ್ತೀಚೆಗೆ ಪ್ರವಾಹ ತಲೆದೋರಿ ಕನ್ನಡಿಗರೂ ಸೇರಿದಂತೆ ೧೦೦೦೦ಕ್ಕೂ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ, ಲಕ್ಷಾಂತರ ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಅಭಿವೃದ್ದಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಮಾನವ ಎಸಗಿದ ದೌರ್ಜನ್ಯಕ್ಕೆ ಉತ್ತರ ಭಾರತದ ಜನ ಸರಿಯಾಗಿಯೇ ಬೆಲೆ ತೆರಬೇಕಾಗಿ ಬಂದಿರುವುದು ಮಾತ್ರ ಘೋರ ವಿಪರ್ಯಾಸ.

       ಎಲ್ಲದರ ಹಿನ್ನಲೆಯಲ್ಲಿ ಭಾರತದಲ್ಲಿ ಹಿಂದೆ ನಡೆದ ೧೦ ಪ್ರಮುಖ ಪ್ರಕೃತಿ ವಿಕೋಪಗಳ, ಅದರಿಂದಾದ ಅನಾಹುತಗಳತ್ತ ಕಣ್ಣಾಡಿಸೋಣ.....

.      ೧೯೭೯ರಲ್ಲಿ ಗುಜರಾತ್ ಮಾಚು-ಮಾಚು ಅಣೆಕಟ್ಟೆ ಒಡೆದುದುದರ ಪರಿಣಾಮ ರಾಜ್ಕೋಟ್ ಜಿಲ್ಲೆಯ ಸುಮಾರು ೧೫೦೦೦ ಮಂದಿ ಸಾವಿಗೀಡಾದ್ದರು. ದುರಂತವು ಗಿನ್ನಿಸ್ ಪುಸ್ತಕದಲ್ಲಿಯೂ ದಾಖಲಾಗಿದ್ದು ಜಗತ್ತಿನ ಅತ್ಯಂತ ಕೆಟ್ಟ ಅಣೆಕಟ್ಟೆ ದುರಂತವೆನ್ನಲಾಗಿದೆ.

.      ೧೯೮೭ರಲ್ಲಿ ಬಿಹಾರದಲ್ಲಿ ಕೋಸಿ ನದಿ ಉಕ್ಕಿ ಹರಿದ ಪರಿಣಾಮವಾಗಿ ೧೪೦೦ ಜನರು ಪ್ರವಾಹಕ್ಕೆ ಬಲಿಯಾಗಿ ೫೦೦೦ಕ್ಕೂ ಮಿಕ್ಕಿ ಜಾನುವಾರುಗಳು ಸಾವಿಗೀಡಾಗಿದ್ದವು, ಸಾವಿರಾರು ಕೋಟಿ ನಷ್ಟವಾಗಿತ್ತು.

.     ೨೦೦೪ರಲ್ಲಿ ಬಿಹಾರದ ಕೋಸಿ, ಗಂಡಕಿ, ಗಂಗೆ ಸೇರಿದಂತೆ ಪ್ರಮುಖ ನದಿಗಳು ತುಂಬಿ ಹರಿದ ಪರಿಣಾಮ ಪ್ರವಾಹ ಉಂಟಾಗಿದ್ದು ೮೮೩ ಜನರು ಸಾವಿಗೀಡಾಗಿ ಸಾವಿರಾರು ಜಾನುವಾರುಗಳು ಮರಣಹೊಂದಿದ್ದವು.

.      ೨೦೦೫ರ ಜುಲೈ ೨೬ ರಂದು ಮಹಾರಾಷ್ತ್ರದ ಮುಂಬೈ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡು ೫೦೦೦ಕ್ಕೂ ಹೆಚ್ಚಿನ ಜನರನ್ನು ಬಲಿ ತೆಗೆದುಕೊಂಡಿತ್ತು. ಇದೇ ಕಾರಣದಿಂದ ಇಂದಿಗೂ ಜುಲೈ ೨೬ ನ್ನು ಮಹಾರಾಷ್ತ್ರದಲ್ಲಿಕಪ್ಪು ದಿನವಾಗಿ ಆಚರಿಸಲಾಗುತ್ತದೆ.

.      ೨೦೦೫ರ ಜೂನ್ ೩೦ರಿಂದ ಜುಲೈ ೧೧ರ ವರೆಗೆ ಗುಜರಾತ್ ನಲ್ಲಿ ದೇಶ ಕಂಡು ಕೇಳಿರದ ಅತ್ಯಂತ ದೀರ್ಘಕಾಲದ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಇದರಿಂದಾಗಿ ೧೨೩ ಜನರು ಸತ್ತು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು. ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರ ಆದಾಯ ತೆರಿಗೆ ವಿವರ ಸಲ್ಲಿಸಬೇಕಾದ ದಿನಾಂಕವನ್ನೇ ಮುಂದೂಡಿತ್ತು.

.      ೨೦೦೭ರಲ್ಲಿ ದಕ್ಷಿಣ ಭಾರತದಲ್ಲಿ ಸಂಭವಿಸಿದ ಸರಣಿ ಪ್ರವಾಹದಿಂದಾಗಿ ಸುಮಾರು ೨೦೦೦ ಮಂದಿ ಸಾವಿಗೀಡಾಗಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು. ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ಪಂಡಿಚೇರಿಗಳಲ್ಲಿ ಪ್ರವಾಹದಿಂದ ವ್ಯಾಪಕ ಹಾನಿಯಾಗಿತ್ತು.

 .     ೨೦೦೦೮ರಲ್ಲಿ ಭಾರತ-ನೇಪಾಳ ಗಡಿಯಲ್ಲಿ ಕೋಸಿ ನದಿ ಉಕ್ಕಿ ಹರಿದ ಪರಿಣಾಮವಾಗಿ ಉತ್ತರ ಬಿಹಾರದಲ್ಲಿ ೪೩೪ ಜನ ಸಾವಿಗೀಡಾಗಿ, ಸುಮಾರು ೨೦ ಲಕ್ಷ ಮಂದಿ ನಿರಾಶ್ರಿತರಾಗಿದ್ದರು.

.    ೨೦೦೯ರಲ್ಲಿ ಕರ್ನಾಟಕ, ಆಂಧ್ರ, ಒಡಿಶ್ಯಾ ಸೇರಿದಂತೆ ಬಹುತೇಕ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ೨೨೯ ಮಂದಿ ಸತ್ತು ಕೋಟ್ಯಾಂತರ ಮೌಲ್ಯದ ಆಸ್ತಿ-ಪಾಸ್ತಿ ಹಾನಿ ಸಂಭವಿಸಿತ್ತು.

.     ೨೦೧೦ರಲ್ಲಿ ಜಮ್ಮು ಮತ್ತು ಕಾಶ್ಮೀರದ ಲೇಹ್ ಹಾಗೂ ಲಡಾಖ್ ಗಳಲ್ಲಿ ತೀವ್ರ ತೆರದ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ಅಪಾರ ಪ್ರಮಾಣದ ಆಸ್ತಿ ನಾಶವಾಗಿತ್ತು.

೧೦.    ೨೦೧೨ರಲ್ಲಿ ಈಶಾನ್ಯ ರಾಜ್ಯ ಅಸ್ಸೋಮ್ ನಲ್ಲಿ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಉಕ್ಕಿ ಹರಿದ ಪರಿಣಾಮ ಭೀಕರ ಪ್ರವಾಹ ಪರಿಸ್ತಿತಿ ತಲೆದೋರಿತ್ತು. ಇದರಿಂದಾಗಿ ಅಲ್ಲಿನ ಕಾಜಿರಂಗ ರಾಷ್ತ್ರೀಯ ಉದ್ತಾನದಲ್ಲಿದ್ದ ಅನೇಕ ಪ್ರಾಣಿಗಳು ಅಸುನೀಗಿದ್ದವು.





Thursday, June 27, 2013

ಕನ್ನಡದ ಕಣವಿಗೆ ೮೫

ನಾಳೆ(ಜೂನ್ ೨೮) ಕನ್ನಡದ ಖ್ಯಾತ ಕವಿಗಳಾದ ನಾಡೋಜ ಚನ್ನವೀರ ಕಣವಿಯವರ ೮೫ ನೇ ವರ್ಷದ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಅವರ ಒಂದು ಪ್ರಸಿದ್ದ ಕವನ ”ಒಂದು ಮುಂಜಾವಿನಲಿ” ಕವನವನ್ನೊಮ್ಮೆ ಹಾಗೇ ಗುನುಗುನಿಸಿದರೆ ಹೇಗೆ? 

ಒಂದು ಮುಂಜಾವಿನಲಿ...

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ__ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು
ಅದಕೆ ಹಿಮ್ಮೇಳವೆನೆ ಸೋಸಿಪಹ ಸುಳಿಗಾಳಿ
ತೆಂಗುಗರಿಗಳ ನಡುವೆ ನುಸುಳುತಿತ್ತು || ಒಂದು ಮುಂಜಾವಿನಲಿ ||
ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ
ಹೂ ಮುಡಿದು ಮದುಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು || ಒಂದು ಮುಂಜಾವಿನಲಿ ||
ತಳಿರತೋರಣದಲ್ಲಿ ಬಳ್ಳಿಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣಗುಣಿತ ಹಾಕುತಿತ್ತು || ಒಂದು ಮುಂಜಾವಿನಲಿ ||
ಉಷೆಯ ನುಣ್ಗದಪಿನಲಿ ಹರ್ಷ ಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದಮನ
ಮುಂಬಾಳ ಸವಿಗನಸ ನೆನೆಯುತಿತ್ತು || ಒಂದು ಮುಂಜಾವಿನಲಿ ||
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ__ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ___ ||
- ಚನ್ನವೀರ ಕಣವಿ

Wednesday, June 26, 2013

ಮಧುಮೇಹ ಚರಿತೆ( The History of Diabetes )

     ನಾಳೆ(ಜೂನ್ ೨೭) ವಿಶ್ವ ಮಧುಮೇಹ ದಿನ(World Diabetes Day)ವಾಗಿ ಆಚರಿಸಲಾಗುತ್ತದೆ. ಇಂದು ಮಾನವ ಜೀವನವನ್ನು ನುಂಗಿ ಹಾಕುತ್ತಿರುವ ಬಹು ಮುಖ್ಯ ಖಾಯಿಲೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಮಧುಮೇಹಕ್ಕೆ ಸಹ ಅದರದೇ ಆದ ಇತಿಹಾಸವಿದೆ, ಅದನ್ನು ತಿಳಿಯಬೇಕೆನಿಸಿದರೆ ಮುಂದೆ ಓದಿ.................
     ಕ್ರಿ.ಪೂ. ೧೫೦೦ ರ ಈಜಿಪ್ಟ್ ನಾಗರಿಕತೆ ಕಾಲದ ಹಸ್ತಪ್ರತಿಗಳಲ್ಲಿ ವಿವರಿಸಲ್ಪಟ್ಟ ಮೊದಲ ರೋಗಗಳ ಪಟ್ಟಿಯಲ್ಲಿ ಮಧುಮೇಹದ ಹೆಸರೂ ಬರುತ್ತದೆ. “too great emptying of the urine.”ಎಂದು ವಿವರಿಸಲಾಗಿರುವ ಇದನ್ನು ಮೊದಲ ಮಾದರಿಯ ಮಧುಮೇಹವೆಂದು ಗುರುತಿಸಲಾಗಿದೆ. ಸುಮಾರು ಇದೇ ಸಂದರ್ಭದಲ್ಲಿ ಭಾರತೀಯ ಪಂಡಿತವರ್ಗದವರು ಕೂಡ ಮಧುಮೇಹ ಒಂದು ಖಾಯಿಲೆ ಎನ್ನುವುದನ್ನು ಪ್ರತಿಪಾದಿಸಿದ್ದಾರೆ, ಅಲ್ಲದೆ ಇದನ್ನು ಮಧು ಇಲ್ಲವೆ ಜೇನು ಮೂತ್ರವೆಂದು ಕರೆದು ಇದರ ರುಚಿಯಿಂದಾಗಿ ಇದು ಇರುವೆಗಳನ್ನು ಆಕರ್ಷಿಸಬಲ್ಲುದು ಎಂದು ಸಾಬೀತುಪಡಿಸಿದ್ದಾರೆ.  ಈ ಬಗೆಯ ಖಾಯಿಲೆಗೆ "ಮಧುಮೇಹ" ಎನ್ನುವ ಪದವನ್ನು ಕ್ರಿ.ಪೂ. ೨೩೦ ರಲ್ಲಿ ಪ್ರಪ್ರಥಮವಾಗಿ ಗ್ರೀಕರು ಬಳಕೆಗೆ ತಂದರು. 
     ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಮಧುಮೇಹ ಪ್ರಕರಣಗಳು ತೀರಾ ಅಪರೂಪವಾಗಿದ್ದವು. ಅಂದಿನ ಕಾಲದಲ್ಲಿ ಬದುಕಿದ್ದ ಖ್ಯಾತ ವೈದ್ಯ ಗೆಲನ್ ತನ್ನ ವೃತ್ತಿ ಜೀವನದಲ್ಲಿ ಕೇವಲ ಎರಡು ಪ್ರಕರಣಗಳನ್ನು ಮಾತ್ರವೇ ಪತ್ತೆಹಚ್ಚಿದ್ದರು. ಮಧುಮೇಹದಲ್ಲಿನ ಎರಡು ಪ್ರತ್ಯೇಕ ಮಾದರಿಗಳನ್ನು ಕ್ರಿ.ಶ್. ೪೦೦-೫೦೦ ರ ಸುಮಾರಿಗೆ ಭಾರತದ ಖ್ಯಾತ ವೈದ್ಯ ಪಂಡಿತರಾಗಿದ್ದ ಶುಶ್ರುತ ಹಾಗೂ ಚರಕರು ಪತ್ತೆಮಾಡಿ ವರ್ಗೀಕರಿಸಿದರು. ಕ್ರಿ.ಶ ೧೭೦೦ ರ ಸುಮಾರಿಗೆ ಬ್ರಿಟನ್ನಿನ ಬ್ರಿತೈನ್ ಜಾನ್ ರೊಲೆ ಎನ್ನುವ ಸಂಶೋಧಕರು "ಮೆಲ್ಲಿಟೀಸ್()" ಎಂಬ ಇನ್ನೊಂದು ಬಗೆಯನ್ನು ಮಧುಮೇಹಗಳ ವರ್ಗಿಕರಣ ಸರಣಿಗೆ ಸೇರ್ಪಡೆಗೊಳಿಸಿದರು. 
     ೧೭೭೬ ರಲ್ಲಿ ಮ್ಯಾಥ್ಯೂ ಡೋಬ್ಸನ್ ರವರು ಮಧುಮೇಹಿಗಳ ಮೂತ್ರ ಹಾಗೂ ರಕ್ತಗಳಲ್ಲಿ ಸಿಹಿಯ ಅಂಶವು ಅಧಿಕವಾಗಿರುತ್ತದೆ ಎನ್ನುವುದನ್ನು ಧೃಢೀಕರಿಸಿದರು. ಕ್ರಿ.ಶ. ೧ ನೇ ಶತಮಾನದವನಾದ ಗ್ರೀಕ್ ದೇಶದವನಾದ ಅರೇಟಿಯಸ್ ಎನ್ನುವ ವೈದ್ಯನು ಮಧುಮೇಹದ ಕುರಿತಾಗಿ ಪ್ರಥಮ ಬಾರಿಗೆ ಪರಿಪೂರ್ಣ ಸ್ವರೂಪದ ವೈದ್ಯಕೀಯ ವಿವರಣೆಗಳನ್ನು ನೀಡಿರುತ್ತಾನೆ. ಅವನು ಹೇಳುವಂತೆ ಮೂತ್ರದಲ್ಲಿ ಸಿಹಿಯ ಅಂಶವು ವ್ಯಾಪಕ ಪ್ರಮಾಣದಲ್ಲಿ ಸೇರಿಕೊಳ್ಳುವುದನ್ನು ”ಮಧುಮೇಹ”ವೆಂದು ಕರೆಯಲಾಗುತ್ತದೆ. ಅಂದಿನ ಕಾಲದಲ್ಲಿ ಇದನ್ನು ಒಂದು ಮಾರಣಾಂತಿಕ ಖಯಿಲೆ ಎಂದು ಬಗೆಯಲಾಗುತ್ತಿತ್ತು, ಆದರೆ ಕ್ರಮೇಣ ಇದು ಮಾರಣಾಂತಿಕವಾದ ಖಾಯಿಲೆಯಲ್ಲ  ಹಾಗೆಂದು ಸಂಪೂರ್ಣ ಗುಣಪಡಿಸಲು ಸಾಧ್ಯವಿರದೆಂಬ ತೀರ್ಮಾನಕ್ಕೆ ಬರಲಾಯಿತು. 
     ಮದ್ಯಯುಗದ ಪರ್ಷಿಯಾದ ವೈದ್ಯ ಸಂಶೋಧಕನಾದ ಅವಿಸೆನ್ನಾ ”ವಿಪರೀತ ಹಸಿವು ಹಾಗೂ ಲೈಂಗಿಕ ಕ್ರಿಯೆಗಳಲ್ಲಿನ ತೀವ್ರ ನಿರಾಸಕ್ತಿ” ಕುರಿತಾಗಿ ವಿವರಿಸಿ ಇದು ಮಧುಮೇಹ ರೋಗಿಗಳಲ್ಲಿ ಕಂಡುಬರುವ ಒಂದು ರೋಗ ಲಕ್ಷಣವೆಂದು ತಿಳಿಸಿದ್ದಾನೆ. ಇವನು ಸಹ ಅರೇಟಿಯಸ್ ನಂತೆಯೇ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಮಧುಮೇಹವನ್ನು ಪತ್ತೆಹಚ್ಚುತ್ತಾನೆ, ಮತ್ತು ಮಧುಮೇಹ ಗ್ಯಾಂಗ್ರಿನ್ ಕುರಿತಾಗಿಯೂ ಮಾಹಿತಿ ಒದಗಿಸುತ್ತಾನೆ. ಮೆಂತ್ಯದ ಸೊಪ್ಪಿನ ಮಿಶ್ರಣವನ್ನು ಬಳಸಿಕೊಳ್ಳುವ ಮೂಲಕ ಮಧುಮೇಹ ಪೀಡಿತರಲ್ಲಿನ ಮೂತ್ರದಲ್ಲಿ ಸಕ್ಕರೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ವಿಧಾನವನ್ನು ಸಹ ಇವನು ಪ್ರಯೋಗ ನಡೆಸಿದ್ದು ಆ ಬಗೆಯ ಔಷಧವನ್ನು ಇಂದಿನ ಆಧುನಿಕ ಯುಗದಲ್ಲಿಯೂ ಸಹ ಪರಿಣಾಮಕಾರಿ ರೋಗ ನಿರೋಧಕವೆಂದು ಪರಿಗಣಿಸಲಾಗಿದೆ. ಆಧುನಿಕ ಕಾಲದಲ್ಲಿ ಕ್ರಿ.ಶ. ೧೯೦೦ ರಬಳಿಕ  ಮಧುಮೇಹದ ಕುರಿತಾಗಿ ಸಾಕಷ್ಟು ಸಂಶೋಧನೆಗಳು ನಡೆದವು. ಸರ್ ಎಡ್ವರ್ಡ್ ಅಲ್ಬರ್ಟ್ ಶಾಫೆ ಷೆಫರ್ಡ್ ರವರು ೧೯೧೦ ರಲ್ಲಿ ನಡೆಸಿದ ಸಂಶೊಧನೆಯೊಂದರಲ್ಲಿ ಮಾನವನ ದೇಹದಲ್ಲಿನ ಮೇದೋಜೀರಕ ಗ್ರಂಥಿಯಲ್ಲಿ ಸ್ರವಿಸುವ ಇನ್ಸುಲಿನ್ ಪ್ರಮಾಣದಲ್ಲಿನ ಏರಿಳಿತಗಳಿಂದ ಮಧುಮೇಹವು ತಲೆದೋರುತ್ತದೆ ಎಂದು ಕಂಡುಕೊಂಡರು. 
     ಇಷ್ಟಾದರೂ ಸಹ  ಮಧುಮೇಹಕ್ಕೆ ಒಂದು ಪರಿಣಾಮಕಾರಿಯಾದ ಪರಿಹಾರೋಪಾಯವನ್ನು ಯಾರಿಂದಲೂ ಕಂಡುಕೊಳ್ಳಲಾಗಲಿಲ್ಲ. ೧೯೨೧-೨೨ ರಲ್ಲಿ ಕೆನಡಾ ಮೂಲದವರಾದ ಫ್ರೆಡ್ರಿಕ್ ಬ್ಯಾಂಟಿಂಗ್ ಹಾಗೂ ಚಾರ್ಲ್ಸ್ ಎನ್ನುವವರು ಪ್ರಥಮ ಬಾರಿಗೆ ಪರಿಣಾಮಕಾರಿಯಾದ ಇನ್ಸುಲಿನ್ ಒಂದನ್ನು ಕಂಡುಹಿಡಿದರು, ಈ ಸಂಶೋಧನೆಗಾಗಿ ಬ್ಯಾಂಟಿಂಗ್ ಹಾಗೂ ಪ್ರಯೋಗಾಲಯ ನಿರ್ದೇಶಕರಾಗಿದ್ದ ಜಾನ್ ಮ್ಯಾಕ್ಸಿಯೋಡ್ ಈರ್ವರೂ ೧೯೨೩ ರ ಶರೀರ ಶಾಸ್ತ್ರಕ್ಕಾಗಿನ ನೋಬೆಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಅದೇ ಮುಂದೆ ೧೯೪೦ ರ ದಶಕದಲ್ಲಿ ಮಧುಮೇಹಕ್ಕೆ ಬಹಳವೇ ಪರಿಣಾಮಕಾರಿಯಾದ ಔಷಧವಾಗಿ ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಕೆಗೆ ಬಂದಿತು.  

Tuesday, June 25, 2013

We Miss You MJ

ಪಾಪ್ ದೊರೆ(King Of Pop) ಮೈಖೆಲ್ ಜಾಕ್ಸನ್ ಸರಿ ರವರು ನಮ್ಮನ್ನಗಲಿ ಇಂದಿಗೆ ಸರಿಯಾಗಿ(ಜೂನ್ ೨೫ ೨೦೦೯) ೪ ವರುಷಗಳಾಯಿತು ಆವರ ದೇಹ ನಮ್ಮನ್ನಗಲಿದರೂ ನಮ್ಮ ಮನಸ್ಸಿನಲ್ಲಿಂದೂ ಎಂದೆಂದೂ ಅವರ ನೆನಪುಗಳು ಚಿರಕಾಲವೂ ಉಳಿಯುವುದು ಅವರ ಪ್ರಸಿದ್ದ ನಾಟ್ಯದಿಂದ. ಅಂತಹಾ ಕೆಲ ಪ್ರಸಿದ್ದ ವೀಡಿಯೋಗಳು ಇಲ್ಲಿವೆ. 


Thursday, June 20, 2013

೯೯ನೇ ವಸಂತಕ್ಕೆ ಕಾಲಿಟ್ಟ ನಾಡೋಜ ಕೈಯ್ಯಾರ ಕಿಞ್ಜಣ್ಣ ರೈ

    "ಏರುತಿಹುದು ಹಾರುತಿಹುದು ನೋಡಿ ನಮ್ಮ ಬಾವುಟ" ಗೀತೆ ಯಾರಿಗೆ ತಾನೆ ನೆನೆಪಿಲ್ಲ ಹೇಳಿ? ಇಂತಹಾ ಗೀತೆಯೊಂದನ್ನ ಬರೆದು ಕನ್ನಡ ತಾಯಿಗೆ ಸಮರ್ಪಿಸಿದ ಶ್ರೀ ಕೈಯ್ಯಾರರು ಮೊನ್ನೆ ತಾನೆ ೯೯ರ ನವ ವಸಂತಕ್ಕೆ ಕಾಲಿಟ್ಟಿದ್ದಾರೆ. 

     ಮೂಲತಹ ಕರ್ನಾಟಕದ ಭಾಗವಾಗಿದ್ದ ಕಾಸರಗೋಡಿನವರಾದ ಕೈಯ್ಯಾರರು ಕನ್ನಡ ನಾಡು ಕಂಡ ಅತ್ಯಂತ ಉಜ್ವಲ ಪ್ರತಿಭೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಸಾಕಷ್ಟಿದ್ದು ಜೊತೆಗೆ ಕನ್ನಡ ಪರ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಇವರದು. ಅದರಲ್ಲಿಯೂ ಮುಖ್ಯವಾಗಿ ಕಾಸರಗೋಡು ಪ್ರದೇಶ ಕರ್ಣಾಟಕಕ್ಕೆ ಸೇರಬೇಕೆಂದು ಅಂದಿನಿಂದಿಂದಿನವರೆಗೂ ಹೋರಾಡುತ್ತಲೆ ಬ್ಂದಿರುವುದನ್ನು ಕನ್ನಡಿಗರಾದ ನಾವ್ಯಾರೂ ಮರೆಯಲು ಸಾಧ್ಯವಿಲ್ಲ. 

     ಕಾಸರಗೋಡು ಕರ್ನಾಟಾಕಕ್ಕೆ ಸೇರಿಸಬೇಕೆಂಬ ಹೋರಾಟ ತನ್ನ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಆ ಕಾಲಘಟ್ಟದಲ್ಲಿ "ಮನೆಗೆ ಬೆಂಕಿ ಬಿದ್ದಿದೆ ಏಳಿ ಎದ್ದೇಳಿ" ಎನ್ನುತ್ತಾ ಹೋರಾಟದ ಕಿಚ್ಚು ಹಚ್ಚಿದ್ದ ಕೈಯ್ಯಾರರ ತನುವಿಗೀಗ ೯೯ ರ ಹರೆಯವಾದರೂ ಮನಸ್ಸಿನ್ನೂ ೨೦ ರಷ್ಟೇ ಚೈತನ್ಯದಾಯಕವಾಗಿರುವುದನ್ನು ಕಾಣಬಹುದು. 

    "ತುಳು ಭಾಷೆ ತನ್ನ ಹೆತ್ತ ತಾಯಾದರೆ ಕನ್ನಡ ಸಾಕು ತಾಯಿ" ಎನ್ನುವ ಕೈಯ್ಯಾರರು ತಾನಿರುವಾಗಲೇ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಬಯಸುತ್ತಾರೆ. 

ವ್ಯಕ್ತಿ ಪರಿಚಯ: 

    ಈಗ ಕೇರಳದಲ್ಲಿರುವ ಕಾಸರಗೋಡಿನ ಪೆರಿಯಾಲ ಗ್ರಾಮದಲ್ಲಿ ೧೯೧೫ ಜೂನ್ ೮ ರಂದು ಜನಿಸಿದ ಕೈಯ್ಯಾರ ಕಿಞ್ಜಣ್ಣ ರೈ ಕನ್ನಡದ ಹಿರಿಯ ಸಾಹಿತಿಗಳೂ ಬಹುಭಾಷಾ ವಿದ್ವಾಂಸರೂ ಹೌದು. 

    ಶ್ರೀಮುಖ, ಐಕ್ಯಗಾನ, ಕೊರಗ, ಪುನರ್ನವ, ಶತಮಾನದ ಗಾನ ಇದೇ ಮೊದಲಾದ ಕವನ ಸಂಕಲನಗಳನ್ನಲ್ಲದೆ ಕಾರ್ನಾಡು ಸದಾಶಿವರಾಯರು ಮೊದಲಾದವರ ಬಗೆಗೆ ಜೀವನ ಚರಿ
ತ್ರೆಗಳನ್ನು ಸಹ ಬರೆದು ಪ್ರಕಟಿಸಿರುವ ಕೈಯ್ಯಾರರು ರಷ್ಟ್ರಕವಿ ಗೋವಿಂದ ಪೈಗಳ ಕುರಿತಾದ ೩ ಗ್ರಂಥಗಳನ್ನು ಹೊರತಂದಿದ್ದಾರೆ. ಇಷ್ಟಲ್ಲದೆ ಇವರು ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿಯೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. "ಪ್ರಭಾತ", "ರಾಷ್ಟ್ರ ಬಂಧು", "ಸ್ವದೇಶಾಭಿಮಾನಿ" ಎನ್ನುವ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿರುವ ರೈಯವರು "ದುಡಿಮೆಯೇ ನನ್ನ ದೇವರು" ಎನ್ನುವ ಶ್ತ್ಮಕಥನವನ್ನು ಬರೆದು ಪ್ರಕಟಿಸಿದ್ದಾರೆ. 

    ಇಂತಹಾ ಕೈಯ್ಯಾರರ ಕಾಹಿತ್ಯ ಸೇವೆ ಗುರುತಿಸಿ ಸಾಕಷ್ಟು ಪ್ರಶಸ್ತಿಗಳು ಸಂದಿವೆ, ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ಮುಂತಾದವು. ಅಲ್ಲದೆ ೨೦೦೫ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದ ರೈಗಳು ೧೯೯೭ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 

Wednesday, June 05, 2013

ಕೊಡಗು: ಒಂದು ಪರಿಚಯ ಭಾಗ - ೨

ಕೊಡಗಿನ ಪ್ರವಾಸಿ ತಾಣಗಳು
ತಲಕಾವೇರಿ:  ತಲಕಾವೇರಿ ಕೊಡಗಿನಲ್ಲಿರುವ ಪ್ರಸಿದ್ದ
ತೀರ್ಥಕ್ಷೇತ್ರ. ಹಿಂದೆ ಅಗಸ್ತ್ಯ ಮಹರ್ಷಿಗಳ ಧರ್ಮಪತ್ನಿಯಾಗಿದ್ದ ಕಾವೇರಿ ತಾಯಿಯು ನದಿಯ ರೂಪುತಾಳಿ ಇಲ್ಲಿ ಉಗಮಿಸುತ್ತಾಳೆ. ಭಾಗಮಂಡಲದಿಂದ ೮ ಕಿಲೋಮೀಟರ್ ದೂರದಲ್ಲಿ ೧೩೫೦ಅಡಿ ಎತ್ತರದ ಬ್ರಹ್ಮಗಿರಿ ಶಿಖರದ ಪೂರ್ವದ ಇಳಿಜಾರಿನಲ್ಲಿ ಈ ನದಿಯ ಉಗಮಸ್ಥಾನವಿದೆ. ಪ್ರತೀ ವರ್ಷ ತುಲಾ ಸಂಕ್ರಮಣದಂದು(ಅಕ್ಟೋಬರ್-೧೭) ಈ ತೀರ್ಥೋದ್ಭವವಾಗುವುದು ವಿಶೇಷ. ಆ ಸಂದರ್ಭದಲ್ಲಿ ಸುಮಾರು ಒಂದು ತಿಂಗಳ ಕಾಲ ಕರ್ನಾಟಕ, ತಮಿಳು ನಾಡು ಸೇರಿದಂತೆ ದೇಶದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ಭಾಗಮಂಡಲ: ಭಾಗಮಂಡಲ ಜಿಲ್ಲಾಕೇಂದ್ರ ಮಡಿಕೇರಿಯಿಂದ ೩೩ ಕಿಲೊಮೀಟರ್ ದೂರದಲ್ಲಿದೆ. ಈಪ್ರದೇಶದಲ್ಲಿ ಕಾವೇರಿಯೊಂದಿಗೆ ಇನ್ನೆರೆಡು ನದಿಗಳಾದ ಕನ್ನಿಕಾ ಹಾಗೂ ಸುಜೋತಿ ನದಿಗಳು ಕೂಡಿಕೊಳ್ಳುತ್ತವೆ. ಹೀಗಾಗಿ ಇದು ೩ ನದಿಗಳ ಸಂಗಮ ಸ್ಥಳವಾಗಿ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಇದರೊಂದಿಗೆ ಇಲ್ಲಿ ಭಗಂಡ ಮಹರ್ಷಿಗಳಿಂದ ಸ್ಥಾಪಿಸಲ್ಪಟ್ಟಿದ್ದು ಎನ್ನಲಾಗುವ ಶ್ರೀ ಭಗಂಡೆಶ್ವರ ದೇವಾಲಯವಿದ್ದು ಇದನ್ನು ಕೇರಳ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಾಲಾಗಿದೆ. ಇದಲ್ಲದೆ ಮಹಾವಿಷ್ಣು, ಗಣಪತಿ, ಸುಬ್ರಹ್ಮಣ್ಯರ ದೆಗುಲಗಳೂ ಇಲ್ಲಿವೆ. ತಲಕಾವೇರಿಗೆಂದು ಬರುವ ಭಕ್ತ ಜನರೆಲ್ಲರೂ ಭಾಗಮಂಡಲವನ್ನು ಸ್ಂದರ್ಶಿಸದೆ ತೆರಳರಾರರು.

ಮಡಿಕೇರಿ ಓಂಕಾರೆಶ್ವರ ದೇವಾಲಯ: ಓಂಕಾರೇಶ್ವರ ದೇವಾಲಯವು ಮಡಿಕೇರಿಯಲ್ಲಿನ ಪ್ರಸಿದ್ದ ದೇವಾಲಯವಾಗಿದ್ದು ೧೮೨೦ರಲ್ಲಿ ಕೊಡಗಿನ ಅರಸು ಎರಡನೇ ಲಿಂಗರಾಜನೆಂಬುವವ ನಿರ್ಮಾಣ ಮಾಡಿದನು. ಇಂಡೋ ಇಸ್ಲಾಮಿಕ್ ಶೈಲಿಯಲ್ಲಿರುವ ಈ ದೇವಾಲಯವು ನೋಡಲು ಬಹು ಸುಂದರವಾಗಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.
ಮಡಿಕೇರಿ ಕೋಟೆ: ಮಡಿಕೇರಿ ಕೋಟೆಯೊಂದು ಐತಿಹಾಸಿಕ ಸ್ಮಾರಕವಾಗಿದ್ದು, ಮಡಿಕೇರಿ ಕೋಟೆಯನ್ನು ೧೭ನೇ ಶತಮಾನದಲ್ಲಿ ಮುದುರಾಜನೆನ್ನುವವನು ಪ್ರಥಮವಗಿ ನಿರ್ಮಣ ಮಾಡಿದನು. ಹಾಗೆಯೇ ಆತನು ಕೋಟೆಯೊಳಗೊಂದು ಅರಮನೆಯನ್ನೂ ಸಹ ನಿರ್ಮಿಸಿದ್ದನು. ಮಡಿಕೇರಿಯು ಟಿಪ್ಪುವಿನ ಆಡಳಿತಕ್ಕೊಳಪಟ್ಟಂತಹಾ ಸಮಯದಲ್ಲಿ ಕೋಟೆ ಮತ್ತು ಅರಮನೆಯ ಪುನರ್ನಿರ್ಮಾಣ ಕಾರ್ಯವು ನಡೆಯಿತು. ಮುಂದೆ ೧೮೧೨-೧೪ರಲ್ಲಿ ಎರಡನೇ ಲಿಂಗರಾಜೇಂದ್ರ ಅರಸರು ಕೋಟೆಯನ್ನು ಪುನರ್ನವೀಕರಣ ಮಾಡಿದರು. ತದನಂತರ ೧೮೩೪ರಲ್ಲಿ ಬ್ರಿಟಿಷರಾಡಳಿತದಲ್ಲಿ ಕೋಟೆಗೆ ಕೆಲ ಭಾಗಗಳನ್ನು ಸೇರಿಸುವ ಮೂಲಕ ಕೋಟೆಯನ್ನು ವಿಸ್ತರಿಸಲಾಯಿತು.
ರಾಜಾ ಸೀಟ್: ರಾಜಾ ಸೀಟ್ ಮಡಿಕೇರಿಯಲ್ಲಿನ ಅತ್ಯಂತ ಪ್ರಸಿದ್ದ ಪ್ರವಾಸೀ ಆಕರ್ಷಣೀಯ ಕೇಂದ್ರ. ಇಲ್ಲಿ ಪುಷ್ಪವನ
ಹಾಗೂ ಕೃತಕ ಜಾರಂಜಿಗಳನ್ನೊಳಗೊಂಡ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಮಡಿಕೇರಿ ನಗರದ ಪಶ್ಚಿಮ ಭಾಗದಲ್ಲಿರುವ ಇದು ಸೂರ್ಯಾಸ್ತಮಾನವನ್ನು ವೀಕ್ಷಿಸಲು ಅತ್ಯಂತ ಪ್ರಶಸ್ತ ಸ್ಥಳವೆನ್ನಿಸಿದೆ. ಹಿಂದೆ ಮಡಿಕೇರಿಯನ್ನಾಳಿದ ರಾಜರುಗಳು ಪ್ರತಿದಿನ ಇಲ್ಲಿ ಬ್ಂದು ಸೂರ್ಯಾಸ್ತವನ್ನು ನೋಡುತ್ತಾ ಮನದ ಆಯಾಸವನ್ನು ಕಳೇಯುತ್ತಿದ್ದರೆನ್ನಲಾಗಿದ್ದು ಅದೇ ಕಾರಣ್ಕ್ಕೆ ಈ ಸ್ಥಳ ರಾಜಾ ಸೀಟ್ ಎನ್ನಿಸಿದೆ.

ಅಬ್ಬೆ ಜಲಪಾತ/ಅಬ್ಬೆ ಫಾಲ್ಸ್: ಮಡಿಕೇರಿ ನಗರದಿಂದ ೮ ಕಿಲೋಮೀಟರ್ ದೂರವಿರುವ ಅಬ್ಬೆ ಜಲಪಾತ ಕೊಡಗಿನಲ್ಲಿರುವ ಅತ್ಯಂತ ಪ್ರೆಕ್ಷಣೀಯ ಜಲಪಾತವಾಗಿದೆ. ಇಲ್ಲಿ ಕಾವೇರಿ ಧುಮ್ಮಿಕ್ಕಿ ಭೋರ್ಗರೆವ ರೀತಿ ಕಣ್ಮನಗಳನ್ನು ಸೂರೆಗೊಳ್ಳುವಂತಹದು.
ಇರ್ಪು ಜಲಪಾತ/ಇರ್ಪು ಫಾಲ್ಸ್: ಇರ್ಪು ಜಲಪಾತ ಕೊಡಗಿನ ಇನ್ನೊಂದು ಪ್ರಮುಖ ಜಲಪಾತವಾಗಿದೆ. ತಾಲ್ಲೂಕು ಕೇಂದ್ರ ವಿರಾಜಪೇಟೆಯಿಂದ ೪೮ ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳ ಕರ್ನಾಟಕ-ಕೇರಳ ಗಡಿ ಪ್ರದೇಶಕ್ಕೆ ಹೊಂದಿಕೊಂಡಿದೆ.
        ಇದಲ್ಲದೆ ಕೊಡಗಿನ ನಾಗರಹೊಳೆ, ಬ್ರಹ್ಮಗಿರಿ, ಪುಷ್ಪಗಿರಿ, ತಲಕಾವೇರಿಗಳಲ್ಲಿ ರಾಷ್ಟ್ರೀಯ ವನ್ಯಜೀವಿಧಾಮಗಳನ್ನು ಸ್ಥಾಪಿಸಲಾಗಿದೆ. ಇಲ್ಲೆಲ್ಲಾ ಆನೆ. ಹುಲಿ, ಘೇಂಡಾಮೃಗ, ಕಾಡೆಮ್ಮೆ, ಜಿಂಕೆಗಳೂ ಸೇರಿದಂತೆ ನಾನಾ ಜಾತಿಯ ಪ್ರಾಣಿ- ಪಕ್ಷಿಗಳು ನೆಲೆಸಿವೆ. ಈ ಎಲ್ಲಾ ವನ್ಯಜೀವಿ ಧಾಮಗಳು ಸಹ ಪ್ರವಾಸಿಗರನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನತ್ತ ಆಕರ್ಷಿತರಾಗುವಂತೆ ಮಾಡುತ್ತವೆಂದರೆ ಅದು ಅತಿಶಯೋಕ್ತಿಯಲ್ಲ

Tuesday, June 04, 2013

ಚಿಪ್ಕೋ ಚಳುವಳಿ: ಒಂದಷ್ಟು ನೆನೆಕೆಗಳು (Remembering of Chipko Movement)

ಇಂದು ವಿಶ್ವ ಪರಿಸರ ದಿನ, ಈ ಸಂದರ್ಭದಲ್ಲಿ ಪರಿಸರ ಉಳಿಸುವ ಸಲುವಾಗಿ ತಮ್ಮ ಜೇವಮಾನವೆಲ್ಲಾ ಹೋರಾಟ ನಡೆಸುತ್ತಾ ಬಂದಿರುವ ಮಹನೀಯ ಶ್ರೀ ಸುಂದರಲಾಲ್ ಬಹುಗಣ ಮತ್ತು ಕಳೆದ ಶತಮಾನದಲ್ಲಿ ಸಾಮಾನ್ಯ ಜನರಲ್ಲಿಯೂ ಪರಿಸರ ಕಾಳಜಿ ಮೂಡಿಸುವಲ್ಲಿ ಯಶಸ್ವಿಯಾದ ಚಿಪ್ಕೋ ಚಳುವಳಿಯ ಕೆಲ ಅಪರೂಪದ ಚಿತ್ರಗಳು ಇಲ್ಲಿವೆ.












ಕೊಡಗು: ಒಂದು ಪರಿಚಯ ಭಾಗ - ೧

             ಕೂರ್ಗ್ ಅಥವಾ ಕೊಡಗು ಕರ್ನಾಟಕದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಒಂದಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ, ಆದರೆ ಇದೇ ಕೊಡಗಿನ ಬಗ್ಗೆ, ಅಲ್ಲಿನ ಇತಿಹಾಸ ಪರಂಪರೆ, ಸಂಸ್ಕೄತಿ, ಜೀವ್ ವೈವಿದ್ಯಗಳ ಬಗೆಗೆ ನಿಮಗೆಷ್ಟು ತಿಳಿದಿದೆ? ಹಾಗೊಂದು ವೇಳೆ ನಿಮಗೆ ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ ನೋಡಿ.
            ಕೊಡಗು ನೈರುತ್ಯ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ೪೧೦೨ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು ೨೦೦೧ರ ಅಂದಾಜಿನಂತೆ ರಾಜ್ಯದ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಪ್ರದೇಶವಾಗಿದೆ. ಅಂದಹಾಗೆ ಇಲ್ಲಿನ ಕಾಫಿ ಮತ್ತು ವೀರ ಯೋಧರಿಂದಾಗಿಯೂ ಈ ಜಿಲ್ಲೆ ವಿಶ್ವ ಮಾನ್ಯತೆಯನ್ನು ಹೊಂದಿದೆ. ಮಡಿಕೇರಿ ನಗರ ಜಿಲ್ಲಾಕೇಂದ್ರವಾಗಿರುವ ಕೊಡಗಿನ ವಾಯುವ್ಯ-ಉತ್ತರ ದಿಕ್ಕಿಗೆ ಹಾಸನ. ಪೂರ್ವಕ್ಕೆ ಮೈಸೂರು, ನೈರುತ್ಯ-ದಕ್ಷಿಣಕ್ಕೆ ಕೇರಳ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ.
            ಕೊಡವರು ಸ್ಥಳೀಯವಾಗಿ ಕೊಡವ ಭಾಷೆಯನ್ನು ವ್ಯಾಪಕವಾಗಿ ಬಳಸುತ್ತಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡಾಮಿ, ಕೊಡವ ರಾಷ್ಟ್ರೀಯ ಸಮಿತಿಯಂತಹಾ ಸಂಘಟನೆಗಳು ಕೊಡವ ಜನಾಂಗ, ಭಾಷೆಯ ಅಭಿವೃದ್ದಿಗಾಗಿ ಸಾಕಷ್ಟು ಶ್ರಮವಹಿಸುತ್ತಿವೆ.

ಇತಿಹಾಸ
            ಕೊಡಗಿನ ಇತಿಹಾಸ ಅತ್ಯಂತ ರೋಚಕವಾದುದಾಗಿದ್ದು ಕರ್ನಾಟಕವನ್ನಾಳಿದ ಕದಂಬ, ಗಂಗ, ಚೋಳರು, ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರದ ಸಾಮ್ರಾಟರು ಕೊಡಗನ್ನು ಅಳಿದ್ದರೆನ್ನುವುದಕ್ಕೆ ಸಾಕಷ್ಟು ಪುರಾವೆಗಳು ಇವೆ. ಕ್ರಿಸ್ತ ಶಕ ೯-೧೦ನೇ ಶತಮಾನಗಳವರೆಗಿನ ಕೊಡಗಿನ ಇತಿಹಾಸವನ್ನು ಅಭ್ಯಸಿಸಲು ನಮಗಾವುದೇ ಪುರಾವೆಗಳು ದೊರಕಲಾರವು.  ೯ನೇ ಶತಮಾನದ ಶಾಸನವೊಂದರ ಪ್ರಕಾರ ತಲಕಾಡಿನ ಗಂಗ ರಾಜರ ಆಳ್ವಿಕೆ ಈ ಪ್ರದೇಶವು ಒಳಪಟ್ಟಿತ್ತು. ಇದಾದ ಬಳಿಕ ೧೧ನೇ ಶತಮಾನದಲ್ಲಿ ಚೋಳ ರಾಜರ ಆಳ್ವಿಕೆಯು ಕೊಡಗಿನಲ್ಲಿ ಆರಂಭವಾಯಿತು. ಇದಾಗಿ ೧೧ನೇ ಶತಮಾನದ ಕೊನೆ ಹಾಗೂ ೧೨ನೇ ಶತಮಾನದ ಆರಂಭದಲ್ಲಿ ಕೊಡಗು ಸೇರಿದಂತೆ ಕರ್ನಾಟಕದ ದಕ್ಷಿಣ ಪ್ರಾಂತದಿಂದ ಚೋಳರನ್ನು ಓಡಿಸಿದ ಹೊಯ್ಸಳ ದೊರೆಗಳು ತಾವು ಕೊಡಗಿನ ಮೇಲೆ ಪ್ರಭುತ್ವವನ್ನು ಮೆರೆದರು. ಮತ್ತೆ ೧೪ನೇ ಶತಮಾನದಲ್ಲಿ ಹೊಯ್ಸಳರ ಪತನದ ಬಳಿಕ ಕೊಡವರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಡಿಯಲ್ಲಿ ಬಂದರು.
            ವಿಜಯನಗರದ ಪತನಾನಂತರ ಸ್ಥಳೀಯ ನಾಯಕರು ಅದರಲ್ಲೂ ಪ್ರಧಾನವಾಗಿ ಹಾಲೇರಿ ವಂಶದ ಅರಸರು ಈ ಪ್ರದೇಶದ ಆಳ್ವಿಕೆ ನಡೆಸಿದರು. ಇವರ ಆಡಳಿತವು ಸುಮಾರು ೧೬ನೇ ಶತಮಾನದಿಂದ ಆರಂಭವಾಗಿ ೧೯ನೇ ಶತಮಾನದವರೆಗೂ ನಡೆಯಿತು. ಈ ಹಾಲೇರಿ ವಂಶದ ಅರಸರು ಪ್ರಮುಖವಾಗಿ ಮೈಸೂರಿನ ಒಡೆಯರ ಅಧೀನದಲ್ಲಿದ್ದುಕೊಂಡು ಆಡಳಿತ ನಡೆಸುತ್ತಿದ್ದರು. ೧೭೫೦-೧
            ೧೭೫೦-೧೭೯೯ರ ನಡುವೆ ಮೈಸೂರಿನಲ್ಲಿ ಪ್ರವರ್ಧಮಾನಕ್ಕೆ ಬಂದಂತಹಾ ಹೈದರ್ ಹಾಗೂ ಅವನ ಮಗನಾದ ಟಿಪ್ಪು ಸುಲ್ತಾನನ ಕಾಲದಲ್ಲಿ ಕೊಡಗಿನ ಮೇಲೆ ಧಾಳಿ ನಡೆಸಿದ ಟಿಪ್ಪು ಕೊಡಗನ್ನು ಕೆಲ ಸಮಯದವರೆಗೆ ತನ್ನ ವಶದಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಟಿಪ್ಪುವಿನ ಮರಣದಬಳಿಕ ಈ ಪ್ರದೇಶದಲ್ಲಿ ಬ್ರಿಟೀಷರ ಪ್ರಭಾವವನ್ನು ನಾವು ಕಾಣಬಹುದು.
            ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ೧೯೫೦ರಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಯಿತು. ೧೯೫೬ರಲ್ಲಿ ಭಾಷಾವಾರು ಪ್ರದೇಶ ವಿಂಗಡಾನೆಯ ಆಧಾರದ ಮೇಲೆ ರಾಜ್ಯಗಳ ಮರು ರಚನೆಯಾದಾಗ ಕೊಡಗು ಕರ್ನಾಟಕದೊಳಗೆ ಸೇರಿ ಒಂದು ಜಿಲ್ಲೆಯಾಗಿ ರೂಪುತಾಳಿತು.

ಕೊಡವ ಸ್ಂಸ್ಕೃತಿ
            ಕೊಡಗಿನಲ್ಲಿ ಇರುವ ಜನಸಮುದಾಯದಲ್ಲಿ ಅಲ್ಲಿನ ಮೂಲ ನಿವಾಸಿಗಳಾದ ಕೊಡವ ಸಂಪ್ರದಾಯದವರೇ ಬಹುಸಂಖ್ಯಾತರು. ಇವರಲ್ಲಿ ಕೊಡವ ಹೆಗ್ಗಡೆ, ಕೊಡವ ಗೌಡ ಸಮುಡಾಯದವರು ಪ್ರಮುಖರಾಗಿದ್ದು ಇನ್ನುಳಿದಂತೆ ಅರ್ಜಿ, ಮೇಡಾ, ಮಲೆ ಕುಡಿಯ, ಕೆಂಬಟ್ಟಿ, ಮರಿಂಜಿ, ಕವಡಿ, ಕುರುಬ ಮೊದಲಾದ ಜನಾಂಗದವರನ್ನು ಹೆಸರಿಸಬಹುದು.
            ಕೊಡವರು ಪ್ರಮುಖವಾಗಿ ಮಹಾದೇವ, ಭದ್ರಕಾಳಿ, ಸುಬ್ರಹ್ಮಣ್ಯ, ಅಯ್ಯಪ್ಪ ದೆವರುಗಳನ್ನು ಆರಾಧಿಸುವುದರೊಂದಿಗೆ ಅಲ್ಲಿನ ಸ್ಥಳೀಯ ದೇವರುಗಳಾದ ಉಗ್ಗುತಪ್ಪ ಮೊದಲಾದ ದೈವಗಳನ್ನು ಸಹ ಪೂಜಿಸುತ್ತಾರೆ.  ಕೊಡವರಲ್ಲಿ ಬಹುಪಾಲು ಜನರು ಕೃಷಿಯಾಧಾರಿತ ಕಸುಬಿನಲ್ಲಿದ್ದು ಮುಖ್ಯವಾಗಿ ಕಾಫಿ, ಭತ್ತ,ಕಿತ್ತಳೆ ಮೊದಲಾದ ಹಣ್ಣುಗಳನ್ನು ಬೆಳೆಯುತ್ತಾರೆ. ಅಲ್ಲದೆ ಬುಟ್ಟಿ ಹೆಣಿಗೆ, ಚಾಪೆ ತಯಾರಿಕೆಯಂತಹ ಅನೇಕ ಬಗೆಯ ಕುಶಲ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಇತಿಹಾಸದುದ್ದಕ್ಕೂ ಕೊಡಗು ಅನೇಕ ಅರಸರ ಧಾಳಿಗಳಿಗೆ ಒಳಗಾದುದನ್ನು ನಾವು ನೊಡುತ್ತೇವೆ. ಹೀಗಾಗಿ ಇಲ್ಲಿನ ಜನರು ಅಂತಹಾ ಯುದ್ಧಗಳಲ್ಲಿ ಪಾಲ್ಗೊಂಡದ್ದರಿಂದಲಿಂದಲೂ ಇಂದಿಗೂ ಅಲ್ಲಿನ ಜನರು ಸಮರ ಕಲಾ ಪಾರಂಗತರಾಗಿದ್ದಾರೆ. ಇದರೊಂದಿಗೆ ಕೊಡವರು ಧರಿಸುವ ದಿರಿಸುಗಳೂ ಸಹ ಬಹು ವಿಶಿಷ್ಟವಾದುದಾಗಿರುತ್ತವೆ.
            ಕೊಡವರು ಬಹು ದೊಡ್ದ ಕ್ರೀಡಾಭಿಮಾನಿಗಳೂ ಆಗಿದ್ದು ಪ್ರತೀ ವರ್ಷ ಇಲ್ಲಿ ಹಾಕಿ ಪಂದ್ಯಾವಳಿ ಬಹು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತದೆ. ಈ ಕ್ರೀಡೋತ್ಸವದಲ್ಲಿ ಸುಮಾರು ೪೦೦ ಕೊಡವ ಕುಟುಂಬಗಳು ಪಾಲ್ಗೊಳ್ಳುತ್ತವೆ, ಇದು ಲಿಮ್ಕಾ ದಾಖಲೆ ಪುಸ್ತಕದಲ್ಲಿಯೂ ದಾಖಲಾಗಿರುವ ಸಂಗತಿ ಎನ್ನುವುದಿಲ್ಲಿ ಗಮನಿಸತಕ್ಕ ಅಂಶ.